CONNECT WITH US  

ಆ ಜಾಹೀರಾತು ಸ್ಟಾರ್ ನಟ,ನಟಿಯ ರಹಸ್ಯ ಮದುವೆ ಗುಟ್ಟು ಬಯಲು ಮಾಡಿತ್ತು!

ನಟಿಯಾಗಿ, ಹಿನ್ನಲೆ ಗಾಯಕಿಯಾಗಿ, ನೃತ್ಯಗಾರ್ತಿಯಾಗಿ, ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿ ಹೆಸರುಗಳಿಸಿದ್ದವರು ದಕ್ಷಿಣ ಭಾರತದ ಮಹಾನಟಿ ಸಾವಿತ್ರಿ. ದೇವರು ಕೊಟ್ಟ ವರ, ತಾಯಿಗೆ ತಕ್ಕ ಮಗ, ಅಶ್ವತ್ಥಾಮ, ಚಂದನದ ಗೊಂಬೆ ಸೇರಿದಂತೆ ಹಲವು ಕನ್ನಡ ಸೇರಿದಂತೆ ಮಲಯಾಳಂ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆ ಸಿನಿಮಾದಲ್ಲಿ ನಟಿಸಿ ಜನಪ್ರಿಯರಾಗಿದ್ದರು.

ಮೊತ್ತ ಮೊದಲ ಬಾರಿಗೆ 1952ರಲ್ಲಿ ತೆಲುಗಿನ ಪೆಲ್ಲಿ ಚೇಸಿ ಚೂಡು ಸಿನಿಮಾದ ಮೂಲಕ ಸಿನಿ ಜೀವನ ಆರಂಭಿಸಿದ್ದರು. 1960ರಲ್ಲಿ ತೆಲುಗಿನ ಚಿವಾರಾಕು ಮಿಗಿಲೇಡಿ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ರಾಷ್ಟ್ರಪತಿ ಪ್ರಶಸ್ತಿಯನ್ನು ಸಾವಿತ್ರಿ ತಮ್ಮ ಮುಡಿಗೇರಿಸಿಕೊಂಡಿದ್ದರು. ಚಿನ್ನಾರಿ ಪಾಪಾಲು ಸಿನಿಮಾಕ್ಕಾಗಿ ಪ್ರತಿಷ್ಠಿತ ನಂದಿ ಪ್ರಶಸ್ತಿಯನ್ನು ಪಡೆದಿದ್ದರು. ಅಷ್ಟೇ ಅಲ್ಲ 30ನೇ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಫೆಸ್ಟಿವಲ್ ನಲ್ಲಿ ವುಮೆನ್ ಇನ್ ಸಿನಿಮಾ ಗೌರವವನ್ನು ಸ್ವೀಕರಿಸಿದ ಹೆಗ್ಗಳಿಕೆ ನಟಿ ಸಾವಿತ್ರಿಯದ್ದಾಗಿತ್ತು. 50-60ರ ದಶಕದಲ್ಲಿ ತೆಲುಗು, ತಮಿಳು ಸಿನಿಮಾದಲ್ಲಿ ಸ್ಟಾರ್ ನಟಿಯಾಗಿದ್ದರು.

ಆರು ತಿಂಗಳ ಮಗುವಾಗಿದ್ದಾಗಲೇ ಸಾವಿತ್ರಿ ತಂದೆ ಇಹಲೋಕ ತ್ಯಜಿಸಿದ್ದರು. ತದನಂತರ ಆಕೆಯ ಚಿಕ್ಕಪ್ಪ ಕೊಮ್ಮರೆಡ್ಡಿ ವೆಂಕಟರಮಣಯ್ಯ ಚೌಧುರಿ ಸಾವಿತ್ರಿ ಹಾಗೂ ತಾಯಿಯನ್ನು ತಮ್ಮ ಜೊತೆ ಕರೆತಂದು ಸಾಕತೊಡಗಿದ್ದರು. ಸಾವಿತ್ರಿಯ ನೃತ್ಯದಲ್ಲಿನ ಆಸಕ್ತಿ ಕಂಡು ಆಕೆಯನ್ನು ನೃತ್ಯಶಾಲೆಗೆ ಸೇರಿಸಿದ್ದರು. ತನ್ನ 12ನೇ ವಯಸ್ಸಿನಲ್ಲಿಯೇ ಸಾವಿತ್ರಿ ಸಿನಿಮಾರಂಗದಲ್ಲಿ ನಟನೆಯ ಅವಕಾಶಕ್ಕಾಗಿ ಮದ್ರಾಸ್ ಗೆ ಬಂದಿದ್ದರು.

ಆದರೆ ಘಟಾನುಘಟಿ ನಟರಿಂದಲೇ ತುಂಬಿ ಹೋಗಿದ್ದ ಆ ಕಾಲದಲ್ಲಿ ಅವಕಾಶಗಳು ಸಿಗುವುದು ಸಾವಿತ್ರಿಗೆ ಕಷ್ಟವೇ ಆಗಿತ್ತು. 1950ರಲ್ಲಿ ಸಂಸಾರಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಬಳಿಕ ರೂಪವತಿ, ಪಾತಾಳ ಭೈರವಿ ಸಿನಿಮಾದ ಬಳಿಕ 1952ರ ತೆಲುಗಿನ ಪೆಲ್ಲಿ ಚೇಸಿ ಚೂಡು ಸಿನಿಮಾ ಸಾವಿತ್ರಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿತ್ತು.

ಪೆಲ್ಲಿ ಚೇಸಿ ಚೂಡು ತೆಲುಗು ಸಿನಿಮಾ 1965ರಲ್ಲಿ ಕನ್ನಡದಲ್ಲಿ ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ಮದುವೆ ಮಾಡಿ ನೋಡು ಹೆಸರಿನಲ್ಲಿ ಬಿಡುಗಡೆಗೊಂಡಿತ್ತು. ಇದರಲ್ಲಿ ರಾಜ್ ಕುಮಾರ್, ಲೀಲಾವತಿ, ಉದಯ್ ಕುಮಾರ್ ನಟಿಸಿದ್ದರು. ಘಂಟಸಾಲ ಅವರು ಸಂಗೀತ ನೀಡಿದ್ದರು. 1972ರಲ್ಲಿ ಹಿಂದಿಯಲ್ಲಿ ಶಾದಿ ಕೇ ಬಾದ್ ಹೆಸರಿನಲ್ಲಿ ತೆರೆಕಂಡಿತ್ತು.

ಬಹುತ್ ದಿನ್ ಹುಯಿ, ಘರ್ ಬಾಸ್ಕೆ ದೇಖೋ, ಅಪ್ನೆ ಹುಯಿ ಪರಾಯೆ, ಶ್ರೀಕೃಷ್ಣ, ಗಂಗಾ ಕೀ ಲಾಹ್ರೆನ್ ಹಿಂದಿ ಸಿನಿಮಾದಲ್ಲೂ ಸಾವಿತ್ರಿ ನಟಿಸಿದ್ದರು. ಮಲಯಾಳಂನಲ್ಲಿ 1973ರಲ್ಲಿ ಬಿಡುಗಡೆಯಾಗಿದ್ದ ಚೂಝಿ ಸಿನಿಮಾದಲ್ಲಿನ ಅಭಿನಯ ಎಲ್ಲರನ್ನೂ ಬೆರಗುಗೊಳಿಸಿತ್ತು.

ಕನ್ನಡ ಸಿನಿಮಾದಲ್ಲೂ ನಟಿಸಿದ್ದರು:

1975ರಲ್ಲಿ ಬಿಡುಗಡೆಯಾಗಿದ್ದ ದೇವರು ಕೊಟ್ಟ ವರ, ತಾಯಿಗೆ ತಕ್ಕ ಮಗ, ಅಶ್ವತ್ಥಾಮ, ಚಂದನದ ಗೊಂಬೆ, ರವಿಚಂದ್ರ, ನಾರಿ ಸ್ವರ್ಗಕ್ಕೆ ದಾರಿ ಪ್ರಮುಖ ಸಿನಿಮಾಗಳಲ್ಲಿ ಮಹಾನಟಿ ಸಾವಿತ್ರಿ ನಟಿಸಿದ್ದರು.

ಸೋಪು ಜಾಹೀರಾತಿನಿಂದ ರಹಸ್ಯ ಮದುವೆ ಗುಟ್ಟು ಬಯಲಾಗಿತ್ತು!

1950ರ ದಶಕದಲ್ಲಿ ಸ್ಟಾರ್ ನಟಿಯಾಗಿದ್ದ ಸಾವಿತ್ರಿ ಆ ಒಂದು ನಿರ್ಧಾರದಿಂದ ಹಳಿತಪ್ಪಿದ್ದರು. ಹೌದು ಮನಂ ಪೋಲಾ ಮಾಂಗಲ್ಯಂ ಸಿನಿಮಾದಲ್ಲಿ ಸಾವಿತ್ರಿ ನಟಿಸಿದ್ದರು. ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಚಿತ್ರದಲ್ಲಿ ಸ್ಟಾರ್ ನಟನ ಜೊತೆಗಿನ ಗೆಳೆತನ ಮತ್ತಷ್ಟು ಹತ್ತಿರಕ್ಕೆ ತಂದಿತ್ತು. ಹಲವು ವರ್ಷಗಳ ಇವರಿಬ್ಬರ “ಸಂಬಂಧ” ಮುಂದುವರಿದಿದ್ದು, ಕೊನೆಗೂ “ಆ” ಸ್ಟಾರ್ ನಟ ಸಾವಿತ್ರಿಯನ್ನು ರಹಸ್ಯವಾಗಿ ಮದುವೆಯಾಗಿಬಿಟ್ಟಿದ್ದ. ತಮ್ಮಿಬ್ಬರ ಮದುವೆ ಗುಟ್ಟು ಬಹಿರಂಗವಾಗಬಾರದು ಎಂದು ಈ ವಿಚಾರವನ್ನು ರಹಸ್ಯವಾಗಿಯೇ ಇಟ್ಟಿದ್ದರು.

ಅದಕ್ಕೆ ಬಲವಾದ ಕಾರಣವಿತ್ತು…ಆ ಸ್ಟಾರ್ ನಟ ಅದಾಗಲೇ ಅಲಮೇಲುವನ್ನು ಮದುವೆಯಾಗಿದ್ದರು. ಅಷ್ಟೇ ಅಲ್ಲದೇ ಮತ್ತೊಬ್ಬ ನಟಿ ಪುಷ್ಪವಲ್ಲಿ ಜೊತೆಯೂ ಸಂಬಂಧ ಇದ್ದಿರುವುದು ಸಾವಿತ್ರಿ ಗಮನಕ್ಕೆ ಬಂದಿತ್ತು. ಇದರಿಂದಾಗಿ ತಮ್ಮಿಬ್ಬರ ಮದುವೆ ವಿಚಾರವನ್ನು ಗುಟ್ಟಾಗಿ ಕಾಯ್ದುಕೊಂಡಿದ್ದರು!

ಆದರೆ ಗುಟ್ಟು ಹೆಚ್ಚು ಕಾಲ ಬಾಳಲಾರದು ಎಂಬುದು ಕಟುಸತ್ಯ..ತಾನೂ ಈ ಮದುವೆ ವಿಷಯವನ್ನು ಬಹಿರಂಗಗೊಳಿಸಬೇಕು ಎಂದು ಸಾವಿತ್ರಿ ನಿರ್ಧಾರ ಮಾಡಿಬಿಟ್ಟಿದ್ದರು. ಸೋಪು ಜಾಹೀರಾತಿನ ಕರಾರಿನಲ್ಲಿ ಆಕೆ ಸಾವಿತ್ರಿ ಗಣೇಶನ್ ಎಂಬುದಾಗಿ ಸಹಿ ಮಾಡಿಬಿಟ್ಟಿದ್ದರು. ಇದಾದ ಬಳಿಕ ಇಬ್ಬರ ರಹಸ್ಯ ಮದುವೆ ಗುಟ್ಟು ಬಟಾಬಯಲಾಗಿತ್ತು..ಆ ಸ್ಟಾರ್ ನಟ ಬೇರಾರು ಅಲ್ಲ ಜೆಮಿನಿ ಗಣೇಶನ್!

ಸುಮಾರು ದಶಕಗಳ ಕಾಲ ಇದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಮದುವೆ ಎಂಬುದು ಕೇವಲ ರಹಸ್ಯ ಸಂಬಂಧವಲ್ಲ ಎಂಬುದಕ್ಕಿಂತ ಹೆಚ್ಚಾಗಿ ಸಾವಿತ್ರಿ ಜೆಮಿನಿ ಗಣೇಶನ್ ಅವರ ಮೂರನೇ ಪತ್ನಿ ಎಂಬ ಸತ್ಯ ಬಹಿರಂಗವಾಗಿತ್ತು. ಆದರೆ ಇದರಿಂದ ಇಬ್ಬರ ಬದುಕಿನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ತದನಂತರ ಮಿಸ್ಸಿಯಮ್ಮಾ, ಪಾಸಾಮಾಲಾರ್, ಕಳತ್ತೂರ್ ಕಣ್ಣಮ್ಮ ಮುಂತಾದ ಸಿನಿಮಾಗಳಲ್ಲಿ ಸಾವಿತ್ರಿ, ಜೆಮಿನಿ ನಟಿಸುವ ಮೂಲಕ ಜನಪ್ರಿಯತೆ ಪಡೆದಿದ್ದರು. ಹೀಗೆ ಸಾವಿತ್ರಿ ನಟಿಯಾಗಿ, ಇಬ್ಬರ ಮಕ್ಕಳ ತಾಯಿಯಾಗಿ ತುಂಬಾ ಸಂತಸದ ಜೀವನ ನಡೆಸುತ್ತಿದ್ದರು. ಇಬ್ಬರ ಸಂಬಂಧಕ್ಕೆ ಧಕ್ಕೆ ಬಾರದೆ ಸ್ಟಾರ್ ಗಳಾಗಿಯೇ ಮುಂದುವರಿದಿದ್ದರು.

ಆರ್ಮಿ ರಿಲೀಫ್ ಫಂಡ್ ಗೆ ತನ್ನ ಎಲ್ಲಾ ಚಿನ್ನಾಭರಣ ಕೊಟ್ಟುಬಿಟ್ಟಿದ್ದರು!

ಸಾವಿತ್ರಿ ಕೇವಲ ನಟಿ, ನೃತ್ಯಗಾರ್ತಿ, ನಿರ್ದೇಶಕ, ನಿರ್ಮಾಪಕಿ ಆಗಿರಲಿಲ್ಲ ಆಕೆಯ ಒಳಗೊಂದು ಮಾನವೀಯ ಮುಖವಿತ್ತು. ಹಣ ಹೂಡುವುದಾಗಲಿ, ದೇಣಿಗೆ ನೀಡುವ ವಿಚಾರದಲ್ಲಿ ಆಕೆ ಹಿಂದೆ, ಮುಂದೆ ಯೋಚಿಸುತ್ತಿರಲಿಲ್ಲವಂತೆ. ಏತನ್ಮಧ್ಯೆ ಆರ್ಮಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಸಾವಿತ್ರಿ, ಜೆಮಿನಿ ದಂಪತಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಸಾವಿತ್ರಿ ಜೆಮಿನಿ ಗಣೇಶನ್ ಜೊತೆ ಯಾವುದೇ ಚರ್ಚೆ ನಡೆಸದೇ ತನ್ನೆಲ್ಲಾ ಚಿನ್ನಾಭರಣಗಳನ್ನು ಕೊಟ್ಟು ಬಿಟ್ಟಿದ್ದರು!

ಈ ವಿಚಾರದಲ್ಲಿಯೇ ಜೆಮಿನಿ ಹಾಗೂ ಸಾವಿತ್ರಿ ನಡುವೆ ಮನಸ್ತಾಪ ಶುರುವಾಗಿತ್ತು. ಇಂತಹ ಸಂದರ್ಭದಲ್ಲಿಯೇ ಸಾವಿತ್ರಿ ಸ್ಟಾರ್ ಆಗಿದ್ದಾಗಲೇ ಜೆಮಿನಿ ಗಣೇಶನ್ ಸಿನಿಮಾ ಸೋಲತೊಡಗಿದ್ದವು. ಜೆಮಿನಿ ಗಣೇಶನ್ ಅಹಂಕಾರದ ಸ್ವಭಾವ ಸಾವಿತ್ರಿಯನ್ನು ಇನ್ನಷ್ಟು ಕಂಗೆಡಿಸಿಬಿಟ್ಟಿತ್ತು. ಆದರೂ ಸಾವಿತ್ರಿ ಹಲವು ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಹೆಸರುಗಳಿಸಿದ್ದರು. ಕೆಟ್ಟ ಚಾಳಿ ಬಿಡದೆ ಜೆಮಿನಿ ಗಣೇಶನ್ ಬೇರೆ ನಟಿಯರ ಜೊತೆಯೂ ಅನೈತಿಕ ಸಂಬಂಧ ಮುಂದುವರಿಸಿದ್ದಲ್ಲದೇ ಸಾವಿತ್ರಿಯನ್ನು ಮನೆಯಿಂದ ಹೊರಹಾಕಿಬಿಟ್ಟಿದ್ದರಂತೆ! ಇದಾದ ಮೇಲೆ ಸಾವಿತ್ರಿ ಆರ್ಥಿಕವಾಗಿ ದುರ್ಬಲವಾಗತೊಡಗಿದ್ದರು.

ವೈಯಕ್ತಿಕ ಸಮಸ್ಯೆ, ಡಯಾಬಿಟೀಸ್, ರಕ್ತದೊತ್ತಡದಿಂದ ಬಳಲುತ್ತಿದ್ದ ಮಹಾನಟಿ ಸಾವಿತ್ರಿ ಕುಡಿತದ ದಾಸಳಾಗಿ ಬಿಟ್ಟಿದ್ದರಂತೆ. ಆಕೆಯನ್ನು ಸಮಸ್ಯೆಯಿಂದ ಹೇಗೆ ಪಾರು ಮಾಡುವುದು ಎಂಬುದು ತಾಯಿಗೂ ಗೊತ್ತಾಗಲಿಲ್ಲವಂತೆ. ಯಾಕೆಂದರೆ ತಾಯಿ ಸುಶಿಕ್ಷಿತರಾಗಲಿ, ಬುದ್ಧಿವಂತರಾಗಲಿ ಆಗಿರಲಿಲ್ಲ. ಹೀಗೆ ಕುಡಿತದ ಚಟ ಹಲವು ವರ್ಷ ಮುಂದುವರಿದಿತ್ತು. ಬಳಿಕ ಸಾವಿತ್ರಿ ಬರೋಬ್ಬರಿ 19 ತಿಂಗಳ ಕಾಲ ಕೋಮಾಕ್ಕೆ ಜಾರಿಬಿಟ್ಟಿದ್ದರಂತೆ. ಆಗ ಮಾತುಗಳು ನಿಂತು ಹೋಗಿದ್ದವು, ಆಕೆ ಕೋಮಾದಿಂದ ಹೊರಬರಲಿ ಎಂದು ಕಾಯುತ್ತಿದ್ದೇವು..ಆಸ್ಪತ್ರೆಯ ಹಾಸಿಗೆ ಮೇಲೆ ಆಕೆಯನ್ನು ನೋಡಲು ಆಗುತ್ತಿರಲಿಲ್ಲ. ಕೊನೆಗೂ 1981ರ ಡಿಸೆಂಬರ್ 26ರಂದು ಕೊನೆಯುಸಿರೆಳೆದಿದ್ದರು ಎಂದು ಸಾವಿತ್ರಿ ಅವರ ಪುತ್ರಿ ವಿಜಯ ಚಾಮುಂಡೇಶ್ವರಿ ಪತ್ರಿಕೆಯೊಂದರ ಜೊತೆ ಮಾತನಾಡುತ್ತ ವಿಷಯ ಹಂಚಿಕೊಂಡಿದ್ದರು.


Trending videos

Back to Top