CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅಂಬೇಡ್ಕರ್‌ ಜೀವನ ಸಾಧನೆ ತೆರೆದಿಟ್ಟ ಜಾನಪದ ರೂಪಕ

ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಡೆದ ಭಾರತ ಭಾಗ್ಯ ವಿಧಾತ ಧ್ವನಿ-ಬೆಳಕು ಕಾರ್ಯಕ್ರಮ ನಗರದ ರವಿಂದ್ರನಾಥ ಟಾಗೋರ ಕಡಲ ತೀರದಲ್ಲಿ ಜನರಿಗೆ ಮನರಂಜನೆ ನೀಡುವದರೊಂದಿಗೆ ಜಾತಿ ಪದ್ಧತಿ ಅನಿಷ್ಠದ ವಿರುದ್ಧ ಸಾಮಾಜಿಕ ಸಂದೇಶ ಸಾರಿತು. ಜನರನ್ನು ವೈಚಾರಿಕತೆಯ ಕಡೆಗೆ ಕೊಂಡಯ್ಯಲು ಯಶಸ್ವಿಯಾಯಿತು. 

ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಚಾಲನೆ ನೀಡಿದರು. ಡಾ|ಅಂಬೇಡ್ಕರರ ಜೀವನ ಚಿತ್ರಣ ಕುರಿತಾದ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮೂಲೆಯಿಂದ ಆಯ್ಕೆ ಮಾಡಿದಂತಹ 80ಕ್ಕೂ ಅಧಿಕ ಯುವಕ ಯುವತಿಯರು ಅದ್ಭುತವಾಗಿ ನಟಿಸಿದರು. ವೈಚಾರಿಕ ಹಿನ್ನೆಲೆಯಲ್ಲಿ ಅರಳಿದ ಕಥಾ ಹಂದರ ನೋಡುಗರಿಗೆ ಮುದ ನೀಡಿತು.

ದಲಿತರು, ಶೋಷಿತರು, ಮಹಿಳೆಯರು, ಕಾರ್ಮಿಕರು ಹೀಗೆ ನೊಂದವರ ನೋವಿಗೆ ಅಂಬೇಡ್ಕರ್‌ ಸ್ಪಂದಿಸುವ ಚಾರಿತ್ರಿಕ ಹಿನ್ನೋಟಗಳನ್ನು ದೇಶಿ ಕಲೆಗಳಾದ ಗೊರವರ ಕುಣಿತ, ಕಂಸಾಳೆ, ವೀರಭದ್ರ ಕುಣಿತ, ಭೂತಕೊಲ, ಗೀಗಿಪದ, ಡೊಳ್ಳು ಕುಣಿತ ಮರಾಠಿ ನೆಲದ ತಮಾಷಾ ಜಾನಪದ ನೃತ್ಯದ ಮೂಲಕ ತೋರ್ಪಡಿಸಿದರು.

ಅಗತ್ಯಕ್ಕೆ ಅನುಗುಣವಾದ ಸಂಭಾಷಣೆ ಹಾಗೂ ಕಿವಿಗೆ ಇಂಪಾಗಿರುವ ಹಿನ್ನೆಲೆ ಸಂಗೀತ 90 ನಿಮಿಷಗಳು ಮುಗಿದದ್ದೇ ಗೊತ್ತಾಗಲಿಲ್ಲ. ಅಂಬೇಡ್ಕರ್‌ ಬಾಲ್ಯ ಮತ್ತು ಯೌವ್ವನ ಕಾಲದ ಜಾತೀಯತೆಯ ಅನಿಷ್ಠದ ಕಾವು ಜನರ ಮನ ತಟ್ಟಿತು. ಅಲ್ಲದೇ ಅಂಬೇಡ್ಕರ್‌ ಅವರ ಜ್ಞಾನ ಮತ್ತು ಸಾಮಾಜಿಕ ಒಳ ನೋಟ ಮತ್ತು ಶ್ರಮಿಕ ಮತ್ತು ತುಳಿತಕ್ಕೆ ಒಳಗಾದ ಎಲ್ಲಾ ಸಮುದಾಯಗಳ ಪರವಾಗಿ ಅಂಬೇಡ್ಕರ್‌ ಎಂಥ ನೈತಿಕ ರಾಜಕಾರಣ ಮಾಡಿದರು ಎಂಬುದು ರೂಪಕದಿಂದ ಮನದಟ್ಟಾಯಿತು. 

ಅಂಬೇಡ್ಕರ ಅವರ ಇಡೀ ಜೀವನವನ್ನು ಕಟ್ಟಿಕೊಡುವಲ್ಲಿ ರೂಪಕ ಯಶಸ್ಸು ಸಾಧಿಸಿತು. ಅಲ್ಲದೇ ಗಾಂಧೀಜಿ ಮತ್ತು ಅಂಬೇಡ್ಕರ್‌ ಮಧ್ಯೆ ನಡೆದ ವಾದ ವಿವಾದ ಮಾತುಕತೆ ಸಹ ಜನರ ಮನದಲ್ಲಿ ಅಚ್ಚಳಿಯದೇ ಉಳಿಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್‌. ಆರ್‌. ವಿಶುಕುಮಾರ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ್‌ ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದರು. 

ಸಂಗೀತ ನಿರ್ದೇಶನವನ್ನು ಯುವ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ನೀಡಿದರು ಹಾಗೂ ಡಾ|ಕೆ.ವೈ.ನಾರಾಯಣಸ್ವಾಮಿ ಹಾಗೂ ಬಿ.ಎಂ.ಗಿರಿರಾಜ್‌ ಗೀತಗಳನ್ನು ಬರೆದಿದ್ದು ಕತೆಗೆ ಪೂರಕವಾಗಿದ್ದವು. ಶಶಿಧರ ಅಡಪ ಅವರ ರಂಗ ವಿನ್ಯಾಸ, ಪದ್ಮಿನಿ ಅಚ್ಚಿ ಅವರ ನೃತ್ಯ ಸಂಯೋಜನೆ ನೋಡುಗರಿಗೆ ಹೊಸ ಲೋಕವನ್ನು ತೆರೆದಿಟ್ಟಿತು.  

ಡಾ| ಅಂಬೇಡ್ಕರರ ತಾವು ಅನುಭವಿಸಿದ ಅಪಮಾನ ನೋವುಗಳನ್ನು ತಮ್ಮ ಸಮುದಾಯದವರು ಅನುಭವಿಸಬಾರದೆಂದು ದೃಢ ಸಂಕಲ್ಪ ಮಾಡಿ ಅಸಮಾನತೆ ನಿವಾರಣೆಗಾಗಿ ತಮ್ಮ ಬದುಕನ್ನೆ ಸಮರ್ಪಿಸಿಕೊಂಡಂತಹ ಘಟನಾವಳಿಗಳನ್ನು ಕಲಾವಿದರು ಬಿಡಿಸಿಟ್ಟರು. ಅಂಬೇಡ್ಕರ್‌ ಪಾತ್ರಧಾರಿಯ ಜತೆಯಲ್ಲೇ ಗಾಂಧೀಜಿ, ಜವಾಹರಲಾಲ್‌ ನೆಹರು ಸೇರಿದಂತೆ ಧೀಮಂತ ನಾಯಕ ಪಾತ್ರಧಾರಿಗಳು ತೆರೆಯ ಮೇಲೆ ಜೀವ ತಳೆದಿದ್ದರು.  

ಜಿಪಂ ಸಿಇಒ ಎಲ್‌. ಚಂದ್ರಶೇಖರ, ಅಪರ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ, ಹುಬ್ಬಳ್ಳಿ-ಅಂಕೋಲಾ ರೈಲ್ವೆಯ ವಿಶೇಷ ಯೋಜನಾಧಿಕಾರಿ ಬಿ.ಸದಾಶಿವ ಪ್ರಭು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಶμ ಸಾದುದ್ದೀನ, ನಗರದ ಗಣ್ಯರು, ಸಾರ್ವಜನಿಕರು ಸೇರಿದಂತೆ ಪ್ರವಾಸಿಗರು ಉಪಸ್ಥಿತರಿದ್ದರು.

Back to Top