CONNECT WITH US  

ಪರಿವರ್ತನೆ ಮುಂದುವರಿಯುತ್ತದೆ

ಚಲಾವಣೆಯ ಶೇ.86ರಷ್ಟಿದ್ದ ನೋಟುಗಳನ್ನು ಒಂದೇಟಿಗೆ ರದ್ದುಗೊಳಿಸುವುದು ಅಂಥಿಂಥ ಹೆಜ್ಜೆಯಲ್ಲ. ಇದಕ್ಕೆ ಅತ್ಯುನ್ನತ ಮಟ್ಟದ ಗೌಪ್ಯತೆಯ ಕಾಪಾಡುವಿಕೆ ಅಗತ್ಯವಾಗಿತ್ತು. ಇಂತಹ ಅನೂಹ್ಯ ಕ್ರಮಕ್ಕೆ 24 ತಾಸುಗಳಲ್ಲಿ ಎಲ್ಲ ಬ್ಯಾಂಕುಗಳನ್ನು ಸಂಪೂರ್ಣ ಸಿದ್ಧಗೊಳಿಸುವುದು ಸಾಧ್ಯವಿರಲಿಲ್ಲ. ಇದರಿಂದ ಅನನುಕೂಲ ಉಂಟಾಯಿತು ಎಂಬುದು ನಿಜ. ಆದರೆ ಉದ್ದೇಶ ಉನ್ನತವಾದದ್ದು; ತಾತ್ಕಾಲಿಕ ಕಷ್ಟ ಸಹಿಸಿ ತೆರಿಗೆ ಕಳ್ಳತನ ಮತ್ತು ಸಮಾನಾಂತರ ಕಾಳ ಅರ್ಥ ವ್ಯವಸ್ಥೆಯನ್ನು ನಿರ್ಮೂಲಗೊಳಿಸಲು ನೆರವಾಗಿ ಎಂದು ಜನರನ್ನು ವಿನಂತಿಸಿದ್ದು ಇದೇ ಕಾರಣಕ್ಕೆ.

ಆರ್‌ಬಿಐ ಗವರ್ನರ್‌ ಆಗಿ ನಾನು ಅಧಿಕಾರ ವಹಿಸಿಕೊಂಡ ಬಳಿಕ 'ನ ಭೂತೋ ನ ಭವಿಷ್ಯತಿ' ಅನ್ನುವ ಎರಡು ಸನ್ನಿವೇಶಗಳನ್ನು ನಿಭಾಯಿಸಬೇಕಾಗಿ ಬಂತು. ಒಂದನೆಯದ್ದು ಜಾಗತಿಕ, ಇನ್ನೊಂದು ಸ್ಥಳೀಯ. ಅಮೆರಿಕದಲ್ಲಿ ಎಲ್ಲರ ಊಹೆಗಳನ್ನು ಸುಳ್ಳು ಮಾಡಿ ಟ್ರಂಪ್‌ ಅಧ್ಯಕ್ಷರಾದರು. ಅದರ ಪರಿಣಾಮವಾಗಿ ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಿ ಉದ್ಭವಿಸಿದ ವಿತ್ತೀಯ ಕಂಪನಗಳನ್ನು ನಿಭಾಯಿಸುವ ಸವಾಲು ಒಂದೆಡೆಯಾದರೆ, ಸ್ಥಳೀಯವಾಗಿ 500 ಮತ್ತು 1,000 ನೋಟುಗಳ ರದ್ದತಿ 'ಜೀವಮಾನದಲ್ಲಿ ಒಮ್ಮೆ ಮಾತ್ರ' ಎಂಬಂಥ ಪರಿವರ್ತನೆ. ಸರಕಾರದ ಈ ನಿರ್ಧಾರದ ಹಿನ್ನೆಲೆ ಮುನ್ನೆಲೆಗಳಲ್ಲಿ ನಿಂತು ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು ಒಂದರ್ಥದಲ್ಲಿ ನನ್ನ ಸಾಮರ್ಥ್ಯಕ್ಕೆ ಎದುರಾದ ಒರೆಗಲ್ಲು.

ಟ್ರಂಪ್‌ ಆಯ್ಕೆ ಒಡ್ಡಿದ ಸವಾಲು
ಅಮೆರಿಕದಲ್ಲಿ ಟ್ರಂಪ್‌ ಆಯ್ಕೆ ಜಾಗತಿಕ ಮಟ್ಟದಲ್ಲಿ ವಿತ್ತೀಯ ಸವಾಲುಗಳನ್ನು ನಮ್ಮೆದುರು ಹರಡಿದೆ. ಎರಡು ಸಂಗತಿಗಳು ಬಹಳ ಸ್ಪಷ್ಟವಾಗಿವೆ - ಮೊದಲನೆಯದಾಗಿ ಅಧ್ಯಕ್ಷ ಟ್ರಂಪ್‌ ಆಡಳಿತದಲ್ಲಿ ಅಮೆರಿಕ ಸರಕು ಸಾಮಗ್ರಿಗಳು, ಸೇವೆ ಮತ್ತು ಹೊರಗುತ್ತಿಗೆಗಳ ವ್ಯಾಪಾರ - ವ್ಯವಹಾರದಲ್ಲಿ ಹಿಂದೆ ಇದ್ದಷ್ಟು ಮುಕ್ತವಾಗಿರುವುದಿಲ್ಲ. ಟ್ರಾನ್ಸ್‌ ಪೆಸಿಫಿಕ್‌ ಪಾರ್ಟ್ನರ್‌ಶಿಪ್‌ ಒಪ್ಪಂದಕ್ಕೆ ತನ್ನ ವಿರೋಧವಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಇನ್ನೊಂದು, ಅಮೆರಿಕದ ಸರಕಾರ ಮೂಲ ಸೌಕರ್ಯವೃದ್ಧಿ ಇತ್ಯಾದಿ ಕ್ಷೇತ್ರಗಳಲ್ಲಿ ಇನ್ನಷ್ಟು ಬಂಡವಾಳ ತೊಡಗಿಸಿ ತನ್ನ ವಿತ್ತೀಯ ಕೊರತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಮೆರಿಕ ತನ್ನ ವಿತ್ತೀಯ ನೀತಿಯನ್ನು ಬಿಗಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇವೆರಡೂ ಅಂಶಗಳು ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಲಿವೆ. ನ. 8ರಿಂದ ಈಚೆಗೆ ಅಮೆರಿಕದ 10 ವರ್ಷಗಳ ಬಾಂಡ್‌ನ‌ ಪ್ರತಿಫ‌ಲ 50 ಪಾಯಿಂಟ್‌ಗಳಷ್ಟು ವೃದ್ಧಿಸಿದೆ. ಇದರ ಪರಿಣಾಮವಾಗಿ ಡಾಲರ್‌ ಕಳೆದ 13 ವರ್ಷಗಳಲ್ಲಿಯೇ ಅತ್ಯಂತ ದೃಢವಾಗಿದ್ದು, ಅಭಿವೃದ್ಧಿಶೀಲ ದೇಶಗಳು ಹಾಗೂ ಅಭಿವೃದ್ಧಿಹೊಂದಿದ ದೇಶಗಳೆರಡರ ಕರೆನ್ಸಿಗಳೆದುರೂ ಮೌಲ್ಯ ವೃದ್ಧಿಸಿಕೊಂಡಿದೆ. ಇದರಿಂದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚು ತೊಂದರೆ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲವಲ್ಲ.

ಅದೃಷ್ಟವಶಾತ್‌, ನಮ್ಮ ಆರ್ಥಿಕತೆ ಈ ಜಾಗತಿಕ ಆಘಾತವನ್ನು ತಡೆದುಕೊಳ್ಳುವಷ್ಟು ಸದೃಢವಾಗಿದೆ. ನಮ್ಮ ಚಾಲ್ತಿ ಖಾತೆಯ ಕೊರತೆ ಉತ್ತಮ ಸ್ಥಿತಿಯಲ್ಲಿದೆ. ದೀರ್ಘ‌ಕಾಲಿಕ ಅಭಿವೃದ್ಧಿಯ ಹಿನ್ನೆಲೆ ನಮಗಿರುವುದರಿಂದ ವಿದೇಶೀ ನೇರ ಹೂಡಿಕೆಗೆ ಆಕರ್ಷಕ ತಾಣವಾಗಿ ನಾವೀಗಲೂ ಗುರುತಿಸಿಕೊಂಡಿದ್ದೇವೆ. ರೂಪಾಯಿಯ ಮೌಲ್ಯ ಮಾರುಕಟ್ಟೆ ಆಧಾರಿತವಾಗಿರುವುದರಿಂದ ಯಾವುದೇ ಅನಿರೀಕ್ಷಿತ ಸನ್ನಿವೇಶಗಳನ್ನು ಎದುರಿ ಸುವ ಸಾಮರ್ಥ್ಯವೂ ನಮಗಿದೆ.

ಸುಳ್ಳಾದ ಆರೋಪಗಳು
ಇಂತಹ ಹೊತ್ತಿನಲ್ಲಿಯೇ 500 ಮತ್ತು 1000 ರೂಪಾಯಿ ನೋಟುಗಳನ್ನು ಹಿಂದೆಗೆದುಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಯಿತು. ನೋಟು ರದ್ದತಿಯ ಬಳಿಕ ಉಂಟಾದ ಬೆಳವಣಿಗೆಗಳು ಭಾರತದ ಜಿಡಿಪಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದೇ ಅನೇಕ ಆರ್ಥಿಕ ತಜ್ಞರು ವಾದಿಸಿದರು. ವಿಪಕ್ಷಗಳೂ ಈ ವಿಚಾರದಲ್ಲಿ ಹಿಂದುಳಿಯಲಿಲ್ಲ. ಆದರೆ, ನ.8ರ ಬಳಿಕದ ಈ 3 ತಿಂಗಳುಗಳಲ್ಲಿ ಏನಾಗಿದೆ ಎಂಬುದು ನಿಮಗೆ ಗೊತ್ತಿದೆ. ಜನರ ಸಂಕಷ್ಟ ಮತ್ತು ಒಟ್ಟಾರೆಯಾಗಿ ಆರ್ಥಿಕತೆ ಎದುರಿಸಿದ ಏರುಪೇರುಗಳನ್ನು ಆರ್‌ಬಿಐ ಹಂತಹಂತವಾಗಿ ಜಾಣ್ಮೆಯಿಂದ ನಿಭಾಯಿಸಿದೆ. ಆರಂಭದಲ್ಲಿ ಆರ್‌ಬಿಐ ನಗದು ಹರಿವು ಹೆಚ್ಚಿಸಲು ಸಿಆರ್‌ಆರ್‌ ಹೆಚ್ಚಿಸಿದಾಗ ಅದು ತಮ್ಮದಲ್ಲದ ತಪ್ಪಿಗೆ ಬ್ಯಾಂಕುಗಳನ್ನು ಶಿಕ್ಷಿಸುವ ಕ್ರಮ ಎಂದು ವಾದಿಸಿದ್ದರು. ಆದರೆ ಅದು ತಾತ್ಕಾಲಿಕವಾಗಿತ್ತು. ಸರಕಾರ ಮಾರುಕಟ್ಟೆ ಸ್ಥಿರೀಕರಣ ಬಾಂಡುಗಳ ಮೂಲಕ ಸನ್ನದ್ಧವಾದಾಗ ಪರಿಸ್ಥಿತಿಯೂ ತಿಳಿಯಾಯಿತು. ನೋಟು ರದ್ದತಿ ಒಂದು ಪರಿವರ್ತನೆಯ ದಾರಿಯನ್ನು ತೆರೆದಿದೆ ಎಂಬುದರಲ್ಲಿ ಸಂಶಯವಿಲ್ಲ. ಭಾರತದಂತಹ ಆರ್ಥಿಕತೆಯಲ್ಲಿ ಇಂತಹ ಸನ್ನಿವೇಶದಲ್ಲಿ ಡಿಜಿಟಲೀಕರಣ, ಡೆಬಿಟ್‌ ಕಾರ್ಡ್‌ಗಳ ಬಳಕೆ, ಇ ವ್ಯಾಲೆಟ್‌ ಬಳಕೆ ಇತ್ಯಾದಿಗಳ ವೇಗವರ್ಧಿಸುವ ಅವಕಾಶ ಹೆಚ್ಚು. ನಗದು ರಹಿತ ವ್ಯವಹಾರಕ್ಕೆ ಶುಲ್ಕ ಇಳಿಕೆಯಂತಹ ಪ್ರೋತ್ಸಾಹಕ ಕ್ರಮಗಳನ್ನು ಆರ್‌ಬಿಐ ಮತ್ತು ಬ್ಯಾಂಕುಗಳು ಕೈಗೊಂಡದ್ದು ಈ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಉದ್ದೇಶದಿಂದಲೇ. 

ನ ಭೂತೋ ನ ಭವಿಷ್ಯತಿ!
ನೋಟು ರದ್ದತಿಯ ನಿರ್ಧಾರ ಸರಕಾರದಿಂದ ಹೊರಬಿದ್ದ ಬಳಿಕ ಆರಂಭದ ದಿನಗಳಲ್ಲಿ ಆರ್‌ಬಿಐ ದೇಶದ ಆರ್ಥಿಕ ಆಗುಹೋಗುಗಳನ್ನು ಪ್ರತಿ ಕ್ಷಣ, ಪ್ರತಿ ತಾಸು, ಪ್ರತಿ ದಿನ ಎಂಬಂತೆ ಗಮನಿಸುತ್ತ ಇರಬೇಕಾಗಿತ್ತು. ಯಾಕೆಂದರೆ, ಆ ನಿರ್ಧಾರ ಮತ್ತು ಆ ಬಳಿಕದ ಪ್ರಕ್ರಿಯೆಗಳು 'ನ ಭೂತೋ ನ ಭವಿಷ್ಯತಿ' ಎಂಬಂಥವು. ಚಲಾವಣೆಯಲ್ಲಿ ಶೇ.86ರಷ್ಟಿದ್ದ ನೋಟುಗಳನ್ನು ಒಂದೇಟಿಗೆ ರದ್ದು ಮಾಡುವುದು ಎಂದರೆ ಸಾಮಾನ್ಯವೇ! ಚಲಾವಣೆಯಿಂದ ರದ್ದಾದ ನೋಟುಗಳನ್ನು ಬ್ಯಾಂಕುಗಳ ಮೂಲಕ ಹಿಂಪಡೆಯಬೇಕಿತ್ತು. ಆ ಜಾಗದಲ್ಲಿ ಹೊಸ ನೋಟುಗಳನ್ನು ಚಲಾವಣೆಗೆ ಹರಿಯಬಿಡಬೇಕಿತ್ತು. ಈ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿ ಉಂಟಾಗುವ ಇನ್ನಿತರ ಆರ್ಥಿಕ ಬೆಳವಣಿಗೆಗಳನ್ನು ಜಾಗರೂಕತೆಯಿಂದ ನಿಭಾಯಿಸಬೇಕಿತ್ತು. ಡೆಬಿಟ್‌ ಕಾರ್ಡ್‌, ಡಿಜಿಟಲ್‌ ವ್ಯಾಲೆಟ್‌ ಇತ್ಯಾದಿಗಳ ಮೂಲಕ ವ್ಯವಹರಿಸುವಂತೆ ನಾವು ಜನರನ್ನು ಕೋರಿಕೊಂಡೆವು. ಯಾಕೆಂದರೆ, ಅಭಿವೃದ್ಧಿ ಹೊಂದಿರುವ ದೇಶಗಳ ಸಾಲಿಗೆ ನೆಗೆತ ಸಾಧಿಸುವ ನಿಟ್ಟಿನಲ್ಲಿ ಭಾರತವನ್ನು ಕಡಿಮೆ ನಗದು ಹಣ ಬಳಸುವ ಆರ್ಥಿಕತೆಯಾಗಿ ರೂಪಿಸಬೇಕಿದೆ. ಜನರು ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ನಗದು ರಹಿತ ಆರ್ಥಿಕತೆಗೆ ಚಾಲನೆ ಸಿಕ್ಕಿದೆ, ಇನ್ನದು ಮುಂದುವರಿಯುತ್ತ ಹೋಗುತ್ತದೆ. 

ನೋಟು ರದ್ದತಿ ಘೋಷಣೆಯಾದ ಆರಂಭಿಕ ದಿನಗಳಲ್ಲಿ ಎಟಿಎಂಗಳೆದು ಸರತಿ ಸಾಲು, ಗೊಂದಲ, ನೂಕುನುಗ್ಗಲು ದೇಶಾದ್ಯಂತ ನಡೆದದ್ದು ನಿಜ. ಆದರೆ, ದಿನಗಳೆದಂತೆ ಪರಿಸ್ಥಿತಿ ಸುಧಾರಿಸುತ್ತಾ ಬಂತು. ಆರ್‌ಬಿಐ ಬ್ಯಾಂಕುಗಳ ಮೂಲಕ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ನಿಗಾ ಇರಿಸಿತ್ತು. ಸರತಿ ಸಾಲುಗಳು ಕರಗುತ್ತಿರುವ ಬಗ್ಗೆ, ಮಾರುಕಟ್ಟೆಗಳಲ್ಲಿ ಸಹಜ ಸ್ಥಿತಿ ಮರು ಸ್ಥಾಪನೆಯಾಗುತ್ತಿರುವ ಬಗ್ಗೆ ಬ್ಯಾಂಕುಗಳು ನಮಗೆ ಕ್ಷಣಕ್ಷಣದ ವರದಿ ತಲುಪಿಸುತ್ತಿದ್ದವು. ಹೊಸ ನೋಟುಗಳನ್ನು ಒದಗಿಸುವುದಕ್ಕಾಗಿ ಎಟಿಎಂಗಳನ್ನು ರಿಫಿಟ್‌ ಮಾಡುವುದು ಒಂದು ಸವಾಲಾಗಿತ್ತು, 40-50 ಸಾವಿರ ಮಂದಿಯನ್ನು ಬರೇ ಈ ಕೆಲಸಕ್ಕಾಗಿ ನಿಯೋಜಿಸಬೇಕಾಗಿ ಬಂತು. ಅಪವಾದಗಳು, ಕೃತ್ರಿಮಗಳು ಇದ್ದರೂ ಎಲ್ಲ ಬ್ಯಾಂಕುಗಳು ನೋಟು ರದ್ದತಿಯ ಬಳಿಕದ ದಿನಗಳಲ್ಲಿ ಸಮರೋಪಾದಿಯಲ್ಲಿ ಕೆಲಸ ಮಾಡಿವೆ ಎಂಬುದು ನಿಜ. ಬ್ಯಾಂಕು ಸಿಬಂದಿಯನ್ನು ನಾನು ಎಷ್ಟು ಕೃತಜ್ಞತೆಯಿಂದ ನೆನೆದರೂ ಸಾಲದು. 

ಪದೇಪದೇ ನಿಯಮ ಬದಲಾಯಿಸಿದ್ಯಾಕೆ?
ನೋಟು ರದ್ದತಿಯ ಬಳಿಕದ ದಿನಗಳಲ್ಲಿ ಆರ್‌ಬಿಐ ದಿನಕ್ಕೊಂದರಂತೆ ನಿರ್ಧಾರಗಳನ್ನು ತೆಗೆದುಕೊಂಡಿದೆ, ನಿಯಮಗಳನ್ನು ಬದಲಾಯಿಸಿದೆ ಎಂದು ದೂರಿದವರಿದ್ದಾರೆ. ಆಗಲೇ ಹೇಳಿದ ಹಾಗೆ, ನೋಟು ರದ್ದತಿ ಹಿಂದೆಂದೂ ನಡೆಯದಿದ್ದ ಘಟನೆ. ಹಾಗಾಗಿ ಏನು ಮಾಡಬೇಕು, ಹೇಗೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ನಮ್ಮೆದುರು ಪೂರ್ವೋದಾಹರಣೆಗಳಿರಲಿಲ್ಲ. ಜನಸಾಮಾನ್ಯರ ಕಷ್ಟವನ್ನು ಕಡಿಮೆ ಮಾಡುವುದಕ್ಕಾಗಿ, ಪ್ರಾಮಾಣಿಕರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲು ನಿಯಮಗಳನ್ನು ಆಗಾಗ ಬದಲಾವಣೆ ಮಾಡಬೇಕಾಯಿತು. 

ಹೊಸ ಕರೆನ್ಸಿ ನೋಟುಗಳು ಗಾತ್ರ ಮತ್ತು ದಪ್ಪದಲ್ಲಿ ಹಳೆಯ ನೋಟುಗಳಿಗಿಂತ ಭಿನ್ನವಾಗಿವೆ ಎಂದು ಅನೇಕ ಜನರು ಕೇಳುತ್ತಿದ್ದಾರೆ. ಹಳೆಯ ನೋಟುಗಳನ್ನು ರದ್ದುಗೊಳಿಸಿದ ಒಂದು ಉದ್ದೇಶವೇ ನಕಲಿ ನೋಟುಗಳನ್ನು ಆರ್ಥಿಕತೆಯಿಂದ ನಿರ್ಮೂಲ ಮಾಡುವುದು. ನಕಲಿ ಮಾಡಲು ಸುಲಭಸಾಧ್ಯವಾಗದಂತೆ ಹೊಸ ನೋಟುಗಳನ್ನು ವಿನ್ಯಾಸ ಮಾಡಲಾಗಿದೆ. ನೋಟು ರದ್ದತಿಯಂತಹ ಗುರುತರ ಹೆಜ್ಜೆಯನ್ನು ತೆಗೆದುಕೊಂಡು ಹೊಸ ನೋಟುಗಳನ್ನು ಪರಿಚಯಿಸುವಾಗ ಅತ್ಯುತ್ತಮ ಗುಣಮಟ್ಟ, ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಬೇಕಲ್ಲವೆ?

ಮುಂದುವರಿಯುತ್ತದೆ!
ನೋಟು ರದ್ದತಿಯಿಂದ ಆದ ತೊಂದರೆಗಳನ್ನು ಲಕ್ಷಿಸಿದರೆ ಇಂತಹ ಹೆಜ್ಜೆ ಬೇಕಿತ್ತೇ ಎಂಬ ಪ್ರಶ್ನೆ ಸಹಜ. ಈ ಕ್ರಮದ ಉದ್ದೇಶವನ್ನು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಯಾವುದೇ ಒಂದು ಅರ್ಥವ್ಯವಸ್ಥೆಗೆ ಅಗತ್ಯವಾಗಿರುವ ಪಾರದರ್ಶಕತೆ, ಕಾಳಧನ ನಿರ್ಮೂಲನೆ ಮಾಡಲು ಕ್ರಮಗಳನ್ನು ಹಂತಹಂತವಾಗಿ ತೆಗೆದುಕೊಳ್ಳಲಾಗಿದೆ. ಆರಂಭದಲ್ಲಿ ಜನಧನ ಖಾತೆಗಳನ್ನು ಮುಂಚೂಣಿಗೆ ತರಲಾಯಿತು, ಆದಾಯ ತೆರಿಗೆ ಕಟ್ಟದವರಿಗೆ ರಿಯಾಯಿತಿ ಸ್ಕೀಂ ಒದಗಿಸಲಾಯಿತು. ಅದರ ಮುಂದುವರಿಕೆಯಾಗಿ ನೋಟು ರದ್ದತಿ. ಈ ಪ್ರಕ್ರಿಯೆ ಮುಂದುವರಿಯುತ್ತದೆ- ದೇಶದ ಆರ್ಥಿಕತೆಯನ್ನು ಸ್ವಚ್ಛಗೊಳಿಸಿ ಸಂಪೂರ್ಣ ಪಾರದರ್ಶಕತೆಯನ್ನು ತರುವ ತನಕ!

- ಊರ್ಜಿತ್‌ ಪಟೇಲ್‌, ಆರ್‌ಬಿಐ ಗವರ್ನರ್‌


Trending videos

Back to Top