CONNECT WITH US  

ಉಡುಪಿ ಶ್ರೀಕೃಷ್ಣಮಠ:  ಸೆ. 9ರಂದು ಕೋಟಿ ತುಳಸಿ ಅರ್ಚನೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೆ. 9ರಂದು ಲೋಕ ಕಲ್ಯಾಣಾರ್ಥ ಕೋಟಿ ತುಳಸಿ ಅರ್ಚನೆ ನಡೆಯಲಿದೆ. ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪರ್ಯಾಯ ಪರ್ಯಂತ ನಿತ್ಯವೂ ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ನಡೆಸಲು ಸಂಕಲ್ಪಿಸಿದ್ದು, ಅದರಂತೆ ಪ್ರತಿದಿನ ಲಕ್ಷ ತುಳಸಿ ಅರ್ಚನೆ ನಡೆಯುತ್ತಿದೆ. ಇದರ ಮುಂದಿನ ಭಾಗವಾಗಿ ಕೋಟಿ ತುಳಸಿ ಅರ್ಚನೆ ನಡೆಯಲಿದೆ.

ಕೋಟಿ ತುಳಸಿ ಅರ್ಚನೆ ಸಮಿತಿಯ ಅಧ್ಯಕ್ಷ ಡಾ| ವಿ. ಅಶೋಕ್‌ ಕುಮಾರ್‌ ಮುಂದಾಳತ್ವದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ 31 ವಲಯಗಳ ವಿಪ್ರ ಬಾಂಧವರು, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಸೇರಿದಂತೆ ಎಲ್ಲ ಬ್ರಾಹ್ಮಣ ವರ್ಗದವರು ಸಾಮೂಹಿಕವಾಗಿ ಪಾಲ್ಗೊಳ್ಳಲಿದ್ದಾರೆ.

ಸುಮಾರು 5 ಸಾವಿರ ಮಂದಿ ವಿಪ್ರ ಪುರುಷರಿಂದ ವಿಷ್ಣುಸಹಸ್ರನಾಮಾರ್ಚನೆ, ಮಹಿಳೆಯರಿಂದ ಲಕ್ಷ್ಮೀ ಶೋಭಾನೆ ನಡೆಯಲಿದೆ. ಬೆಳಗ್ಗೆ 7.45ಕ್ಕೆ ಪರ್ಯಾಯ ಶ್ರೀಗಳು ವಿಷ್ಣುಸಹಸ್ರನಾಮಾವಳಿ ಅರ್ಚನೆಗೆ ಚಾಲನೆ ನೀಡಲಿದ್ದಾರೆ. ಸೆ. 7 ಮತ್ತು 8ರಂದು ತುಳಸಿ ಶುಚಿಗೊಳಿಸುವ ಕಾರ್ಯ ನಡೆಯಲಿದೆ ಎಂದು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೋಟಿ ತುಳಸಿ ಅರ್ಚನೆ ಸಮಿತಿಯ ಸದಸ್ಯ ರಂಜನ್‌ ಕಲ್ಕೂರ, ಸಂಚಾಲಕ ಕರಂಬಳ್ಳಿ ಶ್ರೀನಿವಾಸ ಬಲ್ಲಾಳ್‌, ತಾ| ಬ್ರಾಹ್ಮಣ ಮಹಾಸಭಾದ ಸಂಘಟನ ಕಾರ್ಯದರ್ಶಿ ಮನೋಹರ ರಾವ್‌, ಶ್ರೀಕೃಷ್ಣ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಶ ಭಟ್‌, ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಅಧ್ಯಕ್ಷ ಅರವಿಂದ ಆಚಾರ್‌, ತಾ| ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಶ್ರೀಕಾಂತ ಉಪಾಧ್ಯ, ನಗರಸಭೆ ಮೂಡಬೆಟ್ಟು ವಾರ್ಡ್‌ ಸದಸ್ಯ ಶ್ರೀಶ ಕೊಡವೂರು, ಖಜಾಂಚಿ ಶಾಂತಾರಾಮ ಭಟ್‌, ಸಂಘಟನ ಕಾರ್ಯದರ್ಶಿ ನಾಗರಾಜ ಉಪಾಧ್ಯ, ತಾ| ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ವೆಂಕಟರಾಜ ಭಟ್‌ ಉಪಸ್ಥಿತರಿದ್ದರು.

Trending videos

Back to Top