CONNECT WITH US  

ಸ್ಟೈಲೊ ಸ್ಟೈಲೋ ಚಿಕಲಕ ಚಿಕ ಸ್ಟೈಲ್ಲೋ

ಈ ಸ್ಟಾರ್ ನಟರ, ಕ್ರಿಕೆಟಿಗರ ಕೇಶ ವಿನ್ಯಾಸ ಯಾಕೆ ವೈರಲ್ ಆಗ್ತಿದೆ?

ಕಾಲ ಬದಲಾಗಿದೆ. ಅದಕ್ಕೆ ತಕ್ಕಂತೆ ಅಭಿರುಚಿಗಳೂ ಬದಲಾಗಿವೆ. ಈ ಬದಲಾವಣೆಗೆ ಕೂದಲ ವಿನ್ಯಾಸವೂ ಹೊರತಾಗಿಲ್ಲ. ಈ ಹಿಂದೆ ರಾಜ್ ಕುಮಾರ್, ವಿಷ್ಣುವರ್ಧನ್, ಅಮಿತಾಭ್ ಬಚ್ಚನ್ ಅವರ ಹೇರ್ ಸ್ಟೈಲ್ "ಟ್ರೆಂಡ್' ಆಗಿತ್ತು. ಈಗ ಈ "ಫಿಲ್ಮ್ ಸ್ಟಾರ್'ಗಳ ಸ್ಥಾನವನ್ನು ಕ್ರಿಕೆಟಿಗರೂ ಕೂಡಾ ಆಕ್ರಮಿಸಿಕೊಂಡಿದ್ದಾರೆ. ಈ ಆಟಗಾರರ ಕೇಶ ವಿನ್ಯಾಸಗಳು "ವೈರಲ್' ಆಗುತ್ತಿದೆ.

ಕೊಹ್ಲಿ ಕೇಶ ವಿನ್ಯಾಸದ ಮೇಲೆ ಯುವಕರ ಕಣ್ಣು: ಅದರಲ್ಲೂ ಕೊಹ್ಲಿ ಸ್ಪೈಕ್, ಧೋನಿ ಮೋಹಾಕ್, ಸುನೀಲ್ ನರೈನ್ ಡ್ರ್ಯಾಗನ್, ಲಸಿತ್ ಮಾಲಿಂಗ ಗುಂಗುರು ವಿನ್ಯಾಸ, ಹಾರ್ದಿಕ್ ಪಾಂಡ್ಯ ಸೈಡ್ ಕಟ್ ಸ್ಲೋಪ್ ಕಟಿಂಗ್ ಅದರಲ್ಲಿ ಸ್ಟ್ರೀಕ್ (ತಲೆಯ ಒಂದು ಭಾಗಕ್ಕೆ ಅಂದರೆ, ಎಂಟತ್ತು ಕೂದಲಿಗೆ ಬಣ್ಣ ಹಚ್ಚುವುದು) ಅಲ್ಲದೇ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟರ ಕೇಶ ವಿನ್ಯಾಸ ಟ್ರೆಂಡಿಂಗ್ ನಲ್ಲಿದ್ದು, ಈಗಿನ ಯುವ ಜನತೆ ಅನುಕರಿಸುತ್ತಿದ್ದಾರೆ.

ಇತ್ತೀಚೆಗೆ ಫಂಕಿ, ಸ್ಪೈಕ್, ಕಾರ್ಪೊರೇಟ್, ಪಾಶ್ಚಾತ್ಯ, ಸಿನಿಮಾ ನಟರ ಹಾಗೂ ಕ್ರಿಕೆಟ್ ಆಟಗಾರರ ಕೇಶ ವಿನ್ಯಾಸ ಶೈಲಿಯು ತುಂಬಾ ಟ್ರೆಂಡಿಯಾಗಿದ್ದು, ಯುವಕರ ಸಮೂಹವೇ ಇದನ್ನು ಬಹಳ ಅಚ್ಚುಕಟ್ಟಾಗಿ ನಕಲು ಮಾಡಿ ಫಾಲೋ ಮಾಡುತ್ತಿದೆ. ಈಗಿನ ಯುವ ಜನತೆಗೆ ಹೇರ್ ಸಲೂನ್ ಗಳಲ್ಲಿ ಹಲವಾರು ವಿಧದ ಕೇಶ ವಿನ್ಯಾಸದ ಬಗೆಗಳನ್ನು ಕಾಣಬಹುದಾಗಿದೆ.

ಕ್ರಿಕೆಟ್ ನಲ್ಲಿ ಭರ್ಜರಿ ಫಾರ್ಮನಲ್ಲಿರುವ ವಿರಾಟ್ ಕೊಹ್ಲಿ ಪ್ರತಿಯೊಂದು ಸರಣಿಗಳಿಗೂ ತಮ್ಮ ಕೇಶವಿನ್ಯಾಸವನ್ನು ಯಾವ ರೀತಿ ಬದಲಾಯಿಸುತ್ತಾರೋ ಅದೇ ಹೆಸರಿನಲ್ಲಿ ಆ ಕೇಶ ವಿನ್ಯಾಸ ಜನಪ್ರಿಯವಾಗುತ್ತದೆ. ಅಲ್ಲದೇ ಆ ತರಹದ ಕೇಶ ವಿನ್ಯಾಸವನ್ನು ಅವರ ಅಭಿಮಾನಿಗಳು ಅನುಕರಿಸುತ್ತಾರೆ. ಉದಾಹರಣೆಗೆ: "ಕೊಹ್ಲಿ ಸ್ಟೈಲ್ ಸ್ಪೈಕ್ ಕಟಿಂಗ್'.

ಈ ಹಿಂದೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ "ಮೋಹಾಕ್’ ಹೇರ್ ಸ್ಟೈಲ್ನೊಂದಿಗೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರೆ, ಅವರ ಅಭಿಮಾನಿಗಳು ಅದೇ ಹೇರ್ ಸ್ಟೈಲ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣಗಳಾದ ಟ್ವೀಟರ್, ಫೇಸ್ಬುಕ್, ಮತ್ತು ಇನ್ಸ್ಟಾಗ್ರಾಮ್ ಗಳಲ್ಲಿ ಅಪ್ಲೋಡ್ ಮಾಡಿ ತರಹೇವಾರಿ ಕಾಮೆಂಟ್ ಗಳನ್ನು ಮತ್ತು ಲೈಕ್ ಗಳನ್ನು ಅವರ ಗೆಳೆಯರಿಂದ ಪಡೆಯುತ್ತಾರೆ.

ಆಟದಷ್ಟೇ ಫೇಮಸ್ಸು ಇವರ ಹೇರ್ ಸ್ಟೈಲು: ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಎಷ್ಟು ಹೆಸರು ಗಳಿಸಿದ್ದಾರೋ, ಅದೇ ರೀತಿಯಲ್ಲಿ ಅವರ ಕೇಶ ವಿನ್ಯಾಸವೂ ಕೂಡಾ ತುಂಬಾ ಹೆಸರುವಾಸಿಯಾಗಿ ಟ್ರೆಂಡಿಂಗ್ನಲ್ಲಿದೆ.

ಇವರಲ್ಲದೆ ಶ್ರೀಲಂಕಾದ ವೇಗದ ಬೌಲರ್ "ಲಸಿತ್ ಮಾಲಿಂಗ' ಅವರ ಗುಂಗುರು ಕೂದಲು ವಿನ್ಯಾಸ, ಹಾಗೂ ಗುಂಗುರು ಕೂದಲಿಗೆ ಅವರು ಮಾಡಿಸಿರುವ ಸ್ಟ್ರೀಕ್ ಕಲರಿಂಗ್ ಮಾಡಿಸಿರುವ ಶೈಲಿಯನ್ನು ಅವರ ಅಭಿಮಾನಿಗಳು ಅನುಕರಿಸಿರುವುದು ಕೂಡಾ ಒಂದು ಟ್ರೆಂಡ್.

ವೆಸ್ಟ್ ಇಂಡೀಸ್ ನ ಆಟಗಾರ ಸುನೀಲ್ ನರೈನ್ರ ಡ್ರ್ಯಾಗನ್ ಕೇಶ ವಿನ್ಯಾಸ, ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿನೋ ರೋನಾಲ್ಡೋ ಸ್ಪೈಕ್ ವಿಥ್ ಪಂಕ್ ಕೇಶ ವಿನ್ಯಾಸ, ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್, ರವೀಂದ್ರ ಜಡೇಜಾ ಅವರಲ್ಲದೇ ಕೆ.ಎಲ್.ರಾಹುಲ್, ರಿಷಬ್ ಪಂತ್, ಆಂಡ್ರೆ ರಸೆಲ್, ಉಮೇಶ್ ಯಾದವ್ ಸೇರಿದಂತೆ ಇನ್ನಿತರೆ ತಮಗಿಷ್ಟದ ಆಟಗಾರರ ಕೇಶ ವಿನ್ಯಾಸಕ್ಕೆ ಈಗಿನ ಯುವ ಸಮೂಹ ಮೊರೆ ಹೋಗಿದ್ದಾರೆ. 

ಹುಚ್ಚು ಹಿಡಿಸುವ ಕಿಚ್ಚನ ಕೇಶ ವಿನ್ಯಾಸ!: ಸ್ಯಾಂಡಲ್ವುಡ್ ಕೂಡಾ ಇದಕ್ಕೆ ಹೊರತಾಗಿಲ್ಲ ಇತ್ತೀಚೆಗೆ ತೆರೆ ಕಂಡ ಕನ್ನಡದ ಆರಡಿ ಕಟೌಟು ಕಿಚ್ಚ ಸುದೀಪ್ ಅವರ "ಹೆಬ್ಬುಲಿ' ಚಿತ್ರಕ್ಕೆ ತಮ್ಮ ಹೇರ್ ಸ್ಟೈಲ್ ಅನ್ನು ಬದಲಿಸಿದ್ದೆ ತಡ, ಅದನ್ನೇ ಅನುಕರಿಸಿ ಅವರ ಅಭಿಮಾನಿಗಳು ಅದೇ ರೀತಿಯಲ್ಲಿ ತಮ್ಮ ಕೇಶ ವಿನ್ಯಾಸವನ್ನು ಬದಲಿಸಿ ಅದೇ ಗೆಟಪ್ ನಲ್ಲಿ ತಮ್ಮ ನೆಚ್ಚಿನ ನಟನ ಚಿತ್ರವನ್ನು ವೀಕ್ಷಿಸಿ ಅಭಿಮಾನ ಮೆರೆದಿದ್ದಾರೆ.

ಅಲ್ಲದೇ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅವರ "ಸಂತು ಸ್ಟ್ರೈಟ್ ಫಾರ್ವಡ್' ಸಿನಿಮಾದಲ್ಲಿ ಮಾಡಿಸಿಕೊಂಡ ಕೇಶವಿನ್ಯಾಸವನ್ನು ಸಿನಿಮಾ ನೋಡಿದ ಅಭಿಮಾನಿಗಳು ಮರುದಿನ ನಕಲು ಮಾಡಿರುವುದನ್ನು ಸ್ಮರಿಸಬಹುದು. ಅಲ್ಲದೇ ಇದೀಗ ಅವರ ಬಹುನಿರೀಕ್ಷಿತ ಚಿತ್ರ "ಕೆಜಿಎಫ್'ನಲ್ಲಿರುವ ಕೇಶ ವಿನ್ಯಾಸ ಗೆಟಪ್ ಕೂಡಾ ಜನರಿಗೆ ಹುಚ್ಚು ಹಿಡಿಸುವಂತಿದೆ.

ಇದಲ್ಲದೇ ಸೂಪರ್ ಸ್ಟಾರ್ ರಿಯಲ್ ಸ್ಟಾರ್ ಉಪೇಂದ್ರ ಅವರು ಎ, ಉಪೇಂದ್ರ, ಸೂಪರ್, ಹಾಲಿವುಡ್, ಬುದ್ದಿವಂತ, ಹಾಗೂ ಸೂಪರ್ ಚಿತ್ರಗಳಲ್ಲಿ ಅವರು ಮಾಡಿದ ಕೇಶ ವಿನ್ಯಾಸ ಈಗಲೂ ಅವರ ನೆಚ್ಚಿನ ಅಭಿಮಾನಿಗಳ ಫೇವರೇಟ್ ಆಗಿದೆ.

ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವ "ದಿ ವಿಲನ್’ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳು ಸಾಮಾಜಿಕ ಮಾಧ್ಯಮ ಮತ್ತು ಜಾಲತಾಣಗಳಲ್ಲಿ ರಾರಾಜಿಸುತ್ತಿದ್ದು, ಕಿಚ್ಚ ಮತ್ತು ಶಿವಣ್ಣ ಅವರ ಹೇರ್ಸ್ಟೈಲ್ ಮೆಚ್ಚಿಕೊಂಡಿರುವ ಅಭಿಮಾನಿಗಳು ಅದನ್ನೇ ಅನುಕರಿಸಿ ಕೇಶ ವಿನ್ಯಾಸ ಬದಲಿಸಿಕೊಂಡು ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 

ಕಿಕ್ ಕೊಡುವ ಕೇಶ ವಿನ್ಯಾಸ!: ಇತ್ತಿಚೇಗಂತೂ ಚಂದನವನದಲ್ಲಿ ಭಾರಿ ಸದ್ದು ಮಾಡುತ್ತಿರುವ "ಟಗರು' ಚಿತ್ರದಲ್ಲಿನ ಶಿವಣ್ಣ ಮತ್ತು ಡಾಲಿ ಧನಂಜಯ್ ಅವರ ಹೇರ್ ಸ್ಟೈಲ್ ಅವರ ಅಭಿಮಾನಿಗಳಿಗೆ ಕ್ರೇಜ್ ಹುಟ್ಟುಹಾಕಿದ್ದು, ಕಿಕ್ ಕೊಡುವಂತಿದೆ.

ಮುಖ್ಯವಾಗಿ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವರ ಮುಂದಿನ ಚಿತ್ರ "ನಟ ಸಾರ್ವಭೌಮ'ಕ್ಕಾಗಿ ಮಾಡಿಸಿಕೊಂಡ ಕೇಶ ವಿನ್ಯಾಸವನ್ನು ಅವರ ಅಭಿಮಾನಿಗಳು ನಕಲು ಮಾಡಿ ಅಭಿಮಾನವನ್ನು ಮೆರೆದಿದ್ದಾರೆ.

ಅಲ್ಲದೇ ಈ ಹೊಸ ಕೇಶ ವಿನ್ಯಾಸ ಈಗ ನಂ.1 ಟ್ರೆಂಡಿಂಗ್ನಲ್ಲಿರುವುದು ವಿಶೇಷ. ಇದಲ್ಲದೇ ಇತ್ತೀಚೆಗೆ ಕಾಮಿಡಿ ನಟ ಚಿಕ್ಕಣ್ಣ ತಮ್ಮ ಗಂಗುರು ಕೂದಲಿಗೆ ಪೆಪ್ಪರ್ ಅಂಡ್ ಸಾಲ್ಟ್ ಕಲರಿಂಗ್ (ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣಗಳಿಂದ ಕೂಡಿದ್ದು) ಕೂಡಾ ಯೂತ್ಫುಲ್ ಟ್ರೆಂಡಿಂಗ್‍ನಲ್ಲಿದೆ. 

ಬಾಲಿವುಡ್ ನಟರಿಗೂ ಉಂಟು ಕೇಶ ವಿನ್ಯಾಸದ ಗೀಳು: ಬಾಲಿವುಡ್ ನಲ್ಲೂ ಕೇಶ ವಿನ್ಯಾಸದ ಗೀಳಿಗೆ ನಟರು ಬಿದಿದ್ದು, ತಮ್ಮ ಒಂದೊಂದು ಚಿತ್ರಗಳಲ್ಲೂ ವಿಭಿನ್ನ ಕೇಶ ವಿನ್ಯಾಸ ಮತ್ತು ಟ್ರೆಂಡ್ ಸೆಟ್ಟರ್ ಆಗಿರುವ ಅಮೀರ್ ಖಾನ್ ಅವರು ಈ ಹಿಂದೆ ಗಜಿನಿ ಚಿತ್ರಕ್ಕೆ ಭಿನ್ನ ಕೇಶ ವಿನ್ಯಾಸ ಮಾಡಿಸಿದ್ದರೆ, ಇತ್ತೀಚೆಗೆ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ವಿಭಿನ್ನ ಹೇರ್ ಸ್ಟೈಲ್ನಲ್ಲಿ ಮಿಂಚಿದ್ದಾರೆ.

ಇದೀಗ ತಮ್ಮ ಮುಂದಿನ "ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಪೋಸ್ಟರ್ ನಲ್ಲಿ ಢಿಫರೆಂಟ್ ಹೇರ್ಸ್ಟೈಲ್ ಮಾಡಿಸಿ ಯೂತ್ ಐಕಾನ್ ಆಗಿದ್ದಾರೆ. ಇವರಲ್ಲದೇ ರಣವೀರ್ ಸಿಂಗ್, ಶಾಹಿದ್ ಕಪೂರ್, ರುತೀಕ್ ರೋಷನ್, ವರುನ್ ಧವನ್, ಶಾರೂಖ್ ಖಾನ್, ಸುಶಾಂತ್ ಸಿಂಗ್, ಮತ್ತು ರಣಬೀರ್ ಕಪೂರ್ ಅವರ ಕೇಶ ವಿನ್ಯಾಸಕ್ಕೂಈಗಿನ ಯುವ ಸಮೂಹ ಮಾರು ಹೋಗಿದ್ದಾರೆ. 

"ಹೇರ್ ಸ್ಟೈಲ್ನಿಂದಲೇ ಯೂತ್ ಐಕಾನ್ ಆಗ್ತಾರೆ': ಅಲ್ಲದೇ ದಕ್ಷಿಣ ಭಾರತದ ಖ್ಯಾತ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ತಮ್ಮ ಪ್ರತಿಯೊಂದು ಚಿತ್ರಕ್ಕೂ ತರಹೇವಾರಿ ಕೇಶ ವಿನ್ಯಾಸಗಳಿಂದ ಹೆಸರು ಗಳಿಸಿ ಯೂತ್ ಐಕಾನ್ ಆಗಿದ್ದು, ಇದೀಗ ಅವರ ಮುಂದಿನ ಚಿತ್ರ ನಾ ಪೇರು ಸೂರ್ಯ ನಾ ಇಲ್ಲು ಇಂಡಿಯಾದ ಕೇಶ ವಿನ್ಯಾಸ ಈಗಾಗಲೇ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿದೆ.

ಅಲ್ಲದೇ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರೋಬೋ ಚಿತ್ರದಲ್ಲಿನ ಹೇರ್ ಸ್ಟೈಲ್, ಸ್ಪೈ ಚಿತ್ರದಲ್ಲಿನ ಮಹೇಶ್ ಬಾಬು, ಮಾಸ್ ಮಹಾರಾಜ ರವಿತೇಜ, ಯೂತ್ ಐಕಾನ್ ಜೂನಿಯರ್ ಎನ್.ಟಿ.ಆರ್, ಡಾರ್ಲಿಂಗ್ ಪ್ರಭಾಸ್, ಸಿಂಗಂ ಸ್ಟಾರ್ ಸೂರ್ಯ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ, ಕಿಸ್ಸಿಂಗ್ ಸ್ಟಾರ್ ವಿಜಯ್ ದೇವರಕೊಂಡ, ಸೇರಿದಂತೆ ಮಲ್ಟಿ ಟ್ಯಾಲೆಂಟೆಡ್ ವಿಕ್ರಮ್ ಅವರ ಹೇರ್ ಸ್ಟೈಲ್ ಅಭಿಮಾನಿಗಳ ಅನುಕರಣೆಗಳಾಗಿವೆ.

ಅಭಿಮಾನಿಗಳ ತಲೆ ಮೇಲೆ ರೊನಾಲ್ಡೊ "ಸಿಗ್ನೇಚರ್': ಖ್ಯಾತ ಫುಟ್ಬಾಲ್ ಆಟಗಾರರಾದ ಕ್ರಿಸ್ಟಿನೋ ರೋನಾಲ್ಡೋ ಅವರ "ಸಿಗ್ನೇಚರ್' ಹೇರ್ ಸ್ಟೈಲ್, ಮೆಸ್ಸಿಯ "ಫಾಕ್ಸ್ ಹಾವ್ಕ್' ಮತ್ತು ನೆಯ್ಮರ್ಸ್ರ ಪಾಯಿಂಟೆಡ್ ಹೇರ್ ಸ್ಟೈಲ್ ಟ್ರೆಂಡಿಯಾಗಿದೆ. ಅಲ್ಲದೇ ಹಾಲಿವುಡ್ ಚಿತ್ರತಾರೆಗಳಾದ ಟಾಮ್ ಕ್ರ್ಯೂಸ್, ಲಿಯೋನಾರ್ಡೊ ಡಿಕಾಪ್ರಿಯೊ, ವಿಲ್ ಸ್ಮಿತ್, ರಾಬರ್ಟ್ ಡೌನಿ ಜೆಆರ್, ಮತ್ತು ಕ್ರಿಸ್ಟೋಫರ್ ನೋಲನ್ ಅವರ ಕೇಶ ವಿನ್ಯಾಸಗಳು ಟ್ರೆಂಡಿಯಾಗಿವೆ.

ಈ ರೀತಿಯಾಗಿ ಕ್ರೀಡಾ ಮತ್ತು ಸಿನಿಮಾ ತಾರೆಗಳು ಮಾಡಿದ ಕೇಶ ವಿನ್ಯಾಸಗಳೆಲ್ಲ ಟ್ರೆಂಡ್‍ಗಳಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಿನ್ಯಾವ ಕೇಶ ವಿನ್ಯಾಸ ಶೈಲಿ ಬರುತ್ತವೋ ಕಾದು ನೋಡೋಣ.

Trending videos

Back to Top