CONNECT WITH US  

ರಂಜನಿ ರಾಗ

ಕಿರುತೆರೆಯಿಂದ ಹಿರಿತೆರೆಗೆ ಬರುವ ನಟಿಮಣಿಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಆ ಸಾಲಿಗೆ ಹೊಸ ಸೇರ್ಪಡೆ ರಂಜನಿ ರಾಘವನ್‌. ರಂಜನಿ ರಾಘವನ್‌ ಎಂದರೆ ನಿಮಗೆ ಒಮ್ಮೆಲೇ ಗೊತ್ತಾಗಲಿಕ್ಕಿಲ್ಲ. ಬದಲಾಗಿ ಪುಟ್ಟಗೌರಿ ಮದುವೆಯ ಗೌರಿ ಎಂದರೆ ನಿಮಗೆ ಬೇಗನೇ ಗೊತ್ತಾಗುತ್ತದೆ. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿಯಾಗಿ ಮನೆಮಂದಿಯ ಮನಗೆದ್ದಿರುವ ರಂಜನಿ ರಾಘವನ್‌ ಹಿರಿತೆರೆಗೂ ಕಾಲಿಟ್ಟಿದ್ದಾರೆ. 

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಂಜನಿ ರಾಘವನ್‌ ಯಾವುದೋ ಒಂದು ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಪಡೆಯುವ ಕೆಲಸದಲ್ಲಿರಬೇಕಿತ್ತು. ಏಕೆಂದರೆ, ರಂಜನಿ ಎಂಬಿಎ ಪದವೀಧರೆ. ಜೊತೆಗೆ ತಾನು ನಟಿಯಾಗುತ್ತೇನೆಂಬ ಯಾವ ನಂಬಿಕೆಯೂ ಇರಲಿಲ್ಲವಂತೆ. ಆದರೆ ಆಸಕ್ತಿಯಂತೂ ಇತ್ತು. ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದ ರಂಜನಿಗೆ ಅದೇ ಪ್ಲಸ್‌ ಆಯಿತೆಂದರೆ ತಪ್ಪಲ್ಲ. ಶೇಷಾದ್ರಿಪುರಂ ಕಾಲೇಜಿನಲ್ಲಿ ರಂಜನಿ ಓದುತ್ತಿದ್ದ ವೇಳೆ ಕೆಳದಿ ಚೆನ್ನಮ್ಮ ಧಾರಾವಾಹಿಯ ಆಡಿಷನ್‌ ನಡೆಯುತ್ತಿತ್ತು. ಆಸಕ್ತಿ ಇರುವ ಯಾರು ಬೇಕಾದರೂ ಭಾಗವಹಿಸುವ ಅವಕಾಶ ಕೂಡಾ ಇತ್ತು. ಈ ಅವಕಾಶವನ್ನು ಬಳಸಿಕೊಂಡ ರಂಜನಿ ಆಡಿಷನ್‌ ಕೊಟ್ಟೇಬಿಟ್ಟರು. ಕಾರಣಾಂತರಗಳಿಂದ ಆ ಧಾರಾವಾಹಿ ಮುಂದುವರಿಯಲಿಲ್ಲ. ಇದರಿಂದ ರಂಜನಿಗೇನೂ ನಷ್ಟವಾಗಲಿಲ್ಲ. ಆಡಿಷನ್‌ ಮೂಲಕ ಬಣ್ಣದ ಜಗತ್ತಿನ ಸಂಪರ್ಕ ಬೆಳೆಯಿತು.

ಹೀಗಿರುವಾಗಲೇ ರಂಜನಿಗೆ ಸಿಕ್ಕಿದ್ದು ಪುಟ್ಟಗೌರಿ ಮದುವೆ  ಧಾರಾವಾಹಿ. ಮೊದಲು ಈ ಆಫ‌ರ್‌ ಬಂದಾಗ ಭಯವಾಯಿತಂತೆ. ಏಕೆಂದರೆ, ಇಷ್ಟು ಹೊತ್ತಿಗೆ ಆ ಧಾರಾವಾಹಿ ಸಖತ್‌ ಫೇಮಸ್‌ ಆಗಿತ್ತು. ಪುಟ್ಟಗೌರಿಯ ಮುಂದುವರಿದ ಪಾತ್ರವನ್ನು ರಂಜನಿ ಮಾಡಬೇಕಿತ್ತು. ಫೇಮಸ್‌ ಧಾರಾವಾಹಿಯಲ್ಲಿ ಏಕಾಏಕಿ ಹೊಸ ಮುಖವನ್ನು ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಭಯದಿಂದಲೇ ರಂಜನಿ ಒಪ್ಪಿಕೊಂಡರಂತೆ. ಆದರೆ, ಇಡೀ ತಂಡದ ಬೆಂಬಲ ಸಿಕ್ಕಿತು. ರಂಜನಿ ಈಗ ಸಿನಿಮಾದಲ್ಲೂ ಬಿಝಿ. ಧಾರಾವಾಹಿಯಲ್ಲಿ ಬಿಝಿಯಾಗಿರು ವಾಗಲೇ ರಂಜನಿಗೆ ಸಿನಿಮಾಗಳಿಂದ ಅನೇಕ ಆಫ‌ರ್‌ಗಳು ಬರುತ್ತವೆ. ಆದರೆ, ರಂಜನಿ ಮಾತ್ರ ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಅದಕ್ಕೆ ಕಾರಣ ಸೀರಿಯಲ್‌ ಫೇಮ್‌. ಪುಟ್ಟಗೌರಿ ಮದುವೆ ಧಾರಾವಾಹಿಯಿಂದ ಒಳ್ಳೆಯ ಹೆಸರು ಬಂದಿದೆ. ಇನ್ನು ಯಾವುದೋ ಒಂದೆರಡು ದೃಶ್ಯಗಳಲ್ಲಿ ಬಂದು ಹೋಗುವ ಸಿನಿಮಾಗಳನ್ನು ಮಾಡಿ ಹೆಸರು ಕೆಡಿಸಿಕೊಳ್ಳೋದು ಬೇಡ ಎಂಬ ಕಾರಣಕ್ಕೆ ರಂಜನಿ ಯಾವುದೇ ಆಫ‌ರ್‌ ಒಪ್ಪಿಕೊಂಡಿರಲಿಲ್ಲವಂತೆ. ಹೀಗಿರುವಾಗ ಬಂದಿದ್ದು ರಾಜಹಂಸ. ಮೊದಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಸಿಕ್ಕ ಮತ್ತೂಂದು ಅವಕಾಶವೆಂದರೆ  ಸುಬ್ಬ-ಸುಬ್ಬಿ. ಅನೂಪ್‌ ಸಾ.ರಾ.ಗೋವಿಂದು ಹೀರೋ ಆಗಿರುವ ಈ ಸಿನಿಮಾದಲ್ಲಿ ಹೋಮ್ಲಿ ಪಾತ್ರ ಸಿಕ್ಕಿದೆಯಂತೆ.

Trending videos

Back to Top