CONNECT WITH US  

ಪಡುಬಿದ್ರಿಯ ಶ್ರೀಮಹಾಲಿಂಗೇಶ್ವರ ಶ್ರೀಮಹಾಗಣಪತಿ ಕ್ಷೇತ್ರ

ಆದಿಪೂಜಿತ ಇಷ್ಟಸಿದ್ಧಿ ಮಹಾಗಣಪತಿ

ನಿರ್ವಿಘ್ನತಾ ಸಿದ್ಧಿಯನ್ನು ಕರುಣಿಸುವ ಪಡುಬಿದ್ರಿಯ ಶ್ರೀಮಹಾಲಿಂಗೇಶ್ವರ ಶ್ರೀಮಹಾಗಣಪತಿ ಕ್ಷೇತ್ರ.

ಸೃಷ್ಟಿಗೆ ಪೂರಕವಾದ ಎಲ್ಲವನ್ನು, ದೇವತೆಗಳೆಂದೂ, ಮಾರಕವಾದವುಗಳನ್ನು ಅಸುರರು ಎಂದೂ ತಿಳಿಯಬಹುದು. ಅಸುರರನ್ನೇ ವಿಘ್ನಗಳು ಎಂದು ತಿಳಿದರೆ ಆ ವಿಘ್ನಗಳ ಒಡೆಯ ವಿಘ್ನೇಶ್ವರ. ಶಕ್ತಿ, ಶಬ್ದ, ಬೆಳಕು, ಘನ, ದ್ರವ, ಅನಿಲ ಈ ಆರು, ವಿವಿಧ ದೇವತೆಗಳೇ ಎಂದು ತಿಳಿದುಕೊಂಡರೆ, ಆ ದೇವತೆಗಳ ಒಡೆಯ ನಮ್ಮ ಗಣಪ. ಎಲ್ಲರಿಗೂ ಗಣಪತಿ ಆರಾಧ್ಯ ದೇವರು. ದುಃಖದಲ್ಲಿರುವವರಿಗೆ, ಆರ್ತರಿಗೆ, ಆಗಂತುಕರಿಗೆ, ಶಾಸ್ತ್ರಜ್ಞರಿಗೆ, ಸಂತರು, ಯತಿಗಳಿಗೆ. ಬೇಡಿದ್ದನ್ನು ನೀಡುತ್ತಾನೆ. ಗಣಪತಿ ಅನುಗ್ರಹ ಅತಿಸುಲಭ. ಅವನು ಸುಲಭರಲ್ಲಿ ಸುಲಭನು. ಕರೆದಲ್ಲಿಗೆ ಬರುವನು. ರೇಖೆಗಳನ್ನು ಬರೆದು ಆಹ್ವಾನಿಸಿದರೂ ಗಣಪತಿ ಪ್ರತ್ಯಕ್ಷ! ಶ್ರೀಮಹಾಗಣಪತಿ ಎಲ್ಲರಿಗೂ ಎಲ್ಲವನ್ನೂ ಕೇಳದಯೇ ಕೊಡುವುದಿಲ್ಲ. ನನಗೆ ಏನು ಬೇಕು ನಾನೇ ಕೇಳಬೇಕು.

ಗಣಪತಿ ಕರುಣಾಮಯಿ. ಉಪಾಸನೆ ಮಾಡಿ ಯಾರು ಪ್ರಾರ್ಥಿಸುವರೋ ಅವರಿಗೆ ಅದನ್ನು ನಿಶ್ಚಯವಾಗಿ ನೀಡುತ್ತಾನೆ. ಅಂತಹ ಗಣಪತಿಯ ಸಾನಿಧ್ಯವೊಂದು ಸಮೀಪದ ಪಡುಬಿದ್ರಿಯಲ್ಲಿದೆ. ಅಲ್ಲಿನ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಅಪಾರ ಭಕ್ತರನ್ನು ಸಲಹಿ, ರಕ್ಷಿಸುವ ಕಾರಣೀಕದ ಒಂದು ಕ್ಷೇತ್ರ. ಚರಿತ್ರೆಕಾರರ ಅಭಿಪ್ರಾಯದಂತೆ ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನ 10ನೇ ಶತಮಾನಕ್ಕೆ ಸೇರಿದೆ. ಆದರೆ ಮಹಾಗಣಪತಿ ವಿಗ್ರಹ 11ನೇ ಶತಮಾನದ್ದು ಎಂದು ಉಲ್ಲೇಖ.ಶ್ರೀಮಹಾಲಿಂಗೇಶ್ವರನ ಗರ್ಭಗುಡಿಯ ದಕ್ಷಿಣ ಭಾಗದಲ್ಲಿ ಪ್ರತ್ಯೇಕ ಗುಡಿಯಲ್ಲಿ ಮಹಾಗಣಪತಿ ನೆಲೆನಿಂತಿದ್ದಾನೆ. ವಿಗ್ರಹ ರುದ್ರಾಕ್ಷಿಶಿಲೆಯ ರಚನೆ. ಚತುರ್ಭಾಹುಗಳೊಂದಿಗೆ, ಪಟ್ಟಿಯಂತೆ ಕಾಣುವ ಪ್ರಭಾವಳಿಯನ್ನು ಹೊಂದಿದ್ದು, ಜಟಾಮುಕುಟ ಮತ್ತು ಉದರಬಂಧದೊಂದಿಗೆ ವಿರಾಜಮಾನನಾಗಿದ್ದಾನೆ.

ಸುಮಾರು 9-12 ನೇ ಶತಮಾನದ ಗಣೇಶನ ರಚನೆಗಳು ಇಂತಹ ಪ್ರತಿಮಾಲಕ್ಷಣಗಳನ್ನು ಹೊಂದಿವೆ. ಗಟ್ಟಿಶಿಲೆಯಿಂದ ರಚಿಸಲ್ಪಟ್ಟ ಇಂತಹ ವಿಗ್ರಹಗಳನ್ನು ಪಡುಬಿದ್ರಿ ಆಸುಪಾಸಿನ, ಉಚ್ಚಿಲ, ಇನ್ನ, ಎಲ್ಲೂರು ಅಲ್ಲದೆ ದ.ಕ ಮತ್ತು ಉಡುಪಿ ಜಿಲ್ಲೆಯ ಇತರ 15 ದೇವಾಲಯಗಳಲ್ಲಿ ಕಾಣಬಹುದಾಗಿದೆ. (ಕದ್ರಿ, ಕಾಂತಾವರ, ಕೋಟ, ಕೋಟೇಶ್ವರ, ಬಸ್ರೂರು, ನೆಲ್ಲಿತೀರ್ಥ, ಎಡಪದವು, ಕಡಬ, ಪುತ್ತೂರು, ಉಪ್ಪೂರು, ಗಂಗನಾಡು, ಮೂಡಬಿದ್ರಿ, ಹಂದಾಡಿ, ಸಾಲಿಗ್ರಾಮ, ಬೋಳ) ಕಳೆದ ಒಂದು ಶತಮಾನದಿಂದ ಪಡುಬಿದ್ರಿಯ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಅಲ್ಲಿ ಗಣಪತಿ ಪ್ರೀತ್ಯರ್ಥವಾಗಿ ನಡೆಯುತ್ತಿರುವ ಕಟ್ಟದಪ್ಪ ಎಂಬ ವಿಶಿಷ್ಟ ಸೇವೆಗೆ ಪ್ರಸಿದ್ಧವಾಗಿದೆ. ಪಡುಬಿದ್ರಿ ಸೀಮೆ ಅಥವಾ ನಡ್ಪಾಲು ಎಂದು ಪ್ರಾಚೀನ ಹೆಸರು. ಈಶ್ವರ, ಗಣಪತಿ, ದುರ್ಗೆ, ವಿಷ್ಣು, ಸುಬ್ರಹ್ಮಣ್ಯ ಈ ಭಾಗದಲ್ಲಿ ಆರಾಧಿಸಲ್ಪಡುವ ದೇವರು.

ಪೊಟ್ಟಪ್ಪ - ಕಟ್ಟದಪ್ಪ ಸೇವೆ ಗಣಪತಿಗೆ ಅತಿಪ್ರೀತಿ !
ಒಮ್ಮೆ ಬ್ರಿಟಿಷ್‌ ಅಧಿಕಾರಿಯೊಬ್ಬ ಕುದುರೆಯಲ್ಲಿ ಸಾಗುತ್ತಿರುವಾಗ ಇಲ್ಲಿನ ಮಹಾಗಣಪತಿಯ ದರ್ಶನವನ್ನು ನಿರಾಕರಿಸಿದನಂತೆ. ಅವನ ಕುದುರೆ ಒಂದು ಹೆಜ್ಜೆಯೂ ಮುಂದೆ ಚಲಿಸಲಿಲ್ಲ ಎಂದು ಪ್ರತೀತಿ. ಮಹಾಗಣಪತಿಯಲ್ಲಿ ಪ್ರಾರ್ಥಿಸಿಕೊಂಡ ಬಳಿಕ ಅಧಿಕಾರಿಯ ಪ್ರಯಾಣ ಮುಂದುವರಿಯಿತಂತೆ. ಅದರ ನೆನಪಿಗಾಗಿ ಪೊಟ್ಟಪ್ಪ (ಅಕ್ಕಿ, ತೆಂಗಿನಕಾಯಿಯನ್ನು ಅರೆದು ಎಣ್ಣೆಯಲ್ಲಿ ಹುರಿದು ಮಾಡುವ ಒಂದು ಬಗೆಯ ತಿಂಡಿ) ಸೇವೆ ಇಂದಿಗೂ ನಡೆಯುತ್ತಿದೆ.

ಸುಮಾರಾಗಿ ಚಳಿಗಾಲದ ಸಮಯದಲ್ಲಿ ನೀರು ಕಡಿಮೆಯಾದಾಗ ಹೊಳೆನೀರನ್ನು ಅಡ್ಡಕಟ್ಟಿ (ಕಟ್ಟಕಟ್ಟುವುದು) ಧಾನ್ಯಬೆಳೆಗೆ ನೀರುಣಿಸುವ ಪದ್ಧತಿ ಹಿಂದೆ ರೂಡಿಯಲ್ಲಿತ್ತು. ಕಟ್ಟಿದ ಕಟ್ಟ ಸುಭದ್ರವಾಗಿರುವಂತೆ ಗಣಪತಿಗೆ ಅಪ್ಪಸೇವೆಯನ್ನು ಕೊಡುವ ಪದ್ಧತಿಯೂ, ಕಟ್ಟದಪ್ಪ ಎಂಬ ಹೆಸರಿನಿಂದ ಪ್ರಸಿದ್ಧವಾಯ್ತು. ಮುಡಿ ಅಕ್ಕಿಯ ಪ್ರಮಾಣದಲ್ಲಿ ಅಪ್ಪಸೇವೆಯು ಇಲ್ಲಿ ನಡೆಯುವುದು ವಿಶೇಷ.


ಪಡುಬಿದ್ರಿಯ ಕುಮಾರ ದೇವರಾಜ ರಾವ್‌ ತಯಾರಿಸಿರುವ ಆವೆ ಮಣ್ಣು ಗಣಪತಿ ವಿಗ್ರಹಗಳು.

ಕ್ಷಿಪ್ರಪ್ರಸಾದ ಗಣಪತಿ
ಪಡುಬಿದ್ರಿಯಲ್ಲಿ ನೆಲೆನಿಂತಿರುವ ಶ್ರೀ ಮಹಾಗಣಪತಿ ಕಾರಣೀಕದ ಸನ್ನಿಧಿಯಾಗಿದ್ದು, ಗಣಪತಿಯ ಧ್ಯಾನದಲ್ಲಿ ವಿದ್ಯಾರಂಭೇ, ವಿವಾಹೇಚ, ಪ್ರವೇಶೇ, ನಿರ್ಗಮೆ, ತಥಾ ಎಂದು ನಿರ್ವಿಘ್ನತಾ ಸಿದ್ಧಿಯನ್ನು ಬಯಸಿದರೆ ಕರುಣಿಸುತ್ತಾನೆ. ಊರಲ್ಲಿ ಏನೇ ಸಮಸ್ಯೆ, ಕಷ್ಟಗಳು ತಲೆದೋರಿದಾಗ ಗಣಪತಿಯ ಆರಾಧನೆ, ಪರಿಹಾರವನ್ನು ಸೂಚಿಸುತ್ತದೆ ಎಂಬ ಬಲವಾದ ನಂಬಿಕೆ ಭಕ್ತರದು. ಗಣಪತಿಯನ್ನು ಪ್ರಾರ್ಥಿಸಿದರೆ, ಅತಿವೃಷ್ಟಿಯಾದಾಗ ಮಳೆ ನಿಂತ ಉದಾಹರಣೆಗಳನ್ನು, ಮಳೆ ಅಭಾವವಾದಾಗ ಮಳೆಸುರಿದ ನೆನಪುಗಳನ್ನು ಹಿರಿಯರು ವಿಜ್ಞಾಪಿಸಿಕೊಳ್ಳುತ್ತಾರೆ. ವಿಘ್ನನಿವಾರಕ ಗಣಪತಿ ಪ್ರಾರ್ಥನೆ ಇಲ್ಲದೆ ಊರಿನ ಯಾವ ಧಾರ್ಮಿಕ, ಸಾಮಾಜಿಕ, ಮಂಗಳ ಕಾರ್ಯಗಳೂ ಆರಂಭಗೊಳ್ಳುವುದಿಲ್ಲ.

ಶ್ರೀಮಧ್ವಾಚಾರ್ಯರು ತಂತ್ರಸಾರದಲ್ಲಿ ಗಣಪತಿಯನ್ನು ಕ್ಷಿಪ್ರ ಪ್ರಸಾದಾಯ ನಮಃ ಎಂಬ ಅಷ್ಟಾಕ್ಷರ ಮಂತ್ರದಿಂದ ಸ್ತುತಿಸಿದ್ದಾರೆ. ಪಡುಬಿದ್ರಿಯ ಶ್ರೀಮಹಾಗಣಪತಿಯೂ ಕ್ಷಿಪ್ರ ಪ್ರಸಾದವನ್ನು ನೀಡುತ್ತಾನೆ ಎಂದು ಹಿರಿಯರ ಅನುಭವದ ಮಾತು. ಇಲ್ಲಿ ವರ್ಷದುದ್ದಕ್ಕೂ ನಡೆಯುವ ಸಂಕಷ್ಟಹರ ಚತುರ್ಥಿ, ಗಣಹೋಮಗಳು, 108, 1008 ಕಾಯಿ ಗಣಪತಿ ಯಾಗಗಳು, ಚತುರ್ಥಿ ಪರ್ವದಿನಗಳು ಮಹಾಗಣಪತಿಯ ಸಾನಿಧ್ಯ ವಿಶೇಷವನ್ನು ಸಾರಿ ಹೇಳುತ್ತವೆ. ಗಣಪತಿಗೆ ಪಂಚಕಜ್ಜಾಯ ಸೇವೆಯನ್ನು ಅರ್ಪಿಸಿದರೂ ಕ್ಷಿಪ್ರಪ್ರಸಾದವಾದ ಅನೇಕ ಉದಾಹರಣೆಗಳನ್ನು ದೇವಳದ ಭಕ್ತರು ಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾರೆ. ಇಲ್ಲಿನ ಪ್ರಧಾನ ದೇವರು ಉಳ್ಳಾಯ ಶ್ರೀ ಮಹಾಲಿಂಗೇಶ್ವರ ಮತ್ತು ಮಹಾಗಣಪತಿಯಲ್ಲಿ ಪ್ರಾರ್ಥನೆ ಮಾಡಿದ ಬಳಿಕವಷ್ಟೇ ಬ್ರಹ್ಮಸ್ಥಾನದ ವನದುರ್ಗೆ ಪ್ರೀತ್ಯರ್ಥವಾಗಿ ನಡೆಯುವ ದ್ವೆçವಾರ್ಷಿಕ ಡಕ್ಕೆಬಲಿಯು ಸಂಪನ್ನಗೊಳ್ಳುವುದು ಸಂಪ್ರದಾಯ.

ಲೇಖನ-ಜಲಂಚಾರು ರಘುಪತಿ ತಂತ್ರಿ - ಉಡುಪಿ
ವಿನ್ಯಾಸ - ನಾಗರಾಜ್‌
ಪುರವಣಿ ಸಂಯೋಜನೆ - ಆರಾಮ

Trending videos

Back to Top