CONNECT WITH US  

ಯೋಗಾಧಿಕಾರಿಯಾದ ವೈದ್ಯಾಧಿಕಾರಿ

ಉಡುಪಿ: ಡಾ| ದಿನೇಶ್‌ ನಾಯಕ್‌ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ವೈದ್ಯರು. ಹಿಂದೆ ಮಣಿಪಾಲ ಆಸ್ಪತ್ರೆಯಲ್ಲಿದ್ದರು. ಹಿಂದಿನಿಂದಲೂ ಯೋಗಾಸನಗಳಲ್ಲಿ ಆಸಕ್ತಿ ಹೊಂದಿದ್ದ ಡಾ| ನಾಯಕ್‌ ಇತ್ತೀಚಿನ ಮೂರು ವರ್ಷಗಳಲ್ಲಿ ಯೋಗಾಭ್ಯಾಸ ನಿರತರು. 

ಡಾ| ನಾಯಕ್‌ ವಿಶೇಷವಾಗಿ ಆಸನಗಳ ಭಂಗಿಗಳಿಗೆ, ಪ್ರಾಣಾಯಾಮಕ್ಕೆ ಹೆಚ್ಚು ಒತ್ತು ಕೊಡುವ ಕಾರಣ ಹಠಯೋಗದಲ್ಲಿ ನಿಷ್ಣಾತರು. ಹ-ಠ = ಇಡಾ/ಪಿಂಗಳ, ಸೂರ್ಯನಾಡಿ, ಚಂದ್ರನಾಡಿ ಎಂಬ ವ್ಯಾಖ್ಯಾನಗಳಿವೆ. ಉಡುಪಿ ಬೀಡಿನಗುಡ್ಡೆಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ 2013ರಲ್ಲಿ ಯೋಗಗುರು ಮೈಸೂರಿನ ಡಾ| ರಾಘವೇಂದ್ರ ಪೈಯವರ ನೇತೃತ್ವದಲ್ಲಿ ಆರಂಭಗೊಂಡ ಸ್ವಾಮಿ ವಿವೇಕಾನಂದ ಜಿಲ್ಲಾ ವೆಲ್‌ನೆಸ್‌ ಸೆಂಟರ್‌ನ ತರಗತಿಗಳಿಗೆ ಸೇರಿ ಡಾ| ನಾಯಕ್‌ ಯೋಗದಲ್ಲಿ ನೈಪುಣ್ಯವನ್ನು ಪಡೆದರು. ಕೇಂದ್ರ ಆಯುಷ್‌ ಇಲಾಖೆ ಅಧೀನದ ಮೊರಾರ್ಜಿ ದೇಸಾಯಿ ನೇಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಯೋಗ ವಿವಿಧ ಜಿಲ್ಲೆಗಳಲ್ಲಿ ವೆಲ್‌ನೆಸ್‌ ಸೆಂಟರ್‌ನ್ನು ಫ್ರಾಂಚೈಸಿಯಾಗಿ ಆರಂಭಿಸಿತ್ತು. ಉಡುಪಿಯ ವೆಲ್‌ನೆಸ್‌ ಸೆಂಟರ್‌ನಲ್ಲಿ ದಿನದಲ್ಲಿ ಮೂರು ಹೊತ್ತು ತರಗತಿಗಳು ನಡೆಯುತ್ತಿವೆ. ಡಾ| ನಾಯಕ್‌ ಅವರು ಪ್ರತಿನಿತ್ಯ ಬೆಳಗ್ಗೆ 6 ಗಂಟೆಗೆ ಯೋಗ ತರಗತಿಗೆ ತಪ್ಪದೆ ಹಾಜರಾಗುತ್ತಾರೆ. 

ಡಾ| ನಾಯಕ್‌ ಅವರಿಗೆ ವೈದ್ಯಕೀಯ ಶಾಸ್ತ್ರದ ಹಿನ್ನೆಲೆಯಿರುವುದರಿಂದ ಯೋಗಾಸನಗಳ ಪರಿಣಾಮವನ್ನು ಇತರರಿಗಿಂತ ಸುಲಭವಾಗಿ ಅರಿಯಲು ಸಾಧ್ಯವಾಗುತ್ತದೆ. ಯಾವುದೇ ಪರಿಕರಗಳಿಲ್ಲದೆ, ಖರ್ಚೂ ಇಲ್ಲದೆ ಯೋಗಾಭ್ಯಾಸದಿಂದ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಒತ್ತಡದಿಂದ (ಸ್ಟ್ರೆಸ್‌) ಬರುವ ರಕ್ತದೊತ್ತಡ, ಮಾನಸಿಕ ಕಾಯಿಲೆ, ಮಧುಮೇಹದ ಸಮಸ್ಯೆಗಳನ್ನು ಜೀವನ ಪದ್ಧತಿಯನ್ನು ಬದಲಾಯಿಸಿ ಸರಿಪಡಿಸಲು ಸಾಧ್ಯ. ಒತ್ತಡ ಅನುಭವಿಸುವಾಗ ಬಿಡುಗಡೆಯಾಗುವ ಹಾರ್ಮೋನುಗಳನ್ನು ಸಮತೋಲನದಲ್ಲಿರಿಸಲು ಯೋಗ ಸಹಕಾರಿಯಾಗುತ್ತದೆ. 
ರಕ್ತ ಸಂಚಾರ ಸುಲಲಿತವಾಗಿ ಆರೋಗ್ಯ ಉತ್ತಮ ವಾಗುತ್ತದೆ. ಯೋಗಾಸನಗಳನ್ನು ನಿಧಾನವಾಗಿ ಕರಗತ ಮಾಡಿಕೊಳ್ಳುತ್ತಲೇ ಸ್ವಯಂಪ್ರೇರಣೆಯಿಂದ ಆಹಾರ ನಿಯಂತ್ರಣವಾಗುತ್ತದೆ. ಆದ್ದರಿಂದ ಯಾವುದೇ ಪಥ್ಯ (ಡಯಟ್‌) ಅಗತ್ಯವಿರುವುದಿಲ್ಲ. ಉತ್ತಮವಾದ ಆಹಾರ ಸ್ವೀಕರಿಸಿದರೆ ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ ಎಂದು ಡಾ| ನಾಯಕ್‌ ಹೇಳುತ್ತಾರೆ.

ಆರೋಗ್ಯವೆಂದರೇನು?
ಆರೋಗ್ಯವೆಂದರೇನು ಎಂದು ಯಾರಲ್ಲಾದರೂ ಕೇಳಿದರೆ ಜ್ವರ, ಶೀತ ಅಥವಾ ಯಾವುದೇ ತೋರುವ ಕಾಯಿಲೆ ಇಲ್ಲದಿದ್ದರೆ ಆರೋಗ್ಯವೆನ್ನುತ್ತಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 'ಶಾರೀರಿಕ (ಫಿಸಿಕಲ್‌) ಆರೋಗ್ಯ, ಮಾನಸಿಕ (ಮೆಂಟಲ್‌) ಆರೋಗ್ಯ, ಸಾಮಾಜಿಕ ಸುಸ್ಥಿತಿ (ಸೋಶಿಯಲ್‌ ವೆಲ್‌ಬೀಯಿಂಗ್‌) ವ್ಯಕ್ತಿಯಲ್ಲಿ ಸಮತೋಲನದಲ್ಲಿದ್ದರೆ ಮಾತ್ರ ಆರೋಗ್ಯವಂತರು. ಕೇವಲ ಕಾಯಿಲೆ/ನ್ಯೂನತೆ ಇಲ್ಲದೆ ಇರುವುದು ಆರೋಗ್ಯದ ಲಕ್ಷಣವಲ್ಲ'. ಭಾರತೀಯರು ಯೋಗವಿಜ್ಞಾನದ ಮೂಲಕ 'ಸ್ಪಿರಿಚುವಲ್‌ ಹೆಲ್ತ್‌' ಎಂಬ ಒಂದು ಹೆಜ್ಜೆ ಮುಂದೆ ಹೋಗಿದ್ದರು.

ಸೌಹಾರ್ದತೆ - ಸಾಮಾಜಿಕ ಶಾಂತಿ
ಈ ಬಾರಿಯ ಯೋಗ ದಿನದ ಥೀಂ 'ಯೋಗ ಫಾರ್‌ ಹಾರ್ಮೊನಿ ಆ್ಯಂಡ್‌ ಪೀಸ್‌'. ಯೋಗಾಭ್ಯಾಸದಿಂದ ಮೊದಲು ದೇಹದೊಳಗೆ ಸಮತೋಲನ (ಸೌಹಾರ್ದ) ಸಾಧ್ಯವಾಗುತ್ತದೆ. ದೇಹದೊಳಗೆ ಸಮತೋಲನ ಸಾಧ್ಯವಾಗುವಾಗ ದುರಾಸೆ, ಸಿಟ್ಟು, ಮದ, ಮತ್ಸರ, ಲೋಭ, ಅಹಂಕಾರ ಈ ಆರು ವೈರಿಗಳು ಕಡಿಮೆಯಾಗಿ 'ಇಗೋ' (ಅಹಂ) ತೊಲಗುತ್ತದೆ. ಒಳಗೆ ಸಮತೋಲನ ಸಾಧ್ಯವಾದ ಬಳಿಕ ಹೊರಗೂ (ಸಮಾಜದಲ್ಲಿ) ಸಮತೋಲನ ಸಾಧ್ಯವಾಗುತ್ತದೆ. ಯೋಗ, ಪ್ರಾಣಾ ಯಾಮದ ಮುಖ್ಯ ಲಾಭವೇ ಇದು. 
-ಡಾ| ದಿನೇಶ್‌ ನಾಯಕ್‌

-- ಮಟಪಾಡಿ ಕುಮಾರಸ್ವಾಮಿ

Trending videos

Back to Top