CONNECT WITH US  

ಸಾಮರಸ್ಯ ತ್ರಿಕರಣ ಪೂರ್ವಕ ಇರಲಿ

ಉಡುಪಿ: ಸಾಮಾಜಿಕ ಸಾಮರಸ್ಯದ ಕುರಿತು ಮಾತನಾಡಬೇಕಾದರೆ ಹಿಂದೂಗಳಲ್ಲಿ ನಾವೆಲ್ಲ ಒಂದು ಎಂಬ ಭಾವ ತ್ರಿಕರಣಪೂರ್ವಕವಾಗಿ ಇರಬೇಕು. ಮಂದಿರ, ಶ್ಮಶಾನ, ನೀರು ಎಲ್ಲರಿಗೂ ಒಂದೇ. ವ್ಯವಸ್ಥೆಯ ದೃಷ್ಟಿಯಿಂದ ಬೇರೆಯಿದ್ದರೂ ಯಾವುದಕ್ಕೂ ಯಾರಿಗೂ ನಿರ್ಬಂಧ ಸರಿಯಲ್ಲ. ಸಮಾನತೆ, ಸಾಮರಸ್ಯ, ಏಕತೆ ನಮ್ಮ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಆಗಬೇಕಾದ ಆವಶ್ಯಕತೆಯಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದರು.

ಅವರು ಶುಕ್ರವಾರ ಧರ್ಮಸಂಸದ್‌ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ರಾಮಮಂದಿರ ಹೋರಾಟ ನಿರಂತರ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಿರಂತರ ನಡೆಯಲಿದೆ. ಆದರೆ ಮಾತು, ಕೃತಿಗಳು ಹೋರಾಟಕ್ಕೆ ಅಡ್ಡಿಯಾಗದಂತಹ ನಡೆ ಅಗತ್ಯ. ಸತತ ಹೋರಾಟ ಹಾಗೂ ನಿರಂತರ ಬಲಿದಾನದ ಮೂಲಕ ರಾಮಮಂದಿರ ನಿರ್ಮಾಣ ಪ್ರಯತ್ನ ಜಾರಿಯಲ್ಲಿತ್ತು. ಕರಸೇವೆ ಕೂಡ ಮಾಡಲಾಯಿತು. ಕಾಯುವಿಕೆಗೂ ಒಂದು ಮಿತಿಯಿದೆ. ಪ್ರತಿಯೊಬ್ಬ ಕಾರ್ಯಕರ್ತನ ಮನದಲ್ಲೂ ರಾಮಮಂದಿರ ನಿರ್ಮಾಣವಾಗಬೇಕು ಎಂದಿದೆ. ಮಂದಿರ ನಿರ್ಮಾಣಾಸಕ್ತರ ಮಾತು ಹಾಗೂ ಕೃತಿ ನಮ್ಮ ಮುಂದಿನ ನಿರ್ಣಯಕ್ಕೆ ಅಡ್ಡಿಯಾಗದಿರಲಿ. ನಾವೇನು ಮಾಡಬೇಕೋ ಅದು ಮಾತ್ರ ಜನರಿಗೆ ತಲುಪಲಿ, ನಾವೇನು ಮಾಡುವುದಿಲ್ಲವೋ ಅದು ಜನರಿಗೆ ತಲುಪುವಂತಾಗುವುದು ಬೇಡ ಎಂದರು.

ಸಂಯಮ ಇರಲಿ
ಭವಾನಿ ಮಾತೆಯ ಗುಡಿಯನ್ನು ಧ್ವಂಸ ಮಾಡಿದ ಅಪlಲ್‌ ಖಾನ್‌ ವಿರುದ್ಧ ಶಿವಾಜಿ ತತ್‌ಕ್ಷಣ ಸೇಡು ತೀರಿಸದೇ ಕಾಲ ಕೂಡಿ ಬಂದಾಗ ಹೋರಾಡಿ ಸರಿಯಾದ ಶಾಸ್ತಿ ಮಾಡಿದ. ನಾವಿಂದು ಮಾಡಹೊರಟಿರುವ ಕಾರ್ಯದ ಪ್ರಾಮುಖ್ಯವನ್ನು ಅರಿತು ಮುಂದಡಿಯಿಡಿ ಎಂದರು.

ಗೋಮಾತೆಯ ರಕ್ಷಣೆ ಮಾಡಿ
ಇಂದು ದೇಶದಲ್ಲಿ ಗೋಮಾತೆಯ ರಕ್ಷಣೆ ಕಷ್ಟವಾಗುತ್ತಿದೆ. ಗೋ ಸಂವರ್ಧನೆ ಕಠಿನವಾಗುತ್ತಿದೆ. ಗೋವಿನ ಮಹತ್ವದ ಕುರಿತು ವೈಜ್ಞಾನಿಕ ಸಂಶೋಧನೆಗಳಿವೆ. ಹಿಂದೂ ಪುರಾಣ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇದಕ್ಕೆ ಪ್ರತ್ಯೇಕ ಕಾನೂನು ಇಲ್ಲದಿದ್ದರೂ ಗೋ ರಕ್ಷಣೆ ಹಿಂದೂ ಸಮಾಜದ ಆದ್ಯ ಕರ್ತವ್ಯ. ಗೋವಿನ ಮಹತ್ವದ ಸಂಶೋಧನೆಗಳ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ಅಗತ್ಯವಿದೆ ಎಂದು ಮೋಹನ್‌ ಭಾಗವತ್‌ ತಿಳಿಸಿದರು.

ಮತಾಂತರ ತಡೆ
ಮತಾಂತರದ ಮೂಲಕ ಹಿಂದೂ ಸಮಾಜವನ್ನು ಕುಗ್ಗಿಸುವ ಯತ್ನ ಅನೇಕ ವರ್ಷಗಳಿಂದ ನಡೆಯುತ್ತಿದೆ. ಆದರೆ ನಮ್ಮವರ ಸಂಘಟಿತ ಮನಸ್ಸಿನಿಂದಾಗಿ ಅವರ ಪ್ರಯತ್ನ ಕೈಗೊಡುತ್ತಿಲ್ಲ. ಭಾರತ ಅಖಂಡ ಸ್ವರೂಪವನ್ನು ಕಾಣುತ್ತಾ ವಿಶ್ವಗುರುವಾಗುವ ದಿನಗಳನ್ನು ನೋಡಬೇಕಾದರೆ ನಮ್ಮಲ್ಲಿ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು ಎಂದರು.

ಎಲ್ಲರೂ ಹಿಂದೂ ಸೋದರರೇ ಆಗಿದ್ದು ಅದಕ್ಕೆ ಪ್ರತ್ಯೇಕ ಘೋಷಣೆಯ ಅಗತ್ಯವಿಲ್ಲ. ಪ್ರೀತಿ, ವಾತ್ಸಲ್ಯ ಹಾಗೂ ಆದರಣೀಯ ಭಾವ ಹಳ್ಳಿಹಳ್ಳಿಗಳಲ್ಲಿ ಪ್ರತಿಯೊಬ್ಬರಲ್ಲೂ ಮೂಡಿ ಬರಬೇಕು ಎಂದು ಭಾಗವತ್‌ ತಿಳಿಸಿದರು. ಒಟ್ಟುಗೂಡಿಸಬೇಕು ಧರ್ಮ ಸಂಸದ್‌ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ವಿಹಿಂಪ ಸಮಗ್ರ ಹಿಂದೂ ಸಮಾಜವನ್ನು ಒಟ್ಟುಗೂಡಿಸಿದೆ. ಹಿಂದೂ ಧರ್ಮ ಸನಾತನವಾಗಿದ್ದು ಯಾವ ಕಾಲದಲ್ಲೂ ನಿರ್ಮೂಲವಾಗಲು, ನಿಸ್ತೇಜವಾಗಲು ಸಾಧ್ಯವಿಲ್ಲ. ಎದುರಿಸಿ ಅಳಿಯದೇ ಶಕ್ತಿಪೂರ್ಣವಾಗಿ ಬೆಳೆದು ನಿಂತಿರುವ ಮತ್ಯುಂಜಯ ಧರ್ಮ ಎಂದರು.

ಒಳಗಿನ ಶತ್ರು ನಾಶವಾಗಲಿ
ದೇಶದ ಗಡಿಯಲ್ಲಿಂದು ನಮ್ಮ ಶತ್ರುಗಳಿದ್ದಾರೆ. ಅಂತರಂಗದಲ್ಲೂ ದೇಶದ ಒಳಗೂ ಅನೇಕ ಮಂದಿ ಶತ್ರುಗಳಿದ್ದಾರೆ. ನಮ್ಮ ಪ್ರಾದೇಶಿಕವಾಗಿಯೂ ಕೂಡ ಹಿಂದೂ ಧರ್ಮಕ್ಕೆ ಸವಾಲುಗಳನ್ನು, ಸಮಸ್ಯೆಗಳನ್ನು ಒಡ್ಡುವಂತಹ ಅನೇಕ ಶತ್ರುಗಳಿದ್ದಾರೆ. ಇವರೆಲ್ಲರನ್ನೂ ಎದುರಿಸಬೇಕಾದರೆ ನಮ್ಮ ಈ ಸಂಘಟನೆ, ಸಮಾವೇಶ, ಏಕತೆಯ ಜತೆಗೆ ನಮ್ಮ ಪ್ರಾರ್ಥನೆ ಮತ್ತು ತಪಸ್ಸು ಗಟ್ಟಿಯಾಗಬೇಕು ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಲಕ್ಷ್ಮೀ ಮಚ್ಚಿನ


Trending videos

Back to Top