CONNECT WITH US  

ಯೋಗ ಒಂದೇ ಸಾಕೆ? ಜೀವನಶೈಲಿ ಬದಲಾವಣೆ ಬೇಡವೆ?

ಉಡುಪಿ: ಇತ್ತೀಚೆಗೆ ಯೋಗ ಸಾಕಷ್ಟು ಪ್ರಚಾರ ಪಡೆದಿದೆ. ಪತಂಜಲಿ ಯೋಗಸೂತ್ರದಲ್ಲಿ ಕೇವಲ ಯೋಗಾಸನ, ಪ್ರಾಣಾಯಾಮಗಳನ್ನು ಮಾತ್ರ ಯೋಗ ಎಂದು ಕರೆದಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಈ ಎಂಟು ವಿಚಾರಗಳ ಪ್ಯಾಕೇಜ್‌ನ್ನು ಪತಂಜಲಿ ಕೊಟ್ಟರು. ಈಗ ಸದ್ಯ ಎದುರಿಸುತ್ತಿರುವ ಅನಾರೋಗ್ಯ ಸಮಸ್ಯೆಯಿಂದ ಬಚಾವಾಗಲು ಆಸನ, ಪ್ರಾಣಾಯಾಮ ಸಾಕೆಂಬ ಮನೋಭೂಮಿಕೆ ಹುಟ್ಟಿಕೊಂಡಿದೆ. ಆದರೆ ತಪ್ಪು ಕಲ್ಪನೆ. ಒಬ್ಬನ ಮೂಲಕ ಸಮಾಜದ ಆರೋಗ್ಯ ಪರಿಪೂರ್ಣವಾಗಿರಲು ಇವೆಲ್ಲವೂ ಬೇಕು. ಕನಿಷ್ಠ ಆಸನ, ಪ್ರಾಣಾಯಾಮದೊಂದಿಗೆ ಯಮ, ನಿಯಮಗಳನ್ನು ಸಾಧ್ಯವಾದಷ್ಟೂ ಪಾಲಿಸಬೇಕು. ಈಗಿನ ಭಾಷೆಯಲ್ಲಿ ಹೇಳುವುದಾದರೆ ನಾವು ಮರೆತ 'ಜೀವನಶೈಲಿ'ಗೆ ಮತ್ತೆ ಹಿಂದಿರುಗಬೇಕು. ಇವು ಮೂರೂ ಜತೆ ಜತೆಯಾಗಿ ಹೋದರೆ ಅನಾರೋಗ್ಯದಿಂದ ಪಾರಾಗಬಹುದೆಂಬುದಕ್ಕೆ ಉದಾಹರಣೆ ಕೊಂಕಣ ರೈಲ್ವೆಯ ಹಿರಿಯ ವಾಣಿಜ್ಯ ಸಹಾಯಕ ಎಚ್‌.ಎಂ.ನಾಗರಾಜ್‌. 

ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ನಳ್ಳಿನಕೊಪ್ಪ ಗ್ರಾಮದವ ರಾದ ನಾಗರಾಜ್‌ ರತ್ನಾಗಿರಿ, ಕಾರವಾರ, ಭಟ್ಕಳ, ಮುರ್ಡೇಶ್ವರ, ಬೈಂದೂರಿನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಉಡುಪಿಯಲ್ಲಿದ್ದಾರೆ. ಒಂದು ವರ್ಷದ ಹಿಂದೆ ಇವರಿಗೆ ಹೃದಯದ ಸಮಸ್ಯೆ ಕಾಡಿತು. ಹೃದಯದ ಕವಾಟ ತೆರೆದು ರಕ್ತ ಸ್ರಾವವಾಯಿತು. ಕೆಲ ಸಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು ಎಂದು ವೈದ್ಯರು ಹೇಳಿದ್ದರು. ಇದರ ಜತೆ ಬೆನ್ನು ನೋವು, ಕಾಲು ನೋವು, ಆ್ಯಸಿಡಿಟಿ, ಎದೆ ಉರಿ ಹೀಗೆ ಅನೇಕ ತರಹದ ಸಣ್ಣಪುಟ್ಟ ಸಮಸ್ಯೆಗಳಿದ್ದವು. ಒಬ್ಬರು ಆಯುರ್ವೇದ ವೈದ್ಯರನ್ನು ಸಂಪರ್ಕಿಸಿದಾಗ ಯೋಗಾಸನಗಳನ್ನು ಅಭ್ಯಾಸ ಮಾಡಿದರೆ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಸಲಹೆ ನೀಡಿದರು. ಇದರಂತೆ ಯೋಗಾಭ್ಯಾಸ ಆರಂಭಿಸಿದ ಬಳಿಕ ಸೊಂಟನೋವು, ಆ್ಯಸಿಡಿಟಿ, ಮಂಡಿನೋವು, ಮಲಬದ್ಧತೆ ಒಂದೊಂದೆ ಕಾಣೆಯಾದವು. ಹೃದ್ರೋಗಕ್ಕೆ ಶಸ್ತ್ರಚಿಕಿತ್ಸೆಯೂ ಅಗತ್ಯವಾಗಲಿಲ್ಲ. 

ಜೀವನಪದ್ಧತಿ ಎಂದರೇನು?
ನಾಗರಾಜ್‌ ಅವರು ಹೇಳುವಂತೆ ಕೇವಲ ಯೋಗಾಸನ, ಪ್ರಾಣಾಯಾಮ ಮಾತ್ರ ಸಾಲದು, ಜೀವನಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ನಾಗರಾಜ್‌ ಬೆಳಗ್ಗೆ ಸುಮಾರು 3.30 ಗಂಟೆಗೆ ಏಳುತ್ತಾರೆ. ಇದನ್ನು ಕೇಳಿ ಹೌಹಾರಬೇಡಿ. ಇವರು ಮಲಗುವುದು ರಾತ್ರಿ 8 ಗಂಟೆಗೆ, ತಪ್ಪಿದರೆ 9 ಗಂಟೆಯೊಳಗೆ. ಹಿಂದಿನ ದಿನ ರಾತ್ರಿ ಹಲ್ಲುಜ್ಜಿ ಮಲಗುವ ನಾಗರಾಜ್‌ ಬೆಳಗ್ಗೆ ಹಲ್ಲುಜ್ಜುವ ಮುನ್ನ ಸುಮಾರು ಒಂದು ಲೀಟರ್‌ ನೀರನ್ನು 'ಗುಟುಕ್‌' 'ಗುಟುಕ್‌' ಕುಡಿಯುತ್ತಾರೆ. 

ಪ್ರಾಥಮಿಕ ಕೆಲಸ, ಸ್ನಾನ ಮುಗಿಸಿ 4.30ರಿಂದ 6.30ರವರೆಗೆ ಯೋಗಾಸನ, ಪ್ರಾಣಾಯಾಮಗಳನ್ನು ಮಾಡುತ್ತಾರೆ. ಮತ್ತೆ ಅರ್ಧ ಲೀಟರ್‌ ನೀರು ಕುಡಿಯುತ್ತಾರೆ. ಒಂದು ಗಂಟೆ ಅಂತರ ಬಿಟ್ಟು ತಿಂಡಿ ತಿನ್ನುತ್ತಾರೆ. ತಿಂಡಿ ಹೇಗಿರುತ್ತದೆ ಎಂದರೆ ಅರ್ಧಾಂಶ ಅಕ್ಕಿ, ಗೋಧಿ ಇತ್ಯಾದಿಗಳ ಪದಾರ್ಥವಿದ್ದರೆ ಅರ್ಧಾಂಶ ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳ (ಪತಂಜಲಿ ಯೋಗ ಸಮಿತಿ ಪ್ರಕಾರ ಇವು ಸಾತ್ವಿಕ ಆಹಾರ) ಅಂಶಗಳಿರುತ್ತವೆ. ಮಧ್ಯಾಹ್ನವೂ ಇದೇ ರೀತಿ. ಸುಮಾರು ಸಂಜೆ 5 ಗಂಟೆ ಹೊತ್ತಿಗೆ (ಸೂರ್ಯ ಮುಳುಗುವ ಮುನ್ನ) ರಾತ್ರಿ ಆಹಾರವನ್ನು ಸ್ವೀಕರಿಸುತ್ತಾರೆ. ನೀರು ಕುಡಿಯುವುದು ಆಹಾರ ಸೇವನೆಗೆ ಒಂದು ಗಂಟೆ ಮುನ್ನ ಮತ್ತು ಒಂದೂವರೆ ಗಂಟೆ ಅನಂತರ. ಊಟದ ಮಧ್ಯೆ ನೀರು ಕುಡಿಯೋದಿಲ್ಲ. ಕುಡಿಯುವುದಿದ್ದರೂ ಹಣ್ಣಿನ, ತರಕಾರಿ ರಸ ಅಥವಾ ಮಜ್ಜಿಗೆ. 

ಹಲ್ಲಿನ ಕೆಲಸ ಹೊಟ್ಟೆಗೆ ಕೊಡ್ಬೇಡಿ!
ಬೆಳಗ್ಗೆ ದೈಹಿಕ ಚಟುವಟಿಕೆ ಆರಂಭವಾಗುವುದರಿಂದ ಬೆಳಗ್ಗಿನ ಆಹಾರ ಗರಿಷ್ಠ ತೆಗೆದುಕೊಳ್ಳಬೇಕು. ಮಧ್ಯಾಹ್ನ ಅರ್ಧಾಂಶ ತೆಗೆದುಕೊಳ್ಳಬೇಕು. ಸಂಜೆ ಕಾಲಂಶ ತೆಗೆದುಕೊಳ್ಳಬೇಕು. ಏಕೆಂದರೆ ಸಂಜೆ ಬಳಿಕ ಕೆಲಸ ಕಡಿಮೆ. ಆಹಾರ ತೆಗೆದುಕೊಳ್ಳುವಾಗ ಸರಿಯಾಗಿ ಜಗಿದು ತಿನ್ನಬೇಕು. 'ಹಲ್ಲಿನಿಂದ ಮಾಡುವ ಕೆಲಸವನ್ನು ಹೊಟ್ಟೆಗೆ ಕೊಟ್ಟಾಗ ಅನಾರೋಗ್ಯ ಸಮಸ್ಯೆ ಶುರುವಾಗುತ್ತದೆ' ಎಂದು ಬಾಬಾ ರಾಮ್‌ದೇವ್‌ ಆಗಾಗ್ಗೆ ಹೇಳುತ್ತಾರೆ. 

ನಿಲುಗಡೆರಹಿತ ನಿದ್ರೆ ಅಗತ್ಯ
ಸಾಮಾನ್ಯವಾಗಿ ರಾತ್ರಿ ಮಲಗಿದ ಅನಂತರ ಮೂತ್ರ ವಿಸರ್ಜನೆಗೆಂದು ಏಳುವುದಿದೆ. ಇದಕ್ಕೆ ಕಾರಣ ರಾತ್ರಿ ಊಟದ ಬಳಿಕ ನೇರವಾಗಿ ಮಲಗುವುದೇ ಕೆಲಸ. ಆಗ ನಿದ್ರೆ ಕೆಡಿಸುವ ಮೂತ್ರ ವಿಸರ್ಜನೆ ಸಹಜ. ಮಲಗುವ 2-3 ಗಂಟೆ ಮುನ್ನ ಆಹಾರ ಸ್ವೀಕರಿಸಿದರೆ ಮೂತ್ರ ವಿಸರ್ಜನೆ ಆಗಿಹೋಗಿರುತ್ತದೆ. ಒಂದು ಬಾರಿ ಮಲಗಿದರೆ ಮತ್ತೆ ಬೆಳಗ್ಗೆ ಏಳುವಂತಾಗಬೇಕು. ಒಂದು ಬಾರಿ ಮೂತ್ರ ವಿಸರ್ಜನೆಗೆ ಎದ್ದರೂ, ಅದು ಎರಡು ನಿಮಿಷದ ಕೆಲಸವಾದರೂ ಕೆಲವು ಗಂಟೆಗಳ ನಿದ್ರೆ ಪ್ರಮಾಣವನ್ನು ಅಪಹರಿಸುತ್ತದೆ. ನಿಲುಗಡೆ ಇಲ್ಲದ ನಿದ್ರೆ ಬಹಳ ಮುಖ್ಯ. 

ತೂಕ ಕಡಿಮೆಯಾದರೂ ಶಕ್ತಿ ಕಡಿಮೆಯಾಗಬಾರದು
ಯೋಗಾಸನಗಳನ್ನು ಆರಂಭಿಸುವ ಮುನ್ನ ನಾಗರಾಜರಿಗೆ ಊಟ ಸೇರುತ್ತಿರಲಿಲ್ಲ. ಈಗ ಆರೋಗ್ಯ ಸುಧಾರಣೆಯಾಗಿರುವ ಜತೆ ಆಹಾರವೂ ಚೆನ್ನಾಗಿ ಸೇರುತ್ತಿದೆ. ಯೋಗಾಭ್ಯಾಸದ ಬಳಿಕ 10 ಕೆ.ಜಿ. ತೂಕ ಕಡಿಮೆಯಾಗಿದೆ. ತೂಕ ಕಡಿಮೆಯಾಗಿದೆ ಎಂದರೆ ಗಾಬರಿಪಡಬೇಡಿ. ತೂಕ ಕಡಿಮೆಯಾದರೂ ಶಕ್ತಿ ಕಡಿಮೆಯಾಗಬಾರದು. ತೂಕ ಹೆಚ್ಚಿದ್ದಾಗ ಇರುವ ಶಕ್ತಿಗಿಂತ ತೂಕ ಕಡಿಮೆಯಾದಾಗ ಶಕ್ತಿ ಹೆಚ್ಚಿಗೆ ಇರಬೇಕು. ಇದೇ ಯೋಗಾಸನ, ಪ್ರಾಣಾಯಾಮದ ಗುಟ್ಟು ಎನ್ನುತ್ತಾರೆ ನಾಗರಾಜರ ಪತ್ನಿ ವಿಜಯಾ. ನಾಗರಾಜರು ಉದ್ಯೋಗದ ಜತೆ ಕೊಂಕಣ ರೈಲ್ವೆ ನಿಗಮ ನೌಕರರ ಸಂಘದ ಸಹಾಯಕ ಪ್ರಧಾನ ಕಾರ್ಯದರ್ಶಿ, ಪತಂಜಲಿ ಯೋಗ ಸಮಿತಿ ಕಾರ್ಯಕರ್ತ, ಉಡುಪಿ ಬಸವ ಸಮಿತಿಯ ಕಾರ್ಯದರ್ಶಿ ಆಗಿದ್ದಾರೆ. ವಿಜಯಾ ಅವರು ಗೃಹಿಣಿಯಾಗಿ ಪತಂಜಲಿ ಯೋಗ ಸಮಿತಿಯ ಸಕ್ರಿಯ ಕಾರ್ಯಕರ್ತೆ ಮತ್ತು ಯೋಗ ಶಿಕ್ಷಕಿಯ ಪಾತ್ರ ನಿರ್ವಹಿಸುತ್ತಾರೆ. ನಾಗರಾಜರು ಉದ್ಯೋಗಸ್ಥರಾದರೂ ಮನೆ ಮಾಳಿಗೆಯಲ್ಲಿಯೇ ತಮಗೆ ಬೇಕಾದ ತರಕಾರಿಗಳನ್ನು ಬೆಳೆಸುತ್ತಾರೆ. 

ದೇಹದೊಳಗೊಂದು ಸ್ನಾನ
ನಾವು ಸ್ನಾನ ಮಾಡುವುದೆಂದರೆ ದೇಹಕ್ಕೆ ಅಂಟಿದ ಕೊಳೆ ಹೋಗಲಾಡಿಸಿ ಶುಚಿಯಾಗಿಡಲು ಎನ್ನುವುದಕ್ಕೆ 'ದೊಡ್ಡ ತಲೆ' ಬೇಡ. ಬೆಳಗ್ಗೆ ಕನಿಷ್ಠ ಒಂದು ಲೀಟರ್‌ ನೀರು ಕುಡಿದರೆ ದೇಹದೊಳಗೆ ಅಂಟಿಕೊಂಡಿರುವ ಕೊಳೆ ನಿವಾರಣೆಯಾಗುತ್ತದೆ. ಹೊರಗಿನಿಂದ ಸ್ನಾನ ಮಾಡುವ ಮುನ್ನ ಒಳಗೆ ನೀರು ಕುಡಿದು ಸ್ನಾನ ಮಾಡಿಸಿದರೆ ಮಲ, ಮೂತ್ರ, ಬೆವರು ಇತ್ಯಾದಿ ವಿಸರ್ಜನೆ ಮೂಲಕ ಒಳಗಿನ 
ಕೊಳೆ ಹೋಗುತ್ತದೆ. 
-ಎಚ್‌.ಎಂ.ನಾಗರಾಜ್‌

ಪತಂಜಲಿ ಪ್ಯಾಕೇಜ್‌
ಪತಂಜಲಿಮುನಿಗಳು 'ಯೋಗ ಸೂತ್ರ'ಕ್ಕೆ ಕೊಟ್ಟ ಪ್ಯಾಕೇಜ್‌ ಮತ್ತು ಅರ್ಥ ಹೀಗಿದೆ: 

1. ಯಮ: ಮನುಷ್ಯ ಸಮಾಜಜೀವಿಯಾದ ಕಾರಣ ಉಳಿದವರೊಂದಿಗೆ ಹೇಗೆ ಬದುಕಬೇಕೆಂಬುದನ್ನು ಇದು ಸೂಚಿಸುತ್ತದೆ. ಇದರಲ್ಲಿ ಅಹಿಂಸೆ, ಸತ್ಯ, ಅಸ್ತೇಯ (ಕಳದಿರುವುದು/ಇನ್ನೊಬ್ಬರ ವಸ್ತುಗಳನ್ನು ಬಯಸದಿರುವುದು), ಬ್ರಹ್ಮಚರ್ಯ (ಪರಸ್ತ್ರೀ ಬಯಸದಿರುವ ಇಂದ್ರಿಯನಿಗ್ರಹ), ಅಪರಿಗ್ರಹ (ಸಂಗ್ರಹಿಸದೆ ಇರುವುದು) ಈ ಐದು ವಿಚಾರಗಳಿವೆ. 

2. ನಿಯಮ: ಇದು ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದ್ದು. ಶೌಚ (ಶುಚಿಯಾಗಿರುವುದು), ಸಂತೋಷ (ಸದಾ ಅಳುಮೋರೆ ಹಾಕಿಕೊಳ್ಳದಿರುವುದು/ಇತರರ ದೋಷ/ದುಃಖವನ್ನೇ ಹೇಳಿ ಸಂತೋಷಪಡದಿರುವುದು ಇತ್ಯಾದಿ), ಸ್ವಾಧ್ಯಾಯ (ಅಧ್ಯಯನಶೀಲತೆ), ತಪಃ (ತಪಸ್ಸು), ಈಶ್ವರಪ್ರಣೀಧಾನ (ಭಗವಂತನಿಗೆ ಶರಣಾಗಿರುವುದು) ಇವು ವೈಯಕ್ತಿಕ ನಿಯಮಗಳು. 

3. ಆಸನ: ದೈಹಿಕ ವ್ಯಾಯಾಮ, ಯೋಗಾಸನಗಳು. 

4. ಪ್ರಾಣಾಯಾಮ: ಶ್ವಾಸೋಚ್ಛ್ವಾಸದ ವಿವಿಧ ರೀತಿಗಳು.

5. ಪ್ರತ್ಯಾಹಾರ: ಮನಸ್ಸನ್ನು ಇಂದ್ರಿಯಗಳಿಂದ ಒಳಗೆ ಸೆಳೆದುಕೊಳ್ಳುವುದು. 

6. ಧಾರಣ: ಮನಸ್ಸಿಗೆ ವಿಷಯಗಳನ್ನು ಕೊಡುವುದು. 

7. ಧ್ಯಾನ: ಕೊಟ್ಟ ವಿಷಯಗಳ ಕುರಿತು ನಿರಂತರವಾಗಿ ಮನನ ಮಾಡುವುದು.

8. ಸಮಾಧಿ: ನಿರಂತರ ಮನನದಿಂದ ಲಭಿಸುವ ಅಂತಿಮ ಸ್ಥಿತಿ. ಮೊದಲ ಐದು ಬಾಹ್ಯಕ್ಕೆ (ಹೊರಗೆ) ಸಂಬಂಧಿಸಿದರೆ ಕೊನೆಯ ಮೂರು ಆಂತರಿಕಕ್ಕೆ (ಒಳಗೆ) ಸಂಬಂಧಿಸಿದ್ದು.
- ಡಾ|ಎ.ಗಣೇಶ ಭಟ್‌, ಕಡಿಯಾಳಿ ಉಡುಪಿ (ಯೋಗದಲ್ಲಿ ಡಾಕ್ಟರೇಟ್‌ ಪದವಿಯನ್ನು ಗಳಿಸಿದವರು)

-- ಮಟಪಾಡಿ ಕುಮಾರಸ್ವಾಮಿ

Trending videos

Back to Top