CONNECT WITH US  

ಮಾಜಿ ಸಚಿವ ಸೊರಕೆ ವಿನಂತಿ: ಬಂದ್‌ಗೆ ಸಹಕರಿಸಿದ ವರ್ತಕರು!

ಕಾಪು ತಾಲೂಕಿನಲ್ಲಿ ಭಾರತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಬಂದ್‌ಗೆ ಬೆಂಬಲಿಸುವಂತೆ ವರ್ತಕರಲ್ಲಿ ಮನವಿ ಮಾಡುತ್ತಿರುವ ಮಾಜಿ ಸಚಿವ ವಿನಯಕುಮಾರ್‌ ಸೊರಕೆ.

ಕಾಪು: ಕಾಂಗ್ರೆಸ್‌ ಪಕ್ಷ ಸಹಿತವಾಗಿ ವಿಪಕ್ಷಗಳು ಜಂಟಿಯಾಗಿ ಕರೆಕೊಟ್ಟಿರುವ ಅಖೀಲ ಭಾರತ ಬಂದ್‌ಗೆ ಕಾಪು ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಪು ಪುರಸಭಾ ವ್ಯಾಪ್ತಿಯಲ್ಲಿ ಬಂದ್‌ಗೆ ಬಹುತೇಕ ಬೆಂಬಲ ವ್ಯಕ್ತವಾಗಿದ್ದು, ಕೆಲವೊಂದು ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಸೋಮವಾರ ಬೆಳಗ್ಗೆ ಕಾಪುವಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಘನ ವಾಹನಗಳನ್ನು ಬಲವಂತವಾಗಿ ತಡೆ ಹಿಡಿದು ಹೆದ್ದಾರಿ ಬಂದ್‌ ಮಾಡಲು ಪ್ರಯತ್ನಿಸಿದರು. 15 ನಿಮಿಷಗಳ ಕಾಲ ಹೆದ್ದಾರಿಯಲ್ಲಿ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿದ ಕಾಂಗ್ರೆಸ್‌ - ಜೆಡಿಎಸ್‌ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ಬಂದ್‌ಗೆ ಸಹಕರಿಸುವಂತೆ ವಿನಂತಿಸಿದ ಮಾಜಿ ಸಚಿವ ಸೊರಕೆ 
ಮಾಜಿ ಸಚಿವ ವಿನಯ ಕುಮಾರ್‌ ಸೊರಕೆಯವರು ಕಾರ್ಯಕರ್ತ ರೊಂದಿಗೆ ಕೂಡಿಕೊಂಡು ಕಾಪು ಪೇಟೆಯಲ್ಲಿ ಪಾದಯಾತ್ರೆ ನಡೆಸಿ ಅಂಗಡಿಗಳನ್ನು ಬಂದ್‌ ಮಾಡುವಂತೆ ವಿನಂತಿಸಿದರು. ಮಾಜಿ ಸಚಿವ ಸೊರಕೆ ಅವರ ವಿನಂತಿ ಮೇರೆಗೆ ಕೆಲವು ಅಂಗಡಿಗಳು ಬಾಗಿಲು ಮುಚ್ಚಿದರೆ, ಕೆಲವರು ಅರ್ಧ ಅಂಗಡಿ ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು.

ಕಾಪು ಪೇಟೆಯಲ್ಲಿ ಕೆಲವೊಂದು ಗೂಡ್ಸ್‌ ಟೆಂಪೋ, ರಿಕ್ಷಾ, ಕಾರು ಮೊದಲಾದ ವಾಹನ ಮಾಲಕರು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿದರೆ ಕೆಲವು ಸ್ಪಂದಿಸಲಿಲ್ಲ. ಬಸ್‌ಗಳು ರಸ್ತೆಗಿಳಿಯದೇ ಇದ್ದುದರಿಂದ ಜನರು ರಿಕ್ಷಾವನ್ನು ಆಶ್ರಯಿಸುವುದು ಅನಿವಾರ್ಯವಾಯಿತಾದರೂ ಬಸ್‌ ಇಲ್ಲದ ಕಾರಣ ಜನಸಂಚಾರ ವಿರಳವಿದ್ದು ರಿಕ್ಷಾಗಳಿಗೂ ಪ್ರಯಾಣಿಕರ ಕೊರತೆ ಹೆಚ್ಚಾಗಿ ಕಾಡಿದೆ.

ಕೆಪಿಸಿಸಿ ಕಾರ್ಯದರ್ಶಿ ಡಾ| ದೇವಿಪ್ರಸಾದ್‌ ಶೆಟ್ಟಿ, ಜೆಡಿಎಸ್‌ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ, ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಪುರಸಭಾ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಎಚ್‌. ಉಸ್ಮಾನ್‌, ಮುಖಂಡರಾದ ಕಾಪು ದಿವಾಕರ ಶೆಟ್ಟಿ, ಶಿವಾಜಿ ಸುವರ್ಣ ಬೆಳ್ಳೆ, ವಾಸುದೇವ ರಾವ್‌, ವೈ. ಸುಕುಮಾರ್‌, ಪ್ರಶಾಂತ್‌ ಜತ್ತನ್ನ, ಮೆಲ್ವಿನ್‌ ಡಿ'ಸೋಜಾ ಶಿರ್ವ, ಜಿತೇಂದ್ರ ಫುರ್ಟಾಡೋ, ಅಬ್ದುಲ್‌ ಅಜೀಜ್‌ ಹೆಜಮಾಡಿ, ದೀಪಕ್‌ ಕುಮಾರ್‌ ಎರ್ಮಾಳ್‌, ಅಬ್ದುಲ್‌ ಹಮೀದ್‌ ಯೂಸುಫ್, ಜಯರಾಮ ಆಚಾರ್ಯ, ಸುಧಾಕರ್‌ ಶೆಟ್ಟಿ ಹೆಜಮಾಡಿ, ವಿವಿಧ ಜನಪ್ರತಿನಿಧಿಗಳು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Trending videos

Back to Top