CONNECT WITH US  

ಮೊದಲಿನಂತೆಯೇ ಪಡಿತರ ವಿತರಿಸಿ

ಬಯೋಮೆಟ್ರಿಕ್‌ ವ್ಯವಸ್ಥೆಯಿಂದ ರೈತರು-ಬಡ ಕೂಲಿಕಾರ್ಮಿಕರಿಗೆ ತೀವ್ರ ತೊಂದರೆ

ಭಟ್ಕಳ: ಪ್ರತಿಭಟನಾಕಾರರು ತಹಸೀಲ್ದಾರ್‌ ವಿ.ಎನ್‌. ಬಾಡಕರ್‌ಗೆ ಮನವಿ ಸಲ್ಲಿಸಿದರು.

ಭಟ್ಕಳ: ತಾಲೂಕಿನಲ್ಲಿ ರೇಶನ್‌ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆಯಿಂದಾಗಿ ಬಡ ರೈತರು, ಕೂಲಿಕಾರರು, ಮಹಿಳೆಯರು ರೇಶನ್‌ ತರಲು ತೀವ್ರ ಪರದಾಡ ಬೇಕಾಗಿ ಬರುವುದರಿಂದ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಕೈಬಿಡಬೇಕು ಎಂದು ಸಿಐಟಿಯು ಭಟ್ಕಳ ಘಟಕದ ವತಿಯಿಂದ ತಹಶೀಲ್ದಾರ್‌ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.

ರೇಶನ್‌ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಕೈಬಿಡಬೇಕು, ಅರಣ್ಯ ಭೂಮಿ ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡು ವಾಸ್ತವ್ಯ ಮಾಡಿಕೊಂಡು ಬಂದವರಿಗೆ ಅವರ ಮನೆಯನ್ನು ರಿಪೇರಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮನವಿಯಲ್ಲಿ ಕೋರಲಾಗಿದೆ.

ಸಿಐಟಿಯು ವತಿಯಿಂದ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ರೇಶನ್‌ ಅಂಗಡಿಯಲ್ಲಿ ಉದ್ದುದ್ದ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿ ಬರುವುದು, ನಂತರ ಹೆಬ್ಬೆರಳ ಗುರುತನ್ನು ನೀಡಬೇಕು. ಕೆಲವೊಮ್ಮೆ ಅದು ಸರಿಯಾಗಿ ಮೂಡದೇ ಇದ್ದಲ್ಲಿ ವಾಪಸ್ಸಾಗಬೇಕಾಗಿ ಬರುವುದು. ಬಡ ಕೂಲಿ ಮಾಡುವವರು ಒಮ್ಮೆ ಬರುವುದೇ ಕಷ್ಟಕರವಾಗಿರುವಾಗ ಪದೇ ಪದೇ ರೇಶನ್‌ ಅಂಗಡಿಗೆ ಅಲೆಯುವುದು ತೀವ್ರ ಸಂಕಷ್ಟಕ್ಕೆ ನೂಕುತ್ತದೆ. ಪ್ರತಿನಿತ್ಯ ಕೂಲಿ ಮಾಡಿ ಸಂಪಾದನೆ ಮಾಡುವವರಿಗೆ ಇದು ಆದಾಯದ ಮೂಲಕ್ಕೆ ಪೆಟ್ಟು ಕೊಡುವ ಪದ್ಧತಿಯಾಗಿದೆಯಲ್ಲದೇ ಜನವಿರೋಧಿಯಾಗಿದ್ದು ಈ ಪದ್ಧತಿಯನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ತಾಲೂಕಿನಲ್ಲಿ ಹಲವಾರು ರೈತರು ತಮ್ಮ ತಮ್ಮ ವಾಸ್ತವ್ಯಕ್ಕಾಗಿ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡು ಬಂದಿದ್ದು ಬೇರೆ ಎಲ್ಲಿಯೂ ಅವರಿಗೆ ಆಶ್ರಯವಿಲ್ಲವಾಗಿದೆ. ಅಧಿಕಾರಿಗಳು ಅಕ್ರಮ ಸಕ್ರಮದ ಹೆಸರಿನಲ್ಲಿ ಮನೆಯನ್ನು ಕೆಡವಿ ಹಾಕುತ್ತಾರೆ. ಅತಿಕ್ರಮಣ ಜಾಗಾದಲ್ಲಿ ಮನೆ ಕಟ್ಟಿಕೊಂಡವರಿಗೆ ಅದನ್ನು ರಿಪೇರಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದೂ ಆಗ್ರಹಿಸಲಾಗಿದೆ. 

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ವಿ.ಎನ್‌. ಬಾಡಕರ್‌ ಅವರು ಮನವಿಯನ್ನು ಮುಖ್ಯ ಮಂತ್ರಿಗಳಿಗೆ ಕಳುಹಿಸುವ ಭರವಸೆ ನೀಡಿದರು. ಗೀತಾ ನಾಯ್ಕ, ಪುಂಡಲೀಕ ನಾಯ್ಕ, ಸುಧಾ ಭಟ್ಟ, ಪುಷ್ಪಾವತಿ ನಾಯ್ಕ, ಗಜೇಂದ್ರ ಶಿರಾಲಿ, ಚಂದ್ರಕಲಾ ನಾಯ್ಕ, ಅನುರಾಧ ಡಿಕೋಸ್ತ ಉಪಸ್ಥಿತರಿದ್ದರು.


Trending videos

Back to Top