ನೋವಿನ ಮಂಜು ಮುಸುಕಿದೆ


Team Udayavani, Aug 26, 2018, 6:00 AM IST

z-8.jpg

ಈ ಬಾರಿ ಸುರಿದ ಭಾರೀ ಮಳೆ ಮತ್ತು ಅದರಿಂದುಂಟಾದ ಪ್ರವಾಹ, ಪರಿಣಾಮವಾಗಿ ಸಂಭವಿಸಿದ ಭೂಕುಸಿತ, ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ ಇವುಗಳಿಂದಾಗಿ ಭಾರತದ ಸ್ಕಾಟ್‌ಲ್ಯಾಂಡ್‌, ದಕ್ಷಿಣದ ಕಾಶ್ಮೀರ ಎಂದೆಲ್ಲ ವರ್ಣಿಸಲ್ಪಟ್ಟ , ಇತ್ತೀಚೆಗಿನ ವರ್ಷಗಳಲ್ಲಿ ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದ ದಾಖಲೆಯುಳ್ಳ, ಕೊಡಗಿನ ವೈಭವದ ಸದ್ದಡಗಿದೆ. ನಿಸರ್ಗದ ರಮಣೀಯತೆ ರೌದ್ರ ರೂಪ ತಾಳಿದೆ. ಕೊಡಗು ತಪ್ಪು ಕಾರಣಗಳಿಗಾಗಿ ಸುದ್ದಿ ಮಾಡಿದೆ.  

ಮಲೆನಾಡಿನ ಭಾಗವಾದ ಕೊಡಗಿಗೆ ಮಳೆ ಹೊಸದೇನಲ್ಲ. ಆದರೆ, ಈ ಬಾರಿ ಜೂನ್‌ ತಿಂಗಳಿನಿಂದ ಸುರಿಯಲಾರಂಭಿಸಿದ ಮಳೆ ಜುಲೈ ತಿಂಗಳಲ್ಲಿ ತನ್ನ ಮೇಲ್ಮೆಯನ್ನು ತಲುಪಿ ಕಾವೇರಿ ಮೈದುಂಬಿ ಹರಿದು ಹಾರಂಗಿ ಅಣೆಕಟ್ಟಿಗೆ ಒಳಹರಿವು ಹೆಚ್ಚಾಗಿ ಮಂಡ್ಯ, ಬೆಂಗಳೂರು ಮತ್ತು ತಮಿಳುನಾಡಿಗೆ ಮತ್ತು ಕಾವೇರಿಯ ಇತರ ಅಚ್ಚುಕಟ್ಟು ಪ್ರದೇಶಗಳಿಗೆ ಸಂತಸ ನೀಡಿತು. ಆದರೆ, ಆಗಸ್ಟ್‌ ತಿಂಗಳ ಹೊತ್ತಿಗೆ ಅಪಾಯಕಾರಿಯಾಗಿ ಪರಿಣಮಿಸಿತು.

ಕೊಡಗು ಬೆಟ್ಟಗುಡ್ಡಗಳ, ಏರುತಗ್ಗುಗಳ ಪ್ರದೇಶ. ಪ್ರವಾಸಿಗರ ವಾರಾಂತ್ಯದ ಸಗ್ಗ. ಪಟ್ಟಣಗಳು ಚಿಕ್ಕವು; ಹಳ್ಳಿಗಳಲ್ಲೇ ಹೆಚ್ಚು ಜನ. ಗ್ರಾಮೀಣ ಮತ್ತು ನಗರ ಸಂಪರ್ಕಕ್ಕೆ ಹಳೆಯ ರಸ್ತೆಗಳು. ರೈಲು, ವಿಮಾನಗಳಿಂದ ಗಾವುದ ದೂರ. ಹಡಗಿನ ಪ್ರಮೇಯವೇ ಇಲ್ಲ. ಭೂಸಾರಿಗೆಯೊಂದೇ ಇಲ್ಲಿ ಕ್ರಿಯಾಶೀಲ. ಮಂಗಳೂರು ಮತ್ತು ಮೈಸೂರಿಗೆ ಸಂಪರ್ಕ ಸಾಧಿಸುವ ರಾಜ್ಯ ಹೆದ್ದಾರಿ- ಅದು ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ- ಜಿಲ್ಲೆಯ ಮುಖ್ಯ ರಸ್ತೆ. ಇದಲ್ಲದೆ ಹಾಸನ, ಹಾಗೇ ಕೇರಳಕ್ಕೆ ಸಂಪರ್ಕ ನೀಡುವ ರಸ್ತೆಗಳು ಜಿಲ್ಲೆಯೊಳಗೆ ಸಾಕಷ್ಟು ದೂರ ಕ್ರಮಿಸುತ್ತವೆಯಾದರೂ ಇವನ್ನು ಸಮರ್ಪಕ ಸಂಪರ್ಕರಸ್ತೆಗಳಾಗಿ ಬೆಳೆೆಸಲು ಸಂಬಂಧಿಸಿದ ಪ್ರಾಧಿಕಾರಗಳು ಮನಸ್ಸು ಮಾಡಿಲ್ಲವಾದ್ದರಿಂದ ಇವು ಆಗಾಗ ಬಾಲಗ್ರಹದೋಷಕ್ಕೆ ಗುರಿಯಾಗುತ್ತಿದ್ದವು. ಕೆಲವು ವರ್ಷಗಳ ಹಿಂದೆ ಮಂಗಳೂರು ರಸ್ತೆ ಕುಸಿದು ಅನೇಕ ತಿಂಗಳುಗಳ ಕಾಲ ಕೊಡಗಿಗೆ ದಕ್ಷಿಣಕನ್ನಡದ ಜೊತೆ ಸಂಪರ್ಕವೇ ಕಡಿದಿತ್ತು. ಈ ವರ್ಷ ಶಿರಾಡಿ ಘಾಟಿ ರಸ್ತೆ ನಿರ್ಮಾಣದಲ್ಲಿದ್ದುದರಿಂದ ಮಡಿಕೇರಿಯ ಮೂಲಕವೇ ಮಂಗಳೂರು-ಬೆಂಗಳೂರು ಪ್ರಯಾಣಿಕ ಮತ್ತು ಸರಕು ಸಾರಿಗೆ ನಡೆದಿತ್ತು. ಸಂಪಾಜೆ ಘಾಟಿಯ ಈ ರಸ್ತೆ ಮನುಷ್ಯನ ಎಲ್ಲ ಅಕ್ರಮಗಳ ಭಾರವನ್ನು  ಹೊರಲು ಶಕ್ತವಾಗಿತ್ತೋ ಇಲ್ಲವೋ ಎಂಬುದನ್ನು ಗಮನಿಸದೆ ಅಥವಾ ಅನಿವಾರ್ಯವಾಗಿ ಈ ಹೆಚ್ಚಿನ‌ ಹೊರೆಯನ್ನು ಕೊಡಗು ಹೊತ್ತು ಸಾಗಿತ್ತು. 

ಮಾಮೂಲಾಗಿ ಜೂನ್‌ನಿಂದ ಸೆಪ್ಟಂಬರ್‌ವರೆಗೆ ಚಾಚುವ ಮಳೆಗಾಲದ ಬಿರುಸಿಗೆ ಬೆದರದ ಜನರನ್ನು ಈ ಬಾರಿ ಮಳೆರಾಯ ನಡುಗಿಸಿದ. ಪ್ರತಿವರ್ಷದ ಒಟ್ಟಾರೆ ಮಳೆಗಿಂತ ಈ ವರ್ಷ ಈಗಾಗಲೇ ಬಂದಿರುವ ಮಳೆಯ ಪ್ರಮಾಣವೇ ಸುಮಾರು 75%ಕ್ಕೂ ಹೆಚ್ಚು. ಆಗಸ್ಟ್‌ ತಿಂಗಳ ಎರಡನೆಯ ವಾರದಲ್ಲಿ ಕೊಡಗಿನಲ್ಲಿ ಈ ಮಳೆನೀರಿನ ಪ್ರಭಾವ ಗೋಚರಿಸಿತು. ಪ್ರವಾಹದ ಬರಸಿಡಿಲೆರಗಿತು. ಕೊಡಗಿನ ಬಹುಪಾಲು ನದಿ-ಹೊಳೆಗಳಲ್ಲಿ, ಜಲ-ನೆಲಪ್ರದೇಶಗಳಲ್ಲಿ ನೀರು ತುಂಬಿ ಹರಿದು ಅಲ್ಲಲ್ಲಿ ಮಣ್ಣು ಜರಿದು ಕೃಷಿ ಚಟುವಟಿಕೆಗಳಿಗೆ, ರಸ್ತೆ ಪ್ರಯಾಣ/ಸಾರಿಗೆಗಳಿಗೆ ಅಡ್ಡಿಯಾದರೆ, ಮಡಿಕೇರಿ ತಾಲೂಕಿನ ಬಹುಭಾಗ ಮತ್ತು ಮಡಿಕೇರಿ ತಾಲೂಕಿಗೆ ಅಂಟಿಕೊಂಡ ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲೂಕುಗಳ ಕೆಲವು ಭಾಗಗಳಲ್ಲಾದರೂ ಇಂತಹ ಪರಿಸ್ಥಿತಿ ಭಯಾನಕ ಭೂಕುಸಿತಕ್ಕೆ ಎಡೆಮಾಡಿಕೊಟ್ಟಿತು. 

ಕೊಡಗರ ಮನಸ್ಸಿನಂತೆ ಮಣ್ಣು ಕೂಡ ಮೃದು
ಕೊಡಗಿನ ಮಣ್ಣು ಇಲ್ಲಿನ ಜನರಂತೆ ಮೃದು; ಬೇಗ ಕರಗುತ್ತದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಸಂಕಟವೆಂದು, ಪರಿಸ್ಥಿತಿ ಸುಧಾರಿಸಬಹುದೆಂದು ಜನರು ನಿರೀಕ್ಷಿಸಿದರು. ಆದರೆ, ಒಂದೆರಡು ದಿನಗಳಲ್ಲೇ ಕ್ಷಣಕ್ಷಣ ಈ ರೀತಿಯ ಭೂಕುಸಿತ ಸಾಂಕ್ರಾಮಿಕವಾಗಿ ಎಕರೆಗಟ್ಟಲೆ ಕಾಫಿತೋಟಗಳು ಅಲ್ಲಲ್ಲಿ ಕುಸಿದು ಗ¨ªೆಯಂತಾದವು; ಇಲ್ಲವೇ ಶೇಕ್ಸ್‌ಪಿಯರ್‌ನ  ಮ್ಯಾಕ್‌ಬೆತ್‌ ನಾಟಕದ ಬಿರ್ನಮ್‌ ಅರಣ್ಯ ನಡೆದಾಡುತ್ತ ಬಂದಂತೆ ಚಲಿಸಿದವು. ಶ್ರೀಮಂತ-ಬಡವರೆನ್ನದೆೆ ಅಪಾರ ಸಂಖ್ಯೆಯ ಮನೆಗಳೂ, ಕಾಫಿ ಮತ್ತಿತರ ಕೃಷಿತೋಟಗಳು ಕುಸಿದು ಇಲ್ಲವೇ ಕೆಳ ಸರಿದು, ಭಾರೀ ಅನಾಹುತವನ್ನೇ ಉಂಟುಮಾಡಿದವು. ಮಡಿಕೇರಿಯಂಥ ಪುಟ್ಟ ಪಟ್ಟಣದ ಗುಡ್ಡಗಳ ಭಾಗದಲ್ಲಿ ಹಸಿರಿನ ವನಸಿರಿಯನ್ನು ನಾಶಮಾಡಿ ತಯಾರಾದ ನಿವೇಶನಗಳ‌ಲ್ಲಿ ಕಟ್ಟಲ್ಪಟ್ಟ ಸಾಕಷ್ಟು ಮನೆಗಳು ನೆಲಸಮಾಧಿಯಾದವು. 

ಮನೆಯುರಿಯುವಾಗ ಬೀಡಿ ಹಚ್ಚಿಕೊಂಡಂತೆ ಇವೆಲ್ಲದರ ನಡುವೆ ಸ್ವಾರ್ಥ, ವಂಚನೆ ಮತ್ತು ಲಾಭಕ್ಕಾಗಿ ಸುಳ್ಳುಸುದ್ದಿ, ತಪ್ಪು ಮಾಹಿತಿಗಳ ಗಣಿಯೂ ತೆರೆದಿದೆ. ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ-ಪ್ರಚಾರವಾಗುತ್ತಿರುವ ಸುದ್ದಿಯಿಂದಾಗಿ ಭೀಕರ ಪ್ರಳಯಾಂತಕ ಮಳೆಗೆ ಇಡೀ ಕೊಡಗು ತತ್ತರಿಸಿದೆಯೆಂಬುದು ಜನಜನಿತವಾಗಿದೆ. ಆದರೆ, ಕೊಡಗಿನ ಮತ್ತು ಅದರ ಮುಖ್ಯ ಪಟ್ಟಣಗಳಾದ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ, ಕುಶಾಲನಗರ, ಗೋಣಿಕೊಪ್ಪ ಮುಂತಾದ ಪಟ್ಟಣಗಳ ಹೆಚ್ಚಿನ ಭಾಗಗಳು ಇನ್ನೂ ಸುರಕ್ಷಿತವಾಗಿಯೇ ಇವೆ. ಆದರೆ, ಜನರು ತಮಗಿಷ್ಟಬಂದಂತೆ ಘಟನೆಗಳಿಗೆ ಅರ್ಥ ಕಲ್ಪಿಸುತ್ತಿದ್ದಾರೆ. ಸಂತ್ರಸ್ತರ ಕೇಂದ್ರದಲ್ಲಿ ಯಾವುದೋ ಸುದ್ದಿ ಕೈಯ್ನಾನುಕೈ ಇನ್ನೇನೋ ಆಗಿ ಬದಲಾಗಿ ಅರ್ಥಾರ್ಥ ಸಂಬಂಧವಿಲ್ಲದಂತೆ ಹಬ್ಬುತ್ತಿದೆ. ಕೆಲವೊಮ್ಮೆ ಮಾರಣಾಂತಿಕವಾಗಿಯೂ ಪರಿಣಮಿಸುತ್ತಿದೆ. ಮಾಧ್ಯಮಗಳು ಪ್ರಕಟಿಸಿದ, ಟಿವಿ ಚಾನೆಲ್‌ಗ‌ಳು ಹೊಣೆಯರಿಯದೆ ಟಿಆರ್‌ಪಿ ದರಕ್ಕಾಗಿ  ಹರಿಬಿಟ್ಟ, 24*7 ಪ್ರಸಾರ ಮಾಡುತ್ತಿರುವ ಉತ್ಪ್ರೇಕ್ಷಿತ ಹಾಗೂ ಸುಳ್ಳು ಸುದ್ದಿಗಳೂ ಇವೆ. ಇಂತಹ ಮತ್ತು ಇದಕ್ಕೂ ಮೀರಿದ ನೆರೆಯ ಕೇರಳದಲ್ಲೂ ಭಾರೀ ಪ್ರಮಾಣದ ಸಂಕಟ ಎದುರಾಗಿರುವುದರಿಂದ ಅಲ್ಲಿನ ಮತ್ತು ಕೊಡಗಿನ ಸುದ್ದಿಗಳು, ದೃಶ್ಯಾವಳಿಗಳು ಅದಲು-ಬದಲಾಗಿ ಜನರನ್ನು ಗಾಬರಿಗೊಳಿಸಿದ್ದೂ ಇದೆ. ಇದರಿಂದಾಗಿ ಹೊರಭಾಗದ ಜನರು, ಲೇಖಕರು, ಓದುಗರು ತಮಗಿಷ್ಟ ಬಂದಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

.
ಇವು ಕೆಲವೇ ದಿನಗಳ ಬೆಳವಣಿಗೆ. ಬೆಳವಣಿಗೆಯೆಂಬುದು ಒಂದು ವ್ಯಂಗ್ಯ. ಕೆಳವಣಿಗೆ ಎಂಬ ಪದವಿಲ್ಲವಲ್ಲ! ಈ ಆಘಾತ ಅರ್ಥವಾಗಬೇಕಾದರೆ ಕಾಲದಲ್ಲಿ ಹಿಂದೆ ಸರಿಯುವುದು ಅನಿವಾರ್ಯ. ಈಗ ಐದು ದಶಕಗಳ ಹಿಂದೆ ಮಡಿಕೇರಿ ಹೇಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದರೆ ಒಂದೋ ಪತ್ರಿಕೆಗಳ ಫೋಟೋಗಳನ್ನು ನೋಡಬೇಕು, ಇಲ್ಲವೇ ಆಗಿನ ಜನಪದರ ವಿವರಣೆ ಕೇಳಬೇಕು. ಇದಕ್ಕಿಂತಲೂ ಪ್ರತ್ಯಕ್ಷ ದರ್ಶನವಾಗಬೇಕಾದರೆ 1960ರ ದಶಕದ ಕನ್ನಡ ಚಲನಚಿತ್ರಗಳಲ್ಲಿ ಕೊಡ‌ಗಿನ ಮತ್ತು ವಿಶೇಷವಾಗಿ ಮಡಿಕೇರಿ, ವಿರಾಜಪೇಟೆ ಮುಂತಾದ ಪಟ್ಟಣಗಳ ದೃಶ್ಯಗಳನ್ನು ನೋಡಬೇಕು. ಆಗ ಮಡಿಕೇರಿ ನಗರವಾಗಿರಲಿಲ್ಲ. ಕಾಫಿ ತೋಟಗಳ ಸೊಗಸು, ಬೆಟ್ಟಗುಡ್ಡಗಳ ಬೆಡಗು, ನಿತ್ಯ ಹರಿದ್ವರ್ಣ ಕಾಡುಗಳ ವಿಸ್ಮಯ, ಓರೆಕೋರೆಯಾಗಿ, ಹಾವಿನಂತೆ ಹರಿವ ದಾರಿಗಳು- ಹೀಗೆ ಕೊಡಗಿನ ಅಸ್ತಿತ್ವ ಒಂದು ಕನಸು. ಅದೂ ಆಗಿನ ಕಪ್ಪುಬಿಳುಪು ಛಾಯಾಗ್ರಹಣದಲ್ಲಿ- ಸ್ವರ್ಗವೆಂದರೆ ಇನ್ನೆಲ್ಲೂ ಇರದು ಅನ್ನಿಸಬೇಕು. 

ಇನ್ನೂ ಹಿಂದೆ ಹೋಗಿ. ಛಾಯಾಗ್ರಹಣ ಅಷ್ಟಾಗಿ ಇಲ್ಲದ ಕಾಲ. ಕನ್ನಡ ಕವಿಗಳ ವಿವರಣೆಯೇ ಆಧಾರ. ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳ್ಳೋ, ಭೂಮಿ ತಬ್ಬಿದ್‌ ಮೋಡ್‌ ಇದ್ದಂಗೆ.., ನಡೆದು ನೋಡಾ ಕೊಡಗಿನ ಬೆಡಗನು… ಹೀಗೆಲ್ಲ ಕೊಡಗಿನ ವರ್ಣನೆ. ಕಾಶ್ಮೀರ ಭೂಮಿಯ ಮೇಲಣ ಸ್ವರ್ಗವಾದರೆ ಕೊಡಗು ದಕ್ಷಿಣದ ಕಾಶ್ಮೀರ. 

ಇದಕ್ಕೂ ಹಿಂದಿನ ಚರಿತ್ರೆಯನ್ನು ಹೇಳಬೇಕಾದರೆ ಬ್ರಿಟಿಷ್‌ ಕಾಲದ ಕೊಡಗೆಂಬ “ಸಿ’ ರಾಜ್ಯ ಅಥವಾ ಆಡಳಿತ ಪ್ರದೇಶವ‌ನ್ನು ನೆನಪಿಸಬೇಕು: ಅದು ಭಾರತದ ಸ್ಕಾಟ್‌ಲ್ಯಾಂಡ್‌. ಬ್ರಿಟಿಷರು ಬಿಟ್ಟುಹೋದ ಭಾರತದ ಕೊನೆಯ ಭೂಭಾಗ. ರೇಸ್‌ ಕೋರ್ಸ್‌, ಐರೋಪ್ಯ ಶೈಲಿಯ ಭಾರೀ ಬಂಗಲೆಗಳು, ಗಾಲ್ಫ್ ಮೈದಾನಗಳು, ಬೃಹತ್‌ ಕಾಫಿ ಕಂಪೆನಿಗಳು, ರಬ್ಬರ್‌ ತೋಟಗಳು- ಹೀಗೆ ಆಧುನಿಕತೆಯ ಐರೋಪ್ಯ ಹರಿಕಾರರ ಕೊಡುಗೆಯನ್ನು ಸ್ಮರಿಸುವ ಘಟಕಗಳು. 

ರಾಜರ ಕಾಲಕ್ಕೂ ಸರಿಯಬಹುದು. ಅದು ಕೊಡಗೆಂಬ ರಾಜ್ಯ. ದೇಶ ಅಂದರೂ ತಪ್ಪಾಗದು. ಅದು ಮೂಲನಿವಾಸಿಗಳ ಜನಪದ ಸಂಸ್ಕೃತಿಯ ಕಾಲ. ಕಾಲ ಅನ್ನುವುದಕ್ಕಿಂತಲೂ ಯುಗ ಅನ್ನಬಹುದೇನೋ? ಜೀವನದಿ ಕಾವೇರಿಯ ಉಗಮದ ತಲಕಾವೇರಿ, ಸಂಗಮದ ಭಾಗಮಂಡಲ, ಮಡಿಕೇರಿಯ ಓಂಕಾರೇಶ್ವರ ದೇವಾಲಯದಂತಹ ಕ್ಷೇತ್ರಗಳು, ಮಡಿಕೇರಿಯ ರಾಜಾ ಸೀಟು, ಕೋಟೆ, ಅದರೊಳಗಿನ ಅರಮನೆ ಮುಂತಾದ ಸ್ಮಾರಕಗಳು, ಬಾಸೆಲ್‌ ಮಿಶನ್‌ ಕಾಲದಿಂದಲೂ ಬಂದಿರುವ ಚರ್ಚ್‌, ನಾಲ್ಕ್ನಾಡ್‌ ಅರಮನೆ,  ವಿರಾಜಪೇಟೆಯ ಚರ್ಚ್‌,  ಹೀಗೆ ಕೊಡಗಿನ ಪ್ರೇಕ್ಷಣೀಯ ಸ್ಥಳಗಳು. 

ಒಂದು ಕಾಲಕ್ಕೆ ದೇಶದಲ್ಲಿ ಪಂಜಾಬಿನ ಅನಂತರ ಅತೀ ಹೆಚ್ಚು ಸೈನಿಕರನ್ನು ನೀಡಿದ ಹಿರಿಮೆ ಕೊಡಗಿನದ್ದು. ಪ್ರಕೃತಿಯಷ್ಟೇ ಸುಂದರ ಜನರನ್ನೂ ಹೊಂದಿದ ಜಿಲ್ಲೆ. ಕಾಫಿ, ಕಿತ್ತಳೆ, ಏಲಕ್ಕಿ, ಜೇನು ಇವನ್ನು ದೇಶ ವಿದೇಶಗಳಿಗೆ ನೀಡಬಲ್ಲ ಸಾಮರ್ಥ್ಯದ ಪ್ರದೇಶ.

ನಾಗರೀಕತೆ ಬೆಳೆದಂತೆ ಬ್ರಿಟಿಷರು ಬಿಟ್ಟು ಹೋಗಿ, ಅನಂತರ ಆಗಿನ ಮೈಸೂರು ರಾಜ್ಯದೊಂದಿಗೆ ವಿಲೀನ ಹೊಂದಿ ಜಿಲ್ಲೆಯ ಸ್ಥಾನಕ್ಕಿಳಿದು ನಿಧಾನವಾಗಿ ಕಂದು ಬಂಗಾರಕ್ಕೂ ಕಿಲುಬು ಹಿಡಿದು, ಏಲಕ್ಕಿಗೆ ಕಟ್ಟೆ ಬಡಿದು, ಜೇನು ಆರತೊಡಗಿ, ಕಿತ್ತಳೆ ತನ್ನ ಹೊಳಪನ್ನು ಕಳೆದುಕೊಂಡು, ವ್ಯವಹಾರಕ್ಕೆ ನೆರೆಯ ಮಂಗಳೂರು, ಮೈಸೂರನ್ನು ಆಶ್ರಯಿಸಬೇಕಾಗಿ ಬಂದ ಪರಿವರ್ತನೆ ವಿಷಾದಕರ. ಬಹುಪಾಲು ಇಲ್ಲಿನ ಜನರು ಮೈಸೂರು ಬೆಂಗಳೂರು ಸೇರಿ ಇಲ್ಲಿ ಮಿಶ್ರ ಸಂಸ್ಕೃತಿ ಬೆಳೆದು ಬಂದದ್ದು ಇತ್ತೀಚೆಗಿನ ಬೆಳವಣಿಗೆ.  ಇಷ್ಟೆಲ್ಲದರ ನಡುವೆಯೂ ಹೊರಗಿನ ಜನರಿಗೆ ಕೊಡಗು ವಿಸ್ಮಯವೇ. ಬೆಳೆಯಲ್ಲಿ ಖೋತಾ ಆದ ಆದಾಯವನ್ನು  ಸರಿದೂಗಿಸಲು ಪ್ರವಾಸೋದ್ಯಮಕ್ಕೆ ಇಲ್ಲಿನ ಜನರು ವಾಲಿದರು. ನಿಸರ್ಗದ ಹೆಸರಿನಲ್ಲಿ ಪ್ರಕೃತಿಯನ್ನು ಧಿಕ್ಕರಿಸುವ ಹೋಮ್‌ಸ್ಟೇಗಳು, ರೆಸಾರ್ಟ್‌ಗಳು ಎಲ್ಲೆಂದರಲ್ಲಿ ಹುಟ್ಟಿಕೊಂಡವು; ಹೊಟೇಲುಗಳು, ಲಾಡ್ಜ್ಗಳೂ ತುಂಬಿದವು. ದೂರದೂರಿನ ಹೈಫೈ ಮತ್ತು ಹೈಟೆಕ್‌ ಮಂದಿಗೆ ಮಾತ್ರವಲ್ಲ, ಪ್ರವಾಸಿ ಸಮೂಹಕ್ಕೂ ವಾರಾಂತ್ಯಕ್ಕೆ ಕೊಡಗು ಅಚ್ಚುಮೆಚ್ಚಿನ ಬೀಡು. ಮಡಿಕೇರಿಯ ಜನಸಂಖ್ಯೆ ಸುಮಾರು 35 ಸಾವಿರವಾದರೆ, ವೀಕೆಂಡ್‌ ಸುಮಾರು 50-60 ಸಾವಿರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೆಲವು ವರ್ಷಗಳ ಹಿಂದೆ ಮಳೆಗಾಲ ಪ್ರವಾಸೋದ್ಯಮಕ್ಕೆ ಶೂನ್ಯಮಾಸವಾದರೆ, ಇತ್ತೀಚೆಗಿನ ವರ್ಷಗಳಲ್ಲಿ ಕೊಡಗು ಸರ್ವಋತು ಪ್ರವಾಸಿ ಕ್ಷೇತ್ರ. ರಸ್ತೆಗಳಲ್ಲಿ ಮಳೆಗೆ ಬಣ್ಣದ ಕೊಡೆ, ಉಡುಪುಗಳೊಂದಿಗೆ ಕುಣಿದಾಡುವ ಯುವಮೇಳ. ಎಲ್ಲರಿಗೂ ಭರ್ಜರಿ ವ್ಯಾಪಾರ. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಪ್ರವಾಸಿಗರನ್ನು ಹೊಂದಿದ ಹೆಗ್ಗಳಿಕೆ.   
.
ಈ ದುರಂತಕ್ಕೆ ಕಾರಣಗಳೇನು? ದೇವರ ಶಾಪವೆಂದು ಸುಲಭವಾಗಿ ಹೇಳುವುದು ಈ ಮಣ್ಣಿನ ಗುಣ. ಇದು ಮಾಮೂಲು ವ್ಯಾವಹಾರಿಕ ಪಲಾಯನವಾದೀ ಜೀವನಶೈಲಿಯಾದರೆ, ವೈಜ್ಞಾನಿಕ ಕಾರಣಗಳು ಬೇರೆಯೇ ಇವೆ. ಇದಕ್ಕೆ ಸಮಾನಾಂತರವಾಗಿ ಕೊಡಗಿನಲ್ಲಿ ಅರಣ್ಯಹನನ, ಗಣಿಗಾರಿಕೆ ಇವು ಅವ್ಯಾಹತವಾಗಿ ನಡೆಯುತ್ತಲೇ ಇದ್ದವು. ಇವಕ್ಕೆ ಸಾಮಾನ್ಯ ಜನರು ಮತ್ತು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದರೆ ನಮ್ಮ ಸಮಾಜದ ಮುಖ್ಯ ವಾಹಿನಿಯಲ್ಲಿರುವ ಭ್ರಷ್ಟರು, ವ್ಯಾಪಾರಿಗಳು, ಮರಗಳ್ಳರು, ಮತಗಳ್ಳ ರಾಜಕಾರಣಿಗಳು ಈ ಪ್ರಕೃತಿ ತಮ್ಮ ತತ್ಕಾಲೀನ ಅಗತ್ಯಗಳಿಗಾಗಿಯೇ ಸೃಷ್ಟಿಯಾಗಿದೆಯೋ ಎಂಬಂತೆ ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪತ್ತನ್ನು ಲೂಟಿಮಾಡುತ್ತಲೇ ಇದ್ದಾರೆ. ಕೃಷಿಭೂಮಿಯನ್ನು ಕೃಷ್ಯೆàತರ ಬಳಕೆಗೆ ಪರಿವರ್ತಿಸುವುದು ಒಂದು ಭೂಗತ ಜಾಲದಂತಿದೆ. ಭೂಕುಸಿತಕ್ಕೆ ಇದೇ ಮುಖ್ಯ ಕಾರಣವೆಂಬುದನ್ನು ಸಾಬೀತು ಮಾಡಿದೆ.

ಕೊಡಗು ಪಶ್ಚಿಮ ಘಟ್ಟದ ಭಾಗ. ಇದು ಗುಜರಾತಿನಲ್ಲಿ ಹರಿಯುವ ತಪತಿ ನದಿಯ ದಕ್ಷಿಣಕ್ಕಿರುವ ಸೋನ್‌ಘಡ್‌ನಿಂದ ದಕ್ಷಿಣದ ಕನ್ಯಾಕುಮಾರಿಯ ವರೆಗೆ ಸುಮಾರು 1600 ಕಿ.ಮೀ. ದೂರಕ್ಕೆ 1,60,000 ಚದರ ಕಿ.ಮೀ. ವಿಸ್ತೀರ್ಣದಲ್ಲಿರುವ ಪರ್ವತ ಪ್ರದೇಶ. ಪಶ್ಚಿಮ ಘಟ್ಟ ಪ್ರದೇಶವು ಅಪಾರ ಜೀವ ವೈವಿಧ್ಯವನ್ನು ಹೊಂದಿದ್ದು ವಿಶ್ವಸಂಸ್ಥೆಯಿಂದ ಪಾರಂಪರಿಕ ತಾಣವೆಂದು ಘೋಷಿಸಲ್ಪಟ್ಟ ಸೂಕ್ಷ್ಮ ಪರಿಸರಜಾಲ. ಇದು ಸಹ್ಯಾದ್ರಿಯಿಂದ ಕುದುರೆಮುಖ ಮುಂತಾದ ಬೆಟ್ಟರಾಶಿಯನ್ನು ದಾಟಿ ದಕ್ಷಿಣಕ್ಕೆ ವ್ಯಾಪಿಸಿ ಕೇರಳದ ವರೆಗೂ ಚಾಚಿಕೊಂಡ ವೈಶಿಷ್ಟ್ಯಪೂರ್ಣ ಭೂಸಿರಿ. ವಿಶ್ವದಲ್ಲೇ ಅಪರೂಪವೆನ್ನಬಹುದಾದ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಬಚ್ಚಿಟ್ಟುಕೊಂಡ ಸಮೃದ್ಧ ನೆಲೆ. ಮುಂಗಾರು ಮಳೆಗೆ ಕಾರಣವಾದ ಪ್ರಾಕೃತಿಕ ಪರದೆ. ದೇಶದ ಸುಮಾರು 40% ಜಲಮೂಲ. ಅಭಿವೃದ್ಧಿಯ ಹೆಸರಿನಲ್ಲಿ, ನೆಪದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಇದರ ರಕ್ಷಣೆಗಾಗಿ ಬಹಳ ವರ್ಷಗಳಿಂದ ನಡೆಯುವ ಚಳುವಳಿಗಳನ್ನು ಗಮನಿಸಿ ಕೇಂದ್ರ ಸರಕಾರವು ಪ್ರೊ. ಮಾಧವ ಗಾಡ್ಗಿಲ್‌ ಅವರ ನೇತೃತ್ವದಲ್ಲಿ “ಗಾಡ್ಗಿಲ್‌ ಸಮಿತಿ’ ಯೆಂದೇ ಅನಂತರ ಹೆಸರಾದ ಸಮಿತಿಯೊಂದನ್ನು ರಚಿಸಿತು. ಅವರು 2012ರಲ್ಲಿ ತಮ್ಮ ವರದಿಯನ್ನು ನೀಡಿದರು. ಅದರಲ್ಲಿ ಈ ಘಟ್ಟ ಪ್ರದೇಶಗಳಲ್ಲಿ ಮರಕಡಿಯುವುದನ್ನು ಮತ್ತು ಗಣಿಗಾರಿಕೆಯನ್ನು ಹಾಗೂ ಅರಣ್ಯೇತರ ಚಟುವಟಿಕೆಗಳನ್ನು ಶಾಶ್ವತವಾಗಿ ನಿಯಂತ್ರಿಸಬೇಕೆಂಬ ಶಿಫಾರಸ್ಸು ಇತ್ತು. ಆದರೆ, ನಮ್ಮ ದೇಶದ, ಸಮಾಜದ ಒಳಿತು-ಕೆಡುಕುಗಳನ್ನು ರಾಜಕೀಯ ನಾಯಕರು ಮತ್ತು ಅವರೆದುರು ಶರಣಾಗುವ ಅಧಿಕಾರಶಾಹಿ ನಿಯಂತ್ರಿಸುವುದರಿಂದಾಗಿ ಈ ವರದಿ ಕಸದ ಬುಟ್ಟಿ ಸೇರಿ ಅದರ ಜಾಗದಲ್ಲಿ ಬಾಹ್ಯಾಕಾಶ ವಿಜ್ಞಾನಿ ಡಾ. ಕಸ್ತೂರಿ ರಂಗನ್‌ ಸಮಿತಿಯನ್ನು ರಚಿಸಲಾಯಿತು. ಅವರೂ ತಮ್ಮ ವರದಿಯನ್ನು 2013ರಲ್ಲಿ ನೀಡಿದರು. ಇದು ಗಾಡ್ಗಿಲ್‌ ವರದಿಯನ್ನು ಸಾಕಷ್ಟು ಸಡಿಲಗೊಳಿಸಿತ್ತಾದರೂ ಒಂದಷ್ಟು ಮುನ್ನೆಚ್ಚರಿಕೆಯನ್ನು ವಿಧಿಸಿತ್ತು. (ಗಾಡ್ಗಿಲ್‌ ಸಮಿತಿಯು ಪಶ್ಚಿಮ ಘಟ್ಟದ 64% ಭೂಪ್ರದೇಶಗಳನ್ನು ಕಾಪಾಡಿಕೊಡು ಬರುವಂತೆ ಹೇಳಿದರೆ ಕಸ್ತೂರಿ ರಂಗನ್‌ ಸಮಿತಿಯು ಈ ಪ್ರಮಾಣವನ್ನು 37%ಕ್ಕೆ ಇಳಿಸಿತ್ತು) ಇದರಡಿ ಕೊಡಗಿನ ಅನೇಕ ಗ್ರಾಮಗಳು (ಮತ್ತು ನೆರೆಯ ಮಲೆನಾಡಿನ ಮತ್ತು ಕರಾವಳಿಯ ಕೆಲವು ಗ್ರಾಮಗಳು) ನಿಯಂತ್ರಣಕ್ಕೊಳಪಡುತ್ತಿದ್ದವು. 

ಗಾಡ್ಗಿಲ್‌ ಬಿಡಿ, ಕಸ್ತೂರಿರಂಗನ್‌ ವರದಿ ಜಾರಿಗೆ ಬಂದರೂ ಇಲ್ಲಿನ ಮರವ್ಯಾಪಾರ, ಗಣಿಗಾರಿಕೆ, ಕೃಷಿಭೂಮಿಯ ಪರಿವರ್ತನೆ, ಹೋಮ್‌ಸ್ಟೇ, ರೆಸಾರ್ಟ್‌ ಮುಂತಾದ ಅನೇಕ ಔದ್ಯಮಿಕ ಚಟುವಟಿಕೆಗಳು ನಿಂತುಹೋಗುತ್ತವೆ. ಆದ್ದರಿಂದ ರಾಜಕಾರಣಿಗಳು ಮತ್ತು ಅವರೊಡನೆ ಸೇರಿಕೊಂಡ ಎಲ್ಲರೂ ಪಕ್ಷಭೇದ ಮರೆತು ಒಕ್ಕೊರಲಿನಿಂದ ಇದನ್ನೂ ವಿರೋಧಿಸಿ¨ªಾರೆ. ಸರಕಾರದ ಕಸದ ಬುಟ್ಟಿ ಸಾಕಷ್ಟು ದೊಡ್ಡದಿರುವ ಸದ್ಯದ ಸ್ಥಿತಿಯಲ್ಲಿ ಈ ವರದಿಯೂ ಅನುಷ್ಠಾನಗೊಳ್ಳುವುದು ಕನಸೇ ಸರಿ. ಇಂತಹ ವಾತಾವರಣದಲ್ಲಿ ಕೊಡಗಿನಲ್ಲಾದ ಆಧುನಿಕ ಬೆಳವಣಿಗೆಗಳು ವಿನಾಶವನ್ನು ಕೈತಟ್ಟಿ ಕರೆದಿವೆ. ಭೂಮಿ ಕುಸಿಯುವುದು ಸಹಜವೇ. ಜೊತೆಗೆ ಭೂಮಿ ತನ್ನ ಮೇಲಣ ಭಾರವನ್ನು ಕಳೆದುಕೊಳ್ಳುವ ಪ್ರಯತ್ನದ ಫ‌ಲಿತಾಂಶಗಳಲ್ಲಿ ಕೊಡಗಿಗೆ ಸಂಭವಿಸಿದ ಈ ದಾರುಣ ದುರಂತವೂ ಒಂದು. 

ಮನುಷ್ಯ ಇತಿಹಾಸದಿಂದ ಪಾಠ ಕಲಿಯುವುದಿಲ್ಲ. ತಾನು ಮತ್ತು ತನ್ನ ಆಸಕ್ತಿಗಳೇ ಶ್ರೇಷ್ಠ ಮತ್ತು ಶಾಶ್ವತವೆಂದು ತಿಳಿಯುತ್ತಾನೆ. ಈ ಧೋರಣೆ ಬದಲಾಗುವವರೆಗೂ ಭೂಮಿಗೀತದೊಂದಿಗೆ ಅಳುವವರು ಅಳುತ್ತಲೇ ಇರುತ್ತಾರೆ. ಪರಿಸ್ಥಿತಿ ಮತ್ತೆ ಸಹಜ ಸ್ಥಿತಿಗೆ ಮರಳಬಹುದೆಂಬ ಹುಸಿಗ‌ನಸಿನೊಂದಿಗೆ ಬದುಕುತ್ತಾರೆ.                          

ಇಲ್ಲೆಲ್ಲೋ ಕುಸಿದಿರುವ ಮಣ್ಣೊಳಗೆ 
ಅಬ್ದುಲ್‌ ರಶೀದ್‌

ಇಲ್ಲೆಲ್ಲೋ ಕುಸಿದಿರುವ ಮಣ್ಣೊಳಗೆ ನೀನು ನಲುಗುತ್ತಿರಬಹುದೆಂದು ಹುಡುಕುತ್ತ ಬಂದಿರುವೆ ನಾನು. ಇಲ್ಲೆಲ್ಲೋ ಕಾವಳದಲ್ಲಿ ಮಂಕು ಕವಿದ ಬೆಳಕ ಕೊಂಬೆಯಲ್ಲಿ ಮಿನುಗುತ್ತಿರುವ ಒಂದು ಒಂಟಿ ಮಿಂಚು ಹುಳ, ದಿಕ್ಕು ಕೆಟ್ಟು ಬೆಳಗೆಂದು ಭ್ರಮಿಸಿ ರೆಕ್ಕೆ ಬಡಿಯುತ್ತಿರುವ ಒಂಟಿ ಪುಟ್ಟ ಹಕ್ಕಿ, ಇಲ್ಲೆಲ್ಲೋ ಬೆಚ್ಚನೆಯದೊಂದು ಅಗ್ಗಿಷ್ಟಿಕೆಯಿರಬಹುದೆಂದು ಕುಂಟುಗಾಲಲ್ಲಿ ಪಾದಗಳ ಸವೆಸುತ್ತಿರುವ ಒಂದು ಕಾಡುಮೃಗದಂತೆ ನಿರುಕಿಸುತ್ತಿರುವ ನನ್ನ ಹೃದಯ.

ಇಲ್ಲೆಲ್ಲೋ ಕುಸಿದ ಪುರಾತನ ವೃಕ್ಷವೊಂದರ ಪಾಚಿಗಟ್ಟಿದ ಪೊಟರೆಯಲ್ಲಿ ಬಹಳ ಹಿಂದೆಯೇ ಹೂಬಿಟ್ಟು ಈಗ ಬಿಳಿಚಿಕೊಂಡಿರುವ ಸೀತಾಳೆಯ ಕೊಂಬೆಯಡಿಯಲ್ಲಿ ಇದೀಗ ತಾನೇ ಕೈಗೆ ಕೈಕೋಸಿ ನಡೆದು ಹೋಗಿರಬಹುದಾದ ನಮ್ಮಿಬ್ಬರ ತುಂಟ ಕೇಕೆ, ಬಿಡು ಬೀಸಾದ ತಮಾಷೆಯ ಮಾತುಗಳು. ಇಲ್ಲೆಲ್ಲೋ ಹಸಿರು ಭತ್ತದ ಸಸಿಗಳ ತೆವರಿಯ ಮೇಲೆ ಹಂಸದಂತೆ ತೂಗುತ್ತ ನಡೆಯುತ್ತಿದ್ದ ತುಂಟ ಮಗುವಿನಂತಹ ನಿನ್ನ ನಡುವನ್ನು ಬಾಲಕನ ಹಾಗೆ ತೂಗಿ ಅಳೆದು ನೋಡುತ್ತ ಒದ್ದೆ ಕಲ್ಲಮೇಲೆ ಕುಳಿತಿದ್ದ ನಾನು. 

ಕುಸಿದ ನೆಲದಲ್ಲಿ ತೆರೆದುಕೊಂಡಿರಬಹುದಾದ ನಿನ್ನ ಕಣ್ಣಾಲಿಗಳನ್ನು ಹುಡುಕುತ್ತ ಬಂದಿರುವೆ ಈ ಹೊತ್ತು. ಏನೂ ಇಲ್ಲದ  ಏನೂ ಕಾಣದ ಬರಿಯ ಕೇವಲ ಸಲ್ಲದ ಸಂಗತಿಗಳ ಸುತ್ತ ಲೋಕ ಸುತ್ತುತ್ತಿರುವ ಈ  ಹೊತ್ತು ಬೃಹತ್‌ ಸತ್ಯವೆಂಬಂತೆ ಕುಸಿದು ಮಲಗಿರುವ ಈ ಮೃತ್ತಿಕೆಯ 
ಹಾಸಿನಡಿಯಲ್ಲಿ ನಲುಗಿರುವ ನಿನ್ನ ಕಣ್ಣ ಪಕಳೆಗಳನ್ನು  ನೇವರಿಸಲು ಹುಡುಕುತ್ತ ಅಕಾಲ ವೃದ್ಧನಂತಾಗಿ ಹೋಗಿರುವ ನಾನು.

ಬಾಲಸುಬ್ರಹ್ಮಣ್ಯ ಕಂಜರ್ಪಣೆ
ಫೊಟೊಗಳು : ಎಚ್‌. ಟಿ. ಅನಿಲ್‌

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.