CONNECT WITH US  

ಯಾರು ನನಗೆ ಹಿತವರು!

ಇತ್ತೀಚೆಗೆ ಸೈಮಾ ಕಿರುಚಿತ್ರೋತ್ಸವ ನಡೆಯಿತು. ಈ ಕಿರುಚಿತ್ರೋತ್ಸವಕ್ಕೆ ಕನ್ನಡದಿಂದ ಖಾಜಿ ಚಿತ್ರವೂ ಹೋಗಿತ್ತು. ಖಾಜಿ, ಈ ಚಿತ್ರದಲ್ಲಿನ ನಟನೆಗೆ ಹಿತಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಈ ಚಿತ್ರವನ್ನು ಸತೀಶ್‌ ನೀನಾಸಂ ನಿರ್ಮಿಸಿದರೆ, ಐಶಾನಿ ಶೆಟ್ಟಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಸ್ಕೂಲ್‌ ಹುಡುಗನ ತಾಯಿಯ ಪಾತ್ರ. ನಟಿಯರೆಲ್ಲ ಚಿಕ್ಕವಯಸ್ಸಿನಲ್ಲಿ ಗ್ಲಾಮರ್‌ ಇಲ್ಲದ, ತಾಯಿ ಪಾತ್ರವನ್ನು ಮಾಡುವುದಕ್ಕೆ ಹಿಂದೇಟು ಹಾಕುವಾಗ, ಹಿತಾ ಧೈರ್ಯ ಮಾಡಿ, ಅಂಥಾದ್ದೊಂದು ಪಾತ್ರವನ್ನು ಒಪ್ಪಿದ್ದಕ್ಕೆ ಮೆಚ್ಚಬೇಕು.

"ಈ ತರಹದ ಪಾತ್ರಗಳು ಕಲಾವಿದರಿಗೆ ದೊಡ್ಡ ಸವಾಲು. ಅಷ್ಟೇ ಅಲ್ಲ, ಈ ತರಹದ ಅವಕಾಶಗಳು ಮೇನ್‌ಸ್ಟ್ರೀಮ್‌ ಸಿನೆಮಾದಲ್ಲಿ ಸಿಗುವುದು ಕಡಿಮೆ. ಸಿಕ್ಕರೂ ಒಂದು ಪಾತ್ರ ಗೆದ್ದುಬಿಟ್ಟರೆ, ಮುಂದೆ ಅದೇ ತರಹದ ಪಾತ್ರಗಳಿಗೆ ಬ್ರಾಂಡ್‌ ಮಾಡಿಬಿಡಲಾಗುತ್ತದೆ. ಆದರೆ, ಕಿರುಚಿತ್ರಗಳಲ್ಲಿ ಹಾಗಿಲ್ಲ. ಹಾಗಾಗಿ ಒಪ್ಪಿಕೊಂಡೆ' ಎನ್ನುತ್ತಾರೆ ಹಿತಾ.

ಹಿರಿಯ ನಟ-ನಿರ್ದೇಶಕ ಸಿಹಿಕಹಿ ಚಂದ್ರು ಮತ್ತು ಸಿಹಿಕಹಿ ಗೀತಾ ಅವರ ಮಗಳಾದ ಹಿತಾ ಕನ್ನಡ ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷಗಳಾಗಿವೆ. ನಾಲ್ಕೈದು ಚಿತ್ರಗಳಲ್ಲೂ ನಟಿಸಿದ್ದಾರೆ. ಬಹುಶಃ 1/4 ಕೆಜಿ ಪ್ರೀತಿ ಎಂಬ ಚಿತ್ರ ಬಿಟ್ಟರೆ, ಹಿತಾ ಮಾಡಿದ್ದೆಲ್ಲವೂ ಗಂಭೀರವಾದ ಮತ್ತು ವಯಸ್ಸಿಗೆ ಮೀರಿದ ಪಾತ್ರಗಳೇ. ದುನಿಯಾ 2, ಕೆಂಪ ಮ್ಮನ ಕೋರ್ಟ್‌ ಕೇಸ್‌, ಕಾಜಿ, ಒಂಥರಾ ಬಣ್ಣಗಳು... ಹೀಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಒಂದಕ್ಕಿಂತ ಒಂದು ವಿಭಿನ್ನವಾದ ಮತ್ತು ವಯಸ್ಸಿಗೆ ಮೀರಿದ ಪಾತ್ರಗಳನ್ನು ಅವರು ನಿರ್ವಹಿಸಿಕೊಂಡೇ ಬರುತ್ತಿದ್ದಾರೆ.

"ನಾನು ಬಹಳ ಲಕ್ಕಿ ಎನ್ನಬಹುದು. ನೋಡಿದವರೆಲ್ಲಾ ನೀನು ತುಂಬಾ ಚಿಕ್ಕವಳ ತರಹ ಕಾಣಿ¤àಯ-ಅಂತ ಹೇಳುತ್ತಾರೆ. ಆದರೂ ನನಗೆ ವಿಭಿನ್ನವಾದ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ನನಗೆ ಮೊದಲಿನಿಂದಲೂ ಇಂಟೆನ್ಸ್‌ ಆದ ಪಾತ್ರಗಳು ಬಹಳ ಇಷ್ಟ. ಬಂದ ಅವಕಾಶಗಳಲ್ಲಿ ಅಂತಹ ಪಾತ್ರಗಳನ್ನೇ ನಾನು ಆಯ್ಕೆ ಮಾಡಿಕೊಳ್ಳುತ್ತಿದ್ದೀನಿ. ಇದುವರೆಗೆ ಮಾಡಿದ ಪಾತ್ರಗಳು ಹಾಗೇ ಇದ್ದವು. ಈಗ ಒಪ್ಪಿಕೊಂಡಿರುವ ತುರ್ತು ನಿರ್ಗಮನ ಮತ್ತು ಪ್ರೀಮಿಯರ್‌ ಪದ್ಮಿನಿ ಚಿತ್ರಗಳಲ್ಲೂ ಬಹಳ ಇಂಟೆನ್ಸ್‌ ಆದ ಪಾತ್ರಗಳಿವೆ' ಎನ್ನುತ್ತಾರೆ ಹಿತಾ.

"ತುಂಬಾ ಅವಕಾಶಗಳು ಬರುತ್ತಿವೆ. ಅದರಲ್ಲೂ ಹೊಸಬರೇ ಜಾಸ್ತಿ. ಕೆಲವು ಇಷ್ಟ ಆಗುತ್ತವೆ, ಕೆಲವು ಚಾಲೆಂಜಿಂಗ್‌ ಆಗಿರುತ್ತವೆ. ಯಾವುದೇ ಅವಕಾಶ ಬಂದರೂ ಮೊದಲು ಅಪ್ಪ-ಅಮ್ಮನ ಜೊತೆಗೆ ಚರ್ಚೆ ಮಾಡುತ್ತೇನೆ. ಹಾಗಂತ ಅದೇ ಅಂತಿಮವಲ್ಲ. ಅವರು ತಮ್ಮ ಅಭಿಪ್ರಾಯ ಹೇಳುತ್ತಾರೆ ಅಷ್ಟೇ. ಮಿಕ್ಕಿದ್ದೆಲ್ಲವನ್ನೂ ನನಗೇ ಬಿಡುತ್ತಾರೆ. ಕೊನೆಗೆ ನಾನೇ ನಿರ್ಧಾರ ತೆಗೆದುಕೊಳ್ಳುತ್ತೇನೆ. ಹೀಗೆ ಅಪ್ಪ-ಅಮ್ಮನ ಆಭಿಪ್ರಾಯ ತೆಗೆದುಕೊಳ್ಳುವುದರಿಂದ, ಬೇರೆ ಬೇರೆ ಆಯಾಮಗಳು ಸಿಗುತ್ತವೆ. ಹಾಗಾಗಿ, ಮಿಸ್‌ ಮಾಡದೆಯೇ ಅಪ್ಪ-ಅಮ್ಮನ ಅಭಿಪ್ರಾಯ ಪಡೆಯುತ್ತೇನೆ' ಎನ್ನುತ್ತಾರೆ ಹಿತಾ.


Trending videos

Back to Top