CONNECT WITH US  

ಹಿರಿತನದಲ್ಲಿ ಹಿಡಿದ, ಬಿಡದ ಯೋಗ

ಉಡುಪಿ: 'ಆರಂಭಶೂರರು' ಎಂಬ ಮಾತು ಚಾಲ್ತಿಯಲ್ಲಿದೆ. ಆರಂಭದಲ್ಲಿ ಮಾತ್ರ ಇಂತಹವರು ಪ್ರತಾಪಶಾಲಿಗಳು. ಇದಕ್ಕೆ ವಯೋಮಾನದ ಇತಿಮಿತಿ ಇಲ್ಲ. ಆದರೆ ವಯಸ್ಸಾದಂತೆ ನಿರಂತರ ಸಾಧನೆ ಕಷ್ಟಸಾಧ್ಯ. ಉಡುಪಿಯ ಉದ್ಯಮಿ ಎಂ.ವಿಶ್ವನಾಥ ಭಟ್‌ ಇಳಿವಯಸ್ಸಿನಲ್ಲಿ ಯೋಗಾಭ್ಯಾಸವನ್ನು ಶುರು ಮಾಡಿ ನಿರಂತರತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. 

ಪತಂಜಲಿ ಯೋಗ ಸಂಸ್ಥೆಯವರು ಏಳು ವರ್ಷಗಳ ಹಿಂದೆ ಶಾರದಾ ಮಂಟಪದಲ್ಲಿ ಒಂದು ವಾರದ ಯೋಗ ಶಿಬಿರವನ್ನು ಆಯೋಜಿಸಿದಾಗ ವಿಶ್ವನಾಥ ಭಟ್ಟರಿಗೆ ಇದರ ರುಚಿ ಸಿಕ್ಕಿತು. ಆಗ ಕುಂಜಿಬೆಟ್ಟು ಸುಧೀಂದ್ರ ಮಂಟಪದಲ್ಲಿ ಆಸುಪಾಸಿನವರು ಒಟ್ಟಾಗಿ ಯೋಗ ತರಗತಿ ಆರಂಭಿಸಿದರು. ಅಂದಿನಿಂದ ಬಂದು ಹೋದವರು/ ಬರುತ್ತಿರುವವರು ಅದೆಷ್ಟೋ ಮಂದಿ. ಆದರೆ ವಿಶ್ವನಾಥ ಭಟ್ಟರು ಮಾತ್ರ ತಪ್ಪಿಸಿದವರಲ್ಲ. ಇಬ್ಬರಾದರೂ ಯೋಗಾಭ್ಯಾಸ ನಡೆದೇ ನಡೆಯುತ್ತದೆ. ತರಗತಿಗೆ ವರ್ಷದಲ್ಲಿ ರಜೆ ಎಂದರೆ ದೀಪಾವಳಿ ಹಬ್ಬದ ಸ್ನಾನದ ದಿನ ಮಾತ್ರ. 

ಇವರು ಬರೋಬ್ಬರಿ 50 ನಿಮಿಷ ಪ್ರಾಣಾಯಾಮ ಮಾಡಿದರೆ, 30 ನಿಮಿಷ ಸೂರ್ಯನಮಸ್ಕಾರ, ಶಾರೀರಿಕ ವ್ಯಾಯಾಮ, 20 ನಿಮಿಷ ಯೋಗಾಸನಗಳನ್ನು ಮಾಡುತ್ತಾರೆ. 63ನೇ ವಯಸ್ಸಿನಲ್ಲಿ ಆರಂಭಿಸಿದ ಯೋಗವನ್ನು 69ರಲ್ಲಿಯೂ ಮುಂದುವರಿಸುತ್ತಿದ್ದಾರೆ. ಈ ಇಷ್ಟು ವರ್ಷಗಳಲ್ಲಿ ಇವರಿಗೆ ಶೀತ, ಜ್ವರ, ಕೆಮ್ಮು ಕೂಡ ಬಂದಿಲ್ಲ. ಸಿಟ್ಟು, ದುರಾಸೆಯಂತಹ ಕೆಟ್ಟ ಗುಣಗಳು ತಂತಾನೆ ದೂರವಾಗಿ ಮನಸ್ಸು ಪ್ರಫ‌ುಲ್ಲವಾಗಿರುತ್ತದೆ ಎಂದು ಭಟ್‌ ಹೇಳುತ್ತಾರೆ. 

ಯೋಗಾಸನ, ಪ್ರಾಣಾಯಾಮಗಳನ್ನು ಮಾಡಿದ ದಿನ ಕೆಲಸ ಮಾಡಲು ಉತ್ಸಾಹ ಇರುತ್ತದೆ, ಮಾಡದ ದಿನಗಳಲ್ಲಿ ಜಡತ್ವ ಇರುತ್ತದೆ. ಇದರ ಪೂರ್ಣಪ್ರಯೋಜನ ದೊರಕಬೇಕಾದರೆ ಆಹಾರವನ್ನು ನಿಯಂತ್ರಿಸಬೇಕು. ಬೆಳಗ್ಗೆ ಜಾಸ್ತಿ, ಮಧ್ಯಾಹ್ನ ಕಡಿಮೆ, ರಾತ್ರಿ ಇನ್ನೂ ಕಡಿಮೆ ಆಹಾರ ಸ್ವೀಕರಿಸಬೇಕು ಎನ್ನುತ್ತಾರೆ ಭಟ್‌.  ಬೆಳಗ್ಗೆ 4.30ಕ್ಕೆ ಏಳುವ ಭಟ್‌ ಒಂದು ಲೀಟರ್‌ ನೀರು ಕುಡಿದು ಯೋಗಾಸನಗಳನ್ನು ಮಾಡಲು ಶುರುಮಾಡುತ್ತಾರೆ. ರಾತ್ರಿ 9.30ಕ್ಕೆ ಊಟ ಮಾಡುತ್ತಿದ್ದ ಭಟ್‌ ಈಗ 8.30ಕ್ಕೆ ಇಳಿಸಿದ್ದಾರೆ. ಮುಂದೆ ಇನ್ನಷ್ಟು ಬೇಗ ಮಾಡಬೇಕು ಎಂಬ ಹಂಬಲ ಇದೆ. ಇವರೀಗ ಯೋಗ ತರಗತಿಗಳನ್ನು ಜೀವನದ ಒಂದು ಭಾಗವಾಗಿ ಮಾಡಿಕೊಂಡಿದ್ದಾರೆ. 

ತೂಕದ ಗುಟ್ಟು
ನಾನು ಯೋಗಾಸನ ಅಭ್ಯಾಸ ಮಾಡಿದ ಒಂದು ವರ್ಷದಲ್ಲಿ ಆರು ಕೆ.ಜಿ. ತೂಕ ಕಡಿಮೆಯಾಯಿತು. ಅನಂತರ ಒಂದೇ ತೆರನಾಗಿದೆ. ತೂಕ ಹೆಚ್ಚಿದ್ದವರು ಯೋಗಾಸನ ಮಾಡಿದರೆ ತೂಕ ಕಡಿಮೆಯಾಗುತ್ತದೆ, ತೂಕ ಕಡಿಮೆ ಇದ್ದವರು ಯೋಗಾಸನ ಮಾಡಿದರೆ ತೂಕ ಹೆಚ್ಚಾಗುತ್ತದೆ. ಒಟ್ಟಾರೆ ತೂಕದಲ್ಲಿ ಸಮತೋಲನ ಸಾಧ್ಯವಾಗುತ್ತದೆ. ಸಹಜ ತೂಕ ಬಂದ ಬಳಿಕ ಏರುಪೇರು ಆಗುವುದಿಲ್ಲ. 

ವೈದ್ಯರ ಸಲಹೆ
ವೈದ್ಯರು ಹಿಂದೆ ರೋಗಿಗಳು 'ಯೋಗಾಸನಗಳನ್ನು ಮಾಡಬಹುದೆ?' ಎಂದು ಕೇಳಿದರೆ ಅರೆ ಮನಸ್ಸಿನಲ್ಲಿ 'ಮಾಡಿ ತೊಂದರೆ ಇಲ್ಲ. ಅದರ ಬದಲು ವಾಕಿಂಗ್‌ ಮಾಡಿ' ಎನ್ನುತ್ತಿದ್ದರು. ಈಗ 'ಯೋಗಾಸನ, ಪ್ರಾಣಾಯಾಮ ಮಾಡಿ' ಎನ್ನುತ್ತಿದ್ದಾರೆ. ವೈದ್ಯರು ಹೇಳಿಯೇ ನಮ್ಮ ತರಗತಿಗಳಿಗೆ ಎಷ್ಟೋ ಜನರು ಬರುತ್ತಿದ್ದಾರೆ. 

ಫ್ಯಾನ್‌ ಬೇಡ
ಯೋಗಾಸನಗಳನ್ನು ಮಾಡುವಾಗ ಫ್ಯಾನ್‌ ಹಾಕಿಕೊಳ್ಳಬಾರದು. ಏಕೆಂದರೆ ಮಳೆಗಾಲ, ಚಳಿಗಾಲ ಹೊರತುಪಡಿಸಿದರೆ ಉಳಿದ ಸಮಯ ಯೋಗಾಸನಗಳನ್ನು ಮಾಡುವಾಗ ಬೆವರು ಬರುತ್ತದೆ. ಬೆವರು ಬರಬೇಕು. ಫ್ಯಾನ್‌ ಹಾಕಿದ್ದರೆ ಬೆವರು ಅಲ್ಲಿಯೇ ಇಂಗಿ ಹೋಗುತ್ತದೆ. ಹೀಗಾಗಬಾರದು. 

ಗಮನ ಕೇಂದ್ರೀಕರಣ
ವಿಶೇಷವಾಗಿ ಅನುಲೋಮ, ವಿಲೋಮ ಪ್ರಾಣಾಯಾಮ ಮಾಡುವಾಗ ಪೂರ್ಣಶ್ವಾಸವನ್ನು ತೆಗೆದುಕೊಳ್ಳುವುದು, ಬಿಡುವುದು ನಡೆಯುತ್ತದೆ. ಆಗ ತೆಗೆದುಕೊಂಡ ಶ್ವಾಸದ ಮೂಲಕ ಆಮ್ಲಜನಕ ಮಿದುಳಿನವರೆಗೆ ಹೋಗಬೇಕು. ಆಗ ದೇಹದಲ್ಲಿ ಯಾವ ಕಡೆ ತೊಂದರೆ ಇದೆಯೋ ಅಲ್ಲಿಗೆ ಗಮನ ಕೇಂದ್ರೀಕರಿಸಬೇಕು. ಇದರಿಂದ ಸಾಕಷ್ಟು ಪ್ರಯೋಜನ ಸಿಗುತ್ತದೆ.
- ಎಂ.ವಿಶ್ವನಾಥ ಭಟ್‌

-- ಮಟಪಾಡಿ ಕುಮಾರಸ್ವಾಮಿ

ಇವುಗಳನ್ನೂ ಓದಿ:
► ಸಹಜ ಹೆರಿಗೆ - ಯೋಗ, ಪ್ರಾಣಾಯಾಮದ ಗರಿಮೆ: http://bit.ly/1UIecqB
► ಯೋಗಾಧಿಕಾರಿಯಾದ ವೈದ್ಯಾಧಿಕಾರಿ: http://bit.ly/1UAo0ad
► ವೃತ್ತಿಯಲ್ಲಿ ವಾಣಿಜ್ಯತೆರಿಗೆ ಅಧಿಕಾರಿ, ಪ್ರವೃತ್ತಿಯಲ್ಲಿ ಯೋಗಾಧಿಕಾರಿ: http://bit.ly/267IWt9
► ಯೋಗ ಒಂದೇ ಸಾಕೆ? ಜೀವನಶೈಲಿ ಬದಲಾವಣೆ ಬೇಡವೆ?: http://bit.ly/1YzfSYO


Trending videos

Back to Top