CONNECT WITH US  

ಈ ಜನ ಅಂಜನಾ

ಕನ್ನಡ  ಚಿತ್ರರಂಗದಲ್ಲಿ ಅಂಜನಾ ಎಂದರೆ ನೆನಪಿಗೆ ಬರುತ್ತಿದ್ದಿದ್ದು ಅಜಗಜಾಂತರ ಚಿತ್ರದ ಅಂಜನಾ ಮಾತ್ರ. 90ರ ದಶಕದ ಆರಂಭದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ ಅವರು, ವಿಷ್ಣುವರ್ಧನ್‌ ಅವರ ನಿಷ್ಕರ್ಷ ಚಿತ್ರದ ನಂತರ ಮತ್ತೆಲ್ಲೂ ಕಾಣಿಸಿಕೊಂಡಿರಲಿಲ್ಲ. ಆಕೆ ಎಲ್ಲಿ ಹೋದರೋ ಗೊತ್ತಿಲ್ಲ. ಹಾಗೆಯೇ ಆ ಹೆಸರಿನ ಇನ್ನೊಬ್ಬ ನಟಿಯೂ ಕನ್ನಡ ಚಿತ್ರರಂಗಕ್ಕೆ ಸಿಗಲಿಲ್ಲ. ಅಂಜನಾ ವಾಪಸ್ಸು ಚಿತ್ರರಂಗಕ್ಕೆ ಬರದಿದ್ದರೂ, ಅವರ ಹೆಸರಿನ ಮತ್ತೂಬ್ಬ ನಟಿ ಸದ್ದಿಲ್ಲದೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಯಾರು ಈ ಅಂಜನಾ ಎಂದು ಹುಡುಕಿದರೆ, ಸಿಗುವ ಉತ್ತರ ಅಂಜನಾ ದೇಶಪಾಂಡೆ. ಮೊನ್ನೆ ಬಿಡುಗಡೆಯಾಯಿತಲ್ಲ, ತರೆಲ ನನ್ಮಕ್ಳು ಎಂಬ ಹೊಸ ಚಿತ್ರ., ಆ ಚಿತ್ರದಲ್ಲಿ ಎರಡನೆಯ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಜಗ್ಗೇಶ್‌ ಅವರ ಮಗ ಗುರುರಾಜ್‌ ಜಗ್ಗೇಶ್‌ ಎದುರಿಗೆ ಸಾಕಷ್ಟು ಗ್ಲಾಮರಸ್‌ ಆಗಿ ನಟಿಸಿ ಈಗ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಚಿತ್ರಗಳಲ್ಲಿ ನಟಿಸುವುದಕ್ಕೆ ಎದುರು ನೋಡುತ್ತಿದ್ದಾರೆ.

ಹಾಗೆ ನೋಡಿದರೆ, ಅಂಜನಾಗೆ ಹಿರಿತೆರೆ ಹೊಸದು. ಏಕೆಂದರೆ, ಈಗಾಗಲೇ ಕಿರುತೆರೆಯಲ್ಲಿ ಅಂಜನಾ ನಟಿಸಿದ್ದಾರೆ ಮತ್ತು ಅಲ್ಲಿ ಒಂದಿಷ್ಟು ಒಳ್ಳೆಯ ಹೆಸರನ್ನೂ ಸಂಪಾದಿಸಿದ್ದಾರೆ. ಕಿರುತೆರೆಯಲ್ಲಿ ನಟಿಸುವಾಗ, ಸಹಜವಾಗಿಯೇ ಹಿರಿತೆರೆಯ ಲ್ಲೂ ಮಿಂಚಬೇಕು ಮತ್ತು ಒಂದಿಷ್ಟು ಚಿತ್ರಗಳಲ್ಲಿ ನಟಿಸಬೇಕು ಎಂಬ ಆಸೆ ಚಿಗುರೊಡೆದಿದೆ.
ಹಾಗಿರುವಾಗಲೇ ಅವರಿಗೆ ಸಿಕ್ಕಿದ್ದು ನಾಗಶೇಖರ್‌ ಮತ್ತು ಗುರುರಾಜ್‌ ಜಗ್ಗೇಶ್‌ ಅಭಿನಯದ ತರೆಲ ನನ್ಮಕ್ಳು. ಈ ಚಿತ್ರದಲ್ಲಿ ಅಂಜನಾ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. 

ಅಂದ ಹಾಗೆ, ಅಂಜನಾ ಪಕ್ಕಾ ಕನ್ನಡದ ಹುಡುಗಿ. ತಂದೆ-ತಾಯಿ ಇಬ್ಬರೂ ಬ್ಯಾಂಕ್‌ ಉದ್ಯೋಗಿಗಳು. ಆದರೆ, ಮಗಳ ಆಸೆ ಮಾತ್ರ ಬಣ್ಣದ ಲೋಕದ ಕಡೆಗಿತ್ತು. ಹಾಗಾಗಿ ಮಾಡೆಲಿಂಗ್‌ ಜೊತೆಗೆ ಕಿರುತೆರೆಯಲ್ಲಿ ನಟಿಸಿರುವ ಅಂಜನಾ ಕ್ರಮೇಣ ಹಿರಿತೆರೆಗೆ ಜಂಪ್‌ ಆದರು. ತರೆಲ ನನ್ಮಕ್ಳು.  ಚಿತ್ರದ ಮೂಲಕ ಬೆಳ್ಳಿ ತೆರೆಗೆ ಅಂಜನಾ ಏನೋ ಎಂಟ್ರಿ ಕೊಟ್ಟರು. ಆದರೆ, ಚಿತ್ರ ಕಾರಣಾಂತರಗಳಿಂದ ತಡವಾಗುತ್ತಾ ಹೋಯಿತು. ಹೀಗೆ ಅಂಜನಾ ಅಭಿನಯದ ಒಂದೇ ಒಂದು ಚಿತ್ರ ಬಿಡುಗಡೆಯಾಗದಿದ್ದರೂ, ಆಕೆಯ ಫೋಟೋಗಳನ್ನು ನೋಡಿ ಆಕೆಗೆ ಒಂದು ತೆಲುಗು ಚಿತ್ರ ಸಿಕ್ಕಿತು. ಅದೇ ನೇನು ನಾ ಫ್ರೆಂಡ್ಸ್‌. ಮೊದಲ ಚಿತ್ರ ಬಿಡುಗಡೆಯಾಗ ದಿದ್ದರೂ, ಅಷ್ಟು ಬೇಗ ತೆಲುಗು ಚಿತ್ರವೊಂದರಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಅಂಜನಾಗೆ ಸಹಜವಾಗಿಯೇ ಖುಷಿಯಾಗಿದೆ.

ತೆಲುಗು, ತಮಿಳು ಅಥವಾ ಇನ್ನಾéವುದೇ ಭಾಷೆಗಳಲ್ಲಿ ಅವಕಾಶಗಳು ಸಿಗಲಿ, ತಮ್ಮ ಪ್ರಾಮುಖ್ಯತೆ ಮಾತ್ರ ಕನ್ನಡಕ್ಕೆ ಎಂದು ಅಂಜನಾ ಮೊದಲೇ ಸ್ಪಷ್ಟಪಡಿಸಿದ್ದರು. ಆದರೆ, ತರೆಲ ನನ್ಮಕ್ಳು. ಚಿತ್ರ ಬಿಡುಗಡೆಯಾಗದ ಕಾರಣ, ಆಕೆಯ ಬಗ್ಗೆ ಚಿತ್ರರಂಗದವರಿಗಾಗಲೀ, ಪ್ರೇಕ್ಷಕರಿಗಾಗಲೀ ಹೆಚ್ಚು ವಿಷಯಗಳು ಗೊತ್ತಿಲ್ಲ. ಈಗ ತರೆಲ ನನ್ಮಕ್ಳು. ಚಿತ್ರದಲ್ಲಿ ಅಂಜನಾ ಅವರ ಪ್ರತಿಭೆ ಮತ್ತು ಗ್ಲಾಮರ್‌ ನೋಡಿದ ಮೇಲಾದರೂ, ಕನ್ನಡ ಚಿತ್ರರಂಗದಲ್ಲಿ ಅಂಜನಾಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಗುತ್ತದಾ, ಇಲ್ಲವಾ ಎಂಬುದನ್ನು ಕಾದು ನೋಡಬೇಕು.

Trending videos

Back to Top