CONNECT WITH US  

ಸಹಜ ಹೆರಿಗೆ - ಯೋಗ, ಪ್ರಾಣಾಯಾಮದ ಗರಿಮೆ

ಉಡುಪಿ: ಮಿಶನ್‌ ಕಂಪೌಂಡ್‌ ಬಳಿ ಪೊಲೀಸ್‌ ಕವಾಯತು ಮೈದಾನ ರಸ್ತೆಯ ನಿವಾಸಿ ಶೋಭಾ ಶೆಟ್ಟಿ ಪ್ರಸಿದ್ಧ ಯೋಗತಜ್ಞ ಬಿ.ಕೆ.ಎಸ್‌. ಅಯ್ಯಂಗಾರ್‌ ಅವರಲ್ಲಿ ಪಳಗಿದ ಶಿಷ್ಯವರ್ಗದಲ್ಲಿ ಒಬ್ಬರು. ಅಯ್ಯಂಗಾರ್‌ ಕರ್ಮಭೂಮಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ ಶೋಭಾ ಶೆಟ್ಟಿಯವರು 1979ರಲ್ಲಿ ಅಯ್ಯಂಗಾರ್‌ ಅವರಲ್ಲಿ ಯೋಗ ತರಬೇತಿಯನ್ನು ಪಡೆದು ಕಲಿತ ವಿದ್ಯೆಯನ್ನು ವಿಶೇಷವಾಗಿ ಮಹಿಳೆಯರಿಗೆ ನೀಡುತ್ತಿದ್ದಾರೆ. ಉಡುಪಿ ಯುನೈಟೆಡ್‌ ಇಂಡಿಯ ಇನ್ಶೂರೆನ್ಸ್‌ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಸುರೇಶ ಶೆಟ್ಟಿಯವರನ್ನು ಮದುವೆಯಾದ ಬಳಿಕ ಪಡುಬಿದ್ರಿಗೆ ಬಂದು ನೆಲೆ ನಿಂತ ಶೋಭಾ ಗರ್ಭಿಣಿಯಾಗಿರುವಾಗಲೂ ಯೋಗಾಭ್ಯಾಸವನ್ನು ಕೈಬಿಟ್ಟವರಲ್ಲ.

ಈಗ ಹೆರಿಗೆಯಾಗಬೇಕಾದರೆ ಸಿಸೆರಿಯನ್‌ ಕಡ್ಡಾಯ ಎಂಬಂತಹ ವಾತಾವರಣವಿದೆ. ನಮಗೆ ಮುಂದಿನ ಅಡ್ಡಪರಿಣಾಮದ ಕುರಿತು ಚಿಂತೆ ಇರುವುದಿಲ್ಲ, ಈಗಿನ ಸಮಸ್ಯೆ ಏಕೆ ಬಂತೆಂದೂ ಯೋಚಿಸುವುದಿಲ್ಲ. ಹಣವನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸುವ ತಂತ್ರಗಾರಿಕೆ ಗೊತ್ತಿರುವುದರಿಂದ ಖರ್ಚಿನ ಚಿಂತೆಯೂ ಇಲ್ಲ. ದೀರ್ಘ‌ಕಾಲದ ಸಮಸ್ಯೆ ಬಂದಾಗಲೂ ಅದರ ಪರಿಹಾರ ತೋರಿಸಿ 'ವಸೂಲಿ' ಮಾಡಲು ಬೇರೆ ಬೇರೆ ತಂತ್ರಗಾರರು ಹುಟ್ಟಿರುತ್ತಾರೆ. 

ಚಿತ್ರ ನೋಡಿ ಯೋಗ ಬೇಡ
ಶೋಭಾ ಶೆಟ್ಟಿಯವರ ಪ್ರಕಾರ ಗರ್ಭಿಣಿಯಾಗುವ ಮುನ್ನವೇ ಯೋಗ, ಪ್ರಾಣಾಯಾಮಗಳನ್ನು ನಿರಂತರವಾಗಿ ತಜ್ಞರ ಮಾರ್ಗದರ್ಶನದೊಂದಿಗೆ ಮಾಡುತ್ತಿದ್ದರೆ ಸಹಜ ಹೆರಿಗೆ ಸಾಧ್ಯ. ಮುಖ್ಯವಾಗಿ ಹೆರಿಗೆ ಅನಂತರ ಅತಿ ಶೀಘ್ರದಲ್ಲಿ ಸಹಜಜೀವನಕ್ಕೆ ಮರಳಲು ಸಾಧ್ಯ. ಮಾನಸಿಕ ಬಲವನ್ನು ಯೋಗ ತಂದುಕೊಡುವ ಕಾರಣ ಸಹಜ ಹೆರಿಗೆಯನ್ನು ಎದುರಿಸುವ ತಾಕತ್ತು ಬರುತ್ತದೆ. ಇನ್ನೂ ಮುಖ್ಯವಾಗಿ ಮಕ್ಕಳು ಬಹಳ ಆರೋಗ್ಯವಂತರಾಗಿರುತ್ತಾರೆ/ಸುಂದರವಾಗಿರುತ್ತಾರೆ. ಇದಕ್ಕೆ ಶೋಭಾ ಶೆಟ್ಟಿಯವರೇ ಉದಾಹರಣೆ ಮತ್ತು ಅವರಲ್ಲಿ ಅನೇಕ ಮಹಿಳೆಯರು ತರಬೇತಿ ಪಡೆದು ಪ್ರಯೋಜನ ಪಡೆದಿದ್ದಾರೆ. ಆದರೆ ಪುಸ್ತಕ ನೋಡಿ, ಚಿತ್ರಗಳನ್ನು ನೋಡಿ ಯೋಗಾಸನಗಳನ್ನು ಮಾಡಬಾರದು. ಸೂಕ್ತ ತಜ್ಞರ ಮಾರ್ಗದರ್ಶನ ಪಡೆಯಬೇಕು. 

ಶೋಭಾ ಅವರು ಮನೆಯಲ್ಲಿ ತರಬೇತಿ ಕೊಡುವಾಗ ಕೆಲವು ವಿಶಿಷ್ಟ ಪರಿಕರಗಳನ್ನು ಬಳಸುತ್ತಾರೆ. ಇದು ಅಯ್ಯಂಗಾರ್‌ ಕೌಶಲ. ಎಲ್ಲ ವಯೋಮಾನದವರಿಗೂ/ ಶಾರೀರಿಕ ಸ್ಥಿತಿಯವರಿಗೂ ಆಸನಗಳನ್ನು ಮಾಡಲು ಸಾಧ್ಯವಾಗಬೇಕೆಂಬುದು ಅಯ್ಯಂಗಾರ್‌ ಕಾಳಜಿಯಾಗಿತ್ತು. ಸಮಯದಲ್ಲಿಯೂ ರಿಲ್ಯಾಕ್ಸ್‌ ಇದೆ. ಅಂದರೆ ಆಹಾರ ತೆಗೆದುಕೊಂಡ ನಿಗದಿತ ಸಮಯ ಬಿಟ್ಟು ಯೋಗಾಸನಗಳನ್ನು ಮಾಡಬಹುದು. 'ನಮಗೆ ಸಮಯವಿಲ್ಲ' ಎನ್ನುವವರಿಗೆ ಶೋಭಾ ಸಾಕಷ್ಟು ಪರಿಹಾರಗಳನ್ನು ಕಂಡುಹಿಡಿದಿದ್ದಾರೆ. 

ಚೀನಾದಲ್ಲಿ ಓಂಕಾರದ ಹೂಂಕಾರ
ಶೋಭಾ ಶೆಟ್ಟಿಯವರು ಯೋಗ ದಿನಾಚರಣೆಯಲ್ಲಿ ಆಹ್ವಾನಿತರಾಗಿ ಚೀನಾಕ್ಕೆ ತೆರಳಿದ್ದಾರೆ. ಚೆಂದು ಎಂಬಲ್ಲಿ ನಾಲ್ಕು ದಿನಗಳ ಕೋರ್ಸ್‌ ನಡೆಯುತ್ತಿದೆ. ಕಳೆದ ತಿಂಗಳು ಚೀನಾದ ಕುಂಬಿಂಗ್‌ಗೆ ಹೋಗಿದ್ದರು. ಭಾರತದಲ್ಲಿ ಯೋಗಾಸನ ಮಾಡುವಾಗ ಓಂಕಾರ ಅಗತ್ಯವಿಲ್ಲ ಎಂದು ಘೋಷಿಸಿದರೆ ಚೀನಾದಲ್ಲಿ 'ಓಂ ಸೂರ್ಯಾಯ ನಮಃ' ಎಂದು ಹೇಳಿ ಸೂರ್ಯನಮಸ್ಕಾರ ಮಾಡುತ್ತಾರೆ. ಸರಕಾರದ ವಿಶೇಷ ಪ್ರೋತ್ಸಾಹವಿದೆ.
-ಶೋಭಾ ಶೆಟ್ಟಿ

-- ಮಟಪಾಡಿ ಕುಮಾರಸ್ವಾಮಿ

Trending videos

Back to Top