ಆಫ್ರಿಕ ದೇಶದ ಕತೆ: ಸಿಂಹ ಮತ್ತು ಯುವತಿ


Team Udayavani, Apr 29, 2018, 6:00 AM IST

5.jpg

ಒಂದು ಹಳ್ಳಿಯಲ್ಲಿ ರೂಪವತಿಯಾದ ಒಬ್ಬ ಯುವತಿಯಿದ್ದಳು. ಪ್ರಾಯ ಪ್ರಬುದ್ಧೆಯಾದ ಅವಳಿಗೆ ಮದುವೆ ಮಾಡಬೇಕೆಂದು ಅವಳ ತಾಯಿ ಯೋಚಿಸಿದಳು. ಹಾಗೆಯೇ ಮಗಳಿಗೆ ಒಂದು ಕಿವಿಯಲ್ಲಿ, “”ನೋಡು, ಗಂಡಸರೆಂದರೆ ಎಲ್ಲರೂ ಕೆಟ್ಟವರಿರುತ್ತಾರೆ. ಹೆಂಡತಿಗೆ ಮೋಸ ಮಾಡುವುದರಲ್ಲಿ ಅವರು ನಿಸ್ಸೀಮರು. ಆದ್ದರಿಂದ ಗಂಡನಿಗೆ ಸ್ವಾತಂತ್ರ್ಯ ಕೊಡಬಾರದು. ಅವನನ್ನು ನಿನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು” ಎಂಬ ಎಚ್ಚರಿಕೆಯ ಮಾತನ್ನೂ ಹೇಳಿದಳು. ಇದರಿಂದ ಯುವತಿಯು ತನ್ನನ್ನು ಮದುವೆಯಾಗಲು ಬಂದ ಯುವಕರಿಗೆ, “”ನೀವು ನಾನು ಹೇಳಿದಂತೆ ಕೇಳಬೇಕು. ಮನೆಯ ಎಲ್ಲ ಕೆಲಸಗಳನ್ನೂ ನಾನು ಹೇಳಿದ ಪ್ರಕಾರ ಮಾಡಬೇಕು. ಹೊರಗೆ ಕೆಲಸ ಮಾಡಲು ಹೋಗಿ ತಂದ ಹಣವನ್ನು ನನ್ನ ಕೈಗೆ ಕೊಡಬೇಕು” ಎಂದು ಹಲವಾರು ನಿರ್ಬಂಧಗಳನ್ನು ಒಡ್ಡಿದಳು. ಅದನ್ನು ಕೇಳಿದವರು ವಿಸ್ಮಿತರಾಗಿ, “”ಮದುವೆಯಾದ ಮೇಲೆ ನಾವು ಗುಲಾಮರಂತೆ ಬದುಕಬೇಕೆ? ನಮಗೆ ಮದುವೆಯೇ ಬೇಡ” ಎಂದು ನಿರ್ಧರಿಸಿ ಹೊರಟುಹೋದರು.

    ಕಡೆಗೆ ಯುವತಿಯನ್ನು ಮದುವೆಯಾಗಲು ಒಬ್ಬ ಯುವಕನೂ ಮುಂದೆ ಬರಲಿಲ್ಲ. ಆಗ ಅವಳ ತಾಯಿ, “”ನನ್ನ ಮಗಳು ಹೇಳುವ ನಿರ್ಬಂಧಗಳನ್ನು ಒಪ್ಪಿಕೊಂಡು ಅವಳ ಕೈ ಹಿಡಿಯುವವನಿಗೆ ನನ್ನ ಆಸ್ತಿಯಾಗಿರುವ ನೂರು ಹಸುಗಳನ್ನು ವರದಕ್ಷಿಣೆಯಾಗಿ ಕೊಡುತ್ತೇನೆ” ಎಂದು ಹೇಳಿದಳು. ಹಸುಗಳ ಮೇಲೆ ಆಸೆಪಟ್ಟು ಒಬ್ಬ ಯುವಕ ಯುವತಿಯನ್ನು ವರಿಸಲು ಒಪ್ಪಿಕೊಂಡ. ಮದುವೆಯೂ ನಡೆಯಿತು. ತಾಯಿ ಮಗಳನ್ನು ಕರೆದು, “”ಅವನು ನಿನ್ನ ಗಂಡ ಎಂಬ ಕಾರಣಕ್ಕೆ ಹೆಚ್ಚು ಸ್ವಾತಂತ್ರ್ಯ ಕೊಡಬೇಡ. ಅವನ ಬಳಿ ಕಠಿಣವಾಗಿಯೇ ಇದ್ದುಕೋ” ಎಂದು ಎಚ್ಚರಿಸಿದಳು. ಹೀಗಾಗಿ ಯುವತಿ ಗಂಡನಲ್ಲಿ ದರ್ಪದಿಂದ ಮಾತನಾಡುತ್ತಿದ್ದಳು. ಎಲ್ಲ ಕೆಲಸಗಳನ್ನು ಮಾಡಿಸುತ್ತಿದ್ದಳು. ಹೊಟ್ಟೆಗೆ ಸರಿಯಾಗಿ ಆಹಾರ ಕೊಡುತ್ತಿರಲಿಲ್ಲ. ಇದರಿಂದ ಯುವಕ ಸೊರಗಿದ. ದುಡಿಮೆ ಬಿಟ್ಟರೆ ಅವನಿಗೆ ಸಂಸಾರದಲ್ಲಿ ಯಾವ ಸುಖವೂ ಕಾಣಿಸಲಿಲ್ಲ. ಅವನು, “”ನನಗೆ ನಿನ್ನ ವರದಕ್ಷಿಣೆಯೂ ಬೇಡ. ನೀನೂ ಬೇಡ. ನಾನು ಮನೆಯಿಂದ ಹೊರಟುಹೋಗುತ್ತೇನೆ” ಎಂದು ಹೇಳಿ ಹೋಗಿಬಿಟ್ಟ.

ಗಂಡ ಹೊರಟುಹೋದ ಮೇಲೆ ಯುವತಿಗೆ ಪಶ್ಚಾತ್ತಾಪವಾಗಲಿಲ್ಲ. ತನ್ನ ದುಡುಕಿನಿಂದಾಗಿ ಸಂಸಾರ ಒಡೆದುಹೋಯಿತೆಂಬುದು ಅರ್ಥವಾಗಲಿಲ್ಲ. ತಾಯಿಯೊಂದಿಗೆ, “”ನನ್ನನ್ನು ತ್ಯಜಿಸಿದ ಗಂಡನನ್ನು ಮರಳಿ ಕರೆತರುವುದು ಹೇಗೆ? ಊರಿನ ಗಣ್ಯರಿಗೆ ಹೇಳಿ ಅವನನ್ನು ಪಂಚಾಯತಿ ಕಟ್ಟೆಗೆ ಕರೆಸಲೆ?” ಎಂದು ಕೇಳಿದಳು. ತಾಯಿ, “”ಅದರಿಂದ ಏನು ಲಾಭವಿದೆ? ಗಣ್ಯರು ಅವನಿಗೆ ಈ ತಪ್ಪಿಗಾಗಿ ನೂರು ಚಡಿಯೇಟಿನ ಶಿಕ್ಷೆ ವಿಧಿಸಬಹುದು. ಶಿಕ್ಷೆ ಮುಗಿಯುವ ಮೊದಲು ಅವನು ಸತ್ತುಹೋಗಬಹುದು. ಅದರ ಬದಲು ಬೇರೊಂದು ಉಪಾಯವಿದೆ. ಹಳ್ಳಿಯ ಮೂಲೆಯಲ್ಲಿ ಒಂದು ಕಾಡಿದೆ. ಅಲ್ಲಿ ಹಣ್ಣು ಮುದುಕನೊಬ್ಬ ಇದ್ದಾನೆ. ಅವನು ಸಾಧಾರಣ ವ್ಯಕ್ತಿಯಲ್ಲ. ತಂತ್ರ, ಮಂತ್ರಗಳಲ್ಲಿ ಪಳಗಿದವನು. ನಿನ್ನ ಗಂಡ ಸಾಕಿದ ನಾಯಿಯ ಹಾಗೆ ಬೆನ್ನ ಹಿಂದೆಯೇ ಬರುವಂತೆ ಮಾಡುವ ಸಾಮರ್ಥ್ಯ ಅವನಲ್ಲಿದೆ. ಅವನ ಬಳಿಗೆ ಹೋಗು. ಒಂದು ಥೈಲಿ ತುಂಬ ಹಣವನ್ನು ಕೊಡು. ಅವನು ಆ ಅವಿವೇಕಿಗೆ ತಕ್ಕ ಪಾಠ ಕಲಿಸುತ್ತಾನೆ” ಎಂದು  ದಾರಿ ತೋರಿಸಿದಳು.

    ಯುವತಿ ಮುದುಕನನ್ನು ಹುಡುಕಿಕೊಂಡು ಕಾಡಿಗೆ ಹೋದಳು. ಒಂದು ಹುಲ್ಲಿನ ಗುಡಿಸಲಿನಲ್ಲಿ ವಾಸವಾಗಿದ್ದ ಅವನ ಮುಂದೆ ಹಣದ ಚೀಲವನ್ನಿಟ್ಟು ತನ್ನ ಸಂಸಾರದ ಕತೆಯನ್ನು ಹೇಳಿದಳು. ಮನೆ ಬಿಟ್ಟು ಹೋದ ಗಂಡನು ಮರಳಿ ಬಂದು ತಾನು ಹೇಳಿದಂತೆ ಕೇಳುತ್ತ, ಮನೆಗೆಲಸಗಳನ್ನು ಮಾಡುತ್ತ ಮೊದಲಿನಂತೆ ವಿಧೇಯನಾಗಿರುವ ಹಾಗೆ ಮಂತ್ರ ಮಾಡಬೇಕೆಂದು ಕೋರಿಕೊಂಡಳು. ಅವಳ ಮಾತಿಗೆ ಮುದುಕನು ತಲೆದೂಗಿದ. “”ನನಗೆ ಇದೆಲ್ಲ ಚಿಟಿಕೆ ಹಾರಿಸಿದಷ್ಟೇ ಸುಲಭವಾದ ಕೆಲಸ. ಈ ಮಂತ್ರ ಪ್ರಯೋಗಕ್ಕೆ ಬೇಕಾಗುವ ನಾರು, ಬೇರುಗಳು ನನ್ನಲ್ಲಿ ಇವೆ. ಆದರೆ ಒಂದು ಮುಖ್ಯವಾದ ವಸ್ತು ಬೇಕು, ಅದನ್ನು ನೀನೇ ತರಬೇಕು” ಎಂದು ಹೇಳಿದ.

    “”ಮುಖ್ಯ ವಸ್ತುವೆ? ಏನು ಅದು?” ಎಂದು ಕೇಳಿದಳು ಯುವತಿ. “”ನೀನೊಂದು ಜೀವಂತ ಸಿಂಹವನ್ನು ಇಲ್ಲಿಗೆ ಕರೆದುಕೊಂಡು ಬರಬೇಕು. ನಾನು ಅದರ ನಾಲ್ಕು ಉಗುರುಗಳನ್ನು ಕಿತ್ತು ತೆಗೆದು ಮಂತ್ರ ಜಪಿಸಿ ತಾಯಿತ ತಯಾರಿಸುತ್ತೇನೆ. ಅದನ್ನು ಕೈಯಲ್ಲಿ ಹಿಡಿದುಕೊಂಡು ಕರೆದರೆ ಸಾಕು, ನಿನ್ನ ಗಂಡ ಮರು ಮಾತಾಡದೆ ಓಡೋಡಿ ಬರುತ್ತಾನೆ. ಇದರ ಹೊರತು ಅವನಿಗೆ ಪಾಠ ಕಲಿಸಲು ಬೇರೆ ಯಾವ ಉಪಾಯವೂ ಇಲ್ಲ” ಎಂದು ಹೇಳಿದ ಮುದುಕ.

    ಹೇಗಾದರೂ ಗಂಡನನ್ನು ಕೈವಶ ಮಾಡಿಕೊಳ್ಳಬೇಕೆಂಬ ಹಟದಲ್ಲಿ ಯುವತಿ ಸಿಂಹವನ್ನು ಕರೆತರಲು ಒಪ್ಪಿಕೊಂಡಳು. ಆದರೆ ಅದು ಸುಲಭವಲ್ಲ ಎನ್ನುವುದು ಅವಳಿಗೆ ತಿಳಿದಿತ್ತು. ಹೀಗಾಗಿ ಎಮ್ಮೆಯ ಮಾಂಸವನ್ನು ಪೊಟ್ಟಣ ಕಟ್ಟಿ ತೆಗೆದುಕೊಂಡು ಹೋಗಿ ಸಿಂಹಗಳು ಬರುವ ದಾರಿಯಲ್ಲಿ ಇರಿಸಿ ಮರದ ಮರೆಯಲ್ಲಿ ನಿಂತಳು. ಎರಡು ಸಿಂಹಗಳು ಅಲ್ಲಿಗೆ ಬಂದವು. ಮಾಂಸದ ವಾಸನೆಯಿಂದ ಆಕರ್ಷಣೆಗೊಂಡು ಅದನ್ನು ತಿಂದು ಮುಗಿಸಿ ಹೊರಟು ಹೋದವು. ಮರುದಿನವೂ ಯುವತಿ ಅಲ್ಲಿ ಮಾಂಸವನ್ನಿಟ್ಟು ಅಡಗಿ ನಿಂತಳು. ಅಂದು ಕೂಡ ಸಿಂಹಗಳು ಬಂದು ಮಾಂಸ ಭಕ್ಷಣೆ ಮಾಡಿ ತೆರಳಿದವು.

    ಹೀಗೆ ಕೆಲವು ದಿನಗಳ ಕಾಲ ನಡೆಯಿತು. ಒಂದು ದಿನ ಯುವತಿ ಮಾಂಸವನ್ನು ತಂದಿಡುವಾಗಲೇ ಸಿಂಹಗಳು ಬಂದುಬಿಟ್ಟವು. ಅವು ತನ್ನನ್ನು ಕೊಲ್ಲಬಹುದೆಂದು ಯುವತಿ ಹೆದರಿ ಹೌಹಾರಿದಳು. ಆದರೆ ತಮಗೆ ದಿನವೂ ಅವಳೇ ಆಹಾರ ಕೊಡುತ್ತಿದ್ದಾಳೆಂದು ಅರಿತುಕೊಂಡಿದ್ದ ಸಿಂಹಗಳು ಅವಳಿಗೆ ಏನೂ ಕೆಡುಕುಂಟು ಮಾಡಲಿಲ್ಲ. ಅವಳ ಬಳಿ ನಿಂತು ಪ್ರೀತಿಯಿಂದ ಬಾಲವಲ್ಲಾಡಿಸಿದವು. ಕೆಲವೇ ದಿನಗಳಲ್ಲಿ ಅವು ಸ್ನೇಹಿತರಾಗಿ ಅವಳ ತೊಡೆಯ ಮೇಲೆ ತಲೆಯಿಟ್ಟು ಮಲಗುವಷ್ಟು ಹತ್ತಿರವಾದವು.

    ಯುವತಿ ಸಿಂಹಗಳನ್ನು ಮುದುಕನ ಬಳಿಗೆ ಕರೆತಂದಳು. “”ನೋಡಿ, ನಿಮ್ಮ ಮಾತಿನಂತೆ ಸಿಂಹಗಳನ್ನು ಪಳಗಿಸಿ ಕರೆತಂದಿದ್ದೇನೆ. ಅವುಗಳ ಉಗುರುಗಳನ್ನು ತೆಗೆದುಕೊಂಡು ನನ್ನ ಗಂಡ ನಾನು ಹೇಳಿದಂತೆ ಕೇಳುವ ಹಾಗೆ ಮಾಡಿ” ಎಂದಳು. ಮುದುಕನು ಜೋರಾಗಿ ನಕ್ಕ. “”ಈ ಕೆಲಸಕ್ಕೆ ಸಿಂಹದ ಉಗುರು ಬೇಡ. ಅವುಗಳನ್ನು ಕಾಡಿಗೆ ಕಳುಹಿಸು. ಗಂಡನನ್ನು ಸರಿ ದಾರಿಗೆ ತರುವ ತಾಯಿತ ಈಗಾಗಲೇ ನಿನ್ನ ಕೈ ಸೇರಿದೆ” ಎಂದು ಹೇಳಿದ.

    ಯುವತಿಗೆ ಅವನ ಮಾತು ಅರ್ಥವಾಗಲಿಲ್ಲ. “”ತಾಯಿತವೆ? ಅದು ನನ್ನ ಬಳಿ ಎಲ್ಲಿದೆ?” ಎಂದು ಕೇಳಿದಳು. ಮುದುಕನು, “”ಕ್ರೂರಿಯಾದ ಸಿಂಹಗಳಿಗೆ ದಿನವೂ ಪ್ರೀತಿಯಿಂದ ಆಹಾರ ನೀಡಿ, ಬಳಿಗೆ ಕರೆದು ನಿನ್ನ ಸ್ನೇಹಿತರಾಗುವಂತೆ ಮಾಡಿಕೊಂಡೆಯಲ್ಲವೆ? ಇದೇ ರೀತಿ ಗಂಡನನ್ನೂ ದರ್ಪದಿಂದ ಒಲಿಸಿಕೊಳ್ಳಲು ಪ್ರಯತ್ನಿಸಬೇಡ. ಪ್ರೀತಿ ಮತ್ತು ಸ್ನೇಹದಿಂದ ಅವನಿಗೆ ಒಳ್ಳೆಯ ಊಟ ಬಡಿಸಿ ಹಿತವಾದ ಮಾತುಗಳನ್ನು ಹೇಳಿದರೆ ಅವನು ಎಲ್ಲಿಗೂ ಹೋಗುವುದಿಲ್ಲ. ಸ್ನೇಹ ಮತ್ತು ಪ್ರೇಮದಿಂದ ಜಗತ್ತನ್ನೇ ಗೆಲ್ಲಬಹುದೆಂಬುದು ನಿನಗೆ ಅರ್ಥವಾಗಿರಬೇಕು” ಎಂದು ಹೇಳಿದ. ಯುವತಿ ತನ್ನ ತಪ್ಪನ್ನು ಸರಿಪಡಿಸಿಕೊಂಡು ಗಂಡನನ್ನು ಮರಳಿ ಕರೆತಂದು ನೆಮ್ಮದಿಯಿಂದ ಸಂಸಾರ ಸಾಗಿಸಿದಳು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.