ಗುಬ್ಬಚ್ಚಿ ಗೂಡು


Team Udayavani, Sep 23, 2018, 6:00 AM IST

s-9.jpg

ಬೆಳಗಾವಿಯಿಂದ ಖಾನಾಪುರಕ್ಕೆ ಬರುವ ತಿರುಗುಮುರುಗಾಗಿರುವ ರಸ್ತೆಯಲ್ಲಿ ಮಾಧುರ್ಯಸಿರಿಯನ್ನು ಪಕ್ಕದ ಸೀಟಿನಲ್ಲಿ ಕುಳ್ಳಿರಿಸಿ ಹೃಷಿಕೇಶ ಕಾರನ್ನು ನಿಧಾನವಾಗಿ ಚಲಾಯಿಸುತ್ತ ಹಾಡು ಕೇಳುತ್ತಿದ್ದ. ತಂಗಾಳಿಯ ಹಿಮ್ಮೇಳದೊಂದಿಗೆ ತೇಲಿಬಂದ ಹಾಡು ಕಿವಿಗೆ ತಾಗಿ ಮನವು ಆಹ್ಲಾದವನ್ನು ಅನುಭವಿಸುತ್ತಿತ್ತು. ಮಾಧುರ್ಯಳ ಇರವು ಅವನ ದೇಹ ಮನಸ್ಸಿನ ತುಂಬ ಹುರುಪು ತುಂಬಿತ್ತು. ಅದೆಷ್ಟು ಖುಷಿಯೆಂದರೆ, ಬಹುಶಃ ಅದನ್ನು ಕವನ ಅಥವಾ ಕಥೆಯಲ್ಲಿ ವ್ಯಕ್ತಪಡಿಸಲಾಗದು. ಇಂಥ ಸುಂದರ ಅನುಭೂತಿಗೆ ಕಾರಣ ಒಲವು ಇರಬಹುದೇ ಎಂಬ ಪ್ರಶ್ನೆಯನ್ನು ಹೃಷಿಕೇಶನ ಹೃದಯ ತತ್‌ಕ್ಷಣ ಕೇಳಿಕೊಂಡದ್ದೂ ಇದೆ. ಪುಸ್ತಕ ಬಿಡುಗಡೆಯ ಸಮಾರಂಭವನ್ನು ಮುಗಿಸಿ ಇಬ್ಬರೂ ಹೊರಟಿದ್ದರು. ಎಇಸಿ ಶಾಲೆಯ ಮಲ್ಟಿ ಬಿಲ್ಡಿಂಗ್‌ ಸಭಾಭವನದ ಹಿಂದುಗಡೆ ಪೆಂಡಾಲ ಹಾಕಿಸಿ ಡಾ| ತೇಜಸ್ವಿನಿ ಡೇರೆಕರ್‌ ತಮ್ಮ ಹೊಸ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯೋಜಿಸಿದ್ದರು.ತೇಜಸ್ವಿನಿ ಡೇರೆಕರ ವೃತ್ತಿಯಲ್ಲಿ ವೈದ್ಯೆಯಾದರೂ ಪ್ರವೃತ್ತಿಯಲ್ಲಿ ಕಥೆಗಾತಿ. ಈಗಾಗಲೇ ನಾಲ್ಕು ಕಥಾಸಂಕಲನವನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದರು. ಮೂಲತಃ ಮಹಾರಾಷ್ಟ್ರದವರಾದ ತೇಜಸ್ವಿನಿಯವರ ತಂದೆ ಉದ್ಯೋಗ ಅರಸಿ ಒಂದು ಕಾಲಕ್ಕೆ ಬೆಂಗಳೂರಿಗೆ ಬಂದವರು. ಹೀಗಾಗಿ ಡಾ| ತೇಜಸ್ವಿನಿ ವಿದ್ಯಾಭ್ಯಾಸವೆಲ್ಲ ಬೆಂಗಳೂರಿನಲ್ಲಿ ನಡೆಯಿತು. ಬೆಳಗಾವಿಯಲ್ಲಿ ವೈದ್ಯ ವೃತ್ತಿಯನ್ನು ಆರಂಭಿಸಿದ ತೇಜಸ್ವಿನಿಯವರು ಅಪ್ಪ-ಅಮ್ಮನ ಒಪ್ಪಿಗೆಯ ಮೇರೆಗೆ ಬೆಳಗಾವಿಯ ವಾಸನ್ಸ್‌ ಆಯ್‌ ಕೇರ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ| ಅಮಿತ್‌ ಡೇರೆಕರ್‌ರವರನ್ನು ಮದುವೆಯಾಗಿ ಸುಖೀ ಸಂಸಾರದ ಸುಖವನ್ನುಂಡವರು. ತನ್ನ ಆಸ್ಪತ್ರೆಗೆ ಬರುವ ನೂರಾರು ಬಡರೋಗಿಗಳಿಗೆ ಸಹಾಯ ಮಾಡುತ್ತ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಈ ಸಾಹಿತ್ಯ ಸಹವಾಸದಲ್ಲಿಯೇ ಮಾಧುರ್ಯಸಿರಿಗೆ ಡಾ| ತೇಜಸ್ವಿನಿ ಪರಿಚಯವಾಗಿತ್ತು. ಆಗಾಗ ಫೋನಿನಲ್ಲಿ ಮಾತಾಡಿ ವೈಯಕ್ತಿಕ  ವಿಷಯವನ್ನೆಲ್ಲ ಹಂಚಿಕೊಂಡು ಈಗೀಗಂತೂ ಆತ್ಮೀಯ ಗೆಳತಿಯಾಗಿದ್ದರು. ಆ ಕಾರಣಕ್ಕೆ ಮಾಧುರ್ಯಸಿರಿ ತಪ್ಪದೆ ಡಾ. ತೇಜಸ್ವಿನಿ ಡೇರೆಕರರವರ ಕೃತಿ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದಳು. ಡಾ. ತೇಜಸ್ವಿನಿ ಆತ್ಮಕಥೆ ರಚಿಸುವಾಗ ಅನೇಕ ಬಾರಿ ಮಾಧುರ್ಯಳೊಂದಿಗೆ ಚರ್ಚಿಸಿದ್ದೂ ಇದೆ. ಆತ್ಮಚರಿತೆ ರಚನೆ ಹಿನ್ನೆಲೆ, ನೋವು, ಹತಾಶೆ ಜೊತೆಗೆ ಕಥೆಗಾರ್ತಿಯಲ್ಲಿರುವ ಮಾನವೀಯತೆ ಚೆನ್ನಾಗಿ ಬಲ್ಲವಳಾಗಿದ್ದಳು ಮಾಧುರ್ಯಸಿರಿ. ಆ ಕಾರಣಕ್ಕಾಗಿಯೇ ಪುಸ್ತಕ ಪರಿಚಯಿಸುವ ಗುರುತರ ಜವಾಬ್ದಾರಿ ಮಾಧುರ್ಯಳ ಪಾಲಿಗೆ ಬಂತು. ಪ್ರತಿಷ್ಠಿತ ಸೇಂಟ್‌ ಮಾಂಥೇರೊ ಸಂಸ್ಥೆಯ ಜನರಲ್‌ ಮ್ಯಾನೇಜರ್‌ ಹೃಷಿಕೇಶ ಗಾಯಕ್‌ ಆ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ್ದರು. ಪುಸ್ತಕವನ್ನು ಮಾಧುರ್ಯಸಿರಿ ಬಹಳ ಚೆನ್ನಾಗಿ ಪರಿಚಯಿಸಿದ್ದಳು. ಕಾರ್ಯಕ್ರಮದ ನಂತರ ಬಹಳಷ್ಟು ಜನ ಮಾಧುರ್ಯಸಿರಿಯ ಕೈ ಕುಲುಕಿ, “”ಒಬ್ಬ ಲೇಖಕಿಯ ನಿಜವಾದ ತುಡಿತಗಳಿಗೆ ದನಿಯಾಗಿ ನೀವು ಸಾಲುಗಳಿಗೆ ಜೀವ ತುಂಬಿ ಪರಿಚಯಿಸಿದಿರಿ” ಎಂದು ಖುಷಿ ಪಟ್ಟರು.

ಆದಾಗಲೇ ಸಮಯ ಆರು ದಾಟಿತ್ತು. ಬೆಳಗಾವಿಯಿಂದ ಖಾನಾಪುರ ತಲುಪಿ ಅಲ್ಲಿ ಪುನಃ ಏಳು ಗಂಟೆಗೆ ರಾಮನಗರಕ್ಕೆ ಹೋಗುವ ಬಸ್‌ ಹಿಡಿಯಬೇಕಿತ್ತು ಮಾಧುರ್ಯಸಿರಿಗೆ. ಆ ಬಸ್‌ ತಪ್ಪಿದರೆ ರಾತ್ರಿ ಒಂಬತ್ತರವರೆಗೆ ಬೇರಾವ ಬಸ್ಸೂ ಇರಲಿಲ್ಲ. ಕಾರ್ಯಕ್ರಮದಲ್ಲಿ ಮಾಧುರ್ಯಸಿರಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದ ಗಾಯಕ, “”ಮ್ಯಾಡಂ, ನಿಮಗೆ ತೊಂದರೆ ಆಗದು ಎಂದರೆ ನನ್ನ ಕಾರಿನಲ್ಲಿ ಖಾನಾಪುರದವರೆಗೂ ಬರಬಹುದು” ಎಂಬ ಸಲಹೆ ಕೊಟ್ಟಿದ್ದರು. ಕತ್ತಲು ತನ್ನ ಮುಖ ಪರಿಚಯಿಸುವ ಆ ಹೊತ್ತಲ್ಲಿ ಹೃಷಿಕೇಶ ಗಾಯಕ ತನ್ನ ಕಾರಿನಲ್ಲಿ ಬರಬಹುದು ಎಂದ ಒಂದು ಮಾತು ಮಾಧುರ್ಯಳಿಗೆ ಹೊಸ ಬೆಳಕಾಗಿ ಕಂಡಿತು. ಅವನು ತನ್ನ ಕಾರಿನಲ್ಲಿ ಬೇರೆ ಯಾರನ್ನೂ ಕರೆದೊಯ್ಯುತ್ತಿರಲಿಲ್ಲ ಎಂಬುದನ್ನು ಈ ಹಿಂದೆ ತಿಳಿದಿದ್ದಳು. ಹೃಷಿಕೇಶ ಡ್ರಾಪ್‌ ಕೊಡಲು ಮುಂದಾಗಿದ್ದು , ಮಾಧುರ್ಯಳಿಗೆ ತನ್ನ ಬಗ್ಗೆಯೇ ಹೆಮ್ಮೆ ಉಂಟಾಯಿತು. ಸ್ವಲ್ಪ ಹೊತ್ತು ಕಾರಿನಲ್ಲಿ ಇಬ್ಬರೂ ಕಾರ್ಯಕ್ರಮದ ಬಗ್ಗೆ ಮಾತಾಡಿದರು. ಮಿಕ್ಕಿದ್ದೆಲ್ಲ ಆಫೀಷಿಯಲ್‌ ವಿಷಯಗಳೇ ಆಗಿದ್ದವು. ಕಾರ್ಯಕ್ರಮದಲ್ಲಿ ಆ ದಿನ ಮಾಧುರ್ಯಸಿರಿ ಒಂದು ಗಂಡು ಆತ್ಮಚರಿತೆ ಬರೆಯುವುದಕ್ಕೂ, ಒಂದು ಹೆಣ್ಣು ರಚಿಸುವುದಕ್ಕೂ ಇರುವ ವ್ಯತ್ಯಾಸವನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದಳು. ಡಾ. ತೇಜಸ್ವಿನಿ ತಮ್ಮ ಜೀವನದಲ್ಲಿ ನಡೆದ ಎಲ್ಲ ಘಟನೆಗಳನ್ನು ಹಾಗೂ ತಾವು ನಡುವಯಸ್ಸಿನಲ್ಲಿ ಆಕರ್ಷಿತರಾದ ಎಲ್ಲ ವ್ಯಕ್ತಿತ್ವದವರನ್ನು ಹೆಸರಿನ ಸಹಿತ ಪುಸ್ತಕದಲ್ಲಿ ಅನಾವರಣ ಮಾಡಿದ್ದರು. ಅವಳ ಧೈರ್ಯ, ಬೆಳೆದು ಬಂದ ಪರಿಸರ, ಅವಳ ರೀತಿ-ನೀತಿ, ಗಂಡಸರನ್ನು ಎದುರಿಸಿಯಾದರೂ ಬಾಳಬಲ್ಲೆ ಎಂಬ ತೇಜಸ್ವಿನಿಯವರ ನಿಲುವಿನ ಕುರಿತಾದ ವಿಷಯದ ಕುರಿತು ಚರ್ಚಿಸುತ್ತಿರುವಾಗಲೇ ಮುಲ್ಲಾಸಾಬರ ಕಾಂಪ್ಲೆಕ್ಸ್‌ ಎದುರಿನ ಗಣಪತಿ ದೇವಸ್ಥಾನ ದಾಟಿ ಕಾರು ಮುಂದೆ ಹೋಗಿತ್ತು. “”ವಾಹನ ಚಲಾಯಿಸುವಾಗ ದಯಮಾಡಿ ಫೋನ್‌ ಕಾಲ್‌ ಅಟೆಂಡ್‌ ಮಾಡಬೇಡಿ. ನನಗೆ ಭಯವಾಗುತ್ತದೆ” ಎಂದು ಹೇಳಿ ಮಾಧುರ್ಯ ಹೃಷಿಕೇಶನ ಬಹಳಷ್ಟು ಫೋನ್‌ಗಳಿಗೆ ಅವನು ಉತ್ತರಿಸದ ಹಾಗೆ ನೋಡಿಕೊಂಡಿದ್ದಳು. ನಿಯಮ ಪಾಲನೆ ನೆಪದಲ್ಲಿ ಹೃಷಿಕೇಶ ತನ್ನೊಂದಿಗೆ ಮಾತಾಡಲಿ ಎಂಬ ಪುಟ್ಟ ಆಸೆಯೂ ಮಾಧುರ್ಯಳ ಒಳ ಮನಸಲ್ಲಿ ಇತ್ತು ಎಂಬುದನ್ನು ಹೃಷಿಕೇಶ ಕೂಡ ಗ್ರಹಿಸಿದ್ದ. “”ನಿನ್ನನ್ನು ಕಾರಿನಲ್ಲಿ ಕುಳ್ಳಿಸಿಕೊಂಡ ತಪ್ಪಿಗೆ ನಿನ್ನ ಮಾತು ಕೇಳುವ ಹಾಗಾಯಿತು” ಎಂದು ಗಾಯಕ ದೂರಿದ್ದರೂ ಅವಳ ಮೇಲೆ, ಅವಳ ಕೆಲಸದ ಮೇಲೆ  ಹೆಮ್ಮೆ ಅಭಿಮಾನ ಇದ್ದ ಕಾರಣ ಅವಳ ಮಾತು ಕೇಳಿದ್ದ. ಈಗಾಗಲೇ ರಾಜ್ಯದ ಸಾಹಿತ್ಯ ವಲಯದಲ್ಲಿ ಮಾಧುರ್ಯಳ ಸಾಹಿತ್ಯದ ಬಗ್ಗೆ, ಅವಳ ವ್ಯಕ್ತಿತ್ವದ ಬಗ್ಗೆ ಉತ್ತಮ ಅಭಿಪ್ರಾಯವಿತ್ತು. ಹೃಷಿಕೇಶ ಕೂಡ ಅವಳ ಬಗ್ಗೆ ಹಿರಿಯ ಸಾಹಿತಿಯೋರ್ವರು ಬರೆದ ಲೇಖನ ಓದಿದ್ದ. ಹೀಗಾಗಿ, ಖಾನಾಪುರದ ರಿಚ್‌ಮಂಡ್‌ ಸರ್ಕಲ್‌ ಬಳಿ ಮಾಧುರ್ಯಳನ್ನು ಇಳಿಸಿ ಮುಂದೆ ಸಾಗುವಾಗ ಯಾಕೋ ಏನೊ ಒಂಥರಾ ಖಾಲಿತನ  ಉಂಟಾದಂತೆ ಆಯಿತು. 

ತನ್ನ ಕಾರಿನಲ್ಲಿ ಇನ್ನು ಸ್ವಲ್ಪ ಹೊತ್ತಾದರೂ ಅವಳು ಇರಬಾರದಿತ್ತೇ? ಛೇ, ಹಾಗೇಕೆ ಅನಿಸುತ್ತಿದೆ? ಆದರೂ ಅವಳ ಇರುವು ಒಂಥರಾ ಖುಷಿ ಕೊಡುವುದೇಕೆ ನನ್ನಲಿ? ಇದು ಒಲವು ಅರಳುವ ಸಮಯವೇ? ಇಲ್ಲ. ಇಲ್ಲ. ಹಾಗೇನೂ ಇಲ್ಲ ಎಂದೆಲ್ಲ ಹೃಷಿಕೇಶ ಯೋಚಿಸುತ್ತಲೇ ಸೀದಾ ಮುಂದೆ ಸಾಗಿ ಸರಯೂ ಬನ ಎಂಬ ಹೆಸರು ಹೊತ್ತ ಮನೆಯ ಮುಂದೆ ಕಾರು ನಿಲ್ಲಿಸಿದ. ಮನೆ ಮಾಳಿಗೆ ಮೆಟ್ಟಿಲು ಏರಿದವನೇ ತೃಪ್ತಿಯಿಂದ ಒಂದರ್ಧ ಗಂಟೆ ನಿದ್ದೆ ಮಾಡಿದರೆ ಆಫೀಸಿಗೆ ಹೋಗಲು ಅನುಕೂಲವೆಂದು ಯೋಚಿಸಿ ಮಲಗಿಬಿಟ್ಟ.

ಖಾನಾಪುರದಿಂದ ರಾಮನಗರಕ್ಕೆ ಹೊರಡುವ ಬಸ್ಸಿನ ಕಿಟಕಿಯಂಚಲಿ ಕುಳಿತು ನಲವತ್ತೈದು ರೂಪಾಯಿ ಚಿಲ್ಲರೆ ಕೊಟ್ಟು ಟಿಕೆಟ್‌ ಮಾಡಿದ ಮಾಧುರ್ಯಸಿರಿಗೆ ಹಗುರವಾಗಿ ತೇಲಿ ಹೋಗಬೇಕಾದ ಭಾವಗಳೆಲ್ಲ ಯಾಕೋ ಘನವಾಗಿ ಒಳಗೊಳಗೆ ಕಾಡಿದಂತಾಯಿತು. ಹೃಷಿಕೇಶನಂಥ ಗಂಡಿನೊಂದಿಗೆ ಸ್ನೇಹವಿದೆ ಎಂದು ಹೇಳಿಕೊಳ್ಳುವುದೇ ಖುಷಿಯ ಸಂಗತಿ. ಇಂದಿನ ಪುಸ್ತಕ ಪರಿಚಯದ ಕುರಿತಾಗಿ ಒಳ್ಳೆಯ ಚರ್ಚೆ ಹಾಗೂ ಕಾರ್ಯಕ್ರಮ ಮುಗಿದ ಮೇಲೆ ಜಿಲ್ಲೆಯ ಹೆಸರಾಂತ ಕಂಪೆನಿಯ ಜನರಲ್‌ ಮ್ಯಾನೇಜರ್‌, ಸಾಹಿತ್ಯ ಪ್ರೇಮಿ, ಅಂಕಣಕಾರ ಹೃಷಿಕೇಶ ಗಾಯಕ ಕಾರಿನಲ್ಲಿ ಕುಳಿತು ಖಾನಾಪುರದವರೆಗೆ ಬಂದದ್ದು ಸಣ್ಣ ರೋಮಾಂಚನವೆಬ್ಬಿಸಿತು. ತುಂಬ ರಿಸರ್ವ್‌ ಇರುವ ಸುಂದರ ಪರ್ಸನಾಲಿಟಿ ಮತ್ತು ವಾಕ್‌ಚಾತುರ್ಯವಿರುವ ಗಾಯಕ ಯಾವ ಹುಡುಗಿಯರಿಗೂ ಈ ಹಿಂದೆ ಕಾರಿನಲ್ಲಿ ಡ್ರಾಪ್‌ ಕೊಟ್ಟಿರಲಿಲ್ಲ.ಇದು ಮಾಧುರ್ಯಸಿರಿಗೂ ಗೊತ್ತಿರುವ ವಿಷಯವೂ ಹೌದು.ಅವನ ಬಗ್ಗೆಯೇ ಯೋಚನೆ ಶುರುವಾಯಿತು. ಅವನು ನನ್ನೊಂದಿಗೆ ಮನೆಯವರೆಗೂ ಬರುವಂತಿದ್ದರೆ? ಮನೆಗೆ ಬಂದಾಗ ನಾನು ಕಾಫಿ ಮಾಡಿಕೊಡುವಂತಿದ್ದರೆ? ಅವನು ಪ್ರೀತಿಯಿಂದ ನನ್ನತ್ತ ನೋಡುತ್ತ ಕಿರುನಗೆ ನಕ್ಕರೆ? ಏನೇನೋ ಕನಸು. ಬಸ್ಸು ಪಾಂಡರಿ ನದಿ ದಾಟುವಾಗ ಅವನು ಬಿಟ್ಟು ಹೋದಂಥ ಅನಾಥಭಾವ ಅವಳಿಗೆ ಕಾಡಿದ್ದು ಕೂಡ ನಿಜ. ಆದರೆ, ತಕ್ಷಣ ಅವನು ತನ್ನ ಬಗ್ಗೆ ಏನೂ ಯೋಚಿಸಿರಲಿಕ್ಕಿಲ್ಲ. ಹಾಗಿದ್ದ ಮೇಲೆ ನಾನೇಕೆ ಅವನ ಬಗ್ಗೆ ಯೋಚಿಸಲಿ ಎಂದು ಕೂಡ ಅನಿಸಿತು.
.
.
ರಾಮನಗರ ಕೆಪಿಸಿಯವರು ತಮ್ಮ ನೌಕರರಿಗಾಗಿಯೇ ನಿರ್ಮಿಸಿದ ಕಾಲೋನಿಯ ಎಸ್‌ಬಿಐ ಬ್ಯಾಂಕಿನ ನೂತನ ಬ್ರಾಂಚಿನಲ್ಲಿ ಮಾಧುರ್ಯ ಸೇವೆ ಸಲ್ಲಿಸುತ್ತಿದ್ದಳು. ಚಿಕ್ಕಂದಿನಿಂದಲೂ ಕಥೆ ಬರೆಯಬೇಕೆಂಬ ಆಸೆ ಹೊಂದಿದ್ದ ಅವಳು ನೌಕರಿ ಸಿಕ್ಕ ಮೇಲೆ ಪೂರ್ತಿ ಸಾಹಿತ್ಯದಲ್ಲಿ ತೊಡಗಿಕೊಡಳು. ಅಲ್ಲಿ ಪರಿಚಯವಾದ ಹೊಸ ಸಂಬಂಧವೇ ಹೃಷಿಕೇಶ ಗಾಯಕ. ಹೃಷಿಕೇಶರ ಅಂಕಣ ಪ್ರತಿ ಬುಧವಾರ ಪ್ರಕಟವಾಗುತ್ತಿತ್ತು. ಬಹಳ ಸಲ ಅಬ್ದುಲ್‌ ಕಲಾಂ ರೋಡಿನಲ್ಲಿರುವ ಪತ್ರಿಕಾ ಆಫೀಸಿನಲ್ಲಿ ಅವರಿಬ್ಬರ ಭೇಟಿ ಆಗುತ್ತಿತ್ತು. ಮೊದಮೊದಲು ಒಂದು ಕಿರುನಗೆ, ನಂತರ ಹಾಯ್‌ ಬಾಯ್‌. ಊಟ ತಿಂಡಿ ಆಯ್ತು ಎಂದು ಕೇಳುವ ಪ್ರಶ್ನೆಗಳಿಂದ ಆರಂಭವಾದ ಸ್ನೇಹ ಮುಂದುವರೆದು ಇಬ್ಬರೂ ತಮ್ಮ ಬರಹದ ಕುರಿತು ತಪ್ಪು ಒಪ್ಪಿನ ಭಾವನೆಗಳನ್ನು ಭೇಟಿ ಆದಾಗಲೆಲ್ಲ ಹಂಚಿಕೊಳ್ಳುತ್ತಿದ್ದರು. ಇದರ ಮುಂದುವರಿದ ಭಾಗವೇ ಇಂದು ಮಾಧುರ್ಯಳನ್ನು ಕಾರಿನಲ್ಲಿ ಕುಳ್ಳಿಸಿಕೊಂಡು ಬಂದದ್ದಾಗಿತ್ತು.
.
.
ಎರಡು-ಮೂರು ವಾರ ಕಳೆದಂತೆ ಮಾಧುರ್ಯಸಿರಿಗೆ ಹೃಷಿಕೇಶ ಪುನಃ ಫೋನ್‌ ಮಾಡಿದಾಗ ಮತ್ತೆ ತನ್ನಲ್ಲಿ ಕನಸು ಚಿಗುರಿಸಿಕೊಂಡ ಮಾಧುರ್ಯ, ಸೂರ್ಯೋದಯಕ್ಕೆ ಮುನ್ನ ಶುಭಾಶಯಗಳ ಮೆಸೇಜುಗಳನ್ನು, ವಾಟ್ಸಾಪ್‌ ಚಿತ್ರಗಳನ್ನು ತಾನು ಬರೆಯುವ ಅನೇಕ ಕಥೆಗಳನ್ನು ಕಳಿಸಲು ಆರಂಭಿಸಿ, ಕೊನೆಗೆ ಅದು ಯಾವಾಗ ಎಲ್ಲಿ ಹೇಗೆ ಎಂದು ಅರಿಯುವುದರ ಒಳಗೆ ಒಲವಲಿ ಸಿಕ್ಕಿಕೊಂಡಿದ್ದಂತೂ ನಿಜ. ಹೃಷಿಕೇಶ ಅವಳಿಗೆ ಜೀವವೂ ಆಗಿದ್ದ, ಜೀವನವೂ ಕೂಡ. ಸಂತೋಷ, ನಗು, ಕೋಪ, ನಿರ್ಬಂಧ, ಹೇರಿಕೆ ಹೀಗೆ ಎಲ್ಲ ಅನ್‌ಲಿಮಿಟ್‌ ವಹಿವಾಟು ಆದುದಕ್ಕಾಗಿ ಇಬ್ಬರಿಗೂ ಅಚ್ಚರಿ.
.
.
ಹಳಿಯಾಳ ಬೀಡಿಯಲ್ಲಿರುವ ಶರಾವತಿ ಕಲಾಕೇಂದ್ರದಲ್ಲಿ ಮಾಧು ರ್ಯಸಿರಿಯ ಪ್ರಬಂಧ ಮಂಡನೆ ಇತ್ತು. ವಿಮರ್ಶಕರು ತಮಗರಿವಿಧ್ದೋ ಅಥವಾ ಅರಿವಿಲ್ಲದೆಯೋ ಸ್ತ್ರೀಲೇಖಕರನ್ನು ಪ್ರತ್ಯೇಕಿಸುವುದನ್ನು ನಡೆಸಿ¨ªಾರೆ. ಸ್ತ್ರೀಯರ ಬದುಕಿನಲ್ಲಿ ಘಟಿಸುವ ಸರ್ವೇಸಾಮಾನ್ಯವಾದ ಸಂಗತಿಗಳಿಂದ ಹಿಡಿದು ಅತಿ ಮುಖ್ಯ ವಿಚಾರದವರೆಗಿನ ಎಲ್ಲ ಆಯಾಮಗಳು ಸಾಹಿತ್ಯದ ವಸ್ತುವಾಗಬಲ್ಲದು. ಈ ಸಮರ್ಥನೆಯನ್ನು ಬಹಳ ಪರಿಣಾಮಕಾರಿಯಾಗಿ ಮಹಿಳೆಯರು ಮಂಡಿಸುತ್ತಿದ್ದಾರೆ. ಸ್ವತಃ ಅನುಭವಿಸಿ ಬರೆದ ಅನೇಕ ಕವಿತೆಗಳು ಪ್ರೀತಿಯ ಹಲವು ಆಯಾಮಗಳನ್ನು  ತೆರೆದಿಡುವ ಸಾಹಿತ್ಯವೇ ಆಗಿದೆ. ಪ್ರೀತಿಯ ಹುಡುಕಾಟ ಎನ್ನುವುದು ನಿತ್ಯ ನಿರಂತರ ನಿತ್ಯನೂತನವಾಗಿ ಮಹಿಳೆಯ ದನಿಯಾಗಿ ನಿಲ್ಲುತ್ತದೆ ಎಂದು ಎನ್ನುತ್ತಿದ್ದಂತೆ ಮಂತ್ರಮುಗ್ಧರಾಗಿ ಕೇಳುತ್ತ ಕೂತ ಜನಸಮೂಹ ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ, “ವಾವ್‌Ø ! ಬ್ರಿಲಿಯಂಟ್‌ ವುಮನ್‌’ ಎನ್ನುವ ಉದ್ಗಾರಗಳು ಹೊರಟವು. ಸತತ ಒಂದು 

ತಾಸು ವೇದಿಕೆಯಲ್ಲಿ ನಿಂತು ಮಾತಾಡುತ್ತಿದ್ದಳು ಮಾಧುರ್ಯಸಿರಿ. ಅವಳ ದನಿಯ ಏರಿಳಿತ ಮಾಧುರ್ಯವಾಗಿ ಲಯಬದ್ಧವಾಗಿ ಕೇಳುತ್ತಿತ್ತು. ಹೃಷಿಕೇಶ ತನ್ನೊಂದಿಗೆ ಇ¨ªಾನೆ ಎಂಬ ವಿಶ್ವಾಸವೂ ಇತ್ತು. ತಾನು ಒಂಟಿಯಲ್ಲ ಎಂಬ ಭಾವನೆ ಅವಳಲ್ಲಿ ಹುರುಪು ತುಂಬಿತ್ತು. ಹೊಸ ಹೊಸ ಶಬ್ದ ಬಳಸಿ ಮೌನದ ಭಾವ ಒಡೆಯುವ ಕಲೆ ಸಿದ್ಧಿಸಿಕೊಂಡಿದ್ದಳು. ಪ್ರತಿಸಲ ಅವಳ ವಿಮರ್ಶಕನಾಗಿ ನಿಂತು ಹೃಷಿಕೇಶ ಅವಳ ಮಾತಿನ ಬಗ್ಗೆ ತನ್ನ ಪ್ರತಿಕ್ರಿಯೆ ನೀಡುತ್ತ ಅವಳ ಬೆಳೆಸುತ್ತಿದ್ದ. ಇದು ಬಹುತೇಕರಿಗೆ ಅಸೂಯೆ ಹುಟ್ಟಿಸಿದ್ದೂ ಇದೆ.
.
.
ಎಂದಿನಂತೆ ಅಂದು ಕೂಡ ವೇದಿಕೆಯ ಮೆಟ್ಟಿಲಿಳಿದು ಮುಂದಿನ ಸಾಲಿನಲ್ಲಿ ಕೂತ ಗಾಯಕನ ಪಕ್ಕದ ಕುರ್ಚಿಯಲ್ಲಿ ತಾನು ಬಂದು ಕುಳಿತಳು ಮಾಧುರ್ಯ. ಅಪಾರವಾದ ಓದಿನ ಅನುಭವದಿಂದ ತನ್ನ ಕಾರ್ಯಕ್ಷೇತ್ರದಲ್ಲಿ ಸದಾ ಹೊಸ ಪ್ರಯೋಗ ಮಾಡಲು ಹಾತೊರೆಯುವ ಬುದ್ಧಿವಂತ ಹೃಷಿಕೇಶ ಅವಳನ್ನು ತಿದ್ದುತ್ತಲೇ ಪ್ರೀತಿಸಿದ ವ್ಯಕ್ತಿ. ಆದರೆ, ಈ ಬಾರಿ ಯಾಕೋ ಗಾಯಕ್‌ ಬೇರೆಯೇ ಮಾತಾಡಿದ್ದ. “”ಸಿರಿ, ಎಲ್ಲರೂ ನಿನ್ನ ಮಾತು ಕೇಳಲು ಬರುವುದಿಲ್ಲ.ಕೆಲವರು ನಿನ್ನ ನೋಡುವುದಕ್ಕೆಂದೇ ಬಂದಿರುತ್ತಾರೆ. ಕಲೆಯ ಜೊತೆಗೆ ನಿನ್ನ ಸೌಂದರ್ಯವನ್ನು ಕಣ್‌ ತುಂಬಿಕೊಳ್ಳುತ್ತಾರೆ” ಎಂದು ವ್ಯಂಗ್ಯವಾಗಿ ಗುಣುಗುಣಿಸಿದ್ದ. ವೈಚಾರಿಕತೆ, ಮಾನವೀಯತೆ, ಕರುಣೆ ಮುಂತಾದ ಉತ್ತಮ ಗುಣ ರೂಢಿಸಿಕೊಂಡ ಹೃಷಿಕೇಶ ಇತ್ತೀಚೆಗೆ ಬದಲಾದಂತೆ ಕಂಡಿತು. ಹೃಷಿಕೇಶನ ವರ್ತನೆ ಈ ರೀತಿ ಮುಂದುವರೆದರೆ ತನ್ನ ಬಗ್ಗೆ , ತನ್ನ ಸಾಹಿತ್ಯದ ಸ್ಥಿತಿಯ ಬಗ್ಗೆ ಆಡಿಕೊಳ್ಳಲು ಅಡಿಕೆಯ ಹೋಳಿನಂತೆ ಸಿಗಬಹುದಾದ ಸಾಧ್ಯತೆಗಳನ್ನು ಊಹಿಸಿಯೇ ಹೆದರಿದಳು ಮಾಧುರ್ಯ. ಇಂಥ ಮಾತುಗಳು ಪದೇಪದೇ ಬರಲಾರಂಭಿಸಿದವು. ಯಾರೊಂದಿಗಾದರೂ ಮಾತಾಡಿದರೂ ಸಂಶಯ ಹೆಡೆ ಎತ್ತುತ್ತಿತ್ತು. ಈಗೀಗ ಕಾರ್ಯಕ್ರಮ ಇದೆ ಎಂದರೆ ಸಾಕು ಸಿಡಿಮಿಡಿಗೊಳ್ಳುತ್ತ, “”ಮುಗೀತು, ಇನ್‌ ಮೇಲೆ ನನ್ನ ನೆನಪು ಇರುವುದಿಲ್ಲ ನಿನಗೆ. ಕಾರ್ಯಕ್ರಮದ ಲಹರಿಯಲ್ಲಿಯೇ ಮೂರ್‍ನಾಲ್ಕು ದಿನ ನನ್ನ ಮರೆಯುತ್ತಿ” ಎಂದು  ಚುಚ್ಚುತ್ತಿದ್ದ. ವಾದ ಮಾಡಲು ನಿಂತರೆ ಅದು ಮುಗಿಯದ ಕಥೆಯಾಗಿರುತ್ತಿತ್ತು. ಪ್ರತಿ ಹದಿನ್ಯೆದು ದಿನಕ್ಕೊಮ್ಮೆ ಏನಾದರೂ ನೆಪವೊಡ್ಡಿ ಜಗಳ. ಒಂದು ಜಗಳ ಸಮಾಧಾನವಾಗಿ ಮುಗಿಯುತ್ತಿದ್ದಂತೆ ಇನ್ನೊಂದು ಶುರುವಾಗುತ್ತಿತ್ತು. ಮಾಧುರ್ಯಸಿರಿಗೆ ಯಾಕೋ ಈ ಸಾಹಿತ್ಯದ ಸಾಂಗತ್ಯವೇ ಬೇಡ ಎನಿಸುತ್ತಿತ್ತು. ಬರೆದಂತೆ ಯಾರೂ ಇಲ್ಲ. ಸೃಜನಶೀಲತೆಯ ಹಿಂದೆ ಕ್ರೂರ ಮನಸ್ಸೊಂದು ಕೆಲಸ ಮಾಡುತ್ತ ಇರುತ್ತದೆಯಾ ಎಂದು ಯೋಚಿಸಹತ್ತಿತು ಅವಳ ಮನ. ಇತ್ತೀಚೆಗೆ ಒಂಥರಾ ಕೀಳರಿಮೆಗೆ ಒಳಗಾಗಿದ್ದಳು. ಯಾವುದಾದರೊಂದು ಪುಸ್ತಕ ಓದಿನ ಮೂಲಕ ಮನಸ್ಸು ಹಗುರವಾಗಿಸೋಣ ಎಂದುಕೊಂಡಳು ಸಾಧ್ಯವಾಗಲಿಲ್ಲ. ಕಣ್ಣ ಮುಂದೆಲ್ಲ ಷೇಕ್ಸ್‌ಪಿಯರನ ಒಥೆಲೋದ ಡೆಸ್ಟಿಮೋನ್‌, ಟೆಂಪೆಸ್ಟ್‌ ನ ಮಿರಾಂಡಾ ಪಾತ್ರಗಳೇ ತಾನಾಗಿ ಕಾಣುತ್ತಿದ್ದವು. ಪರಿಚಿತ ವ್ಯಕ್ತಿಗಳೆಲ್ಲ ಸಂಶಯದ ಆಹಾರಗಳಾಗಿದ್ದವು ಅವನಿಗೆ. ತನ್ನ ಮೇಲಿನ ಅತಿಯಾದ ಪ್ರೀತಿ ಅವನ ಈ ತರಹದ ಯೋಚನೆಗೆ ಕಾರಣ ಅಂತೆನಿಸಿದರೂ ಇನ್ನೆಷ್ಟು ದಿನ ಎಂಬ ಪ್ರಶ್ನೆ ಕಾಡದೆ ಇರಲಿಲ್ಲ. ಪ್ರತಿಬಾರಿ ಸಿಕ್ಕಾಗಲೂ ಒಮ್ಮೊಮ್ಮೆ ಒಂದೊಂದು ರೀತಿ ಇರುತ್ತಿದ್ದ. ಪತ್ರಿಕೆಯಲ್ಲಿ ಮಾಧುರ್ಯಳ ಕಥೆ ಪ್ರಕಟವಾದರೆ ಅದರ ಸಂದರ್ಭ, ಓದಿನ ಹಿನ್ನೆಲೆ, ಅವಳ ಅನುಭವದ ಆಳ- ಹೀಗೆ ಎಲ್ಲ ಸಂಗತಿ ಆಧರಿಸಿ ಬೇರೆಯದೇ ಆದ ಅರ್ಥ ಕಲ್ಪಿಸಿ ಮಾತಾಡುತ್ತಿದ್ದ. ಪ್ರೇಮಕಥೆಯನ್ನೇನಾದರೂ ಅವಳು ಬರೆದರೆ ಓದಿದಷ್ಟೂ ಹೊಸ ಹೊಸ ಅರ್ಥ ಸೃಷ್ಟಿಸಿ ಬೈಯುತ್ತಿದ್ದ. ಈಗೀಗ ಮಾಧುರ್ಯಳಿಗೆ ಅವನು ಬೇರೆಯಾಗಿಯೇ ಕಾಣುತ್ತಾನೆ. ತಾನು ತಿಳಿದಂತೆ ಹೃಷಿಕೇಶ ಹೊರನೋಟಕ್ಕೆ ಕಾಣಿಸುವಷ್ಟು ಪ್ರಗತಿಪರನಲ್ಲ ಅನಿಸುತ್ತದೆ. ಅವನು ಈ ಹಿಂದೆ ತೋರಿಸಿದ್ದ ಪ್ರೀತಿ-ಔದಾರ್ಯದ ಹಿಂದೆ ಉಳಿದದ್ದು ತನ್ನ ಬಗೆಗಿನ ಅಹಂ ಆಗಿತ್ತೆ ಹೊರತು ಬೇರೆಯೇನಲ್ಲ. ಒಂದು ಸುಂದರವಾದ ಹೂವು ಯಾವ ಗಂಡಸರಿಗೂ ಸುಲಭದಲ್ಲಿ ಸಿಗಲೇಬಾರದು. ಸಿಕ್ಕರೆ ತನ್ನಂತಹ ಪರಿಸ್ಥಿತಿ ಆಗುತ್ತದೆ. ಅದರ ಬೆಲೆ ಗೊತ್ತಾಗುವುದಿಲ್ಲ. ಸಂಬಂಧದ ಅರಿವು ತಿಳಿಯದು. ತಾನು ಹೃಷಿಕೇಶನ ಅಹಂಕಾರದ ಕಿರೀಟಕ್ಕೆ ಸಿಕ್ಕಿಸಿಕೊಂಡ ಒಂದು ನವಿಲು ಗರಿಯಷ್ಟೇ.
ಅವನಿಗಿಂತ ಆಳವಾಗಿ ಯೋಚಿಸಲು ಕಲಿಸಿದ್ದು ಅವನೇ. ಆದರೆ, ಅದು ಸಾಧ್ಯವಾದಾಗ ಪುರುಷಾಹಂಕಾರದ ಚಿಪ್ಪು ತೆರೆಯತೊಡಗಿದೆ ಎಂಬೆಲ್ಲ ಸಂಗತಿಗಳು ಮಾಧುರ್ಯಳ ಗಮನಕ್ಕೂ ಬಂತು. ಅಷ್ಟಾಗಿಯೂ ಮಾಧುರ್ಯ ಅವನಿಗೆ ಫೋನ್‌ ಮಾಡಿ ಮಾತಾಡಿಸುವ ಪ್ರಯತ್ನ ಮಾಡುತ್ತಿರುತ್ತಾಳೆ. ಈಗೀಗ ಅವನು ಫೋನ್‌ ಕಟ್‌ ಮಾಡಿ ದೂರವಾಗಲು ಬಯಸಿದಂತೆ ವರ್ತಿಸುತ್ತಾನೆ. ಹಾಗಾದಾಗಲೆಲ್ಲ ಅವನಿಗೆ ಹೆಣ್ಣು ಬೇಕು, ಮನಸ್ಸಲ್ಲ. ಅವನಿಗೆ ಸುಖ ಬೇಕು, ಸಾಂಗತ್ಯವಲ್ಲ ಎಂದು ಮಾಧುರ್ಯ ಅಂದುಕೊಂಡದ್ದಿದೆ. ಯೋಚಿಸಿದರೆ ಪುಟ್ಟ ಮಗುವಿನಂತೆ ಅಳಬೇಕೆನಿಸುತ್ತದೆ ಅವಳಿಗೆ. “”ನಮ್ಮ ನಡುವೆ ಏನೂ ಉಳಿದಿಲ್ಲ. ನೀನು ದೂರವಾಗು. ದಯವಿಟ್ಟು ತೊಂದರೆ ಕೊಡಬೇಡ. ಸಾಹಿತ್ಯ, ಸಾಹಿತಿ ಜೊತೆಗಿನ ಮಾತು, ವೇದಿಕೆ ಎಲ್ಲ ನಿನಗೆ ಸಿಗಲಿ” ಎಂದು ಸಲೀಸಾಗಿ ಮೇಸೇಜು ರವಾನಿಸಿದ್ದ. ವಾಟ್ಸಾಪ್‌ ಸಂದೇಶದಲ್ಲಿ ಮೂಡಿದ್ದ ನೀಲಿ ಬಣ್ಣದ ಜೋಡಿ ಗೆರೆಗಳನ್ನು ನೋಡಿದ ಅವನಿಗೆ ಮಾಧುರ್ಯಸಿರಿ ವಾಟ್ಸಾಪ್‌ ನೋಡಿರುವುದು ಖಾತ್ರಿಯಾಗಿದೆ. ಸಂದೇಶವನ್ನೋದಿದ ಅವಳ ಕಣ್ಣು ಹನಿಗೂಡಿದ್ದರ ಅರಿವು ಅವನಿಗೆ ಆಗಿರಲಿಕ್ಕಿಲ್ಲ. ಅವಳು, “”ನಿನ್ನನ್ನು ಮರೆಯಲಾಗದು. ಅರ್ಥ ಮಾಡಿಕೊ” ಎಂದು ಕಳಿಸಿದ ವಾಟ್ಸಾಪ್‌ ಮೆಸೇಜುಗಳೆಲ್ಲ ಅವನ ನಿರ್ಲಕ್ಷ್ಯಕ್ಕೆ ಗುರಿಯಾಗಿ ನೋಡದೆ ಕರಿಗೆರೆಗಳನ್ನೇ ಹೊತ್ತುಕೊಂಡು ಬಿದ್ದಿವೆ.
.
.
ದಂಡೆಯೂದ್ದಕ್ಕೂ ನಿಂತ ಗಾಳಿ ಮರದಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತಿದ್ದವು. 
ಮಾಧುರ್ಯಸಿರಿ ಹೊಸ ಕಥೆ ಬರೆಯಲಾರಂಭಿಸಿದಳು.

ಅಕ್ಷತಾ ಕೃಷ್ಣಮೂರ್ತಿ 

ಟಾಪ್ ನ್ಯೂಸ್

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.