ಪ್ರಳಯ


Team Udayavani, Oct 21, 2018, 6:00 AM IST

6.jpg

ಇಷ್ಟು ದೊಡ್ಡ ಗಂಡಾಂತರ ಒದಗಲಿರುವುದನ್ನು ಆ ಊರಿನ ಜನತೆ ಕನಸುಮನಸಿನಲ್ಲೂ ಯೋಚಿಸಿರಲಿಲ್ಲ. ಗ್ರಹಣದಂದು ಊರು ಮುಳುಗುತ್ತದಂತೆ ಎಂಬ ವದಂತಿ ಚಿಗುರಿ ಜಿಗರ್ರೆಂದು ಕಾಳ್ಗಿಚ್ಚಿನಂತೆ ಹಬ್ಬಿ ಊರಿಡೀ ಎಲ್ಲರಿಗೂ ಗೊತ್ತಾದ ಮೇಲೆ, ಕಳೆದ ಕೆಲವಾರು ದಿನಗಳಿಂದ ಒಂದೇ ಸವನೆ “ಧೋ’ಗುಟ್ಟುವ ಮಳೆ, ಗುಡುಗು, ಮಿಂಚು, ಏರುತ್ತಿರುವ ನೆರೆನೀರು- ಇವುಗಳಿಂದ ಕಂಗೆಟ್ಟಿರುವ ಮಾದಣ್ಣನಂತಹ ಹಿರಿಯರಿಗೆ ತಲೆಯ ಮೇಲೆ ತೊಲೆ ಕುಸಿದಂತೆ ಆಗಿದೆ. ಬಡವ-ಶ್ರೀಮಂತರೆಂಬ ಭೇದವಿಲ್ಲದೆ ಇಡೀ ಊರಿಗೆ ಎಂದಿಲ್ಲದ ಭೀತಿ ಆವರಿಸಿದೆ.

ಮೂಡುಗಡೆ ಘಟ್ಟ , ಪಡುಗಡೆ ಕಡಲು-ಮಧ್ಯೆ ಇರುವ ಆ ಊರಿನಲ್ಲಿ ಕಳೆದ ಕೆಲವು ದಿನಗಳಿಂದ ಜನ ಈವರೆಗೆ ಕಂಡುಕೇಳರಿಯದ ಧಾರಾಕಾರ ಮುಸಲಧಾರೆ ಮಳೆ. ಇದರಿಂದಾಗಿ ಊರಿನ ನಡುವೆ ಹಾದುಹೋಗುವ ಪಾಪನಾಶಿನಿ ಹೊಳೆ ಉಕ್ಕಿ ಸೊಕ್ಕಿ ಹರಿಯುತ್ತಿದೆ. ಪಾಪನಾಶಿನಿಯ ಪಡುಗಡೆ ಅರ್ಧಊರು. ಇಲ್ಲಿ ಊರಿನ ಪೇಟೆ ಇದೆ. ಕಿರಾಣಿ ಅಂಗಡಿಗಳು, ಸಂತೆ ಮಾರ್ಕೆಟ್‌, ಪಂಚಾಯತ್‌ ಆಫೀಸು, ಸರ್ಕಾರಿ ಶಾಲೆ, ಇಗರ್ಜಿ, ಬ್ಯಾಂಕ್‌, ರಾಮನಾೖಕರ ಹೊಟೇಲ್‌ ಗಾಯತ್ರಿ ಭವನ ಇವೆಲ್ಲ ಇವೆ. ಹೊಳೆಯ ಎರಡು ದಡಗಳಲ್ಲೂ ಒಂದಿಷ್ಟು ಕಾಡು, ಬಿದಿರು ಮೆಳೆ, ಪೊದೆಗಳು. ಮೂಡು ದಡದಿಂದಾಚೆ ಇರುವುದು ಹೆಚ್ಚಿನವು ಸಾಗುವಳಿ ಗ¨ªೆಗಳು, ತೆಂಗಿನತೋಟ, ಕಂಗು, ಬಾಳೆ, ಒಂದು ಕಾಲದಲ್ಲಿದ್ದ ಕರಿಬೋಗಿ ಕಾಡಿನ ಅವಶೇಷಗಳು, ಬಿದಿರುಮೆಳೆ, ಬಂಡೆ, ಕಿರುಗುಡ್ಡೆಗಳ ನಡುನಡುವೆ ಅಲ್ಲೊಂದು ಇಲ್ಲೊಂದು ಮನೆ, ಜೀರ್ಣಾವಸ್ಥೆಯ ದೇವಸ್ಥಾನ, ಗರಡಿ, ದೈವಸ್ಥಾನ, ಸುಬ್ಬಣ್ಣಯ್ಯರ ಹೆಬ್ಟಾಗಿಲಿನ ವಿಶಾಲ ಮನೆ- ಇವೆಲ್ಲ ಇವೆ.

“ಮಾಯಿ ತಿಂಗಳಿಗೆ ಮಾರಿಬೊಳ್ಳ’ ಎಂಬ ಗಾದೆ ಈ ಬಾರಿ ಸುಳ್ಳಾಯಿತು. ಜುಲಾಯಿ ತಿಂಗಳು ಬಂದರೂ, ಪುನರ್ವಸು ನಕ್ಷತ್ರ ಸರಿದು ಹೋದರೂ, ಬಾರದ ಮಳೆ, ಪುಷ್ಯ ಹೊಸ್ತಿಲು ದಾಟುತ್ತಿರುವಂತೆ ರಪರಪನೆ ಜಡಿಯಹತ್ತಿತ್ತು. ಕಳೆದ ಹದಿನೆಂಟು ದಿನಗಳಿಂದ ರಾತ್ರಿ- ಹಗಲು ಮಳೆ ಸೋನೆಯಾಗಿದೆ; ಸುರಿಯುತ್ತಲೇ ಇದೆ. ಒಮ್ಮೆ ಬತ್ತಿದ ಹೊಳೆ ಪಾಪನಾಶಿನಿ ಮೈತುಂಬಿಕೊಂಡದ್ದು ಮಾತ್ರವಲ್ಲ, ಪಡುಗಡೆ ಕಡಲು ಉಕ್ಕಿ ದಡಮೀರಿ ಅಬ್ಬರಿಸಿ ಕರಾವಳಿಯನ್ನು ಕಬಳಿಸಿತೊಡಗಿದೆ.

ತುಂಬಿಕೊಂಡು ದಡಮೀರಿದ ಹೊಳೆ, ಧೋಧೋ ಸುರಿಯುವ ಮಳೆ, ಎಡೆಬಿಡದ ಸಿಡಿಲುಮಿಂಚಿನ ಆರ್ಭಟ, ತಲೆಯನ್ನು ಸೂರಿನ ಹೊರಹಾಕಿ ಇಣುಕಲು ಬಿಡದಷ್ಟೂ ರುಮುರುಮು ಬೀಸುವ ಚಳಿಗಾಳಿ ಇದೆಲ್ಲದರ ನಡುವೆಯೇ ಮನೋಹರ ಕಡವಿನ ಬಾಗಿಲಿಗೆ ಬಂದು, ದೋಣಿಯ ಹಗ್ಗ ಬಿಚ್ಚಿ, ಉಕ್ಕುವ ನೆರೆಯ ಮೇಲಿಂದ ತಾನೇ ಹುಟ್ಟುಹಾಕುತ್ತ ಹೊಳೆದಾಟಿ ಪಡುಗಡೆಯ ಪೇಟೆಗೆ ಹೊರಟಿದ್ದಾನೆ. ಈಗೀಗ, ಮನೋಹರನಿಗೆ ಸ್ವಲ್ಪ ಬೆಚ್ಚ ಅಂತೆ; ಸಾವಿತ್ರಿ ಈಗ ಮನೆಯಿಂದ ಹೊರಗೆ ಹೊರಡುತ್ತಿಲ್ಲವಂತೆ… ಮುಂತಾಗಿ ಊರಲ್ಲಿ ಸುದ್ದಿ ಉಂಟು.

ಪಾಪನಾಶಿನಿ ಹೊಳೆಯ ಮೂಡುದಂಡೆಗೆ ತಾಗಿಕೊಂಡಂತೆ ಇರುವ ಕಡವಿನ ಮನೆ ಮಾದಣ್ಣನದು. ಸಾವಿತ್ರಿ ಮಾದಣ್ಣನ ಹಿರಿಯ ಮಗಳು. ಹಿರಿಯ ಗಂಡುಮಕ್ಕಳು ಮೂವರೂ ಲಗ್ನವಾಗಿ ಬೇರೆಡೆ ಇದ್ದಾರೆ. ಮಾದಣ್ಣನ ಹಂಚಿನ ಹಳೆಯ ಮನೆದಾಟಿ, ಮೂಡುಗಡೆಗೆ- ಈಗ ನೆರೆನೀರಿನಲ್ಲಿ ಅಡಗಿರುವ ನಾಲ್ಕು ಕೊçಲು ಸಾಗುವಳಿ ಗದ್ದೆ, ಹತ್ತು ತೆಂಗಿನ ಮರಗಳು ಮಾದಣ್ಣನಿಗೆ ಡಿಕ್ಲರೇಶನ್‌ ಅರ್ಜಿಯಿಂದ ಸ್ವಾಧೀನಕ್ಕೆ ಬಂದದ್ದು. ಅದರಾಚೆ ಅಲ್ಲಲ್ಲಿ ಚದರಿಕೊಂಡಂತೆ ಇರುವ ಸುಮಾರು ಐವತ್ತರಷ್ಟು ಮನೆಗಳು. ಮರದ ವ್ಯಾಪಾರಿ ಕರಿಯಪ್ಪರ ಉಪ್ಪರಿಗೆ ಮನೆ, ಬಿಲ್ಡಿಂಗ್‌ ಕಂಟ್ರಾಕ್ಟರ್‌ ಡಿಸಿಲ್ವರ ಟೆರೇಸಿನ ಮರಿಯಾ ವಿಲ್ಲಾ, ಎತ್ತರದಲ್ಲಿರುವ ಸುಬ್ಬಣ್ಣಯ್ಯರ ಹೆಬ್ಟಾಗಿಲ ಮನೆ- ಬೆರಳೆಣಿಕೆಯ ಇವನ್ನೆಲ್ಲ ಬಿಟ್ಟರೆ ಉಳಿದ ಹೆಚ್ಚಿನವು ಮಂಗಳೂರು ಹಂಚಿನ ಮನೆಗಳು. ಅದರೀಚೆಯ ಅದರಾಚೆಯ, ಘಟ್ಟದ ಬುಡದವರೆಗಿನ ಭೂಪ್ರದೇಶವನ್ನು ತಮ್ಮ ಊರು ಎಂಬುದಾಗಿ ಇಲ್ಲಿನ ಜನ ಹಚ್ಚಿ ಕೊಂಡಿರುವವರು.

ನಿನ್ನೆಯಿಂದ ತೀರಾ ವೇಗದಲ್ಲಿ ನೆರೆ ಉಕ್ಕಿಯುಕ್ಕಿ ಊರೊಳಗೆ ಧಾವಿಸುತ್ತಿದೆ. ತಗ್ಗು ಸಾಲಿನ ಮನೆಗಳೆಲ್ಲ ನೀರಿನಲ್ಲಿ ಅರ್ಧರ್ಧ ಮುಳುಗುತ್ತಿವೆ. ಧಾರಾಕಾರವಾಗಿ ಸುರಿಯುವ ಮಳೆಹನಿಯಾಗುವ ಯಾವ ಸೂಚನೆಯೂ ಇಲ್ಲ. ಇನ್ನು, ಜೀವ ಉಳಿಯಬೇಕೆಂದಿದ್ದರೆ ತಗ್ಗು ಸಾಲಿನ ಜನರೆಲ್ಲ ಎತ್ತರದ ಸ್ಥಳಕ್ಕೆ ಹೋಗದೆ ಬೇರೆ ಉಪಾಯವಿಲ್ಲ ಎಂದು ತೀರ್ಮಾನವಾಯಿತು. ಊರಲ್ಲಿ ಸಾಕಷ್ಟು ಎತ್ತರದಲ್ಲಿರುವುದು ಸುಬ್ಬಣ್ಣಯ್ಯರ ಹೆಬ್ಟಾಗಿಲ ಮನೆ. ಅದರ ಒಳಹೊರ ಅಂಗಣ, ವಿಸ್ತಾರವಾಗಿದ್ದು ಅಲ್ಲಿ ಎಲ್ಲರೂ ಹೋಗಿ ಸೇರಿಕೊಳ್ಳುವುದೆಂಬ ಮಾತಾಯಿತು. ಎಲ್ಲರೂ!? ಎಲ್ಲ ಜಾತಿಯವರು…? ಭಗವಂತಾ, ಎಂಥ ಕಾಲ ಬಂತು… ಎಂದು ಸುಬ್ಬಣ್ಣರು ಅವರ ಸಂಸಾರ ಒಳಗೊಳಗೆ ಸಂಕಟಪಟ್ಟರೂ, ಊರಿನ ಚೇರ್‌ಮನ್ನರೇ ದೃಢವಾಗಿ ಆ ಸಲಹೆ ಮಾಡಿದ ಮೇಲೆ ಬೇಡವೆನ್ನಲಾಗಲಿಲ್ಲ. ನಿನ್ನೆಯಿಂದ ಜನ ತಮ್ಮ ಇದ್ದಬದ್ದ ದವಸಧಾನ್ಯ, ಬಟ್ಟೆಬರೆ, ಜಾನುವಾರುಗಳನ್ನು ಜೊತೆಗಿಟ್ಟುಕೊಂಡು ಸುಬ್ಬಣ್ಣಯ್ಯ ಮನೆಯಂಗಣದ ಪತ್ರದಡಿ ಸೇರುತ್ತಿದ್ದಾರೆ. ಆದರೆ, ಮಾದಣ್ಣನ ಮಗಳು ಸಾವಿತ್ರಿ ಮಾತ್ರ, “ನಾನು ಆ ಮನೆಗೆ ಕಾಲಿಡಲಾರೆ’ ಎಂದೇ ಹಟ ಹಿಡಿದು ಕೂತಿದ್ದಳು. ಆಚೀಚೆ ಮನೆಯ ನಾಲ್ವರು ಅವಳನ್ನು ಹಿಡಿದು ಬಲವಂತವಾಗಿ ಎಳೆದು ತಂದರೂ, ಹತ್ತಿರ ಹತ್ತಿರವಾಗುತ್ತಿರುವಾಗ ಕೊಸರಿಕೊಂಡು ಓಡಿಹೋದ ಹುಡುಗಿ ಗೋಳಾಡುತ್ತಾ ಯಾವ ಕಡೆಗೆ ಹೋದಳೆಂದು ಮಳೆ, ನೆರೆಯ ಅಬ್ಬರದಲ್ಲಿ ತಿಳಿಯಲಿಲ್ಲ. 

ಹಾಗೆ ಸಾವಿತ್ರಿ ಕಾಣೆಯಾದ ಸುದ್ದಿ ಮನೋಹರನಿಗೆ ಗೊತ್ತಾಗದಿರಲಿಲ್ಲ. ಅವನು ಕುಳಿತಲ್ಲೇ ಕುಳಿತು, ಮಾತನಾಡಿದ್ದನ್ನೇ ಮಾತನಾಡಿ, ಯೋಚಿಸಿದ್ದನ್ನೇ ಯೋಚಿಸಿ- ಅಲೆಯುತ್ತಿದ್ದವನು ಈಗ ಸಾವಿತ್ರಿಯ ವರ್ತಮಾನ ಕೇಳಿ ಹುಚ್ಚು ಹಿಡಿದವನಂತೆ “ಸಾವಿತ್ರೀ, ಸಾವಿತ್ರೀ’ ಎಂದು ಮೊದಲ ಬಾರಿಗೆ ಜೋರಾಗಿ ಬೊಬ್ಬಿಡುತ್ತ, ಅತ್ತಿತ್ತ ಓಡಾಡಿದ; ನೆರೆ ಉಕ್ಕುತ್ತಿರುವಂತೆಯೇ ಹೊಳೆಗಿಳಿದ. ದೋಣಿ ಸಾಗಿಸಿ ಪಾಪನಾಶಿನಿಯ ಪಡುಗಡೆಗೆ ಹೊರಟುಹೋದ. ಆಸರೆಯಿದ್ದೆಡೆಯೆಲ್ಲ ಗುಂಪು ಗುಂಪಾಗಿ ಸೇರಿಕೊಂಡಿದ್ದ ತಂತಮ್ಮ ಮಂಡೆಬಿಸಿಯಲ್ಲೇ ಇದ್ದವರು ತಮ್ಮ ಜೀವ, ಮನೆಮಾರು ಕಳಕೊಳ್ಳುವ ಭಯದಿಂದ ಕಂಗಾಲಾಗಿದ್ದರು. ಆ ಗೊಂದಲ ಸಾವಿತ್ರಿಯ ಬಗೆಗಾಲೀ, ಮನೋಹರನತ್ತಲಾಗಲೀ ತಲೆಹಾಕಲು ಯಾರಿಗಿದೆ ವ್ಯವಧಾನ?

ಪಡುಗಡಲ ಅಬ್ಬರ ಹೋ…. ಎಂದು ಆಗಾಗ ದೂರದಿಂದ ಕೇಳಿಸುತ್ತಿರುವಂತೆಯೇ ಇಲ್ಲಿ ನದಿಯ ನೆರೆ ಏರುತ್ತಲೇ ಇದೆ. ಊರ ಯುವಕಮಂಡಲದ ಸದಸ್ಯರು, ಶಾಲೆಯ ಒಂದಿಬ್ಬರು ಅಧ್ಯಾಪಕರು, ನಾಲ್ಕಾರು ಜನ ಪಂಚಾಯತ್‌ ಮೆಂಬರರು- ಊರಿಡೀ ಸುತ್ತಾಡುತ್ತ ಅಲ್ಲಲ್ಲಿಯ ಜನರ ಭತ್ತ, ಅಕ್ಕಿ, ಪೆಟ್ಟಿಗೆ, ಪಾತ್ರೆಪರಡಿ, ದನಕರುಗಳನ್ನು ಸಾಗಿಸಲು ಉಸ್ತುವಾರಿ ನಡೆಸಿದ್ದರು. ಪ್ರಾಯಸ್ಥರನ್ನು, ಹೆಂಗಸರನ್ನು ಅಪಾಯದಿಂದ ದೂರಾಗಿಸಲು ಕೆಲವು ಯುವಕರು ತಾಲೂಕಿನ ತಹಶೀಲ್ದಾರರೂ ಜೀಪಿನಲ್ಲಿ ನೆರೆಪೀಡಿತ ಪ್ರದೇಶಗಳಿಗೆಲ್ಲ ಓಡಾಡುತ್ತಿದ್ದರು. ಸುತ್ತಾಡಿ ಸಮೀಕ್ಷೆ ನಡೆಸುತ್ತಿದ್ದರು. 

ಕಡವಿನ ಮನೆಯ ಮಾದಣ್ಣ ಬಾಯಿಯಲ್ಲಿ ವೀಳ್ಯ ಮೆಲ್ಲುತ್ತ ಗೊರಬು ತಲೆಯ ಮೇಲಿಟ್ಟುಕೊಂಡು ಸುಬ್ಬಣ್ಣಯ್ಯರ ಅಂಗಣಕ್ಕೆ ಅನತಿದೂರದಲ್ಲಿ, ಮೊಣಕಾಲ್ಮಟ್ಟ ನೀರಲ್ಲಿ ಅತ್ತಿತ್ತ ನಡೆದಾಡುತ್ತಿದ್ದಾನೆ. ಅವನ ದುಃಖವನ್ನು ಕೇಳುವವರಿಲ್ಲ. ಈ ಗೊಂದಲದಲ್ಲಿ ಮಗಳು ಸಾವಿತ್ರಿ ಕಾಣೆಯಾದವಳು ಎಲ್ಲಿಗೆ ಹೋದಳ್ಳೋ? ಬದುಕಿದ್ದಾಳೆಯೇ, ಇಲ್ಲವೇ; ಪ್ರವಾಹಕ್ಕೇನಾದರೂ ಹಾರಿಕೊಂಡಳೇ- ಯಾವುದೂ ತಿಳಿದುಬಂದಿಲ್ಲ. ಸುಬ್ಬಣ್ಣ ಭಟ್ರ ಮಗ ಮನೋಹರನೂ ಸಾವಿತ್ರಿಯೂ ಪ್ರೇಮಿಸುತ್ತಿರುವ ಸುದ್ದಿ ಗುಸುಗುಸು ಆಗಿ ಕಿವಿಗೆ ಮುಟ್ಟಿದಾಗ ಹೇಳಿದ್ದುಂಟು; “ಇದೆಲ್ಲ ಬೇಡ, ಇದರ ಪರಿಣಾಮ ಒಳ್ಳೆದಾಗುವುದಿಲ್ಲ, ಅಯ್ಯರ ಮನೆಗೆ ಗೊತ್ತಾದರೆ ಕೊಂದೇ ಬಿಟ್ಟಾರು’ ಎಂದು. 

ಮನೋಹರ ಉತ್ತಮ ಗುಣಶೀಲದ ಹುಡುಗನಾದರೂ, ಈ ತರದ ಜಾತಿ-ಧರ್ಮ ಮೆಚ್ಚದ ಕೆಲಸಕ್ಕೆ ಹೊರಟಿರುವುದಕ್ಕೆ ತಾನವನನ್ನು ಛೀಮಾರಿ ಮಾಡಿಲ್ಲವೇ? ಆದರೆ ಇಬ್ಬರೂ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಹೆಚ್ಚು ಕಲಿತವರೆಲ್ಲ ವಿಜಾತಿಯವರನ್ನೇ ಪ್ರೇಮಮಾಡಬೇಕೆಂದು ಕಟ್ಟಳೆ ಉಂಟಾ ಎಂದಾಗ ಮನೋಹರ ಹೇಳಿದ್ದೇನು? ಈಗೆಲ್ಲ ಜಾತಿಭೇದ ಇಲ್ಲ, ಬೇರೆ ಬೇರೆ ಜಾತಿಯ ಹೆಣ್ಣು ಗಂಡು ಮದುವೆಯಾಗುವುದು ತಪ್ಪಲ್ಲ. ಅಷ್ಟಕ್ಕೂ, ಕೆಲವರು ಮರೆಯಲ್ಲಿ ಮಾಡುವಂಥ ಏನೇನೋ ಪಾಪ ಕೆಲಸ- ನಾವೇನೂ ಮಾಡಿಲ್ಲ. ನೀವು ಹಿರಿಯರು ಒಮ್ಮೆ ಒಪ್ಪಿಗೆ ಕೊಟ್ಟು ಆಶೀರ್ವಾದ ಮಾಡಿ, ಚೆಂದದಿಂದ ಒಟ್ಟಿಗೆ ಇತೇìವೆ ಎಂದು ಹಠಹಿಡಿದ. ಮಾದಣ್ಣನಿಗೆ ಚೆನ್ನಾಗಿ ನೆನಪಿದೆ. ಕೊನೆಗೆ ತಾನು ದೇವರ ಚಿತ್ತ ಹೇಗೋ ಹಾಗೆ ಆಗಲೆಂದು ಸುಮ್ಮನಾದೆ. ಆದರೆ ಸುಬ್ಬಣ್ಣ….!

ಕಾಲೇಜು ಶಿಕ್ಷಣ ಮುಗಿಸಿ ನೌಕರಿ ಹುಡುಕುತ್ತಿದ್ದ ಮನೋಹರ ಸಾವಿತ್ರಿಯೊಂದಿಗೆ ಕದ್ದುಮುಚ್ಚಿ ಓಡಾಡುತ್ತಿರುವುದು ಊರೆಲ್ಲ ಸುದ್ದಿಯಾಗಿ ಸುಬ್ಬಣ್ಣಯ್ಯರ ಕಿವಿಗೂ ಬಿತ್ತು. ಕೇಳಿದ ಸುಬ್ಬಣ್ಣ ಕೆಂಡಾಮಂಡಲವಾದರು. ಆಗ ಮನೋಹರ, ಸಾವಿತ್ರಿಯನ್ನು ಮನೆಗೆ ಕರೆತಂದಿದ್ದ. “ಅಪ್ಪಯ್ಯ, ನಾನೂ ಸಾವಿತ್ರಿಯೂ ಒಬ್ಬರನ್ನೊಬ್ಬರು ಪ್ರೀತಿಸ್ತೀವಿ. ಮದ್ವೆ ಆಗ್ಬೇಕೂಂತ ಇದ್ದೇವೆ…’

ಸುಬ್ಬಣ್ಣಯ್ಯ, ತಡೆಯಲಾರದೆ ಕೋಪದಿಂದ ಗಡಗಡ ನಡುಗಿದರು, “”ಅಬ್ಟಾ, ನಿನ್ನ ಹಾಂಕಾರವೇ! ಮೈಮೇಲೆ ಎಚ್ಚರ ಉಂಟೇನಾ ನಿನಗೆ? ಇವಳು…. ಇವಳು ನಿನಗೆ ಖಂಡಿತ ಮಾಟ ಮಾಡಿದ್ದಾಳೆ. ಅಲ್ಲ; ಬಾಯಿಗೆ ಮದ್ದು ಹಾಕಿದ್ದಾಳೆ” ಎಂದು ಸಾವಿತ್ರಿಯ ಮುಖದ ಮೇಲೆ ಉಗಿದರು; ಹೀನಾಯವಾಗಿ ಬೈದರು. ನೀನು ನನ್ನ ಮಗನೇ ಅಲ್ಲ, ತೊಲಗು ಇಲ್ಲಿಂದ ಎಂದು ಕತ್ತು ಹಿಡಿದು ದಬ್ಬಿದರು. ಒಳಬಾಗಿಲಿನಿಂದ ಮನೋಹರನ ಅಮ್ಮ ಸಾವಿತ್ರಿಗೆ ಹಿಡಿಶಾಪ ಹಾಕಿದರು.

ಇಡಿಯ ಊರಿನಲ್ಲೇ ಬಂಗಾರದಂಥ ಗುಣದ ಸೌಂದರ್ಯರಾಶಿ ಹೆಣ್ಣೆಂದು ಹೆಸರಾದ ಸಾವಿತ್ರಿ ಅಂದು ಅಪಮಾನದಿಂದ ಕುಗ್ಗಿ ಗೋಳಿಡುತ್ತ ಓಡಿಹೋಗಿ ಮನೆಯೊಳಗೆ ಸೇರಿಕೊಂಡು ಮೌನಿಯಾದಳು. ಈಗ ಈ ಸಂಗತಿಗಳಿಗೆಲ್ಲ ಒಂದು ವರ್ಷವೇ ಕಳೆಯುತ್ತ ಬಂದಿದೆ.

ಮಾದಣ್ಣ ಮೂಡುಗಡೆಗೆ ತಲೆಎತ್ತಿ ನೋಡಿದ, ಧೋಧೋ ಸುರಿಯುವ ಮಳೆಗೆ ಕೊಡೆ, ಕಂಬಳಿ, ರೈನ್‌ಕೋಟು, ಅಗಲ ಎಲೆಗಳಡಿ ಪಿಳಿಪಿಳಿ ಕಣ್ಣು ಬಿಡುತ್ತ ಅಸಹಾಯಕರಾಗಿ ನಿಂತಿರುವ ಜನಜಾತ್ರೆ! ಊರದೇವಸ್ಥಾನದ ತೇರಿನಂದು, ಕಲಶಾಭಿಷೇಕದಂದು, ಗರಡಿಯ ನೇಮದಂದು, ಗಣೇಶೋತ್ಸವದಂದು- ಆ ಜಾತಿಯವರು ಅಲ್ಲಿ, ಈ ಜಾತಿಯವರು ಇಲ್ಲಿ… ಎಂದೆಲ್ಲ ಜಾತಿವಾರಾಗಿ ಕುಳಿತುಕೊಳ್ಳುತ್ತಿದ್ದ ಮಂದಿ; ಇಗರ್ಜಿಯ ಹಬ್ಬದಂದು, ಬುಧವಾರ ಸಂತೆಯಂದು, ಕೋಲ, ಕಂಬಳ, ಕೋಳಿ ಅಂಕದಂದು ಖುಷಿಯಿಂದ, ಗೌಜಿಯಿಂದ ಸೇರುವ ಜನ ಈಗಲೂ ಗುಂಪು ಗುಂಪಾಗಿ ಸೇರಿದ್ದಾರೆ; ಆದರೆ, ಇಂದು ಜೀವ ಕೈಯಲ್ಲಿ ಹಿಡಿದುಕೊಂಡು, ತಂತಮ್ಮ  ಮನೆಹಿತ್ತಲು, ಆಸ್ತಿಪಾಸ್ತಿ ದಸ್ತಾವೇಜು, ಕಾಗದಪತ್ರ, ಈಗಲೋ ಆಗಲೋ ಮುಳುಗಿ ಹೋಗಲಿರುವುದನ್ನು ಎದುರುನೋಡುತ್ತ ಏನೂ ಮಾಡಲಾಗದೆ ಕರುಳು ಕತ್ತರಿಸಲ್ಪಡುವಂಥ ಅನುಭವ ಎಲ್ಲರಿಗೆ, ಹೋ! ಎಂಬ ಗದ್ದಲದ ಹೊರತಾಗಿ ಮಳೆ, ಸಿಡಿಲು, ಮಹಾಪೂರದ ಅಬ್ಬರದಲ್ಲಿ ಜನರ ಮಾತೂ ಕೇಳಿಸುತ್ತಿರಲಿಲ್ಲ.

ಪಾಪನಾಶಿನಿಯ ಮೂಡುಬದಿಯಲ್ಲಿ ಹೀಗೆ ನೆರೆ ನುಂಗುತ್ತ ನುಂಗುತ್ತ ಬರುತ್ತಿರುವಾಗ ಹೊಳೆಯ ಪಡುಗಡೆಯ ಪೇಟೆ ಸ್ವಲ್ಪ ಎತ್ತರದಲ್ಲಿರುವುದರಿಂದಾಗಿ ಪೇಟೆಗೆ ಇದುವರೆಗೆ ನೆರೆಯ ಭೀತಿ ತಟ್ಟಿಲ್ಲ. ಶೆಣೈಯವರ ಅಂಗಡಿ ಬಾಗಿಲಲ್ಲಿ, ಸದಾಶಿವನ ಸೆಲೂನಿನ ಒಳಗೆ, ಮರ್ತಪ್ಪಣ್ಣನ ಬೀಡಾಬೀಡಿ ಅಂಗಡಿಯಲ್ಲಿ, ರಾಮನಾೖಕರ ಗಾಯತ್ರಿ ಭವನದಲ್ಲಿ ಜನರು ಕ್ರಿಕೆಟ್‌ ಕಾಮೆಂಟರಿ ಕೇಳುತ್ತಿರುವವರಂತೆ ಗುಂಪು ಸೇರಿ ಮಳೆಗಾಳಿಗೆ ಚಳಿಹಿಡಿದು ಮಂಕಾಗಿ ಮಾತಿನಲ್ಲಿದ್ದರು. ಶಾಲೆ, ಬ್ಯಾಂಕು, ಮತ್ತಿತರ ಕಚೇರಿಗಳ ಬಾಗಿಲು ಮೂರು ದಿನಗಳಿಂದ ತೆರೆದಿಲ್ಲ. ಊರಿಗೆ ದಿನಕ್ಕೆ ಮೂರು ಬಾರಿ ಬರುವ ಬಸ್ಸೂ ಬರುವುದು ನಿಂತು ಹೋಗಿದೆ.

ಗಾಯತ್ರಿ ಭವನದ ಒಂದು ಮೂಲೆಯ ಬೆಂಚಿನಲ್ಲಿ ಮನೋಹರ ಈ ಲೋಕದ ಪರಿವೆ ಇಲ್ಲದಂತೆ ಕುಳಿತಿದ್ದಾನೆ. ಇನ್ನೊಂದು ಬದಿಗೆ- ಹೊಟೇಲಿನ ಎದುರು ಭಾಗದಲ್ಲಿ ಸುಮಾರು ಇಪ್ಪತ್ತೆçದು-ಮೂವತ್ತು ಮಂದಿ ಕುಳಿತು ಮಾತಿನಲ್ಲಿ ತೊಡಗಿದ್ದರು. ಹೊಟೇಲಿಗೆ ದಿನಪತ್ರಿಕೆಯೊಂದು ಮುಂಜಾನೆಯೇ ಬರುತ್ತದೆ. ಆದರೆ, ಪತ್ರಿಕೆಗಿಂತಲೂ ಹೆಚ್ಚು ಊರುಪರವೂರಿನ ಸುದ್ದಿ ಅಲ್ಲಿ ಜನರ ಬಾಯಿಯಿಂದ ಕಿವಿಗೆ ಸಿಗುತ್ತದೆ.

ಇದ್ದುದರಲ್ಲಿ ಕಂಬಳಕೋಡಿ ಮನೆಯ ಗಣೇಶರೂ, ಅಳಿಯೂರು ಹರಿಯಪ್ಪರೂ ಒಂದಿಷ್ಟು ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದರು.  ಆಹಾರ, ಧಾನ್ಯ, ದಿನಬಳಕೆ ಸಾಮಗ್ರಿ, ದಿನದಿನಕ್ಕೆ ತುಟ್ಟಿಯಾಗುತ್ತಿರುವ ಸುದ್ದಿ, ಮಣ್ಣಂಗೇರಿ ರಸ್ತೆ ಕುಸಿತ, ಕೇರಳದ ಚಂಡಮಾರುತ, ಶರಾವತಿಯ ಪ್ರವಾಹದುಬ್ಬರ ಇವೆಲ್ಲ ಮಾತುಬಂದ ಮೇಲೆ ಮತ್ತೆ ತಮ್ಮೂರಿಗೆ ಕಾದಿರುವ ಗಂಡಾಂತರದತ್ತಲೇ ಮಾತು ತಿರುಗಿತು. ಗಕ್ಕನೆ ಎಲ್ಲರ ಮುಖಮಂಕಾಯಿತು.

ಗ್ರಹಣದ ಅಮಾವಾಸ್ಯೆಯಂದು ಊರು ಮುಳುಗಲಿದೆಯಂತೆ ಎಂಬ ಸುದ್ದಿ ಹುಟ್ಟಿಕೊಂಡಾಗ ಮೊದಲು ಊರಿನ ಕೆಲವು ವಿಚಾರವಾದಿ ತರುಣರು ಅದನ್ನು ನಂಬಲಿಲ್ಲ. ಇದು ಯಾರೋ ಮೂರ್ಖರು ಗಾಳಿಯಲ್ಲಿ ಊದಿದ ಬೊಗಳೆ ಎಂದು ಅಪಹಾಸ್ಯ ಮಾಡಿದರು. ಆದರೀಗ ಕಳೆದ ಇಷ್ಟು ದಿನಗಳಿಂದ ಈವರೆಗೆ ಕಂಡಿಲ್ಲದಷ್ಟು ಜಡಿಮಳೆ, ಪಾಪನಾಶಿನಿಯ ರುದ್ರಾವತಾರ, ಪಡುಗಡಲ ಅಬ್ಬರ- ವಿಚಾರವಾದಿಗಳನ್ನೂ ಮೂಕರನ್ನಾಗಿಸಿದೆ.

ಗಾಯತ್ರಿ ಭವನ ಅದುರಿಹೋಗುವಂತೆ ಭೀಕರ ಸದ್ದಿನೊಂದಿಗೆ ಸಿಡಿಲುಮಿಂಚು ಹೊಡೆದಾಗ ಎಲ್ಲರೂ ತತ್ತರಿಸಿ ಕಿವಿಮುಚ್ಚಿಕೊಂಡರು. ಗಣೇಶರು ನಡುಗುತ್ತಲೇ ಹೇಳಿದರು, “”ಈ ಪಿರ್ಯದ (ದುಬಾರಿ) ಕಾಲದಲ್ಲಿ ಬದುಕುವುದು ಹೇಗೂ ಕಷ್ಟವೇ. ಭೂಮಿಯ ಮೇಲೆ ಮನುಷ್ಯನ ಅನ್ಯಾಯವೂ ಮಿತಿಮೀರಿತೆಂದು ದೇವರೇ ಮುನಿದು ಲೋಕಕ್ಕೆ ಈ ಗಂಡಾಂತರ ಒದಗಿಸಿದರೆಂದು ತೋರುತ್ತದೆ. ಹೋಗಲಿ, ಎಲ್ಲ ಮುಳುಗಿ ಹೋಗ್ಲಿ; ಹುಟ್ಟಿದ ಮನುಷ್ಯ ಒಮ್ಮೆ ಸಾಯಬೇಕು ತಾನೇ? ಸರಿ, ಎಲ್ಲರೂ ಒಟ್ಟಿಗೆ ಸಾಯುವಾ, ಏನು ಹೇಳ್ತೀರಿ ಹರಿಯಪ್ಪಣ್ಣ?” ಎಲ್ಲರೂ, “ಹೌದು, ಹೌದು’ ಎಂದರು.

ಆದರೆ, ಮರುಕ್ಷಣ ಯಾವುದೇ ಗಳಿಗೆಯಲ್ಲಾದರೂ ಎರಗಬಹುದಾದ ಗಂಡಾಂತರದ ನೆನಪಾಗಿ ಎಲ್ಲರ ಮೈರೋಮ ಭಯದಿಂದ ನಿಮಿರಿತು. ಇತ್ತೀಚೆಗೆ ಊರ ಪಟೇಲರ ಮಗ ಜಗದೀಶ್‌ ಮತ್ತು ಅವರ ಒಕ್ಕಲು ಮನೆಯ ಹದಿನೇಳರ ಕನ್ಯೆ ರಾಜೀವಿ ಇಬ್ಬರೂ ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯೂ ಮಾತಿಗೆ ದೊರಕಿತು. ಭಯದಿಂದ ಬಚಾವಾಗಲೂ ಏನಾದರೂ ಮಾತನಾಡುತ್ತಲೇ ಇರಬೇಕೆಂದು ಹರಿಯಪ್ಪಣ್ಣ- ತಿಳುವಳಿಕೆಯ ಹಿರಿಮನುಷ್ಯ, ಮಾತಿಗೆ ತೊಡಗಿದರು.

“”ನೋಡಿ ಗಣೇಶರೇ, ಪ್ರಾಣಬಿಡುವುದೆಂದರೆ ಹುಡುಗ- ಹುಡುಗಿಯರಿಗೆ ಈಗೀಗ ಒಂದು ಕುಶಾಲು, ಫ್ಯಾಶನ್‌ ಆಗಿದೆ. ಆತ್ಮಹತ್ಯೆ ಮಾಡಿಕೊಂಡವರು ಏಳೇಳು ಜನ್ಮದಲ್ಲಿ ಶಾಂತಿಯಿಲ್ಲದೆ ನರಳಬೇಕಾಗುತ್ತಂತೆ! ಜನರಿಗೆ ಹುಚ್ಚಲ್ವಾ, ಒಮ್ಮೆ ಹೋದ ಪ್ರಾಣ ಇನ್ನೊಮ್ಮೆ ಬೇಕೆಂದರೆ ತಿರುಗಿ ಬರುತ್ತದಾ ಮಾರಾಯೆ, ಈವತ್ತು ಕಷ್ಟ ಬಂತೆಂದು ನೇಣು ಬಿಗಿದುಕೊಂಡರೆ ನಾಳೆ ಒದಗಲಿರುವ ಸುಖ ಅನುಭವಿಸಲಿಕ್ಕೆ ಉಂಟಾ, ಒಂದಿಷ್ಟು ತಾಳ್ಮೆ, ಹೊಂದಾಣಿಕೆ ಈಗಿನ ಹುಡುಗರಿಗೂ ಬೇಕು, ಅವರನ್ನು ನಾವೂ ಅರ್ಥಮಾಡ್ಕೊಂಡು ಅವರ ಸಂತೋಷದ ಕೆಲಸಕ್ಕೆ ಅಡ್ಡಿ ಮಾಡಾºರ್ದು, ಅಲ್ವಾ. ಪ್ರಾಣ ತೆತ್ತುಕೊಂಡರೆ ಸಮಸ್ಯೆ ಎಲ್ಲ ಪರಿಹಾರ ಆಗ್ತದಾ? ಒಂದು ಕುಟುಂಬದ ಹುಡುಗನೋ ಹುಡುಗಿಯೋ ಆತ್ಮಹತ್ಯೆ ಮಾಡಿಕೊಂಡರೆ ಆ ಮೇಲೆ ಅವರಿಂದಾಗಿ ಬದುಕಿ ಉಳಿದವರು ಎಷ್ಟೊಂದು ಸಮಸ್ಯೆಗಳನ್ನು ಎದುರಿಸಬೇಕಾಗ್ತದೆ? ಏನಿಲ್ಲ, ಸತ್ತ ಎಮ್ಮೆಗೆ ಇಮ್ಮಡಿ ಹಾಲು ಎಂಬ ಗಾದೆ ಕೇಳಿದ್ದೀರಲ್ಲ. 

ಯಾರು ಸತ್ತರಾ ಅವರನ್ನು ಕೂಡಲೇ ನಾವು ಹೊಗಳಿ ಅಟ್ಟಕ್ಕೇರಿಸಿ ಬಿಡುತ್ತೇವೆ. ಹಾಗಾಗಿ, ತಾವು ಮಾಡೋ ಕೆಲಸಕ್ಕೆ ಜನ ಹೊಗಳುತ್ತಾರೆಂದು ಭಾತಿಸಿ ಈ ಯುವಕರು ಆತ್ಮಹತ್ಯೆ ಮಾಡ್ಕೊಳ್ಳೋದು. ಇವರು ಸತ್ತು ಎರಡು ದಿನದಲ್ಲಿ ಲೋಕ ಇವರನ್ನು ಮರೆತುಬಿಡುತ್ತದೆ- ಇದು ಗೊತ್ತುಂಟಾ ಇವರಿಗೆ?” ಇಷ್ಟಾಗುವಾಗ ಕೆಲವರು ಮೂಲೆಯಲ್ಲಿ ಮನೋಹರ ಕುಳಿತಿದ್ದೆಡೆಗೆ ನೋಡಿದರು. ಆದರೆ, ಅವನು ಯಾವಾಗಲೋ ಎದ್ದು ಹೊರಟುಹೋಗಿದ್ದ.
.
ಮಳೆ ಒಂದೇ ಸವನೆ “ಸೋ’ ಎಂದು ಸುರಿಯುತ್ತಲೇ ಇದೆ. ಕಂದು ಬಣ್ಣದ ನೆರೆಯ ನೀರು ನಿಮಿಷ ನಿಮಿಷಕ್ಕೂ ಮೇಲೆ ಮೇಲೆ ಏರಿಕೊಂಡು ಬರುತ್ತಿದೆ. ಹೊಳೆಯ ಪಡುದಂಡೆಯ ಕುರುಚಲು ಕಾಡನ್ನೂ ದಾಟಿ ನೀರು ಪೇಟೆಯತ್ತಲೂ ನಿಮಿರುತ್ತಿದೆ. ಇಡೀ ಊರಜನಕ್ಕೆ ಸುಬ್ಬಣ್ಣಯ್ಯರ ಅಂಗಣ ಯಾತಕ್ಕೂ ಸಾಲದೆ, ಅಲ್ಲಿ ಇಲ್ಲಿ ಸಿಕ್ಕಿದ ಸಂದುಗೊಂದುಗಳಲ್ಲಿ ಕುಳಿತು, ಒರಗಿ, ನಿಂತು… ಕಣ್ಣಲ್ಲಿ ಎಣ್ಣೆ ಹಾಕಿಕೊಂಡವರಂತೆ ಎಚ್ಚರದಿಂದಲೇ ರಾತ್ರಿ ಕಳೆದರು. ರಾತ್ರಿ ಕವಿದ ಕತ್ತಲು ಬೆಳಗಾಗುವ ಹೊತ್ತಾದ ಮೇಲೂ ಪೂರ್ತಿ ಸರಿಯಲಿಲ್ಲ. ಬೆಳಕು ಸೂರ್ಯ ಕಾಣಿಸಲಿಲ್ಲ. ಇವತ್ತೇ ಅಮಾವಾಸ್ಯೆ! ಎಂದು ಜನ ಒಬ್ಬರಿಗೊಬ್ಬರು ಎದೆ ಒಡೆದು ಹೋಗುವಂಥ ಅನಿಸಿಕೆಯಿಂದ ಪಿಸುಗುಟ್ಟುತ್ತಿದ್ದಾರೆ.

ಊರು ತುಂಬ ಮಸಕು ಕತ್ತಲೆ ಆವರಿಸಿದೆ. ಹಸಿವು ಬಾಯಾರಿಕೆಗಳಿಂದ ಮಕ್ಕಳು ಅಳುತ್ತಿದ್ದರೆ ಭಯದಿಂದ ತಾಯಂದಿರು ಮಕ್ಕಳನ್ನು ತಬ್ಬಿಕೊಂಡು ಗೋಳಾಡುತ್ತಿದ್ದಂತೆಯೇ, ಪ್ರವಾಹ ಮನೆಗಳನ್ನು ಮುಳುಗಿಸುತ್ತ ಏರುತ್ತಲೇ ಬರುತ್ತಿದೆ, ಆಚೀಚಿನಲ್ಲಿ ಎರಡು-ಮೂರು ಹಳ್ಳಿಗಳು ಮುಳುಗಿದವಂತೆ, ಕಂಡಾಬಟ್ಟೆ ಜನರು ನೆರೆಯಲ್ಲಿ ಕೊಚ್ಚಿಹೋದರಂತೆ ಎಂಬ ಸುದ್ದಿ ಬಂದಿದೆ. ಮೊಂಡು ಧೈರ್ಯದಿಂದ ಅತ್ತಿತ್ತ ಓಡಾಡಿ ಬರುವ ತರುಣರು, ಊರ ಹೊರವಲಯದಲ್ಲಿ ಅಪಾಯದ ಸಮೀಕ್ಷೆ ನಡೆಸುತ್ತಿರುವ ಅಧಿಕಾರಿಗಳಿಂದ ದೊರಕುವ ವರ್ತಮಾನವನ್ನು ಇಲ್ಲಿ ತಂದು ಒಪ್ಪಿಸುತ್ತಿದ್ದಾರೆ. ಪಾಪನಾಶಿನಿ ಹೊಳೆಗೆ ಇಲ್ಲಿಂದ, ಎರಡು ಮೈಲಿ ದೂರದಲ್ಲಿರುವ ಅಣೆಕಟ್ಟು ಒಡೆಯಿತಂತೆ ! 

ಅಣೆಕಟ್ಟು ಒಡೆದುದರಿಂದ ಕೆನ್ನೀರಿನ ಪರ್ವತವೇ ಧಿಸಿಧಿಸೀಲೆಂದು ಇಲ್ಲಿಯೂ ಊರಿನ ಸನಿಹ ಅಟ್ಟಿಸಿಕೊಂಡೇ ಬಂತು. ಮಾಡಿನ ಕುಬಲು ಮಾತ್ರ ಕಾಣಿಸುತ್ತಿದ್ದ ಮನೆಗಳು ಈಗ ಪೂರ್ತಿ ಮುಳುಗಹತ್ತಿದವು. ಮರಮಂಚ, ಬೈಹುಲ್ಲ ರಾಶಿ, ದನಕರು ಮಾತ್ರ ಅಲ್ಲ… ಇದು ಅವನು! ಇದು ಇಂಥವನು ! ಎಂದು ಭೀತಿಯಿಂದ ಜನ ಬೊಬ್ಬೆ ಮಾಡುತ್ತಿರುವಂತೆ ಮೇಲ್ಗಡೆಯಿಂದ ತೇಲಿಬಂದ ಎರಡು-ಮೂರು ಹೆಣಗಳು ನೆರೆಯಲ್ಲಿ ಕೂಗಳತೆಯಲ್ಲಿ ಕಾಣಿಸಿಕೊಂಡಾಗ ಹೆಂಗಸರು-ಮಕ್ಕಳ ಭಯದ ಬೊಬ್ಬೆ ಗುಡುಗು-ಮಳೆಯ ಅಬ್ಬರದಲ್ಲಿ ವಿಲಕ್ಷಣ ಗದ್ದಲವೆಬ್ಬಿಸಿತು. ರಂಗಣ್ಣನ ಭೂತದ ಕೊಠಡಿ, ಊರ ಗರಡಿ, ದೇವಸ್ಥಾನ, ಐದು ಸೆಂಟ್ಸೆನ ಹನ್ನೆರಡು ಮನೆಗಳು, ಮುಳಿಹುಲ್ಲು ಮಾಡುಗಳು, ಡಿಸಿಲ್ವರ ಸಿಮೆಂಟ್‌ ಸ್ಟಾಕಿನ ಗೋದಾಮು, ಕರಿಯಪ್ಪ ಸಾಹುಕಾರನ ಕಟ್ಟಿಗೆಕೂಪು ಎಲ್ಲ…. ಎಲ್ಲ…. ಸಾಲಾಗಿ ನೆರೆಯ ಬಾಯಿಗಾಹುತಿಯಾದವು.

ಓಡಿಸಿಕೊಂಡೇ ಬಂದಂತೆ ಕೊಳೆ-ಕಲಕು ನೀರಿನ ಪರ್ವತವೇ ಕಡಲ ತೆರೆಯಂತೆ ಧಾವಿಸಿ ಧಾವಿಸಿ ಬಂದುದು. ಸುಬ್ಬಣ್ಣಯ್ಯರ ಕಂಪೌಂಡ್‌ ಗೋಡೆಗೂ ಬಂದು ಬಡಿದಾಗ “ಓ ದೇವರೇ, ಹೋ ಹೋ’ ಎನ್ನುವ ಜನರ ಬೊಬ್ಬೆ ಮುಗಿಲುಮುಟ್ಟಿತು. ಕೋಣಗಳು, ದನಕರುಗಳು, “ಬ್ಯಾಂ ಬ್ಯಾಂ….’ ಎಂದು ಬೊಬ್ಬಿಟ್ಟು ಸಿಕ್ಕ ಸಿಕ್ಕಲ್ಲಿ ಓಡುವಾಗ ಅನೇಕರು ಅವುಗಳ ಕಾಲಡಿಗೆ ಬಿದ್ದರು.

ನೆರೆ ಹೊರ ಅಂಗಣಕ್ಕೆ ಬಂತು; ಅಕೋ ಬಂತು, ಒಳಾಂಗಣ ಬಾಗಿಲಿಗೆ ಬಂತು, ಜಗಲಿಗೆ ಏರಿತು. ಒಳ ಅಂತರಕ್ಕೆ ಬರುವಾಗ ಅಷ್ಟು ದೂರದಿಂದ ತೇಲಿಕೊಂಡು ಹೋದ ಎರಡು ಹೆಣಗಳು- ಒಂದಕ್ಕೊಂದು ಸೀರೆಯಿಂದ ಬಿಗಿಯಲ್ಪಟ್ಟವು. ಯಾರಿರಬಹುದು ಎಂದು ಮಾದಣ್ಣ ಹುಚ್ಚೆದ್ದು ಧಾವಿಸುವುದರೊಳಗೆ ಹೆಬ್ಟಾಗಿಲಿನ ಹಳೆಯ ಗೋಡೆ ಧಿರೀಲೆಂದು ಮಗುಚಿತು. ಮರುಕ್ಷಣ ಛಾವಣಿ ಕುಸಿಯಿತು. ಮುದುಕರು, ಮಕ್ಕಳು, ಬಡವರು, ಗುತ್ತಿನವರು, ಹೆಂಗಸರು, ಚೆಲುವೆಯರು, ಕಾಯಿಲೆಯವರು, ಕರ್ರಗಿನವರೆಂಬ ಭೇದವಿಲ್ಲದೆ ಒಂದು ರಾಶಿ ಜನ ಅದರಡಿಗೆ ಬಿದ್ದರು!

ಮುದ್ದು ಮೂಡುಬೆಳ್ಳೆ

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Empowerment: ಬಾಳು ಬೆಳಗಿದ ಬಾಳೆ!

Empowerment: ಬಾಳು ಬೆಳಗಿದ ಬಾಳೆ!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.