CONNECT WITH US  

ಫೇಸ್‌ಬುಕ್‌

ಈ ಸಲ ರಜೆಗೆ ಅಜ್ಜಿಯ ಜೊತೆ ಉಳಿಯಲು ಬಂದ ಸಾನ್ವಿ ಹೋಗುವ ಮೊದಲು ಅಜ್ಜಿಗೆ ಎಲ್ಲವನ್ನೂ ಕಲಿಸಿಕೊಟ್ಟೇ ಹೋಗಿದ್ದಳು. ಅಜ್ಜಿಯ ಜಾನಕಮ್ಮ ಎನ್ನುವ ಹೆಸರನ್ನು ಸ್ವೀಟಾಗಿ ಕತ್ತರಿಸಿ ಜಾನಿ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ ಅಕೌಂಟ್‌ ತೆರೆದುಕೊಟ್ಟದ್ದೂ ಅವಳೇ. ವಾಟ್ಸಾಪ್‌, ಫೇಸುºಕ್‌ ಎಲ್ಲವೂ ಜಾನಕಮ್ಮನವರ ಬೆರಳ ತುದಿಯಲ್ಲಿ ನಲಿದಾಡುವಂತಾಗಿ, ಇಲ್ಲೊಬ್ಬಳಿಗೆ ಹೊತ್ತು ಕಳೆಯಲು ಹೊಸ ಸಾಧನವೊಂದು ದೊರೆತಿತ್ತು.

ಮೊಮ್ಮಗಳು ಅಮೆರಿಕಕ್ಕೆ ಹೋದ ನಂತರ ಇನ್ನೂ ಮುದ್ದು ಮುದ್ದು ಗೊಂಬೆಯಂತಾಗಿದ್ದಾಳೆ ಎಂಬುದು ಜಾನಕಮ್ಮನವರ ಅಂಬೋಣ. ಅವಳು ಕಳುಹಿಸಿದ ಒಂದು ಫೋಟೋವಂತೂ ಜಾನಕಮ್ಮನವರಿಗೆ ಎಷ್ಟು ಇಷ್ಟವಾಗಿತ್ತೆಂದರೆ ಮೊದಲಿದ್ದ  ತಮ್ಮ ಫೇಸ್‌ಬುಕ್‌ ಪ್ರೊಫೈಲ್‌ ಪಿಕ್ಚರಾದ ಸುಂದರ ಆರ್ಕಿಡ್‌ ಹೂಗಳ ಗೊಂಚಲನ್ನು ಅನಾಯಾಸವಾಗಿ ಬದಲಿಸಿ ಮೊಮ್ಮಗಳ ಫೊಟೋವನ್ನೇ ಅಲ್ಲಿ ಹಾಕಿಕೊಂಡುಬಿಟ್ಟಿದ್ದರು. ಅದಾಗಿ, ಒಂದೆರಡು ವಾರ ಕಳೆದಿರಬಹುದು ಮಾಧವ ರಾವ್‌ ಎಂಬವರ  ಫ್ರೆಂಡ್‌ ರಿಕ್ವೆಸ್ಟ್‌ ಬರುವಾಗ. ಇಡೀ ಪ್ರೊಫೈಲನ್ನು ನಾಲ್ಕಾರು ಬಾರಿ ಕಣ್ಣಾಡಿಸಿ ನೋಡಿದ ಜಾನಕಮ್ಮನಿಗೆ ಕಂಡಿದ್ದು ನಾಲ್ಕಾರು ಪ್ರಕೃತಿಯ ಫೋಟೋಗಳಷ್ಟೇ. ಬೆಳ್ಳಿ ಬಣ್ಣದ ಕೂದಲು ಹೊತ್ತ ಅವರ ಫೊಟೋ ಕೂಡಾ ಗೌರವಭಾವ ಮೂಡಿಸುವಂತಿದ್ದುದು ಮಾತ್ರವಲ್ಲ, ತನ್ನ ಪ್ರಾಯದವರೇ ಆದರೆ ಮಾತಿಗೊಂದು ಜನ ಸಿಕ್ಕಿಯಾರೆಂಬ ಅವರ ಆಸೆಯೂ ಅದನ್ನು ಓಕೆ ಮಾಡುವಲ್ಲಿ ಮುಂದಾಯಿತು. 

ಜಾನಕಮ್ಮನವರ ಆಸೆ ಈಡೇರುವ ಕಾಲವೂ ಬಂದೇ ಬಿಟ್ಟಿತ್ತು- ಮರುದಿನಕ್ಕೆ ಆ ಕಡೆಯಿಂದ, ""ನಮಸ್ತೆ, ಹೇಗಿದ್ದೀರಾ?'' ಎಂಬ ಮೆಸೇಜು ಬಂದಾಗ.
ಇವರ ಉತ್ತರಕ್ಕೆ ಅವರ ಮರು ಉತ್ತರ ಇವರ ನಗೆಗೆ ಅವರ ಇಮೋಜಿಗಳು, ಜಾನಕಮ್ಮನವರ ಇಷ್ಟದ ಸೀರಿಯಲ್ಲುಗಳ ಹೊತ್ತನ್ನು ಕಸಿಯತೊಡಗಿದವು. ನಿಧಾನಕ್ಕೆ ಅದು ಅಲ್ಲಿಂದ ಮುಂದುವರಿದು   ಹನ್ನೆರಡರವರೆಗಿನ ರಾತ್ರೆಯನ್ನು ಹಗಲಾಗಿಸುವಲ್ಲಿ ನೆರವಾದವು. ಮೊದಲ ಬಾರಿಗೆ ಅವರು ""ನೀವು ತುಂಬಾ ಸುಂದರಿ'' ಎಂದು ಹೊಗಳಿದ್ದು ತಮ್ಮ ಮೊಮ್ಮಗಳ ಚಿತ್ರ ನೋಡಿ ಎಂದು ಜಾನಕಮ್ಮನಿಗೆ ಅರಿವಾಗಿದ್ದರೂ ಅವರು ಅದನ್ನು ನಗುತ್ತಲೇ ಸ್ವೀಕರಿಸಿದ್ದರು. ಮೊದಲಿಗೆ ಮೊಮ್ಮಗಳ ವಯಸ್ಸಿನವಳಂತೆ ಮಾತನಾಡುವುದು ಅದೂ ವಯಸ್ಸಾದವನೊಂದಿಗೆ... ಒಂದಿಷ್ಟು ಕಷ್ಟ ಎನ್ನಿಸಿದರೂ ಅದು ಯಾಕೋ ಚಾಲೆಂಜಿಂಗ್‌ ಅನ್ನಿಸಿತು. ಇದನ್ನೆಲ್ಲಾ ಸಾನ್ವಿಗೆ ಹೇಳಿಯೂ ಇದ್ದರು. ಆಕೆಯೂ ಅಜ್ಜಿಯ ಆಟಕ್ಕೆ ಸಹಕಾರಿಯಾಗಿ ತರಲೆ ಮಾಡುವುದು ಹೇಗೆ ಎಂದೆಲ್ಲಾ ಅಜ್ಜಿಗೆ ಕಲಿಸಿಕೊಡುತ್ತಿದ್ದಳು.  

ಬಿಡುವು ಸಿಕ್ಕಾಗ ಕವಾಟಿನಿಂದ ಆಲ್ಬಮ್‌ ತೆಗೆದು ತನ್ನ ಹಳೇ ಫೋಟೊಗಳನ್ನಷ್ಟು ಹೊರ ತೆಗೆದು ಮೇಜಿನ ಮೇಲೆ ಹರಡಿ ನೋಡುತ್ತ ಕುಳಿತಿದ್ದರು. ತಮ್ಮ  ಹರೆಯದ ಫೋಟೊಗಳಿಗೆ ಸಾನ್ವಿ ಈಗ ಹಾಕುವ ಆಧುನಿಕ ಉಡುಗೆ ತೊಡುಗೆಗಳನ್ನು ಮನದಲ್ಲೇ ಹಾಕಿಸಿ ನೋಡಿದವರಿಗೆ ಸಾನ್ವಿ ನನ್ನದೇ ನಕಲೇನೋ ಎಂದನ್ನಿಸಿಬಿಟ್ಟಿತ್ತು. ಮುಂದಿನ ಮಾತುಕತೆಗಳು ಆಪ್ತವಾಗುತ್ತ ಹೋದಂತೆ  ಜಾನಕಮ್ಮನವರಿಗೆ ವರ್ಷ ಮೊದಲು ತನ್ನನ್ನಗಲಿ ಹೋದ ಪತಿಯ ದರ್ಪದ ನಡವಳಿಕೆಗೂ ಬೆಳ್ಳಿ ತಲೆಯ ಎಫ್ಬಿ ಗೆಳೆಯನ ಮೃದು-ಮಧುರ ಮಾತುಗಳಿಗೂ ತಾಳೆ ಹಾಕಲು ತೊಡಗಿದವು.  ಭೇಟಿಗಾಗಿ ಸಮಯ ನಿಗದಿಯಾಯಿತು. ಆ ದಿನ ಎಳೆ ವಯಸ್ಸಿನ ಹುಡುಗಿಯ ಬದಲು ನನ್ನನ್ನು ನೋಡಿದರೆ ಹೇಗಿರಬಹುದು ಆತನ ಪ್ರತಿಕ್ರಿಯೆ ಎಂದು ಊಹಿಸಿ ಅವರಿಗೆ ಒಂದಿಷ್ಟು ನಗು, ಒಂದಿಷ್ಟು ಆತಂಕ ಎರಡೂ ಇದ್ದರೂ ಸತ್ಯವನ್ನು ಎದುರಿಸಲು ಮಾನಸಿಕವಾಗಿ ತಯಾರಾಗಲೇಬೇಕೆಂಬಾಸೆ ಅವರದ್ದು.

ಮನೆಯ ಹತ್ತಿರದ ಪಾರ್ಕಿನಲ್ಲಿ ಭೇಟಿ ಆಗುವುದಕ್ಕಿಂತ ಹೊರಗೆ ಹೊಟೇಲನ್ನು ಆಯ್ದುಕೊಂಡದ್ದು ಜಾನಕಮ್ಮನೇ. ತಮ್ಮ ಕೂದಲ ಬಿಳುಪನ್ನು  ಹೇರ್‌ಡೈಯ ಕಪ್ಪು ಬಣ್ಣಕ್ಕೆ ಬದಲಾಯಿಸಿದ್ದರು. ಸೀರೆ ಉಟ್ಟು ಲಘುವಾದ ಮೇಕಪ್‌ ಮಾಡಿಕೊಂಡ ತಮ್ಮ ಮುಖ ಈಗಲೂ ತನ್ನ ಗ್ಲೋ ಉಳಿಸಿಕೊಂಡಿದೆ ಎಂದು ಒಳಗೊಳಗೆ ಹೆಮ್ಮೆಪಡುತ್ತ¤ ಪರ್ಸ್‌ ಹಿಡಿದು ಆಟೋ ಏರಿದ್ದರು. ಹೊಟೇಲ್‌ ಹೆಸರು ಹೇಳಿ ಅಟೋದೊಳಗೆ ಕುಳಿತವರಿಗೆ ಇದ್ದಕ್ಕಿದ್ದಂತೆ, ಹೋಗಲೇಬೇಕಾ, ಹೋಗದಿದ್ದರೇನು? ಇಂದಿನಿಂದಲೇ ಮಾತುಕತೆ ನಿಂತು ಹೋಗುವ ಅಥವಾ  ಕುತೂಹಲಗಳಿರದ ಬೇರೇ ರೀತಿಯ ಮಾತುಕತೆ ಶುರು ಆಗುವ ಭಯ ಅವರನ್ನು ವಿಪರೀತ ಕಾಡತೊಡಗಿತು.  ಏನಾದರೂ ಕಾರಣ ಕೊಟ್ಟು ಬೀಸುವ ದೊಣ್ಣೆ ತಪ್ಪಿಸಿಕೊಂಡರೆ...  ಹೊಟೇಲ್‌ನ ಎದುರು ಬಂದಾಗ ಇದ್ದ ಧೈರ್ಯವೂ ಉಡುಗಿ ಹೋಗಿ ಆಟೋದವನಿಗೆ ತಮ್ಮ ಮನೆಯ  ಹತ್ತಿರದ ಪಾರ್ಕಿನ ಕಡೆಗೆ ತಿರುಗಿಸಲು ಹೇಳಿದರು. ವಿಚಿತ್ರವಾಗಿ ಇವರನ್ನು ನೋಡುತ್ತ, ""ಇಲ್ಲಾ ಮೇಡಂ, ಈಗಲ್ಲಿಗೆ ಮತ್ತೆ ಬರೋಲ್ಲ. ನೀವಿಲ್ಲೇ ಇಳಿದುಬಿಡಿ'' ಎಂದು ಮೀಟರ್‌ ನೋಡಿ ದುಡ್ಡು ಎಷ್ಟಾಯಿತೆಂದು ಹೇಳಿದ್ದ. ಯಾಕೋ ಬಳಲಿಕೆಯಾದಂತಹ ತಮ್ಮ ಕಾಲುಗಳನ್ನೆಳೆದುಕೊಂಡು ರಸ್ತೆ ದಾಟಲು ಒಂದೆರಡು ಹೆಜ್ಜೆ ಇಟ್ಟಿದ್ದರಷ್ಟೇ. ಕ್ಷಣದಲ್ಲಿ ವಿರುದ್ಧ ಬದಿಯಲ್ಲಿ ವೇಗದಿಂದ ಬರುತ್ತಿದ್ದ ಬೈಕೊಂದು ಕ್ರೀಚ್‌ ಎಂದು ಬ್ರೇಕ್‌ ಹಾಕಿ ನಿಂತುಬಿಟ್ಟಿತ್ತು. ""ಕಣ್ಣು ಕಾಣಿಸದಿದ್ರೆ ರಸ್ತೆ ಮೇಲೆ ಬಂದು ನಮ್ಮ ಪ್ರಾಣ ಯಾಕ್ರೀ ತಿಂತೀರಾ, ತೆಪ್ಪಗೆ ಮನೇಲೇ ಕೂರ್‌ಬಾರದಾ?'' ಎಂದು  ಗದರಿದ ಯುವಕನಿಗೆ ಏನುತ್ತರ ಕೊಡುವುದೆಂದು ಅರ್ಥವಾಗದೇ ಹಿಂದೆ ಹೋಗುವುದಾ ಅಥವಾ ಮುಂದಕ್ಕೆ  ಹೋಗುವುದಾ ಎಂದರಿವಾಗದೇ ಅಯೋಮಯರಾಗಿದ್ದರು.

ಆತನೇ ಕನಿಕರ ತೋರಿದವನಂತೆ ಮಾತು ಮೆಲುವಾಗಿಸಿ, ""ನಿಧಾನಕ್ಕೆ ಹೋಗಿ'' ಎಂದು  ಅವರನ್ನು ಮುಂದಕ್ಕೆ ಹೋಗಗೊಟ್ಟ.  ಅವರು ತಲುಪುವವರೆಗೂ ನೋಡುತ್ತಲೇ ನಿಂತಿದ್ದ. ಆ ಕಡೆ ನಡೆದವರೇ ಕೃತಜ್ಞತೆಯಿಂದ, ""ನಿನ್ನ ಹೆಸ್ರೇನಪ್ಪಾ?'' ಎಂದು ಕಿರುಚಿ ಕೇಳಿದ್ದರು. ಮಾಧವ್‌ ರಾವ್‌ ಎನ್ನುತ್ತಲೇ ಹೊಟೇಲ್ಲಿನ ಕಡೆ ನುಗ್ಗಿದವನ ಹಿಂದಿನ ಸೀಟಿನಲ್ಲಿ ಭದ್ರವಾಗಿ ಕಟ್ಟಿದ್ದ ತಮ್ಮ ಮೊದಲ ಪ್ರೊಫೈಲ್‌ ಪಿಕ್ಚರಿನಲ್ಲಿದ್ದದ್ದೇ ಆರ್ಕಿಡ್‌ ಹೂಗಳು ಕಾಣಿಸಿತ್ತು. 

ಅನಿತಾ ನರೇಶ್‌ ಮಂಚಿ

Trending videos

Back to Top