CONNECT WITH US  

ಇಂಗ್ಲೆಂಡಿನ ಕತೆ: ಜಾಕ್‌ ಮತ್ತು ರಾಕ್ಷಸ

ಒಂದು ಹಳ್ಳಿಯಲ್ಲಿ ಒಬ್ಬ ಬಡ ಕೂಲಿಕಾರನಿದ್ದ. ಅವನು ತನ್ನ ಹೆಂಡತಿ, ಪುಟ್ಟ ಮಗ ಜಾಕ್‌ ಜೊತೆಗೆ ಜೀವನ ಸಾಗಿಸಿಕೊಂಡಿದ್ದ. ಒಂದು ಸಲ ಒಬ್ಬ ರಾಕ್ಷಸನು ಆ ದೇಶದ ರಾಜಕುಮಾರಿಯನ್ನು ಎತ್ತಿಕೊಂಡು ಆಕಾಶ ಮಾರ್ಗದಲ್ಲಿ ಹಾರುತ್ತ ಹೋಗುವುದನ್ನು ಕೂಲಿಕಾರ ನೋಡಿದ. ರಾಕ್ಷಸನೆಡೆಗೆ ಕಲ್ಲುಗಳನ್ನು ಎಸೆದು ರಾಜಕುಮಾರಿಯನ್ನು ಪಾರು ಮಾಡಲು ಯತ್ನಿಸಿದ. ಆಗ ರಾಕ್ಷಸನು ಕೋಪಗೊಂಡು ಕೆಳಗಿಳಿದು ಅವನನ್ನು ಕಾಲಿನಿಂದ ಒದೆದು ಕೊಂದು ಹಾಕಿದ. ಆಮೇಲೆ ರಾಜಕುಮಾರಿಯೊಂದಿಗೆ ಆಕಾಶದ ಮೇಲೇರಿ ಮಾಯವಾದ. ಕೂಲಿಕಾರನು ಸತ್ತ ಮೇಲೆ ಅವನ ಹೆಂಡತಿಯೇ ಕೆಲಸ ಮಾಡಿ ಮಗನನ್ನು ಸಾಕಬೇಕಾಯಿತು. ಅವಳ ಬಳಿ ಒಂದು ಒಳ್ಳೆಯ ಹಸುವಿತ್ತು. ಅದರ ಹಾಲು ಕರೆದು ಮಾರಾಟ ಮಾಡಿ ಜೀವನ ನಡೆಸಿಕೊಂಡಿದ್ದಳು.

    ಒಂದು ದಿನ ಜಾಕ್‌ನ ತಾಯಿ ಕಾಯಿಲೆಯಿಂದ ಹಾಸಿಗೆ ಹಿಡಿದಳು. ಸಂಪಾದನೆಯಿಲ್ಲದ ಕಾರಣ ಉಪವಾಸ ಬೀಳುವ ಪ್ರಸಂಗ ಬಂದಿತು. ಅವಳು ಮಗನನ್ನು ಕರೆದು, "ನಮ್ಮ ದನವನ್ನು ಸಂತೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡು. ಸಿಕ್ಕಿದ ಹಣದಲ್ಲಿ ಊಟಕ್ಕೆ ಬೇಕಾದುದನ್ನು ತೆಗೆದುಕೊಂಡು ಬಾ' ಎಂದು ಹೇಳಿದಳು. ಜಾಕ್‌ ದನದ ಹಗ್ಗ ಹಿಡಿದುಕೊಂಡು ಸಂತೆಗೆ ಹೊರಟ. ಮಾರ್ಗಮಧ್ಯೆ ಒಬ್ಬ ಮೋಸಗಾರ ಅವನನ್ನು ಕರೆದು ಸವಿಸವಿಯಾಗಿ ಮಾತನಾಡಿಸಿದ. ಅವನು ದನ ಮಾರಾಟ ಮಾಡಲು ಸಂತೆಗೆ ಹೋಗುತ್ತಿರುವುದನ್ನು ತಿಳಿದುಕೊಂಡ. "ನಿನ್ನ ದನ ಬಡಕಲಾಗಿದೆ. ಅದಕ್ಕೆ ಸಂತೆಯಲ್ಲಿ ಬಿಡಿಗಾಸೂ ಸಿಕ್ಕುವುದಿಲ್ಲ. ನೀನು ಅದನ್ನು ನನಗೆ ಕೊಡು. ಒಂದು ಸೇರು ಹುರುಳಿ ಕೊಡುತ್ತೇನೆ, ತೆಗೆದುಕೊಂಡು ಹೋಗಿ ಬೇಯಿಸಿ ಹೊಟ್ಟೆತುಂಬ ತಿಂದುಬಿಡು' ಎಂದು ಹೇಳಿದ.

ಜಾಕ್‌ ಮೋಸಗಾರನ ಮಾತನ್ನು ನಂಬಿ ದನವನ್ನು ಕೊಟ್ಟು ಹುರುಳಿಯೊಂದಿಗೆ ಮನೆಗೆ ಬಂದ. ಇದನ್ನು ನೋಡಿ ತಾಯಿಗೆ ತುಂಬ ದುಃಖವಾಯಿತು. "ಚಿನ್ನದಷ್ಟು ಬೆಲೆಬಾಳುವ ದನವನ್ನು ಒಂದು ಸೇರು ಹುರುಳಿಗೆ ದಾನ ಮಾಡಿದೆಯಲ್ಲ? ನಿನ್ನ ಹುರುಳಿಯೂ ಬೇಡ, ಉಪವಾಸವಿರೋಣ' ಎಂದು ಹೇಳಿ ಅದನ್ನೆಲ್ಲ ತಿಪ್ಪೆಗೆ ಎಸೆದು ಮುಸುಕು ಹೊದೆದು ಮಲಗಿಬಿಟ್ಟಳು.

ಮರುದಿನ ಬೆಳಗ್ಗೆದ್ದು ಜಾಕ್‌ ನೋಡಿದಾಗ ಒಂದು ಮರದಷ್ಟು ದಪ್ಪವಿರುವ ಹುರುಳಿಯ ಬಳ್ಳಿ ತಿಪ್ಪೆಯಲ್ಲಿ ಕಾಣಿಸಿತು. ತಲೆಯೆತ್ತಿ ನೋಡಿದರೆ ತುದಿ ಕಾಣಿಸಲಿಲ್ಲ. ಆಕಾಶದೆತ್ತರ ಬೆಳೆದಿತ್ತು. ಎಲ್ಲಿ ವರೆಗೆ ಬೆಳೆದಿದೆಯೋನೋಡುವ ಎಂದು ಅದರಲ್ಲಿ ಹತ್ತಿಕೊಂಡು ಮೇಲೆ ಮೇಲೆ ಹೋದ. ಬಳ್ಳಿಯ ಕೊನೆಯಲ್ಲಿ ಒಂದು ಭಾರೀ ದೊಡ್ಡ ಅರಮನೆ ಇತ್ತು. ಅದರ ಒಳಗೆ ಇಣುಕಿದ. ಅಲ್ಲಿ ಆ ದಿನ ರಾಕ್ಷಸನು ಅಪಹರಿಸಿದ್ದ ರಾಜಕುಮಾರಿ ಇದ್ದಳು. ಅವಳು ಅವನನ್ನು ನೋಡಿ, "ಇಲ್ಲಿಗೆ ಯಾಕೆ ಬಂದೆ? ರಾಕ್ಷಸನು ನೋಡಿದರೆ ತಿಂದುಬಿಡುತ್ತಾನೆ. ಅವನು ಊಟ ಮಾಡಿ ನಿದ್ರಿಸುವ ವರೆಗೂ ಆ ಪೀಪಾಯಿಯೊಳಗೆ ಕುಳಿತಿರು' ಎಂದು ಹೇಳಿದಳು. ಜಾಕ್‌ ಪೀಪಾಯಿಯ ಒಳಗೆ ಕುಳಿತ.

    ರಾಕ್ಷಸನು, "ಮನುಷ್ಯರ ವಾಸನೆ ಬರುತ್ತಿದೆ, ಯಾರೂ ಬಂದಿದ್ದಾರೆ?' ಎಂದು ಗರ್ಜಿಸುತ್ತ ಬಂದ. ರಾಜಕುಮಾರಿ, "ನಿನಗೆಲ್ಲೋ ಭ್ರಮೆ! ಇಲ್ಲಿ ಮನುಷ್ಯರು ಬರಲು ಹೇಗೆ ಸಾಧ್ಯ?' ಎನ್ನುತ್ತ ಬೇಯಿಸಿದ ಕೋಳಿಯನ್ನು ಅವನ ಮುಂದೆ ತಂದಿಟ್ಟಳು. ಅದನ್ನು ಇಡಿಯಾಗಿ ತಿಂದು ತೇಗಿದ ಅವನು ತಾನು ಸಾಕಿದ ಹೇಂಟೆಯನ್ನು ಕರೆದು ಮೈದಡವಿದ. ಆಗ ಹೇಂಟೆ ನಾಲ್ಕು ಮೊಟ್ಟೆಯಿಟ್ಟಿತು. ಅದೆಲ್ಲವೂ ಚಿನ್ನದ ಮೊಟ್ಟೆಗಳು. ಆಮೇಲೆ ರಾಕ್ಷಸ ರಾಜಕುಮಾರಿಯನ್ನು ಒಂದು ತಂಬೂರಿಯ ಒಳಗೆ ಬಚ್ಚಿಟ್ಟು ಮಲಗಿ ನಿದ್ರೆಹೋದ. ಪೀಪಾಯಿಯಿಂದ ಹೊರಗೆ ಬಂದು ಜಾಕ್‌ ಆ ಹೇಂಟೆಯನ್ನೆತ್ತಿಕೊಂಡ. ಹುರುಳಿಯ ಬಳ್ಳಿ ಹಿಡಿದು ಕೆಳಗಿಳಿಯುತ್ತ ಮನೆಗೆ ಬಂದ. ಹೇಂಟೆಯನ್ನು ತಾಯಿಗೆ ತೋರಿಸಿದ. ಮೈ ದಡವಿದಾಗಲೆಲ್ಲ ಚಿನ್ನದ ಮೊಟ್ಟೆಯಿಡುತ್ತಿದ್ದ ಕೋಳಿಯಿಂದಾಗಿ ಅವನ ಬಡತನ ನೀಗಿತು.

    ಕೆಲವು ದಿನ ಕಳೆಯಿತು. ಜಾಕ್‌ ಮತ್ತೆ ರಾಕ್ಷಸನ ಅರಮನೆಗೆ ಹೋದ. ರಾಜಕುಮಾರಿ ಅವನನ್ನು ನೋಡಿ, "ಪುನಃ ಯಾಕೆ ಬಂದೆ? ರಾಕ್ಷಸನು ಈಗ ಬಂದುಬಿಡುತ್ತಾನೆ. ನೀನು ಅವನಿಗೆ ಆಹಾರವಾಗುತ್ತೀ. ಅವನು ಮಲಗಿ ನಿದ್ರೆ ಮಾಡುವ ವರೆಗೆ ಆ ಪೀಪಾಯಿಯಲ್ಲಿ ಬಚ್ಚಿಟ್ಟುಕೋ' ಎಂದಳು. ರಾಕ್ಷಸ ಬಂದ. "ಹೊಸ ಮನುಷ್ಯರು ಯಾರಾದರೂ ಬಂದಿದ್ದಾರೆಯೇ? ವಾಸನೆ ಬರುತ್ತಿದೆ' ಎಂದು ಹೇಳಿದ. "ಹೊಸಬರು ಇಲ್ಲಿಗೆ ಬರಲು ಸಾಧ್ಯವಿದೆಯೆ? ನಿನಗೆ ಸುಮ್ಮನೆ ಭಾತಿ' ಎಂದು ರಾಜಕುಮಾರಿ ಬೇಯಿಸಿದ ಕುರಿಯನ್ನು ತಂದು ಅವನ ಮುಂದಿಟ್ಟಳು. ರಾಕ್ಷಸ ಕುರಿಯನ್ನು ತಿಂದು ಒಂದು ಚೀಲಕ್ಕೆ ಕೈಯೊರೆಸಿದ. ಆಗ ಚೀಲದೊಳಗಿಂದ ಬಂಗಾರದ ನಾಣ್ಯಗಳು ದೊಬದೊಬನೆ ಕೆಳಗೆ ಬಿದ್ದುವು. ರಾಜಕುಮಾರಿಯನ್ನು ತಂಬೂರಿಯಲ್ಲಿ ಬಚ್ಚಿಟ್ಟ. ರಾಕ್ಷಸ ನಿದ್ರಿಸಿದ ಬಳಿಕ ಜಾಕ್‌ ಪೀಪಾಯಿಯಿಂದ ಹೊರಗೆ ಬಂದು ನಾಣ್ಯಗಳ ಚೀಲವನ್ನು ಎತ್ತಿಕೊಂಡ. ಬಳ್ಳಿಯನ್ನು ಹಿಡಿದು ಕೆಳಗಿಳಿದು ಮನೆಗೆ ಬಂದ. ತಾಯಿಗೆ ಚೀಲವನ್ನು ನೀಡಿದ.

    ಕೆಲವು ದಿನಗಳು ಕಳೆದ ಮೇಲೆ ಮರಳಿ ಜಾಕ್‌ ರಾಕ್ಷಸನ ಅರಮನೆಗೆ ಹೋಗಲು ಸಿದ್ಧನಾದ. ಆಗ ತಾಯಿ, "ನಮ್ಮ ಬಡತನ ಕಳೆಯುವಷ್ಟು ಅನುಕೂಲ ಆಗಿದೆ. ಮತ್ತೆ ದುಷ್ಟನಾದ ರಾಕ್ಷಸನ ಸನಿಹ ಯಾಕೆ ಹೋಗುವೆ? ಸುಮ್ಮನಿರು' ಎಂದು ಹೇಳಿದಳು. ಜಾಕ್‌, "ಅಮ್ಮ, ಕೆಟ್ಟವನಾದ ಅವನು ಈ ದೇಶದ ರಾಜಕುಮಾರಿಯನ್ನು ತೆಗೆದುಕೊಂಡು ಹೋಗಿ ಅಲ್ಲಿರಿಸಿದ್ದಾನೆ. ಅವಳು ಅವನಿಗೆ ಅಡುಗೆ ಮಾಡಿ ಹಾಕಿ ಕಷ್ಟಪಡುತ್ತಿದ್ದಾಳೆ. ಅವಳನ್ನು ಪಾರು ಮಾಡಬೇಕು. ಅಲ್ಲದೆ ನನ್ನ ಅಪ್ಪನನ್ನು ಕೊಂದವನು ಅವನೇ. ಅವನಿಗೆ ತಕ್ಕ ಶಾಸ್ತಿಯಾಗಬೇಕು. ನೀನು ಹೆದರಬೇಡ, ನಾನು ಬಂದುದನ್ನು ಎದುರಿಸುತ್ತೇನೆ' ಎಂದು ತಾಯಿಗೆ ಧೈರ್ಯ ಹೇಳಿದ. ಹುರುಳಿಯ ಬಳ್ಳಿ ಹಿಡಿದುಕೊಂಡು ಮೇಲೇರಿ ರಾಕ್ಷಸನ ಅರಮನೆಗೆ ತಲುಪಿದ.

    ರಾಜಕುಮಾರಿ, "ನೋಡು, ನೀನು ಎರಡು ಸಲ ರಾಕ್ಷಸನ ಸೊತ್ತುಗಳನ್ನು ಕದ್ದುಕೊಂಡು ಹೋಗಿರುವುದಕ್ಕೆ ಅವನು ಸಿಟ್ಟಾಗಿದ್ದಾನೆ. ನಿನ್ನನ್ನು ಕಂಡರೆ ಕೊಂದು ಹಾಕುತ್ತಾನೆ. ಅವನು ನಿದ್ರೆ ಹೋಗುವ ವರೆಗೆ ಪೀಪಾಯಿಯಲ್ಲಿ ಅಡಗಿಕೋ. ಮತ್ತೆ ಎಂದಿಗೂ ಇಲ್ಲಿಗೆ ಬರಬೇಡ' ಎಂದು ಹೇಳಿದಳು. ಸ್ವಲ್ಪ$ಹೊತ್ತಿನಲ್ಲಿ ರಾಕ್ಷಸ ಬಂದ. "ಮನುಷ್ಯರ ವಾಸನೆ ಬರುತ್ತಿದೆ, ಯಾರಾದರೂ ಬಂದಿದ್ದಾರೆಯೇ?' ಎಂದು ಕೇಳಿದ. "ಇಲ್ಲ' ಎಂದು ಹೇಳಿ ರಾಜಕುಮಾರಿ ಊಟ ತಂದು ಮುಂದಿಟ್ಟಳು. ಅವನು ಊಟ ಮಾಡಿದ. ರಾಜಕುಮಾರಿಯನ್ನು ಎಂದಿನಂತೆ ಬಚ್ಚಿಟ್ಟು ಮಲಗಿಕೊಂಡ. ಜಾಕ್‌ ಪೀಪಾಯಿಯಿಂದ ಹೊರಗೆ ಬಂದ. ರಾಜಕುಮಾರಿ ಅಡಗಿದ್ದ ತಂಬೂರಿಯನ್ನು ಹೆಗಲಿನಲ್ಲಿ ಹೊತ್ತುಕೊಂಡು ಹುರುಳಿಯ ಬಳ್ಳಿಯಲ್ಲಿ ಕೆಳಗಿಳಿಯತೊಡಗಿದ.

    ಅಷ್ಟರಲ್ಲಿ ರಾಕ್ಷಸನಿಗೆ ಎಚ್ಚರವಾಯಿತು. ರಾಜಕುಮಾರಿ ಮಾಯವಾಗಿರುವುದು ತಿಳಿಯಿತು. ಹೊರಗೆ ಬರುವಾಗ ತಂಬೂರಿಯೊಂದಿಗೆ ಇಳಿಯುತ್ತಿರುವ ಜಾಕ್‌ ಕಣ್ಣಿಗೆ ಬಿದ್ದ. ರಾಕ್ಷಸನೂ ಕೋಪಾವೇಶದಿಂದ ಹುರುಳಿಯ ಬಳ್ಳಿಯಲ್ಲಿ ಕೆಳಗಿಳಿಯತೊಡಗಿದ. ಜಾಕ್‌ ನೆಲ ತಲುಪುವ ಮೊದಲೇ ತಾಯಿಯನ್ನು ಕೂಗಿ, "ಅಮ್ಮಾ, ಕೂಡಲೇ ಮರ ಕಡಿಯುವ ಕೊಡಲಿ ತೆಗೆದುಕೊಂಡು ಬಾ' ಎಂದು ಹೇಳಿದ. ತಾಯಿ ಕೊಡಲಿ ತಂದಳು. ಅದರಿಂದ ಹುರುಳಿಯ ಬಳ್ಳಿಯನ್ನು ಬುಡದಿಂದಲೇ ಕತ್ತರಿಸಿ ಹಾಕಿದ. ಬಳ್ಳಿಯೊಂದಿಗೇ ರಾಕ್ಷಸನು ನೆಲಕ್ಕೆ ಬಿದ್ದು ತಲೆಯೊಡೆದುಕೊಂಡು ಸತ್ತುಹೋದ.

ಜಾಕ್‌ ತಂಬೂರಿಯೊಳಗಿದ್ದ ರಾಜಕುಮಾರಿಯನ್ನು ಹೊರಗೆ ತಂದ. ರಾಜನ ಬಳಿಗೆ ಕರೆದುಕೊಂಡು ಹೋಗಿ ಒಪ್ಪಿಸಿದ. ರಾಜನಿಗೆ ಹರ್ಷವುಂಟಾಯಿತು. "ಸತ್ತುಹೋದಳೆಂದು ಭಾವಿಸಿದ್ದ ನನ್ನ ಮಗಳನ್ನು ರಕ್ಷಿಸಿ ಕರೆತಂದ ನೀನು ಅವಳ ಕೈಹಿಡಿಯಬೇಕು' ಎಂದು ಹೇಳಿ ಮಗಳನ್ನು ಅವನಿಗೆ ಕೊಟ್ಟು ಮದುವೆ ಮಾಡಿದ. ಜಾಕ್‌ ತಾಯಿಯೊಂದಿಗೆ ಅರಮನೆಗೆ ಬಂದು ಸುಖವಾಗಿದ್ದ.

ಪ. ರಾಮಕೃಷ್ಣ ಶಾಸ್ತ್ರಿ


Trending videos

Back to Top