ಭವಬಂಧನವ ದಾಟಿ…


Team Udayavani, Apr 2, 2017, 3:50 AM IST

01-SAPTAHIKA-8.jpg

ಊರಿಂದ ಅಜ್ಜಿ ಬರುತ್ತಿದ್ದಾರೆ ಅಂದಾಕ್ಷಣ ನನಗೆ ಹಿಗ್ಗೊ ಹಿಗ್ಗು. ಮೂಲೆಯ ಕೋಣೆಗೆ ಹೋಗಿ ನನ್ನ ಕೌದಿ ಮತ್ತು ಒಂದು ಮೆತ್ತನೆಯ ಹತ್ತಿ ಸೀರೆ ತಂದು ಮಧ್ಯದ ಕೋಣೆಯಲ್ಲಿಟ್ಟು ಬಂದೆ. “”ಆಯಿ… ಅಜ್ಜಿ ಎಷ್ಟೊತ್ತಿಗೆ ಬರುತ್ತಾರೆ?” ಎಂದಾಗ ಆಯಿ ಸಿಡುಕುತ್ತ, “”ಹಿಂಗೆಲ್ಲ ಮಂಗನ ಹಾಗೆ ಮನೆ ತುಂಬ ಶಬ್ದ ಮಾಡುತ್ತ ಅಡ್ಡಾಡಬೇಡ, ಮಗು ಅಳುತ್ತದೆ. ಅದನ್ನು ಸಮಾಧಾನ ಮಾಡೋದಕ್ಕೆ ನನಗೆ ಆಗೋದಿಲ್ಲ.ಒಂದು ಬಂಡಿ ಕೆಲಸ ಇದೆ” ಎಂದು ನಾಲ್ಕು ಮನೆಗೆ ಕೇಳುವ ಹಾಗೆ ಕೂಗೋದಕ್ಕೆ ಶುರು ಮಾಡಿದಳು. “”ಆಯಿ… ನೀ ಯಾಕೆ ಹೀಗೆ ಕೂಗ್ತಿಯಾ? ಒಂದು ತಿಂಗಳು ಮಾತ್ರ ನಾ ಇಲ್ಲಿರುತ್ತೇನೆ. ಮತ್ತೆ ನನ್ನ ಗಂಡ ಬಂದು ಕರೆದುಕೊಂಡು ಹೋಗುತ್ತಾರೆ. ನಿನಗಿಂತ ಅತ್ತೆನೇ ಲೇಸು!” ಎಂದು ಅಕ್ಕ ಕೋಣೆಯಿಂದಲೇ ಆಯಿ ಮೇಲೆ ಮಾತಿನ ಪ್ರಹಾರ ಶುರುವಿಟ್ಟುಕೊಂಡಳು. “”ಇವತ್ತೇ ಬಂದು ಕರೆದುಕೊಂಡು ಹೋಗೋದಕ್ಕೆ ಹೇಳು, ನಿನ್ನ ಗಂಡನ ಹತ್ತಿರ. ನಾನೇನು ಊರಿನ ಬಾಗಿಲು ಮುಚ್ಚಿದೆನಾ? ಅತ್ತೆ ಮಾಡುತ್ತಾರೆ ಅಂತೆ ಅತ್ತೆ, ಮದುವೆಯಾಗಿ ನಾಲ್ಕೇ ತಿಂಗಳಿಗೆ ಕೋಳಿ ಗೂಡಿನಂತಹ ರೂಮ್‌ ಮಾಡಿಸಿಕೊಂಡು ಬೇರೆ ಹೋದವಳು ನೀನು. ಆಗ ಆ ಅತ್ತೆ ಜತೆ ಆಗಿಲ್ಲ ನಿನಗೆ. ಈಗ ಆಗುತ್ತಾ? ನಿನ್ನೆಯಿಂದ ಮಳೆ ಬೇರೆ ಸುರೀತಿದೆ. ಬಾಣಂತಿ, ಮಗುವಿಗೆ ಸ್ನಾನಕ್ಕೆ ನೀರು ಕಾಯಿಸೋಕೆ ತೆಂಗಿನ ಗರಿ, ಆಡಿಕೆ ಹಾಳೆ ಯಾವುದು ಒಣಗಿಲ್ಲ. ಆ ಸುಬ್ಬಣ್ಣ ನಾಯ್ಕನ ಮನೆಗೆ ಹೋಗಿ ಸೌದೆ ಒಡೆದುಕೊಡು ಮಾರಾಯಾ ಅಂತ ಬೇಸಿಗೆ ಇಡೀ ತಿರುಗಿದರೂ ಅವನು ಕೊಡಲಿ ಸರಿಯಿಲ್ಲ- ಅಂತ ಸಾಗಹಾಕಿದ. ನಿನ್ನ ಅಪ್ಪ ಯಾವೂರ ಅರಸಿ ಮುಂದೆ ಹೋಗಿ ಕುಳಿತುಕೊಂಡಿದ್ದಾರೋ ಗೊತ್ತಿಲ್ಲ” ಎಂದು ನಶ್ಯ ಹಾಕಿದ ಮೂಗನ್ನು ಸೆರಗಿನ ತುದಿಯಿಂದ ಒರೆಸಿಕೊಂಡು ಅಕ್ಕನಿಗೆ ಬೈಯುತ್ತಲೇ ನಾಲ್ಕು ಹನಿ ಕಣ್ಣೀರು ಒರೆಸಿಕೊಂಡಳು.

ಅಕ್ಕನ ಹೆರಿಗೆ ಆಗಿ ಒಂದು ವಾರ ಆಗಿತ್ತಷ್ಟೇ. ಬಾಣಂತನಕ್ಕೆ ಊರಿಂದ ಅಜ್ಜಿ ಬರುತ್ತಿದ್ದಾರೆ ಎಂಬುದೇ ನನಗೆ ಸಡಗರ. ಅಜ್ಜಿ ಸಿದ್ಧಾಪುರದಿಂದ ಹೊರಟಿದ್ದಾರೆ ಎಂದು ಮಾವ ಬೆಳಿಗ್ಗೇನೆ ಫೋನ್‌ ಮಾಡಿ ಹೇಳಿದ್ದರು. ಸಿದ್ಧಾಪುರದಿಂದ ಶಿರಸಿಗೆ ಅಜ್ಜಿ ಆರು ತಿಂಗಳಿಗೊಮ್ಮೆ ಬಂದು ಎರಡೇ ಎರಡು ದಿನ ಇದ್ದು ಹೋಗುತ್ತಿದ್ದರು. ಬಂದಾಗ ಅಪ್ಪನಿಗೆ ಒಂದಿಷ್ಟು ಬುದ್ಧಿಮಾತು, ಆಯಿ ಕಣ್ಣೀರಿಗೆ ಒಂದಿಷ್ಟು ಬೈಗುಳದ ಸುರಿಮಳೆ ಸುರಿಸಿ, ನನಗೆ ಚಕ್ಕುಲಿ, ಶೇಂಗಾ, ಗೆಣಸಿನ ಹಪ್ಪಳ ಕೊಟ್ಟು ಹೋಗುತ್ತಿದ್ದರು. “”ಇನ್ನೊಂದೆರೆಡು ದಿನ ಇರೆ ಅಜ್ಜಿ” ಎಂದಾಗ, “”ನಿನ್ನ ಮದ್ವೆಗೆ ತಿಂಗಳಿರುವಾಗಲೇ ಬಂದು ಸಂಸಾರ ಮಾಡುವ ಗುಟ್ಟು ಹೇಳಿಕೊಡುತ್ತೀನಿ ಪುಟ್ಟಿ. ನಿನ್ನ ಅಮ್ಮನ ಹಾಗೆ ಅಳುಮುಂಜಿ ಆಗಬೇಡ ನೀನು” ಎನ್ನುತ್ತಿದ್ದರು. ಮದುವೆ ಎಂದಾಕ್ಷಣ ಕೆಂಪಾಗುವ ನನ್ನ ಮುಖಕ್ಕೆ ದೃಷ್ಟಿ ತೆಗೆದು, “ಹಾದಿ ಕಣ್ಣು ಬೀದಿ ಕಣ್ಣು ರಂಡೇರಕಣ್ಣು ಮುಂಡೇರ ಕಣ್ಣು ಯಾವ ಕಣ್ಣು ಬೀಳದೇ ಇರಲಿ ನನ್ನ ಪುಟ್ಟಿ ಮೇಲೆ’ ಎಂದು ನಂದಬಟ್ಟಲು ಹೂವಿನ ರಸದಿಂದ ಮಾಡಿದ ಕಾಡಿಗೆಯನ್ನು ನನ್ನ ಗಲ್ಲಕ್ಕೆ ಒತ್ತುತ್ತಿದ್ದರು. 

ಅಜ್ಜಿ ಎಂದರೆ ನನಗೆ ಸ್ವಲ್ಪ ಸಲುಗೆ ಜಾಸ್ತಿ. ಅವರು ಊಟ ಮಾಡುವುದು ವಾರಕ್ಕೆ ಮೂರು ದಿನ ಮಾತ್ರ. ಕೆಲವು ದಿನ ರಾತ್ರಿ ಮಾಡಿದ ಕುಚ್ಚಲಕ್ಕಿ ಅನ್ನಕ್ಕೆ ಬೆಳಿಗ್ಗೆ ಗಟ್ಟಿಮೊಸರು, ಚಕ್ತೆಸೊಪ್ಪಿನ ಚಟ್ನಿ ಕಲಿಸಿಕೊಂಡು ಅವರು ಉಣ್ಣುತ್ತಿದ್ದ ರೀತಿ ನೋಡಿದರೆ, “ಒಂದು ತುತ್ತು ಅನ್ನ ನನಗೂ ಕೊಡಿ’ ಎಂದು ಎದುರು ಕುಳಿತುಕೊಳ್ಳುತ್ತಿದ್ದೆ. ಆಗೆಲ್ಲ ಆಯಿ, “ತಂಗಳನ್ನ ತಿನ್ನಬೇಡವೇ, ನಿಂದು ಮೊದಲೇ ಥಂಡಿ ಜೀವ’ ಎಂದು ಕೂಗಲು ಶುರುವಿಟ್ಟುಕೊಳ್ಳುತ್ತಿದ್ದಳು. ಆಯಿ ಮೇಲಿನ ಸಿಟ್ಟಿಗೆ ಅಜ್ಜಿ ಕೈಯಿಂದ ಎರಡು ತುತ್ತು ಜಾಸ್ತಿನೇ ತಿಂದು ಆಯಿ ಕಿವಿಗೆ ಬೀಳಲಿ ಎಂದು ಗಟ್ಟಿಯಾಗಿ ತೇಗುತ್ತಿದ್ದೆ. “”ಹೆಣ್ಣಾ ನೀನು…? ಅದೇ ಅಪ್ಪನ ಮಗಳು ಅಲ್ವಾ ಎಲ್ಲಿ ಹೋಗುತ್ತದೆ ರಕ್ತದ ಗುಣ” ಎಂದು ಮೂಲೆಯಲ್ಲಿದ್ದ ಪೊರಕೆ ತೆಗೆದುಕೊಂಡು ಆಯಿ ನನ್ನ ಮೈಗೆ ಬಿಸಾಕುತ್ತಿದ್ದಳು. ಆಗೆಲ್ಲಾ ಅಜ್ಜಿ , “”ರಾಮಾ ರಾಮಾ…” ಎಂದಷ್ಟೇ ಹೇಳಿ ಎದ್ದು ಹೋಗುತ್ತಿದ್ದರು. ಈ ಆಯಿ ನಮ್ಮಜ್ಜಿ ಮಗಳೆನಾ? ಎಂಬಂತ ಅನುಮಾನ ಮೂಡುತ್ತಿತ್ತು. ಆಯಿ ನಿಧಾನಕ್ಕೆ ಮಾತನಾಡಿದ್ದೇ ನನಗೆ ಗೊತ್ತಿಲ್ಲ. ಸಿಟ್ಟು ಬಂದರೆ ಚಾಮುಂಡಿ! ಯಾವತ್ತೂ ಮನೆಯಲ್ಲಿ ಜಾಸ್ತಿ ಹೊತ್ತು ಇರದ ಅಪ್ಪ , ಅಜ್ಜಿ ಬಂದಾಗ ಮಾತ್ರ ಜಗುಲಿ ಮೇಲೆ ಆಕಳಿಸುತ್ತ, ನಿದ್ದೆ ಬಾರದಿದ್ದರೂ ಮಲಗೇ ಇರುತ್ತಿದ್ದರು. ಆಗ ಆಯಿ ಸಂಭ್ರಮದಿಂದ ಓಡಾಡುತ್ತಾಳೆ. ಟೊಮ್ಯಾಟೊ ಹಣ್ಣಿನ ಸಾರಿಗೆ ಸಾಸಿವೆ, ಹಿಂಗು, ಕರಿಬೇವಿನ ಒಗ್ಗರಣೆ ಹಾಕುತ್ತಾಳೆ, ಬಚ್ಚಲಿನ ಬಿಸಿನೀರಿನ ಹಂಡೆ ಬೆಳಿಗ್ಗೆಯಿಂದ ಸಂಜೆವರೆಗೆ ಬೆಚ್ಚಗೆ ಇರುತ್ತೆ. ಸಂಜೆ ಹೊತ್ತು ಗೆಣಸು ಬೇಯಿಸಿ ಕಾಯಿಬೆಲ್ಲ ಹಾಕಿ ಒಗ್ಗರಿಸಿಕೊಡುತ್ತಾಳೆ. ಆಗೆಲ್ಲಾ ಅಪ್ಪ ಹೀಗೆ ದಿನಾ ಮನೆಯಲ್ಲಿ ಇರಬಾರದಾ ಅನಿಸುತ್ತಿತ್ತು. ಈ ಅಪ್ಪ ಯಾಕೆ ಅಜ್ಜಿಗೆ ಹೆದರುತ್ತಾರೆ ಎನ್ನುವುದರ ಸುಳಿವು ನನಗಿಲ್ಲ! “”ಅಪ್ಪನಿಗೆ ಇನ್ನೊಂದು ಹೆಂಡ್ತಿ ಇದ್ದಾಳೆ” ಎಂದು ಅಕ್ಕ ಯಾವತ್ತೋ ಒಂದು ದಿನ ನನ್ನ ಕಿವಿಯಲ್ಲಿ ಉಸುರಿದ್ದಳು. ಅದೇ ವಿಷಯಕ್ಕೆ ಆಯಿಗೂ ಅಪ್ಪನಿಗೂ ಜಗಳವಾಗಿ ಅಜ್ಜಿ ಏನೋ ಹೇಳಿ ಸಮಾಧಾನ ಮಾಡಿದ್ದರಂತೆ. ನಾನಂತೂ ಇದನ್ನು ನಂಬಲ್ಲಪ್ಪ ಎಂದು ಆಗ ಹೇಳಿದ್ದೆ. ಅದಕ್ಕೇ ಇರಬೇಕು ಆಯಿ ಅಷ್ಟು ಕೂಗಾಡೂದು ಅಂತ ಈಗೀಗ ಅನಿಸುತ್ತಿದೆ. 

ಅಜ್ಜಿನೂ ಅಷ್ಟೇ ಕೆಲವೊಮ್ಮೆ ಮೌನಗೌರಿಯಂತೆ ಇರುತ್ತಿದ್ದರು. ಪಕ್ಕದ ಮನೆ ಗಿರಿಜಮ್ಮ ಹೇಳುತ್ತಿದ್ದರು, “”ನಿನ್ನ ಅಜ್ಜಿಯ ಮೈಮೇಲೆ ಶಿರಸಿಯಮ್ಮ ಬರುತ್ತಾರೆ. ಅವರು ಒಂದು ರೀತಿ ದೇವರು ಇದ್ದ ಹಾಗೆ. ನೀನು ಅವರ ಜತೆ ಮಲಗಬೇಡ” ಎಂದು. ನಾನ್ಯಾವತ್ತೂ ಅಜ್ಜಿ ಮೇಲೆ ಶಿರಸಿಯಮ್ಮ ಬರುವುದನ್ನು ನೋಡಿಲ್ಲ. ಶುಕ್ರವಾರದ ದಿನ ಅಜ್ಜಿ ಬೆಳಿಗ್ಗೆ ಬೇಗ ಎದ್ದು ಊರಹೊಳೆಯಲ್ಲಿ ಮುಳುಗು ಹಾಕಿ ದೇವರಿಗೆ ತುಪ್ಪದ ದೀಪ ಹಚ್ಚಿ ಒಂದು ಗಂಟೆ ಹೊತ್ತು ಜಪಮಾಡುತ್ತಾರೆ. ಆ ದಿನ ನೀರು ಬಿಟ್ಟು ಬೇರೇನನ್ನೂ ಅವರು ಸೇವಿಸೋದನ್ನು ನಾನು ಇಲ್ಲಿಯವರೆಗೆ ಕಂಡಿಲ್ಲ. ಅಜ್ಜಿಯ ಒಳಗಿನ ಇನ್ನೊಂದು ಬದುಕು ನನಗೆ ಗೊತ್ತಿಲ್ಲ. ಅಮ್ಮನ ಬಳಿ ಕೇಳಿದಾಗ “”ನಿನಗೆ ಬೇರೆ ಕೆಲಸ ಇಲ್ಲದಿದ್ದರೆ ಕೊಟ್ಟಿಗೆಗೆ ಹೋಗಿ ಸಗಣಿ ತೆಗಿ, ತಲೆ ತಿನ್ನಬೇಡ” ಎಂದು ಉರಿಶೀತದಿಂದ ತುಂಬಿದ ಮೂಗಿಗೆ ಮತ್ತಷ್ಟು ನಶ್ಯ ತುಂಬಿಸಿಕೊಂಡು ಕೂಗುತ್ತಾಳೆ. “”ಈ ಆಯಿಗೆ ಮೆತ್ತಗೆ ಮಾತನಾಡೋದಕ್ಕೆನೇ ಬರೋದಿಲ್ಲ. ಇವಳು ಹೀಗೆ ಇರೋದಕ್ಕೇ ಅಪ್ಪ ಮನೆಗೆ ಸರಿಯಾಗಿ ಬರುವುದಿಲ್ಲ” ಎಂದು ನಾನು ಸುಮ್ಮನಾಗುತ್ತಿದ್ದೆ.

ಈಗ ಅಜ್ಜಿ ಬಂದಿದ್ದು ಅಕ್ಕನ ಬಾಣಂತನಕ್ಕೆಂದು. ಎಂಟನೆಯ ತಿಂಗಳಿಗೆ ಸೀಮಂತ ಮಾಡಿದ ಮೇಲೆ ಅಕ್ಕ ನಮ್ಮನೇಲೆ ಠಿಕಾಣಿ ಹೂಡಿ¨ªಾಳೆ. ಆಗಾಗ ಆಯಿ-ಅಕ್ಕನ ಮಧ್ಯೆ ಜಗಳ ನಡೆಯುತ್ತಿತ್ತು. ಕೊನೆಗೆ ಆಯಿನೇ ಸೋತು, “ಬಸುರಿ ಹೆಂಗಸಿಗೆ ಬೈದೆ’ ಎಂದು ಕಣ್ಣೀರು ಸುರಿಸುತ್ತ, ತನ್ನನ್ನು ತಾನು ಶಪಿಸಿಕೊಳ್ಳುತ್ತ ಅಕ್ಕನ ಬಯಕೆ ತೀರಿಸಲು ಅಪ್ಪದಿಟ್ಟು ಮಾಡಿ, “ಅಕ್ಕನಿಗೆ ಕೊಡು’ ಎಂದು ನನ್ನನ್ನು ಅವಳ ಕೋಣೆಗೆ ಅಟ್ಟುತ್ತಿದ್ದಳು. “ನಿಮ್ಮಿಬ್ಬರ ಜಗಳದಲ್ಲಿ ನನ್ನನ್ನು ಯಾಕೆ ಮಧ್ಯೆ ತರುತ್ತೀರಿ?’ ಎಂದು ನಾನು ಸಮಯ ಸಿಕ್ಕಾಗಲೆಲ್ಲ ಆಯಿ ಮೇಲೆ ಸಿಕ್ಕಿದ್ದೆ ಛಾನ್ಸು ಅನ್ನುವ ಹಾಗೆ ಸಿಡುಕುತ್ತಿದ್ದೆ. ಇನ್ನು ಅಕ್ಕನೋ ತನ್ನ ತುಂಬು ಹೊಟ್ಟೆಯ ಮೇಲೆ ತ್ರಿವೇಣಿಯವರ ಕಾದಂಬರಿಯನ್ನು ಇಟ್ಟುಕೊಂಡು ಮಲಗಿರುತ್ತಿದ್ದಳು. “”ಇದೆಲ್ಲಾ ಓದಬಾರದಂತೆ ಕಣೆ ಬಸುರಿ ಹೆಂಗಸು ದೇವರ ಹಾಡು, ಹರಿಕತೆಯೆಲ್ಲಾ ಕೇಳಬೇಕಂತೆ ಆಗ ಮಕ್ಕಳು ಸಂಸ್ಕಾರವಂತರು ಆಗುತ್ತಾರೆ” ಎಂದು ನಾನು ಅಕ್ಕನಿಗೆ ಉಪದೇಶ ಕೊಡುತ್ತಿದ್ದೆ. ಅವಳು ಪುಸಕ್ಕನೇ ನಕ್ಕು “”ನೀನು ಈಗಲೇ ಇದಕ್ಕೆಲ್ಲಾ ತಯಾರಿ ಮಾಡಿಕೊಂಡ ಹಾಗೆ ಇದೆ. ಥೇಟ್‌ ಹಳೆಕಾಲದ ಗುಗ್ಗು ನೀನು. ಅಜ್ಜಿ ಮಾತು ಕೇಳಿಕೊಂಡು ಹೀಗೆಲ್ಲಾ ಆಡಬೇಡ. ಈಗ ಕಾಲ ಬದಲಾಗಿದೆ” ಎಂದು ತನ್ನ ಹೊಟ್ಟೆ ಸವರಿಕೊಳ್ಳುತ್ತಿದ್ದಳು. ಯಾಕೆ ಇವರಿಗೆಲ್ಲಾ ಅಜ್ಜಿ ಅಂದರೆ ಅಸಡ್ಡೆ? ಈ ಸಲ ಅವರು ಬಂದಾಗ ಅವರ ಜೀವನದ ಬಗ್ಗೆ ಕೇಳಿಯೇ ತೀರಬೇಕು ಅಂದುಕೊಂಡು ಜಗಲಿ ಮೇಲೆ ನಿಂತು ನಮ್ಮೂರಿನ ಗಜಾನನ ಬಸ್ಸಿಗಾಗಿ ಕಾಯತೊಡಗಿದೆ. 

ರಸ್ತೆಯತ್ತ ಇಣುಕಿ ಇಣುಕಿ ನನ್ನ ಕತ್ತು ನೋವಾದರೂ ಬಸ್‌ನ ಸುಳಿವಿರಲಿಲ್ಲ. ಸಂಜೆ ಹೊತ್ತಿಗೆ ತನ್ನ ಇಡೀ ಮೈತುಂಬಾ ಕೆಸರಿನ ಅಭ್ಯಂಜನ ಮಾಡಿಸಿಕೊಂಡು, ಬಸುರಿಯಂತೆ ತೇಕುತ್ತ ಗಜಾನನ ಬಸ್‌ ಬಂದೇ ಬಿಡು¤. “ಅಜ್ಜಿ ಬಂದ್ರು ಅಜ್ಜಿ’ ಎಂದು ಜೋರಾಗಿ ಕೂಗಿದ್ದೇ ತಡ, ಎಲ್ಲಿದ್ದಾಳ್ಳೋ ಆಯಿ ಪೊರಕೆ ಹಿಡಿದುಕೊಂಡು ಓಡಿ ಬಂದಳು : “”ಬಂದವರು ಮನೆಗೆ ಬರುತ್ತಾರೆ, ನೀನು ಬಸ್‌ ಹತ್ತಿರ ಹೋಗಿ ನಮ್ಮನೆ ಮಾನ ಕಳಿಬೇಡ” ಎಂದು ಕೂಗಾಡುವುದಕ್ಕೆ ಶುರುಮಾಡಿದಳು. “”ನನ್ನಿಂದಲ್ಲ ಈ ಮನೆಯ ಮಾರ್ಯಾದೆ ಹೋಗುವುದು, ನಿನ್ನಿಂದ! ಅದ್ಯಾಕೆ ಅಷ್ಟು ಜೋರಾಗಿ ಕಿರುಚುತ್ತಿಯಾ ನೀನು?” ಎಂದು ಮೊದಲ ಸಲ ಜೋರಾಗಿಯೇ ಆಯಿಗೆ ದಬಾಯಿಸಿದೆ. ಇನ್ನು ಏನೋ ಹೇಳಬೇಕೆಂದಿದ್ದವಳು, ಅಜ್ಜಿಯ ಮುಖ ನೋಡಿ ಸುಮ್ಮನಾದೆ. “”ಥೂ ಏನು ಮಳೇನೋ… ಇಡೀ ಬಸ್‌ ತುಂಬ ಕೆಸರು ಮಗಾ. ಅದು ಹೇಗೆ ಆ ದಾರಿಯಲ್ಲಿ ಬಂತೋ ಗೊತ್ತಿಲ್ಲ” ಎಂದು ಅಜ್ಜಿ ಡ್ರೆವರ್‌ ಪಾಪಣ್ಣನ ಬಗ್ಗೆ ಕಾಳಜಿ ವಹಿಸುತ್ತ ಮಾತನಾಡಿದರು. “”ನಾ ಸ್ನಾನ ಮಾಡಿ ಒಳಗೆ ಬರುತ್ತೇನೆ. ನೀನು ಮಾಣಿನ ಪಡಸಾಲೆಗೆ ತೆಗೆದುಕೊಂಡು ಬಾ” ಎಂದು ಆಯಿಗೆ ಹೇಳಿ, “ಪುಟ್ಟಿ ಹೇಗಿದ್ದಿಯೇ…’ ಎಂದು ನನ್ನ ನೆತ್ತಿಯನ್ನೊಮ್ಮೆ ಸವರಿದರು. “”ನಿನ್ನ ಮಾವ ಒಂದು ಗಂಡು ಹುಡುಕಿದ್ದಾನೆ, ಇನ್ನಾರು ತಿಂಗಳಲ್ಲಿ ನಿನ್ನ ಮದುವೆ ಮಾಡಿಸುತ್ತೇನೆ ನೋಡ್ತಿರು” ಎಂದಾಗ ನನ್ನ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು. “”ನನಗೆ ಈಗಲೇ ಬೇಡ ಅಜ್ಜಿ ನಾ ಮದುವೆಯಾದರೆ ನೀವು ಸಿಗೋದಿಲ್ಲ. ಹೀಗೆ ನಿಮ್ಮ ಜೋಡಿ ಸಮಯ ಕಳೆಯೋದಕ್ಕೂ ಆಗೋದಿಲ್ಲ” ಎಂದಾಗ ಅಜ್ಜಿ ತನ್ನ ಬೊಚ್ಚು ಬಾಯಿ ಅಗಲಿಸಿಕೊಂಡು ನಕ್ಕು ಸ್ನಾನಕ್ಕೆ ಹೊರಟೇ ಬಿಟ್ಟರು. ಅವರ ಆ ನಗುವಿನಲ್ಲಿ ನಿನ್ನಂತರಂಗ ಬಲ್ಲೆ ಎಂಬ ಭಾವವೊಂದು ತೇಲಿಹೋಯ್ತು!

ಪಡಸಾಲೆಯಲ್ಲಿ ಹತ್ತಿ ಬಟ್ಟೆ ಮೇಲೆ ಮಗುವನ್ನು ಮಲಗಿಸಿ ಆಯಿ, “ಓಲಾಲಾ ಲಾ….ಚಿನ್ನ’ ಎಂದು ಅದನ್ನು ಮುದ್ದಾಡುತ್ತಿದ್ದಳು. ಅಪ್ಪ ಕೂಡ ಆಗಾಗ ಮಗುವಿನ ಮುಖ ನೋಡಿ ನಗುತ್ತಿದ್ದರು. ಆಯಿಗೆ ಅಪ್ಪ ನಗುತ್ತಿರುವುದರಿಂದ ಒಳಗೊಳಗೆ ಹಿಗ್ಗಿರಬೇಕು. ಅವಳು ಮೊಮ್ಮಗನ ಹತ್ತಿರ, “ಅಲ್ನೋಡು ಅಜ್ಜ’ ಎಂದು ಒಂದು ತಿಂಗಳು ತುಂಬಿರದ ಮಗುವಿಗೆ ಸಂಬಂಧಗಳನ್ನು ಪರಿಚಯ ಮಾಡೋದಕ್ಕೆ ಶುರುಮಾಡಿದಳು. ಅಜ್ಜಿ ಸ್ನಾನ ಮುಗಿಸಿ “ರಾಮಾ ರಾಮಾ…’ ಎಂದು ಬಂದವರೇ ತಮ್ಮ ಸೆರಗನ್ನು ಆಯಿ ಕಡೆಗೆ ಚಾಚಿ ಮಗೂನ ಹಾಕಿಲ್ಲಿ ಎಂದರು. ಅಜ್ಜಿ ಮಗುವನ್ನು ಸೆರಗಿನಲ್ಲಿಯೇ ಹಿಡಿದುಕೊಂಡು ಎರಡು ನಿಮಿಷ ಕಣ್ಮುಚ್ಚಿ ಕುಳಿತಿದ್ದರು. ಮಗು ಕೂಡ ಸುಮ್ಮನೇ ಇತ್ತು. ಇದೆಲ್ಲ ಏನು ಎಂಬುದೇ ನನಗೆ ಗೊತ್ತಾಗಿಲ್ಲ. ಅಕ್ಕನ ಕಡೆ ನೋಡಿದಾಗ, “ಅಜ್ಜಿ ಮೇಲೆ ದೇವರು ಬರುತ್ತದೆ ಕಣೆ’ ಎಂದಷ್ಟೇ ಹೇಳಿ ಸುಮ್ಮನಾದಳು.

ಬೆಳ್ಳುಳ್ಳಿ , ಈರುಳ್ಳಿ ಚೂರ್ಣ, ಶುಂಠಿ ಪುಡಿ, ಮಗುವಿಗೆ ಕೆಂಪೆಣ್ಣೆ, ಬಾಣಂತಿ ತೈಲ ಎಂದೆಲ್ಲಾ ಕೆಲಸ ಮಾಡೋದರಲ್ಲಿಯೇ ಅಜ್ಜಿಗೆ ಪುರಸೊತ್ತು ಸಿಕ್ಕಿರಲಿಲ್ಲ. ಇನ್ನೇನು ಅಜ್ಜಿ ಹೊರಡೋದಕ್ಕೆ ಒಂದು ದಿನ ಇರಬೇಕು ಅನ್ನುವಾಗ, “”ಬಾರೆ… ಪುಟ್ಟಿ ಇವತ್ತು ನನ್ನ ಜತೆ ಮಲಗು, ಮಾತನಾಡುವ” ಎಂದಾಗ ನನಗೆ ಖುಷಿಯೋ ಖುಷಿ. ಆಯಿ ಅಕ್ಕನ ಜತೆ ಬಾಣಂತಿ ಕೋಣೆಯಲ್ಲಿ ಮಲಗುತ್ತಿದ್ದರು. ನನಗೆ ಅಲ್ಲಿನ ವಾಸನೆ ಆಗಿಬರುತ್ತಿರಲಿಲ್ಲ. 

ಅಜ್ಜಿ ಬಳಿ ಮಾತನಾಡುವುದು ತುಂಬ ಇದ್ದಿತ್ತು. ಆ ರಾತ್ರಿ ಅಜ್ಜಿ ತನ್ನ ಕತೆ ಹೇಳಲು ಶುರುಮಾಡಿದರು.

ಅಜ್ಜಿಗೆ ಸರಿಸುಮಾರು ಏಳು ವರ್ಷಕ್ಕೆ ಮದುವೆ ಆಯ್ತಂತೆ. ಮುನ್ನೂರುಮುಡಿ ಹುಟ್ಟುವಳಿದಾರರ ಮನೆತನದ ಅಜ್ಜನಿಗೆ ಅಜ್ಜಿಯನ್ನು ಧಾರೆ ಎರೆದುಕೊಟ್ಟಿದ್ದರು. ಆ ಕಾಲದಲ್ಲಿ ಅಜ್ಜಿನ ಪಲ್ಲಕ್ಕಿ ಮೇಲೆ ಕೂರಿಸಿಕೊಂಡು ಅಜ್ಜನ ಮನೆಗೆ ದಿಬ್ಬಣ ತಂದಿದ್ದರು. ಅಜ್ಜನಿಗೆ ಘಟ್ಟದಲ್ಲಿ ಶೇರಿಗಾರಿಕೆ ಕೆಲಸ. ಅಜ್ಜ ಅಂದರೆ ಇಡೀ ಊರೇ ನಡುಗುತ್ತಿತ್ತಂತೆ. ಅಜ್ಜ ಮನೆಗೆ ಬಂದಾಗ ಒಂದು ತಂಬಿಗೆ ನೀರು ಕಾಲಿಗೆ ಎರೆದುಕೊಂಡು ಒಳಗೆ ಬಂದರೆ, ಅಜ್ಜಿ ಮಣೆ, ತಟ್ಟೆಯಲ್ಲಾ ಸಿದ್ಧ ಮಾಡಕೊಳ್ಳಬೇಕಿತ್ತಂತೆ. ಅಜ್ಜ ಎಂದರೆ ಹೆದರುತ್ತಿದ್ದ ಅಜ್ಜಿ, ಅಜ್ಜ ಸಾಯೋದಕ್ಕೆ ಎರಡು ವರ್ಷ ಇರುವಾಗ ಅವರ ಜತೆ ಮಾತು ಬಿಟ್ಟರಂತೆ. ನೇರವಾಗಿ ಮಾತನಾಡದೇ ಇದ್ದರೂ ಕೆಲಸದಾಳುಗಳ ನೆಪ ಇಟ್ಟುಕೊಂಡು ಗಂಡ-ಹೆಂಡತಿಯ ಸಂಭಾಷಣೆ ನಡೆಯುತ್ತಿತ್ತು. ‘ಏಯ್‌… ಸೋಮ ಸೂರ್ಯ ನೆತ್ತಿ ಮೇಲೆ ಬಂದಾಯಿತು ಊಟಕ್ಕೆ ಬನ್ನಿ ಎನ್ನುವಂತೆಯೋ ಅಜ್ಜಿ ಅಜ್ಜನ ಊಟಕ್ಕೆ ಕರೆಯುತ್ತಿದ್ದರಂತೆ. ಅವರಿಬ್ಬರ ಮಧ್ಯೆ ಜಗಳಕ್ಕೆ ಕಾರಣವೂ ಇದ್ದಿತ್ತು. ಅಜ್ಜ ಶಿರಸಿಯಲ್ಲಿ ಯಾರನ್ನೋ ಇಟ್ಟುಕೊಂಡಿ¨ªಾರೆ ಎಂಬುದು ಅಜ್ಜಿಗೆ ತಡವಾಗಿ ಗೊತ್ತಾಗಿತ್ತು. ದೀಪಾವಳಿಗೆ, ಯುಗಾದಿಗೆ ಅಜ್ಜ ಅಕ್ಕಿ, ತೆಂಗಿನಕಾಯಿಯನ್ನು ಸಿದ್ಧಾಪುರದಿಂದ ಶಿರಸಿಗೆ ತೆಗೆದುಕೊಂಡು ಹೋಗುತ್ತಿದ್ದರಂತೆ. ಮೊದಮೊದಲು ರೇಗುತ್ತಿದ್ದ ಅಜ್ಜಿ ಕೊನೆಗೆ ಅಜ್ಜನೊಂದಿಗೆ ಮಾತನಾಡದೇ ಜೀವನ ಕಳೆದರು. ಆಗಲೇ ಅವರು ದೇವರು ದಿಂಡಿರು ಅಂತ ನಂಬಿದ್ದು. ಇಡೀಹೊತ್ತು ದೇವರ ಕೋಣೆ ಚೊಕ್ಕ ಮಾಡುವುದು, ಆಗಾಗ ಶಿರಸಿಯಮ್ಮನ ದೇವಸ್ಥಾನಕ್ಕೆ ಹೋಗೋದನ್ನು ಮಾಡುತ್ತಿದ್ದರಂತೆ. ಶಿರಸಿಗೆ ಹೋದಾಗ ತನ್ನ ಸವತಿ ಹೇಗಿರಬಹುದು ಎಂದು ನೋಡಿಕೊಂಡು ಬರುವ ಕುತೂಹಲ ಮೂಡಿದ್ರೂ ಅಜ್ಜಿ ಯಾವತ್ತೂ ಅತ್ತಕಡೆ ಹೋಗಿಲ್ಲಂತೆ. ಅವಳಿಗೂ ಎರಡು ಮಕ್ಕಳು ಇರುವುದು ಅಜ್ಜಿಗೆ ಗೊತ್ತಿತ್ತು. ಅದಕ್ಕೆ ಅಜ್ಜ ಅಕ್ಕಿ, ತೆಂಗಿನಕಾಯಿ ತೆಗೆದುಕೊಂಡು ಹೋಗುವಾಗ ಅಜ್ಜಿ ಸುಮ್ಮನಾಗುತ್ತಿದ್ದರು. ಒಂದು ದಿನ ಅಜ್ಜ ಹಠಾತ್ತಾಗಿ ಸತ್ತಾಗ ಅಜ್ಜಿ ಶಿರಸಿಗೆ ಸುದ್ದಿ ಮುಟ್ಟಿಸಿ ಎಂದು ಆಳುಗಳಿಗೆ ಹೇಳಿ ಕಳುಹಿಸಿದ್ದರು. ಪ್ರತಿ ದೀಪಾವಳಿ, ಯುಗಾದಿಗೆ ಒಂದಷ್ಟು ಅಕ್ಕಿ-ಕಾಯಿಯನ್ನು ಕೊಟ್ಟು ಕಳುಹಿಸುತ್ತಿದ್ದರಂತೆ. ಮನೆ ಪಾಲು ಪಂಚಾಯಿತಿ ಆದಾಗಲೂ ಅಜ್ಜಿ ಒಂದು ತಾಮ್ರದ ಹಂಡೆ, ಸ್ವಲ್ಪ ಬೆಳ್ಳಿ ಸಾಮಾನುಗಳನ್ನು ಆ ಹೆಂಗಸಿಗೆ ಕೊಟ್ಟಿದ್ದ ಧಾರಾಳಿ ನಮ್ಮಜ್ಜಿ. 

ಅಜ್ಜಿ ತನ್ನ ಕತೆ ಹೇಳಿ ವೀಳ್ಯದೆಲೆ ಚೀಲದಿಂದ ಒಂದು ಪುಟ್ಟ ಡಬ್ಬಿ ತೆಗೆದು ವಜ್ರದ ಮೂಗುಬೊಟ್ಟನ್ನು ನನ್ನ ಕೈಗಿಟ್ಟರು. ಇದು ನನ್ನ ಆಯಿ ನನಗೆ ಕೊಟ್ಟಿದ್ದು. ನಿನ್ನ ಆಯಿಗೆ ಇದು ಸೇರಬೇಕಿತ್ತು. ಆದರೆ ಅವಳ ಜಾತಕಕ್ಕೆ ವಜ್ರ ಆಗಿಬರುವುದಿಲ್ಲ. ನಿನ್ನ ಜಾತಕ ನೋಡಿದೆ ವಜ್ರ ಆಗಿಬರುತ್ತೆ. ಮದುವೆ ದಿನ ಹಾಕಿಕೋ ನಾನು ಕಣ್ತುಂಬ ನೋಡಬೇಕು ಪುಟ್ಟಿ ನಿನ್ನ ಎಂದು ಒಂದೆರೆಡು ನಿಮಿಷ ಮೌನವಾದರು. ನಾನೂ ಅವರನ್ನು ಮಾತನಾಡಿಸೋ ಪ್ರಯತ್ನ ಮಾಡಿಲ್ಲ. 

ಮರುದಿನ ಬೆಳಿಗ್ಗೆ ಬೇಗ ಎದ್ದು ಅಜ್ಜಿ ಹೊರಟೇ ಬಿಟ್ಟರು. ಅಕ್ಕನ ಮಗವನ್ನು ಸ್ವಲ್ಪ ಹೊತ್ತು ಎತ್ತಿ ಆಡಿಸಿ ಮತ್ತೂಮ್ಮೆ ಸೆರಗಿನಲ್ಲಿ ಎತ್ತಿಕೊಂಡು ಏನೋ ಮಂತ್ರ ಹೇಳಿ ಅಕ್ಕನಿಗೆ ವಾಪಸ್ಸು ಕೊಟ್ಟರು. ನನ್ನ ಬಳಿ ಬಂದು ‘ನತ್ತು ಹುಷಾರು’ ಎಂದು ತಿರುಗಿ ನೋಡದೇ ಬಸ್‌ಸ್ಟ್ಯಾಂಡಿನತ್ತ ಹೊರಟೇ ಹೋದರು. ಅಜ್ಜಿ ಹೋದ ಬೆನ್ನಿಗೆ ಅಪ್ಪ ಗೂಟಕ್ಕೆ ನೇತು ಹಾಕಿದ್ದ ಅಂಗಿ ಕೊಡವಿ ಚಪ್ಪಲಿ ಮೆಟ್ಟಿಕೊಂಡು ಮತ್ತೂಂದು ಕಡೆ ಹೊರಟರು. ಆಯಿ ಕಣ್ಣಲ್ಲಿ ಮತ್ತೆ ನೀರು, ಮೂಗಿನಲ್ಲಿ ಉರಿಶೀತ ಜಿನುಗಲು ಶುರುವಾಯಿತು. ಇದಾಗಿ ಎರಡೇ ವಾರದಲ್ಲಿ ಸಿದ್ಧಾಪುರದಿಂದ ಮಾವನ ಪೋನ್‌ ಬಂದಿತ್ತು. ಅಜ್ಜಿ ಬೆಳಿಗ್ಗೆ ಹೋಗಿಬಿಟ್ಟರು ಎಂದು. ಅಂದು ಶುಕ್ರವಾರವಾಗಿತ್ತು !

ಪವಿತ್ರಾ ಶೆಟ್ಟಿ
 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.