ಹಳ್ಳಿಯ ಶಾಲೆಯಲ್ಲಿ ಬದುಕಿನ ಮೊದಲ ಪಾಠ


Team Udayavani, Aug 12, 2018, 6:00 AM IST

37.jpg

ಬಿ. ಎ. ವಿವೇಕ ರೈಯವರು ಎರಡು ವಿಶ್ವವಿದ್ಯಾನಿಲಯಗಳ ಕುಲಪತಿ ಹುದ್ದೆಯನ್ನು ಅಲಂಕರಿಸಿದವರು. “ಕಲಿಸುವಿಕೆ’ಯಲ್ಲಿ ಉನ್ನತ ಮಟ್ಟದ ಸಾಧನೆ ಮಾಡಿ ವಿದೇಶಗಳಲ್ಲಿ ಕನ್ನಡ ಪಾಠ ಮಾಡಿದ ಅವರ ಶಿಕ್ಷಕಬದುಕಿನ ಸ್ಫೂರ್ತಿಯ ಸೆಲೆ ಇರುವುದು ಬಾಲ್ಯದ ಹಳ್ಳಿಶಾಲೆಯ “ಕಲಿಕೆ’ಯಲ್ಲಿ. ಅವರ ಪ್ರಕಾರ ಕಲಿಸುವಿಕೆ ಎಂದರೆ ಕಲಿಯುವಿಕೆಯ ಮುಂದುವರಿದ ಭಾಗ. ಹಾಗಾಗಿಯೇ ಕಲಿತದ್ದು, ಕಲಿಸಿದ್ದು ಎರಡೂ ಕಲೆತುಕೊಂಡು ಅವರ ಈ ಅನುಭವಕಥನವಾಗಿದೆ… 

ಭಾಗ-1
ಕಲಿಸುವುದನ್ನು ಒಂದು ಉದ್ಯೋಗವಾಗಿ ಆಕಸ್ಮಿಕವಾಗಿ ಆರಿಸಿಕೊಂಡ ನನಗೆ ಅದಕ್ಕೆ ಬೇಕಾದ ತಿಳುವಳಿಕೆ ಎಲ್ಲಿಂದ ಎಂದಿನಿಂದ ದೊರೆಯಲು ಸುರುವಾಯಿತು ಎಂದು ಯೋಚಿಸುವಾಗಲೆಲ್ಲ ಅದೊಂದು  ವಿಚಿತ್ರ ಮಹಾಯಾನ ಅನ್ನಿಸುತ್ತದೆ. ಮಗುವಿನ ಸ್ಥಿತಿಯಿಂದ ಬಾಲಕನ ಹಂತಕ್ಕೆ ಬರುವವರೆಗಿನ ಕಲಿಯುವಿಕೆಗೆ ಮನೆಯ ಪರಿಸರ ಅವಕಾಶದ ಬಾಗಿಲನ್ನು ತೆರೆಯುತ್ತದೆ . ಮುಂದೆ ಶಾಲೆ-ಕಾಲೇಜು- ವಿಶ್ವವಿದ್ಯಾನಿಲಯಗಳ ಹಳಿಯಲ್ಲಿ ಕಲಿಕೆಯ ಬಂಡಿ ಸಾಗುತ್ತದೆ. ಇದರ ಜೊತೆಗೆಯೇ ಕೆಲವೊಮ್ಮೆ ಸಮಾನಾಂತರವಾಗಿ , ಮತ್ತೆ ಕೆಲವೊಮ್ಮೆ ವಿರುದ್ಧವಾಗಿ ಮನೆ-ಕುಟುಂಬ-ಸಮಾಜ-ಪರಿಸರ-ಪುಸ್ತಕ-ಪ್ರವಾಸ… ಹೀಗೆ ಬಹುಸ್ತರಗಳಲ್ಲಿ ಕಲಿಯುವಿಕೆ ಸಂಭವಿಸುತ್ತದೆ. ಈ ಬಹುರೂಪಿ ಕಲಿಯುವಿಕೆಯ ಸಂಕೀರ್ಣ ಮೊತ್ತವೊಂದು ನೆನಪಿನ ಕೋಶಗಳಲ್ಲಿ ಹರಡಿಕೊಂಡಿರುತ್ತದೆ. ಈ ದೃಷ್ಟಿಯಿಂದಲೇ ಕಲಿಸುವಿಕೆ ಎನ್ನುವುದು ಕಲಿಯುವಿಕೆಯ ಪ್ರಾಯೋಗಿಕ ರೂಪ. ಆರೇಳು ದಶಕಗಳ ಹಿಂದಿನ ಕಾಲದಿಂದ ತೊಡಗಿ ನೆನಪುಗಳ ಪದರಗಳ ಆಳಕ್ಕೆ ಇಳಿದು ಸಿಕ್ಕಿದ್ದಷ್ಟನ್ನು ಹೊರತೆಗೆದು ನಾನು ಕಲಿತ ಸೋಜಿಗಗಳನ್ನು ಕಲಿಸಿದ ಸಾಹಸಗಳನ್ನು  ಬಿತ್ತರಿಸಲು ಬಯಸಿದ್ದೇನೆ…

ದಕ್ಷಿಣಕನ್ನಡ ಜಿಲ್ಲೆಯ ದಕ್ಷಿಣದಲ್ಲಿ ಇದ್ದ ತಾಲೂಕು-ಪುತ್ತೂರು. ನಾನು ಹುಟ್ಟುವ ಕಾಲಕ್ಕೆ ಮಂಗಳೂರಿನಿಂದ ದಕ್ಷಿಣಕ್ಕೆ ಇದ್ದದ್ದು ಅದು ಒಂದೇ ತಾಲೂಕು. ಈಗಿನ ಬಂಟ್ವಾಳ, ಬೆಳ್ತಂಗಡಿ, ಸುಳ್ಯ- ಈ ಯಾವ ತಾಲೂಕುಗಳೂ ಆಗ ಇರಲಿಲ್ಲ. ಪುತ್ತೂರು ತಾಲೂಕಿನ ಕೇಂದ್ರ ಪುತ್ತೂರು ಪೇಟೆ. ಪುತ್ತೂರು ಪೇಟೆಯಿಂದ ಸುಮಾರು ಆರು ಮೈಲು ದೂರದಲ್ಲಿ ಇದ್ದ ಹಳ್ಳಿ “ಪುಣಚ’. ಕಂದಾಯ ದಾಖಲೆಗಳಿಂದಾಗಿ “ಪುಣಚ ಗ್ರಾಮ’. ಅದರ ಕೇಂದ್ರ ಸ್ಥಳ ಪರಿಯಾಲ್ತಡ್ಕ. ಪರಿಯಾಲ್ತಡ್ಕದ ಎತ್ತರದ ಪದವಿನಲ್ಲಿ ನಮ್ಮ ಶಾಲೆ- ಹೈಯರ್‌ ಎಲಿಮೆಂಟರಿ ಶಾಲೆ ಇದ್ದದ್ದು. ಅದು ಎಯೆxಡ್‌ ಅಂದರೆ ಸರಕಾರದ ಸಣ್ಣ ಅನುದಾನ ದೊರೆಯುತ್ತಿದ್ದ, ಎಂಟನೆಯ ತರಗತಿವರೆಗೆ ಕಲಿಯಲು ಅವಕಾಶ ಇದ್ದ ಖಾಸಗಿ ಶಾಲೆ. ನಾನು ಓದುತ್ತಿದ್ದ ಕಾಲಕ್ಕೆ (1952-1960) ಅಲ್ಲಿ ಒಂದರಿಂದ ಎಂಟರವರೆಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣದ ಅವಕಾಶ ಇತ್ತು. ಎಂಟನೆಯ ತರಗತಿಯ ಕೊನೆಗೆ ಪಬ್ಲಿಕ್‌ ಪರೀಕ್ಷೆ ಇತ್ತು. ಆಗ ನಮಗೆ ದೊರೆಯುತ್ತಿದ್ದ ಸರ್ಟಿಫಿಕೆಟ್‌-ಇಎಸ್‌ಎಲ್‌ ಸಿ (ಎಲಿಮೆಂಟರಿ ಸ್ಕೂಲ್‌ ಲೀವಿಂಗ್‌ ಸರ್ಟಿಫಿಕೆಟ್‌). 1952ರಲ್ಲಿ ಒಂದನೆಯ ತರಗತಿಗೆ ಆ ಶಾಲೆಗೆ  ಸೇರಿದ ನಾನು ಎಂಟನೆಯ ತರಗತಿ ಮುಗಿಸಿ ಇಎಸ್‌ಎಲ್‌ಸಿ ತೇರ್ಗಡೆ ಆದದ್ದು 1960ರಲ್ಲಿ.

ನಮ್ಮ ಶಾಲೆಯನ್ನು ನಡೆಸುತ್ತಿದ್ದವರು ಪುಣಚ ಗ್ರಾಮದ ಮಣಿಲ ಮನೆಯವರು. “ಮಣಿಲ’ ಮನೆ ಚಕ್ರಕೋಡಿ ಶಾಸ್ತ್ರಿಗಳ ಮನೆತನದ ಒಂದು ಮುಖ್ಯ ಶಾಖೆ. ಪಂಚಾಂಗ, ಜಾತಕ, ಶಾಸ್ತ್ರ, ಸಾಹಿತ್ಯ, ಯಕ್ಷಗಾನ, ಕೃಷಿ ಕ್ಷೇತ್ರಗಳ  ಜೊತೆಗೆ ಎಲ್ಲ ಸೌಲಭ್ಯಗಳಿಂದ ವಂಚಿತವಾದ ಪುಣಚಕ್ಕೆ ಶಿಕ್ಷಣದ ಭಾಗ್ಯವನ್ನು ಒದಗಿಸಿದ ಪುಣ್ಯವನ್ನು ಕಟ್ಟಿಕೊಂಡ ಮನೆತನ ಅದು. ನಾನು ಓದುವ ಕಾಲದಲ್ಲೂ ರಸ್ತೆ, ವಾಹನ, ವಿದ್ಯುತ್‌ ಸೌಕರ್ಯ ಇಲ್ಲದಿದ್ದ ಆ  ಹಳ್ಳಿಯ ಎಲ್ಲ ವರ್ಗ-ಜಾತಿಗಳ ಮಕ್ಕಳಿಗೆ ವಿದ್ಯೆಯ ಮುಖ ತೋರಿಸಿದ ಸಾಹಸಿ ಕುಟುಂಬ ಮಣಿಲ ಶಾಸಿŒಗಳದ್ದು. ನನ್ನ ತಂದೆ ಓದಿದ್ದು ಇದೇ ಶಾಲೆಯಲ್ಲಿ. ನನ್ನ ಇಬ್ಬರು ಅಕ್ಕಂದಿರು ಮತ್ತು ನನ್ನ ತಮ್ಮ ಶಿಕ್ಷಣ ಪಡೆದದ್ದು ಈ ಶಾಲೆಯಲ್ಲಿ. ನಾನು ಬಹಳ ಬಾರಿ ಯೋಚಿಸುತ್ತೇನೆ-ಮಣಿಲ ಮನೆಯವರು ಪರಿಯಾಲ್ತಡ್ಕದಲ್ಲಿ ಈ ಶಾಲೆಯನ್ನು ಆರಂಭಿಸದೆ ಇರುತ್ತಿದ್ದರೆ  ನಾನು ಎಲ್ಲಿರುತ್ತಿ¨ªೆ , ಏನಾಗಿ ಇರುತ್ತಿ¨ªೆ ಎನ್ನುವುದನ್ನು! ನಮ್ಮ ಕುಟುಂಬದ ಆಗಿನ ಆರ್ಥಿಕ ಸ್ಥಿತಿಯಲ್ಲಿ ಪುತ್ತೂರಿಗೆ ಹೋಗಿ ಶಿಕ್ಷಣ ಪಡೆಯುವ ಸಾಧ್ಯತೆ ನನಗೆ ಖಂಡಿತ ಇರಲಿಲ್ಲ. ಇದು ನನ್ನದು ಮಾತ್ರ ಅಲ್ಲ , ಪುಣಚ ಮತ್ತು ಸುತ್ತುಮುತ್ತಲಿನ ಎಲ್ಲ ಬಡ ಕುಟುಂಬಗಳ ಕತೆಯೂ ಆಗಿತ್ತು. ನಮ್ಮೆಲ್ಲರ ಭಾಗ್ಯದ ಬಾಗಿಲು ತೆರೆದು, ಚಿಕ್ಕ ಹಳ್ಳದಿಂದ ಕಣಿ-ಹೊಳೆಗಳನ್ನು ಹಾದು ನದಿಗಳನ್ನು ದಾಟಿ, ಸಮುದ್ರ ನೋಡಲು ಮತ್ತು ದಾಟಲು ಸಾಧ್ಯವಾದದ್ದು- ಹರಿಯುವ ಅಡ್ಕದಲ್ಲಿನ ಪರಿಯಾಲ್ತಡ್ಕ ಶಾಲೆಯಿಂದ. 

ನಾನು ಈ ಶಾಲೆಯಲ್ಲಿ ಓದಿದ ಅವಧಿ 1952-1960ರಲ್ಲಿ ಮಣಿಲದ ಮನೆಯ ಐದು ಮಂದಿ ಅಣ್ಣ-ತಮ್ಮಂದಿರು ಆಗ ಅಲ್ಲಿ ಅಧ್ಯಾಪಕರಾಗಿದ್ದರು. ಈ ಐವರಲ್ಲಿ ಹಿರಿಯರಾದ ರಾಮಕೃಷ್ಣ ಶಾಸ್ತ್ರಿ ಅವರು ಹೆಡ್‌ಮಾಸ್ತರು. ಅವರ ತಮ್ಮಂದಿರಾದ ಶಿವಶಂಕರ ಶಾಸ್ತ್ರಿ, ಮರಿಯಪ್ಪ ಶಾಸ್ತ್ರಿ, ವೆಂಕಟರಮಣ ಶಾಸ್ತ್ರಿ, ಪದ್ಮನಾಭ ಶಾಸ್ತ್ರಿ ಇತರ ಅಧ್ಯಾಪಕರು. ಮಣಿಲ ಮನೆಯ ಬಂಧುಗಳಾದ ನೀರ್ಕಜೆಯ ಅಣ್ಣ-ತಮ್ಮ ಸುಬ್ರಾಯ ಭಟ್ಟ ಮತ್ತು ರಾಮಕೃಷ್ಣ ಭಟ್ಟ – ಇನ್ನಿಬ್ಬರು ಅಧ್ಯಾಪಕರು. ಒಂದನೆಯ ತರಗತಿಗೆ ವಿಷ್ಣು  ಶಿಬರೂರಾಯರು.ಅವರೊಬ್ಬರಿಗೆ ಮಾತ್ರ ಜುಟ್ಟು ಇದ್ದ ಕಾರಣ ಮಕ್ಕಳ ಪಾಲಿಗೆ ಅವರು ಜುಟ್ಟಿನ ಮಾಸ್ತರು. ಎರಡನೆಯ ತರಗತಿಗೆ ಗೋವಿಂದರಾಯರು. ಅವರದ್ದು ಬೋಳುಮಂಡೆ. ಅವರು ಬಾರಿಸುತ್ತಿದ್ದದ್ದು ಯಕ್ಷಗಾನ ಆಟ-ಕೂಟಗಳಲ್ಲಿ ಚೆಂಡೆ ಮದ್ದಲೆ. ಹಾಗಾಗಿ, ಅವರು ಮಕ್ಕಳ ಬಾಯಲ್ಲಿ ಚೆಂಡೆ ಮಾಸ್ತರು. ಅವರ ಪೆಟ್ಟು ಚೆಂಡೆಗೆ ಮಾತ್ರ ಅಲ್ಲ, ಮಕ್ಕಳಿಗೂ ಸಿಗುತ್ತಿದ್ದ ಕಾರಣ ಅದು ಅವರ ಅನ್ವರ್ಥ ನಾಮ. ಹೆಡ್‌ಮಾಸ್ತರು ರಾಮಕೃಷ್ಣ ಶಾಸ್ತ್ರಿಗಳು ನಮಗೆ ಇಂಗ್ಲಿಶ್‌ ಮತ್ತು ಲೆಕ್ಕ ಪಾಠ ಮಾಡುತ್ತಿದ್ದರು. ಆಗಿನ ಕಾಲಕ್ಕೆ ನಮಗಂತೂ ಹೆದರಿಕೆ ಬಹಳ ಇದ್ದದ್ದು ಅವರ ಬಗ್ಗೆ. ಕೋಪ ಜಾಸ್ತಿ, ಪೆಟ್ಟು ಹೆಚ್ಚು , ಶಿಸ್ತು ಬಹಳ. ಅವರ ಇನ್ನೊಂದು ಮುಖ ಏನೆಂದರೆ, ಅವರು ಶಾಲೆಯ ಯಕ್ಷಗಾನದ ತಾಳಮದ್ದಲೆ ಮತ್ತು ಪ್ರದರ್ಶನದ ಕಾರ್ಯಕ್ರಮಗಳಲ್ಲಿ ಭಾಗವತರು. ಜಾಗಟೆ ಹಿಡಿದುಕೊಂಡು ಅವರು ಅದಕ್ಕೆ ಕೋಲಿನಲ್ಲಿ ಬಾರಿಸುತ್ತಿದ್ದರೆ, ನಮಗೆ ಅದನ್ನು ಕೇಳಲು-ನೋಡಲು ಆನಂದ. ನನಗೆ ಕನ್ನಡ ಕಲಿಸಿದವರು, ಸಾಹಿತ್ಯದ ಪ್ರೀತಿ ಮೂಡಿಸಿದವರು ಶಿವಶಂಕರ ಶಾಸ್ತ್ರಿಗಳು. ಹಸನ್ಮುಖ, ಸ್ವಾರಸ್ಯವಾದ ಪಾಠ- ಈಗಲೂ ಕನ್ನಡದ ನನ್ನ ಬೆಳವಣಿಗೆಯಲ್ಲಿ ನಾನು ಮೊದಲು ನೆನಪಿಸಿಕೊಳ್ಳುವುದು ಮನೆಯ ಪಾಠ- ನನ್ನ ಅಪ್ಪ ಅಗ್ರಾಳ ಪುರಂದರ ರೈ ಅವರದ್ದು , ಶಾಲೆಯ ಮೊದಲ ಪಾಠ-ಶಿವಶಂಕರ ಶಾಸ್ತ್ರಿಗಳದ್ದು. ಅವರು ಶಿವಶಂಕರ ಮಣಿಲ ಎಂಬ ಹೆಸರಿನಲ್ಲಿ ಲೇಖನ ಬರೆಯುತ್ತಿದ್ದರು. ಯಕ್ಷಗಾನದಲ್ಲಿ ಅರ್ಥ ಹೇಳುತ್ತಿದ್ದ , ವೇಷ ಹಾಕುತ್ತಿದ್ದ ಅವರು ರಚಿಸಿದ ಜಾಪಾನಿ ಕೃಷಿ ವಿಜಯ ಎನ್ನುವ ಯಕ್ಷಗಾನ ಪ್ರಸಂಗ ಪ್ರಕಟವಾಗಿ  ಜನಪ್ರಿಯ ಆಗಿತ್ತು. ಅದರ ಯಕ್ಷಗಾನ ಪ್ರದರ್ಶನದಲ್ಲಿ ಅವರು ಪಾತ್ರ ಕೂಡ ವಹಿಸಿದ್ದರು. ವೆಂಕಟರಮಣ ಶಾಸ್ತ್ರಿ ಅವರು ವೃತ್ತಿ ಮಾಸ್ತರು. ಶಾಲೆಯಲ್ಲಿ ಹೊಲಿಗೆ ಸಹಿತ ಅನೇಕ ಕರಕುಶಲ ಕಲೆಗಳನ್ನು ನಮಗೆ ಕಲಿಸುತ್ತಿದ್ದದ್ದು ಆ ವೃತ್ತಿ ಮಾಸ್ತರು.

ಶಾಲೆಯ ಒಂದು ಚಿಕ್ಕ ಕೋಣೆಯಲ್ಲಿ ಮಕ್ಕಳಿಗೆ ಪ್ರಾಯೋಗಿಕ ತರಬೇತಿಗೆ ಬೇಕಾದ ಸಾಮಗ್ರಿಗಳು ಇದ್ದುವು. ಮಕ್ಕಳಿಗೆ ಲೆಕ್ಕ ಮಾಡಲು ಕಲಿಸಲು ಹೊಂಗೆಕಾಯಿ ಬೀಜ, ಮಂಜೊಟ್ಟಿ ಕಾಯಿ ಇವನ್ನು ಚೀಲಗಳಲ್ಲಿ ತುಂಬಿಸಿ ಇಡುತ್ತಿದ್ದರು. ಅಲ್ಲಿ ಹೊಯಿಗೆ, ಕಡ್ಡಿ – ಇವನ್ನು ರಾಶಿಹಾಕಿರುತ್ತಿದ್ದರು. ಒಂದನೆಯ ಮತ್ತು ಎರಡನೆಯ ತರಗತಿಗಳ ಕೋಣೆಗಳ ಗೋಡೆಗಳಲ್ಲಿ ಪ್ರಾಣಿ ಪಕ್ಷಿ , ಸರೀಸೃಪಗಳ ಚಿತ್ರಗಳನ್ನು ರಟ್ಟಿಗೆ ಅಂಟಿಸಿ ನೇತುಹಾಕುತ್ತಿದ್ದರು. ಮ್ಯಾಪ್‌ಗ್ಳು, ಗೋಳಗಳು, ಆಟಿಕೆಗಳು ಅಲ್ಲಿ ನಮಗೆ ಹೊಸ ಪಾಠವನ್ನು ಕೊಡಲು ನೆರವಾಗುತ್ತಿದ್ದವು.

ಈ ಶಾಲೆಯಲ್ಲಿ ವಿದ್ಯೆಯ ಜೊತೆಗೆ  ಓದುವಿಕೆ-ಸಾಹಿತ್ಯ-ಕಲೆ- ಕ್ರೀಡೆ ಮುಂತಾದ ಅನೇಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಶಾಲೆಯಲ್ಲಿ ಒಂದು “ಬಾಲಕ ವಾಚನಾಲಯ’ ಇತ್ತು. ಇದರಲ್ಲಿ ಮಕ್ಕಳ ಸಾಹಿತ್ಯದ ಆಗಿನ ಹೆಚ್ಚಿನ ಪುಸ್ತಕಗಳು ದೊರೆಯುತ್ತಿದ್ದುವು. ನಮಗೆ ವಾಚನಾಲಯದಲ್ಲಿ ಓದುವುದನ್ನು ಕಡ್ಡಾಯ ಮಾಡಿದ್ದರು. ಮಂಗಳೂರಿನ ಬಾಲಸಾಹಿತ್ಯ ಮಂಡಳಿಯ ಎಲ್ಲ ಪುಸ್ತಕಗಳನ್ನು ಆ ಕಾಲದಲ್ಲೇ ಅಲ್ಲಿ ನಾನು ಓದಿ ಮುಗಿಸಿದ್ದೆ. ಪಂಜೆ ಮಂಗೇಶರಾಯರ ಕವನಗಳು, ಕತೆಗಳು ನಮಗೆ ಬಹಳ ಪ್ರಿಯವಾಗಿದ್ದುವು. ಕೋಟಿ ಚೆನ್ನಯ, ಅಗೋಳಿ  ಮಂಜಣ್ಣ, ಗುಡು ಗುಡು ಗುಮ್ಮಟ ದೇವರು, ಹೇನು ಸತ್ತು ಕಾಗೆ ಬಡವಾಯಿತು, ಅರ್ಗಣೆ ಮುದ್ದೆ, ಕೋ ಕೋ ಕೋ ಕೋಳಿ- ಇವೆಲ್ಲ ಆಗ ಓದಿ ಮತ್ತೆ ಮತ್ತೆ ಮೆಲುಕು ಹಾಕಿದ ಕತೆ ಪುಸ್ತಕಗಳು. ಚಂದಮಾಮ  ಕಥಾಸಂಚಿಕೆ ನಮ್ಮ ನಿಗದಿತ ಓದಿಗೆ ಸಿಗುತ್ತಿತ್ತು. ಅದರ ಒಂದು ವರ್ಷದ ಎಲ್ಲ ಸಂಚಿಕೆಗಳನ್ನು  ಬೈಂಡ್‌ ಮಾಡಿ, ಒಂದೊಂದು ಸಂಪುಟಗಳನ್ನು ಒಟ್ಟುಮಾಡಿ ಇಡುತ್ತಿದ್ದರು. ಶಿವರಾಮ ಕಾರಂತರ ಪುಸ್ತಕಗಳನ್ನು ನಾನು ಮೊದಲು ಓದಿದ್ದು ಇಲ್ಲಿಯೇ.

ನಮ್ಮ ಶಾಲೆಗೆ ಸಾಹಿತಿಗಳನ್ನು, ಕಲಾವಿದರನ್ನು  ಕರೆಸಿ ಭಾಷಣ ಮಾಡಿಸುತ್ತಿದ್ದರು. ಶಿವರಾಮ ಕಾರಂತರ  ಭಾಷಣವನ್ನು ನಾನು ಮೊದಲು ಕೇಳಿದ್ದು ನಮ್ಮ ಈ ಶಾಲೆಯಲ್ಲಿಯೇ. ಆಗ ಕಾರಂತರು ಪುತ್ತೂರಿನ ಬಾಲವನದಲ್ಲಿ ವಾಸಿಸುತ್ತಿದ್ದರು. ನಮ್ಮ ಶಾಲೆಯಲ್ಲಿ ಯಕ್ಷಗಾನ ತಾಳಮದ್ದಲೆ ಮತ್ತು ಪ್ರದರ್ಶನಗಳು ಬಹಳ ನಡೆಯುತ್ತಿದ್ದವು. ನಮ್ಮ ಹೆಡ್‌ ಮಾಸ್ತರರು ಭಾಗವತರು.ಸ್ಥಳೀಯ ಕಲಾವಿದರಾಗಿ ಶಿವಶಂಕರ ಶಾಸ್ತ್ರಿ, ವೆಂಕಟರಮಣ ಶಾಸ್ತ್ರಿ, ಗುಂಡ್ಯಡ್ಕ ಮಹಾಬಲ ರೈ , ಬಣ್ಣದ ವೇಷಕ್ಕೆ ಉಗ್ರಾಣಿ ಮಾಧವ ಹೆಚ್ಚಾಗಿ ಇರುತ್ತಿದ್ದರು. ಕೆಲವೊಮ್ಮೆ ಹೊರಗಿನಿಂದಲೂ ಪ್ರಸಿದ್ಧ ಯಕ್ಷಗಾನ ಕಲಾವಿದರು ನಮ್ಮ ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ದೇರಾಜೆ ಸೀತಾರಾಮಯ್ಯ, ಪೆರ್ಲ ಕೃಷ್ಣ ಭಟ್ಟ, ಕುರಿಯ ವಿಠಲ ಶಾಸ್ತ್ರಿ, ಮುಳಿಯ ಮಹಾಬಲ ಭಟ್ಟ, ಮಾಂಬಾಡಿ ನಾರಾಯಣ ಭಾಗವತ, ಪುತ್ತಿಗೆ ರಾಮಕೃಷ್ಣ ಜೋಯಿಸ   ಭಾಗವತರು ಮುಂತಾದವರು- ಇವರನ್ನೆಲ್ಲ ನಾನು ಮೊದಲು ನೋಡಿದ್ದು, ಅವರ ಮಾತುಗಳನ್ನು , ಹಾಡುಗಾರಿಕೆಯನ್ನು ಕೇಳಿದ್ದು ನನ್ನ ಈ ಮೊದಲ ಪಾಠಶಾಲೆಯಲ್ಲಿ.

ಶಾಲೆಯಲ್ಲಿ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರಕಟಿಸಲು ಸಾಕಷ್ಟು ಅವಕಾಶಗಳು ಇದ್ದುವು. ನನ್ನ ಮಾತಿನ ಉದ್ಯೋಗಕ್ಕೆ ನಾಂದಿ ಆದದ್ದು ಇಲ್ಲಿಯೇ. ಮಕ್ಕಳ ಚರ್ಚಾ ಸ್ಪರ್ಧೆ ಅಂತಹ ಒಂದು ಕಾರ್ಯಕ್ರಮ. ಅದರ ವಿಷಯಗಳೂ ವೈವಿಧ್ಯಮಯ- ಹಳ್ಳಿ ಮೇಲೋ  ಪೇಟೆ ಮೇಲೋ, ಚಿನ್ನ ಮೇಲೋ ಕಬ್ಬಿಣ ಮೇಲೋ ಇತ್ಯಾದಿ. ಶಾಲೆಯ ವಾರ್ಷಿಕೋತ್ಸವ ಎಂದರೆ ಅಲ್ಲಿ ಒಂದರಿಂದ ಎಂಟನೆಯ ತರಗತಿಯ ಪ್ರತಿಯೊಬ್ಬರಿಗೂ ಒಂದಲ್ಲ  ಒಂದು ರೀತಿಯ ಪಾತ್ರ ಇರುತ್ತಿತ್ತು. ಅಧ್ಯಾಪಕರಾದ ಮರಿಯಪ್ಪ ಶಾಸ್ತ್ರಿ, ಶಿವಶಂಕರ ಶಾಸ್ತ್ರಿ, ವೆಂಕಟರಮಣ ಶಾಸ್ತ್ರಿಗಳ ಮುಂದಾಳುತನದಲ್ಲಿ ಮಕ್ಕಳಿಂದ ನಾಟಕ, ಏಕಪಾತ್ರಾಭಿನಯ, ಹಾಡು, ಕುಣಿತ, ಕತೆ ಹೇಳುವುದು- ಇಂತಹ ಬಗೆ ಬಗೆಯ ಕಾರ್ಯಕ್ರಮಗಳು ನಡೆಯುತ್ತಿದ್ದುವು. ಅಂತಹ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿದ ನನಗೆ ಅದರ ಪ್ರಯೋಜನ ಮುಂದೆ ಬದುಕಿನ ಅನೇಕ ಸಂದರ್ಭಗಳಲ್ಲಿ ದೊರೆತಿದೆ.

ನಾನು ಎಂಟನೆಯ ತರಗತಿಯಲ್ಲಿ ಭಾಗವಹಿಸಿದ ಒಂದು ನಾಟಕ ಮತ್ತು ಅದರ ಪಾತ್ರ ಈಗಲೂ ನೆನಪಿದೆ. ಅದು ಎಸ್‌. ಆರ್‌. ಚಂದ್ರ ಅವರು ಬರೆದ ಒಗ್ಗರಣೆ ಎಂಬ ವಿನೋದ ಪ್ರಬಂಧಗಳ ಸಂಕಲನದ ಒಂದು ಪ್ರಬಂಧದ ಆಧಾರದಲ್ಲಿ ರೂಪಿತವಾದ, ಸಾಹಿತ್ಯದ ಕುರಿತ ವಿದ್ವಾಂಸರ ಜಗಳದ ಒಂದು ನಾಟಕ ರೂಪ. ಆ ನಾಟಕ ರೂಪವನ್ನು ಸಿದ್ಧಪಡಿಸಿ, ನಮಗೆ ತರಬೇತು ಕೊಟ್ಟವರು ಶಿವಶಂಕರ ಶಾಸ್ತ್ರಿಯವರು. ನನ್ನದು ಅದರಲ್ಲಿ ಸಾಂಪ್ರದಾಯಿಕ ಕವಿಪಂಡಿತರ ಮಗ ನವ್ಯಕವಿಯ ಪಾತ್ರ. ಅದು ಅರೆಬರೆ ಇಂಗ್ಲಿಶ್‌ ಕಲಿತ ಒಬ್ಬ ತರುಣ ಕವಿಯ ವ್ಯಂಗ್ಯ ಪಾತ್ರ. ನಾನು ಸಾಹಿತ್ಯ ರಂಗಕ್ಕೆ ಬರುತ್ತೇನೆ ಎನ್ನುವ ಕಲ್ಪನೆಯೇ ಇಲ್ಲದ ಆ ಕಾಲದಲ್ಲಿ ನಾಟಕರಂಗದಲ್ಲಿ ನಾನು ನಿರ್ವಹಿಸಿದ ಸಾಹಿತಿಯ ಪಾತ್ರ!

ಶಾಲೆಯಲ್ಲಿ ನಾಟಕ, ಯಕ್ಷಗಾನಗಳಂತೆ ಹರಿಕತೆಗಳೂ ನಡೆಯುತ್ತಿದ್ದುವು. ಆ ಕಾಲಕ್ಕೆ ಹರಿದಾಸರಾಗಿ ಪ್ರಸಿದ್ಧಿಗೆ ಬರುತ್ತಿದ್ದ ಶೇಣಿ ಗೋಪಾಲಕೃಷ್ಣ ಭಟ್ಟರ ಹರಿಕತೆಯನ್ನು ನಾನು ಮೊದಲು ಕೇಳಿದ್ದು ಇಲ್ಲಿ ವಿದ್ಯಾರ್ಥಿಯಾಗಿ. ಆಗ ಶೇಣಿಯವರು ಯಕ್ಷಗಾನ ಕ್ಷೇತ್ರಕ್ಕೆ ಪ್ರವೇಶ ಮಾಡಿರಲಿಲ್ಲ. ಮಲ್ಪೆ ಶಂಕರನಾರಾಯಣ ಸಾಮಗರ ಹರಿಕತೆಯನ್ನೂ ಅದೇ ಅವಧಿಯಲ್ಲಿ ಆಲಿಸಿದ್ದು.

ಮಣಿಲದ ಮನೆಗೆ ವಿದ್ಯಾರ್ಥಿಗಳಾದ ನಮ್ಮನ್ನು ಒಂದು ಬಾರಿ ಕರೆದುಕೊಂಡು ಹೋಗಿ, ಅವರ ಅಡಕೆ ತೋಟದ ಕೃಷಿ , ಅದರ ನೀರಾವರಿ ವ್ಯವಸ್ಥೆ  ತೋರಿಸಿ, ನಮಗೆಲ್ಲ ಅವರ ಮನೆಯಲ್ಲಿ ಲೋಟದಲ್ಲಿ ಒಳ್ಳೆಯ ಕಾಫಿ ಕೊಟ್ಟಿದ್ದರು. ಅಲ್ಲಿ  ಕುಡಿದ ಕಾಫಿಯ ಲೋಟಗಳನ್ನು ನಾವು ಮಕ್ಕಳು ಯಾರೂ  ತೊಳೆಯಲಿಲ್ಲ. ನಾವು ಬೆಳಗ್ಗೆ ಮನೆಯಿಂದ ಶಾಲೆಗೆ ಬರುವಾಗ ಮಧ್ಯಾಹ್ನದ ಊಟಕ್ಕೆ ಬುತ್ತಿ ಕಟ್ಟಿಕೊಂಡು ಬರುತ್ತಿ¨ªೆವು. ಅದನ್ನು ಇಡುವುದಕ್ಕೆ  ಒಂದು ಸಣ್ಣ ಕೋಣೆ ಇತ್ತು. ನಮ್ಮ ಬುತ್ತಿಯಲ್ಲಿ ಅನೇಕ ಬಾರಿ ಮೀನಿನ ಪದಾರ್ಥ (ಬಂಗುಡೆ, ಬೂತಾಯಿ) ಇರುತ್ತಿತ್ತು. ಅದನ್ನು ತರುವುದಕ್ಕಾಗಲೀ ಇತರರ ಎದುರು ಉಣ್ಣುವುದಕ್ಕಾಗಲೀ  ಯಾವುದೇ ಕಟ್ಟುಪಾಡು ಇರಲಿಲ್ಲ.

ಪ್ರತಿಯೊಬ್ಬರಿಗೂ ಒಂದು ವ್ಯಕ್ತಿಗತ ಬದುಕು ಇರುತ್ತದೆ, ಒಂದು ಕೌಟುಂಬಿಕ ಜಗತ್ತು ಇರುತ್ತದೆ, ಒಂದು ಸಮುದಾಯದ ನಿಯಮಾವಳಿ ಇರುತ್ತದೆ, ಒಂದು ಸಂಸ್ಕೃತಿಯ ನೆಲೆ ಇರುತ್ತದೆ. ಆದರೆ, ಅದು ಇನ್ನೊಬ್ಬರ ನಂಬಿಕೆ, ಸಂಸ್ಕೃತಿ  ಮತ್ತು ಲೋಕದೃಷ್ಟಿಯನ್ನು ಗೌರವಿಸುವ ಸಹನೆಯ ಪಾಠವನ್ನು ಕಲಿಸಿದಾಗ, ಅದು ಮುಂದಿನ ಬದುಕಿನುದ್ದಕ್ಕೂ ನಮ್ಮನ್ನು ಕಾಪಾಡಿಕೊಂಡು ಬರುತ್ತದೆ. ಅದು ನಿರಂತರ ಹರಿಯುವ ನದಿಯಂತೆ; ಅದರ ನೀರು ಎಂದೂ ಜಡವಾಗುವುದಿಲ್ಲ , ಕೊಳೆಯುವುದಿಲ್ಲ. ಅದು ಶುದ್ಧ ಮತ್ತು ಮುಕ್ತ.

ಪರಿಯಾಲ್ತಡ್ಕ ಹೈಯರ್‌ ಎಲಿಮೆಂಟರಿ ಶಾಲೆ ನನ್ನ ಪಾಲಿಗೆ ಅಂತಹ ಶುದ್ಧ ನೀರು ಹರಿಸಿದ ನನ್ನ ಬದುಕಿನ ಮೊದಲ “ಅಡ್ಕ’.

ಬಿ. ಎ. ವಿವೇಕ ರೈ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.