CONNECT WITH US  

ಆಫ್ರಿಕದ ಕತೆ: ಊರಿಗೆ ಬಂದ ಬೆಕ್ಕು

ಒಂದು ಕಾಡಿನಲ್ಲಿ ಒಂದು ಹೆಣ್ಣು ಬೆಕ್ಕು ಇತ್ತು. ಅದರ ಮೈ ಬಣ್ಣ ಹಾಲಿನ ಹಾಗೆ ಬೆಳ್ಳಗಿತ್ತು. ಬೆಕ್ಕು ಹುಟ್ಟಿದ ಕೂಡಲೇ ತಾಯಿಯನ್ನು ಒಂದು ತೋಳ ಬಂದು ಕಚ್ಚಿ ಗಾಯ ಮಾಡಿತು. ಬೆಕ್ಕು ಹೇಗೋ ಅದರ ಹಿಡಿತದಿಂದ ಪಾರಾಗಿ ಮರಿಯ ಬಳಿಗೆ ಬಂದಿತು. ತಾನಿನ್ನು ಹೆಚ್ಚು ಹೊತ್ತು ಬದುಕುವುದಿಲ್ಲವೆಂದು ಅದಕ್ಕೆ ಖಚಿತವಾಯಿತು. ಮರಿಯನ್ನು ಅಪ್ಪಿ ಕೊಂಡಿತು. ""ತುಂಬ ಸುಂದರವಾಗಿದ್ದೀಯಾ ಮಗು. ಆದರೆ ಈ ಕಾಡಿನಲ್ಲಿ ಜೀವನ ಮಾಡುವುದು ತುಂಬ ಕಷ್ಟ. ನಿನಗೆ ನಿನ್ನವರೆನ್ನುವವರು ಯಾರೂ ಜೊತೆಗಿಲ್ಲ. ಯಾರಾದರೂ ಬಲಶಾಲಿಗಳು ಜೊತೆಗಿದ್ದರೆ ಒಳ್ಳೆಯ ದಿತ್ತು. ನನಗೀಗ ನಿನ್ನ ಭವಿಷ್ಯದ್ದೇ ಚಿಂತೆಯಾಗಿದೆ'' ಎಂದು ಹೇಳಿತು.

    ಮರಿ ಬೆಕ್ಕು ತಾಯಿಯನ್ನು ಸಮಾಧಾನ ಪಡಿಸಿತು. ""ಅಮ್ಮ, ಚಿಂತಿಸಬೇಡ. ನನ್ನಲ್ಲಿ ಬುದ್ಧಿವಂತಿಕೆಯಿದೆ. ಬಂದುದನ್ನು ಎದುರಿಸಬಲ್ಲೆನೆಂಬ ಧೈರ್ಯವೂ ಇದೆ. ಬರುವ ಅಪಾಯಗಳಿಂದ ರಕ್ಷಿಸುವವರನ್ನು ಹುಡುಕಿಕೊಂಡು ಹೋಗಿ ಆಶ್ರಯ ಕೊಡಿ ಎಂದು ಕೇಳುತ್ತೇನೆ'' ಎಂದು ಹೇಳಿತು. ಮರಿಯ ಮಾತು ಕೇಳಿ ತಾಯಿ, ""ಕಂದಾ, ಹಾಗೆಂದು ಗುರುತು ತಿಳಿಯದವರ ಬಳಿಗೆ ಹೋಗಬೇಡ. ನಮ್ಮ ಮನೆಯ ಬಳಿ ವೃದ್ಧನಾದ ಒಂದು ನರಿಯಿದೆ. ಜಾಣತನದಲ್ಲಿ ಅದನ್ನು ಸೋಲಿಸುವವರು ಕಾಡಿನಲ್ಲಿ ಯಾರೂ ಇಲ್ಲ. ಅದರ ಬಳಿಗೆ ಹೋಗು. ನಿನಗೆ ಆಸರೆಯಾಗಬಲ್ಲ ಅತ್ಯಂತ ಬಲಶಾಲಿ ಯಾರು? ಎಂದು ಕೇಳಿ ಅವರ ಬಳಿಗೆ ಸಾಗು. ಅವರಲ್ಲಿ ಬೇಡಿಕೊಂಡು ನಿನಗೆ ರಕ್ಷಣೆ ಪಡೆದುಕೋ'' ಎಂಬ ಕಿವಿಮಾತನ್ನು ಹೇಳಿತು.

    ಸ್ವಲ್ಪ ಹೊತ್ತಿನಲ್ಲಿ ತಾಯಿ ಬೆಕ್ಕು ಸತ್ತುಹೋಯಿತು. ಅದರ ಮಾತಿನಂತೆ ಮರಿ ಬೆಕ್ಕು ನರಿಯ ಬಳಿಗೆ ಹೋಯಿತು. ""ತಾತಾ, ನನ್ನ ಅಮ್ಮನನ್ನು ಕಳೆದುಕೊಂಡು ಅನಾಥವಾಗಿಬಿಟ್ಟೆ. ನನಗೆ ಅತ್ಯಂತ ಬಲಶಾಲಿಯೊಬ್ಬರ ಆಶ್ರಯ ಸಿಕ್ಕಿದರೆ ಮಾತ್ರ ಯಾವ ಅಪಾಯವೂ ಇಲ್ಲದೆ ನಿಶ್ಚಿಂತವಾಗಿ ಬದುಕಬಲ್ಲೆ. ಅಂತಹ ಬಲವಂತರು ಯಾರಿದ್ದಾರೆ?'' ಎಂದು ಕೇಳಿತು.

    ಮುದಿ ನರಿಯು ನಿಟ್ಟುಸಿರುಬಿಟ್ಟಿತು. ""ಬಲಶಾಲಿ ಬೇರೆ ಯಾರಿದ್ದಾರೆ ಮಗು? ನನ್ನ ಪಾಲಿಗೆ ಮೃತ್ಯು ಕಂಟಕ ತರುವ ನಾಯಿಗಿಂತ ದೊಡ್ಡ ಬಲಶಾಲಿ ಇನ್ನಾರೂ ಇಲ್ಲ. ಊರಿಗೆ ಹೋಗಿ ಒಂದು ಕೋಳಿ ಹಿಡಿಯುವಂತಿಲ್ಲ, ಕಬ್ಬಿನ ಗದ್ದೆಗೆ ಇಳಿಯುವಂತಿಲ್ಲ. ಓಡಿಸಿಕೊಂಡು ಬಂದು ಮೈಮೇಲೆ ಜಿಗಿದು ಸೀಳಿ ಹಾಕುವ ನಾಯಿಯೇ ದೊಡ್ಡ ಶಕ್ತಿವಂತ. ಹೋಗು, ಅದರ ಬಳಿ ಆಶ್ರಯ ಪಡೆದುಕೋ'' ಎಂದು ಹೇಳಿತು.

    ಬೆಕ್ಕು ನಾಯಿಯನ್ನು ಹುಡುಕಿಕೊಂಡು ಹೋಯಿತು. ಎಲುಬಿನ ತುಂಡನ್ನು ಕಟಕಟ ಎಂದು ಅಗಿಯುತ್ತ ಕುಳಿತಿದ್ದ ಅದರ ಮುಂದೆ ಕೈಜೋಡಿಸಿ ತಲೆ ಬಾಗಿಸಿತು. ""ಅಣ್ಣ, ನೀನು ದೊಡ್ಡವ, ಬಹು ಶಕ್ತಿಶಾಲಿ ಎಂದು ನರಿಯಜ್ಜ ಹೇಳಿದ ಕಾರಣ ನಿನ್ನ ಬಳಿಗೆ ಬಂದಿದ್ದೇನೆ. ನನಗೆ ನಿನ್ನಿಂದ ದೊಡ್ಡ ಉಪಕಾರವಾಗಬೇಕು'' ಎಂದು ಕೇಳಿಕೊಂಡಿತು. ನಾಯಿ ಜಂಭದಿಂದ ಮೀಸೆ ತಿರುವಿತು. ""ನಿಜ, ನನ್ನನ್ನು ಗ್ರಾಮಸಿಂಹನೆಂದೇ ಹೊಗಳುತ್ತಾರೆ. ನಾನಿದ್ದರೆ ಕಳ್ಳ ನರಿಗಳು ಜೋರಾಗಿ ಉಸಿರಾಡುವುದಿಲ್ಲ. ಏನಾಗಬೇಕಿತ್ತು, ಕೆಟ್ಟ ನರಿ ನಿನಗೇನಾದರೂ ತೊಂದರೆ ಮಾಡಿತೆ? ಅದನ್ನು ಕೊಂದು ಹಾಕಬೇಕೆ?'' ಎಂದು ಕೇಳಿತು.

    ಬೆಕ್ಕಿನ ಮರಿ ತನ್ನ ತಾಯಿಯ ಸಾವಿನ ಕತೆಯನ್ನು ಹೇಳಿತು. ತನಗೆ ಬಲಶಾಲಿಯೊಬ್ಬರ ಆಶ್ರಯ ಬೇಕಾಗಿರುವುದನ್ನು ತಿಳಿಸಿತು. ""ನಿನಗಿಂತ ಶಕ್ತಿವಂತರು ಬೇರೆ ಯಾರೂ ಇಲ್ಲವೆಂದು ನರಿಯಜ್ಜನೇ ಒಪ್ಪಿಕೊಂಡ ಕಾರಣ ಆಸರೆ ಬೇಡಿ ಬಂದಿದ್ದೇನೆ. ನಿನ್ನ ಬಳಿ ಇರಲು ಒಪ್ಪಿಗೆ ಕೊಡಬೇಕು'' ಎಂದು ಪ್ರಾರ್ಥಿಸಿತು. ನಾಯಿ ತಲೆದೂಗಿತು. ""ಬೇಡಿ ಬಂದವರಿಗೆ ಇಲ್ಲವೆಂದು ಹೇಳಿದ ವಂಶ ನನ್ನದಲ್ಲ. ಧಾರಾಳವಾಗಿ ನನ್ನ ಜೊತೆಗೆ ಇದ್ದುಕೋ'' ಎಂದು ಸಮ್ಮತಿಸಿತು.

    ನಾಯಿಯ ಬಳಿ ನೆಲೆಸಿದ ಬೆಕ್ಕಿನ ಮರಿಗೆ ತನ್ನ ಆಯ್ಕೆ ಸರಿಯಲ್ಲವೆಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಒಂದು ಹುಲಿ ಅಲ್ಲಿಗೆ ಬಂದಿತು. ನಾಯಿಯ ಮುಂದೆ ನಿಂತು ಜೋರಾಗಿ ಗರ್ಜಿಸಿತು. ಅದರ ದನಿ ಕೇಳಿ ನಾಯಿಗೆ ಎದೆಗುಂಡಿಗೆ ಒಡೆದು ಹೋದ ಹಾಗಾಯಿತು. ಬಾಲ ಮುದುರಿಕೊಂಡು ಓಡಲು ಪ್ರಯತ್ನಿಸಿತು. ಆದರೆ ಹುಲಿ ಅದನ್ನು ಬಿಡಲಿಲ್ಲ. ನಾಯಿಯ ಮೇಲೆ ನೆಗೆಯಿತು. ಪಂಜದಿಂದ ಒಂದೇಟು ಹೊಡೆದು ಕೊಂದುಹಾಕಿತು. ಇದನ್ನೆಲ್ಲ ಬೆಕ್ಕು ಮರೆಯಲ್ಲಿ ನಿಂತು ನೋಡಿತು. ಹುಲಿ ಅಲ್ಲಿಂದ ಹೊರಟಾಗ ಮುಂದೆ ಬಂದು, """ಹುಲಿ ಮಾವಾ'' ಎಂದು ಕರೆಯಿತು. ಹುಲಿ ಹಿಂತಿರುಗಿ ನೋಡಿ ಮರಿಯನ್ನು ಕಂಡು ಮುಖವರಳಿಸಿ, ""ಅಯ್ಯೋ ಪುಟ್ಟಾ, ನೀನು ಇಲ್ಲಿದ್ದೀಯಾ? ಹೇಗೆ ಬಂದೆ, ಅಮ್ಮ ಏನು ಮಾಡುತ್ತಿದ್ದಾಳೆ?'' ಎಂದು ಕ್ಷೇಮ ಸಮಾಚಾರ ವಿಚಾರಿಸಿತು.

    ಬೆಕ್ಕಿನ ಮರಿ ನಡೆದ ಕತೆಯನ್ನೆಲ್ಲ ಹುಲಿ ಮಾವನಿಗೆ ಹೇಳಿತು. ""ಅಮ್ಮ ಸಾಯುವಾಗ ಒಂದು ಮಾತು ಹೇಳಿದಳಲ್ಲ, ಬಲಶಾಲಿಯಾದವರ ಆಸರೆ ಪಡೆ ಅಂತ. ನರಿಯಜ್ಜನ ಮಾತು ನಂಬಿ ನಾಯಿಯೇ ಬಲಶಾಲಿಯೆಂದು ತಪ್ಪು ಭಾವಿಸಿ ಅದರ ಆಶ್ರಯದಲ್ಲಿದ್ದೆ. ಆದರೆ ನೀನು ಬಂದು ನನ್ನ ನಂಬಿಗೆಯನ್ನು ಸುಳ್ಳು ಮಾಡಿದ್ದು ಮಾತ್ರವಲ್ಲ, ನನ್ನ ಆಸರೆಯನ್ನು ಕಳಚಿಬಿಟ್ಟೆ'' ಎಂದು ಕಣ್ಣೀರುಗರೆಯಿತು.

    ಹುಲಿ ಬೆಕ್ಕಿನ ಮರಿಗೆ ಸಾಂತ್ವನ ಹೇಳಿತು. ""ಪುಟ್ಟಾ, ಅದಕ್ಕೇಕೆ ಚಿಂತಿಸುವೆ? ನನ್ನ ತಂಗಿಯ ಮಗಳಿಗೆ ಆಸರೆ ಕೊಡಬೇಕಾದದ್ದು ನನ್ನ ಕರ್ತವ್ಯವಲ್ಲವೆ? ಚಿಂತಿಸಬೇಡ, ನನ್ನೊಂದಿಗೆ ನಾನಿರುವ ಗುಹೆಗೆ ಬಾ. ಯಾರಿಂದಲೂ ಅಪಾಯ ಬಾರದ ಹಾಗೆ ರಕ್ಷಿಸುತ್ತೇನೆ'' ಎಂದು ಭರವಸೆ ನೀಡಿ ಗುಹೆಗೆ ಕರೆತಂದಿತು. ಇನ್ನು ನಿಶ್ಚಿಂತೆಯಿಂದ ಇರಬಹುದು ಎಂದು ಮರಿ ಭಾವಿಸಿಕೊಂಡಿದ್ದರೆ ಅದೂ ತಪ್ಪಾಯಿತು. ಮರುದಿನ ಒಂದು ದೈತ್ಯ ಸಿಂಹ ಹುಲಿಯ ಗುಹೆಯ ಬಳಿ ನಿಂತು ಕಾಳಗಕ್ಕೆ ಕರೆಯಿತು. ""ಬಾರೋ ಹುಲಿರಾಯಾ, ಇಡೀ ಕಾಡಿನಲ್ಲಿ ನೀನೇ ಶಕ್ತಿವಂತನೆಂದು ಹೇಳಿಕೋಂಡು ಬಂದು ನನಗೆ ಅವಮಾನ ಮಾಡಿದ್ದೀಯಂತೆ. ಬಾ, ನನ್ನ ಜೊತೆಗೆ ಹೋರಾಡು. ಯಾರು ಬಲಶಾಲಿಯೆಂಬುದು ಈಗಲೇ ಇತ್ಯರ್ಥವಾಗಲಿ'' ಎಂದು ಗರ್ಜಿಸಿತು. ಹುಲಿ ಹೊರಗೆ ಬಂದು ಸಿಂಹದೊಂದಿಗೆ ಯುದ್ಧಕ್ಕೆ ಮುಂದಾಯಿತು. ಆದರೆ ಅದಕ್ಕಿಂತ ಹೆಚ್ಚು ಬಲಶಾಲಿಯಾದ ಸಿಂಹ ಕ್ಷಣಾರ್ಧದಲ್ಲಿ ಹುಲಿಯನ್ನು ನೆಲಕ್ಕೊರಗಿಸಿತು.

    ಆಗ ಬೆಕ್ಕಿನ ಮರಿ ಸಿಂಹದ ಮುಂದೆ ದೈನ್ಯವಾಗಿ ನಿಂತುಕೊಂಡಿತು. ತನ್ನ ಕತೆಯನ್ನು ಹೇಳಿತು. ""ಹುಲಿ ಬಲಶಾಲಿ ಎಂದುಕೊಂಡು ಬಂದ ನನ್ನ ನಂಬಿಕೆಯನ್ನು ನಿನ್ನ ಪರಾಕ್ರಮ ಸುಳ್ಳು ಮಾಡಿತು. ನಿನಗಿಂತ ಶಕ್ತಿವಂತರು ಬೇರೆ ಯಾರೂ ಇಲ್ಲ. ನನಗೆ ಆಶ್ರಯ ಕೊಡು'' ಎಂದು ಕೇಳಿಕೊಂಡಿತು. ಸಿಂಹ ಒಪ್ಪಿಕೊಂಡು ಮರಿಯನ್ನು ಜೊತೆಗೆ ಕರೆ ತರುತ್ತಿರುವಾಗ ಒಂದು ಬೆಟ್ಟದಂತಹ ಆನೆ ಎದುರಿಗೆ ಬಂದಿತು. ದಾರಿಗೆ ಅಡ್ಡವಾಗಿ ನಿಂತಿತು. ಸಿಂಹ ಕೋಪದಿಂದ ಆನೆಯ ಮೇಲೆ ಎರಗಿತು. ಆನೆ ಅದನ್ನು ಸೊಂಡಿಲಿನಲ್ಲಿ ಎತ್ತಿ ದೂರಕ್ಕೆ ಎಸೆಯಿತು. ಸಿಂಹ ಅಲ್ಲಿಯೇ ಬಿದ್ದು ಸತ್ತಿತು. ಬೆಕ್ಕಿನ ಮರಿಗೆ ಆನೆಯ ಬಲ ಸಿಂಹಕ್ಕಿಂತ ಹೆಚ್ಚು ಅನ್ನುವುದು ತಿಳಿಯಿತು. ತನಗೆ ಆಸರೆ ನೀಡಲು ಆನೆಯ ಬಳಿ ಕೋರಿತು. ಆನೆ ಅದಕ್ಕೆ ಒಪ್ಪಿತು.

    ಸ್ವಲ್ಪ ಮುಂದೆ ಬಂದಾಗ ಒಬ್ಬ ಬೇಟೆಗಾರ ಮರದ ಮರೆಯಲ್ಲಿ ನಿಂತು ಆನೆಯ ಮೇಲೆ ಗುರಿಯಿಟ್ಟು ಬಾಣ ಪ್ರಯೋಗ ಮಾಡಿದ. ಆನೆ ಕುಸಿದುಬಿದ್ದಿತು. ಇದನ್ನು ಕಂಡು ಬೆಕ್ಕಿನ ಮರಿ ಬೇಟೆಗಾರನ ಸನಿಹ ಹೋಯಿತು. ""ಬೆಟ್ಟದಂತಹ ಆನೆಯನ್ನೇ ನೆಲಕ್ಕೊರಗಿಸಿದೆಯಲ್ಲ, ಎಂಥ ಬಲವಂತ ನೀನು! ನನಗೆ ಆಶ್ರಯ ಬೇಕು, ಕೊಡುತ್ತೀಯಾ?'' ಕೇಳಿತು. ಬೇಟೆಗಾರ ಸಂತೋಷದಿಂದ ಅದನ್ನೆತ್ತಿಕೊಂಡು ಮನೆಗೆ ಬಂದ.

    ಬೇಟೆಗಾರನ ಹೆಂಡತಿ ಗಂಡನನ್ನು ಕಂಡ ಕೂಡಲೇ ಅವನ ಕೈಯನ್ನು ಹಿಡಿದು, ""ಯಾಕೆ ಇಷ್ಟು ತಡವಾಯಿತು? ಎಲ್ಲಿಗೆ ಹೋಗಿದ್ದೆ?'' ಎಂದು ಜೋರು ಮಾಡಿದಳು. ಬೇಟೆಗಾರ ಗಡಗಡ ನಡುಗುತ್ತ ಅವಳ ಮುಂದೆ ಮಂಡಿಯೂರಿ ಕುಳಿತು, ""ತಪ್ಪಾಯಿತು, ಇನ್ನು ಮುಂದೆ ಹೀಗೆ ಮಾಡುವುದಿಲ್ಲ'' ಎಂದು ಬೇಡಿಕೊಂಡ. ಆನೆಯನ್ನು ಕೊಂದ ಬಲಶಾಲಿಯನ್ನು ಮಾತಿನಿಂದಲೇ ಮಣಿಸಿದ ಈ ಹೆಂಗಸು ಬಹು ಶಕ್ತಿಶಾಲಿಯೆಂದು ಬೆಕ್ಕಿಗೆ ಅನಿಸಿತು. ಅವಳ ಬಳಿಗೆ ಹೋಗಿ, ""ಅಕ್ಕಾ, ನನಗೆ ನಿನ್ನ ಬಳಿ ಆಶ್ರಯ ಕೊಡುತ್ತೀಯಾ?'' ಎಂದು ಕೇಳಿತು. ಸುಂದರವಾದ ಬೆಕ್ಕನ್ನು ನೋಡಿ ಸಂತೋಷದಿಂದ ಅವಳು ಅದನ್ನು ಅಡುಗೆ ಮನೆಗೆ ಕರೆದುಕೊಂಡು ಹೋದಳು. ಅಲ್ಲಿ ಅದು ನಿರ್ಭಯವಾಗಿ ನೆಲೆಸಿತು. ಬೆಕ್ಕು ಹೀಗೆ ಊರಿಗೆ ಬಂದಿತು.

ಪ. ರಾಮಕೃಷ್ಣ ಶಾಸ್ತ್ರಿ


Trending videos

Back to Top