CONNECT WITH US  

ಸಾಲಿಗ್ರಾಮ ಪ.ಪಂ.: ಶಾಂತಿಯುತ ಮತದಾನ

ದೊಡ್ಮನೆಬೆಟ್ಟು ವಾರ್ಡ್‌ನಲ್ಲಿ ಮತ ಕೇಂದ್ರಕ್ಕೆ ತಾಯಿಯೊಂದಿಗೆ ಆಗಮಿಸಿದ ಪುಟ್ಟ ಮಗುವೊಂದು ಕರ್ತವ್ಯ ನಿರತ ಪೊಲೀಸ್‌ ಸಿಬಂದಿಯೊಂದಿಗೆ.

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ 16 ವಾರ್ಡ್‌ಗಳಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಜನರು ಮತಕೇಂದ್ರಕ್ಕೆ ಆಗಮಿಸಿದರು. ಆದರೆ 9ರಿಂದ 1ಗಂಟೆಯ ತನಕ ಅಷ್ಟೇನು ಜನಸಂದಣಿ ಇರಲಿಲ್ಲ ಹಾಗೂ ಹಲವು ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು. ಮಧ್ಯಾಹ್ನ 3 ಗಂಟೆವರೆಗೆ 62.53ರಷ್ಟು ಮತಚಲಾವಣೆಯಾಗಿತ್ತು. ಇಲ್ಲಿನ ಖಾಸಗಿ ಹಿ.ಪ್ರಾ. ಶಾಲೆ ಪಾರಂಪಳ್ಳಿ-ಪಡುಕರೆ, ಗ್ರಾಮಕರಣಿಕರ ಕಚೇರಿ ಸಾಲಿಗ್ರಾಮ, ಸ.ಹಿ.ಪ್ರಾ. ಶಾಲೆ ಚಿತ್ರಪಾಡಿ, ಗಜಾನನ ಹಿ.ಪ್ರಾ.ಶಾಲೆ ತೋಡ್ಕಟ್ಟು, ಸ.ಹಿ.ಪ್ರಾ.ಶಾಲೆ ಕೋಟ, ನ್ಯೂ ಕಾರ್ಕಡ ಶಾಲೆ, ಗ್ರಂಥಾಲಯ ಕಟ್ಟಡ ಕಾರ್ಕಡ ಕಡಿದ ಹೆದ್ದಾರಿ, ಜಿ.ಸ.ಹಿ.ಪ್ರಾ.ಶಾಲೆ ಕಾರ್ಕಡ, ಪಿ.ಜಿ.ಹಿ. ಪ್ರಾ. ಶಾಲೆ ಪಾತಳಬೆಟ್ಟು ಗುಂಡ್ಮಿ, ಸ.ಪ್ರೌಢಶಾಲೆ ಗುಂಡ್ಮಿಯ ಮತಕೇಂದ್ರಗಳಲ್ಲಿ 16 ವಾರ್ಡ್‌ಗಳ ಮತದಾನ ನಡೆಯಿತು. ರಿಟರ್ನಿಂಗ್‌ ಆಫೀಸರ್‌ಗಳಾಗಿ ಲಲಿತಾ ಬಾೖ, ಲೋಕೇಶ್‌ ಕಾರ್ಯನಿರ್ವಹಿಸಿದರು.


ಕಾರ್ಕಡ ಶಾಲೆಯ ಮತಗಟ್ಟೆಯಲ್ಲಿ106 ವರ್ಷದ ಲಚ್ಚಿ ದೇವಾಡಿಗ ಮತದಾನ ಮಾಡಿದರು.

ಮತದಾನಕ್ಕೆ ಹಿರಿಯರು-ವೃದ್ಧರಿಗೆ ಆಸಕ್ತಿ
80-90 ವರ್ಷದ ವೃದ್ಧರು, ಅನಾರೋಗ್ಯ ಪೀಡಿತರು ಕೂಡ ಮನೆಯವರ ಸಹಾಯದಿಂದ ಆಸಕ್ತಿಯಿಂದ ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದ ದೃಶ್ಯ ಎಲ್ಲ ಕಡೆಗಳಲ್ಲಿ ಕಂಡು ಬಂತು. ಕಾರ್ತಟ್ಟು ವಾರ್ಡ್‌ನಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ 90 ವರ್ಷದ ರುದ್ರಮ್ಮ ಶೆಡ್ತಿ ಆ್ಯಂಬುಲೆನ್ಸ್‌ನಲ್ಲಿ ಬಂದು ಮತಚಲಾಯಿಸಿ ಪುನಃ ಆಸ್ಪತ್ರೆಗೆ ದಾಖಲಾಗಿದ್ದು ವಿಶೇಷವಾಗಿತ್ತು.

ಶಾಂತ ವಾತಾವರಣ
ಹೆಚ್ಚಿನ ಮತಕೇಂದ್ರದಲ್ಲಿ ಎದುರಾಳಿಗಳು ಹಾಗೂ ಕಾರ್ಯಕರ್ತರು ಒಟ್ಟಾಗಿ ನಿಂತು ತಮಾಷೆಯಾಗಿ ಶಾಂತಿಯುತವಾಗಿ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು. ಕೆಲವು ಕಡೆ ಮತದಾರರಿಗೆ ವಾಹನ ವ್ಯವಸ್ಥೆ ಮಾಡಲಾಗಿತ್ತು.

ಪೊಲೀಸ್‌ ಬಂದೋಬಸ್ತ್
ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್‌ ಮತಗಟ್ಟೆಗಳಿಗೆ ತೆರಳಿ ಕಾನೂನು ಸುವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡರು. ಡಿವೈ.ಎಸ್‌.ಪಿ. ಕುಮಾರಸ್ವಾಮಿ ಮೇಲುಸ್ತುವಾರಿ ಹೊಣೆ ನಿರ್ವಹಿಸಿದರು. 15ಮಂದಿ ಮುಖ್ಯ ಪೇದೆಗಳು, ಒಂದು ಡಿ.ಆರ್‌. ವ್ಯಾನ್‌, 17ಪೇದೆ, ಓರ್ವ ಮುಖ್ಯ ಪೇದೆ ಕೋಟ ಠಾಣಾಧಿಕಾರಿ ನರಸಿಂಹ ಶೆಟ್ಟಿಯವರ ನೇತೃತ್ವದಲ್ಲಿ ಕರ್ತವ್ಯ ನಿರ್ವಹಿಸಿದರು.

Trending videos

Back to Top