CONNECT WITH US  

ಬಾಳಿಗಾ ಜಂಕ್ಷನ್‌: ಅಪಘಾತದ ಅಪಖ್ಯಾತಿಗೆ ಬೇಕು ಮುಕ್ತಿ...

ರಾಷ್ಟ್ರೀಯ ಹೆದ್ದಾರಿ 66ರ  ಬಾಳಿಗಾ ಜಂಕ್ಷನ್‌ನಲ್ಲಿ ಅಪಘಾತಗಳ ಸಂಖ್ಯೆ 

ದಿನೇದಿನೆ ಹೆಚ್ಚುತ್ತಿದ್ದು,ನಾಲ್ಕು ದಿನಗಳ ಹಿಂದೆ ಘಟಿಸಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ಓರ್ವ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಇಂಥ ಅಪಘಾತಗಳು ಇಲ್ಲಿ ನಿರಂತರವಾಗಿ ನಡೆಯುತ್ತಿವೆ. ಆದರೂ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಉದಯವಾಣಿ ನಡೆಸಿದೆ. ಪತ್ರಿಕೆಯ ವರದಿಗಾರ ಸಂತೋಷ್‌ ಬೊಳ್ಳೆಟ್ಟು ಅವರ ವಿಶ್ಲೇಷಣಾತ್ಮಕ ವರದಿ ಇದು. ಚಿತ್ರಗಳನ್ನು ಒದಗಿಸಿದವರು  ಗಣೇಶ್‌ ಕಲ್ಯಾಣಪುರ.

ನಿಟ್ಟೂರು ಜಂಕ್ಷನ್‌: ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥಗೊಂಡ ಬಳಿಕವೂ ಈ ಜಂಕ್ಷನ್‌ ಅಪಾಯಕಾರಿಯಾಗಿಯೇ ಇದೆ. ಈ ಭಾಗದಲ್ಲಿ ಅಂಬಲಪಾಡಿ ಜಂಕ್ಷನ್‌ನ ಅನಂತರ ಹೆಚ್ಚು ಅಪಾಯಕಾರಿ ಎಂದರೆ ಇದೇ. 

ಪೂರ್ವದಲ್ಲಿ ನಿಟ್ಟೂರು ಮತ್ತು ಪಶ್ಚಿಮದಲ್ಲಿ ಕೊಡಂಕೂರಿನ ರಸ್ತೆಗಳಿಂದ ರಾಷ್ಟ್ರೀಯ ಹೆದ್ದಾರಿಗೆ ವಾಹನಗಳು ಪ್ರವೇಶವಾಗುವ ಮತ್ತು ನಿರ್ಗಮಿಸುವ ಸ್ಥಳ ಇದು. 

ಮಂಗಳವಾರದ ಘಟನೆ
ಮಂಗಳವಾರ ಸಂಜೆ ಅಂಬಾಗಿಲು ಕಡೆಯಿಂದ ಹೆದ್ದಾರಿಯಲ್ಲಿ ಬಂದ ಬೈಕ್‌ ಹೆದ್ದಾರಿಯಿಂದ ಬಲಕ್ಕೆ ಕೊಡಂಕೂರಿನತ್ತ ತಿರುಗು ತ್ತಿದ್ದಾಗ ಕರಾವಳಿ ಬೈಪಾಸ್‌ ಕಡೆಯಿಂದ ಹೆದ್ದಾರಿಯಲ್ಲಿ ಬಂದ ಸುಮೋ ವಾಹನ ಢಿಕ್ಕಿ ಹೊಡೆ ಯಿತು. ಸುಮೋ ಭಾರೀ ವೇಗದಲ್ಲಿತ್ತು. ಇದೇ ರೀತಿಯ ಅಪಘಾತಗಳು ಇಲ್ಲಿ ನಿರಂತರ. 

ಇದಕ್ಕೆ ಮುಖ್ಯ ಕಾರಣ ಕರಾವಳಿ ಬೈಪಾಸ್‌ ಕಡೆಯಿಂದ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು. ಅತ್ತಲಿಂದ ನಿಟ್ಟೂರು ಕಡೆಗೆ ಬರುವಾಗ ಕರಾವಳಿ ಬೈಪಾಸ್‌ನಿಂದ ಸ್ವಲ್ಪ ಮುಂದಕ್ಕೆ ಹೆದ್ದಾರಿ ಏರು(ಅಪ್‌) ಇದೆ. ಇದರಿಂದಾಗಿ ಅಲ್ಲಿ ವೇಗ ಪಡೆದುಕೊಳ್ಳುವ ವಾಹನಗಳು ಜಂಕ್ಷನ್‌ ನತ್ತ ಮುನ್ನುಗ್ಗುತ್ತವೆ. ಆಗ ಜಂಕ್ಷನ್‌ನಲ್ಲಿ ಯಾವುದಾದರೂ ವಾಹನ ಸ್ವಲ್ಪವೇ ಅಜಾಗರೂಕತೆಯಿಂದ ಬಂದರೂ  ಈ ಜಂಕ್ಷನ್‌ನಲ್ಲಿ ವಾಹನದಟ್ಟಣೆ ಹೆಚ್ಚಿದೆ. ನಿತ್ಯವೂ ಹಲವು ಅಪಘಾತಗಳು ಘಟಿಸುತ್ತಿವೆ. ಪ್ರತಿ ಅಪಘಾತದಲ್ಲೂ ವ್ಯಕ್ತಿಗಳು ಸಾಯದಿರಬಹುದು, ಆದರೆ ನೂರಾರು ಮಂದಿಗೆ ಗಾಯಗಳಾಗುತ್ತಿವೆ. ದಿನೇದಿನೆ ಜನರ ಆತಂಕ ಹೆಚ್ಚುತ್ತಿದೆ.

ಸುತ್ತಲಿನ ಶಾಲೆಯ ಮಕ್ಕಳೂ ಮನೆಗೆ ಬರುವವರೆಗೂ ಪೋಷಕರಲ್ಲಿ ಅನಗತ್ಯ ಆತಂಕ. ಇಷ್ಟೆಲ್ಲಾ ಸಮಸ್ಯೆ ಇರುವಾಗ ಸ್ಥಳೀಯಾಡಳಿತವಾದ ನಗರಸಭೆ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಒಂದುವೇಳೆ ಅದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕಾದರೆ, ಅದರ ಅಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಬೇಕು. ಕೇಳದಿದ್ದರೆ ಸಂಸದರನ್ನೋ, ಶಾಸಕರ ಬೆಂಬಲ ಪಡೆದು ಬಿಸಿ ಮುಟ್ಟಿಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಸ್ಥಳೀಯರು ಇಲ್ಲೇನು ಸಾವಿರಾರು ಸೌಲಭ್ಯ ಕೇಳುತ್ತಿಲ್ಲ. ಒಂದು ಹೈಮಾಸ್ಟ್‌ ದೀಪ, ಒಂದಿಷ್ಟು ನಿಯಮಗಳ ಪಾಲನೆ, ಒಂದೆರಡು ಸಂಚಾರ ಪೊಲೀಸ್‌ ಸಿಬಂದಿಯ ನಿಯೋಜನೆ. ಇದನ್ನು ಹೊರತುಪಡಿಸಿ ಇನ್ನೇನು ಕೇಳುತ್ತಿದ್ದಾರೆ. ಇನ್ನಾದರೂ ನಗರಸಭೆ, ಶಾಸಕರು ಗಮನಹರಿಸಿ ಹೆಚ್ಚು ಪ್ರಾಣಹಾನಿಯಾಗುವುದನ್ನು ತಪ್ಪಿಸಬೇಕು. ಇದು ಪ್ರಾಥಮಿಕ ಕರ್ತವ್ಯವೂ ಸಹ. ಆದಷ್ಟು ಬೇಗ ಜನರ ಈ ಬೇಡಿಕೆಗಳು ಈಡೇರಲಿ.

ಇವಿಷ್ಟು  ಸಮಸ್ಯೆಗಳು ; ಪರಿಹಾರ ಬೇಕು
- ಅಂಬಾಗಿಲು ಕಡೆಯಿಂದ ಕರಾವಳಿ ಬೈಪಾಸ್‌ ಕಡೆಗೆ ಬರುವ ಬಸ್‌ಗಳನ್ನು ರಿಕ್ಷಾ ನಿಲ್ದಾಣ ಬಳಿ ಇರುವ "ಬಸ್‌ ಬೇ'ಗಿಂತ ಹಿಂದೆ ಹೆದ್ದಾರಿಯಲ್ಲೇ ನಿಲ್ಲಿಸಲಾಗುತ್ತದೆ.  ಇದಕ್ಕೆ ಕಡಿವಾಣ ಹಾಕಬೇಕು. 
- ಕೆಎಸ್‌ಆರ್‌ಟಿಸಿ ಡಿಪೋಗೆ ಬರುವ ಬಹುತೇಕ ಎಲ್ಲಾ ಬಸ್‌ಗಳು ಕೂಡ ಇದೇ ಜಂಕ್ಷನ್‌ನಲ್ಲಿ ತಿರುವು ಪಡೆದು ಕರಾವಳಿ ಜಂಕ್ಷನ್‌ ಕಡೆ ತೆರಳುತ್ತವೆ. ದಿನಕ್ಕೆ ನೂರಕ್ಕೂ ಅಧಿಕ ಬಸ್‌ಗಳು ಇಲ್ಲಿ ತಿರುವು ಪಡೆದುಕೊಳ್ಳುತ್ತವೆ. ಇಲ್ಲಿ ವೇಗಮಿತಿ ಫ‌ಲಕ ಬೇಕು.
- ಬಾಳಿಗಾ ಫಿಶ್‌ನೆಟ್‌ ಸೇರಿದಂತೆ ಹಲವು ಸಂಸ್ಥೆಗಳ ನೂರಾರು ಕಾರ್ಮಿಕರು, ಹನುಮಂತ ನಗರ ಶಾಲೆಯ ಮಕ್ಕಳು ಕೂಡ ಈ ಜಂಕ್ಷನ್‌ನ ಬಳಿಯೇ ಹೋಗುತ್ತಾರೆ. ಹಾಗಾಗಿ ವಾಹನ ಸವಾರರಿಗೆ ವೇಗ ಮಿತಿ, ಸಿಗ್ನಲ್‌, ಟ್ರಾಫಿಕ್‌ ಪೊಲೀಸ್‌ ವ್ಯವಸ್ಥೆ ಬೇಕು.
- ಜಂಕ್ಷನ್‌ಗಿಂತ ಸ್ವಲ್ಪ ಹಿಂದೆ ಮತ್ತು ಮುಂದೆ ಎರಡೂ ಬದಿಗಳಲ್ಲಿ ಲಾರಿ ಸೇರಿದಂತೆ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಇಲ್ಲಿ ವಾಹನಗಳು ನಿಲ್ಲಿಸದಂತೆ ಆದೇಶಿಸುವುದು ಒಳಿತು.
- ಇಲ್ಲಿ ಸರ್ವೀಸ್‌ ರಸ್ತೆ ಇಲ್ಲ. ಯು ಟರ್ನ್ ಜಾಗದಲ್ಲಿ  ರಸ್ತೆ   ಕಿರಿದಾಗಿದೆ. 
- ರಾತ್ರಿ ಇಲ್ಲಿ ಕತ್ತಲು. ಹಾಗಾಗಿ ರಾತ್ರಿ ಹೊತ್ತು ಅಪಘಾತಗಳು ಹೆಚ್ಚಾಗಲು ಕಾರಣ. ಇಲ್ಲಿ ಹೈಮಾಸ್ಟ್‌ ದೀಪದ ಅಗತ್ಯವಿದೆ.
- ಉತ್ತರದಲ್ಲಿ ಅಂಬಾಗಿಲು, ದಕ್ಷಿಣದಲ್ಲಿ ಕರಾವಳಿ ಜಂಕ್ಷನ್‌ನಲ್ಲಿ ಮಾತ್ರ ತಿರುವು- ಜಂಕ್ಷನ್‌ ಇದೆ. ಹಾಗಾಗಿ ಈ ಜಂಕ್ಷನ್‌ಗಳ ನಡುವಿನ ಹೆದ್ದಾರಿಯಲ್ಲಿ ಕೆಲವರು ವಿರುದ್ಧ ದಿಕ್ಕಿನಿಂದ ವಾಹನ ಚಲಾಯಿಸಿಕೊಂಡು ಬರುತ್ತಾರೆ. ಅದನ್ನು ತಡೆಯಬೇಕು.

ರಿಫ್ಲೆಕ್ಟರ್‌, ಸಿಬಂದಿಗೆ ಕ್ರಮ
ಬ್ಯಾರಿಕೇಡ್‌ಗೆ ರಿಫ್ಲೆಕ್ಟರ್‌ನ್ನು ಬುಧವಾರದಿಂದ ಅಂಟಿಸಲಿದ್ದೇವೆ. ಇಲ್ಲಿ ಖಾಯಂ ಪೊಲೀಸ್‌ ಸಿಬಂದಿಯನ್ನು ನಿಯೋಜಿಸುವ ಬಗ್ಗೆಯೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
- ಉಪನಿರೀಕ್ಷಕರು,
ಸಂಚಾರಿ ಪೊಲೀಸ್‌ ಠಾಣೆ, ಉಡುಪಿ

ಬ್ಯಾರಿಕೇಡ್‌  ಕಾಣುವುದಿಲ್ಲ
ಬ್ಯಾರಿಕೇಡ್‌ಗಳು  ಹಿಂದೆಯೂ ಇತ್ತು. ಎಷ್ಟೋ ಮಂದಿ ಬ್ಯಾರಿಕೇಡ್‌ಗೆ ಬಂದು ಢಿಕ್ಕಿ ಹೊಡೆಯುತ್ತಾರೆ. ಅವುಗಳಲ್ಲಿ  ರಿಫ್ಲೆಕ್ಟರ್‌ಗಳಿಲ್ಲ. ಜಂಕ್ಷನ್‌ನಲ್ಲಿ ಲೈಟ್‌, ಸರ್ವೀಸ್‌ ರಸ್ತೆ ಇಲ್ಲ. ಬಸ್‌ಗಳನ್ನೂ ಹೆದ್ದಾರಿಯಲ್ಲೇ ನಿಲ್ಲಿಸುತ್ತಾರೆ. ಬ್ಯಾರಿಕೇಡ್‌ಗಿಂತ ಹಿಂದೆ ಝೀಬ್ರಾ ಮಾರ್ಕ್‌  ಹಾಕಿ ಚಾಲಕರ ಗಮನ ಸೆಳೆಯುವುದು ಅಗತ್ಯ.
- ಮಹೇಶ್‌, ಪ್ರಶಾಂತ್‌
ಸ್ಥಳೀಯ ಆಟೋ ಚಾಲಕರು

ಹೈಮಾಸ್ಟ್‌ ದೀಪಕ್ಕಾಗಿ  750 ಮಂದಿ ಸಹಿ!
ಇಲ್ಲಿ ಒಂದು ಹೈಮಾಸ್ಟ್‌ ದೀಪ ಅಳವಡಿಸಬೇಕು ಎಂದು ಇಲ್ಲಿನ 750 ಮಂದಿಯಿಂದ ಸಹಿ 
ಪಡೆದು ಅದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಗರಸಭೆ ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ವರ್ಷಗಳೇ ಕಳೆದವು. ಇಂದಿಗೂ ಲೈಟ್‌ ಬಂದಿಲ್ಲ.
- ಸುಜಯ ಪೂಜಾರಿ, ವಿಜೇಶ್‌ ಸ್ಥಳೀಯರು

ಪೊಲೀಸ್‌ ಸಿಬಂದಿ  ಖಾಯಂ ಇರಲಿ
ಇಲ್ಲಿ ಅಪಘಾತ ನಡೆದ ಅನಂತರ   ಪೊಲೀಸರು ಬಂದು ಹೋಗುತ್ತಾರೆ. ಅನಂತರ ಇರುವುದಿಲ್ಲ. ಪೊಲೀಸರಿದ್ದರೆ ಸ್ವಲ್ಪವಾದರೂ ಅಪಘಾತ ಕಡಿಮೆಯಾಗಬಹುದು. ಅಂಬಾಗಿಲು ಕಡೆಯಿಂದ ಬಂದು ಕೊಡಂಕೂರಿಗೆ ತಿರುವು ಪಡೆದುಕೊಳ್ಳುವಾಗಲೇ ಹೆಚ್ಚು ಅಪಘಾತಗಳು ನಡೆಯುತ್ತಿವೆ.
- ಸುರೇಂದ್ರ, ವೀಣಾ
ಸ್ಥಳೀಯ ಅಂಗಡಿಯವರು

ಇಂದು ಹೆಚ್ಚು ಓದಿದ್ದು

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top