CONNECT WITH US  

ಅಮೆರಿಕದ ಕತೆ ಅದೃಷ್ಟ ತಂದ ಪ್ರಾಣಿಗಳು

ಪುಟ್ಟ ಪುಟ ಪುಟ್ಟಿ ಪುಟ

ಒಂದು ಹಳ್ಳಿಯಲ್ಲಿ ಜ್ಯಾಕ್‌ ಎಂಬ ಯುವಕನಿದ್ದ. ಕಷ್ಟಪಟ್ಟು ರೈತರ ಹೊಲಗಳಲ್ಲಿ ದುಡಿದು ಅವನು ಜೀವನ ನಡೆಸಿಕೊಂಡಿದ್ದ. ಆದರೆ ಒಂದು ಸಲ ಹಳ್ಳಿಯಲ್ಲಿ ಬೆಳೆಗಳೆಲ್ಲ ಕ್ರಿಮಿಕೀಟಗಳಿಗೆ ಆಹಾರವಾದವು. ಬೆಳೆಯುವ ರೈತರಿಗೆ ಊಟ ಇರಲಿಲ್ಲ. ಹೀಗಾಗಿ ಬೇರೆಯವರಿಗೆ ಉದ್ಯೋಗ ಕೊಡಲು ಅವರಿಂದ ಸಾಧ್ಯವಾಗಲಿಲ್ಲ. ಜ್ಯಾಕ್‌ ಉಪವಾಸವಿರಬೇಕಾಗಿ ಬಂತು. ಆಗ ಅವನ ತಾಯಿ, ""ಇಲ್ಲಿಯೇ ಕುಳಿತರೆ ಸತ್ತು ಹೋಗುವುದು ಖಂಡಿತ. ನಿನ್ನ ಅದೃಷ್ಟ ಎಲ್ಲಿದೆ ಎಂದು ಹುಡುಕುತ್ತ ಹೋಗಿ ಕರೆದುಕೊಂಡು ಬಾ'' ಎಂದು ಹೇಳಿದಳು. ಜ್ಯಾಕ್‌ ಮನೆಯಿಂದ ಹೊರಟ.

 ಆಗ ದಾರಿಯಲ್ಲಿ ನಾಯಿ ಅವನ ಎದುರಿಗೆ ಬಂದಿತು. ""ಅಣ್ಣಾ, ಎಲ್ಲಿಗೆ ಹೊರಟಿರುವೆ?'' ಎಂದು ಕೇಳಿತು. ""ನಾನು ನನ್ನ ಅದೃಷ್ಟವನ್ನು ಹುಡುಕುತ್ತ ಹೊರಟಿರುವೆ'' ಎಂದನು ಜ್ಯಾಕ್‌. ""ಹೌದೆ? ನಿನ್ನ ಜೊತೆಗೆ ನಾನೂ ಬಂದು ನಿನಗೆ ನೆರವಾಗಬಹುದೆ?'' ಎಂದು ನಾಯಿ ಕೇಳಿತು. ಜ್ಯಾಕ್‌ ನಕ್ಕುಬಿಟ್ಟ. ""ನನಗೆ ನಿನ್ನಿಂದ ನೆರವು ಸಿಗಬಹುದೆ?
ಅದು ಸಾಧ್ಯವಿಲ್ಲ. ಆದರೂ ಒಬ್ಬನೇ ಹೋಗುವುದರ ಬದಲು ಒಬ್ಬ ಜೊತೆಗಾರನಿದ್ದರೆ ಒಳ್ಳೆಯದು. ಬಾ, ಒಟ್ಟಾಗಿ ಹೋಗೋಣ'' ಎಂದು ಕರೆದ. ನಾಯಿ ಜೊತೆಗೆ ಬಂದಿತು.

 ಇನ್ನೂ ಮುಂದೆ ಸಾಗಿದಾಗ ಒಂದು ಬೆಕ್ಕು ಎದುರಾಯಿತು. ""ಇಬ್ಬರೂ ಎಲ್ಲಿಗೆ ಹೊರಟಿದ್ದೀರಿ?'' ಎಂದು ಕೇಳಿತು. ""ಅದೃಷ್ಟವನ್ನು ಹುಡುಕಿಕೊಂಡು ಹೊರಟಿದ್ದೇನೆ'' ಎಂದ ಜ್ಯಾಕ್‌. ""ನಿನ್ನ ಜೊತೆಗೆ ಸಹಾಯ ಮಾಡಲು ನಾನೂ ಬರಲೆ?'' ಕೇಳಿತು ಬೆಕ್ಕು. ""ಸಹಾಯವೆ? ನಿನ್ನಿಂದೇನಾದೀತು? ಆದರೂ ಬೇಡ ಅನ್ನುವುದಿಲ್ಲ, ಬಾ ಜೊತೆಗೆ'' ಎಂದು ಬೆಕ್ಕನ್ನೂ ಕರೆದುಕೊಂಡು ಜ್ಯಾಕ್‌ ಮುಂದೆ ಹೋದ. ಮೂವರೂ ಮುಂದೆ ಬರುವಾಗ ಒಂದು ಮೇಕೆ ಬಂದಿತು. ""ಈ
ಊರಿನಲ್ಲಿ ತಿನ್ನಲು ಏನೂ ಸಿಗುವುದಿಲ್ಲ. ನೀವೆಲ್ಲರೂ ಆಹಾರವಿರುವ ಸ್ಥಳ ಹುಡುಕುತ್ತ ಹೊರಟಿದ್ದೀರಾ?''
ಎಂದು ಕೇಳಿತು. ""ನಾನು ಅದೃಷ್ಟವನ್ನು ಹುಡುಕುತ್ತ ಹೊರಟಿದ್ದೇನೆ. ಇವರು ಜೊತೆಗೆ ಬರುತ್ತಿದ್ದಾರೆ ಅಷ್ಟೆ'' ಎಂದು ಹೇಳಿದ ಜ್ಯಾಕ್‌. ""ಅದಕ್ಕೆ ನಿನಗೆ ನನ್ನ ನೆರವು ಬೇಕಾಗಬಹುದು. ಜೊತೆಗೆ ಬಂದುಬಿಡಲೆ?'' ಮೇಕೆ ಕೇಳಿತು. ""ನಿನ್ನಿಂದ ನನಗೆ ನೆರವು ಏನು ಸಿಕ್ಕೀತು? ತೊಂದರೆಯಿಲ್ಲ ಬಾ ನಮ್ಮೊಂದಿಗೆ'' ಎಂದು ಜ್ಯಾಕ್‌ ಅದನ್ನೂ
ಸೇರಿಸಿಕೊಂಡ. ಅವರೆಲ್ಲ ಮುಂದೆ ಹೋದಾಗ ಒಂದು ಎತ್ತು ಎದುರಿಗೆ ಬಂತು ""ಮೇವಿಲ್ಲದೆ ಸಾಯುವ ಹಾಗಾಗಿದ್ದೇನೆ. ನೀವು ಹೊಟ್ಟೆ ತುಂಬ ಆಹಾರವಿರುವ ಜಾಗ ಹುಡುಕುತ್ತ ಹೊರಟಿದ್ದೀರಾ?'' ಎಂದು ಕೇಳಿತು.

""ಇಲ್ಲ, ಅದೃಷ್ಟವನ್ನು ಹುಡುಕಿಕೊಂಡು ನಾನು ಹೊರಟಿದ್ದೇನೆ. ಇವರೆಲ್ಲ ಸುಮ್ಮನೆ ಕಾಲ ಕಳೆಯಲು ಬರುತ್ತಿದ್ದಾರೆ'' ಎಂದು ಹೇಳಿದ ಜ್ಯಾಕ್‌. ""ನಿನಗೆ ಸಹಾಯ ಮಾಡಲು ನನ್ನ ಅಗತ್ಯವಿರಬಹುದು. ನಾನೂ ಜೊತೆಗೆ
ಬಂದುಬಿಡಲೆ?'' ಎಂದು ಎತ್ತು ಕೇಳಿತು. ಜ್ಯಾಕ್‌ ನಕ್ಕುಬಿಟ್ಟ. ""ನಿನ್ನಿಂದ ಸಹಾಯ ಏನು ಸಿಗಬಹುದು? ತೊದರೆಯಿಲ್ಲ, ಜತೆಗೆ ಬಂದುಬಿಡು'' ಎಂದು ಅದನ್ನೂ ಕರೆದುಕೊಂಡ.

 ಅವರೆಲ್ಲ ನಡೆಯುತ್ತ ತುಂಬ ದೂರ ಸಾಗಿದರು. ಅಷ್ಟರಲ್ಲಿ ಕತ್ತಲು ಮುಸುಕಿತು. ಅವರೊಂದು ದಟ್ಟ ಕಾಡನ್ನು ಸೇರಿದರು. ಅಲ್ಲೇ ಮಲಗಿ ಬೆಳಗಾದ ಮೇಲೆ ಮುಂದುವರೆಯುವುದೆಂದು ಮಾತನಾಡಿಕೊಂಡರು. ಆಗ ಒಂದು ಮರದ ನೆರಳಿನಲ್ಲಿ ಬೆಳಕು ಕಾಣಿಸಿತು. ಕೆಲವು ಮಂದಿ ಕಳ್ಳರು ಅಲ್ಲಿ ದೀಪ ಉರಿಸಿಕೊಂಡು ಕುಳಿತಿರುವುದನ್ನು
ನೋಡಿದರು. ಅವರ ಸನಿಹ ಹರಿತವಾದ ಆಯುಧಗಳಿದ್ದವು. ಅವರು ಕೊಳ್ಳೆ ಹೊಡೆದು ತಂದ ಚಿನ್ನದ ನಾಣ್ಯಗಳು
ಮತ್ತು ಒಡವೆಗಳನ್ನು ಲೆಕ್ಕ ಹಾಕುತ್ತ ಇದ್ದರು. ಅವರನ್ನು ನೋಡುತ್ತಲೇ ಜ್ಯಾಕ್‌ ಭಯಭೀತನಾದ. ""ಕಳ್ಳರ ಕಣ್ಣಿಗೆ ಬಿದ್ದರೆ ಅಪಾಯಕರ. ನಾವು ಇಲ್ಲಿಂದ ಓಡಿಹೋಗಿ ತಪ್ಪಿಸಿಕೊಳ್ಳೋಣ'' ಎಂದು ಹೇಳಿದ.

 ಈ ಮಾತು ಕೇಳಿ ನಾಯಿ ನಕ್ಕಿತು. ""ಅದೃಷ್ಟ ಅರಸಿಕೊಂಡು ಬರುವಾಗ ಹೆದರಿ ಓಡುವುದೆ? ಇಲ್ಲ, ನಾವು ಅವರನ್ನು ಭಯಪಡಿಸಿ ಓಡಿಸಬೇಕು. ಮೊದಲು ನಾನು ಬೊಗಳುತ್ತೇನೆ. ಅವರು ನನ್ನನ್ನು ಓಡಿಸಲು ಎದ್ದು ಬರುತ್ತಾರೆ. ಆಗ ಬೆಕ್ಕು ಅವರ ಕಾಲಿಗೆ ಅಡ್ಡವಾಗಿ ಓಡಬೇಕು. ಅಪಶಕುನವಾಯಿತು ಎಂದುಕೊಳ್ಳುತ್ತ ಹಿಂದೆ ತಿರುಗುವಾಗ ಮೇಕೆ ಕಾಣಿಸಿಕೊಳ್ಳಬೇಕು. ನಾಳೆಯ ಊಟಕ್ಕಾಯಿತೆಂದು ಮೇಕೆಯನ್ನು ಹಿಡಿಯಲು ಬೆನ್ನಟ್ಟುತ್ತಾರೆ. ತುಂಬ ದೂರ ಬೆನ್ನಟ್ಟಿದಾಗ ಎತ್ತು ಅಲ್ಲಿಂದ ಜೋರಾಗಿ ಕೂಗಬೇಕು. ಪಿಶಾಚಿ ಅಂದುಕೊಂಡು ಊರು ಬಿಟ್ಟು ಓಡುತ್ತಾರೆ. ಆಗ ಜಾÂಕ್‌ ಅವರ ನಗನಾಣ್ಯಗಳನ್ನು ಗಂಟು ಕಟ್ಟಿಕೊಳ್ಳಬೇಕು'' ಎಂದು ಉಪಾಯ ಹೇಳಿತು. 

 ಎಲ್ಲವೂ ನಾಯಿ ಹೇಳಿದಂತೆಯೇ ನಡೆಯಿತು. ಜ್ಯಾಕ್‌ ನಗನಾಣ್ಯಗಳನ್ನು ಕಟ್ಟಿಕೊಂಡ. ""ಇನ್ನು ನಮ್ಮ ಊರಿಗೆ ಹೋಗೋಣವೆ?'' ಎಂದು ಕೇಳಿದ. ನಾಯಿ, ""ಏನು ಅವಸರ? ಅದೃಷ್ಟ ಬಳಿಗೆ ಬಂದಾಗ ತಾಳ್ಮೆ ಬೇಡವೆ? ಬೆಕ್ಕು
ಇಲ್ಲಿ ತಿರುಗಾಡಿ ಒಂದು ಪಾಳುಬಿದ್ದ ಅರಮನೆಯನ್ನು ಪತ್ತೆ ಮಾಡಿದೆ. ಅಲ್ಲಿ ಕಳ್ಳರ ದೊಡ್ಡ ನಿಧಿ ಸಂಗ್ರಹವಿದೆ. ಕಳ್ಳರು ಮರಳಿ ಬರುವ ಮೊದಲು ಅದನ್ನೆಲ್ಲ ದೋಚಿಕೊಂಡು ಹೋಗಬೇಕು'' ಎಂದು ಕರೆಯಿತು. ಅವರೆಲ್ಲ ಆ ಅರಮನೆಗೆ ಹೋದರು. ಒಳಗೆ ಒಬ್ಬಳು ಮುದುಕಿ ಉಣ್ಣೆಯ ಅಂಗಿ ಹೆಣೆಯುತ್ತ ಕುಳಿತಿದ್ದಳು. ನಾಯಿ ಮೆಲ್ಲಗೆ ಹೋಗಿ ಅವಳ ಕಾಲುಗಳ ಬಳಿ ಕುಳಿತಿತು. ಮುದುಕಿ ಇದನ್ನು ತಿಳಿಯದೆ ನಾಯಿಯ ಕೂದಲುಗಳನ್ನು ಸೇರಿಸಿ ಹೆಣಿಗೆ
ಹಾಕಿದಳು. ಅಂಗಿ ಸಿದ್ಧವಾದಾಗ ನಾಯಿ ಮೆಲ್ಲಗೆ ಹೊರಟಿತು. ಮುದುಕಿ ಗಾಬರಿಯಾಗಿ, ""ಅಯ್ಯೋ, ಇದೇನಿದು! ಅಂಗಿ ತಾನಾಗಿ ನಡೆಯುತ್ತಿದೆ. ಇದು ದೆವ್ವವೇ ಇರಬೇಕು'' ಎಂದು ಗಾಬರಿಯಿಂದ ಎದ್ದು ನಿಂತಳು. ಆಗ ಹಣವಿರುವ ತಿಜೋರಿಯ ಕೀಲಿಕೈ ಅವಳ ಸೊಂಟದಿಂದ ಕೆಳಗೆ ಬಿದ್ದಿತು.

 ಬೆಕ್ಕು ಹೋಗಿ ಕೀಲಿಕೈಯನ್ನು ಕಚ್ಚಿಕೊಂಡು ಓಡಿತು. ಬೆಕ್ಕನ್ನು ಹಿಡಿಯಲು ಮುದುಕಿ ಹೊರಗೆ ಬಂದಳು. ಆಗ ಮೇಕೆ
ಕಾಣಿಸಿತು. ಬೆಕ್ಕನ್ನು ಮರೆತು ಮೇಕೆಯ ಬೆನ್ನು ಹತ್ತಿದಳು. ಅಷ್ಟರಲ್ಲಿ ಎತ್ತು ಜೋರಾಗಿ ಕೂಗಿತು. ಮುದುಕಿ ಭಯದಿಂದ
ದೂರ ಓಡಿಬಿಟ್ಟಳು. ಇದೇ ಸಮಯ ಜಾÂಕ್‌ ಒಳಗೆ ಹೋಗಿ ಅಲ್ಲಿರುವ ಸಂಪತ್ತನ್ನು ಹೊರಗೆ ತೆಗೆದ. ಅದೆಲ್ಲವನ್ನೂ
ಎತ್ತು ಗಬಗಬನೆ ನುಂಗಿತು. ಬಳಿಕ ಎಲ್ಲರೂ ಜೊತೆಗೂಡಿ ಬೆಳಗಾಗುವಾಗ ಊರಿಗೆ ಮರಳಿದರು.

 ಎತ್ತು ತನ್ನ ಹೊಟ್ಟೆಯಲ್ಲಿರುವ ಸಂಪತ್ತನ್ನೆಲ್ಲ ಹೊರಗೆ ಹಾಕಿತು. ಜ್ಯಾಕ್‌ ತನ್ನ ಗೆಳೆಯರಿಗೆಲ್ಲ ಸುಖವಾಗಿ ಇರಲು ಅನುಕೂಲಗಳನ್ನು ಒದಗಿಸಿದ. ಸಂಪತ್ತನ್ನು ನಾಯಿಯ ವಶಕ್ಕೆ ನೀಡಿದ. ಬೆಕ್ಕಿಗೆ ಅದರಿಂದ ಒಂದು ನಾಣ್ಯ ಕಾಣೆಯಾದರೂ ತಿಳಿಯುತ್ತಿತ್ತು. ಮೇಕೆಯನ್ನೂ ಎತ್ತನ್ನೂ ಬಳಸಿಕೊಂಡು ಕೃಷಿ ಮಾಡುತ್ತ ಜೀವನ ಸಾಗಿಸತೊಡಗಿದ. ಅವನಿಗೆ ಭಾರೀ ಸಂಪತ್ತು ಕೈಗೆ ಬಂದ ವಿಷಯ ರಾಜನಿಗೆ ತಿಳಿಯಿತು. ಕರೆಸಿ ವಿಚಾರಣೆ ಮಾಡಿದ. ಆದರೆ ಜಾÂಕ್‌ ಒಂದು ನಾಣ್ಯವನ್ನೂ ಬಳಸಿಕೊಳ್ಳದೆ ಎಲ್ಲವನ್ನೂ ರಾಜನಿಗೆ ಒಪ್ಪಿಸಿದ. ""ಅದೃಷ್ಟ ಬಂದಿದೆ ನಿಜ. ಇದು ನನ್ನ
ಶ್ರಮದಿಂದ ಸಿಕ್ಕಿದ್ದಲ್ಲ. ಎಲ್ಲವೂ ಈ ಗೆಳೆಯರಿಂದ ಆದದ್ದು. ದುಡಿಯದೆ ಬರುವ ಅದೃಷ್ಟ ಸೋಮಾರಿತನಕ್ಕೆ ಕಾರಣವಾಗುತ್ತದೆ. ಹೀಗಾಗಿ ಒಂದು ನಾಣ್ಯವನ್ನೂ ನಾನು ಬಳಸಿಕೊಂಡಿಲ್ಲ. ಇದೆಲ್ಲವೂ ತಮಗಿರಲಿ'' ಎಂದು
ಹೇಳಿದ.

 ಅವನ ಪ್ರಾಮಾಣಿಕತನವನ್ನು ರಾಜನು ಮೆಚ್ಚಿಕೊಂಡು ತನ್ನ ಮಗಳನ್ನು ಅವನಿಗೆ ಮದುವೆ ಮಾಡಿಕೊಟ್ಟ. ಅವನೊಂದಿಗಿದ್ದ ಪ್ರಾಣಿಗಳಿಗೂ ಆಶ್ರಯ ನೀಡಿದ.

ಪ. ರಾಮಕೃಷ್ಣ ಶಾಸ್ತ್ರಿ

Back to Top