CONNECT WITH US  

ರಸರಾಗ ಚಕ್ರವರ್ತಿ ಕಾಳಿಂಗ ನಾವಡರ ಗುರುಭಕ್ತಿ;ಅಜ್ಜ ಹೇಳಿದ ಕಥೆ!

ಗುಂಡ್ಮಿ ಕಾಳಿಂಗ ನಾವಡರು ತನ್ನ ಕಂಠಸಿರಿಯಿಂದ ಯಕ್ಷಲೋಕವನ್ನು ಶ್ರೀಮಂತಗೊಳಿಸಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದವರು. ರಂಗದ ನಿಯಂತ್ರಣ ವಿಚಾರದಲ್ಲಿ  ಅವರಿಗಿಂತ ಹೆಚ್ಚುಗಾರಿಕೆ ಬೇರೆಯವರಲ್ಲಿ ಅಸಾಧ್ಯ ಎನ್ನುವುದು ಅವರೊಂದಿಗೆ ರಂಗದಲ್ಲಿ ಕೆಲಸ ಮಾಡಿದ ಎಲ್ಲಾ ಕಲಾವಿದರ ಅಭಿಪ್ರಾಯ. 
ಹಿರಿಯರಿಗೆ ಗೌರವ ಕೊಡುವ ವಿಚಾರದಲ್ಲಿ ಕಾಳಿಂಗ ನಾವಡರು ಆದರ್ಶಪ್ರಾಯರು. ಅದಕ್ಕೆ ಸಾಕ್ಷಿ ಎನ್ನುವಂತೆ ನನ್ನ ಅಜ್ಜ , ಹಿರಿಯ ಭಾಗವತ , ಗುರು ದಿವಂಗತ ಗೋರ್ಪಾಡಿ ವಿಟ್ಠಲ ಪಾಟೀಲರು ಹೇಳಿದ ಒಂದು ಕಥೆ. 

ಮನೆಯಲ್ಲಿ ಕ್ಯಾಸೆಟ್‌ ಹಾಡುಗಳನ್ನು ಕೇಳುವ ಕಾಲದಲ್ಲಿ ನಾವಡರ ಹಾಡು ಕೇಳಿದ ಬಳಿಕ ಅಜ್ಜ ನಾವಡರ ಕುರಿತು ಒಂದು ಸ್ವಾರಸ್ಯಕರ ಅವರ ಆದರ್ಶಪ್ರಾಯ ನಡತೆಯ ಬಗ್ಗೆ ಘಟನೆಯೊಂದರ ಮೆಲುಕು ಹಾಕಿದರು. 

ಸುಮಾರು 1988 ರ ಸುಮಾರಿಗೆ ಪೇತ್ರಿಯಲ್ಲಿ ಅಜ್ಜ ನಡೆದು ಕೊಂಡು ದಿನಸಿ ವಸ್ತುಗಳನ್ನು ಹಿಡಿದುಕೊಂಡು ಮನೆಗೆ ಸಾಗುತ್ತಿದ್ದರಂತೆ. ಆ ವೇಳೆ ಅವರು ಕಚ್ಚೆ ಹಾಕಿ ಪಂಚೆ ಉಟ್ಟು, ತಲೆಗೆ ಆಕರ್ಷಕವಾಗಿ ಮುಂಡಾಸು ಸುತ್ತಿ ಪಕ್ಕಾ ಯಕ್ಷಗಾನ ಕಲಾವಿದನಂತೆ ಎದ್ದು ಕಾಣುತ್ತಿದ್ದರು. ಸಂಜೆ ವೇಳೆ ಏಕಾಏಕಿ ಎದುರಿನಿಂದ ಬಂದ ಬೈಕೊಂದು ಢಿಕ್ಕಿಯಾಗುವ ಮಟ್ಟಕ್ಕೆ ಬಂದು ಎದುರು ನಿಂತಿತಂತೆ . ಪಕ್ಕನೆ ಏನಾಯಿತೆಂದು ತೋಚದೆ ಬದಿಗೆ ಸರಿದು ಸಿಟ್ಟಿನಲ್ಲಿ  ದಿಟ್ಟಿಸಿ ನೋಡಿದ ಗೋರ್ಪಾಡಿಯವರಿಗೆ, ಗುರುಗಳೆ ನಮಸ್ಕಾರ... ಎಂಬ ಕಂಚಿನ ಕಂಠದ ಉದ್ಘಾರ ಕೇಳಿ ಬಂತಂತೆ. ಕೂಡಲೇ ಕಣ್‌ ತೆರೆದು ವ್ಯಕ್ತಿಯನ್ನು ನೋಡಿದಾಗ ನಾನು ಕಾಳಿಂಗ ಗುರುಗಳೇ..ಗೋತ್ತಾಯ್‌ಲ್ಯಾ ಎಂಬ ಮಾತು ಕೇಳಿ ಸಿಟ್ಟೆಲ್ಲಾ ಕರಗಿ ಮುಖ ಅರಳಿ ಹೋಯಿತಂತೆ...

ಮನಿಗ್‌ ಹೊರಟ್ರ್ಯಾಅಂದು, ತಾಮ್ರಧ್ವಜ ಕಾಳಗದ (ಅಂದಿನ ಬಯಲಾಟದ ಶ್ರೇಷ್ಠ ಪ್ರಸಂಗಳಲ್ಲಿ ಒಂದು, ನಡುತಿಟ್ಟಿನ ವಿಶೇಷತೆಗಳಿಂದ ಕೂಡಿರುವ ಪ್ರಸಂಗ) ಕೆಲ ಪದ್ಯಗಳ ಕುರಿತು ಅಲ್ಲೇ ಮಾತನಾಡಿದರಂತೆ. ಅಷ್ಟರಲ್ಲಾಗಲೇ ಕಿಸೆಯಲ್ಲಿ ಗುರು ಕಾಣಿಕೆ ಹಾಕಿ, ಕಾಲಿಗೆ ನಮಸ್ಕರಿಸಿ.. ಬಪ್ಪುದಾ ಎಂದು ತನ್ನ ಕಾರ್ಯ ನಿಮಿತ್ತ ತೆರಳಿದರಂತೆ. 

ಪೇಟೆಯಲ್ಲಿದ್ದ ನಾವಡರ ಕೆಲ ಯುವ ಅಭಿಮಾನಿಗಳು ಇವರ(ಗೋರ್ಪಾಡಿ) ಕಾಲಿಗೆ (ಹಳೀ ಭಾಗೋತ್ರ..)ಯಾಕೆ ಬಿದ್ದರು ಎಂದು ನೋಡುತ್ತಾ ನಿಂತಿದ್ದರಂತೆ. ಕೆಲವರು ಮಾತನಾಡುತ್ತಿದ್ದ ವೇಳೆ ನಮಸ್ಕಾರ ಹೇಳಿ ಹೋದರೆ. ಇನ್ನು ಕೆಲವರು ಹತ್ತಿರಕ್ಕೆ ಬಂದು ಕೈ ಕುಲುಕಿ ಹೋದರಂತೆ.

ಒಟ್ಟಿನಲ್ಲಿ ಶಿಷ್ಯನ ಗೌರವವನ್ನು ಸ್ವೀಕರಿಸಿ ಖುಷಿಯಾಗಿ ಮನೆಗೆ ಬಂದ ಅಜ್ಜ .ಮನೆ ಮಂದಿಗೆ ನಾವಡರು ಸಿಕ್ಕಿ ಗುರು ಕಾಣಿಕೆ ನೀಡಿದ್ದನ್ನು ಹೇಳಿ ಸಂಭ್ರಮಿಸಿದ್ದರಂತೆ. 

ನಾವಡರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಗೋರ್ಪಾಡಿಯವರು ವಿಶೇಷವಾಗಿ ಅವರು ಕುಂಜಾಲು ಶೈಲಿಯನ್ನು ಮೈಗೂಡಿಸಿಕೊಂಡಿದ್ದುಕ್ಕಾಗಿ ಇನ್ನಷ್ಟು ಅಭಿಮಾನ ಪಡುತ್ತಿದ್ದರು.  ಅಂತಹ ಸ್ವರ ಸಾಮರ್‌ಥ್ಯದ ಭಾಗವತ ಹಿಂದೂ ಇಲ್ಲ ಮುಂದೆ ಬರುಲೂ ಸಾಧ್ಯವಿಲ್ಲ ಎಂದು ಅದೊಂದು ಬೇರೆಯದ್ದೇ.. ಎಂದು ಅನೇಕ ಕಲಾವಿದರ ಬಳಿ ಅಜ್ಜ ಹೇಳಿಕೊಳ್ಳುತ್ತಿದ್ದರು. 

ಶಿಷ್ಯ ಹೇಗೆ ?
ಕೋಟ ಕೇಂದ್ರದಲ್ಲಿ ಗುರು ನಾರಾಣಪ್ಪ ಉಪ್ಪೂರರಿಗೆ ಅನಾರೋಗ್ಯ ನಿಮಿತ್ತ 15 ದಿನಗಳ ಕಾಲ ರಜೆಯಲ್ಲಿ ಮನೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಆ ವೇಳೆ ಗೋರ್ಪಾಡಿಯವರ ತಾಳ, ಲಯ, ಹಳೆಯ ನಡೆಗಳ ಹೆಚ್ಚುಗಾರಿಕೆ ಬಗ್ಗೆ ತಿಳಿದಿದ್ದ ಉಪ್ಪೂರರೇ ಪತ್ರ ಬರೆದು 15 ದಿನಗಳ ಕಾಲ  ವಿದ್ಯಾರ್ಥಿಗಳಿಗೆ ಕಲಿಸಿಕೊಡುವಂತೆ ಕರೆಸಿಕೊಂಡಿದ್ದರಂತೆ. 

ಉಪ್ಪೂರರ ಕರೆಗೆ ಗೌರವಯುತವಾಗಿ ಸ್ಪಂದಿಸಿದ ಗೋರ್ಪಾಡಿಯವರು 15 ದಿನಗಳ ಕಾಲ ಗುರುವಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ್ದರು. ಅಲ್ಲಿ ಕಾಳಿಂಗ ನಾವಡರ, ಲಯ, ಅತೀ  ಕಲಿಸಿದ್ದನ್ನು ವೇಗವಾಗಿ ಅರ್ಥ ಮಾಡಿಕೊಳ್ಳುವುದನ್ನು ಕಂಡು ಬೆರಗಾಗಿ ಮನೆಗೆ ಬಂದು ನಾವಡರ(ರಾಮಚಂದ್ರ ನಾವಡರು)ಮಾಣಿಯ ಪ್ರತಿಭೆಯ ಕುರಿತಾಗಿ ವರ್ಣಿಸಿದ್ದರಂತೆ.  

ಕಾಳಿಂಗ ನಾವಡರ ತಂದೆ ಗುಂಡ್ಮಿ ರಾಮಚಂದ್ರ ನಾವಡರು ಗೋರ್ಪಾಡಿಯವರ ಸಮಕಾಲೀನ ಒಡನಾಡಿ ಭಾಗವತರಾಗಿದ್ದರು. ಮಂದಾರ್ತಿ ಮೇಳದಲ್ಲಿ ಇಬ್ಬರೂ ಜೊತೆಯಲ್ಲೇ ಭಾಗವತರಾಗಿ ಸೇವೆ ಸಲ್ಲಿಸಿದ್ದರು.

Trending videos

Back to Top