ಬದುಕೆಂಬ ಜೋಕಾಲಿ ಮತ್ತು ಪಂಕ್ಚರ್ ಗಾಲಿ

ಅದುವರೆಗೂ ಕೇವಲ ಕಾರಿನ ತಾಂತ್ರಿಕ ಮೆಂಟೇನೆನ್ಸ್ ಬಗ್ಗೆ ಮಾತನಾಡುತ್ತಿದ್ದ ಯಾದವ್‌ಜೀ ಏಕಾಏಕಿ ತಮ್ಮ ಮಾತುಗಳಿಗೆ ದಾರ್ಶನಿಕ ಸ್ಪರ್ಷ ಕೊಡುತ್ತಾ ಹೋದರು. ಕೇವಲ 11ನೇ ತರಗತಿಯವರೆಗೂ ಓದಿರುವ ಆ ವ್ಯಕ್ತಿ ತಮಗಿಂತ ಹೆಚ್ಚು ಓದಿದವರಿಗಿಂತಲೂ ಜೀವನದ ಬಗ್ಗೆ ಉತ್ತಮವಾಗಿ ತಿಳಿದುಕೊಂಡದ್ದನ್ನು, ವಿಭಿನ್ನ ದೃಷ್ಟಿಕೋನ ಹೊಂದಿರುವುದನ್ನು ನೋಡಿ ನನಗೆ ವಿಸ್ಮಯವಾಯಿತು.
ಥರಗುಟ್ಟುವ ಚಳಿಯಲ್ಲಿ ನಾವು ಲಕ್ನೋದಿಂದ ಅಯೋಧ್ಯೆಯತ್ತ ಹೊರಟೆವು. ಲಕ್ನೋ ದಾಟಿ ಹೆಚ್ಚೆಂದರೆ ಹತ್ತು ಕಿಲೋಮೀಟರ್ ಮುಂದೆ ಬಂದಿದ್ದೆವೇನೋ, ಅಷ್ಟರಲ್ಲೇ ಅಚಾನಕ್ಕಾಗಿ ನಮ್ಮ ಕಾರು ಅಲುಗಾಡ ಲಾರಂಭಿಸಿತು. ನನ್ನ ಡ್ರೈವರ್ ಧರ್ಮ ಯಾದವ್ ಬಹಳ ಕೌಶಲ್ಯದಿಂದ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದರು. ಇಳಿದು ನೋಡಿದರೆ ಹಿಂದಿನ ಟಯರ್ ಪಂಕ್ಚರ್ ಆಗಿದ್ದು ಕಾಣಿಸಿತು. ನಮ್ಮ ಪುಣ್ಯಕ್ಕೆ ಕಾರು ನಿಂತ ಜಾಗದಿಂದ 200 ಹೆಜ್ಜೆ ಅಂತರದಲ್ಲೇ ಟಯರ್ ಶೋರೂಂ ಇತ್ತು. ಕೂಡಲೇ ಧರ್ಮಯಾದವ್ ಅವರು ಪಂಕ್ಚರ್ ಹಾಕಿಸುವ ಬದಲು ಹೊಸ ಟಯರ್ ತರುವುದೇ ಸೂಕ್ತವೆಂದು ನಿರ್ಧರಿಸಿ ಶೋರೂಂನತ್ತ ಹೆಜ್ಜೆಯಿಟ್ಟರು. ನಾನು ಸುಮ್ಮನೇ ಯಾದವ್‌ಜಿ ಕೆಲಸ ನೋಡುತ್ತಾ ನಿಂತೆ...
ಕಾರು ಹೊರಟಾಗ ನಾನು ಯಾದವ್‌ಜೀಗೆ ಕೇಳಿದೆ, ""ನೀವು ಪೂರ್ತಿ ಟಯರ್ ಬದಲಿಸಿಬಿಟ್ಟಿರಲ್ಲಾ? ಪಂಕ್ಚರ್ ಸರಿಪಡಿಸಿದ್ದರೆ ನಡೆಯುತ್ತಿರಲಿಲ್ವೇ?'' ಆಗ ಅವರು ಹೇಳಿದರು- ""ಭೈಯ್ನಾ (ಧರ್ಮ ಯಾದವ್ ಅವರು ಮೊದಲ ದಿನದಿಂದಲೂ ನನ್ನನ್ನು ಭೈಯ್ನಾ ಎಂದೇ ಆತ್ಮೀಯವಾಗಿ ಬೋಧಿಸುತ್ತಾರೆ), ಯಾವುದೇ ಟಯರ್ ನಾಲ್ಕೈದು ಬಾರಿ ಪಂಕ್ಚರ್ ಆಯಿತೆಂದರೆ ಅದನ್ನು ಸರಿಪಡಿಸುತ್ತಾ ಕೂಡುವುದಕ್ಕಿಂತ ಬದಲಿಸಿಬಿಡೋದೇ ಸರಿ. ಅದರಲ್ಲೂ ನಮ್ಮ ಯಾತ್ರೆ ದೀರ್ಘವಾಗಿತ್ತೆಂದರೆ ಹೊಸತು ಹಾಕುವುದೇ ಒಳಿತು. ಹಳೇ ಟಯರ್‌ನ ಮೋಹ ಬಿಡದಿದ್ದರೆ ಯಾತ್ರೆಯ ನಡುವೆ ಅದು ನಿಮಗೆ ಯಾವಾಗ ಬೇಕಾದರೂ ಮತ್ತೆ ಕಷ್ಟ ಕೊಡಬಹುದು''
ಅದುವರೆಗೂ ಕೇವಲ ಕಾರಿನ ತಾಂತ್ರಿಕ ಮೆಂಟೇನೆನ್ಸ್ ಬಗ್ಗೆ ಮಾತನಾಡುತ್ತಿದ್ದ ಯಾದವ್‌ಜೀ ಏಕಾಏಕಿ ತಮ್ಮ ಮಾತುಗಳಿಗೆ ದಾರ್ಶನಿಕ ಸ್ಪರ್ಷ ಕೊಡುತ್ತಾ ಹೋದರು- ""ಭೈಯ್ನಾ, ನಮ್ಮ ಸಂಬಂಧಗಳ ವಿಚಾರದಲ್ಲೂ ನಾವು ಇದೇ ನಿಯಮ ಪಾಲಿಸಬೇಕು. ನಾವು ಜೀವನವನ್ನು ಯಾತ್ರೆ ಅಂತ ಕರೀತೀವಿ. ಈ ಯಾತ್ರೆಯಲ್ಲಿ ನಾವೇ ಕಾರು. ನಮ್ಮ ಸಂಬಂಧಿಕರು, ಮಿತ್ರರು ಇದರ ಟಯರ್‌ಗಳಿದ್ದಂತೆ. ಪದೇ ಪದೆ ಕಷ್ಟ ಕೊಡುವ, ಮುನಿಸಿಕೊಳ್ಳುವ, ವಿಘ್ನ ಎದುರೊಡ್ಡುವ ಸಂಬಂಧಿಕರು ಮತ್ತು ಸ್ನೇಹಿತರು ಪಂಕ್ಚರ್ ಆಗುವ ಟಯರ್ ಇದ್ದಂತೆ. ಪಯಣದ ನಡುವೆ ಒಂದು ಟಯರ್ ಪಂಕ್ಚರ್ ಆಯಿತೆಂದರೂ ಇಡೀ ಯಾತ್ರೆಯೇ ದುರ್ಘಟನೆಯಲ್ಲಿ ಕೊನೆಗೊಳ್ಳಬಹುದು. ಸಹಾಯಕ್ಕೆ ಪ್ರತಿ ಬಾರಿಯೂ ಶೋರೂಂ ಸಿಗುವುದಿಲ್ಲವಲ್ಲ!''
ಕೇವಲ 11ನೇ ತರಗತಿಯವರೆಗೂ ಓದಿರುವ ಈ ವ್ಯಕ್ತಿ ತಮಗಿಂತ ಎಷ್ಟೋ ಪಟ್ಟು ಓದಿದವರಿಗಿಂತಲೂ ಜೀವನದ ಬಗ್ಗೆ ಹೆಚ್ಚು ತಿಳಿದುಕೊಂಡದ್ದನ್ನು, ವಿಭಿನ್ನ ದೃಷ್ಟಿಕೋನ ಹೊಂದಿರುವುದನ್ನು ನೋಡಿ ನನಗೆ ವಿಸ್ಮಯವಾಯಿತು. ಕೂಡಲೇ ನನ್ನ ಮನಸ್ಸಿನಲ್ಲಿ ರೂಪಕಗಳು ಸೃಷ್ಟಿಯಾಗಿಬಿಟ್ಟವು. ಇಡೀ ಲಕ್ನೋ ನಗರಿ ನಮ್ಮ ವರ್ತನೆಗಳು ಮತ್ತು ಸಂಸ್ಕಾರಗಳಾಗಿ ಬದಲಾಯಿತು. ನಾವು ತಲುಪಬೇಕಿದ್ದ ಅಯೋಧ್ಯೆ ಜೀವನದ ಆಧ್ಯಾತ್ಮಿಕ ಚೇತನ ಮತ್ತು ಉಪಲಬ್ಧಿಗಳಾಗಿ ಗೋಚರಿಸಲಾರಂಭಿಸಿತು. ಒಂದು ವೇಳೆ ನಮ್ಮ ಜೀವನರೂಪಿ ವಾಹನದ ಡ್ರೈವರ್ "ಧರ್ಮ'(ರಿಲಿಜನ್) ಆಗಿಬಿಟ್ಟರೆ ಅಲುಗಾಡುವ ವಾಹನವನ್ನು ಅತ್ಯಂತ ಕೌಶಲದಿಂದ ನಿಯಂತ್ರಣಕ್ಕೆ ತರಬಹುದು.
ನಿಮಗೆಲ್ಲ ಒಂದು ಸಲಹೆ...ನಿಮ್ಮ ಸ್ನೇಹಿತರು-ಸಂಬಂಧಿಕರೊಂದಿಗೆ ಪದೇ ಪದೆ ಮುನಿಸಿಕೊಳ್ಳಬೇಡಿ, ಅವರಿಗೆ ತೊಂದರೆ ಕೊಡಬೇಡಿ. ಅಲ್ಲದೆ, ಬಿಟ್ಟೂಬಿಡದೆ ನಿಮ್ಮ ಮೇಲೆ ಮುನಿಸಿಕೊಳ್ಳುವವರ, ನಿಮ್ಮ ಪಯಣಕ್ಕೆ ಅಡ್ಡಿ ಪಡಿಸುವವರ ಮನವೊಲಿಸುವುದಕ್ಕೆ ನಿಮ್ಮ ಶಕ್ತಿ ಹಾಳುಮಾಡಿಕೊಳ್ಳಬೇಡಿ. ವಾಟ್ಸ್‌ಆ್ಯಪ್ ಸಂದೇಶ ಮತ್ತು ಪೇಪರ್‌ನಿತ್ಯವೂ ವಾಟ್ಸ್‌ಆ್ಯಪ್‌ನಲ್ಲಿ ರಾಜಕೀಯದ ಬಗ್ಗೆ ಫಾರ್ವರ್ಡ್ ಕಳುಹಿಸುವವರಿಗೂ ಹಾಗೂ ಪತ್ರಿಕೆ ಹಂಚುವವರಿಗೂ ಸಾಮ್ಯತೆ ಇದೆ. ಒಬ್ಬವ ನಮ್ಮ ಮನೆ ಬಾಗಿಲಲ್ಲಿ ಪತ್ರಿಕೆ ಎಸೆದು ಮಾಯವಾದರೆ, ಇನ್ನೊಬ್ಬ ತನಗೆ ಫಾರ್ವರ್ಡ್ ಆದ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡಿ ಮಾಯವಾಗಿಬಿಡುತ್ತಾನೆ. ನಿತ್ಯವೂ ನಮ್ಮ ಮನೆಗೆ ಪತ್ರಿಕೆ ಹಾಕುವ ಹುಡುಗರಲ್ಲಿ ಅನೇಕರು ಆ ಪತ್ರಿಕೆಗಳನ್ನೇ ಓದುವ ಗೋಜಿಗೆ ಹೋಗುವುದಿಲ್ಲ, ಹಾಗೆಯೇ ಮೆಸೇಜ್ ಫಾರ್ವರ್ಡ್ ಮಾಡುವ ಬಹುತೇಕ ಆತ್ಮಗಳೂ ತಾವು ಕಳುಹಿಸಿದ ಸಂದೇಶವನ್ನು ಓದಿರುವುದಿಲ್ಲ, ಓದಿದ್ದರೂ ಸರಿಯಾಗಿ ಅರ್ಥಮಾಡಿಕೊಂಡಿರುವುದಿಲ್ಲ. ಇತ್ತೀಚೆಗೆ ಬಾಗಿಲಲ್ಲಿ ಪತ್ರಿಕೆ ಹಾಕಲು ಬಂದ ಹುಡುಗ ಕೈಗೆ ಸಿಕ್ಕ. ಅವನ ಮಂದಸ್ಮಿತ ಮುಖ ಕಂಡು ನನಗೆ ಕುತೂಹಲವಾಯಿತು. ಕಾಲೆಳೆಯುತ್ತಾ ಕೇಳಿದೆ-
"ಅಲ್ಲ ಅಣ್ಣ, ಪತ್ರಿಕೆ ಓದಿದರೆ ಮೂಡ್ ಔಟ್ ಆಗುತ್ತದೆ. ಮನಸ್ಸಿಗೆ ನೋವು ಕೊಡುವಂಥ ಸುದ್ದಿಗಳೇ ಇರುತ್ತೆ. ನಮಗೆಲ್ಲ ಕಷ್ಟ ಕೊಟು,r ಅದ್ಹೇಗೆ ನೀನು ನಗುನಗುತ್ತಾ ಇದ್ದೀ?' ಆ ಹುಡುಗ ನಿರ್ಮಮಕಾರದಿಂದ ಅಂದ- "ಸರ್ ನಾವು ಪೇಪರ್ ಗೀತೀವಷ್ಟೆ(ಎಸೆಯುತ್ತೀವಿ), ಓದಲ್ಲ' "ನೀನು ಎಲ್ಲಿವರೆಗೂ ಓದಿದ್ದೀ?' ಪ್ರಶ್ನಿಸಿದೆ. "ಅಯ್ಯೋ ನಿಮಗಿಂತ ಕಮ್ಮಿ ಸರ್' ಅಂದ ಹುಡುಗ ಸೈಕಲ್ ಏರುವ ಮುನ್ನ ತಿರುಗಿ ನನ್ನ ಕಾಲೆಳೆಯುವಂತೆ ಹೇಳಿದ, "ಸರ್ ಪೇಪರ್ ನೋಡಿದ್ರೆ ಮನಸ್ಸಿಗೆ ಬೇಜಾರಾಗುತ್ತೆ ಅಂತೀರಿ. ನಿಮಗಿಂತ ಕಡಿಮೆ ಓದಿರೋ ನಾನು ಎಸೆದ ಪೇಪರ್‌ನ ನೀವು ಎತ್ತಿಕೊಂಡು ಓದಿ¤àರಿ! ನೀವೂ ಎಸೆದುಬಿಡಿ!'
ಆ ಹುಡುಗ ಹೋದ ಮೇಲೆ ಈ ವಿಚಾರ ನನ್ನನ್ನು ಬಹುವಾಗಿ ಕಾಡಿತು. ಅದಕ್ಕೇ ಪರಿಚಿತರು, ಅಪರಿಚಿತರು, ಸ್ನೇಹಿತರು, ಶುಭಚಿಂತಕರು, ಸಂಬಂಧಿಗಳು..ಎಲ್ಲರಿಗೂ ವಿನಂತಿಸಿಕೊಳ್ಳುತ್ತಿದ್ದೇನೆ:
"ದಯವಿಟ್ಟೂ ನಿಮ್ಮ ರಾಜಕೀಯ ಸಂದೇಶ'ಗಳನ್ನು ನನಗೆ ಕಳುಹಿ ಸಬೇಡಿ. ನಿಮ್ಮ ರಾಜಕೀಯ ಮೆಸೇಜ್‌ಗಳಿಂದ ದೇಶ ಬದಲಾಗುತ್ತದೋ ಇಲ್ಲವೋ ತಿಳಿಯದು, ಆದರೆ ನನ್ನ ಮತ್ತು ನಿಮ್ಮ ನಡುವಿನ ಸಂಬಂಧವಂತೂ ಖಂಡಿತ ಬದಲಾಗುತ್ತದೆ!
ವ್ಯಕ್ತಿ ಮತ್ತು ವಸ್ತು ಆಗ: ನಾವು ವಸ್ತುಗಳನ್ನು ಇಷ್ಟಪಡುತ್ತಿದ್ದೆವು, ವ್ಯಕ್ತಿಗಳನ್ನು ಪ್ರೀತಿಸುತ್ತಿದ್ದೆವು. ಜಗಳವಾಡಿದರೂ ಒಂದಾಗಿರುತ್ತಿದ್ದೆವು. "ಬೆಲೆ'ಗಿಂತಲೂ ಹೆಚ್ಚು ಮಹತ್ವವನ್ನು "ಮೌಲ್ಯ'ಕ್ಕೆ ಕೊಡುತ್ತಿದ್ದೆವು. ಕಡಿಮೆ ಓದಿದ್ದರೂ ಹೆಚ್ಚು ತಿಳಿವಳಿಕಸ್ಥರಾಗಿದ್ದೆವು. ಅಭಾವದಲ್ಲಿದ್ದರೂ ಭಾವಪೂರ್ಣ ಜೀವನ ನಮ್ಮದಾಗಿರುತ್ತಿತ್ತು. ಜಗಳವಾಡಿದವರೇ ಜೊತೆಯಾಗುತ್ತಿದ್ದೆವು. ಸ್ನೇಹವನ್ನು ಸಂಪಾದಿಸುವುದಷ್ಟೇ ಅಲ್ಲ ಅದನ್ನು ಸಂಭಾಳಿಸುವುದೂ ತಿಳಿದಿರು ತ್ತಿತ್ತು. ಈ ಕಾರಣಕ್ಕಾಗಿಯೇ ನಾವು ಸಭ್ಯತೆ, ಸಂಸ್ಕೃತಿ, ಸಂಸ್ಕಾರ, ಜೀವನ ಮೌಲ್ಯಗಳಷ್ಟೇ ಅಲ್ಲದೆ ಸಂಬಂಧಗಳನ್ನೂ ಕಾಪಿಟ್ಟು ಕೊಳ್ಳುತ್ತಿದ್ದೆವು. ಅಪ್ಪ-ಅಮ್ಮ, ಅಣ್ಣ-ತಂಗಿ, ನಮ್ಮ ಶಿಕ್ಷಕರು, ನಮ್ಮ ನೆರೆಹೊರೆಯವರು, ನಮ್ಮ ಸ್ನೇಹಿತರೆಲ್ಲ ಗೌರವ ಮತ್ತು ಸಮ್ಮಾನದ ವ್ಯಾಪ್ತಿಯಲ್ಲಿ ಬರುತ್ತಿದ್ದರು. ಆಗ ನಮ್ಮ ಬಳಿ ಮಿತ್ರರು ಜಾಸ್ತಿ ಇದ್ದರು, ವಸ್ತುಗಳು ಕಮ್ಮಿಯಿದ್ದವು.
ಈಗ: ನಾವು ವ್ಯಕ್ತಿಗಳನ್ನು ಇಷ್ಟಪಡುತ್ತೇವೆ, ವಸ್ತುಗಳನ್ನು ಪ್ರೀತಿಸುತ್ತೇವೆ. ಹೆಚ್ಚೆಚ್ಚು ವಸ್ತುಗಳಿದ್ದರೆ ನಮ್ಮ ಮಾನ-ಸಮ್ಮಾನ, ಪ್ರತಿಷ್ಠೆ ಹೆಚ್ಚಾಗುತ್ತದೆ ಎಂಬ ಪರಿಸ್ಥಿತಿ. ನಾವು ಪ್ರಭಾವಿಯಾಗಿದ್ದರೂ ಅಭಾವದ ಬದುಕು ನಡೆಸುತ್ತಿದ್ದೇವೆ. ನಾವೀಗ ಹೆಚ್ಚು ವಿದ್ಯಾವಂತರಾದರೂ ಕಡಿಮೆ ತಿಳಿವಳಿಕೆ ಹೊಂದಿದ್ದೇವೆ. ಈಗ ನಾವು ಮೌಲ್ಯಗಳಿಗಿಂತಲೂ ಬೆಲೆಗೆ ಹೆಚ್ಚು ಮಹತ್ವ ಕೊಡುತ್ತೇವೆ. ಜೊತೆಗಿದ್ದವರು ಜಗಳವಾಡಿ ದೂರಾಗುತ್ತೇವೆ. ಇದೇ ಕಾರಣಕ್ಕೇ ವ್ಯಕ್ತಿಗಳನ್ನು ಬದಲಿಸುವುದು ಅಭ್ಯಾಸವಾಗಿದೆ, ವಸ್ತುಗಳನ್ನು ಹೆಚ್ಚಿಸಿ ಕೊಳ್ಳುವುದು ಸ್ವಭಾವವಾಗಿದೆ. ಹೊರಗಿನಿಂದ ದೊಡ್ಡ ವ್ಯಕ್ತಿಗಳಾಗಿದ್ದೇವೆ, ಒಳಗಿನ ವ್ಯಕ್ತಿತ್ವ ತೀರಾ ಚಿಕ್ಕದಾಗಿಬಿಟ್ಟಿದೆ. ಇಡೀ
ಜಗತ್ತನ್ನು ಗೆದ್ದುಬಿಟ್ಟಿದ್ದೇವೆ, ನಮ್ಮೆದುರು ನಾವೇ ಸೋಲುತ್ತಿದ್ದೇವೆ. ಜಗತ್ತಿನ ಜನರೊಂದಿಗೆ ಬೆರೆಯುತ್ತೇವೆ, ಸ್ವಜನರಿಂದ ದೂರವಾಗಿದ್ದೇವೆ. ಇಡೀ ಜಗತ್ತನ್ನೇ ಕಾಲಡಿ ತರಬೇಕೆಂಬ ನಮ್ಮ ಬಯಕೆ ಅದ್ಯಾವಾಗಲೋ ನಮ್ಮನ್ನೇ ಜಗತ್ತಿನ ಕಾಲಡಿ ಸಿಲುಕಿಸಿಬಿಟ್ಟಿದೆ....ಎತ್ತ ಹೊರಟಿದ್ದೇವೆ ನಾವು? ಏನಾಗಿಬಿಟ್ಟಿದೆ ನಮಗೆ?
ಅಶುತೋಷ್ ರಾಣಾ
ಹಿಂದಿ, ಮರಾಠಿ ನಟ