ಇವರ ನ‌ಡಿಗೆ ಗ್ರಾಮದೆಡೆಗೆ 


Team Udayavani, May 20, 2018, 10:05 AM IST

o-27.jpg

ಎಲ್ಲಾ ಸುಖ ದುಡ್ಡಿನಲ್ಲಿದೆ, ಪಟ್ಟಣದಲ್ಲಿದೆ ಎಂದೆಲ್ಲಾ ನಗರಮುಖಿಗಳಾಗಿ ಗ್ರಾಮಗಳು ಖಾಲಿಯಾದುವು ಎಂಬ ಹೊತ್ತಲ್ಲೇ ಕೈತುಂಬಾ ವೇತನ ಪಡೆಯುವ ಟೆಕ್ಕಿಗಳು, ವೈದ್ಯರು, ವಿಜ್ಞಾನಿಗಳು ತಿರುಗಿ ತಮ್ಮ ತಾಯಿಬೇರು ಹುಡುಕಿಕೊಂಡು ಹಳ್ಳಿ ಕಡೆಗೆ ಹೊರಟಿದ್ದಾರೆ. ನಗರ ಸೃಷ್ಟಿಸುವ ಒತ್ತಡ, ಮಾಲಿನ್ಯ, ಅಪರಿಚಿತತೆ, ಅಸುಖ ಯುವಕರನ್ನು ಗ್ರಾಮಮುಖೀಗೊಳಿಸಿದೆ. ಹಳ್ಳಿಯ ಮೂಲ ಆತ್ಮವನ್ನು ಕೆಡಿಸದೆ ಇವರೆಲ್ಲಾ ಭಾರತದ ಕೃಷಿ, ಹಳ್ಳಿಗಳನ್ನೀಗ ಹೊಸದಾಗಿ ಕಟ್ಟಲಿ…

ಹುಲಿಯ ಮುಖದ ಹುಲ್ಲೆ, ಹುಲ್ಲೆಯ ಮುಖದ ಹುಲಿ…’ ಅಲ್ಲಮನ ಈ ವಚನವನ್ನು ಓದುವಾಗಲೆಲ್ಲಾ ನನಗೆ ಹುಲಿಯ ಜಾಗದಲ್ಲಿ ನಗರವೂ ಹುಲ್ಲೆಯ ಜಾಗದಲ್ಲಿ ಹಳ್ಳಿಯೂ ನಿಂತಂತೆ ಕಾಣುತ್ತದೆ. ಮೇಲಿನ ಎರಡಕ್ಕೂ “ನಡು ಒಂದೇ ನೋಡಾ’ ಎನ್ನುತ್ತಾನೆ ಅಲ್ಲಮ. ಈ ನಗರ ಮತ್ತು ಗ್ರಾಮ ಎರಡಕ್ಕೂ ಸೃಷ್ಟಿಸುವ ಮತ್ತು ಜೀರ್ಣಿಸುವ “ನಡು’ ಒಂದೇ. ಇದು ಎಷ್ಟು ಸಹಜವೋ ಅಷ್ಟೇ ಇವೆರಡಕ್ಕೂ ಇರುವುದು ಅಸಹಜ ಮುಖವಾಡಗಳೇ. ಹುಲಿಗೆ ಹುಲ್ಲೆಯ ಮುಖ. ಹುಲ್ಲೆಗೆ ಹುಲಿಯ ಮುಖ! ಎರಡೂ ನಕಲಿಯೇ. ಇವುಗಳನ್ನು ಯಾವ ಕಡೆಯಿಂದ ನೋಡುತ್ತೇವೆ ಮತ್ತು ಎಷ್ಟು ನಂಬುತ್ತೇವೆ ಎಂಬುದರ ಮೇಲೆ ಅವುಗಳ ಶಕ್ತಿ ಅಡಗಿದೆ.

ಕೃಷಿಯ ಬಲ ಬೇರು, ಬಣ್ಣ ಹಸಿರು. ಮತ್ತು ಈ ಹಸಿರು ಇರುವುದೆಲ್ಲಾ ಗ್ರಾಮಗಳೆಂದೇ ನಂಬುವುದಾದರೆ ಭಾರತದಲ್ಲಿ ಇನ್ನೂ ಹಳ್ಳಿಗಳು ಉಳಿದಿವೆ! ಆದರೆ ಅವುಗಳ ಆತ್ಮ? ಕೆಸರಿಗೆ ಅಂಟಿಕೊಂಡೇ ಮನಸ್ಸನ್ನು ಮಾರುಕಟ್ಟೆಯೊಂದಿಗೆ ಬೆಸೆದುಕೊಂಡಿರುವ ತ್ರಿಶಂಕು ಸ್ಥಿತಿ ಹೆಚ್ಚಿನವರದು. ಬಗೆಬಗೆಯ ದಾರಿಯಲ್ಲಿ ವಲಸೆ ಹೋಗಿ ಅಳಿದುಳಿದ ಇವರ ಮನಸ್ಥಿತಿ ಒಂದು ಬಗೆಯದ್ದಾದರೆ; ಬಹಳ ಹಿಂದೆಯೇ ಹೋಗಿ ನಗರದಲ್ಲಿ ಸುಸ್ಥಿರಗೊಂಡ ಹಳ್ಳಿಮೂಲ ವಲಸಿಗರದು ಬೇರೆಯೇ ಆತಂಕ. “ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಎಂಬ ಮನಸ್ಥಿತಿ ಈಗ ಎರಡೂ ಕಡೆಯೂ ಇದೆ.

ಓದು-ಪದವಿ, ಅನುಭವದ ದಾರಿಗಳಿಲ್ಲದೆ, ಉಳಿಯಲೇಬೇಕಾದ ಅನಿವಾರ್ಯತೆಯಿಂದ ಗ್ರಾಮಗಳಲ್ಲಿ ಉಳಿದವರು ನಗರ ಸೇರಲಾರದೆ ಪರಿತಪಿಸುವಂತೆ; ನಗರದಲ್ಲಿರುವವರು ತಿರುಗಿ ತಮ್ಮ ಮೂಲ ಬೇರಿಗೆ ಹೋಗಲಾರದೆ ಪರಿತಪಿಸುವುದೂ ಇದೆ. ತನ್ನೊಳಗಡೆಯ “ಮಾರುಕಟ್ಟೆ ಮನಸ್ಸ’ನ್ನು ಮರೆಮಾಚಿ ಮುಂದೆ ಯಾವತ್ತೂ ನಗರ ಕಳಚಿ ಹಳ್ಳಿಗಳಿಗೆ ಹೋಗಲಾಗದ, ಒಂದು ಕಾಲದಲ್ಲಿ ಹಳ್ಳಿಯಲ್ಲೇ ಹುಟ್ಟಿ ಬೆಳೆದ ಗೆಳೆಯರಿಗೆ ನಾನು ಹೇಳುವುದುಂಟು. ಹಳ್ಳಿಯಲ್ಲಿ ಸ್ವತ್ಛ ಗಾಳಿ, ಹಸಿರು, ನೀರು ಇದೆ. ಸುಖದ ಈಜಿಗೆ ಹೊಳೆನದಿ ಕೆರೆಯಿದೆ. ಕುಡಿಯಲು ಹಟ್ಟಿಯ ಹಾಲಿದೆ. ಮನೆಮುಂದೆ ಪಕ್ಷಿಗಳ ಕಲರವ. ಆಶ್ರಮದಂಥ ದಟ್ಟ ಹಸಿರು ಆವಾರ… ಎಲ್ಲವೂ ಅವರಿಗೆ ಗೊತ್ತಿರುವುದೇ. ಕಾರಣ ಇವೆಲ್ಲಾ ಅವರ ಬಾಲ್ಯದ ಯಕ್ಷಲೋಕ. ಇದೇ ಗ್ರಾಮ ಅವರನ್ನು ಸಾಕಿ ಬೆಳೆಸಿದ್ದು. ಇಲ್ಲಿಯ ಇಂಚಿಂಚು ಅವರಿಗೆ ಪರಿಚಯವಿದೆ. ಇದೇ ಬದು, ಇದೇ ಗದ್ದೆ. ಇದೇ ತೋಡು, ಸಂಕ, ಸಂಕದಡಿಯ ಮೀನುಕಪ್ಪೆ , ಶಾಲೆ ದಾರಿಯ ಕಾಡುಹಣ್ಣುಗಳು, ವಿಮಾನ ಚಿಟ್ಟೆಯ ಬಾಲಮುರಿದು ಹೂವು ಸುರಿದದ್ದು , ಮರಕೋತಿ ಆಡಿದ್ದು, ನೆಲದಲ್ಲಿ ಕೂತು ಆಟ ನೋಡಿದ್ದು, ಗೇರುಬೀಜ ಕೊಟ್ಟು ಸೋಜಿ ಕುಡಿದದ್ದು, ಅಡಿಕೆಯ ಹಾಳೆಯಲ್ಲಿ ಕೂತು ಎಳೆದದ್ದು, ಕೊತ್ತಳಿಗೆಯ ಬ್ಯಾಟಿನಲ್ಲಿ ಕ್ರಿಕೆಟ್‌ ಆಡಿದ್ದು. ರೀಲಿನಂತೆ ಅವೆಲ್ಲಾ ನೆನಪಿಗೆ ಬಂದು ನಾನು ಪೇಟೆ ಬಿಟ್ಟು ತಿರುಗಿ ಮನೆಗೆ ಬರುವಾಗ ಅದೇ ಗೆಳೆಯರು ಹೇಳುವುದುಂಟು, “ಹಳ್ಳಿಯಲ್ಲಿ ಎಲ್ಲಾದರೂ ಎರಡೆಕ್ರೆ ಜಾಗ ನೋಡಿ. ಕರೆಂಟು ಬೇಡ, ಮೊಬೈಲು ರೇಂಜು ಬೇಡ, ರಸ್ತೆ ಬೇಡ’ ಎಂದು. ನಾನು ಒಪ್ಪಿ ಬರುತ್ತೇನೆ. ಆ ಕ್ಷಣಕ್ಕೆ ಅವರಿಗೆ ಖುಶಿಯಾಗುತ್ತದೆ. ದಿನಗಳೆದಂತೆ ಅವರಿಗದು ಮರೆಯುತ್ತದೆ.

ವರ್ತಮಾನದ ಭಾರತದ ಹಳ್ಳಿಗಳು ಯಾವ ಕಡೆಗೆ ಚಲಿಸುತ್ತವೆ? ಹೇಗೆ ಚಲಿಸುತ್ತವೆ? ಯಾಕೆ ಚಲಿಸುತ್ತವೆ?- ಎಂದೆಲ್ಲಾ ಗಮನಿಸಲು ನೀವೊಮ್ಮೆ ಗ್ರಾಮಗಳಿಗೆ ಬರಬೇಕು. ಒಂದಲ್ಲ ಒಂದು ಕಾರಣಕ್ಕೆ ನವನಾಗರಿಕತೆಯೊಂದಿಗೆ ಬೆಸೆದುಕೊಂಡ ಅವರ ಜೀವ ಹಳ್ಳಿಯಲ್ಲಿದೆ ಎಂಬ ಕಾರಣಕ್ಕೆ ಮಾತ್ರ ಆತ ಗ್ರಾಮ್ಯವಾಗುತ್ತಾನೆ. ಉಳಿದಂತೆ ಅವನ ಭಾವ ತಲ್ಲೀನತೆ ಪಟ್ಟಣದ್ದೇ ಆಗಿದೆ. ಅವನ ನಡೆನುಡಿ, ಆಚಾರವಿಚಾರ, ಕಸುಬು-ಕೌಶಲ್ಯ, ಅನ್ನ-ಆಹಾರ, ಬಳಕೆ-ಭಾವನೆ ಯಾವುದೂ ನೆಲಶುದ್ಧತೆಯನ್ನು ಉಳಿಸಿಕೊಂಡಿಲ್ಲ. ಹಳ್ಳಿಯಲ್ಲಿ ಇರಲಾರದ ಇವರೆಲ್ಲಾ ನನಗೆ ಅಲ್ಪತೃಪ್ತಿಯ ನಕಾರಾತ್ಮಕ ಭಾವದ ಪ್ರೇತಾತ್ಮಗಳಂತೆ ಕಾಣಿಸುತ್ತಾರೆ. ಊರೊಳಗಡೆ ಒಳ್ಳೆಯ ಶಾಲೆಯಿಲ್ಲ, ಆಸ್ಪತ್ರೆಯಿಲ್ಲ, ರಸ್ತೆಯಿಲ್ಲ, ಮೊಬೈಲ್‌ ರೇಂಜ್‌ ಇಲ್ಲ- ಹೀಗೆ ಅನೇಕ ಇಲ್ಲಗಳು ಇವರನ್ನು ಶಾಶ್ವತವಾಗಿ ಒಕ್ಕಲೆಬ್ಬಿಸಿ ದಿನಾ ನಗರದ ಕಡೆ ರಾಶಿ ಸುರಿಯುತ್ತಿದೆ. ಅಳಿದುಳಿದವರು ದಿನದ ದುಡಿಮೆಗೆಂದು ಬೆಳಿಗ್ಗೆ ಹೋಗಿ ಸಂಜೆ ವಾಪಾಸಾಗುತ್ತಾರೆ. ಕೆಂಪು ಬಸ್ಸುಗಳಲ್ಲಿ ಇಂಥ ಹಿರಿಯರು, ಹಳದಿ ಬಸ್ಸುಗಳಲ್ಲಿ ಶಾಲೆಗೆಂದು ಕಿರಿಯರು ದಿನಾ ಬೆಳ್ಳಂಬೆಳಿಗ್ಗೆ ಹೋಗಿ ಸಂಜೆ ಪಟ್ಟಣದಿಂದ ವಾಪಾಸಾಗುತ್ತಾರೆ.

ಹಾಗೆ ನೋಡಿದ್ರೆ ಇಂದು ನಗರದಲ್ಲಿರುವ “ನಾಗರಿಕರು’ ಬೇರೆ ಬೇರೆ ದಾರಿಯಲ್ಲಿ ಇದೇ ಹಳ್ಳಿಯಿಂದ ಬಂದವರೇ. ಈಗ ಇಂಥವರೇ ಇದೇ ಪೇಟೆಯೊಳಗಡೆ ಬಾಳುತ್ತಾ ನಮ್ಮ ಹಳ್ಳಿಯೇ ಚೆನ್ನಾಗಿದೆ ಎನ್ನುವವರು. ಈಗ ಅನಿವಾರ್ಯವಾಗಿ ಬೇರೆಯವರೊಂದಿಗೆ ಅವಲಂಬಿತರಾದವರು. ಹಳ್ಳಿಯಲ್ಲೇ ಹುಟ್ಟಿ ಪೇಟೆಗೆ ಹೋಗಿ ಬದುಕುವ ಈ ಕೊನೆ ತಲೆಮಾರಿನವರ ಧರ್ಮಸಂಕಟ ಹೇಳಲಾಗದು. ಮಹಾನಗರದೊಳಗಡೆಯ ಪುಟ್ಟ ಪುಟ್ಟ ಹಸಿರು ಉದ್ಯಾವನದೊಳಗಡೆಯ ಕಲ್ಲು ಬೆಂಚುಗಳಲ್ಲಿ ಸಂಜೆ ಹೊತ್ತು ಹರಟುವ ಈ ಹಿರಿಜೀವಿಗಳ ಮಾತುಗಳಿಗೊಮ್ಮೆ ಕಿವಿಗೊಡಿ. ಅವರನ್ನೆಲ್ಲಾ ಸಾಕಿ ಪೋಷಿಸಿದ, ಅವರ ಪಾಲಿಗೆ ಯಕ್ಷಲೋಕವೇ ಆಗಿದ್ದ ಗ್ರಾಮಗಳ ಬಗ್ಗೆ ಅವರಿಗೆ ಈಗಲೂ ಇರುವ ಕರುಳ ಸಂಬಂಧ ಅಲೆಲ್ಲಾ ಧ್ವನಿಸುತ್ತದೆ. ತಾವು ನೆಟ್ಟ ಬೀಜ, ಬೆಳೆಸಿದ ತೋಟ, ಕಟ್ಟಿದ ಮನೆ, ಹೊಳೆ, ಗದ್ದೆ-ಬಯಲು ಎಲ್ಲವೂ ಅವರಿಗೆ ನೆನಪಿದೆ. ಅಂಥ ಹಳ್ಳಿ-ಗ್ರಾಮಗಳಿಂದು ಗಾಯಗೊಂಡಿವೆ. ಹೆದ್ದಾರಿ ಬಂದು ಊರು ಎರಡಾಗಿದೆ. ಕೈಗಾರಿಕೆ, ಉದ್ಯಮ ಏನೇನೋ ಬಂದು ಊರು ಬದಲಾದುದು ಎಲ್ಲವೂ ಅವರಿಗೆ ಗೊತ್ತಿದೆ.

ವಿದ್ಯೆ ಪದವಿಯಾಗಿ, ಆ ಪದವಿ ಉದ್ಯೋಗಕ್ಕೆ ದಾರಿಯಾಗಿ, ಹುದ್ದೆ-ನೌಕರಿ ಹಣ ಹೊಂಚಿಕೊಡುವ ವಿಧಾನವಾಗಿ ನಮ್ಮ ಮಕ್ಕಳು ಬೆಳೆಯುವ ಬಗೆಯೇ ಬೇರೆಯಾಗಿದೆ. ಆದರೆ ನಮ್ಮ ನಗರಗಳಿಗೆ ದಿನಾ ತರಕಾರಿ, ನೀರು, ಹಾಲು, ಅನ್ನ ಕೊಡುವ ಗ್ರಾಮಗಳನ್ನು ನಾವೇಕೆ ಮರೆತಿದ್ದೇವೆ? ಹಳ್ಳಿಯೊಳಗೆ ಹೊಸದಾಗಿ ಕೃಷಿಯನ್ನು ಕಟ್ಟಬೇಕಾದ ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ ಸಂಶೋಧನಾ ಕೇಂದ್ರಗಳು ನಗರದೊಳಗೇ ಹುಟ್ಟಿಕೊಂಡವು. ಹಳ್ಳಿ ಉದ್ಧಾರದ ಗ್ರಾಮೀಣ ಬ್ಯಾಂಕುಗಳು ಪಟ್ಟಣಕ್ಕೇ ಅಂಟಿಕೊಂಡವು. ಹಳ್ಳಿಗಳಿಂದ ನಗರಕ್ಕೆ ಬಂದು ಇದೇ ಕೃಷಿ ವಿಶ್ವವಿದ್ಯಾನಿಲಯಗಳಿಂದ ಕೃಷಿ ಪದವಿ ಪಡೆದ ಹಳ್ಳಿಮಕ್ಕಳು ತಜ್ಞರಾಗಿ ಪೇಟೆಯಲ್ಲೇ ಉಳಿದರು. ಔಷಧಿಯ, ಬೀಜದ ಘಟಕಗಳಲ್ಲಿ ಉದ್ಯೋಗಿಗಳಾದರೇ ಹೊರತು ಗ್ರಾಮಕ್ಕೆ ಮರಳಿ ಕೃಷಿಗೆ ಇಳಿಯಲಿಲ್ಲ. ರೈತರ ಪ್ರಯೋಗ-ಪ್ರಯತ್ನಗಳಿಗೆ ನೆರವಾಗಲಿಲ್ಲ. ಅಪ್ಪನ ದುಡಿಮೆಯನ್ನು ಮುಂದುವರಿಸಲಿಲ್ಲ. ಒಬ್ಬ ಹಜಾರೆ, ಸ್ವಾಮಿನಾಥನ್‌, ತೇಜಸ್ವಿ , ಕುರಿಯನ್‌, ನಾರಾಯಣ ರೆಡ್ಡಿ, ಪ್ರಸನ್ನ, ಎ.ಪಿ. ಚಂದ್ರಶೇಖರರಂಥವರ ದಾರಿಯಲ್ಲಿ ಸ್ವಾವಲಂಬಿ ಗ್ರಾಮಗಳನ್ನು ಕಟ್ಟುವ, ಹಳ್ಳಿಯ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ಕಂಡುಹಿಡಿಯುವ ಪ್ರಯತ್ನ ಯಾರೂ ಮಾಡಲಿಲ್ಲ.

ಊರು ಕಳಚಿಕೊಂಡ, ಬೇರು ಕಳಚಿಕೊಂಡವರೆಲ್ಲಾ ಬಗೆಬಗೆಯಲ್ಲಿ ಬೆಳೆದರು. ಆದರೆ ಊರು ಮಾತ್ರ ಬೆಳೆಯಲೇ ಇಲ್ಲ. ನಗರಗಳಿಗಿಂತ ಹೆಚ್ಚು ಸಂಬಂಧ-ಸಂವೇದನೆಯ, ಮಾನ-ಮರ್ಯಾದೆಯ ಜಾಗಗಳಾಗಿ ನೆಲಸಂಬಂಧವನ್ನು ಬಳುವಳಿಯಾಗಿ ಪಡೆದ ಹಳ್ಳಿಗಳಿಂದು ವೇಷಾಂತರಕ್ಕೆ ಒಳಗಾಗಿವೆ. ಬಗೆಬಗೆಯ ಮುಖಗಳನ್ನು ಧರಿಸಿವೆ. ಅನ್ನದ ಉತ್ಪಾದಕ, ಕಡಿಮೆ ಬಳಕೆದಾರನಾದ ರೈತ ಯಾವಾಗ ನಗರದ ನಕಲಿಗೆ ಮಾರು ಹೋದನೋ ಸುಖದ ನಂಬಿಕೆಯನ್ನು ಬದಲಾಯಿಸಿಕೊಂಡನೋ ಅಂದೇ ರೈತನಿಗೆ ತನ್ನ ಹುಟ್ಟೂರು-ಉತ್ಪಾದನಾ ನೆಲೆ ಮುಖ್ಯವಾಗಲಿಲ್ಲ. ಭಾರತದ ರಾಜಕಾರಣವೂ ಗ್ರಾಮಗಳನ್ನು, ರೈತಾಪಿಗಳನ್ನು ಮತಬ್ಯಾಂಕುಗಳನ್ನಾಗಿಸಿಕೊಂಡು ಭ್ರಷ್ಟರನ್ನಾಗಿಸಿಕೊಂಡೇ ಬಂತು. ಓದದೇ ಉಳಿದ ಹಳ್ಳಿಮಂದಿ ಮೊನ್ನೆ ಮೊನ್ನೆಯವರೆಗೆ ಜಾತಿ, ಧರ್ಮ, ಮತ ಯಾವುದನ್ನೂ ನೋಡದೆ ಸಹಬಾಳ್ವೆಯಿಂದ ಬದುಕುತ್ತಿದ್ದರು. ರಾಜಕಾರಣ ಶುದ್ಧ ಹಳ್ಳಿಗಳಲ್ಲೂ ಮತೀಯತೆಯ ಅಶುದ್ಧತೆಯನ್ನು ಸುರಿಯಿತು. ಅಧಿಕಾರ ವಿಕೇಂದ್ರಿಕರಣ, ಗ್ರಾಮಾಡಳಿತ ಎಲ್ಲವೂ ಈಗ ರೈತಾಪಿ ನೆಲೆಗಳಿಗೆ ರಾಜಕಾರಣವನ್ನು ತುಂಬಿದೆ. ರೈತರಿಂದಲೇ ಚಳುವಳಿಗಾರರಾದವರು,  ಮತ ಪಡೆದು ಜನಪ್ರತಿನಿಧಿಗಳಾದವರು, ಗ್ರಾಮದ ಮಧ್ಯೆಯೇ ಬೆಳೆದು ನಾಯಕರಾದವರು ಗೆದ್ದ ಮೇಲೆ, ಅಧಿಕಾರ ಪಡೆದ ಮೇಲೆ ಹಳ್ಳಿಗಳನ್ನು ಮರೆತಿದ್ದಾರೆ.

ಅಧಿಕಾರ, ಉದ್ಯೋಗ, ಆದಾಯ, ಸೌಲಭ್ಯ ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಗ್ರಾಮದ ಬೇರು ಕಳಚಿ ನಗರಕ್ಕೆ ಹೋಗಿ ಹೋಗಿ ಇನ್ನೂ ವಲಸೆ ಹೋಗಲು ಹಳ್ಳಿಯಲ್ಲಿ ಯಾರೂ ಉಳಿದಿಲ್ಲ ಎನ್ನುವಾಗ “ನಾವಿದ್ದೇವೆ’ ಎಂದು ಗ್ರಾಮಮುಖೀಗಳಾಗುವವರ ಹೊಸ ತಂಡ-ಮನಸ್ಸು ಸಿದ್ಧಗೊಳ್ಳುತ್ತಿರುವುದು ಸಂತಸದ ಸಂಗತಿ. ಲಕ್ಷ ಲಕ್ಷ ವೇತನ ಪಡೆಯುವ ಡಾಕ್ಟರ್‌-ಟೆಕ್ಕಿಗಳು ನಗರದ ತ್ರಿಶಂಕು ಸ್ಥಿತಿಯಲ್ಲಿ ಬಸವಳಿದು ಹಿರಿಯರ ಪಾಳುಭೂಮಿಗೆ ವಾಪಾಸಾಗುತ್ತಿರುವುದು, ಗಡಿಗುರುತಿಸಿ ಬೇಲಿ ಹಾಕಿ ಹೊಸದಾಗಿ ಬೀಜ ಬಿತ್ತುತ್ತಿರುವ ಸರಳ ಬದುಕಿನ ಪ್ರತಿನಿಧಿಗಳು ಈಗ ಅಲ್ಲೊಂದು ಇಲ್ಲೊಂದು ಕಾಣಿಸುತ್ತಿದ್ದಾರೆ. ಗಂಡ-ಹೆಂಡತಿ ಇಬ್ಬರೂ ಒಪ್ಪಿ ರಾಜೀನಾಮೆ ಬಿಸಾಡಿ ಕೆಸರಿಗೆ ಇಳಿದ ಯುವ ಜೋಡಿಗಳು ಅನೇಕ. ವ್ಯವಸ್ಥೆಯನ್ನು ತಿರುಗುಮುರುಗುಗೊಳಿಸಿದ ನಗರದಿಂದ ಗ್ರಾಮಕ್ಕೆ ವಲಸೆ ಆರಂಭಿಸಿದ ಇಂಥವರ ಮನಃಶಾಸ್ತ್ರ ಅರ್ಥಶಾಸ್ತ್ರ ಅಧ್ಯಯನಯೋಗ್ಯ ಮತ್ತು ಅಭಿನಂದನೀಯ.

ನರೇಂದ್ರ ರೈ ದೇರ್ಲ

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.