CONNECT WITH US  

ಕತೆ: ಉರ್ವಾರುಕ

ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ 
ಉರ್ವಾರುಕಮಿವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾsಮೃತಾತ್‌
(ಮೂರು ಕಣ್ಣುಗಳ ಶಿವನನ್ನು ಭಜಸುತ್ತೇವೆ. ಅವನು ನಮ್ಮ ಕೆಡುಕಿನ ವಾಸನೆಯನ್ನು ದೂರೀಕರಿಸಿ ಒಳಿತಿನ ವಾಸನೆಗಳನ್ನು ವರ್ಧಿಸುವಂತೆ ಮಾಡುವ ನಮ್ಮ ಪರಿಪೋಷಕ. ಪಕ್ವಗೊಂಡ ಸೌತೇಕಾಯಿ ಹೇಗೆ ಸಹಜವಾಗಿ ಬಳ್ಳಿಯಿಂದ ಕಳಚಿಕೊಳ್ಳುವುದೋ ಹಾಗೆಯೇ ಅವನು ನಮ್ಮನ್ನು ಸಾಂಸಾರಿಕ ಬಂಧನದಿಂದ, ಮೃತ್ಯು ಭೀತಿಯಿಂದ ಕಳಚಿಕೊಳ್ಳುವ ಹಾಗೆ ಮಾಡಲಿ; ಆದರೆ ಅಮೃತತ್ವದಿಂದ ಅಲ್ಲ!)-
 (ಋಗ್ವೇದ: 7.59.12)

1
ಮನೆಯ ಗೇಟಿನ ಹತ್ತಿರ ನಿಂತರೆ ಕೇಸರಿ ಚೆಂಡು ಪಶ್ಚಿಮದಲ್ಲಿ ಕೆಳಗಿಳಿಯುವುದು ಕಾಣುತ್ತದೆ. ಈ ದೃಶ್ಯವನ್ನು ಅದೆಷ್ಟು ಬಾರಿ ನೋಡಿದ್ದೆನೋ ನನಗೇ ನೆನಪಿಲ್ಲ. ಆದರೆ ಪ್ರತಿ ಬಾರಿಯೂ ಅದಕ್ಕೆ ಹೊಸ ಮೆರುಗು, ಹೊಸ ಅರ್ಥ. ತಾರಸಿಯಲ್ಲಿ ನಿಂತು ನೋಡಿದರೆ, ಉತ್ತರಾಯಣ ಅಲ್ಲದಿದ್ದರೆ, ಕಾಮತರ ತೆಂಗಿನಮರಗಳು ಅಡ್ಡ ಬಾರದಿದ್ದರೆ, ಆ ಚೆಂಡು ಸಮುದ್ರಕ್ಕೆ ಇಳಿಯುವವರೆಗೂ ಕಾಣುತ್ತದೆ. ಕೇಸರಿ ಬಣ್ಣಕ್ಕೆ ಇತ್ತೀಚೆಗೆ ಹೊಸ ಅರ್ಥ ಕೊಡುವವರೂ ಇದ್ದಾರೆ. ಮೊನ್ನೆಯಷ್ಟೇ ನೃತ್ಯಪಟು ಡಾ| ಸೋನಲ್‌ ಮಾನ್‌ಸಿಂಗ್‌ರ ಹೆಸರು ರಾಜ್ಯಸಭೆಗೆ ನಾಮಕರಣವಾದಾಗ ಪತ್ರಕರ್ತರಿಂದ ಅವರಿಗೆ "ನೇರ' ಪ್ರಶ್ನೆ ಬಂತು. ""ನೀವೂ ಕೇಸರೀಕರಣದಲ್ಲಿ ಇದ್ದೀರಾ?'' ಸೋನಲ್‌ ಅವರು ನಗುತ್ತ ನುಡಿದರಂತೆ, ""ಸೂರ್ಯೋದಯ ಹಾಗೂ ಸೂರ್ಯಾಸ್ತಮಾನ ಎರಡರಲ್ಲೂ ಸೂರ್ಯ ಕೇಸರಿ ಬಣ್ಣವನ್ನೇ ತೊಡುತ್ತಾನಲ್ಲ?'' ಸೆಪ್ಟಂಬರ್‌ ತಿಂಗಳು ಸೂರ್ಯಾಸ್ತಮಾನಕ್ಕೆ ಹೊಸ ರೂಪ ಕೊಡುತ್ತದೆ. ಹತ್ತಿಯಂತೆ ಹರಡಿರುವ ಮೋಡಗಳ ಹಿಂದೆ ಸೂರ್ಯ ಕಣ್ಣುಮುಚ್ಚಾಲೆ ಆಡುತ್ತಾ, ತನ್ನ ಕಿರಣಗಳನ್ನು ಸಂದಭೋìಚಿತವಾಗಿ ಪಸರಿಸುವ ದೃಶ್ಯ ಅವಿಸ್ಮರಣೀಯ. ನಿಧಾನ ಆದರೆ ನಿರಂತರ.

ದೃಶ್ಯ ನೋಡುತ್ತಿರುವಾಗಲೇ "ದೃಶ್ಯ ಭಂಗ'ವಾಯಿತು. ಕಾರಣ, ಹೆಲ್ಮೆಟ್‌ ಧರಿಸಿದ ಸ್ಕೂಟರ್‌ ಸವಾರನೊಬ್ಬ ನಮ್ಮ ಗೇಟಿನ ಬಳಿಯಲ್ಲೇ ನಿಂತದ್ದು. ಈ ಫ್ಯಾನ್ಸಿ ಡ್ರೆಸ್ಸಿನಿಂದಾಗಿ ಗುರುತು ಪರಿಚಯಕ್ಕೆ ತಿಲಾಂಜಲಿ. ಹೆಲ್ಮೆಟ್‌ ತೆಗೆದಾಗಲೇ ಗೊತ್ತಾಯಿತು- ಸುಬ್ರಹ್ಮಣ್ಯ ಎಂದು. ನಮ್ಮ ಮನೆಯಿಂದ ನಾಲ್ಕೈದು ಮನೆ ಮುಂದೆ ಬಾಡಿಗೆಗಿದ್ದ ಸುಬ್ರಹ್ಮಣ್ಯ.  ಎಲ್‌ಐಸಿಯಲ್ಲಿ ಉದ್ಯೋಗ. ಹೆಂಡತಿ ಪಲ್ಲವಿ. ಎರಡು ಮಕ್ಕಳು. ಸಾತ್ವಿಕಾ ಎರಡನೆಯ ಪಿಯುಸಿ ಆಗಿ ಸಿಇಟಿಗೆ ಕುಳಿತಿದ್ದಾಳೆ. ಮಗ ರೋಹಿತ್‌ ಎಂಟನೆಯ ದರ್ಜೆಯನ್ನು ಮುಗಿಸಿದ್ದಾನೆ. ನಮ್ಮೊಡನೆ ಹೆಚ್ಚು ಒಡನಾಟ ಇಲ್ಲದಿದ್ದರೂ ಹೋಗುವಾಗ, ಬರುವಾಗ, ""ಹೇಗಿದ್ದೀರಿ ಅಂಕಲ್‌? ಹೇಗಿದ್ದೀರಿ ಆಂಟಿ?'' ಎಂದು ಕೇಳಲು ಮರೆಯದ ಸುಬ್ರಹ್ಮಣ್ಯ.

""ಹೇಗಿದ್ದೀರಿ ಅಂಕಲ್‌? ಆಂಟಿ ಕಾಣಿಸ್ತಾ ಇಲ್ಲವಲ್ಲ? ಇಬ್ಬರೂ ಆರೋಗ್ಯ ತಾನೆ?'' ಎಂದ ಸುಬ್ರಹ್ಮಣ್ಯ.
""ಅರೆ? ಅದೇನು ಕೇಳುತ್ತಿ? ವಿ ಆರ್‌ ಸಫ‌ರಿಂಗ್‌ ಫ‌ಮ್‌ ಗುಡ್‌ ಹೆಲ್ತ್‌''ಎಂದೆ. ""ಭವಾನೀ ಹೊರಗೆ ಬಾ. ಯಾರು ಬಂದಿದ್ದಾರೆ ನೋಡು.''
ಭವಾನಿ ಸೀರೆಯ ಸೆರಗಿಗೆ ಕೈ ಒರಸುತ್ತಾ, ""ಇದೇನು ಸುಬ್ರಹ್ಮಣ್ಯ? ಒಳಗೆ ಬರಬಾರದೆ? ಸ್ವಲ್ಪ ನಿಂಬೆಹಣ್ಣಿನ ಶರಬತ್ತು ಕುಡಿದು ಹೋಗುವಿರಂತೆ. ಮನೆಯಲ್ಲೇ ಬೆಳೆದ ನಿಂಬೆ.''

""ಆಂಟೀ, ಬೇರೆ ದಿನವಾದರೆ ನನಗೆ ಆಹ್ವಾನವೇ ಅಗತ್ಯ ಇರಲಿಲ್ಲ. ಆದರೆ, ಇವತ್ತು ಸ್ವಲ್ಪ ಬಿಸ್ಸಿ. ನಾವೆಲ್ಲರೂ ಇವತ್ತು ರಾತ್ರಿಯೇ ಹೋಗುತ್ತೇವೆ, ಧಾರವಾಡಕ್ಕೆ'' ಎಂದ ಸುಬ್ರಹ್ಮಣ್ಯ.
""ಅದೇನು ನಿರ್ಮಲಾ ಟ್ರಾವಲ್ಸಿನಲ್ಲಿಯೇ?''
""ಇಲ್ಲ ಆಂಟಿ. ನಾವು ಉಡುಪಿಯನ್ನೇ ಬಿಡುತ್ತಿದ್ದೇವೆ.''
""ಇದೇನು ಸುಬ್ರಹ್ಮಣ್ಯ? ""ವೈ ಲೀವ್‌ ಉಡುಪಿ?'' ನಾನು ಕೇಳಿದೆ.

""ಇಲ್ಲ ಅಂಕಲ್‌, ನಾನು ಕಳೆದ ಮೂರು ತಿಂಗಳಿಂದ ಶೀರ್ಷಾಸನ ಒಂದು ಮಾಡಲಿಲ್ಲ. ಟ್ರಾನ್ಸ್‌ಫ‌ರ್‌ಗಾಗಿ. ಕೆಲಸವಾಗಬೇಕಾದರೆ ಕತ್ತೆಯ ಕಾಲನ್ನೂ ಹಿಡಿಯಬೇಕಂತೆ. ಹಾಗಾಯಿತು. ಅಂತೂ ಟ್ರಾನ್ಸ್‌ಫ‌ರ್‌ ಸಿಕ್ಕಿತು.''
ನಾನೆಂದೆ, ""ಹಾಗಾದರೆ ನಮ್ಮನ್ನೆಲ್ಲ ಬಿಟ್ಟು ಹೋಗುತ್ತೀರಿ ಎಂದಾಯಿತು. ""ಗೋ ವೆನ್‌ ದಿ ಗೋಯಿಂಗ್‌ ಈಸ್‌ ಗುಡ್‌'' ಅಂತ ಯಾರೋ ಹೇಳಿದ್ದು ನೆನಪಾಗುತ್ತದೆ! ಮತ್ತೆ? ಧಾರವಾಡದಲ್ಲಿ ಎಲ್ಲಿ ವಾಸ?''

""ಅಂಕಲ್‌, ಮೂರು ಬೆಡ್‌ರೂಮ್‌ನ ಫ್ಲಾಟ್‌ ತಗೊಂಡೆ. ಹೊಸದಲ್ಲ. ಆದರೆ, ಲೊಕಾಲಿಟಿ ತುಂಬ ಒಳ್ಳೆಯದು. ಸಾರಸ್ವತ ಕಾಲೋನಿಯಲ್ಲಿ. ಎಲ್ಲದಕ್ಕೂ ಹತ್ತಿರ. ಇನ್ನು ಸಾತ್ವಿಕಾಗೆ ಬಿ.ಎಸ್ಸಿ. ಅಗ್ರಿಕಲ್ಚರೇ ಆಗಬೇಕಂತೆ. ಸಿಇಟಿ ರಿಸಲ್ಟ್ ನೋಡಬೇಕು. ರೋಹಿತ್‌ಗೆ ಒಳ್ಳೆಯ ಸ್ಕೂಲಲ್ಲಿ ಸೀಟು ಸಿಕ್ಕಿತು. ಅದಕ್ಕೂ ಸ್ವಲ್ಪ ಕಷ್ಟಪಡಬೇಕಾಯಿತು.''
""ಸುಬ್ರಹ್ಮಣ್ಯ, ಏನೆಲ್ಲಾ ಡೆವಲಪ್‌ಮೆಂಟ್ಸ್‌! ನಮಗೆ ಸುಳಿವೇ ಇಲ್ಲವಲ್ಲ?''

""ಅಂಕಲ್‌, ನಿಮ್ಮಿಂದ ಏನೂ ಮುಚ್ಚುಮರೆ ಇಲ್ಲ. ಎಲ್ಲವೂ ಸುಸೂತ್ರವಾಗಿ ಆದ ನಂತರವೇ ನಿಮಗೆ ತಿಳಿಸುವಾ ಅಂತ ನಾವಿಬ್ಬರೂ ಮಾತನಾಡಿಕೊಳ್ಳುತ್ತಿದ್ದೆವು. ಪಲ್ಲವಿ ಇವತ್ತು ನಿಮ್ಮ ಮನೆಗೆ ಬರಬೇಕಿತ್ತು. ಅಷ್ಟರಲ್ಲಿ ಮೂವರ್ ಆ್ಯಂಡ್‌ ಪ್ಯಾಕರ್ ಬಂದುಬಿಟ್ಟರು. ಇಡೀ ಮನೆಯ ಸಾಮಾನು-ಸರಂಜಾಮನ್ನು ಲೋಡ್‌ ಮಾಡಬೇಕಲ್ಲ? ನೀವು ಇಬ್ಬರೂ ಧಾರವಾಡಕ್ಕೆ ಬರಬೇಕು. ನಮ್ಮಲ್ಲೇ ಇರಬೇಕು ಬರುತ್ತೀರಲ್ಲ?''

""ಯಾವುದಕ್ಕೂ ನೀವು ನಿರಾತಂಕವಾಗಿ ಸೆಟಲ್‌ ಆಗಿ. ಆಮೇಲೆ ನೋಡೋಣ ಅಲ್ಲವೇ ಭವಾನಿ?'' ಎಂದೆ.
ಭವಾನಿ ನಸುನಗುತ್ತಾ ತಲೆಯಾಡಿಸಿದಳು. ಕಳೆದ ಎಂಟು ವರ್ಷಗಳಿಂದ ನಾವು ಎಲ್ಲೂ ಹೋಗಿದ್ದಿಲ್ಲ. ಅಮೆರಿಕದ ನ್ಯೂಜೆರ್ಸಿಯಲ್ಲಿದ್ದ ಮಗನ ಸಂಸಾರ ಸೊಸೆ, ಇಬ್ಬರು ಮಕ್ಕಳು. ಪ್ರತಿ ವರ್ಷವೆಂಬಂತೆ ಬಂದು ಹೋಗುತ್ತಾರೆ. ಮಗಳು, ಅಳಿಯ, ಅವರ ಇಬ್ಬರು ಮಕ್ಕಳು ಹೈದರಾಬಾದ್‌ನಲ್ಲಿದ್ದಾರೆ. ಎರಡು ವರ್ಷಕ್ಕೊಮ್ಮೆ ಬಂದು ಹೋಗುತ್ತಾರೆ. ಮಗ, ಮಗಳು, ""ಅಪ್ಪ, ಬರುವಾಗ ಏನು ತರಬೇಕು?'' ಎಂದು ಕೇಳಲು ಮರೆಯುವುದಿಲ್ಲ. ನಮಗಾದರೂ ಏನು ಬೇಕು? ಮನೆಯಲ್ಲಿ ನಾವಿಬ್ಬರೆ. ಬೆಳೆಸಿದ ಗಿಡಗಳಿವೆ. ಚೆನ್ನಾಗಿವೆ. ಅವು "ಕಂಪನಿ' ಕೊಡುತ್ತವೆ. ಸಂಗೀತದ ಸಿಡಿಗಳಿವೆ. ಅವುಗಳು ಕೊಡುವ "ಕಂಪನಿ' ತುಸು ಭಿನ್ನ. ಬೆಳಗ್ಗೆ ಏಳುವಾಗಲೇ ಭವಾನಿ ನನ್ನನ್ನು ಕರೆಯುತ್ತಾಳೆ. ""ನೋಡಿ, ಮಾವಿನ ಮರ ಎಷ್ಟು ಹೂ ಬಿಟ್ಟಿದೆ. ಏನು ಪರಿಮಳರೀ!'' ನಾನದನ್ನು ಮೊದಲೇ ನೋಡಿರುತ್ತೇನೆ. ಆದರೆ, ಭವಾನಿಗೆ ನಿರಾಸೆ ಆಗಬಾರದೆಂದು, ""ಹೌದೆ? ಹಾಗಾದರೆ ಈ ಬಾರಿ ಮಾವಿನ ಹಣ್ಣಿನ ಬಂಪರ್‌ ಆಗಬಹುದು'' ಎನ್ನುತ್ತೇವೆ. ಸಂತೋಷದಿಂದ ಅವಳ ಮುಖ ಬೀಗುತ್ತದೆ.

""ಅಂಕಲ್‌! ಏನು ಯೋಚನೆ? ನಾನು ಹೋಗಲೆ? ಮನೆಯನ್ನು ಖಾಲಿ ಮಾಡುವಾಗ ನಾನಿಲ್ಲ ಎಂದರೆ ಪಲ್ಲವಿಗೆ ತುಂಬಾ ಕೋಪ ಬರುತ್ತದೆ. ಹೌದು. ನಿಮಗೆ ಇನ್ನೊಂದು ವಿಷಯ ಹೇಳಬೇಕಿತ್ತು'' ಎಂದ ಸುಬ್ರಹ್ಮಣ್ಯ.
""ಏನದು?''
""ಬನ್ನಂಜೆಯಲ್ಲಿ ನಮ್ಮ ಇಪ್ಪತ್ತು ಸೆಂಟ್ಸ್‌ ಜಾಗವಿತ್ತಲ್ಲ. ಅದನ್ನು ಮಾರಿದೆ. ಎಂಬತ್ತು ಲಕ್ಷ ಬಂತು. ಸ್ವಲ್ಪ ತಡೆದಿದ್ದರೆ ಇನ್ನೂ ಹತ್ತು ಲಕ್ಷ ಬರುತ್ತಿತ್ತು. ರೋಡ್‌ಸೈಡ್‌ ಪ್ರಾಪರ್ಟಿಯಲ್ಲವೆ? ಧಾರವಾಡದ ಮನೆಗೆ ಈ ದುಡ್ಡನ್ನು ಹಾಕಿ ಕ್ಯಾಪಿಟಲ್‌ ಗೇನ್ಸ್‌ನೂ° ತಪ್ಪಿಸಿಕೊಂಡ ಹಾಗಾಯಿತು'' ಎಂದ.

""ಅಂತೂ ಉಡುಪಿ ಬಿಡುವುದಕ್ಕೆ ಸಾಕಷ್ಟು ತಯಾರಿ ಮಾಡಿದ್ದೀರಿ ಅಂತಾಯಿತು. ಸುಬ್ರಹ್ಮಣ್ಯ, ಎನಿವೇ ಆಲ್‌ ದ ಬೆಸ್ಟ್‌. ಲೆಟ್‌ ಯುವರ್‌ ಲೈಫ್ ಬಿ ಹ್ಯಾಪಿ ಆ್ಯಂಡ್‌ ಪ್ರಾಸ್ಪರಸ್‌ ಇನ್‌ ಧಾರಾÌಡ್‌''  ಎಂದೆ.
""ನಿಮ್ಮ ಆಶೀರ್ವಾದ ಬೇಕು'' ಎಂದು ಸ್ಕೂಟರಿನಿಂದ ಇಳಿದು ಭವಾನಿಗೂ ನನಗೂ ಕಾಲು ಮುಟ್ಟಿ ನಮಸ್ಕರಿಸಿದ.

""ಒಳ್ಳೆಯದಾಗಲಪ್ಪ'' ಎಂದು ಭವಾನಿ ಹರಸಿದಳು. ""ಬಾೖ'' ಎಂದು ಸುಬ್ರಹ್ಮಣ್ಯ ಸ್ಕೂಟರ್‌ ಹತ್ತಿ ಭುರ್ರೆಂದು ಹೊರಟುಹೋದ.
ಇದು ನಡೆದದ್ದು ಮಾರ್ಚ್‌ ತಿಂಗಳಲ್ಲಿ. ಸೆಕೆಯ ಮುನ್ನೋಟ, ನೀರಿಗಾಗಿ ಸಂತಾಪ, ವಿದ್ಯುತ್ತಿನ ಕಣ್ಣುಮುಚ್ಚಾಲೆ-ಎಲ್ಲದಕ್ಕೂ ತಯಾರಾಗಬೇಕು. ""ಈಗೆಯೇ ಹೀಗಾದರೆ ಇನ್ನು ಎಪ್ರಿಲ್‌, ಮೇ ಹೇಗೆ?'' ಎಂಬ ಭವಾನಿಯ ಪ್ರಶ್ನೆಗೆ ನನ್ನ ಉತ್ತರವಿಲ್ಲ. ಪ್ರತಿವರ್ಷ ನಡೆಯುವ ವಿದ್ಯಮಾನ. "Safa'ಎಂಬ ಹಿಂದಿ ಸಿನೆಮಾ ನೋಡಿ ಬಂದವರು ಅದನ್ನು "Suffer'ಆಗಿ ಪರಿವರ್ತನೆ ಮಾಡಿದರಂತೆ. ಹಾಗೆ ನಮ್ಮ ಕತೆ.

2
ಮೇ ತಿಂಗಳು ಬಂದೇ ಬಿಟ್ಟಿತು. ಚನ್ನೈಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಹಾಸ್ಟೆಲ್‌ನಲ್ಲಿ ಒದ್ದೆ ಟವಲ್‌ ಮೈಮೇಲೆ ಹಾಕಿ ಸುತ್ತಾಡಿದ ನೆನಪಾಗಿ ಅದನ್ನೇ ಇಲ್ಲಿ ಮಾಡಿದೆ. ಸ್ವಲ್ಪವಾದರೂ ಗಾಳಿ ಇರಬೇಕೆ? ಗೇಟಿನ ಹತ್ತಿರವಿದ್ದ ಮರದ ನೆರಳಲ್ಲಿ ನಿಂತು ರಸ್ತೆಯ ಎರಡೂ ಬದಿಗೆ ದೃಷ್ಟಿ ಹಾಯಿಸಿದೆ. ನಮ್ಮ ಗಿಡಗಳೆಲ್ಲ ನೆಲಕಚ್ಚಿದ್ದವು. ನೀರು ನಮಗಿದ್ದರಲ್ಲವೆ? ಅವಕ್ಕೆ? ಇನ್ನೂ ಗಂಟೆ ಹನ್ನೆರಡಷ್ಟೆ. ""ಅಡುಗೆ ಆಯಿತೆ?'' ಎಂದು ಕೇಳಿ ಭವಾನಿಯ ಮೇಲೆ ಒತ್ತಡ ತರುವುದು ನನಗೆ ಇಷ್ಟವಿರಲಿಲ್ಲ. ಯಾವಾಗಲೂ ಸೂರ್ಯಾಸ್ತ ಆಗುವ ದಿಕ್ಕಿಗೇ ಇವತ್ತೂ ನೋಡಿದೆ. ದೂರದಿಂದ ಯಾರೋ ಬರುತ್ತಿರುವುದು ಕಾಣಿಸಿತು. ಉರಿಬಿಸಿಲು. ವ್ಯಕ್ತಿ ನಡೆದೇ ಬರುತ್ತಿದ್ದರು. ಬಿಳಿ ಬಟ್ಟೆ ಧರಿಸಿದ್ದರು. ಇನ್ನೂ ಹತ್ತಿರ ಬಂದಾಗ ನನಗೆ ಸ್ವಲ್ಪ ಭಯವೇ ಆಯಿತು. ಅವರು ನಡೆಯಲು ತುಂಬಾ ಕಷ್ಟಪಟ್ಟ ಹಾಗೆ, ಸಾವರಿಸಿಕೊಂಡು ನಡೆದಂತೆ, ಇನ್ನೇನು ಕೆಳಗೆ ಬಿದ್ದೇ ಬೀಳುತ್ತಾರೆ ಎಂದು ನನಗೆ ಕಂಡು ಧಾವಿಸಿ ಅವರ ಬಳಿ ಹೋಗಿ, ""ಒಳಗೆ ಬನ್ನಿ. ಸ್ವಲ್ಪ ಸುಧಾರಿಸಿಕೊಳ್ಳಿ. ಆಮೇಲೆ ಹೋಗುವಿರಂತೆ'' ಎಂದು ಹೇಳಿ ಕೈಹಿಡಿದು ಒಳಗೆ ಕರೆದುಕೊಂಡು ಬಂದೆ.

""ಇನ್ನೇನು ಸುಧಾರಣೆ? ಬಾರದೆ ನಿವೃತ್ತಿ ಇಲ್ಲ'' ಎಂದರು. ಗೇಟಿನ ಬಳಿಯಿಂದ ಮುಂದೆ ಹೆಜ್ಜೆ ಹಾಕುವುದೇ ಕಷ್ಟವಾಗಿ, ಕೈಹಿಡಿಯದಿದ್ದರೆ ಅಲ್ಲೇ ಬೀಳುವುದು ಖಂಡಿತ ಎಂದು ಗಾಬರಿಯಿಂದ ಮೆಟ್ಟಿಲೇರಿಸಿ ಮನೆಯ ಒಳಕ್ಕೆ ಕರೆತಂದೆ ಅವರನ್ನು.

""ಈ ಮಧ್ಯಾಹ್ನ ಬಿಸಿಲಿಗೆ ನಡೆದುಕೊಂಡೇಕೆ ಬಂದಿರಿ? ಆಟೋ ಸಿಗುತ್ತಿತ್ತಲ್ಲ?'' ಎಂದೆ. ""ಭವಾನಿ, ನೀನು ಮಾಡಿದ ನಿಂಬೆ ಶರಬತ್ತು ತಾ. ಯಾರೋ ಬಂದಿದ್ದಾರೆ''. ಭವಾನಿ ಹೊರಗೆ ಬರುವಾಗ ಅವಳ ಕೈಯಲ್ಲಿ ಶರಬತ್ತು ಇತ್ತು. ""ಯಾರು?'' ಎಂದಳು.

""ಆಮೇಲೆ ನೋಡೋಣ. ಯಾವುದಕ್ಕೂ ಅವರು ಸ್ವಲ್ಪ ಸುಧಾರಿಸಿಕೊಳ್ಳಲಿ'' ಎಂದೆ. ಹದಿನೈದು ನಿಮಿಷ ಕೂತೇ ಇದ್ದ ವ್ಯಕ್ತಿ ಏದುಸಿರು ಬಿಡುತ್ತಿದ್ದರು.
""ರಾಯರೇ ರಾಯರೇ, ಈಗ ಹೇಗೆ? ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ'' ಎಂದು ಅವರನ್ನು ಮೆಲ್ಲನೆ ಒಳಗೆ ಕರೆದುಕೊಂಡು ಮಂಚದ ಮೇಲೆ ಮಲಗಿಸಿದೆ. ಏಸಿ ಆನ್‌ ಮಾಡಿ ಹೊರಗೆ ಬಂದು ಕುಳಿತುಕೊಂಡೆ.

ಭವಾನಿಗೂ ಕುತೂಹಲ. ""ಯಾರಿರಬಹುದು? ಇಲ್ಲಿ ನೋಡಿದ್ದಿಲ್ಲವಲ್ಲ?''
""ಯಾರೇ ಇರಲಿ. ಎಂಬತ್ತರ ಕಡಿಮೆ ವಯಸ್ಸಲ್ಲ. ಆದರೆ ನಡೆದೇ ಹೋಗಬೇಕಾದ ಹಠ ಏಕೆ?'' ಎಂದೆ.
ಸುಮಾರು ಅರ್ಧ ತಾಸಿನ ಬಳಿಕ ರಾಯರು ನಿಧಾನವಾಗಿ ಹೊರಗೆ ಬಂದು ಸೋಫಾದಲ್ಲಿ ಕುಳಿತರು.
""ನೋಡಿ! ನನಗೆ ಬೇರೆಯವರಿಗೆ ತೊಂದರೆ ಕೊಡುವುದು ಏನೇನೂ ಇಷ್ಟವಿಲ್ಲ. ಬಟ್‌ ಐಆ್ಯಮ್‌ ಹೆಲ್ಪ್ಲೆಸ್‌'' ಎಂದರು. ""ನನ್ನ ಪರಿಚಯವೇ ನಿಮಗಿಲ್ಲ. ಆದರೂ ಇಷ್ಟೆಲ್ಲ ಮಾಡಿದಿರಲ್ಲ?''
ನಾನೆಂದೆ, ""ರಾಯರೇ, ನಾವು ಮನೆ ಮಾಡಿಕೊಂಡಿದ್ದೇವೆ. ಇಷ್ಟಾಗಿ ಮನೆಯಲ್ಲಿ ನಾವಿಬ್ಬರೇ. ಯಾರು ಬಂದರೂ ನಮಗೆ ಸಂತೋಷ. ಇವತ್ತು ನೀವು ನಮ್ಮ ಅತಿಥಿ. ಹಿರಿಯರು.''                                                                                         

""ನನ್ನ ಹೆಸರು ಶ್ರೀನಿವಾಸ ರಾವ್‌. ನಾನು ಇನ್‌ಕಮ್‌ ಟ್ಯಾಕ್ಸ್‌ ಕಮಿಷನರಾಗಿ ರಿಟೈರ್‌ ಆಗಿದ್ದೇನೆ. ಎಂ.ಕಾಂ. ಹಾಗೂ ಐಎಎಸ್‌ ಆಗಿದೆ. ದೇಶವೆಲ್ಲ ಸುತ್ತಾಡಿದ್ದೇನೆ. ಉಡುಪಿಯಲ್ಲಿ ನನ್ನ ಪೂರ್ವಿಕರು ಇದ್ದರು ಎಂದು ಗೊತ್ತಾಗಿ ಇಲ್ಲಿ ಸ್ವಲ್ಪ ಜಾಗ ಖರೀದಿ ಮಾಡಿ ಇಲ್ಲೇ ಇದ್ದೇನೆ. ನನ್ನ ಹೆಂಡತಿ ತೀರಿಕೊಂಡು ಹತ್ತು ವರ್ಷವಾಯಿತು. ಅಂದಿನಿಂದ ನಾನೊಬ್ಬನೇ ಇದ್ದೇನೆ. ಅಡುಗೆಯವಳು ಬಂದು ಮಾಡಿಟ್ಟು ಹೋಗುತ್ತಾಳೆ. ತುಂಬಾ ಓದುತ್ತೇನೆ. ಭಾಷೆಗೆ ತೊಡಕಿಲ್ಲ. ಆದರೂ ಸಣ್ಣ ಪ್ರಾಯವೇನಲ್ಲವಲ್ಲ? ಐ ಆ್ಯಮ್‌ ಪಾಸ್ಟ್‌ ಎಯಿrà.  ಗೋಡೆಯ ಮೇಲಿಟ್ಟ ತೆಂಗಿನಕಾಯಿಯಂತೆ. ಇತ್ತಲಾಗೆ ಬೀಳಲೂ ಬಹುದು, ಅತ್ತಲಾಗೆ ಉರುಳಲೂ ಬಹುದು''.
""ನನಗೀಗ ಹೊಸ ವಿಪತ್ತು ಎದುರಾಗಿದೆ. ನಾನಿದ್ದ ಜಾಗವನ್ನು ಖರೀದಿಸಿದ ಮಹನೀಯ ಏಳಲೇಬೇಕೆಂದು ಪಟ್ಟು ಹಿಡಿದಿದ್ದಾನೆ. ಮೂರು ತಿಂಗಳು ಆತ ಸುಮ್ಮನಿದ್ದ. ಈಗ ಇನ್ನು ಆತ ಸುಮ್ಮನಿರುವುದು ಕಷ್ಟ'' ಎಂದರು.

ನಾನೆಂದೆ, ""ಐ'ಮ್‌ ಎಕ್‌ಸ್ಟ್ರೀಮ್ಲಿà ಸಾರಿ. ಕುಡ್‌ ಐ ಬಿ ಆಫ್ ಹೆಲ್ಪ್ ಟು ಯೂ ಇನ್‌ ಎನಿವೇ?''
ಶ್ರೀನಿವಾಸರಾಯರು ತಲೆ ಅಲ್ಲಾಡಿಸಿ, ""ಯೂ ಕಾನ್‌r ಹೆಲ್ಪ್ಮಿ. ನಾನು ಸುಬ್ರಹ್ಮಣ್ಯರನ್ನು ಭೇಟಿಯಾಗಿ, ಅವರಿಂದ ಏನಾದರೂ ಸಹಾಯ ಸಿಗಬಹುದು ಎಂದು ಈಚೆ ಬಂದೆ'' ಎಂದರು. ""ನಾನಿರುವುದು ಅವರ ಪ್ರಾಪರ್ಟಿಯಲ್ಲಿ. ಅವರೇ ಈ ಹೊಸ ಮಾಲಕನಿಗೆ ಹೇಳಿ ಒಂದೆರಡು ತಿಂಗಳು ನನಗೆ ಆ ಮನೆಯಲ್ಲೇ ಇರಲು ಬಿಡಬಹುದೇ ಎಂದು ಅವರನ್ನು ಹುಡುಕಿಕೊಂಡು ಬಂದೆ. ಅವರ ಮನೆ ಇಲ್ಲೇ ಎಲ್ಲೋ ಎಂದು ಕೇಳಿದ್ದೇನೆ'' ಎಂದರು.
""ಸರ್‌, ಸುಬ್ರಹ್ಮಣ್ಯರು ಉಡುಪಿ ಬಿಟ್ಟು ಧಾರವಾಡಕ್ಕೆ ಶಿಫ್ಟ್ ಆಗಿ ಎರಡು ತಿಂಗಳಾಗುತ್ತ ಬಂತಲ್ಲ? ಹಾಗಾದರೆ ಸುಬ್ರಹ್ಮಣ್ಯರು ಉಡುಪಿ ಬಿಟ್ಟದ್ದು ನಿಮಗೆ ಗೊತ್ತಿಲ್ಲ ಎಂದಾಯಿತು.''

""ನನಗೆ ಒಂದು ಇಂಡಿಕೇಶನ್‌ ಹೋಗುವ ಮೊದಲು ಕೊಡಬಹುದಿತ್ತು. ಅವರವರ ಕಷ್ಟ ಅವರವರಿಗೆ. ಎಲ್ಲವೂ ನಾವು ಅಂದಂತೆ ಆಗುವುದಿಲ್ಲ. ಇನ್ನು ನಾನು ಹೋಗಲೆ? ನಿಮ್ಮ ಪತ್ನಿಗೆ ನನ್ನ ಥ್ಯಾಂಕ್ಸ್‌ ತಿಳಿಸಿ'' ಎಂದರು.
""ಸರ್‌, ನೀವು ಪುನಃ ಈಗ ನಡೆದು ಹೋಗುವುದು ನನಗೆ ಇಷ್ಟವಿಲ್ಲ. ನನ್ನ ಹತ್ತಿರ ಕಾರು ಇದೆ. ನಿಮ್ಮನ್ನು ನಿಮ್ಮ ಮನೆಯಲ್ಲಿ ಬಿಡುತ್ತೇನೆ'' ಎಂದೆ.
""ಹಾಂ! ನಿಮ್ಮ ಹೆಸರನ್ನೇ ಕೇಳಲಿಲ್ಲ. ನಿಮ್ಮ ಪತ್ನಿಯ ಹೆಸರೂ ಗೊತ್ತಿಲ್ಲ'' ಎಂದರು.
""ನಾನು ಕೃಷ್ಣಾನಂದ ಭಟ್‌. ಅವಳು ಭವಾನಿ. ನಾನು ಮದರಾಸಿನ ಐಐಟಿಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪ್ರೊಫೆಸರ್‌ ಆಗಿದ್ದೆ. ರಿಟೈರ್‌ ಆದ ಮೇಲೆ ಇಲ್ಲಿ ಇದ್ದೇವೆ. ಸಂತೋಷವಾಗಿ'' ಎಂದೆ.

""ಕೃಷ್ಣಾನಂದರೇ, ಇನ್ನೊಂದು ವಿಷಯವಿದೆ. ಹೇಳಿಬಿಡುತ್ತೇನೆ. ಕಳೆದ ದಶಂಬರ್‌ನಲ್ಲಿ ನನಗೆ ವಿಲ್ಲು ಮಾಡಬೇಕೆಂದೆನಿಸಿತು. ಇಬ್ಬರು ಮಕ್ಕಳಿಗೂ ಸಮಪಾಲು ಕೊಡೋಣ. ನನಗೆ ಪರ್ಸನಲ್ಲಾಗಿ ಏನೂ ಬೇಡ. ಹೈದರಾಬಾದಿನಲ್ಲಿದ್ದ ಮಗಳಿಗೆ ಫೋನ್‌ ಮಾಡಿದೆ. "ಅವರ ಹತ್ತಿರ ಕೇಳಿ ನಿಮಗೆ ತಿಳಿಸುತ್ತೇನೆ' ಎಂದಳು. ಹತ್ತೇ ನಿಮಿಷಗಳಲ್ಲಿ ಅವಳ ಫೋನ್‌ ಬಂತು. "ನಮಗೆ ಪಾಲೇ ಬೇಡ ಎನ್ನುತ್ತಿದ್ದಾರೆ ಇವರು. ಇಷ್ಟಾಗಿ ನಾವು ಉಡುಪಿಗೆ ಬಂದು ನಿಲ್ಲುವುದು ಅಷ್ಟರಲ್ಲೇ ಇದೆ. ಎಲ್ಲವನ್ನೂ ಅಣ್ಣನಿಗೆ ಕೊಡಿ. ನಮ್ಮದೇನೂ ಅಭ್ಯಂತರವಿಲ್ಲ' ಎಂದಳು. ಹಾಗಾಗಿ ಇಡೀ ಪ್ರಾಪರ್ಟಿಯು ಮಗನ ಹೆಸರಿಗೆ ರಿಜಿಸ್ಟರ್‌ ಆಯಿತು. ನಿಮಗೆ ಹೇಳಿಬಿಡೋಣ ಎಂದೆನಿಸಿತು'' ಶ್ರೀನಿವಾಸರಾಯರು ಹೇಳುವುದನ್ನೆಲ್ಲ ಹೇಳಿರಬೇಕು.

""ನಿಮ್ಮ ಕಾರಿನಲ್ಲೇ ಹೋಗೋಣ. ಐ ರಿಗ್ರೆಟ್‌ ಐ ಹ್ಯಾವ್‌ ಬೀನ್‌ ಎ ಟೋಟಲ್‌ ನ್ಯೂಸೆನ್ಸ್‌ ಟುಡೇ'' ಎಂದರು.
ಭವಾನಿಗೆ ಕರೆದು ಹೇಳಿದೆ, ""ಈಗ ಬಂದೆ. ಬಾಗಿಲು ಎಳೆದುಕೊಂಡಿರು.''

3
ಎರಡು ದಿನಗಳ ನಂತರ ದಿನಪತ್ರಿಕೆಯ ಪುಟ ನೋಡಿ ಹೌಹಾರಿದೆ. ಖಂಡಿತ ಅವರೇ ಇರಬೇಕು ಎಂದು ಇವಳನ್ನು ಕರೆದೆ.
""ಭವಾನೀ, ಬೇಗ ಬಾ.''
""ಏನಾಯಿತು? ನಾನು ಯಾವಾಗಿನಿಂದಲೂ ಹೇಳುತ್ತಿದ್ದೇನೆ. ನೀರು ತುಂಬಿದ ಬಕೆಟ್‌ ಎತ್ತಬೇಡಿ ಎಂದು. ನೀವು ಕೇಳಿದರೆ ತಾನೆ? ಈಗ ಏನು ಮಾಡಿಕೊಂಡಿರಿ?'' ಭವಾನಿ ಗಾಬರಿಯಿಂದ ಓಡೋಡಿ ಬಂದಳು.
""ಅದಲ್ಲವೆ. ನಿನ್ನನ್ನು ಕರೆದದ್ದು ಈ ಫೋಟೋ ತೋರಿಸಲಿಕ್ಕೆ'' ಎಂದೆ.
""ಅಯ್ಯೋ! ಆ ದಿನ ನಮ್ಮ ಮನೆಗೆ ಬಂದಿದ್ದರಲ್ಲ? ಅವರದ್ದೇ ಫೋಟೋ ಇರಬೇಕು. "ಕಂಬನಿ'ಯ ಕೆಳಗೇಕೆ? ಅಷ್ಟರಲ್ಲಿ ಅವರಿಗೇನಾಯಿತು?''
""ಬರೆದಿದ್ದಾರಲ್ಲ? ಕೆ. ಶ್ರೀನಿವಾಸ ರಾವ್‌, ನಿವೃತ್ತ ಇನ್‌ಕಮ್‌ ಟ್ಯಾಕ್ಸ್‌ ಕಮಿಶನರ್‌, 1933-2018 ನಿಧನ. ಉಡುಪಿಯಲ್ಲಿ ನೆಲೆಸಿದ ನಿವೃತ್ತರು ಹೃದಯಾಘಾತದಿಂದ ತೀರಿಕೊಂಡರು. ಮಗ ಕೆ. ಸುಬ್ರಹ್ಮಣ್ಯ, ಎಲ್‌ಐಸಿ ಧಾರವಾಡ. ಮಗಳು ವಿನುತಾ ರಾಮ್‌, ಹೈದರಾಬಾದ್‌. ಸಹೃದಯರ ಅಂತಿಮ ಕ್ರಿಯೆಗಾಗಿ ಈಗಾಗಲೇ ಉಡುಪಿಗೆ ಬಂದಿರುತ್ತಾರೆ.''   

ಎಂ. ಸುಧಾಕರ ರಾವ್‌

Trending videos

Back to Top