CONNECT WITH US  

ಆಫ್ರಿಕದ ಕತೆ: ಜಾಣ ಆಡು

ಒಂದು ಹುಲ್ಲುಗಾವಲಿನಲ್ಲಿ ಹೆಣ್ಣು ಆಡು ತನ್ನ ಮುದ್ದಾದ ಮರಿಯೊಡನೆ ವಾಸವಾಗಿತ್ತು. ಹೊಟ್ಟೆ ತುಂಬುವಷ್ಟು ಹಸುರು ಹುಲ್ಲು, ಕುಡಿಯಲು ಬೇಕಾದಷ್ಟು ತೊರೆಯ ನೀರು ಇದ್ದುದರಿಂದ ಅವು ಸುಖವಾಗಿ, ನೆಮ್ಮದಿಯಿಂದ ಜೀವನ ಕಳೆಯುತ್ತಿದ್ದವು. ಆದರೂ ಒಂದು ಸಲ ಮಳೆಗಾಲ ಸಮಯಕ್ಕೆ ಸರಿಯಾಗಿ ಬರಲಿಲ್ಲ. ಹುಲ್ಲು ಒಣಗಿ ಹೋಯಿತು. ನೀರಿನ ತೊರೆ ಬತ್ತಿತ್ತು. ಆಡುಗಳಿಗೆ ಜೀವನ ಸಾಗಿಸುವುದು ಹೇಗೆ ಎನ್ನುವುದೇ ಪ್ರಶ್ನೆಯಾಯಿತು. ಆಗ ಮರಿ ಆಡು ತಾಯಿಯ ಬಳಿ, ""ಅಮ್ಮ, ನಿನಗೆ ವಯಸ್ಸಾಯಿತು. ನೀನು ಹೊಟ್ಟೆಗೆ ಆಹಾರ ಸಿಗದಿದ್ದರೂ ಹೇಗೋ ಸಹಿಸಿಕೊಂಡು ಉಪವಾಸವಿರಬಲ್ಲೆ. ನೀರು ಕುಡಿಯದೆ ಕೆಲವು ಸಮಯ ಕಾಲ ಕಳೆಯಲು ನಿನಗೆ ಸಾಧ್ಯವಿರಬಹುದು. ಆದರೆ ನಾನು ಹಾಗಲ್ಲ. ಸುಖ ಬಿಟ್ಟರೆ ಕಷ್ಟ ಹೇಗೆಂಬುದೇ ತಿಳಿಯದವನು. ಒಂದು ಹೊತ್ತು ಊಟ ಬಿಟ್ಟರೂ ನನ್ನ ಜೀವ ಹಾರಿ ಹೋಗುವಂತಾಗುತ್ತದೆ'' ಎಂದು ಖನ್ನತೆಯಿಂದ ಹೇಳಿತು.

    ತಾಯಿ ಆಡು, ""ನಿಜ ನಿನ್ನ ಮಾತು. ನೀನು ಹಾಲುಗಲ್ಲದ ಹಸುಳೆ. ಹಸಿವನ್ನು, ಬಾಯಾರಿಕೆಯನ್ನು ತಡೆದುಕೊಳ್ಳುವ ಶಕ್ತಿ ನಿನಗಿಲ್ಲ. ಆದರೆ ದೇವರು ಮಳೆ ಕೊಡದೆ ಈ ದುರವಸ್ಥೆ ಉಂಟು ಮಾಡಿರಬೇಕಾದರೆ ನಾವು ಏನು ಮಾಡಬಲ್ಲೆವು?'' ಎಂದು ಕೇಳಿತು. ಮರಿಯು, ""ಅಮ್ಮ, ನನಗೆ ನನ್ನ ಗೆಳತಿ ಕಾಗಕ್ಕ ಸಿಕ್ಕಿದ್ದಾಳೆ. ಅವಳು ಪಕ್ಕದ ಊರಿಗೆ ಹೋಗಿ ಬಂದಳಂತೆ. ಅಲ್ಲಿ ನನ್ನ ಅಜ್ಜಿ ಇದ್ದಾಳಲ್ಲವೆ? ಆ ಊರಿನಲ್ಲಿ ಮಳೆ ಬಂದಿದೆಯಂತೆ. ತಿನ್ನಲು ಬೇಕಾದಷ್ಟು ಆಹಾರ, ಕುಡಿಯಲು ನೀರಿನ ಸೌಲಭ್ಯ ಇದೆಯಂತೆ. ನಾನು ಅಜ್ಜಿ ಮನೆಗೆ ಹೋಗುತ್ತೇನೆ. ಕೆಲವು ದಿನ ಅಲ್ಲಿಯೇ ಇದ್ದು ಅಜ್ಜಿ ಪ್ರೀತಿಯಿಂದ ಮಾಡಿಕೊಡುವ ಪಕ್ವಾನ್ನಗಳನ್ನು ತಿಂದು ಗಟ್ಟಿಯಾಗುತ್ತೇನೆ. ಮಳೆ ಬಂದ ಮೇಲೆ ಇಲ್ಲಿಗೆ ಮರಳುತ್ತೇನೆ. ಬರುವಾಗ ನಿನಗೂ ತಿಂಡಿಗಳನ್ನು ತರುತ್ತೇನೆ, ಆಗಬಹುದೆ?'' ಎಂದು ಮರಿ ತನ್ನ ನಿರ್ಧಾರವನ್ನು ಹೇಳಿತು.

ಮರಿಯ ಮಾತು ಕೇಳಿ ಗಾಬರಿಯಾದ ತಾಯಿ, ""ಏನಿದು, ಹುಡುಗಾಟದ ಮಾತು? ಅಜ್ಜಿ ಮನೆಗೆ ಹೋಗಲು ತುಂಬ ದೂರ ಇದೆ. ದಾರಿಯಲ್ಲಿ ದುಷ್ಟ ತೋಳಗಳಿವೆ. ಅವು ಕಂಡರೆ ನಿನ್ನನ್ನು ತಿನ್ನದೆ ಬಿಡುವುದಿಲ್ಲ. ನೀನು ಹೋಗಬೇಡ'' ಎಂದು ಬುದ್ಧಿ ಹೇಳಿತು. ಆದರೆ ಮರಿ ತಾಯಿಯ ಮಾತು ಕೇಳಲಿಲ್ಲ. ""ತೋಳಗಳಿಗೆ ತಿನ್ನಲು ನನ್ನ ಮೈಯಲ್ಲಿ ಎಲುಬು, ಚರ್ಮ ಬಿಟ್ಟರೆ ಇನ್ನೇನಿಲ್ಲ. ನಿನ್ನ ಹಾಲು ಕುಡಿದು ಗಳಿಸಿದ ಜಾಣತನ ನನ್ನ ಬಳಿ ಇದೆ. ಅಪಾಯವನ್ನು ಎದುರಿಸಿ ಗೆದ್ದು ನಿನ್ನ ಬಳಿಗೆ ಮರಳುತ್ತೇನೆ'' ಎಂದು ತಾಯಿಗೆ ಭರವಸೆ ನೀಡಿತು. ಅಜ್ಜಿ ಮನೆಗೆ ಹೋಯಿತು. ಅಜ್ಜಿ ಪ್ರೀತಿಯಿಂದ ಮಾಡಿಕೊಟ್ಟ ಭಕ್ಷ್ಯಗಳನ್ನು ತಿಂದು ಪುಷ್ಟಿಯಾಗಿ ಬೆಳೆಯಿತು. ಒಂದು ದಿನ ತಾಯಿಯ ಬಳಿಗೆ ಹೊರಟು ನಿಂತಿತು.

    ಅಜ್ಜಿಯು, ""ಈಗ ದುಂಡಗೆ ಬೆಳೆದಿರುವ ನಿನಗೆ ದಾರಿಯುದ್ದಕ್ಕೂ ಹಗೆಗಳಿರಬಹುದು. ನಾನು ನಿನಗೆ ಒಂದು ಕೊಳಲನ್ನು ಕೊಡುತ್ತೇನೆ. ಆಪತ್ಕಾಲದಲ್ಲಿ ಇದನ್ನು ನುಡಿಸಿದರೆ ನಿನಗೆ ಸಹಾಯವಾಗುತ್ತದೆ'' ಎಂದು ಹೇಳಿ ಕೊಳಲನ್ನು ಮರಿಯ ಕೊರಳಿಗೆ ಕಟ್ಟಿತು. ಮರಿ ಮನೆಯ ದಾರಿ ಹಿಡಿಯಿತು. ಆಗ ಎದುರಿನಿಂದ ದೈತ್ಯ ತೋಳ ಬಂದೇ ಬಂದಿತು. ಪಾರಾಗಲು ಮರಿಗೆ ದಾರಿ ಇರಲಿಲ್ಲ. ಧೈರ್ಯದಿಂದ ನಿಂತುಕೊಂಡಿತು. ಮರಿಯನ್ನು ಕಾಣುತ್ತಲೇ ತೋಳದ ಬಾಯಲ್ಲಿ ನೀರೂರಿತು. ""ನನಗಿಂದು ಒಳ್ಳೆಯ ಊಟ ಸಿಕ್ಕಿತು'' ಎನ್ನುತ್ತ ಮರಿಯನ್ನು ಬಂದು ಹಿಡಿದುಕೊಂಡಿತು. ""ಅಣ್ಣ, ನನ್ನನ್ನು ಬಿಟ್ಟುಬಿಡು. ನನಗಾಗಿ ದಾರಿ ಕಾಯುತ್ತಿರುವ ಅಮ್ಮನಿದ್ದಾಳೆ. ಅವಳನ್ನು ನೋಡಲು ಹೋಗುತ್ತಿದ್ದೇನೆ'' ಎಂದು ಮರಿ ಬೇಡಿಕೊಂಡಿತು.

"    "ನಿನ್ನನ್ನು ಬಿಡುವುದೆ? ನಾಲ್ಕು ವರ್ಷದ ಹಿಂದೆ ಕಾಡಿನಲ್ಲಿ ಒಂದು ಉತ್ಸವ ನಡೆಯಿತು. ಆಗ ಎಲ್ಲ ಮೃಗಗಳೂ ನನ್ನನ್ನು ಪಲ್ಲಕಿಯಲ್ಲಿ ಹೊತ್ತುಕೊಂಡು ಮೆರವಣಿಗೆ ಹೊರಟಿದ್ದವು. ಅವುಗಳು ಜೈಕಾರ ಕೂಗುತ್ತಿರುವಾಗ ನೀನು ಪೊಗರಿನಿಂದ ಧಿಕ್ಕಾರ ಕೂಗಿ ಅವಮಾನಿಸಿದೆಯಲ್ಲ? ಆಗಿನಿಂದ ನಿನ್ನ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಕಾದು ಕುಳಿತಿದ್ದೇನೆ. ಬಾ, ನನ್ನ ಗವಿಗೆ ನಿನ್ನನ್ನು ತೆಗೆದುಕೊಂಡು ಹೋಗಿ ಔತಣ ಮಾಡುತ್ತೇನೆ'' ಎಂದು ಕೋಪದಿಂದ ಹೇಳಿತು ತೋಳ.

    ಮರಿ ಆಶ್ಚರ್ಯದಿಂದ, ""ಏನಣ್ಣ, ನಿನ್ನ ಮಾತು? ನನಗಿನ್ನೂ ವರ್ಷ ತುಂಬಿಲ್ಲ. ನಾಲ್ಕು ವರ್ಷದ ಹಿಂದೆ ನಿನಗೆ ನಾನು ಧಿಕ್ಕಾರ ಕೂಗಿರಲು ಹೇಗೆ ಸಾಧ್ಯ? ನಾನೇನೂ ಅಪರಾಧ ಎಸಗಿಲ್ಲ. ನನ್ನನ್ನು ಬಿಡು'' ಎಂದು ಗೋಗರೆಯಿತು. ತೋಳ ಅದರ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ""ನೀನಲ್ಲದಿದ್ದರೆ ನಿನ್ನ ಅಮ್ಮನೋ ಅಜ್ಜಿಯೋ ನನಗೆ ಅವಮಾನಿಸಿರಬಹುದು. ಅದರ ಹಗೆಯನ್ನು  ನಿನ್ನ ಮೇಲೆ ತೀರಿಸಿಕೊಳ್ಳುವುದು ಸರಿಯಾಗಿಯೇ ಇದೆ'' ಎಂದು ಹೇಳಿ ಅದನ್ನು ಗವಿಗೆ ಎಳೆದುಕೊಂಡು ಬಂದಿತು. ಹೆಂಡತಿಯನ್ನು ಕರೆದು ಮರಿಯನ್ನು ತೋರಿಸಿತು. ಹೆಣ್ಣು ತೋಳವೂ ಖುಷಿಪಟ್ಟಿತು. ""ಬಹು ದಿನಗಳ ಬಳಿಕ ಆಡಿನ ಮಾಂಸ ಸವಿಯಲು ಅವಕಾಶ ಸಿಕ್ಕಿದೆ. ಇದನ್ನು ಏನು ಮಾಡಬೇಕು?'' ಎಂದು ಕೇಳಿತು. ""ಒಲೆಯ ಮೇಲೆ ದೊಡ್ಡ ಕಡಾಯಿಯನ್ನಿರಿಸು. ಮರಿಯನ್ನು ಇಡಿಯಾಗಿ ಎಣ್ಣೆಯಲ್ಲಿ ಕರಿದು ಭೋಜನಕ್ಕೆ ಸಿದ್ಧಪಡಿಸು'' ಎಂದು ಹೇಳಿತು ತೋಳ.

    ತಾನಿನ್ನು ಬದುಕುವುದಿಲ್ಲವೆಂದು ಮರಿಗೆ ಖಚಿತವಾಯಿತು. ತಾಯಿಯ ಬುದ್ಧಿಮಾತು ಮೀರಿ ಬಂದುದಕ್ಕೆ ಅದಕ್ಕೆ ಪಶ್ಚಾತ್ತಾಪವಾಯಿತು. ಆಗ ಅಜ್ಜಿ ಕೊಟ್ಟಿರುವ ಕೊಳಲು ಕುತ್ತಿಗೆಯಲ್ಲಿ ನೇತಾಡುತ್ತಿರುವುದು ಕಾಣಿಸಿತು. ಆದರೆ ಕೊಳಲನ್ನು ಊದಲು ಅದಕ್ಕೆ ಶಕ್ತಿಯಿರಲಿಲ್ಲ. ಆದರೂ ಕಡೆಯದಾಗಿ ಒಂದು ಬುದ್ಧಿವಂತಿಕೆ ಉಪಯೋಗಿಸಲು ನಿರ್ಧರಿಸಿತು. ""ಅಣ್ಣ, ನೀನು ದೊಡ್ಡವ. ನಿನಗೆ ನಾನು ಆಹಾರವಾಗುವುದು ನಿಜವಾಗಿಯೂ ಪುಣ್ಯದ ಕೆಲಸವೇ ಅಂದುಕೊಳ್ಳುತ್ತೇನೆ. ಆದರೆ ಸಾಯುವ ಮೊದಲು ನನಗೊಂದು ಆಶೆಯಿದೆ. ಕಟ್ಟಕಡೆಯ ಈ ಬಯಕೆಯನ್ನು ಹಿರಿಯನಾದ ನೀನು ನೆರವೇರಿಸಿ ಕೊಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ'' ಎಂದು ಬೇಡಿತು.

    ತೋಳ ಮೀಸೆ ತಿರುವಿತು. ""ನಾನು ದೊಡ್ಡವ, ಅನುಮಾನವೇ ಇಲ್ಲ. ನಿನ್ನ ಅಂತಿಮ ಆಶೆಯನ್ನು ನೆರವೇರಿಸಬೇಕಾದದ್ದು ನನ್ನ ಕರ್ತವ್ಯ. ಜೀವದಾನದ ಹೊರತು ಬೇರೆ ಏನು ಬೇಕಿದ್ದರೂ ಕೇಳು, ನಡೆಸಿಕೊಡುತ್ತೇನೆ'' ಎಂದು ಎದೆಯುಬ್ಬಿಸಿತು. ಮರಿ ತನ್ನ ಕತ್ತಿನಲ್ಲಿರುವ ಕೊಳಲನ್ನು ತೆಗೆದು ತೋಳದ ಮುಂದಿರಿಸಿತು. ""ಇದು ನನಗೆ ತುಂಬ ಪ್ರೀತಿಯ ಕೊಳಲು. ನೀನು ಕೂಡ ಸಂಗೀತದ ಅಭಿಮಾನಿ, ವಾದ್ಯಗಳನ್ನು ನುಡಿಸುವುದರಲ್ಲಿ ನಿಪುಣ ಅಂದುಕೊಂಡಿದ್ದೇನೆ. ಸಾಯುವ ಮೊದಲು ಇದನ್ನು ನೀನು ನುಡಿಸುವ ಸುಶ್ರಾವ್ಯವಾದ ದನಿಯನ್ನು ಕೇಳಬೇಕು, ಅದರ ನಾದಕ್ಕೆ ತಕ್ಕಂತೆ ನೃತ್ಯ ಮಾಡಬೇಕೆಂಬ ಏಕೈಕ ಬಯಕೆ ನನಗಿದೆ. ಇಲ್ಲವೆನ್ನದೆ ಈಡೇರಿಸಿ ಕೊಡು'' ಎಂದು ಕೇಳಿಕೊಂಡಿತು.

    ""ಅಷ್ಟೇ ತಾನೆ? ನೋಡು ನನ್ನ ಪಾಂಡಿತ್ಯವನ್ನು'' ಎಂದು ತೋಳ ಕೊಳಲನ್ನು ತುಟಿಯ ಮೇಲಿರಿಸಿ ತನ್ಮಯವಾಗಿ ನುಡಿಸತೊಡಗಿತು. ಕೊಳಲಿನ ನಾದ ಕಿವಿಗೆ ಬಿದ್ದ ಕೂಡಲೇ ಎರಡು ದೈತ್ಯ ಗಾತ್ರದ ಬೇಟೆ ನಾಯಿಗಳು ಶರವೇಗದಿಂದ ಬಂದು ತೋಳದ ಗವಿಯನ್ನು ಹೊಕ್ಕವು. ಎರಡೂ ತೋಳಗಳ ಮೇಲೆರಗಿ ಕಚ್ಚಿ ಕೊಂದು ಹಾಕಿ ಹೊರಗೆ ನಡೆದವು. ಜೀವ ಉಳಿಯಿತೆಂದು ಸಂತೋಷದಿಂದ ಮರಿ ಕೊಳಲನ್ನು ಎತ್ತಿಕೊಂಡು ಹೊರಗೆ ಬಂದಿತು. ಕ್ಷೇಮವಾಗಿ ತಾಯಿಯ ಬಳಿಗೆ ಹೋಗಿ ನಡೆದ ಕತೆಯನ್ನು ಹೇಳಿತು. ""ಅಮ್ಮ, ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ'' ಎಂದು ಅದನ್ನು ತಬ್ಬಿಕೊಂಡಿತು. ಮರಿ ಕ್ಷೇಮವಾಗಿ ಮರಳಿದುದಕ್ಕೆ ತಾಯಿಗೂ ಹರ್ಷವಾಯಿತು.

ಪ. ರಾಮಕೃಷ್ಣ ಶಾಸ್ತ್ರಿ

Trending videos

Back to Top