CONNECT WITH US  

ನಾನು ಸಂಗೀತಕ್ಕಾಗಿಯೇ ಜನಿಸಿದವನು

ನನ್ನ ತಂದೆಯೂ ಸಿನೆಮಾಗಳಿಗೆ ಸಂಗೀತ ಮಾಡುತ್ತಿದ್ದರು. ತಮಿಳು ಮತ್ತು ಮಲಯಾಳಂ ಸಿನೆಮಾ ಕಂಡಕ್ಟರ್‌ ಕೂಡ ಆಗಿದ್ದರು. ನಾಲ್ಕೈದು ವರ್ಷ ವಯಸ್ಸಿನಲ್ಲಿ ಅವರಿಗಾಗಿ ಊಟದ ಬುತ್ತಿ ಕೊಂಡೊಯ್ಯುತ್ತಿದ್ದ ದಿನಗಳು ಈಗಲೂ ನೆನಪಿವೆ. ಬುತ್ತಿ ಒಯ್ದು ಕೊಟ್ಟು ಅವರ ಕೆಲಸವನ್ನು ನೋಡುತ್ತಾ ನಿಲ್ಲುತ್ತಿದ್ದೆ. ಒಂದೇ ಸಮಯದಲ್ಲಿ ಏಳೆಂಟು ಸಿನೆಮಾಗಳಿಗೆ ಅಪ್ಪ ಸಂಗೀತ ಮಾಡುತ್ತಿದ್ದರು, ಬಹಳ ಶ್ರಮವಹಿಸಿ ದುಡಿಯುತ್ತಿದ್ದರು. ಯಾಕೆಂದರೆ, ತಮ್ಮದೇ ಆದ ಒಂದು ಮನೆ ಕಟ್ಟಿಕೊಳ್ಳಬೇಕು ಎಂಬ ಆಸೆ ಅವರಿಗಿತ್ತು. ನಾನು ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದವನು.

ನನಗೆ ಒಂಬತ್ತು ವರ್ಷ ವಯಸ್ಸಾಗಿದ್ದಾಗ ಅಪ್ಪ ತೀರಿಕೊಂಡರು. ಆ ಬಳಿಕ ಅಮ್ಮ ಒಬ್ಬಳೇ ನಮ್ಮನ್ನೆಲ್ಲ ಬೆಳೆಸಿದರು. ಹೀಗಾಗಿಯೇ ಅಮ್ಮ ಅಂದರೆ ನನಗೆ ಅಷ್ಟೂ ಅಕ್ಕರೆ. ಸೋತೇ ಹೋದಂತಿದ್ದ ಎಷ್ಟೋ ಸಂದರ್ಭಗಳಲ್ಲಿ ಅಮ್ಮನೇ ನಮ್ಮನ್ನು ಹಿಡಿದೆತ್ತಿ ನಿಲ್ಲಿಸಿದ್ದಾರೆ. ನಾನು ಸಂಗೀತ ಕ್ಷೇತ್ರದಲ್ಲಿಯೇ ಮುಂದುವರಿಯಬೇಕು ಎಂದು ನನಗೆ ಮಾರ್ಗದರ್ಶನ ಮಾಡಿದವಳೂ ಆಕೆಯೇ. ನನ್ನ ಪತ್ನಿ ಸಾಯಿರಾ ಬಾನು ಕೂಡ ಹಾಗೆಯೇ - ಅಪ್ಪ, ಅಮ್ಮನ ಮೂಲಕ ನನ್ನ ಜೀವನ ಹೇಗೆ ನಡೆದು ಬಂತೋ ಹಾಗೆಯೇ ಪತ್ನಿಯ ಮೂಲಕವೂ ಸುರಳೀತವಾಗಿ ಮುಂದುವರಿಯಿತು. ಮಕ್ಕಳು, ಸಂಸಾರವನ್ನು ನೋಡಿಕೊಂಡು ನನ್ನನ್ನು ನನ್ನಷ್ಟಕ್ಕೆ ಸಂಗೀತದ ಪಾಲಿಗೆ ಬಿಟ್ಟುಕೊಟ್ಟಿದ್ದಾಳೆ ಅವಳು. ಅಷ್ಟು ಮಾತ್ರ ಅಲ್ಲ, ನನಗಾಗಿ ಚೆಂದ ಚೆಂದದ ಡ್ರೆಸ್ಸುಗಳನ್ನು ಆಯ್ದು ತಂದು ನಾನು ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳುವುದರಲ್ಲೂ ಆಕೆಯ ಕೊಡುಗೆಯಿದೆ! ಪ್ರಾಯಃ ನಾನೊಬ್ಬ ಒಳ್ಳೆಯ ತಂದೆಯಲ್ಲ. ಏಕೆಂದರೆ, ನಾನು ಸದಾ ಸಂಗೀತದಲ್ಲಿ ಮುಳುಗಿರುತ್ತೇನೆ. ಮಕ್ಕಳ ಜತೆಗೆ ಹೆಚ್ಚು ಕಾಲ ಕಳೆದು ನನಗೆ ಗೊತ್ತಿಲ್ಲ. ಆದರೆ, ಆ ಜವಾಬ್ದಾರಿಯನ್ನೆಲ್ಲ ಸಾಯಿರಾ ಒಬ್ಬಳೇ ನಿಭಾಯಿಸಿದ್ದಾಳೆ.

ಸಂಗೀತ - ಆಳವಾದ ಅನುಭೂತಿ
'ನೀವು ಬಹಳಷ್ಟು ಸಿನೆಮಾಗಳಿಗೆ ಸಂಗೀತ ನೀಡಿದ್ದೀರಿ, ಆಲ್ಬಮ್‌ ಹೊರತಂದಿದ್ದೀರಿ. ನಿಮ್ಮ ವರ್ಕ್‌ಗಳಲ್ಲಿ ಯಾವುದು ನಿಮಗೆ ಬಹಳ ಇಷ್ಟ?' ಅಂತ ಹಲವರು ನನ್ನನ್ನು ಕೇಳುತ್ತಾರೆ. ಕಾಲ ಕಳೆದಷ್ಟೂ ಸವಿಯೆನಿಸುವ ನನ್ನ ಸಂಗೀತವೆಲ್ಲ ನನಗೆ ಪ್ರಿಯವೇ. ಸಂಗೀತ ಮಾಧುರ್ಯವನ್ನು ಹೊಂದಿರಬೇಕು. ನಾನು ಹೆಚ್ಚಾಗಿ ಸಿನೆಮಾಗಳಿಗೆ ಸಂಗೀತ ಮಾಡುತ್ತೇನೆ, ಆಗ ಕೆಲವೊಮ್ಮೆ ಕಾಂಪ್ರಮೈಸ್‌ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನನ್ನ ಸಂಗೀತ ಆಳವಾದ ಅನುಭೂತಿಯಿಂದ ಉಂಟಾದದ್ದು, ಕೇಳುಗರಲ್ಲೂ ಅದೇ ಪರಿಣಾಮ ಉಂಟುಮಾಡಬೇಕು ಎಂದು ಬಯಸುತ್ತೇನೆ. ಮಧುರವಾದ ಸಂಗೀತ ಮತ್ತು ಅದರ ಸಾಹಿತ್ಯ ಎರಡೂ ಅಂತಃಕರಣದಿಂದ ಮೂಡಿಬಂದಿದ್ದರೆ ಚಿರಸ್ಥಾಯಿಯಾಗಿರುತ್ತವೆ. 

ಆಸ್ಕರ್‌ಗಳು, ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ, ಸಮ್ಮಾನ, ಹಾರ ತುರಾಯಿ ಎಲ್ಲವೂ ಒದಗಿಬಂದಿವೆ ನಿಜ. ಆದರೆ, ಅಭಿಮಾನಿಗಳು - ಅವರ ಆಶೀರ್ವಾದ ಮತ್ತು ಪ್ರೀತಿಯೇ ನಿಜ ವಾದ ಬಹುಮಾನ. ಅದು ಬಹಳ ಮುಖ್ಯವಾದದ್ದು ಮತ್ತು ಅದುವೇ ನನ್ನನ್ನು ಮುನ್ನಡೆಸುತ್ತಿರುವುದು. ಕಲಾವಿದನೊಬ್ಬನಿಗೆ ಸ್ಫೂರ್ತಿ ಮತ್ತು ಪ್ರೋತ್ಸಾಹ ಅತ್ಯಗತ್ಯ. ಅಭಿಮಾನಿಗಳ ಪ್ರೀತಿ ಯನ್ನು ಅನುಭವಿಸಿದಾಗ ಇನ್ನಷ್ಟು ಚೆನ್ನಾಗಿ ಕೆಲಸ ಮಾಡುವ ಹುರುಪು ಉಂಟಾಗುತ್ತದೆ. ಪ್ರತೀ ಕೆಲಸವನ್ನೂ, ಪ್ರತೀ ಸಂಗೀತವನ್ನೂ ಶಕ್ತಿಮೀರಿ ಸುಂದರಗೊಳಿಸುವ ಉತ್ಸಾಹ ಮೂಡುತ್ತದೆ. 

ಅಮ್ಮನಿಂದ ಆರಂಭ
ನನ್ನ ಕ್ಷೇತ್ರ ಸಂಗೀತ ಎನ್ನುವುದನ್ನು ಮೊದಲು ಗೊತ್ತು ಮಾಡಿಕೊಂಡದ್ದು ಅಮ್ಮ, ನಾನಲ್ಲ! ಅಪ್ಪ ಸಿನೆಮಾ ಸಂಗೀತ ಮಾಡುತ್ತಿದ್ದರು, ಸಿನೆಮಾಗಳಿಗೆ ಸಂಗೀತಗಾರರನ್ನು ಒದಗಿಸಿಕೊಡುತ್ತಿದ್ದರು. ಆಗ ಕಂಪೋಸರ್‌ಗಳು ಅಂದರೆ ಕರ್ನಾಟಕಿ ಸಂಗೀತ ಕಲಾವಿದರೇ ಆಗಿದ್ದರು. ಅವರು ಟ್ಯೂನ್‌ಗಳನ್ನು ಬರೆದುಕೊಡುತ್ತಿದ್ದರು, ಅಪ್ಪ ಅದಕ್ಕೆ ಸಂಗೀತ ವ್ಯವಸ್ಥೆ ಮಾಡುತ್ತಿದ್ದರು. ನಾನು ಒಂಬತ್ತು ವರ್ಷದವನಾಗಿದ್ದಾಗ ಅಪ್ಪ ತೀರಿಕೊಂಡರು. ಅದಾಗಿ ಐದು ವರ್ಷಗಳ ತನಕ ಜೀವನ ಯಾಪನೆಗಾಗಿ ಅಪ್ಪನ ಸಂಗೀತೋಪಕರಣಗಳನ್ನು ಅಮ್ಮ ಬಾಡಿಗೆಗೆ ನೀಡುತ್ತಿದ್ದರು. ಒಂದು ದಿನ ಯಾರೋ ಆ ಸಂಗೀತೋಪಕರಣಗಳನ್ನು ಮಾರಾಟ ಮಾಡಿ ಬಂದ ಹಣದ ಬಡ್ಡಿಯಿಂದ ಬದುಕುವಂತೆ ಸಲಹೆ ನೀಡಿದ್ದರು. ಆಗ ಅಮ್ಮ, "ಇಲ್ಲ, ನನ್ನ ಮಗನಿಗವು ಬೇಕು' ಎಂದು ಹೇಳಿದ್ದಳು! ಸಂಗೀತ ಆಕೆಯ ರಕ್ತದಲ್ಲಿಯೇ ಇತ್ತು. ಆಧ್ಯಾತ್ಮಿಕವಾಗಿಯೂ ಆಕೆ ನನಗಿಂತ ಎಷ್ಟೋ ಎತ್ತರದಲ್ಲಿದ್ದವಳು. ನಿರ್ಧಾರಗಳ ಮಟ್ಟಿಗೂ ಹಾಗೆಯೇ -ಅಚ್ಚುಕಟ್ಟಾದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದವಳು. ಉದಾಹರಣೆಗೆ, ನನ್ನನ್ನು ಸಂಗೀತದಲ್ಲಿ ಮುಂದುವರಿಯಲು ಬಿಟ್ಟದ್ದನ್ನೇ ತೆಗೆದುಕೊಳ್ಳಿ. ಹನ್ನೊಂದನೆಯ ಇಯತ್ತೆಯಿಂದ ನನ್ನನ್ನು ಶಾಲೆ ಬಿಡಿಸಿ ಸಂಗೀತಕ್ಕೆ ಹಾಕಿದಳು. ಅವಳ ನಿರ್ಧಾರ ಸರಿಯಾದದ್ದೇ ಅಲ್ಲವೆ?!

ಬದುಕಿನಿಂದ ಕಲಿತೆ
ಶಾಲೆ - ಕಾಲೇಜಿಗೆ ಹೋಗಿ ಕಲಿಯದಿದ್ದರೆ ಜೀವನ ಮುಳುಗಿಯೇ ಹೋಗುತ್ತದೆ ಎಂಬ ಭಾವನೆ ಆಗ ಇತ್ತು, ಆಗ ಎಂದೇಕೆ, ಈಗಲೂ ಹಾಗೆಯೇ ಅಲ್ಲವೆ? ಕಲಿಯದಿದ್ದರೆ ಟ್ಯಾಕ್ಸಿ ಡ್ರೈವರೋ ರಿಕ್ಷಾ ಓಡಿಸುವುದೋ ಹೀಗೇ ಏನಾದರೂ ಮಾಡಿ ಬದುಕಬೇಕು ಎಂದೇ ಎಲ್ಲರೂ ನಂಬಿದ್ದರು. ಸಹಜವಾಗಿ ನನಗೂ ಭಯವಾಗಿತ್ತು. ಒಂದೆರಡು ವರ್ಷಗಳ ಬಳಿಕ ನಾನು ವರಮಾನ ಗಳಿಸತೊಡಗಿದ ಮೇಲೆ ಮತ್ತೆ ಕಾಲೇಜಿಗೆ ಹೋದರೆ ಹೇಗೆ ಎಂದು ಯೋಚಿಸಿದ್ದಿದೆ. ಶಾಲೆ - ಕಾಲೇಜಿನಲ್ಲಿ ಕಲಿತ ದ್ದಕ್ಕಿಂತ ಬದುಕು ಕಲಿಸುವುದು ಬಲುಮುಖ್ಯ ಎಂಬುದು ಆಗ ನನಗೆ ಗೊತ್ತಿರಲಿಲ್ಲ. ರೂಢಿಗತ ಶಿಕ್ಷಣ ಕೆಟ್ಟದ್ದು ಎಂದರ್ಥವಲ್ಲ. ಆದರೆ ಭಿನ್ನತೆಯಿರುವುದು ಜ್ಞಾನ ಮತ್ತು ವಿವೇಚನೆ, ವಿವೇಕಗಳ ನಡುವೆ. ವಿವೇಚನೆ ಮತ್ತು ವಿವೇಕ ನಿಮ್ಮೊಳಗಿನಿಂದ ಉದಯಿಸುತ್ತದೆ. ಜ್ಞಾನ ಪಡೆದುಕೊಂಡದ್ದು ಹಾಗೂ ಅದು ಕೆಲವೊಮ್ಮೆ ವಿವೇಕ - ವಿವೇಚನೆಗಳಿಗೆ ಅಡ್ಡಗಾಲು ಇರಿಸಬಹುದು. ಬದುಕಿನಿಂದ ನಿರಂತರವಾಗಿ ಕಲಿಯುವ ತಹತಹ ನನ್ನದು. 

ವಿಶ್ವಾಸವಿದ್ದರೆ ಯಶಸ್ಸು
ನನ್ನ ಮೇಲೆ ವಿಶ್ವಾಸ ಇರಿಸಿ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಹೊರಿಸುವವರ ಜತೆಗೆ ನನಗೆ ಕೆಲಸ ಮಾಡಲು ಇಷ್ಟ. ನಮ್ಮ ಜತೆಗೆ ಯಾರಾದರೂ ಸದಾ ಜಗಳ ಮಾಡುತ್ತಾ, ಅಧಿಕಾರ ಪ್ರದರ್ಶಿಸುತ್ತಾ ಇದ್ದರೆ ಕೆಲಸ ಮಾಡುವ ಪ್ರವೃತ್ತಿ, ಆಸಕ್ತಿ ಕುಂದುತ್ತದೆ, 'ಆಹಾ ನೀನು ಬಾಸ್‌, ನೀನೇ ಹೇಳು; ನಾನದನ್ನು ಮಾಡುತ್ತೇನೆ' ಎಂಬ ಭಾವ ಬಲಿಯುತ್ತದೆ. ಕೊನೆಗೆ ನಾವು ಮಾಡುವ ಕೆಲಸ ಹೇಳುವವರು - ಕೇಳುವವರು ಇಲ್ಲದ ಅನಾಥ ಶಿಶುವಿನಂತೆ ಆಗುತ್ತದೆ. ಕೆಲವು ಮಂದಿ ನಮ್ಮ ಸಾಮರ್ಥ್ಯಕ್ಕೆ ಸವಾಲು ಹಾಕುತ್ತಾರೆ, ಅಂಥವರ ಜತೆಗೆ ಕಾರ್ಯನಿರ್ವಹಿಸಿದರೆ ನಮ್ಮಿಂದ ಶ್ರೇಷ್ಠವಾದದ್ದು, ಸೃಜನಶೀಲವಾದದ್ದು ಹೊಮ್ಮುತ್ತದೆ. ಮಣಿರತ್ನಮ್‌, ಇಮ್ತಿಯಾಜ್‌ ಆಲಿ, ಸುಭಾಷ್‌ ಘಾಯ್, ಅಶುತೋಷ್‌ ಗೌರೀಕರ್‌, ಆನಂದ್‌ ಎಲ್‌. ರಾಯ್‌ ಮುಂತಾದ ನಿರ್ದೇಶಕರ ಸಿನೆಮಾಗಳಿಗೆ ಸಂಗೀತ ನೀಡುವುದು ನನ್ನ ಪಾಲಿಗೆ ಅತ್ಯಾನಂದಕರ. ಇವರೆಲ್ಲರೂ ಸಂಗೀತ ಪ್ರವೃತ್ತಿಯುಳ್ಳ ನಿರ್ದೇಶಕರು. ನನಗೆ ಅನಿಸುವುದೇನೆಂದರೆ, ಇಂತಹ ಕೆಲವೇ ನಿರ್ದೇಶಕರ ಜತೆಗೆ ಕೆಲಸ ಮಾಡುವುದು ಮತ್ತು ಅದರಿಂದ ಸಂತೃಪ್ತಿ ಹೊಂದುವುದು ಉತ್ತಮ.

ಮಾರ್ಗದರ್ಶಕರಾಗಿ ಮಣಿರತ್ನಮ್‌ ನನ್ನ ಫೇವರಿಟ್‌. ನಾನು ಯಾವಾಗಲೂ ಸಂಗೀತಾತ್ಮಕ ವಾಗಿಯೇ ಆಲೋಚಿಸುತ್ತೇನೆ ಮತ್ತು ಅದನ್ನು ನನ್ನ ಸಂಗೀತದ ಮೂಲಕ ನೀವೂ ಅನುಭವಿಸಬಹುದು. ಸಂಗೀತ ನಿಮ್ಮ ಆಳದಿಂದ ಹೊರಬರಬೇಕು - ಈ ಮಾತು ಭಾರತೀಯ ಮತ್ತು ಪಾಶ್ಚಾತ್ಯ - ಎರಡೂ ಸಂಗೀತ ಶೈಲಿಗಳ ವಿಚಾರದಲ್ಲಿ ನಿಜ. ಭಾರತೀಯ ಸಂಗೀತಕ್ಕೆ ಹೋಲಿಸಿದರೆ ಪಾಶ್ಚಾತ್ಯ ಸಂಗೀತ ತುಂಬ ಸರಳ ಅನ್ನಿಸಿಬಿಡುತ್ತದೆ. ಅದು ಮೇಲ್ನೋಟಕ್ಕೆ ಮಾತ್ರ. ಸರಳವಾಗಿದ್ದಷ್ಟೇ ಅದು ಸಂಕೀರ್ಣವಾಗಿಯೂ ಇದೆ. ಒಟ್ಟಾರೆಯಾಗಿ ನಾನು ಸಂಗೀತದ ಅಭಿಮಾನಿ, ಸಂಗೀತಾಸಕ್ತ. ಇಂಥದ್ದೇ ಸಂಗೀತ ಅಂತಲ್ಲ, ಎಲ್ಲ ಬಗೆಯ ಸಂಗೀತವೂ ನನಗಿಷ್ಟ. ಒಂದರ್ಥದಲ್ಲಿ ಅದೇ ನನ್ನ ಸಂಗೀತದ ತಣ್ತೀ. ಇಷ್ಟೆಲ್ಲ ಪ್ರಸಿದ್ಧಿ ಇದ್ದರೂ ಹೇಗೆ ವಿನಮ್ರನಾಗಿಯೇ ಉಳಿದಿದ್ದೀ ಎಂದು ಕೆಲವರು ನನ್ನನ್ನು ಪ್ರಶ್ನಿಸಿದ್ದುಂಟು. ಅದು ಹೈವೇಯಲ್ಲಿ ಕಾರು ಚಲಾಯಿಸಿದ ಹಾಗೆ. ಹೆದ್ದಾರಿಯಲ್ಲಿ ವಿಪರೀತ ವೇಗವಾಗಿ ಕಾರು ಓಡಿಸಿದರೆ ಏನಾಗುತ್ತದೆ? - ಎಲ್ಲಾದರೊಂದು ಕಡೆ ಪಲ್ಟಿ ಹೊಡೆಯುತ್ತದೆ. ಹಾಗಾಗಿ ಒಂದು ಹದ ವೇಗದಲ್ಲಿ ಹೋಗುತ್ತಾ ಇರಬೇಕು, ತುಂಬಾ ನಿಧಾನವೂ ಆಗಬಾರದು. ಬದುಕು ಕೂಡ ಹೀಗೆ. ತಲೆ ಎಲ್ಲಿರಬೇಕೋ ಅಲ್ಲೇ ಇರಬೇಕು. ಅಹಂ ನಮ್ಮ ನಿಯಂತ್ರಣ ತಪ್ಪಬಾರದು.

- ಎ. ಆರ್‌. ರಹಮಾನ್‌ ; ಸಂಗೀತ ನಿರ್ದೇಶಕ

Trending videos

Back to Top