ಉನ್ನತ ಶಿಕ್ಷಣದ ಬಾಗಿಲು ತೆರೆದ ಫಿಲೋಮಿನಾ


Team Udayavani, Sep 2, 2018, 6:00 AM IST

7.jpg

ನನ್ನನ್ನು ಪುತ್ತೂರು ಬೋರ್ಡ್‌ ಹೈಸ್ಕೂಲಿಗೆ ಸೇರಿಸುವಾಗ ನನ್ನ ಹೆಸರಿನ ಮೊದಲ ಅಕ್ಷರಗಳಾಗಿ ಅಪ್ಪ ಸೇರಿಸಿದ್ದು “ಬಿ.ಎ.’ ಎಂದು. ಅದು ನನ್ನ ಅಮ್ಮನ ಕುಟುಂಬದ ಮನೆ (ಬೆಳಿಯೂರುಗುತ್ತು) ಮತ್ತು ಅಪ್ಪನ ಮನೆ (ಅಗ್ರಾಳ)ಗಳ ಹೆಸರುಗಳ ಮೊದಲ ಇಂಗ್ಲಿಷ್‌ ಅಕ್ಷರಗಳು. ಇದಕ್ಕೆ ಮುಖ್ಯ ಕಾರಣ ಅಪ್ಪ ಹೇಳಿದ್ದು “ನಿನಗೆ ಬಿ.ಎ. ಪದವಿಯ ಶಿಕ್ಷಣ ಕೊಡಿಸುವ ಶಕ್ತಿ, ಭರವಸೆ ನನಗೆ ಇರಲಿಲ್ಲ. ಆದ್ದರಿಂದ ದಾಖಲೆಗಳಲ್ಲಿ ಬರೆಯುವಾಗ ಇನಿಶಿಯಲ್ಸ್‌ ಕೊನೆಗೆ ಬರುವ ಕಾರಣ ವಿವೇಕ ರೈ ಬಿ. ಎ. ಎಂದು ಬರೆಯಬಹುದು. ಹಾಗಾಗಿ ಪದವಿ ಶಿಕ್ಷಣ ಇಲ್ಲದಿದ್ದರೂ ಹೆಸರಲ್ಲಾದರೂ “ಬಿ.ಎ.’ ಇರಲಿ ಎಂದು!’ ಆದರೆ ಆ ತಂತ್ರ ಫ‌ಲಿಸಲಿಲ್ಲ. ನಾನು ಬಿ.ಎಸ್ಸಿ. ಪದವಿ ಪಡೆದೆ ; ಬಿ.ಎ. ಅಕ್ಷರಗಳು ಹೆಸರ ಮೊದಲಲ್ಲೇ ಉಳಿದವು !

ಪುತ್ತೂರಿನಲ್ಲಿ ಬಿಡಾರ ಮಾಡಿ ನನ್ನ ಎಸ್‌.ಎಸ್‌.ಎಲ್‌.ಸಿ. ಮುಗಿಸುವಾಗ ನನ್ನ ತಮ್ಮ ಉಲ್ಲಾಸ ಹೈಸ್ಕೂಲಿನ ಎಂಟನೆಯ ತರಗತಿ ಮುಗಿಸಿದ್ದ; ಇನ್ನೂ ಎರಡು ವರ್ಷ ಅಲ್ಲಿ ಕಲಿಯಲಿಕ್ಕಿತ್ತು. ನನ್ನ ಮುಂದಿನ ಶಿಕ್ಷಣಕ್ಕೆ ಪುತ್ತೂರಿನಲ್ಲೇ ಅವಕಾಶದ ಬಾಗಿಲು ತೆರದಿತ್ತು. ಪುತ್ತೂರಿನ ದರ್ಬೆಯಲ್ಲಿ ಚಿಗುರೊಡೆದಿತ್ತು ಸೈಂಟ್‌ ಫಿಲೋಮಿನಾ ಕಾಲೇಜು. 

ನನ್ನ ಪ್ರಾಥಮಿಕ ಶಿಕ್ಷಣದ ಪುಣ್ಯಕ್ಕೆ ಮಣಿಲ ಶಾಸ್ತ್ರಿ ಕುಟುಂಬದವರು ಕಾರಣರಾದರೆ, ನಾನು ಕಾಲೇಜು ಎಂಬ ಕನಸಿನ ಲೋಕಕ್ಕೆ ಒಳಹೋಗುವ ಭಾಗ್ಯಕ್ಕೆ ಕಾರಣರಾದವರು ಮೊನ್ಸೆಂಜರ್‌ ಆಂಟನಿ ಪತ್ರಾವೊ. ಅವರು ಪುತ್ತೂರಿನ ದಭೆìಯಲ್ಲಿ 1958ರಲ್ಲಿ ಸೈಂಟ್‌ ಫಿಲೋಮಿನಾ ಕಾಲೇಜನ್ನು ಸ್ಥಾಪಿಸುವ ಕಾಲಕ್ಕೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪದವಿ ಶಿಕ್ಷಣವನ್ನು ಕೊಡುತ್ತಿದ್ದ ಕಾಲೇಜುಗಳು ಕೇವಲ ನಾಲ್ಕು. ಮಂಗಳೂರಿನಲ್ಲಿ ಮೂರು: ಸರಕಾರಿ ಕಾಲೇಜು, ಸೈಂಟ್‌ ಅಲೋಸಿಯಸ್‌ ಕಾಲೇಜು, ಸೈಂಟ್‌ ಆಗ್ನೆಸ್‌ ಕಾಲೇಜು. ಉಡುಪಿಯಲ್ಲಿ ಒಂದು: ಎಂ.ಜಿ.ಎಂ. ಕಾಲೇಜು. ಮಂಗಳೂರಿನಿಂದ ದಕ್ಷಿಣ ಭಾಗದಲ್ಲಿ ಈಗಿನ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಒಂದೇ ಒಂದು ಕಾಲೇಜು ಇರಲಿಲ್ಲ. 1963ರಲ್ಲೂ ಮಂಗಳೂರಿನಿಂದ ದಕ್ಷಿಣದಲ್ಲಿ ಇದ್ದದ್ದು ಪುತ್ತೂರಿನ ಫಿಲೋಮಿನಾ ಕಾಲೇಜು ಮಾತ್ರ. ನನ್ನ ಹಾಗೆ ಹೈಸ್ಕೂಲು ಮುಗಿಸಿ ಮನೆಯಲ್ಲಿ ಕುಳಿತುಕೊಳ್ಳಬೇಕಾಗಿದ್ದ ಸಾವಿರಾರು ಮಂದಿಗೆ ಕಾಲೇಜು ಶಿಕ್ಷಣದ ಭಾಗ್ಯದ ಬಾಗಿಲು ತೆರೆದ ಫಿಲೋಮಿನಾ ಕಾಲೇಜು ನನ್ನ ಶೈಕ್ಷಣಿಕ ಬದುಕಿನ ಸ್ವರ್ಗದ ಹೆಬ್ಟಾಗಿಲು. 

ಫಿಲೋಮಿನಾ ಕಾಲೇಜು-ಶೈಕ್ಷಣಿಕ ರಂಗಭೂಮಿ
ನಾನು ಸೈಂಟ್‌ ಫಿಲೋಮಿನಾ ಕಾಲೇಜನ್ನು ಸೇರಿದ್ದು ಜೂನ್‌ 1963ರಲ್ಲಿ. ಒಂದು ವರ್ಷದ ಪಿಯುಸಿ ಮತ್ತು ಮೂರು ವರ್ಷದ ಬಿ.ಎಸ್ಸಿ. ಮುಗಿಸಿ ಪದವಿ ಪಡೆದು ಕಾಲೇಜಿನಿಂದ ಹೊರಗೆ ಬಂದದ್ದು ಜೂನ್‌ 1967ರಲ್ಲಿ. ನಾಲ್ಕು ವರ್ಷಗಳ ಕಾಲ ಗಂಭೀರ ವಿದ್ಯಾರ್ಥಿಜೀವನ ನಡೆಸಿದ ನನ್ನ ಆ ಕಾಲೇಜು ಅನೇಕ ಬಗೆಯ ಪಾಠಗಳನ್ನು ಕಲಿಸಿ ಹುಡುಗನಾದ ನನ್ನನ್ನು ಸ್ವತಂತ್ರವಾಗಿ ಯೋಚಿಸಲು, ಸ್ವಾವಲಂಬಿಯಾಗಿ ಬದುಕಲು ಅಣಿಗೊಳಿಸಿದ ಶೈಕ್ಷಣಿಕ ರಂಗಭೂಮಿ. ದೊಡ್ಡ ಕಟ್ಟಡ, ಕಠಿಣ ಶಿಸ್ತಿನ ವಾತಾವರಣ, ಗಂಭೀರ ಮುಖಮುದ್ರೆಯ ಅಚ್ಚುಕಟ್ಟಾದ ವೇಷಭೂಷಣಗಳ ಉಪನ್ಯಾಸಕರು, ನಾನು ಕಂಡರಿಯದ ಅಪರಿಚಿತ ಸಾಧನಗಳ ಪ್ರಯೋಗಶಾಲೆಗಳು, ಎಲ್ಲಕ್ಕಿಂತಲೂ ಹೆಚ್ಚಾಗಿ ಇಂಗ್ಲಿಶ್‌ಮಯವಾದ ಆವರಣ-ಆರಂಭದಲ್ಲಿ ನನ್ನಲ್ಲಿ ಅಳುಕು ಆತಂಕವನ್ನು ಉಂಟುಮಾಡಿತ್ತು. ಕನ್ನಡದಲ್ಲೇ ಹೈಸ್ಕೂಲುವರೆಗೆ ಕಲಿತ ನನಗೆ ಇಂಗ್ಲಿಷ್‌ನಲ್ಲಿ ನಡೆಯುವ ಪಾಠಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎನ್ನುವ ಭಯ ಸಹಜವಾಗಿತ್ತು.

ಆಗ ಸೈಂಟ್‌ ಫಿಲೋಮಿನಾ ಕಾಲೇಜಿನ ಪ್ರಿನ್ಸಿಪಾಲ್‌ ಆಗಿ ಇದ್ದವರು ಫಾ. ಎಫ್.ಪಿ. ಸೆರಾವೊ. ಆಜಾನುಬಾಹು ದೇಹ, ದುಂಡು ಮುಖ, ದಟ್ಟವಾದ ಬಾಚಿದ ತಲೆಕೂದಲು, ಶ್ವೇತವರ್ಣ, ಗಂಭೀರ ಮುಖ: ಇದು ಸೆರಾವೊ ಅವರ ಬಾಹ್ಯ ಸ್ವರೂಪ. ಫಿಲೋಮಿನಾ ಕಾಲೇಜಿನ ಆರಂಭದಿಂದ ಶಿಸ್ತು, ಶೈಕ್ಷಣಿಕ ಅಭಿವೃದ್ಧಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಎನ್‌ಸಿಸಿ, ಉತ್ತಮ ಗುಣಮಟ್ಟದ ಪ್ರಯೋಗಾಲಯಗಳು, ಸುಸಜ್ಜಿತ ಗ್ರಂಥಾಲಯ- ಹೀಗೆ ಕಾಲೇಜು ಆರಂಭವಾದ ಕೆಲವೇ ವರ್ಷಗಳಲ್ಲಿ ಸರ್ವಾಂಗೀಣ ಸ್ವಾಯತ್ತೆಯ ಸೌಕರ್ಯಗಳನ್ನು ಹೊಂದುವಲ್ಲಿ ಫಾ. ಸೆರಾವೊ ಅವರ ಕರ್ಣಧಾರತ್ವ ಕೆಲಸಮಾಡಿದೆ. ಅವರ ಮಾನವೀಯ ಮುಖವನ್ನು ನಾನು ಕಂಡಿದ್ದೇನೆ, ಅದರ ಪ್ರಯೋಜನವನ್ನು ಪಡೆದಿದ್ದೇನೆ. ನನಗೆ ಕೇಂದ್ರ ಸರಕಾರದ ಲೋನ್‌ ಸ್ಕಾಲರ್‌ಶಿಪ್‌ನ್ನು ಮೂರು ವರ್ಷಗಳ ಕಾಲ ಕೊಡಿಸಲು ಶಿಫಾರಸು ಮಾಡಿದ್ದು ಪ್ರಿನ್ಸಿಪಾಲ್‌ ಸೆರಾವೊ. ಅದೇ ರೀತಿ ಅವರು ನನಗೆ ಶಿಕ್ಷಣದ ಉದ್ದಕ್ಕೂ ಫ್ರೀಶಿಪ್‌ನೂ° ಕೊಡಮಾಡಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಜಾತಿಮತಭೇದ ಇಲ್ಲದೆ ಸಹಾಯಹಸ್ತ ನೀಡುತ್ತಿದ್ದ ಫಾ. ಸೆರಾವೊ ಅವರು ನಿವೃತ್ತರಾದ ಬಳಿಕ ಸಾಮಾನ್ಯರಂತೆ ಮಂಗಳೂರಿನ ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ಅವರನ್ನು ಕಂಡು ಮಾತಾಡಿದ ನೆನಪು ಜೀವಂತವಾಗಿದೆ. 

ಪಿಯುಸಿಯಲ್ಲಿ ನಮಗೆ ಇಂಗ್ಲಿಷ್‌ ಪಾಠ ಮಾಡಿದವರು ಏಕಾಂಬರಂ. ಆಗಿನ ಬಹುತೇಕ ಉಪನ್ಯಾಸಕರು ಸೂಟ್‌ ಧರಿಸುತ್ತಿದ್ದರು ಅಥವಾ ಟೈ ಕಟ್ಟಿಕೊಂಡು ಅಚ್ಚುಕಟ್ಟಾಗಿ ಕ್ಲಾಸಿಗೆ ಬರುತ್ತಿದ್ದರು. ಸೂಟುಧಾರಿಯಾಗಿದ್ದ ಏಕಾಂಬರಂ ನಮಗೆ ಡಿಯರ್‌ ಡಿಪಾರ್ಟೆಡ್‌ ನಾಟಕ ಪಾಠಮಾಡಿದಂತೆ ನೆನಪು. ಅವರ ಇಂಗ್ಲಿಶ್‌ ಪಾಠ ಬಹಳ ಉನ್ನತ ಮಟ್ಟದಲ್ಲಿತ್ತು. ಮೊದಲನೆಯ ಮತ್ತು ಎರಡನೆಯ ಬಿ.ಎಸ್ಸಿ.ಯಲ್ಲಿ ನನಗೆ ಇಂಗ್ಲಿಷ್‌ ಬೋಧಿಸಿದ ಅಧ್ಯಾಪಕರು ಫಾ. ಹೆನ್ರಿ ಕ್ಯಾಸ್ಟಲಿನೋ, ಯು.ಎಲ್‌. ಭಟ್‌ ಮತ್ತು ಸಂಪಂಗಿ. ಕುದ್ದಣ್ಣಾಯರು ಕೂಡ ಇದ್ದರು. ಅವರು ನಮಗೆ ಪಾಠ ಮಾಡಿದ ನೆನಪಿಲ್ಲ. ಕ್ಯಾಸ್ಟಲಿನೋ ನಮಗೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಅವರು ಆಗ ಹಾಸ್ಟೆಲಿನ ವಾರ್ಡನ್‌ ಕೂಡ ಆಗಿದ್ದರು. ಅವರದು ಲವಲವಿಕೆಯ ವ್ಯಕ್ತಿತ್ವ. ನಮಗೆ ಅವರು ಪಾಠ ಮಾಡಿದ್ದು ಶೇಕ್ಸ್‌ಪಿಯರ್‌ನ ಕಿಂಗ್‌ ಲಿಯರ್‌ ನಾಟಕವನ್ನು. ಅವರು ತರಗತಿಯಲ್ಲಿ ಓಡಾಡುತ್ತ¤, ಉಪಕಥೆಗಳನ್ನು ಹೇಳುತ್ತ¤ ತಮ್ಮ ಅನುಭವದ ಕೆಲವು ಘಟನೆಗಳನ್ನು ಉದಾಹರಿಸುತ್ತ ಇಂಗ್ಲಿಶ್‌ ಓದಿನ ಬಿಗಿಯನ್ನು ಸಡಿಲಮಾಡುತ್ತಿದ್ದರು. ಅವರ ಇಂಗ್ಲಿಶ್‌ ಕ್ಲಾಸಿನಲ್ಲಿ ತುಳು ಶಬ್ದಗಳು ಬಳಕೆ ಆಗುತ್ತಿದ್ದುದು ನಮಗೆ ಖುಷಿ ಕೊಡುತ್ತಿತ್ತು. ಅವರು ಹೇಳುತ್ತಿದ್ದ ಒಂದು ಜನಪ್ರಿಯ ಹಾಸ್ಯ ಘಟನೆ “ಪಟ್ಲೆರೆ ಪುಳ್ಳಿ’ (ಪಟೇಲರ ಮೊಮ್ಮಗು): ಒಂದು ಊರಿನಲ್ಲಿ ಒಬ್ಬ ಪಟೇಲರು ಇದ್ದರಂತೆ. ಆಗಿನ ಕಾಲದಲ್ಲಿ ಹಳ್ಳಿಯಲ್ಲಿ ಪಟೇಲರಿಗೆ ಎಲ್ಲ ಜನರು ಭಯಭಕ್ತಿಯಿಂದ ಗೌರವ ಸಲ್ಲಿಸುತ್ತಿದ್ದರು. ಅದೇ ರೀತಿಯ ಗೌರವವನ್ನು ವಂಶಪಾರಂಪರ್ಯವಾಗಿ ಅವರ ಚಿಕ್ಕ ಮೊಮ್ಮಗನಿಗೂ ಸಲ್ಲಿಸುತ್ತಿದ್ದರು. ಅಂತಹ ಮಗು ಬಂದಾಗಲೂ “ಪಟೇಲರ ಮೊಮ್ಮಗು ಬಂತು’ ಎಂದು ಭಯಭಕ್ತಿ ಪ್ರದರ್ಶಿಸುತ್ತಿದ್ದರು. ಊಳಿಗಮಾನ್ಯ ವ್ಯವಸ್ಥೆಯ ವಿಡಂಬನೆಗೆ ಈ ಐತಿಹ್ಯವನ್ನು ಬಳಸುತ್ತಿದ್ದರು. ಕ್ಯಾಸ್ಟಲಿನೋ ಅವರು ಪಾಠ ಮಾಡುತ್ತಿದ್ದ ಇನ್ನೊಂದು ಪಠ್ಯ-ಸಿ. ಕೆ. ಅಲೆನ್‌ನ ಡೆಮೋಕ್ರೆಸಿ ಅಂಡ್‌ ದಿ ಇಂಡಿವಿಜುವಲ್‌. ಯು. ಎಲ್‌. ಭಟ್‌ ಎನ್ನುವ ತರುಣ ಉಪನ್ಯಾಸಕರು ಇಂಗ್ಲಿಷ್‌ ಕವನಗಳ ಸಂಕಲನ ದಿ ಪೊಯೆಟ್‌ ಸ್ಪೀಕ್ಸ್‌ನ್ನು ಅರ್ಥವತ್ತಾಗಿ ಪಾಠಮಾಡುತ್ತಿದ್ದರು. ನಮಗೆ ರಾಜಾರಾವ್‌ ಅವರ ಕಾದಂಬರಿ ಕಾಂತಾಪುರ ಪಠ್ಯವಾಗಿತ್ತು. ಅದನ್ನು ಪಾಠ ಮಾಡುತ್ತಿದ್ದವರು ಸಂಪಂಗಿ ಎನ್ನುವ ಉಪನ್ಯಾಸಕರು. 

ಕನ್ನಡ ಪಾಠ ಮಾಡಿದವರು ವಿ. ಬಿ. (ವೆಂಕಟರಮಣ ಭಟ್ಟ) ಮೊಳೆಯಾರರು. ಫಿಲೋಮಿನಾ ಕಾಲೇಜಿನಲ್ಲಿ ಮೊಳೆಯಾರರದು ಸುದೀರ್ಘ‌ ಕಾಲದ ಸಾಂಸ್ಕೃತಿಕ ಹೆಗ್ಗುರುತಿನ ಅಧ್ಯಾಪನ. ಪಿಯುಸಿಯಲ್ಲಿ ನಮಗೆ ಅವರು ಪಾಠ ಮಾಡಿದ್ದು ಭಾಸ್ಕರ ಕವಿಯ ಜೀವಂಧರ ಚರಿತೆಯ ಸಂಗ್ರಹವನ್ನು. ಮೊದಲನೆಯ ಮತ್ತು ಎರಡನೆಯ ಬಿಎಸ್ಸಿ ತರಗತಿಗಳಲ್ಲಿ ನಯಸೇನನ ಧರ್ಮಾಮೃತ ಸಂಗ್ರಹ ಮತ್ತು ಗೋವಿಂದ ಪೈ ಅವರ ಗೊಲ್ಗೊಥಾ ಮತ್ತು ವೈಶಾಖೀ ಖಂಡಕಾವ್ಯಗಳನ್ನು. ಹಳಗನ್ನಡ-ನಡುಗನ್ನಡ ಕಾವ್ಯಗಳ ಅಧ್ಯಯನದ ಸಮರ್ಪಕ ಮಾದರಿಯನ್ನು ನಾನು ಕಲಿತದ್ದು ಮೊಳೆಯಾರರಿಂದ. ಶಬ್ದಗಳ ಅರ್ಥವಿವರಣೆ, ಸಂಧಿ-ಸಮಾಸಗಳ ವಿಂಗಡಣೆ, ಅನ್ವಯಾನುಸಾರ ಪದಗಳ ಜೋಡಣೆ, ಶಬ್ದಗಳ ಮೂಲ ಮತ್ತು ನಿಷ್ಪತ್ತಿಯ ಸೂಚನೆ, ಒಟ್ಟು ಪದ್ಯದ ಭಾವಾರ್ಥ, ಅವುಗಳ ಸಾಂದರ್ಭಿಕ ಧ್ವನಿ ಪರಂಪರೆ, ನಡುನಡುವೆ ಗಂಭೀರಮುಖದಲ್ಲಿ ಲಘು ಹಾಸ್ಯದ ನಗು: ಇವು ಮೊಳೆಯಾರರ ಕಾವ್ಯಪಾಠದ ಅನಾಟಮಿ. ಪಾಠದ ನಡುವೆ ವಿದ್ಯಾರ್ಥಿಗಳ ಕೀಟಲೆ ಕಂಡುಬಂದರೆ ಕಣ್ಣು ಅರಳಿಸಿ ಮುಖ ಉದ್ದಮಾಡಿ ಗಟ್ಟಿದನಿಯಲ್ಲಿ ಎಚ್ಚರಿಕೆ. ನಾನು ಕನ್ನಡದಲ್ಲಿ ಎಂ. ಎ. ಮಾಡುತ್ತೇನೆ ಎನ್ನುವ ಕಲ್ಪನೆಯೇ ಇಲ್ಲದ ಕಾಲಕ್ಕೆ ಮೊಳೆಯಾರರ ಕನ್ನಡ ಪಾಠಗಳು ನನಗೆ ಸಾಹಿತ್ಯದ ಗಂಭೀರ ಅಧ್ಯಯನದ ಮಾರ್ಗಗಳನ್ನು , ಮಾದರಿಗಳನ್ನು ತೋರಿಸಿಕೊಟ್ಟವು.

ಬಿ.ಎಸ್ಸಿ.ಯಲ್ಲಿ ನಮಗೆ ಎಸ್‌.ವಿ. ಪರಮೇಶ್ವರ ಭಟ್ಟರ ವಿಮಶಾì ಸಂಕಲನ ಸೀಳುನೋಟ ಪಠ್ಯವಾಗಿತ್ತು. ಅದನ್ನು ಪಾಠ ಮಾಡಿದವರು ಟಿ. ವಿ. ಸುಬ್ರಹ್ಮಣ್ಯ ಎಂಬ ಕನ್ನಡ ಉಪನ್ಯಾಸಕರು. ಅವರು ಬಹಳ ಉತ್ಸಾಹದಿಂದ ವಾಕ್ಯಗಳನ್ನು ವೇಗವಾಗಿ ಉಚ್ಚರಿಸುತ್ತಿದ್ದರು. ಪಂಪಭಾರತದದಲ್ಲಿ ಭೀಷ್ಮರಿಗೆ ಪಟ್ಟ ಕಟ್ಟುವ ಸಂದರ್ಭದಲ್ಲಿ ಕರ್ಣನು ಹೇಳುವ ಪದ್ಯ ಕುಲಮನೆ ಮುನ್ನಂ ಉಗ್ಗಡಿಪಿರೇಂಗಳ ಎಂಬುದನ್ನು  ಗಟ್ಟಿಯಾಗಿ ಹುಮ್ಮಸ್ಸಿನಿಂದ ಹೇಳುತ್ತಾ ಅಧ್ಯಾಪಕರು ನಿಂತುಕೊಳ್ಳುತ್ತಿದ್ದ ಫ್ಲಾಟ್‌ಫಾರ್ಮ್ನಿಂದ ಕೆಳಗೆ ಜಿಗಿಯುತ್ತಿದ್ದರು. ಪಾಠ ಮಾಡುವಾಗ ಕಾವ್ಯದ ಪ್ರಸಂಗದಲ್ಲಿ ಅವರ ಒಳಗೊಳ್ಳುವಿಕೆ ವಿಶೇಷವಾಗಿತ್ತು. 

ಅಧ್ಯಾಪಕರ ವಿಶಿಷ್ಟ ಬಾಡಿ ಲಾಂಗ್ವೇಜ್‌ಗಳು
ಬೋರ್ಡ್‌ ಹೈಸ್ಕೂಲಿನಲ್ಲಿ ಐಚ್ಛಿಕವಾಗಿ ವಿಜ್ಞಾನವನ್ನು ಆಯ್ಕೆಮಾಡಿಕೊಂಡಿದ್ದ ಕಾರಣ, ಪಿಯುಸಿಯಲ್ಲೂ ಫಿಸಿಕ್ಸ್‌  , ಕೆಮಿಸ್ಟ್ರಿ  , ಮ್ಯಾಥ್ಸ್ ನನ್ನ ಸಹಜ ಆಯ್ಕೆಯಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಪಾಠಪಟ್ಟಿಯಿದ್ದ ಆ ಕಾಲದಲ್ಲಿ ಬಿ.ಎಸ್ಸಿ.ಯಲ್ಲಿ ಎರಡು ಮೇಜರ್‌-ಮೂರು ವರ್ಷ ಓದುವುದು; ಒಂದು ಮೈನರ್‌-ಮೊದಲ ಎರಡು ವರ್ಷ ಓದುವುದು. ಭಾಷೆಗಳು ಇಂಗ್ಲಿಶ್‌ ಮತ್ತು ಕನ್ನಡ ಮೊದಲ ಎರಡು ವರ್ಷ. ಅದರ ಜೊತೆಗೆ ವಿಜ್ಞಾನ ವಿದ್ಯಾರ್ಥಿಗಳಿಗೆ ಎರಡು ವರ್ಷ ಅಭ್ಯಾಸ ಮಾಡುವ ಒಂದು ಪತ್ರಿಕೆ ಸೋಶಿಯಲ್‌ ಸಯನ್ಸ್‌ ಇತ್ತು. ಬಿ. ಎ.ಯವರಿಗೆ ಜನರಲ್‌ ಸಯನ್ಸ್‌. ನನ್ನದು ಫಿಸಿಕ್ಸ್‌ ಮತ್ತು ಕೆಮಿಸ್ಟ್ರಿ ಮೇಜರ್‌, ಮ್ಯಾಥ್ಸ್ ಮೈನರ್‌. ಫಿಸಿಕ್ಸ್‌ ವಿಭಾಗದ ಮುಖ್ಯಸ್ಥರಾಗಿ ಇದ್ದವರು ಎ. ಎಂ. ಡಿಸೋಜ. ಗಂಭೀರ ವ್ಯಕ್ತಿತ್ವ , ಶಿಸ್ತಿನ ನಡವಳಿಕೆ, ಗಡುಸು ಧ್ವನಿ-ನಮಗೆಲ್ಲ ಹೆಚ್ಚು ಹೆದರಿಕೆ ಇದ್ದದ್ದು ಅವರ ಬಗ್ಗೆ. ಡಿ’ಸೋಜ ಅವರು “ಎಲೆಕ್ಟ್ರಿಸಿಟಿ ಮತ್ತು ಮ್ಯಾಗ್ನೆಟಿಸಂ’ ವಿಷಯವನ್ನು ಪರಿಣಾಮಕಾರಿಯಾಗಿ ಪಾಠ ಮಾಡುತ್ತಿದ್ದರು. ಪಿಯುಸಿಯಲ್ಲಿ ನಮಗೆ ಫಿಸಿಕ್ಸ್‌ ಪಾಠ ಮಾಡಿದ ಎನ್‌. ಪಿ. ಮಲ್ಯರು ಮತ್ತೆ ಎಂ.ಎಸ್ಸಿ. ಮಾಡಿ ನಾವು ಕೊನೆಯ ವರ್ಷದ ಬಿ.ಎಸ್ಸಿ.ಯಲ್ಲಿ ಇದ್ದಾಗ ಮತ್ತೆ ನಮಗೆ ಉಪನ್ಯಾಸಕರಾಗಿ ಬಂದರು. ಒಳ್ಳೆಯ ಸಿದ್ಧತೆ ಮತ್ತು ಸವಿವರವಾಗಿ ಮತ್ತೆ ಮತ್ತೆ ತಿಳಿಸುವ ಅವರ ಪಾಠದ ಕ್ರಮ ವಿಶಿಷ್ಟ. ಅವರು ಉಪನ್ಯಾಸದ ನಡುವಿನಲ್ಲಿ ಆಗಾಗ “ಟ್ರೈ ಟು ಫಾಲ್ಲೋ ಮೀ’ ಎನ್ನುತ್ತಿದ್ದರು. ಮೊದಲ ವರ್ಷದ ಬಿ.ಎಸ್ಸಿ.ಯಲ್ಲಿ “ಪ್ರೊಪರ್ಟಿಸ್‌ ಆಫ್ ಮೇಟ್ಟರ್‌’ ವಿಷಯವನ್ನು ಬೋಧಿಸಿದವರು ಶಿವರಾಮ ಭಟ್ಟರು. ತುಂಬಾ ಸೌಮ್ಯ ಸ್ವಭಾವದವರು. ಮುಂದೆ ಇವರು ವಿವೇಕಾನಂದ ಕಾಲೇಜಿನಲ್ಲಿ ಪ್ರಿನ್ಸಿಪಾಲ್‌ ಆದರು. ನಾವು ಎರಡನೆಯ ಬಿ. ಎಸ್ಸಿ.ಯಲ್ಲಿ ಇದ್ದಾಗ ಬಂದು ಸೇರಿ “ಸೌಂಡ್‌’ ವಿಷಯವನ್ನು ಪಾಠ ಮಾಡಿದವರು ಬಸವಣ್ಣ ಎನ್ನುವ ಉಪನ್ಯಾಸಕರು. ಅವರು ಬೋರ್ಡ್‌ನಲ್ಲಿ ಬರೆಯುತ್ತ ಒಂದು ತುದಿಯಿಂದ ಇನ್ನೊಂದು ತುದಿಗೆ ವೇಗವಾಗಿ ಚಲಿಸಿ ಮತ್ತೆ ಹಿಂದಕ್ಕೆ ಬಂದು ನಮ್ಮ ಕಡೆಗೆ ಮುಖಮಾಡಿ ವಿವರಿಸುತ್ತಿದ್ದರು. ಬೇರೆ ಬೇರೆ ಉಪನ್ಯಾಸಕರ ವೈವಿಧ್ಯಮಯ ಬಾಡಿ ಲ್ಯಾಂಗ್ವೇಜ್‌ಗಳನ್ನು ತರಗತಿಗಳಲ್ಲಿ ನೋಡಿ ನಾವು ಕೆಲವರು ಖಾಸಗಿಯಾಗಿ ಅವುಗಳನ್ನು ಅನುಕರಣೆ ಮಾಡುತ್ತಿದ್ದೆವು !

ಕೆಮಿಸ್ಟ್ರಿಯಲ್ಲಿ ಆಗ ಮೂರು ವಿಭಾಗಗಳು ಇದ್ದುವು: ಇನೋರ್ಗೆನಿಕ್‌, ಓರ್ಗೇನಿಕ್‌ ಮತ್ತು ಫಿಸಿಕಲ್‌. ಬಿ.ಎಸ್ಸಿ. ಮೊದಲ ವರ್ಷ ಇನೋರ್ಗೆನಿಕ್‌ ಪಾಠ ಮಾಡಿದವರು ಸಿ. ಕೆ. ಜಿ. ಕೆ. ನಾಯರ್‌. ಅಚ್ಚುಕಟ್ಟಾದ ಡ್ರೆಸ್‌, ಮಲೆಯಾಳಿ ಉಚ್ಚಾರಣೆ ಬೆರೆತ ಇಂಗ್ಲಿಷ್‌, ಸ್ಪಷ್ಟವಾಗಿ ಅರ್ಥವಾಗುವಂತೆ ವಿವರಿಸಿ ಹೇಳುವ ಉಪನ್ಯಾಸದ ಮಾದರಿ-ಇವು ನಾಯರ್‌ ಅನನ್ಯತೆ. ಆಮೇಲೆ ಅವರು ಕಾಲೇಜು ಬಿಟ್ಟುಹೋದರು. ಅವರ ಸ್ಥಾನಕ್ಕೆ ಬಂದವರು ರಾಘವಾಚಾರ್‌. ಅವರ ಇಂಗ್ಲಿಷ್‌ನಲ್ಲಿ ಹಳೆಯ ಮೈಸೂರಿನ ಧಾಟಿ ಇತ್ತು; ಸಜ್ಜನ ಮೇಸ್ಟ್ರೆ ಎನ್ನುವ ಹೆಸರು ಪಡೆದವರು. ಬಿ.ಎಸ್ಸಿ. ಮೊದಲ ಎರಡು ವರ್ಷಗಳಲ್ಲಿ ಓರ್ಗೇನಿಕ್‌ ಕೆಮಿಸ್ಟ್ರಿ ಬೋಧಿಸಿದವರು ಮಿರಾಂಡರು. ಆಜಾನುಬಾಹು ದೇಹ, ನಗುಮುಖ, ಹೆಚ್ಚಾಗಿ ಸೂಟ್‌ ಅಥವಾ ಟೈ, ವಿದ್ಯಾರ್ಥಿಗಳೊಂದಿಗೆ ಆತ್ಮೀಯತೆ. ಮಿರಾಂಡರು ಉದ್ಯೋಗನಿಮಿತ್ತ ಘಾನಾ ದೇಶಕ್ಕೆ ಹೋದರು. ಅವರ ಸ್ಥಾನಕ್ಕೆ ಬಂದವರು ಬೆಳಗಜೆ ಕೃಷ್ಣಮೂರ್ತಿ. ಅವರು ನಾವು ಪಿಯುಸಿಯಲ್ಲಿ ಇದ್ದಾಗ ನಮಗೆ ಪ್ರಯೋಗಶಾಲೆಯಲ್ಲಿ ಡೆಮನ್‌ಸ್ಟ್ರೇಟರ್‌ ಆಗಿ ಸಹಾಯ ಮಾಡಿದ್ದರು. ನಮಗೆ ಫಿಸಿಕಲ್‌ ಕೆಮಿಸ್ಟ್ರಿಗೆ ಅಧ್ಯಾಪಕರಾಗಿ ಬಂದವರು ಓ.ಜಿ. ಪಾಲನ್ನನವರು. ತರುಣ ವಯಸ್ಸಿನ, ಸದಾ ಪೂರ್ಣ ಸೂಟ್‌ ಧರಿಸುತ್ತಿದ್ದ, ದಪ್ಪ ಮೀಸೆಯ ಪಾಲನ್ನರು ವಿದ್ಯಾರ್ಥಿಗಳಿಗೆ ಸ್ನೇಹಿತನಂತೆ ಇದ್ದರು. ಪ್ರಯೋಗಶಾಲೆಯಲ್ಲಿ ನಮಗೆ ಕಷ್ಟವಾದಾಗ ಸಹಾಯ ಮಾಡುತ್ತಿದ್ದರು. ನಾನು ಕಾಲೇಜು ಬಿಟ್ಟ ಮೇಲೆ ಅವರ ಮದುವೆಗೆ ಹೋಗಿ ಅಭಿನಂದಿಸಿದ ನೆನಪು ಇದೆ. ಫಿಸಿಕ್ಸ್‌ ಮತ್ತು ಕೆಮಿಸ್ಟ್ರಿ ಪ್ರಯೋಗಶಾಲೆಗಳಲ್ಲಿ ನಮಗೆ ಸಹಾಯಕರಾಗಿ ಡೆಮನ್‌ಸ್ಟ್ರೇಟರ್‌ಗಳಾಗಿ ಇದ್ದವರು  ಕೃಷ್ಣಮೂರ್ತಿ, ಶಂಕರನಾರಾಯಣ, ಕ್ರಾಸ್ತಾ. ಅನೇಕ ಬಾರಿ ನಿರೀಕ್ಷಿತ ಫ‌ಲಿತಾಂಶ ಸಿಗದೆ ಒದ್ದಾಡುವ ಪ್ರಸಂಗಗಳು ಇದ್ದುವು. ಕೆಲವು ವಿದ್ಯಾರ್ಥಿಸ್ನೇಹಿ ಉಪನ್ಯಾಸಕರು ಅಂತಹ ವೇಳೆಗೆ ಸಹಾಯಮಾಡಿದ ನೆನಪುಗಳು ನನ್ನಲ್ಲಿ ಇವೆ.

ಫಿಲೋಮಿನಾ ಕಾಲೇಜಿನ ಮ್ಯಾಥ್ಸ್ ವಿಭಾಗದಲ್ಲಿ ದೀರ್ಘ‌ ಕಾಲ ಅಧ್ಯಾಪನ ಮಾಡಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದವರು ಪಿ.ಎಲ್‌. ಕಡಂಬಳಿತ್ತಾಯರು. ನೀಳ ದೇಹ, ಸೂಕ್ಷ್ಮ ಕಣ್ಣು, ಅಚ್ಚುಕಟ್ಟಾದ ಡ್ರೆಸ್‌ ಟೈ ಸಹಿತ ಇದ್ದ ಕಡಂಬಳಿತ್ತಾಯರು ತರಗತಿಯ ಬೋರ್ಡ್‌ ಮೇಲೆ ಬರೆದು ಮತ್ತೆ ವಿದ್ಯಾರ್ಥಿಗಳು ಎಲ್ಲರನ್ನೂ ಒಂದು ಬಾರಿ ಅವಲೋಕನ ಮಾಡಿ ವಿವರಿಸಲು ತೊಡಗಿದರೆ ಎಂತಹ ಕಷ್ಟದ ಥಿಯರಿ ಕೂಡ ತಲೆಯೊಳಗೆ ಪ್ರವೇಶ ಮಾಡಲೇಬೇಕು. ಗಣಿತದಲ್ಲಿ ಬಹಳ ಜಾಣ ಅಲ್ಲದ ನಾನು ಎಪ್ಪತ್ತೂಂದು ಶೇ. ಮಾರ್ಕ್ಸ್ ಪಡೆದಿದ್ದರೆ ಅದಕ್ಕೆ ಕಡಂಬಳಿತ್ತಾಯರ ಬೋಧನೆ ಕಾರಣ. ನಾವು ಪಿಯುಸಿಯಲ್ಲಿ ಇದ್ದಾಗ ನಮಗೆ ಮ್ಯಾಥ್ಸ್ ಬೋಧಿಸಿದವರು ಭಂಡಾರಿ ಎಂಬ ಅಧ್ಯಾಪಕರು. 

ನಮಗೆ ಸೋಶಿಯಲ್‌ ಸಯನ್ಸ್‌ ಪಾಠ ಮಾಡಲು ಇತಿಹಾಸ ಮತ್ತು ಅರ್ಥಶಾಸ್ತ್ರದ ಅಧ್ಯಾಪಕರು ಬರುತ್ತಿದ್ದರು. ನಾವು ವಿಜ್ಞಾನದ ವಿದ್ಯಾರ್ಥಿಗಳು ಈ ವಿಷಯದ ಬಗ್ಗೆ ನಿರ್ಲಕ್ಷ್ಯವನ್ನು ತೋರಿಸುತ್ತಿದ್ದೆವು. ಪಾಸಾಗುವಷ್ಟು ಮಾರ್ಕ್ಸ್ ಸಿಕ್ಕಿದರೆ ಸಾಕು ಎನ್ನುವ ಧೋರಣೆ ನಮ್ಮದಾಗಿತ್ತು. ಈ ವಿಷಯದ ಬೇರೆ ಬೇರೆ ಶೀರ್ಷಿಕೆಗಳನ್ನು ಪಾಠ ಮಾಡಿದವರು ಕೃಷ್ಣಮೂರ್ತಿ, ಪಾರ್ಥಸಾರಥಿ ಮತ್ತು ಡಬ್ಲ್ಯೂಪಿ. ಮಾರ್ಟಿನ್‌. ಮೂವರೂ ತಮ್ಮ ವಿಷಯಗಳ ಬಗ್ಗೆ ಮಾಹಿತಿಪೂರ್ಣವಾಗಿ ವಿವರಿಸುತ್ತಿದ್ದರು. ಮಾರ್ಟಿನ್‌ರು ತಮ್ಮ ಇಂಗ್ಲಿಷ್‌ ವಾಗjರಿಯಿಂದ ಪ್ರಾಸಬದ್ಧ ಪದಗಳ ಜೋಡಣೆಯಿಂದ ಇಂಗ್ಲಿಷ್‌ ಸರಿಯಾಗಿ ಗೊತ್ತಿಲ್ಲದ ನಮಗೆ ಶ್ರವಣಸುಖವನ್ನು ಕೊಡುತ್ತಿದ್ದರು.

(ಕಾಲೇಜಿನ ಸಾಹಿತ್ಯ, ಕ್ರೀಡೆ, ಎನ್‌ಸಿಸಿ, ಇತರ ಚಟುವಟಿಕೆಗಳು ಮುಂದಿನ ಭಾಗದಲ್ಲಿ)

ಬಿ. ಎ. ವಿವೇಕ ರೈ

ಟಾಪ್ ನ್ಯೂಸ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Chikkamagaluru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ರೂ. ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.