CONNECT WITH US  

ಸಿರಿ ಉತ್ಪನ್ನ ಮಾರಾಟ ಮಳಿಗೆ ಸಹಕಾರಿ

ಕುಣಿಗಲ್‌: ನಿರುದ್ಯೋಗ ಯುವ ಜನತೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಿರಿ ಉತ್ಪನ್ನ ಮಾರಾಟ ಮಳಿಗೆ ಸಹಕಾರಿಯಾಗಲಿದೆ ಎಂದು ಡಿವೈಎಸ್ಪಿ ವೆಂಕಟೇಶ್‌ ತಿಳಿಸಿದ್ದಾರೆ. ಕುಣಿಗಲ್‌ ಪಟ್ಟಣದ ಪೊಲೀಸ್‌ ಠಾಣೆ ಸಮೀಪ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನವಾಗಿ ಪ್ರಾರಂಭಿಸಿದ ಸಿರಿ ಉತ್ಪನ್ನ ಮಾರಟ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಮಹಿಳೆಯರು ಹಾಗೂ ಪುರುಷರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೆ ತರಲಾಗಿದೆ. ಇದರ ಜೊತೆಗೆ ಇದೀಗ ಆರಂಭಿಸಿರುವ ಉತ್ಪನ್ನ ಮಳಿಗೆಯಿಂದ ಗ್ರಾಮೀಣ ಜನರಿಗೆ ಸಹಕಾರಿಯಾಗಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಹಸ್ರಾರು ಸಂಘಗಳನ್ನು ಸ್ಥಾಪಿಸಿ ಲಕ್ಷಾಂತರ ಮಂದಿಗೆ ಆರ್ಥಿಕ ನೆರವು ನೀಡಲಾಗಿದೆ. ಜೊತೆಗೆ ಕೆರೆ ಅಭಿವೃದ್ಧಿ, ಸ್ವತ್ಛತೆ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಹಲವು ಯೋಜನೆಗಳನ್ನು ಹಮ್ಮಿಕೊಂಡು ಸಾಲ ಸೌಲಭ್ಯಗಳು ಕಲ್ಪಿಸಲಾಗಿದೆ. ಅಲ್ಲದೇ ಮದ್ಯವರ್ಜನಾ  ಶಿಬಿರ ಆಯೋಜಸಿ ಸಾವಿರಾರು ಮದ್ಯವ್ಯಸನಿಗಳನ್ನು ಅದರಿಂದ ಮುಕ್ತಿಗೊಳಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಂಸ್ಥೆ ಸೇವೆ ಅನನ್ಯವಾಗಿದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ರಾಧಾಕೃಷ್ಣರಾವ್‌ ಮಾತನಾಡಿ, ಗುಡಿ ಕೈಗಾರಿಕೆ ಅಥವಾ ಮನೆಯಲ್ಲಿ ತಯಾರಿಸಿದ ಉತ್ಪನ್ನಗಳು ಗುಣಮಟ್ಟದಿಂದ ಕೂಡಿರುತ್ತವೆ. ರಿಯಾಯಿತಿ ಬೆಲೆಯಲ್ಲಿ ಸಿಗುವ ಕಾರಣ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಪೊತ್ಸಾಹಿಸಬೇಕು. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದರೆ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸಿದಂತಾಗುತ್ತದೆ.

ಮಹಿಳೆಯರು ಸ್ವಾವಲಂಬಿಗಳಾಗುತ್ತಾರೆ. ಗ್ರಾಮೀಣ ಪ್ರದೇಶದ ಆರ್ಥಿಕ ಸ್ಥಿತಿ ಸುಧಾರಣೆ ಆಗಲಿದೆ ಎಂದು ತಿಳಿಸಿದರು. ತಾಲೂಕು ಯೋಜನಾ ನಿರ್ದೇಶಕ ಗಣಪತಿಭಟ್‌ ಮಾತನಾಡಿ, ಗಾಂಧೀಜಿ ಕಂಡ ಗ್ರಾಮ ಸ್ವರಾಜ್‌ ಕನಸನ್ನು ಮಾದರಿಯಾಗಿ ಇಟ್ಟುಕೊಂಡು ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಸಿರಿ ಸಂಸ್ಥೆಯು ಡಾ.ವೀರೇಂದ್ರ ಹೆಗ್ಗಡೆ ಕನಸಿನ ಕೂಸಾಗಿದ್ದು, ಗ್ರಾಮೀಣ ಸಂಪನ್ಮೂಲ ಕೇಂದ್ರಗಳಲ್ಲಿ ಕಚ್ಚಾ ಸಾಮಾಗ್ರಿ ಒದಗಿಸುವುದು, ಗುಣಮಟ್ಟ ವಸ್ತುಗಳ ಉತ್ಪಾದನೆ, ಪ್ಯಾಕಿಂಗ್‌ ಮತ್ತು ಮಾರಾಟ ಮಾಡುವ ಮತ್ತು ಉತ್ಪನ್ನಗಳ ತಯಾರಿಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.        

ಈ ಸಂದರ್ಭದಲ್ಲಿ ಕಾಪೋರೇಷನ್‌ ಬ್ಯಾಂಕ್‌ ವ್ಯವಸ್ಥಾಪಕ ಆನಂದ್‌ಮೂರ್ತಿ,  ಧರ್ಮಸ್ಥಳ ಜಿಲ್ಲಾ ಜನ ಜಾಗತಿ ಸಮಿತಿ ಸದಸ್ಯ ಕೆ.ರವೀಂದ್ರಕುಮಾರ್‌, ಸಿರಿ ಉತ್ಪನ್ನ ಮೇಲ್ವಿಚಾರಕ  ರಮೇಶ್‌, ಲಕ್ಷ್ಮೀ ಉಮೇಶ್‌ ಇತರರಿದ್ದರು.


Trending videos

Back to Top