CONNECT WITH US  

ಬಿಗಡಾಯಿಸುತ್ತಿದೆ ಘನತ್ಯಾಜ್ಯ ಘಟಕ ಸಮಸ್ಯೆ: ಆಕ್ರೋಶ

ಕುಮಟಾ: ಘನತ್ಯಾಜ್ಯ ಘಟಕದ ಪ್ರಕರಣದಲ್ಲಿ ಚೆನ್ನೈ ಹಸಿರುಪೀಠದೆದುರು ಕುಮಟಾ ಪುರಸಭೆಗೆ ಸವಾಲಾದ ಅಂಶಗಳು ಹಾಗೂ ಸೋಲಿಗೆ ಕಾರಣವಾದ ಅಂಶಗಳ ಕುರಿತು ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ಮೊದಲು ಘನತ್ಯಾಜ್ಯ ಘಟಕಕ್ಕೆ ಮೂರೂರು ಗುಡ್ಡದ ಸರ್ವೆ ನಂ.108 ಅ ದಲ್ಲಿ ಜಾಗ ನಿಗದಿಯಾಗಿ ಎಲ್ಲ ಇಲಾಖಾ ಅನುಮತಿಗಳು ಲಭ್ಯವಿದ್ದಾಗ 2 ಕಿಮೀ ದೂರದ ಇನ್ನೊಂದು ಜಾಗಕ್ಕೆ ಬದಲಾವಣೆ ಮಾಡಿದ್ದು ಯಾಕೆ. 

ನಂತರ ಹೊಸದಾಗಿ ಸರ್ವೆನಂ. 108 ಅ1ಅ1ಅ1ಅ1ಅ1 ರ 5 ಎಕರೆ ಜಾಗ ಪಡೆದ ನಂತರ ಸೂಕ್ತ ಅನುಮತಿ ದೊರೆಯದಿರಲು ಕಾರಣವೇನು? ನಿಯಮಾವಳಿಗಳು ಹಾಗೂ ಯೋಜನೆಯ ಸರಿಯಾದ ಮಾಹಿತಿಯಿಲ್ಲದೇ ಕಾರ್ಯಾನುಷ್ಠಾನಕ್ಕೆ ಮುಂದಾದ ಪರಿಣಾಮವೇ ಇಷ್ಟೊಂದು ವರ್ಷ ಘನತ್ಯಾಜ್ಯ ಘಟಕದ ಸಮಸ್ಯೆ ಬಗಹರಿಯದಿರಲು ಕಾರಣ. ಮುಂದೇನುಮಾಡುತ್ತೀರಿ ಎಂದು ಹಿರಿಯ ಸದಸ್ಯ ಮಧುಸೂದನ ಶೇಟ್‌ ಕೇಳಿದರು. 

ಘನತ್ಯಾಜ್ಯ ಘಟಕಕ್ಕೆ ಅರಣ್ಯ ಇಲಾಖೆಯಿಂದ ಮೊದಲು ನಿಗದಿಯಾಗಿದ್ದ ಜಾಗದಲ್ಲಿನೆಡುತೋಪು ಇದೆ ಎಂಬ ಕಾರಣ ನೀಡಿ ಇನ್ನೊಂದು ಜಾಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2009ರಲ್ಲಿ ಜಾಗ ಬದಲಾವಣೆಯಾಗಿದ್ದು ಮೊದಲು ನಿಗದಿಯಾಗಿದ್ದ ಜಾಗವನ್ನು ಇಲಾಖೆ ಹಿಂಪಡೆದಿದೆ. ಹೊಸ ಜಾಗಕ್ಕೆ ತಾಂತ್ರಿಕ ಸಮಸ್ಯೆ ಇತ್ತು ಎಂದು ಪರಿಸರ ಅಭಿಯಂತ ನಾಗೇಂದ್ರ ಗಾಂವಕರ ವಿವರಿಸಿದರು. 

ಕೆಲಸ ಸದಸ್ಯರು ಎದ್ದು ನಿಂತು, ತ್ಯಾಜ್ಯ ಘಟಕ ವಿಚಾರ 13 ವರ್ಷಗಳಿಗೂ ಹೆಚ್ಚು ಕಾಲ ಬಗೆಹರಿಯದಿರಲು ಅಧಿಕಾರಿಗಳೇ ಕಾರಣ. ನಮಗೂ ಸರಿಯಾಗಿ ಮಾಹಿತಿ ನೀಡುವುದಿಲ್ಲ, ತಾವೂ ಅರಿತುಕೊಳ್ಳುವುದಿಲ್ಲ. ಯಾರೋ ಮಾಡಿದ ತಪ್ಪಿಗೆ ಪಟ್ಟಣದ ಜನತೆ ಸಂಕಟ ಪಡುವಂತಾಗಿದೆ. ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮುಖ್ಯಾಧಿಕಾರಿ ಫೌಜಿಯಾ ತರನ್ನುಮ್‌ ಮಾತನಾಡಿ, ಈ ಬಗ್ಗೆ ಜಿಲ್ಲಾಧಿಕಾರಿಗಳೊಟ್ಟಿಗೆ ಮಾತನಾಡಲಾಗಿದ್ದು ತಕ್ಷಣ ಹೊಸ ಜಾಗ ಗುರುತಿಸಲು ತಿಳಿಸಿದ್ದಾರೆ. ಎಲ್ಲಾದರೂ ಜಾಗವಿದ್ದರೆ ತಿಳಿಸಿ ಮುಂದುವರಿಯೋಣ ಎಂದರು. ಆರಂಭದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟಲು ಲೇಔಟ್‌ ಅನುಮತಿ ಕುರಿತ ಸಮಸ್ಯೆಯನ್ನು ಸದಸ್ಯ ರಾಜೇಶ ಪೈ ಪ್ರಸ್ತಾಪಿಸಿದರು. 5-6 ವರ್ಷದಿಂದ ಕಟ್ಟಡಗಳಿಗೆ ಅನುಮತಿಯಿಲ್ಲದೇ ಜನ ಪರದಾಡುತ್ತಿದ್ದಾರೆ.

ನಗರ ಯೋಜನೆ ನಿಯಮಾವಳಿ ಮುಂದಿಟ್ಟುಕೊಂಡು ಬಡವರಿಗೆ ಸಮಸ್ಯೆ ಸೃಷ್ಟಿಸಲಾಗುತ್ತಿದೆ. ಸಿರಿವಂತರು ಏನು ಬೇಕಾದರೂ ಮಾಡಬಹುದು ಎಂಬಂತಾಗಿದೆ. ಈ ಬಗ್ಗೆ ಮಾಹಿತಿ ಕೊಡಿ ಎಂದು ಏರುದನಿಯಲ್ಲಿ ಆಗ್ರಹಿಸಿದರು. ಇದಕ್ಕೆ ಮಂಜುಜೈನ ಪೂರಕವಾಗಿ ಮಾತನಾಡಿ, ಪಿಕಪ್‌ ನಿಲ್ದಾಣ ಬಳಿ ನಿನ್ನೆಯಷ್ಟೇ ಹೊಸ ಆಸ್ಪತ್ರೆ ಕಟ್ಟಡ ಉದ್ಘಾಟನೆಯಾಗಿದೆ.

ಇದಕ್ಕೆ ಪಾರ್ಕಿಂಗ್‌ ಮತ್ತಿತರ ಯಾವ ನಿಯಮಾವಳಿಯೂ ಸಂಬಂಧಪಡುವುದಿಲ್ಲವೇ? ಒಬ್ಬೊಬ್ಬರಿಗೆ ಒಂದೊಂದು ನ್ಯಾಯವೇ? ಬಡವರಿಗೆ ಸಲ್ಲದ ನಿಯಮಾವಳಿ ಹೇರಿ ಎನ್‌ಓಸಿ ಕೊಡಲು ಸತಾಯಿಸುತ್ತೀರಿ. ದೊಡ್ಡ ದೊಡ್ಡ ಕಟ್ಟಡ ಕಟ್ಟುವವರಿಗೆ ಯಾವ ನಿಯಮವೂ ತಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಈ ಕುರಿತು ಒಂದು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆದು ಅಧಿಕಾರಿಗಳಿಂದ ಸರಿಯಾಗಿ ಉತ್ತರ ಬರಲಿಲ್ಲ.

ಅಂತಿಮವಾಗಿ ಈ ವಿಷಯವಾಗಿ ವಿಶೇಷ ಸಭೆ ಕರೆದು ಚರ್ಚಿಸೋಣ ಎಂದು ಮುಖ್ಯಾಧಿಕಾರಿ ಸ್ಪಷ್ಟಪಡಿಸಿದರು. ಡಯಟ್‌ ಆವಾರದಲ್ಲಿ ಗೋಡಂಬಿ ತಂತ್ರಜ್ಞಾನ ಕೇಂದ್ರ ಸ್ಥಾಪನೆಗೆ ಅನುಮತಿ ಕೋರಿ ಪ್ರಸ್ತಾಪಿಸಿದಾಗ ಕೆಲ ಸದಸ್ಯರು ಅದರಿಂದ ಪರಿಸರ ಮಾಲಿನ್ಯವಾಗುತ್ತದೆ. ಕೈಗಾರಿಕಾ ವಸಾಹತು ಇಲ್ಲವೇ ಗೇರು ಅಭಿವೃದ್ಧಿ ನಿಗಮದ ಜಾಗದಲ್ಲೇ ಸ್ಥಾಪಿಸಿಕೊಳ್ಳಲಿ ಎಂದು ಆಕ್ಷೇಪಿಸುವ ಮೂಲಕ ತಮಗಿರುವ ತಿಳಿವಳಿಕೆ ಕೊರತೆಯನ್ನು ಪ್ರದರ್ಶಿಸಿದರು.

ನಂತರ ಗೋಡಂಬಿ ತಂತ್ರಜ್ಞಾನ ಕೇಂದ್ರದಲ್ಲಿ ತರಬೇತಿ, ಶೀತಲೀಕರಣ, ಗೋಡಂಬಿ ಗುಣಮಟ್ಟ ವಿಂಗಡನೆ ಹಾಗೂ ಪ್ರಯೋಗಾಲಯ ಮುಂತಾದವು ಮಾತ್ರ ಇರುತ್ತದ ಎಂದು ವಿವರಿಸಿದ ನಂತರ ಅಸಮಾಧಾನದಿಂದಲೇ ಕೆಲ ಸದಸ್ಯರು ಒಪ್ಪಿಗೆ ಸೂಚಿಸಿ ಕೈಮೇಲೆತ್ತಿದರು. ಅಧ್ಯಕ್ಷ ಸಂತೋಷ ನಾಯ್ಕ, ಸ್ಥಾಯಿ ಸಮಿತಿಯ ವಿನಯಾ ಜಾರ್ಜ, ಹಾಗೂ ಇತರ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.   

Trending videos

Back to Top