CONNECT WITH US  

"ಹೆಲಿ ಟೂರಿಸಂ'-ರೈಡ್‌: ಹೆಚ್ಚಿದ ಬೇಡಿಕೆ

ಉಡುಪಿ/ಮಲ್ಪೆ: ಹೆಲಿಕಾಪ್ಟರ್‌ ಮೂಲಕ ಸದ್ಯ ಮಲ್ಪೆ-ಉಡುಪಿ ಸುತ್ತಮುತ್ತ ರೈಡ್‌ ಮಾಡಬಹುದಾದ "ಹೆಲಿ ಟೂರಿಸಂ'ಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಬೇಡಿಕೆ ಬಂದಿದೆ ಎಂದು ವ್ಯವಸ್ಥೆ ನಿರ್ವಹಿಸುತ್ತಿರುವ ಸುದೇಶ್‌ ಶೆಟ್ಟಿ ತಿಳಿಸಿದ್ದಾರೆ.

ಪ್ರಾಯೋಗಿಕ ರೈಡ್‌ಗಳು ಯಶಸ್ವಿಯಾಗಿದೆ. ಫೆ. 15ರ ಮತ್ತೆ ಬುಕ್ಕಿಂಗ್‌ ಮಾಡಿದವರಿಗೆ ಫೆ. 20, 21ರಂದು ಅವಕಾಶ ಕಲ್ಪಿಸಿದ್ದೆವು. ಈ ಎರಡು ದಿನದಲ್ಲಿ 40ಕ್ಕೂ ಅಧಿಕ ರೈಡ್‌ಗಳನ್ನು ನಡೆಸಲಾಗಿದೆ. ಹಾರಾಟ ನಡೆಸಲು ಬೆಳಗ್ಗೆ 10ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ ಅವಕಾಶವಿರುವುದರಿಂದ ಅದನ್ನು ಮೀರಿ ರೈಡ್‌ ಮಾಡಲಾಗಿಲ್ಲ. ಹಾಗಾಗಿ ಬುಕ್ಕಿಂಗ್‌ ಮಾಡಿದವರಿಗೆ ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದ್ದೇವೆ ಎಂದರು.

ಉಡುಪಿ ಸಹಿತ ಮಂಗಳೂರು, ಚಿಕ್ಕಮಗಳೂರು, ಸುರತ್ಕಲ್‌, ಮಣಿಪಾಲ, ಭಟ್ಕಳ ಕಡೆಯಿಂದ ರೈಡ್‌ಗೆ ಬುಕ್ಕಿಂಗ್‌ ಮಾಡಿಕೊಂಡಿದ್ದಾರೆ. ಶಾಲೆ, ಕಾಲೇಜು ಮಕ್ಕಳಿಗೆ ಎಪ್ರಿಲ್‌ನಲ್ಲಿ ರಜಾದಿನವಾದ ಕಾರಣ ಆ ಸಮಯದಲ್ಲಿ ಬೇಡಿಕೆಗೆ ತಕ್ಕಂತೆ ರೈಡ್‌ನ‌ ದಿನಗಳನ್ನು ಹೆಚ್ಚಿಸಲಾಗುವುದು. ಸದ್ಯ ಬುಕ್ಕಿಂಗ್‌ ಹೆಚ್ಚು ಇದ್ದರೂ ಹೆಲಿಕಾಪ್ಟರ್‌ ಬ್ಯುಸಿ ಶೆಡ್ನೂಲ್‌ನಲ್ಲಿರುವ ಕಾರಣ ಸೀಮಿತ ದಿನಗಳಲ್ಲಿ ಮಾತ್ರ ರೈಡ್‌ಗೆ ಹೆಲಿಕಾಪ್ಟರ್‌ ಸಿಗಲಿದೆ. ಮಲ್ಪೆ-ಉಡುಪಿ-ಸೈಂಟ್‌ಮೇರಿಸ್‌ ದ್ವೀಪ-ಮಣಿಪಾಲ ಹೀಗೆ ರೈಡ್‌ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ವಿವಿಧ ಪ್ಯಾಕೇಜ್‌ಗಳನ್ನು ನೀಡಲಿದ್ದೇವೆ. ಪ್ರಸ್ತುತ ಒಬ್ಬರಿಗೆ ಪ್ರತಿ 10 ನಿಮಿಷಕ್ಕೆ 3 ಸಾವಿರ ರೂ. ನಿಗದಿಪಡಿಸಲಾಗಿದೆ. ಒಮ್ಮೆಗೆ 6 ಮಂದಿ ಪ್ರಯಾಣಿಸಬಹುದು ಎಂದು ಸುದೇಶ್‌ ಹೇಳಿದ್ದಾರೆ. ಆಸಕ್ತರು ಸುದೇಶ್‌ ಶೆಟ್ಟಿ (9742507270) ಅವರನ್ನು ಸಂಪರ್ಕಿಸಬಹುದು.

ಮುಗಿ ಬಿದ್ದ ಜನ
ಆದಿಉಡುಪಿಯ ಮೈದಾನದಲ್ಲಿರುವ ಹೆಲಿಪ್ಯಾಡ್‌ನಿಂದ ಕಾಪ್ಟರ್‌ ಟೇಕ್‌ಆಫ್ ಆಗುತ್ತಿದ್ದ ಕಾರಣ ಮೈದಾನದ ಸುತ್ತಮುತ್ತ ಶನಿವಾರ ಮತ್ತು ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. 

ಹತ್ತಿರದಿಂದ ಹೆಲಿಕಾಪ್ಟರ್‌ನ ಹಾರಾಟದ ದೃಶ್ಯ ಕಾಣಲು ಜನರು ಬಿಸಿಲಿಗೂ ಜಗ್ಗದೆ ಸೇರಿದ್ದರು. ಹೆಚ್ಚಿನವರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಹಾರಾಟದ ದೃಶ್ಯ ತೋರಿಸಿ ಖುಷಿಪಡಿಸಿದರು. ತಾವೂ ಖುಷಿಪಟ್ಟರು.

Trending videos

Back to Top