CONNECT WITH US  

ಗಣಪತಿ ಹಬ್ಬ ಬಂದೇ ಬಿಡ್ತು ; ಎಲ್ಲೆಡೆ ಸಂಭ್ರಮ - ಸಡಗರ

ಗಣಪತಿ ಹಬ್ಬ ಬಂದೇ ಬಿಡ್ತು. ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರಿಗೂ ಸಂಭ್ರಮ-ಸಡಗರ. ಎಲ್ಲೆಡೆ ಹೊಸಬಟ್ಟೆ ಧರಿಸಿ, ತಿಂಡಿ ತಿನಸುಗಳ ತಯಾರಿ, ಗಣೇಶನ ಸ್ವಾಗತಕ್ಕೆ ಬರದ ಸಿದ್ಧತೆ ನಡೆಯುತ್ತದೆ. ವಿಘ್ನನಿವಾರಕ, ಸಿದ್ಧಿವಿನಾಯಕ, ಮೂಷಿಕ ವಾಹನ, ಲಂಬೋದರ, ವಿಘ್ನೇಶ, ಏಕದಂತ, ವಕ್ರತುಂಡ, ಗಣರಾಜ, ಗಣೇಶ, ಮೊದಕಪ್ರಿಯ ಎಂದೆಲ್ಲ ಕರೆಸಿಕೊಳ್ಳುವ ಗಣಪತಿಯ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಶುಕ್ಲದ ಚೌತಿಯಂದು (ಈ ಬಾರಿ ಸೆ. 13ರಂದು) ಆಚರಿಸಲಾಗುತ್ತದೆ.

ಗಣೇಶನ ಹಬ್ಬ ಬಂತೆಂದರೆ ಮಕ್ಕಳಿಂದ ಹಿಡಿದು ವಯೋವೃದ್ಧರಿಗೆ ಸಂಭ್ರಮ. ಹೊಸ ಬಟ್ಟೆ, ತಿಂಡಿ ತಿನಿಸುಗಳ ತಯಾರಿ ಗಣೇಶನ ಸ್ವಾಗತಕ್ಕೆ ಬರದ ಸಿದ್ಧತೆ ನಡೆಯುತ್ತದೆ. ಗಣೇಶ ಚತುರ್ಥಿಯು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ವಿವಿಧ ಧಾರ್ಮಿಕ ಆಚರಣೆ, ಸಾಂಸ್ಕೃತಿಕ, ಆಟೋಟ ಸ್ಪರ್ಧೆಗಳು, ಮನೋರಂಜನ ಕಾರ್ಯಕ್ರಮಗಳ ಆಯೋಜನೆ, ಪಾಲ್ಗೊಳ್ಳುವಿಕೆ ಜನಾಕರ್ಷಣೆಯನ್ನು ಹೆಚ್ಚಿಸಿವೆ. ಇಂದು ಸಾರ್ವಜನಿಕ ಗಣೇಶೋತ್ಸವ ಪ್ರಾಮುಖ್ಯವನ್ನು ಪಡೆದಿದ್ದು, ಮೋದಕ ಪ್ರಿಯನಿಗೆ ಬಗೆ ಬಗೆಯ ಭಕ್ಷ್ಯ ತಯಾರಿ, ನೈವೇದ್ಯ ಮಾಡಿ ಭಕ್ತರೆಲ್ಲ ಸವಿಯುವ ಸಡಗರ ಎಲ್ಲೆಡೆ ಇಮ್ಮಡಿಯಾಗಿದೆ.

ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ ಗಣಪತಿಯ ಆರಾಧನೆ ಆಚರಣೆಯಲ್ಲಿದೆ. ಆನೆಗಳು ಹೊಲಗಳಿಗೆ ನುಗ್ಗಿ ಬೆಳೆಯನ್ನು ನಾಶ ಮಾಡುವುದನ್ನು ತಡೆಯಲು ರೈತರು ಗಜಮುಖನ ಮೊರೆ ಹೋಗುತ್ತಾರೆ. ಗೊದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳ ಉಪಟಳ ತಡೆಯಲು ಮೂಷಿಕ ವಾಹನನಾದ ಗಣಪತಿಯ ಹಬ್ಬ ಆಚರಿಸುವರು ಎಂಬ ಮಾತು ಪ್ರಚಲಿತದಲ್ಲಿದೆ. ಹೊಲಗಳಲ್ಲಿ ದೊಡ್ಡ ಹೊಟ್ಟೆಯ ಬೆದರು ಬೊಂಬೆಯನ್ನು ನಿಲ್ಲಿಸುವುದು ಗಣಪತಿ ನೀನೇ ಬೆಳೆಯನ್ನು ಸಂರಕ್ಷಿಸು ಎನ್ನುವ ಉದ್ದೇಶದಿಂದ ಎನ್ನಲಾಗಿದೆ.

ಗಣಪತಿ ವಿಗ್ರಹದ ವೈಶಿಷ್ಟ್ಯ 
ಗಣಪತಿಯ ವಿಗ್ರಹ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆ ಜನರಿಗೆ ಅಗತ್ಯವಾದ ನೀತಿ ಬೋಧನೆಯನ್ನು ಒಳಗೊಂಡಿದೆ. ಗಜಮುಖ, ನಾಲ್ಕು ಕೈ, ದೊಡ್ಡ ಹೊಟ್ಟೆ, ಹೊಟ್ಟೆಗೆ ಹಾವು ಸುತ್ತಿರುವುದು, ಅಗಲವಾದ ಕಿವಿ, ಸವಾರಿಗೆ ಇಲಿ. ಅತಂಹ ವಿಲಕ್ಷಣ ಮೂರ್ತಿ ಗಣಪತಿ.

ಗೆರಸೆ ಧಾನ್ಯದೊಂದಿಗಿರುವ ಧೂಳನ್ನು ಬೇರ್ಪಡಿಸುವ ಹಾಗೆ ವಿವೇಕವನ್ನು ಉಪಯೋಗಿಸಿಕೊಂಡು ಸತ್ಯ-ಮಿಥ್ಯಗಳ ವ್ಯತ್ಯಾಸವನ್ನು ಅರಿಯಬೇಕು, ಅದಕ್ಕೆ ಕಿವಿ ಶುದ್ಧವಾಗಿರಬೇಕು ಎಂಬುದನ್ನು ಗಣಪತಿಯ ಗೆರಸೆಯಂತಿರುವ ಕಿವಿ ಸೂಚಿಸುತ್ತದೆ. ಧಾನ್ಯವನ್ನು ಸತ್ಯಕ್ಕೆ ಹಾಗೂ ಧೂಳನ್ನು ಮಿಥ್ಯಕ್ಕೆ ಹೋಲಿಸಲಾಗಿದೆ. ಗುರುಗಳ ಉಪದೇಶ ಶ್ರವಣದಿಂದ ಸತ್ಯ-ಮಿಥ್ಯಗಳ ಅರಿವ ಶಕ್ತಿ ಹೊಂದಬಹುದು ಎಂಬುದರ ಸೂಚಕವಿದು.

ಗಣಗಳಿಗೆ ಅಧಿಪತಿ (ಒಡೆಯ) ಆದ್ದರಿಂದ ಗಣಪತಿ, ಗಣಗಳಿಗೆ ಈಶ ಆದ್ದರಿಂದ ಗಣೇಶ ಎಂದೆನಿಸಿಕೊಂಡಿದ್ದಾನೆ. ಆತ ವಿಶಿಷ್ಟ ನಾಯಕ. ಅದಕ್ಕಾಗಿಯೇ ವಿನಾಯಕ ಎನ್ನುವರು ಅವನನ್ನು. ನಾಯಕನಾದವನು ಹೇಗಿರ ಬೇಕು ಎಂಬುದಕ್ಕೆ ಆತ ಒಂದು ಉದಾಹರಣೆ. ಒಂದು ಕೈಯಲ್ಲಿ ಪಾಶ, ಇನ್ನೊಂದು ಕೈಯಲ್ಲಿ ಅಂಕುಶ, ಮತ್ತೂಂದು ಕೈಯಲ್ಲಿ ಮೋದಕ, ಮಗದೊಂದು ವರದ ಹಸ್ತ. ನಾಯಕ ಗಜಬಲವನ್ನು ಹೊಂದಿರಬೇಕು. ಆದರೆ ಆಗ ಅಧಿಕಾರದ ಮದ ಏರುತ್ತದಲ್ಲವೆ? ಆದರ ನಿಯಂತ್ರಣಕ್ಕೆ ಪಾಶ (ಹಗ್ಗ) ಎನ್ನುವ ಅಂಕುಶಬೇಕು. ಅದು ಇನ್ನೊಬ್ಬರ ಕೈಯಲ್ಲಿ ಅಲ್ಲ ಬದಲಾಗಿ ನಾಯಕನ ಕೈಯಲ್ಲಿ. ನಾಯಕನು ಸ್ವನಿಯಂತ್ರಣಕೊಳ್ಳಪಡಬೇಕು. ತನ್ನ ರಕ್ಷಣೆಯಲ್ಲಿರುವ ಜನಕ್ಕೆ ಸದಾ ಸುಖ, ಸಂತೋಷ ಹಂಚಬೇಕು ಅನ್ನುವುದೇ ಆತನ ಕೈಯಲ್ಲಿರುವ ಮೋದಕದ ಆಶಯ. ತನ್ನ ಅಧೀನದಲ್ಲಿರುವವರು ಭಯದಿಂದ ಮುಕ್ತರಾಗಿರಬೇಕು ಎಂಬುದನ್ನು ಸಾರುವುದೇ ಆತನ ಅಭಯ ಹಸ್ತದ ಉದ್ದೇಶ. ಇನ್ನೊಬ್ಬರಿಗೆ ಕೇಡುಂಟು ಮಾಡಬೇಕು ಎನ್ನುವ ಮೂಷಕ ಸ್ವಭಾವದ ಜನರೂ ನಮ್ಮಲ್ಲಿದ್ದಾರೆ. ಅಂತಹವರನ್ನು ಅಂಕಿತದಲ್ಲಿ ಇಟ್ಟುಕೊಳ್ಳಬೇಕು. ಅವರ ಮೇಲೆ ನಾಯಕ ಸವಾರಿ ಮಾಡಬೇಕು ಎನ್ನುವುದನ್ನು ಆತ ಮೂಷಿಕ ವಾಹನನಾಗಿರುವುದು ಸೂಚಿಸುತ್ತದೆ.

ಗಣೇಶೋತ್ಸವದ ಇತಿಹಾಸ
ಇಂದು ಸಾರ್ವಜನಿಕ ಗಣೇಶೋತ್ಸವವನ್ನು ಯಾವುದೇ ಧರ್ಮ, ಜಾತಿ, ಭೇದವಿಲ್ಲದೆ ಎಲ್ಲ ಜನರು ಒಂದುಗೂಡಿ ಆಚರಿಸಲಾಗುತ್ತದೆ. 1893ರಲ್ಲಿ ಸ್ವಾತಂತ್ರ್ಯ ಹೋರಾಟದ ಸಂದರ್ಭ ಲೋಕಮಾನ್ಯ ಬಾಲಗಂಗಾಧರ ತಿಲಕರು ಈ ಆಚರಣೆಗೆ ನಾಂದಿ ಹಾಡಿದರು. ಇದರ ಉದ್ದೇಶ ರಾಷ್ಟ್ರದ ಜನತೆಯನ್ನು ಒಗ್ಗೂಡಿಸಿ ಅವರಲ್ಲಿ ದೇಶಪ್ರೇಮ ಬೆಳೆಸುವುದು. ಆ ಮೂಲಕ ಬ್ರಿಟಿಷರು ನಡೆಸುವ ದೌರ್ಜನ್ಯದ ವಿರುದ್ಧ ಹೋರಾಟ ನಡೆಸುವುದಾಗಿತ್ತು. ಮೊದಲಿಗೆ ಮುಂಬಯಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಪ್ರಾರಂಭಗೊಂಡಿತು.

ಭಾರತ ಮಾತ್ರವಲ್ಲದೆ ಬರ್ಮಾ, ಮಲೇಶಿಯಾ,ಇಂಡೋನೇಷ್ಯಾಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್‌ ಮತ್ತಿತರ ದೇಶಗಳಲ್ಲಿಯೂ ಗಣಪತಿಯನ್ನು ಪೂಜಿಸುವವರಿದ್ದಾರೆ.

ಮೊದಲು ಗಜವದನನ ಪೂಜೆ 
ಯಾವುದೇ ಕೆಲಸ-ಕಾರ್ಯ, ಶುಭ ಕಾರ್ಯಗಾಳಾಗಿರಲಿ ಪ್ರಾರಂಭಿಸುವ ಮೊದಲು ಗಣಪತಿಯನ್ನು ಸ್ಮರಿಸುವುದು ನಮ್ಮ ಸಂಪ್ರದಾಯ. ಮೊದಲು ಗಜವದನನ ಪೂಜೆ ಮಾಡದಿದ್ದರೆ ಅನ್ಯ ದೇವತೆಗಳಿಗೆ ಮಾಡಿದ ಪೂಜೆಯೂ ಸಫ‌ಲಿಸುವುದಿಲ್ಲ ಎಂಬ ನಂಬಿಕೆಯಿದೆ.

--- ಗಣೇಶ ಕುಳಮರ್ವ

Trending videos

Back to Top