CONNECT WITH US  

ನ್ಯಾಚುರಲ್ ಸ್ಟಾರ್ ಪಲ್ಲವಿ ಮೊಗಕೆ ಮೊಡವೆಯೇ ಭೂಷಣ!

ಮಲಯಾಳಿ ಚಿತ್ರರಂಗ "ಮಲರ್‌' ಎಂದೇ ಖ್ಯಾತಿಯಾಗಿರುವ ಸಾಯಿ ಪಲ್ಲವಿಯ ಅಂದವನ್ನು ಅವರ ಅಭಿಮಾನಿಗಳು ಹಾಡಿಹೊಗಳುವ ಪರಿ ಇದು. ಸಾಮಾನ್ಯವಾಗಿ ಅಭಿಮಾನಿಗಳಿಗೆ ತಮ್ಮ ನಾಯಕಿಯಲ್ಲಿ ಯಾವುದೋ ಒಂದು ಸೆಳೆತ ಇರುತ್ತದೆ. ಆ ಸೆಳೆತಕ್ಕೆ ಆತ ಫಿದಾ ಆಗಿರುತ್ತಾನೆ. ಅದು ನಾಯಕಿಯ ನಗು ಇರಬಹುದು. ಆಕೆಯ ಗುಳಿಕೆನ್ನೆ ಅಥವಾ ಕಣ್ಣು... ಹೀಗೆ ಒಂದಿಲ್ಲೊಂದು ಕಾರಣದಿಂದ ಅಚ್ಚುಮೆಚ್ಚು ಆಗುತ್ತಾರೆ.

ಅದೇ ರೀತಿ, ಸಾಯಿ ಪಲ್ಲವಿ ತಮ್ಮ ಕೆನ್ನೆಯ ಮೇಲೆ ಮುತ್ತಿನಂತೆ ಜೋಡಿಸಿಟ್ಟ ಮೊಡವೆಗಳಿಂದ ಎಷ್ಟೋ ಹುಡುಗರಿಗೆ ಹುಚ್ಚುಹಿಡಿಸಿದ್ದಾರೆ. ವಿಚಿತ್ರವೆಂದರೆ ಬಹುತೇಕ ಹೆಣ್ಣುಮಕ್ಕಳ ಚಿಂತೆಗೆ ಕಾರಣವಾಗಿರುವುದು ಇದೇ ಮೊಡವೆಗಳು! ಈ ದೃಷ್ಟಿಯಿಂದ ಸಾಯಿ ಪಲ್ಲವಿ ತುಂಬಾ ವಿಭಿನ್ನ. ಮೇಕಪ್‌ ಇಲ್ಲದೆ ಮನೆಯಿಂದ ಹೊರಗೆ ಕಾಲಿಡದ ಸೆಲೆಬ್ರಿಟಿಗಳ ನಡುವೆ ಕೆನ್ನೆಯ ಮೇಲೆ ಮುತ್ತಿನಂತೆ ಜೋಡಿಸಿಟ್ಟ ಮೊಡವೆಗಳ ಮೂಲಕ ಅಂದವನ್ನು ಪ್ರದರ್ಶಿಸಿ, ಸೈ ಎನ್ನಿಸಿಕೊಂಡಿದ್ದಾರೆ.

ಅಲ್ಲದೆ, ಗಲ್ಲದ ಮೇಲೆ ಮೂಡಿದ ಗುಲಾಬಿ ರಂಗು, ಗುಂಗುರು ಕೂದಲು, ಕೆಂಪು ತುಟಿ, ಹಾಲುಬಿಳುಪು ಬಣ್ಣ ಇವೆಲ್ಲವೂ ಇವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದಲ್ಲದೇ, ಮೊಡವೆ ಎಂಬುದು ದೊಡ್ಡ ಶಾಪ ಎನ್ನುತ್ತಿದ್ದ ಇಂದಿನ ಹೆಣ್ಣುಮಕ್ಕಳಿಗೆ "ಮೊಡವೆಯೇ ನನ್ನ ಸೌಂದರ್ಯವನ್ನು ಹೆಚ್ಚಿಸಿದ್ದು, ಅದೆಂದಿಗೂ ನನ್ನ ಸೌಂದರ್ಯಕ್ಕೆ ಅಡ್ಡಿಯಾಗಿಲ್ಲ' ಎಂಬುದು ಇವರನ್ನು ನೋಡಿದರೇ ಗೊತ್ತಾಗುತ್ತದೆ.

ಸೆಲೆಬ್ರಿಟಿ ನಟಿಯರಿಗೆ ದೇಹದ ಫಿಟ್ನೆಸ್‌ ಕಾಪಾಡೋದು, ಬ್ಯೂಟಿ ಮೆಂಟೇನ್‌ ಮಾಡುವಷ್ಟು ಕಷ್ಟದ ಕೆಲಸ ಬೇರೇನಿಲ್ಲ. ಯಾಕೆಂದರೆ, ಮುಖದಲ್ಲೊಂದು ಮೊಡವೆ ಮೂಡುವಂತಿಲ್ಲ, ಕತ್ತಿನ ಭಾಗದಲ್ಲೊಂದು ಕಪ್ಪು ಚುಕ್ಕೆ ಕಾಣುವಂತಿಲ್ಲ, ಕೈಯಲ್ಲೊಂದು ಸುಕ್ಕು ತೋರುವಂತಿಲ್ಲ.. ಒಂದೇ ಕ್ಷಣಕ್ಕೆ ಔಟ್‍ಡೇಟ್ ಆಗೋ ಅಪಾಯ. ಹಾಗಾಗಿ ಸೌಂದರ್ಯವನ್ನು ಕಾಪಾಡಿಕೊಳ್ಳಲು ಯೋಗ, ಡಯಟ್, ವ್ಯಾಯಾಮ, ಹೀಗೆ ಹಲವಾರು ತಂತ್ರಗಳನ್ನು ಅನುಸರಿಸುತ್ತಲೇ ಇರುತ್ತಾರೆ. 

ಆದರೆ, ಸಾಯಿ ಪಲ್ಲವಿ ಅವರದೇ ಬೇರೆ ದಾರಿ. ಮುಖಕ್ಕೆ ಯಾವುದೇ ರೀತಿಯ ಮೇಕಪ್‌ ಮಾಡಿಕೊಳ್ಳದೇ, ತುಟಿ ಮೇಲೆ ರಂಗಿನ ನೋಟವಿಲ್ಲದೇ, ಕೆನ್ನೆ ಮೇಲೆ ಡಿಂಪಲ್‌ ಹಾಗೂ ಗುಲಾಬಿ ಬಣ್ಣವಿಲ್ಲದೇ ತಾನು ಒಬ್ಬ ನಟಿ ಎಂದು ತೋರಿಸಿಕೊಟ್ಟಿದ್ದು ಮದ್ರಾಸಿ ಬೆಡಗಿ ಸಾಯಿ ಪಲ್ಲವಿ. ಚಿತ್ರರಂಗ ಮೊದಲೇ ಗ್ಲ್ಯಾಮರ್ ಜಗತ್ತು. ಇಲ್ಲಿ ಯಾವುದೇ ರೀತಿಯ ವಸ್ತ್ರವನ್ನಾದರೂ ತೊಡಲು ನಟಿಮಣಿಯರು ರೆಡಿ ಇರಬೇಕು ಎಂಬುದನ್ನು ಸುಳ್ಳು ಮಾಡಿದ್ದ ಖ್ಯಾತಿ ಈ ಹಿಂದೆ ಸಿತಾರಾ ಅವರಿಗಿದ್ದರೆ, ಬಹುಶಃ ಈಗ ಸಾಯಿಪಲ್ಲವಿಗೆ ಸೇರಬೇಕು ಎನ್ನಿಸುತ್ತದೆ. 

ಅದಕ್ಕೆ ಮುಖ್ಯ ಕಾರಣ ದಕ್ಷಿಣ ಭಾರತದ ಉಡುಪುಗಳಾದ ಸೀರೆ, ಲಂಗ ದಾವಣಿ, ಚೂಡಿದಾರ್ ಗಳಲ್ಲಷ್ಟೇ ನಾವು ಇವರನ್ನು ಸಿನಿಮಾಗಳಲ್ಲಿ ನೋಡಲು ಸಾಧ್ಯ. ಅವಶ್ಯಕತೆ ಇದ್ದಾಗಷ್ಟೇ ಪಾಶ್ಚಾತ್ಯ ಬಟ್ಟೆಗಳನ್ನು ತೊಡುವ ಈ ಸುಂದರಿ ಅದರಲ್ಲೂ ಚ್ಯೂಸಿ ಎನ್ನಿಸಿಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ ತೆಲುಗಿನ "ಫಿದಾ' ಚಿತ್ರದಲ್ಲಿ ಇವರು ತೊಟ್ಟ ದಿರಿಸುಗಳು. ಸಾಯಿಪಲ್ಲವಿ ಈಗಾಗಲೇ ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದು, ಇಲ್ಲಿಯವರೆಗೆ ಶಿಕ್ಷಕಿಯಾಗಿ, ಪ್ರೇಯಸಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಮತ್ತು ಹಳ್ಳಿ ಹುಡುಗಿಯಾಗಿ ತಮ್ಮ ಪಾತ್ರಗಳಿಗೆ ಬಣ್ಣ ಹಚ್ಚಿ ಜೀವ ತುಂಬಿದ್ದಾರೆ. 

ಅಲ್ಲದೇ ಇವರು ಆಧುನಿಕ ಯುವತಿಯರಿಗೆ ಮಾದರಿಯೂ ಕೂಡಾ. ಸಿನಿಪ್ರಿಯರ ಮನ ಗೆದ್ದ ಸಾಯಿಪಲ್ಲವಿ ಮಲೆಯಾಳಂನ ಬ್ಲಾಕ್‍ಬಸ್ಟರ್ ಸಿನಿಮಾ "ಪ್ರೇಮಂ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ತಾನು ನಟಿಸಿದ ಮೊದಲ ಚಿತ್ರಕ್ಕೆ ಫಿಲ್ಮಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. "ಪ್ರೇಮಂ'ನ "ಮಲರ್' ಪಾತ್ರಕ್ಕೆ ಜೀವ ತುಂಬಿ ಸಿನಿಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ. 

ತೆಲುಗಿನ ನಟ ವರುಣ್‌ ತೇಜ್‌ ಜೊತೆ "ಫಿದಾ' ಚಿತ್ರದ "ವಚ್ಚಿಂದೆ ಮೆಲ್ಲ ಮೆಲ್ಲಗಾ ವಚ್ಚಿಂದೆ' ಹಾಗೂ "ಎಂಸಿಎ' ಚಿತ್ರದಲ್ಲಿ ನಟ ನಾನಿ ಜೊತೆಗೆ "ಯೆಮೊಂಡೈ ನಾನಿ ಗಾರು' ಹಾಡಿಗೆ ಸಾಯಿಪಲ್ಲವಿ ಮೈಯಲ್ಲಿ ಮೂಳೆಯೇ ಇಲ್ಲವೇನೋ ಎಂಬಂತೆ ಸೊಂಟ ಬಳುಕಿಸಿದ ರೀತಿಗೆ ಹುಡುಗರೇನು ಸ್ವತಃ ಹುಡುಗಿಯರೇ ಅಚ್ಚರಿಗೊಳಗಾದರು. ಅಲ್ಲದೇ ಈಕೆಯ "ವಚ್ಚಿಂದೆ' ಹಾಡು ಎಷ್ಟರ ಮಟ್ಟಿಗೆ ಹಿಟ್‌ ಆಗಿತ್ತು ಎಂದರೆ ತೆಲುಗು ಅರ್ಥವಾಗದವರು ಕೂಡ ಆ ಹಾಡಿಗೆ ಹುಚ್ಚೆದ್ದು ಹೆಜ್ಜೆ ಹಾಕಿದ್ದಾರೆ. 

ಈ ಕೆಂಪುಕೆನ್ನೆಯ ಮೊಡವೆ ಸುಂದರಿ ಓದಿದ್ದು ಎಂಬಿಬಿಎಸ್‌. ತಾಯಿಯಂತೆ ದೊಡ್ಡ ಡಾನ್ಸರ್ ಆಗಬೇಕು ಎಂದುಕೊಂಡಿದ್ದ ಈಕೆ ನಟಿಯಾಗಿದ್ದು ಆಕಸ್ಮಿಕ. ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಇಮೇಜ್‌ ಹೊಂದಿರುವ ಈಕೆ ಸಿನಿಮಾ ಎನ್ನುವುದು ತಾತ್ಕಾಲಿಕ, ಇಲ್ಲಿ ಪ್ರತಿದಿನ ಹೊಸ ಹೊಸ ಮುಖಗಳು ಬಂದು ಹೋಗುತ್ತಿರುತ್ತವೆ. ಹೊಸತು ಬಂದಾಗ ಹಳೆಯದಕ್ಕೆ ಬೆಲೆ ಇಲ್ಲ. ಹಾಗಾಗಿ ನನ್ನ ಮೊದಲ ಆದ್ಯತೆ ಎಂದಿಗೂ ವೈದ್ಯ ವೃತ್ತಿ ಎಂದು ಹೇಳಿದ್ದಾರೆ.

ಇನ್ನು ಸಾಯಿ ಪಲ್ಲವಿಯನ್ನು ಹೊಸ ತಲೆಮಾರಿನ ಟ್ರೆಂಡ್‌ ಸೆಟ್ಟರ್ ಅಂತ ಹೇಳಬಹುದಾಗಿದ್ದು, ಇವರಿಗೆ ಪ್ರವಾಸ, ನೃತ್ಯ ಬಹು ನೆಚ್ಚಿನ ಹವ್ಯಾಸ. ಹಾಗೂ ಅವರ ತಾಯಿಯೊಂದಿಗೆ ಇಷ್ಟಪಡುವ ಜಾಗದಲೆಲ್ಲಾ ಸುತ್ತುವ ಅಭ್ಯಾಸ ಕೂಡಾ ಉಂಟು. ಒಟ್ಟಾರೆ ಸಿನಿಪ್ರಿಯರ ಮನ ಗೆದ್ದ ಸಾಯಿಪಲ್ಲವಿ ಕಸ್ತೂರಿ ಮಾನ್, ದಾಮ್‌ ದೂಮ್‌ ಚಿತ್ರದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಇವರ ಮಾರಿ 2, ಎನ್‍ಜಿಕೆ, ಪಡಿ ಪಡಿ ಲೇಚೆ ಮನಸ್ಸು ಸೇರಿದಂತೆ ಹಲವು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ.

* ಲಕ್ಷ್ಮಿಗೋವಿಂದರಾಜು ಎಸ್.

ಇಂದು ಹೆಚ್ಚು ಓದಿದ್ದು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 08:19am

ತುಮಕೂರಿನ ಹಳೆ ಸಿದ್ಧಗಂಗಾ ಮಠದ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

Jan 18, 2019 06:50am

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 06:50am

Trending videos

Back to Top