CONNECT WITH US  

ಇನ್ನೂ ಸಿಗದ ಪಠ್ಯಪುಸ್ತಕ: ಜಿ.ಪಂ.ಸಭೆಯಲ್ಲಿ ಆಕ್ರೋಶ

ಉಡುಪಿ: ವಾರ್ಷಿಕ ಪರೀಕ್ಷೆಗಳು ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿವೆ.ಆದರೆ ಪಠ್ಯಪುಸ್ತಕಗಳು ಇನ್ನೂ ಕೂಡ ಅನೇಕ ವಿದ್ಯಾರ್ಥಿಗಳ ಕೈಸೇರಿಲ್ಲ. ಸಮವಸ್ತ್ರವೂ ಸಿಕ್ಕಿಲ್ಲ ಎಂದು ಉಡುಪಿ ಜಿ.ಪಂ. ಸಭೆಯಲ್ಲಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಮಗೆ ಸರಬರಾಜು ಆಗಿರುವಷ್ಟನ್ನು ವಿತರಿಸಿದ್ದೇವೆ. ಉಳಿದೆಡೆ ಜೆರಾಕ್ಸ್‌ ಪ್ರತಿ ನೀಡಲಾಗಿದೆ. ಸಮವಸ್ತ್ರಗಳು ಕೂಡ ಬೇಡಿಕೆ ಇದ್ದಷ್ಟು ಸರಬರಾಜು ಆಗಿಲ್ಲ. ಹಿಂದೆ ದಾಖಲಾತಿ ಆಧಾರದಲ್ಲಿ ಪುಸ್ತಕ ಪೂರೈಕೆ ಮಾಡಲಾಗುತ್ತಿತ್ತು. ಈಗ ಆ ವ್ಯವಸ್ಥೆ ಇಲ್ಲ. ಮುಂದಿನ ವರ್ಷದಿಂದ ಆನ್‌ಲೈನ್‌ ಮೂಲಕವೇ ಬೇಡಿಕೆ ಪಟ್ಟಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಮಜಾಯಿಶಿ ನೀಡಿದರು. 

ಉಡುಪಿ ಜಿ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಿಲ್ಪಾ ಸುವರ್ಣ, ರೇಷ್ಮಾ ಶೆಟ್ಟಿ ಇನ್ನೂ ಶೈಕ್ಷಣಿಕ ವರ್ಷದ ಅಂತ್ಯದಲ್ಲೂ ಪಠ್ಯಪುಸ್ತಕ ಲಭ್ಯ ವಾಗದ ಬಗ್ಗೆ ದೂರಿದರು. ಇದಕ್ಕೆ ಬಹುತೇಕ ಹೆಚ್ಚಿನ ಸದಸ್ಯರು ದನಿಗೂಡಿಸಿ ಪಠ್ಯಪುಸ್ತಕದ ಜೆರಾಕ್ಸ್‌ ಪ್ರತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರಾದರೂ  ಕೆಲವು ಕಡೆ ಅದು ಕೂಡ ಸಿಕ್ಕಿಲ್ಲ ಎಂದರು. ಪ್ರತಿಕ್ರಿಯಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು, ಇದು ನಾಚಿಕೆಗೇಡಿನ ಸಂಗತಿ, ಯೂನಿ ಫಾರಂ ನೀಡದಿದ್ದರೂ ಪುಸ್ತಕ ಗಳನ್ನು ನೀಡಲೇ ಬೇಕು. ಮುಂದಿನ ವರ್ಷ ಈ ಸಮಸ್ಯೆ ಪುನರಾ ವರ್ತನೆ ಯಾಗದಂತೆ ನೋಡಿಕೊಳ್ಳಿ ಎಂದರು. 

ಅಧಿಕಾರಿ ಅಮಾನತು:ಖಂಡನಾ ನಿರ್ಣಯ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವಿ. ಕೋದಂಡರಾಮಯ್ಯ ಅವರನ್ನು ಏಕಾಏಕಿ ಅಮಾನತು ಮಾಡಲಾಗಿದ್ದು, ಇದು ಸರಿಯಲ್ಲ ಎಂದು ಉಡುಪಿ ಜಿ.ಪಂ. ಖಂಡನಾ ನಿರ್ಣಯ ಅಂಗೀಕರಿಸಿತು.

ಸಭೆಯ ಆರಂಭದಲ್ಲಿ ರಾಘವೇಂದ್ರ ಕಾಂಚನ್‌ ಅವರು ಖಂಡನಾ ನಿರ್ಣಯವನ್ನು ಮಂಡಿಸಿದರು. ಆದರೆ ಇದಕ್ಕೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. "ಅಧಿಕಾರಿಯ ಅಮಾನತಿನ ಕುರಿತು ವಿವರ ಮಾಹಿತಿ ಪಡೆದು ಪರಿಶೀಲಿಸಿ ಅನಂತರ ನಿರ್ಧರಿಸೋಣ' ಎಂದರು. ಆದರೆ ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಒಪ್ಪಲಿಲ್ಲ. "ಈ ಹಿಂದೆ ಮರಳು ಮಾಫಿಯಾದವರು ಜಿಲ್ಲಾಧಿಕಾರಿ ಮೇಲೆ ಹಲ್ಲೆ ನಡೆಸಿದಾಗಲೂ ನಾವು ಖಂಡನಾ ನಿರ್ಣಯ ಅಂಗೀಕರಿಸಿದ್ದೆವು. ಈಗ ಅಧಿಕಾರಿಗೆ ನೋಟೀಸು ನೀಡದೆ, ವಿಚಾರಣೆ ಮಾಡದೆ ಏಕಾಏಕಿ ಕ್ರಮ ತೆಗೆದುಕೊಂಡಿರುವುದು ಕೂಡ ಸರಿಯಲ್ಲ. ಅಧಿಕಾರಿ ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಲಿ. ಇದಕ್ಕೆ ನಮ್ಮ ಆಕ್ಷೇಪ ಇಲ್ಲ' ಎಂದು ಪ್ರತಾಪ್‌ ಹೆಗ್ಡೆ ಮಾರಾಳಿ ಹೇಳಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇಲಾಖೆಯಿಂದ ಮಾಹಿತಿ ಬಂದ ಅನಂತರ ಈ ಕುರಿತು ಚರ್ಚೆ ಮಾಡೋಣ ಎಂದು ಅಧ್ಯಕ್ಷ ದಿನಕರ ಬಾಬು ಹೇಳಿದರು. ಮಧ್ಯಾಹ್ನದ ಬಳಿಕ ಅಧಿಕಾರಿಗಳು ಅಮಾನತು ಆದೇಶದ ಕುರಿತು ಮಾಹಿತಿ ಒದಗಿಸಿದರು. ಅನಂತರ ಸಭೆ ಖಂಡನಾ ನಿರ್ಣಯ ಕೈಗೊಂಡಿತು. ವಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ರಾಜ್ಯ ಹೆದ್ದಾರಿಗೆ ಟೋಲ್‌ಗೇಟ್‌ ಖಚಿತ?
ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಬೆಳ್ಮಣ್‌ನಲ್ಲಿ ಟೋಲ್‌ಗೇಟ್‌ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಟೋಲ್‌ಗೇಟ್‌ಗೆ ಜನವಿರೋಧವಿದ್ದರೂ ಟೆಂಡರ್‌ ಕರೆದಿರುವುದು ಸರಿಯಲ್ಲ ಎಂದು ರೇಶ್ಮಾ ಉದಯ ಶೆಟ್ಟಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು "ಬೆಂಗಳೂರಿನ ಕೆ.ಆರ್‌.ಡಿ.ಸಿ.ಎಲ್‌. ಇಲಾಖೆ ಟೆಂಡರ್‌ ಪ್ರಕ್ರಿಯೆ ನಡೆಸುತ್ತದೆ. ಅಲ್ಲಿಂದಲೇ ಮಾಹಿತಿ ಪಡೆದುಕೊಳ್ಳಬೇಕು' ಎಂದು ಹೇಳಿದರು. ಜಿಲ್ಲಾಡಳಿತವು ಜನರಿಗೆ ಮಾಹಿತಿ ನೀಡುತ್ತಿಲ್ಲ ಎಂದು ರೇಶ್ಮಾ ಆರೋಪಿಸಿದರು.

ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ಶಶಿಕಾಂತ ಪಡುಬಿದ್ರಿ ಉಪಸ್ಥಿತರಿದ್ದರು.

Trending videos

Back to Top