CONNECT WITH US  

ಬರೇ ಪ್ರೇಮಕತೆ ಬೋರಿಂಗ್‌

ನಾನು ಮೊದಲು ಪಾತ್ರವನ್ನು ಸೃಷ್ಟಿಸುತ್ತೇನೆ ಆಮೇಲೆ ಅದಕ್ಕೆ ನಟ - ನಟಿಯನ್ನು ಹುಡುತ್ತೇನೆ. ಜನರಲ್ಲಿ ನಿರೀಕ್ಷೆ ಮೂಡಿಸಿ ಅಚ್ಚರಿಪಡಿಸುವುದು ನನಗೆ ಇಷ್ಟ. ನಾನು ಮಾಡುವಂಥ ಸಿನೆಮಾಗಳ ಬಗ್ಗೆ ಜನರು ಸಂಶಯ ಪಡುತ್ತಾರೆ - ಈ ಸಿನೆಮಾದಿಂದ ಮನೋರಂಜನೆ ಸಿಗುತ್ತದೆಯಾ - ಇಲ್ಲವಾ, ನೋಡಬೇಕಾ - ಬೇಡವಾ... ಈ ಬಗೆಯ ಸಂಶಯ ಹುಟ್ಟಿ, ಅದರೊಂದಿಗೆ ಪ್ರೇಕ್ಷಕರು ಸಿನೆಮಾ ವೀಕ್ಷಿಸಿದಾಗ ಅವರಿಗೆ ಚಿತ್ರ ಅಚ್ಚರಿ ಒದಗಿಸುತ್ತದೆ, ಆ ಮೂಲಕ ಮೆಚ್ಚಿಕೆಯಾಗುತ್ತದೆ, ರುಚಿಸುತ್ತದೆ.

'ರಂಗೂನ್‌' ಸಿನೆಮಾ ಇದೀಗಷ್ಟೇ ಬಿಡುಗಡೆಯಾಗಿದೆ. ನನ್ನ ಯಾವುದೇ ಸಿನೆಮಾ ಬಿಡುಗಡೆಯಾಗುವಾಗ ಅದರ ಸೋಲು - ಗೆಲವಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ನನ್ನ ಜಾಯಮಾನ. ಸುದೀರ್ಘ‌ ನಿರ್ದೇಶಕನ ಬದುಕಿನ ಅನುಭವ ನನಗೆ ಅಂಥದೊಂದು ಸಂಯಮವನ್ನು ಕಲಿಸಿಕೊಟ್ಟಿದೆ. ಯಾಕೆ ಗೊತ್ತಾ? ಯಶಸ್ಸಿನ ಸಮಯದಲ್ಲಿ ಹಿಗ್ಗಿದರೆ ಸೋಲಿನ ಸಮಯದಲ್ಲಿ ಕುಗ್ಗಬೇಕಾಗುತ್ತದೆ! ಅವೆರಡಕ್ಕೂ ಅವಕಾಶ ಮಾಡಿಕೊಡದೆ ನಿರ್ಲಿಪ್ತನಾಗಿ ಇರುವುದು ಬಹಳ ಒಳ್ಳೆಯದು ಅಲ್ಲವೆ!? ಹಾಗೆಂದು ಸೋಲಿನ ಬಗ್ಗೆ ನನಗೆ ಭಯವಿದೆ ಎಂದಲ್ಲ. ಸೋತಾಗ ಎಲ್ಲರ ಹಾಗೆ ನನಗೂ ದುಃಖವಾಗುತ್ತದೆ, ನೈರಾಶ್ಯ ಮೂಡುತ್ತದೆ. ಆದರೆ ಅದು ತಾತ್ಕಾಲಿಕವಾದದ್ದು. ನಾನು ಯಾವುದಕ್ಕೂ ಭಯಪಡುವುದಿಲ್ಲ ಎಂದೂ ಅಲ್ಲ. ಚಿತ್ರಕತೆ ಬರೆಯಲು ಆರಂಭಿಸಿದಾಗ ಸಣ್ಣದೊಂದು ಭಯ ಶುರುವಾಗುತ್ತದೆ. ಚಿತ್ರ ಬಿಡುಗಡೆಗೆ ಸಿದ್ಧವಾಗುವ ತನಕ ಅದು ಹಂತಹಂತವಾಗಿ ಬೆಳೆಯುತ್ತಾ ಹೋಗುತ್ತದೆ. ಅಂಥದೊಂದು ಭಯ ದೊಡ್ಡದನ್ನು ಸಾಧಿಸಲು ಬಯಸುವ ಪ್ರತಿಯೊಬ್ಬರಿಗೂ ಬೇಕೇ ಬೇಕು, ಇಲ್ಲವಾದರೆ ಖಂಡಿತ ಸೋತು ಹೋಗುತ್ತೇವೆ. 

ಮಹಾ ಮಹಾ ನಿರ್ದೇಶಕರು ಕೂಡ ಒಂದಲ್ಲ ಒಂದು ಕೆಟ್ಟ ಸಿನೆಮಾ ಮಾಡಿರುವುದನ್ನು ನೋಡಿದ್ದೇನೆ. ಪ್ರಾಯಃ ಸತ್ಯಜಿತ್‌ ರೇ ಮತ್ತು ಸ್ಟೀವನ್‌ ಸ್ಪೀಲ್‌ಬರ್ಗ್‌ ಮಾತ್ರ ಈ ಮಾತಿಗೆ ಅಪವಾದ. ತಾನು ಮಾಡುತ್ತಿರುವುದರ ಬಗ್ಗೆ ಅತಿಯಾದ ವಿಶ್ವಾಸ, ಮಾಡಿದ್ದೆಲ್ಲವೂ ಸರಿ ಎಂಬ ಅತಿ ನಂಬಿಕೆ ಹುಟ್ಟಿಕೊಂಡಾಗ ಅದರ ಜತೆಗೇ ಸೋಲು ಕೂಡ ಹುಟ್ಟಿಕೊಳ್ಳುತ್ತದೆ. 

ನಿಮಗ್ನನಾಗದೆ ಯಶಸ್ಸಿಲ್ಲ
ಸಂಪೂರ್ಣವಾಗಿ ತೊಡಗಿಕೊಳ್ಳದೆ, ಇಳಿದು ಕೆಲಸ ಮಾಡದೆ ಯಾವನೂ ಸಿನೆಮಾ ನಿರ್ದೇಶಕನಾಗಲಾರ. ಚಿತ್ರಕತೆ ಬರೆಯುವುದು, ಹಣ ಒಟ್ಟುಗೂಡಿಸುವುದು, ನಟ ನಟಿಯರನ್ನು ನಿಭಾಯಿಸುವುದು... ಹೀಗೆ ಎಲ್ಲದರಲ್ಲೂ ಸಂಪೂರ್ಣವಾಗಿ ತೊಡಗಿ ಕೆಲಸ ಮಾಡಿದರಷ್ಟೇ ಆತ ಸಿನೆಮಾ ನಿರ್ದೇಶಕ. ಶೂಟಿಂಗ್‌ - ರೀ ಶೂಟಿಂಗ್‌ ಮಾಡಬೇಕು, ಹಿನ್ನೆಲೆ ಸಂಗೀತ ಹೊಂದಿಸಬೇಕು, ಮುನ್ನೂರು - ನಾನ್ನೂರು ಜನರನ್ನು ಏಕಕಾಲಕ್ಕೆ ನಿಭಾಯಿಸಬೇಕು, ಸಂಕಲನ ಆಗಬೇಕು, ಚಿತ್ರಕತೆ - ಸಂಭಾಷಣೆಗಳನ್ನು ಮತ್ತೆ ಮತ್ತೆ ಪರಿಷ್ಕರಿಸಿ ಅಂತಿಮ ಸ್ಪರ್ಶ ಕೊಡಬೇಕು... ಯಾರಾದರೂ ಇಷ್ಟಪಡಲಿ ಅಥವಾ ಬಿಡಲಿ; ನಿಮ್ಮ ಕೆಲಸವನ್ನಂತೂ ನೀವು ಪೂರ್ಣ ಮಗ್ನತೆಯಿಂದ ಮಾಡಲೇಬೇಕು. ಇಲ್ಲಿ ಗಮನಿಸಬೇಕಾದ ಒಂದು ವಿಚಾರವಿದೆ. ಹೀಗೆ ತೊಡಗಿಕೊಂಡು ಕೆಲಸ ಮಾಡುವಾಗ ಅದು ನಮ್ಮೊಬ್ಬರದೇ ಮೇಲುಗೈ ಅಥವಾ ಏಕಚಕ್ರಾಧಿಪತ್ಯ ಆಗದ ಹಾಗೆಯೂ ಎಚ್ಚರ ವಹಿಸಬೇಕು! ಬೇರೆಯವರು ಅಥವಾ ನಿಮ್ಮದೇ ಅಂತರಂಗ ನುಡಿಯುವ ಎಚ್ಚರಿಕೆಗಳನ್ನು, ಹಿತವಚನಗಳನ್ನು ಆಲಿಸಿ ಮುಂದುವರಿಯುವ ಸಂಯಮವೂ ನಮ್ಮಲ್ಲಿದ್ದರೆ ಯಶಸ್ಸು ಖಚಿತ. ಇಲ್ಲದೇ ಹೋದರೆ ತೊಂದರೆ.

ವಾಸ್ತವದ ಅರಿವುಳ್ಳ ಮಹತ್ವಾಕಾಂಕ್ಷೆ
ಸಿನೆಮಾ ಮಾಡುವಾಗ ಅದರ ಹಿಂದೆ ಒಂದು ಮಹತ್ವಾಕಾಂಕ್ಷೆ ಇರಬೇಕಾಗುತ್ತದೆ. ಆದರೆ ಈ ಮಹತ್ವಾಕಾಂಕ್ಷೆಯ ಜತೆಗೇ ಇರಬೇಕಾದದ್ದು ವಾಸ್ತವದ ಅರಿವು. ಕಾಲುಗಳು ಸದಾ ನೆಲದಲ್ಲಿ ಭದ್ರವಾಗಿ ಊರಿರಬೇಕು. ಸಿನೆಮಾ ಮಾಡುವಾಗ ಕೆಲವೊಮ್ಮೆ ನಮ್ಮ ಐಡಿಯಾಗಳನ್ನು ಸಂಕೋಚಗೊಳಿಸಬೇಕಾಗುತ್ತದೆ, ಇನ್ನು ಕೆಲವೊಮ್ಮೆ ಹಿಗ್ಗಿಸಬೇಕಾಗುತ್ತದೆ. ಉದಾಹರಣೆಗೆ, ದಿಲ್ಲಿ ಚಳಿಗಾಲದ, ಸೂರ್ಯನ ಬೆಳಕಿಲ್ಲದ ದಿನ ಒಂದು ಮನೆಯ ದೃಶ್ಯವನ್ನು ಹೇಗೆ ತೋರಿಸುತ್ತೀರಿ? ಕವಿತೆಯಲ್ಲಾದರೆ ಪದಗಳಲ್ಲಿ ವರ್ಣಿಸಬಹುದು. ಆದರೆ ಸಿನೆಮಾಕ್ಕಾಗುವಾಗ ಅದಷ್ಟು ಸುಲಭವಲ್ಲ. ಮನೆಯ ದೃಶ್ಯ ವಿವರಗಳ  ಜತೆಗೆ ಏಕಾಂಗಿತನ, ಏಕತಾನತೆಯ ಭಾವಗಳೂ ಉದ್ಭವಿಸುತ್ತವೆ. ದೃಶ್ಯಗಳಿಂದ ಹೊಮ್ಮುವ ಈ ಭಾವಗಳು ಬೇಕೋ ಬೇಡವೋ ಎಂಬ ವಾಸ್ತವತೆಯ ಅರಿವು ನಮಗಿರಬೇಕು.   

ಹೈದರ್‌ ಸಿನೆಮಾದ ಕೆಲವು ದೃಶ್ಯಗಳನ್ನು ಗಮನಿಸಿ. ಇಡೀ ಸಿನೆಮಾದ ಗಾಢವಾಗಿ ಕಾಡುವ ಗುಣವನ್ನು ನಾನು ಅಲ್ಲಿ ಆರಿಸಿಕೊಂಡ ಹಿನ್ನೆಲೆ ಭೂದೃಶ್ಯಗಳು ಹೈಲೈಟ್‌ ಮಾಡುತ್ತವೆ. ತಾವೇ ಸಿನೆಮಾದ ಪಾತ್ರಗಳಾಗುತ್ತವೆ. ನಾನು ನನ್ನೆಲ್ಲ ಸಿನೆಮಾಗಳಲ್ಲಿ ಪಾತ್ರಗಳ ಒಳತೋಟಿ ಮತ್ತು ಕಥನವನ್ನು ಪ್ರತಿಫ‌ಲಿಸುವ ಹಿನ್ನೆಲೆ ದೃಶ್ಯಗಳನ್ನು ಎಚ್ಚರಿಕೆಯಿಂದ ಆರಿಸಿಕೊಳ್ಳುತ್ತೇನೆ. ಹೈದರ್‌ ಸಿನೆಮಾದಲ್ಲಿಯ ಈಡಿಪಸ್‌ ಕಾಂಪ್ಲೆಕ್ಸ್‌ನಂತೆ ನನ್ನ ಸಿನೆಮಾಗಳು ಹಲವು ಪದರಗಳಲ್ಲಿ ನಿಹಿತವಾದ ಸಂಕೀರ್ಣ ಭಾವನೆಗಳನ್ನು ಅಭಿವ್ಯಕ್ತಿಪಡಿಸುತ್ತವೆ. ಇದನ್ನು ನಿಭಾಯಿಸುವುದು, ನಟ - ನಟಿಯರಿಂದ ನಿರೀಕ್ಷೆಗೆ ತಕ್ಕ ಅಭಿನಯ ಹೊರತರುವುದು ಸುಲಭದ ಕೆಲಸವಲ್ಲ. ನಟ - ನಟಿಯರು ಅದರ ಬಗ್ಗೆ ಕಂಫ‌ಟೇìಬಲ್‌ ಆಗಿದ್ದಾಗ ಮತ್ತು ನನ್ನ ಮೇಲೆ ವಿಶ್ವಾಸ ಹೊಂದಿದ್ದಾಗ ಇದು ಸಾಧ್ಯವಾಗುತ್ತದೆ. ಉದಾಹರಣೆಗೆ, ಹೈದರ್‌ನಲ್ಲಿ ತಬು, ಶಾಹಿದ್‌ ತುಟಿಗಳನ್ನು ಚುಂಬಿಸುತ್ತಾಳೆ ಮತ್ತು ಅದು ಅಶ್ಲೀಲವಾಗಿ ಕಾಣಿಸುವುದಿಲ್ಲ. ಅಂಥ ಕ್ರಿಯೆಗಳನ್ನು ಪಾತ್ರಧಾರಿಗಳು ಅನುಭವಿಸಿ ಅಭಿನಯಿಸಿದರೆ ಚೆನ್ನಾಗಿ ಮೂಡಿಬರುತ್ತದೆ ಮತ್ತು ಅಂಥವಕ್ಕೆ ವಿರೋಧವೂ ಉದ್ಭವಿಸುವುದಿಲ್ಲ. 

ಒಂದು ಸಿನೆಮಾ ಸಿದ್ಧವಾಗಿ ಪ್ರದರ್ಶನಗೊಂಡಾಗ ನಿರ್ದೇಶಕ ಪ್ರೇಕ್ಷಕರ ಮುಂದೆ ಭಾವನಾತ್ಮಕವಾಗಿ ಬೆತ್ತಲಾಗಿರುತ್ತಾನೆ. ಆಗ ಮುಖ್ಯವಾಗುವುದು ಅವನು ಆ ಸಿನೆಮಾ ಮಾಡಿದ ಉದ್ದೇಶ ಏನು ಎಂಬುದು. ಅದು ಕೆಟ್ಟದ್ದಾಗಿರಬಹುದು, ಒಳ್ಳೆಯದಾಗಿರಬಹುದು ಅಥವಾ ಒಳ್ಳೆಯದು - ಕೆಟ್ಟದ್ದರ ನಡುವೆ ಇರಬಹುದು. ಅಂತೂ ಆತ ಬಟಾಬಯಲಾಗಿ ಪ್ರೇಕ್ಷಕರ ಎದುರಿಗಿರುತ್ತಾನೆ. ಚಿತ್ರವನ್ನು ಜನರು ಸ್ವೀಕರಿಸುತ್ತಾರೋ ಇಲ್ಲವೋ ಎಂಬುದು ಆಗ, ಅವನ ಉದ್ದೇಶವನ್ನು ಆಧರಿಸಿ ನಿರ್ಧಾರವಾಗುತ್ತದೆ. 

ಸ್ಟಾರ್‌ ನಟನಟಿಯರು ಮಕ್ಕಳಂತೆ!
ನಟ ನಟಿಯರನ್ನು ನಿಭಾಯಿಸಬೇಕು ಎಂದು ಆಗ ಹೇಳಿದೆನಲ್ಲ! ನಿಜಕ್ಕೂ ಕೆಲವೊಮ್ಮೆ ಅದು ಕಷ್ಟದ ಕೆಲಸವಾಗಿಬಿಡುತ್ತದೆ, ಹಠಮಾರಿ ಮಕ್ಕಳನ್ನು ರಮಿಸಿದ ಹಾಗೆ! ನಟನಟಿಯರನ್ನು ಅಕ್ಷರಶಃ ಮಕ್ಕಳ ಹಾಗೆ ನೋಡಿಕೊಳ್ಳಬೇಕಾಗುತ್ತದೆ. ಆದರೆ, ಅವರು ಪರಸ್ಪರ ಸರಸವಾದ ಹೊಂದಾಣಿಕೆ ಹೊಂದಿದ್ದರೆ ನಮ್ಮ ಕೆಲಸ, ಸಿನೆಮಾದ ಕೆಲಸ ಎರಡೂ ಬಹಳ ಸುಲಭವಾಗಿಬಿಡುತ್ತದೆ. ಮಕ್ಕಳ ಸಿನೆಮಾದಿಂದ ತೊಡಗಿ ಶೇಕ್ಸ್‌ಪೀರಿಯನ್‌ ಟ್ರಾಜೆಡಿಗಳ ತನಕ ಹಲವು ವಿಧದ ಕತೆಗಳನ್ನು ಸಿನೆಮಾ ಮಾಡಿದ್ದೇನೆ. ಆದರೆ 'ರಂಗೂನ್‌' ನನ್ನ ಮೊದಲ ಪ್ರಣಯ ಕಥೆಯುಳ್ಳ ಸಿನೆಮಾ. ಪ್ರಣಯ ಯಾವಾಗಲೂ ನನಗೆ ಬಹಳ ಆಸಕ್ತಿದಾಯಕವಾದ ಭಾವ. ಆದರೆ ಬರೇ ಪ್ರೀತಿ - ಪ್ರೇಮ ಬೋರಿಂಗ್‌ ಕೂಡ ಆಗಬಲ್ಲುದು. ಯಾಕೆಂದರೆ ಆರಂಭದಲ್ಲಿ ಪ್ರಣಯ ಒಂದು ನಿಗೂಢ ರಹಸ್ಯದ ಹಾಗೆ ಭಾಸವಾಗುತ್ತದೆ, ಮುಂದುವರಿಯುತ್ತಿದ್ದಂತೆ ಅದು ತಟ್ಟುವ, ಕಾಡುವ ಗುಣವನ್ನು ಕಳೆದುಕೊಂಡು ಏಕತಾನವಾಗುತ್ತದೆ. ಹೀಗಾಗಿ ರಂಗೂನ್‌ ಅನ್ನು ಒಂದು ಉದಾತ್ತ, ಮೆಲೊಡ್ರಾಮಾಟಿಕ್‌ ಪ್ರೇಮ ಕಥೆಯಾಗಿ ರೂಪಿಸಿದ್ದೇನೆ. 

ರಂಗೂನ್‌ನ ಪೋಸ್ಟರ್‌ 'ಲವ್‌ ಆ್ಯಂಡ್‌ ಡಿಸೀಟ್‌' ಅಂದರೆ ಪ್ರೇಮ ಮತ್ತು ವಂಚನೆ ಅನ್ನುತ್ತದೆ. ಓಂಕಾರ ಹಾಗೂ ಮಕೂºಲ್‌ ಕೂಡ ಇಂಥದ್ದೇ ಅಡಿ ಬರಹಗಳನ್ನು ಹೊಂದಿವೆ. ಈ ಇಬ್ಬಂದಿತನ ನನಗೆ ಬಹಳ ಇಷ್ಟವಾದ ಸಂಗತಿಯೇ ಅನ್ನುವುದು ಹಲವರ ಪ್ರಶ್ನೆ. ಮನುಷ್ಯನಿಗೆ ಕೆಲವು ಮೂಲಭೂತವಾದ ಭಾವನೆಗಳಿರುತ್ತವೆ ಮತ್ತು ಅವು ಒಂದಕ್ಕೊಂದು ಅಂತರ್‌ ಸಂಬಂಧ ಹೊಂದಿರುತ್ತವೆ. ಸದ್ಭಾವನೆಗಳಿಗೆ ದುರ್ಭಾವನೆಗಳೂ ದುರ್ಭಾವನೆಗಳಿಗೆ ಸದ್ಭಾವನೆಗಳೂ ಪ್ರತಿವರ್ತಿಯಾಗಿ ಸದಾ ಕೆಲಸ ಮಾಡುತ್ತಿರುತ್ತವೆ, ಒಂದಿಲ್ಲದೆ ಇನ್ನೊಂದಿಲ್ಲ. ಹೀಗಾಗಿ ಯಾವುದೇ ಸಿನೆಮಾದಲ್ಲಿ ಒಂದು ಭಾವನೆಯನ್ನು ಎತ್ತಿಕೊಂಡರೆ ಉಳಿದದ್ದು ಅದರ ಹಿಂದೆ ತಾನಾಗಿ ಬರುತ್ತದೆ!

ಹಣ ಬೇಕು!
ಸಿನೆಮಾದ ಬಾಕ್ಸ್‌ ಆಫೀಸ್‌ ಯಶಸ್ಸು ಅನ್ನುವುದು ಒಂದಿಷ್ಟು ಚೇತೋಹಾರಿ ಮದ್ಯ, ವಿಮಾನದಲ್ಲಿ ಬಿಸಿನೆಸ್‌ ಕ್ಲಾಸ್‌ ಟಿಕೆಟ್‌ ಮತ್ತು ಪ್ರತೀ ಬಾರಿ ಇನ್ನೊಂದು ಸಿನೆಮಾ ಮಾಡುವುದಕ್ಕಾಗಿ ನನಗೆ ಬೇಕೇ ಬೇಕು. ಒಂದು ಸಿನೆಮಾ ಯಶಸ್ವಿಯಾಗಿ ಸಾಕಷ್ಟು ಹಣ ತಂದುಕೊಟ್ಟರೆ ಮತ್ತೂಂದು ಸಿನೆಮಾವನ್ನು ಭಯರಹಿತನಾಗಿ, ಮುಕ್ತನಾಗಿ ತಯಾರಿಸಲು ನನಗೆ ಸಾಧ್ಯವಾಗುತ್ತದೆ. 

ಈಗಿನ ರೊಮ್ಯಾಂಟಿಕ್‌ ಸಿನೆಮಾಗಳು ಮೊಘಲ್‌ ಎ ಅಜಮ್‌ ಅಥವಾ ಆ ಕಾಲದ ಇನ್ನಿತರ ಪ್ರಸಿದ್ಧ ಸಿನೆಮಾಗಳಂತೆ ಚಿರಸ್ಥಾಯಿ ಯಾಗುವುದಿಲ್ಲ. ಇದಕ್ಕೆ ಕಾರಣ ಇವತ್ತಿನ ಯುವಕ - ಯುವತಿಯರು. ಈಗಿನ ಯುವಜನರು ಬುದ್ಧಿವಂತರು, ತಿಳಿವಳಿಕೆಯುಳ್ಳವರು. ಆದರೆ, ಅವರಿಗೆ ರಸಾಭಿಜ್ಞತೆ ಅನ್ನುವುದು ಏನೇನೂ ಇಲ್ಲ. ನಾವು ಬೆಳೆದುಬಂದದ್ದು ಗಝಲ್‌ ಮತ್ತು ಕಾವ್ಯಗಳ ಪರಿಸರದಲ್ಲಿ. ಆದರೆ ಈಗ ಕಳೆದ 15-20 ವರ್ಷಗಳಿಂದ ಬರೇ ಡಾನ್ಸ್‌ ಮ್ಯೂಸಿಕ್‌, ಪಾರ್ಟಿ ಮ್ಯೂಸಿಕ್‌ ಮಾತ್ರ. ಇದನ್ನಷ್ಟೇ ಕೇಳಿ ಬೆಳೆದ ಯುವಕ-ಯುವತಿಯರಿಗೆ ಸೌಂದರ್ಯ ಪ್ರಜ್ಞೆ, ಕಲಾಪ್ರಜ್ಞೆ ಎಂಬುದೆಲ್ಲ ಎಲ್ಲಿರುತ್ತದೆ ಹೇಳಿ! ಅವರು ಬುದ್ಧಿವಂತರು, ಆದರೆ ಅವರಿಗೆ ಪರಂಪರೆಯ ತಾಯಿಬೇರು ಎಂಬುದೇ ಕಡಿದು ಹೋಗಿ ಬಿಟ್ಟಿದೆ.

- ವಿಶಾಲ್‌ ಭಾರದ್ವಾಜ್‌ ; ಬಾಲಿವುಡ್‌ ಸಿನೆಮಾ ನಿರ್ದೇಶಕ

Trending videos

Back to Top