ಅಜ್ಞಾತವಾಗಿ ಕಳೆದುಹೋದ ಭಾರತದ ಅಸಲಿ ಸಂಗೀತ ರತ್ನ


Team Udayavani, Oct 21, 2018, 6:00 AM IST

8.jpg

ಭಾರತದ ಮಹಾನ್‌ ಸಂಗೀತ ಸಾಧಕ ಉಸ್ತಾದ್‌ ಅಲ್ಲಾವುದ್ದೀನ್‌ ಖಾನ್‌ರ ಮಗಳು, ಸುಪ್ರಸಿದ್ಧ ಸರೋದ್‌ ವಾದಕ ಉಸ್ತಾದ್‌ ಅಲಿ ಅಕ್ಬರ್‌ ಖಾನ್‌ರ ಸಹೋದರಿ, ಸಿತಾರ್‌ ಗಾರುಡಿಗ ಪಂ. ರವಿಶಂಕರ್‌ ಅವರ ಪತ್ನಿ, ಅಭಿಜಾತ ಪ್ರತಿಭೆ ಶುಭೋ ಅವರ ತಾಯಿ, ಬಾನ್ಸುರಿ ಮಾಂತ್ರಿಕ ಪಂ. ಹರಿಪ್ರಸಾದ್‌ ಚೌರಾಶಿಯಾ ಅವರ ಗುರು… ಹೀಗೆ ಪರಿಚಯ ಮಾಡುತ್ತಿದ್ದರೆ ಎಲ್ಲರಿಗೂ ತಿಳಿದುಬಿಡುತ್ತದೆ- ಇದು ಅನ್ನಪೂರ್ಣಾದೇವಿಯವರ ವ್ಯಕ್ತಿಚಿತ್ರವೆಂದು ! ಇಂಥ ಸಂಗೀತಸಂಪೂರ್ಣೆ ಇತ್ತೀಚೆಗೆ ಮುಂಬಯಿಯ ಮನೆಯಲ್ಲಿ  91ನೆಯ ವಯಸ್ಸಿನಲ್ಲಿ ನಿಧನರಾದರು. ಪಂ. ರವಿಶಂಕರ್‌ ಅವರಿಗಿಂತ ಒಂದು ತೂಕ ಹೆಚ್ಚಿನ ಪ್ರತಿಭೆಯಾಗಿದ್ದರೂ, ಅವರ ಸಾವು ಸಂಗೀತಲೋಕದ ಹೊರಗೆ ಅಷ್ಟಾಗಿ ಸುದ್ದಿಯಾಗಲಿಲ್ಲ. ಏಕೆಂದರೆ, ಅವರು ಅಜ್ಞಾತವಾಗಿಯೇ ಉಳಿಯಬಯಸಿ ಅಕ್ಷರಶಃ ವಿರಾಗಿನಿಯ ಬದುಕು ಬದುಕಿದರು… 

ಒಂದು ಮೌನತಪ್ತ ಆತ್ಮ ನಿಸರ್ಗದ ಮಹಾಮೌನದಲ್ಲಿ ಹೆಪ್ಪುಗಟ್ಟಿತು, ಕಳೆದ ಶನಿವಾರ ಬೆಳಗಿನ ಜಾವ ಒಂದಿಷ್ಟೂ ಸದ್ದಿಲ್ಲದೆ. ಹಾಗೆ ಹೊರಗಣ ಸದ್ದುಗದ್ದಲಕ್ಕೆ, ಗಾಳಿಸುದ್ದಿಗಳಿಗೆ ಮನೆಬಾಗಿಲು ಮುಚ್ಚಿಕೊಂಡಿದ್ದು  ಆರು ದಶಕಗಳಿಗೂ ಹಿಂದೆ. ಮನೆಯೊಡತಿಯ ಮನಸ್ಸು ಒಳಸರಿದೇ ಯಾವುದೋ ಕಾಲವಾಗಿತ್ತು. ಮದುವೆ ಮುರಿದುಕೊಂಡ ಗಂಡ, ಲೋಕದ ಕಣ್ಣಿನಲ್ಲಿ ಬಾನೆತ್ತರದಲ್ಲಿ ಮಿನುಗುತ್ತಿದ್ದ “ರವಿ’ಶಂಕರ್‌ ವ್ಯವಸ್ಥಿತವಾಗಿ ಹಬ್ಬಿಸುತ್ತಿದ್ದ ಹತ್ತು-ಹಲವು ಕಥೆಗಳಿಗೆ ಮಾರುತ್ತರನ್ನೂ ಮೌನದಲ್ಲೇ ಕೊಟ್ಟರಾಕೆ. ಪ್ರಚಾರದ, ವೇದಿಕೆಯ ಝಗಮಗಕ್ಕೆ, ಎಲ್ಲ ಬಗೆಯ ಪ್ರದರ್ಶನ ಲೋಲುಪತೆಗೆ ಶಾಶ್ವತವಾಗಿ ಕದವಿಕ್ಕಿದ ಆಕೆ ಶಿಷ್ಯರಿಗೆ ಮಾತ್ರ ಸ್ವರಲೋಕದ ಹೆಬ್ಟಾಗಿಲು ತೆರೆದು ತೋರಿದರು. ಮಾತ್ರವಲ್ಲ, ಗಂಧರ್ವಲೋಕದಲ್ಲಿ ತಮ್ಮದೇ ಹೆಜ್ಜೆ ಮೂಡಿಸಲು ಕೈಹಿಡಿದು ಕರೆದೊಯ್ದರು. ಆಕೆಯ ಶಿಷ್ಯರಿಗೆ ಪ್ರೀತಿಯ “ಗುರು ಮಾ’. ಸ್ವರಸಾಮ್ರಾಜ್ಯದ ಅರಸಿ “ಅನ್ನಪೂರ್ಣ ದೇವಿ’ ಮೊನ್ನೆ ಅಸ್ತಂಗತರಾಗುವುದರೊಂದಿಗೆ “ಮೈಹರ್‌’ ಘರಾನೆಯ ಸಜೀವ ಗಟ್ಟಿ ಕೊಂಡಿಯೊಂದು ಕಳಚಿಹೋಯಿತು. ನಿಶ್ಶಬ್ದದಲ್ಲಿ ಒಂದು ತಬ್ಬಲಿ ಖಾಲಿತನ ಹಬ್ಬಿದೆ ಈಗ.

ಬಾಲ್ಯದ ಹೆಜ್ಜೆಗಳು
ಬೋರೊ ಬಾಬಾ ಎಂದೇ ಖ್ಯಾತರಾಗಿದ್ದ ಮಹಾನ್‌ ಸಂಗೀತಗಾರ ಉಸ್ತಾದ್‌ ಅಲ್ಲಾವುದ್ದೀನ್‌ ಖಾನರ ಮುದ್ದಿನ ಕಿರಿಯ ಮಗಳು ರೋಶನಾರ. ಆಕೆಗೆ “ಅನ್ನಪೂರ್ಣ’ ಎಂದು ಹೆಸರಿಟ್ಟಿದ್ದು ಅವರ ಶಿಷ್ಯ ಮಹಾರಾಜ ಬೃಜಸಿಂಗ್‌. ಮನೆಯಲ್ಲಿ ಸದಾ ಸುಸ್ವರಗಳ ಝೇಂಕಾರ. ತಾಯಿ ಮದೀನಾ ಬೇಗಂ ಹಾರ್ಮೋನಿಯಂ ನುಡಿಸುತ್ತಿದ್ದರು, ಬಂಗಾಲಿ ಜನಪದಗೀತೆಗಳನ್ನು ಹಾಡುತ್ತಿದ್ದರು. ಎರಡನೆಯ ಮಗಳು ಜಹನಾರಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿದ್ದರು. ಬಾಬಾರಿಂದ ಶಾಸ್ತ್ರೀಯ ಗಾಯನ ಕಲಿತಿದ್ದ ಈ ಪುಟ್ಟಹುಡುಗಿ, ಸಂಪ್ರದಾಯಸ್ಥ ಅತ್ತೆ ಮನೆಯಲ್ಲಿ ಹಾಡಿನ ದನಿ ತೆಗೆದಿದ್ದೇ ಅಲ್ಲಿ ತಾನ್‌ಪುರವನ್ನೇ ಸುಟ್ಟುಹಾಕಿದರು. ಮದುವೆಯಾದ ಹತ್ತೇ ತಿಂಗಳಲ್ಲಿ ಜಹನಾರ ಮತ್ತೆಂದೂ ದನಿ ತೆಗೆಯಲಾರದಂತೆ ಕಣ್ಮುಚ್ಚಿದಳು. ಇದು ಬಾಬಾರನ್ನು ಆಳವಾಗಿ ಕಲಕಿಬಿಟ್ಟಿತ್ತು. ಹೀಗಾಗಿ, ರೋಶನಾರಳಿಗೆ ಸಂಗೀತ ಕಲಿಸುವುದೇ ಅಥವಾ ಬೇಡವೇ ಎಂಬ ಗೊಂದಲ ಬಾಬಾರಿಗೆ. ಪುಟ್ಟ ಬಾಲೆಯ ಕಿವಿಗಳು ಮಾತ್ರ ಸದಾ ದಾದಾಗೆ (ಅಲಿ ಅಕ್ಬರ್‌ ಖಾನ್‌) ಬಾಬಾ ಹೇಳಿಕೊಡುತ್ತಿದ್ದ ಸಂಗೀತದ ಪಲಕುಗಳತ್ತಲೇ. ಒಮ್ಮೆ ಕೇಳಿದ್ದನ್ನು ಎಳ್ಳಷ್ಟೂ ತಪ್ಪಿಲ್ಲದೇ ಗುನುಗುನಿಸುವ ಸೂಕ್ಷ್ಮಗ್ರಹಿಕೆ. ಒಮ್ಮೆ ಬಾಬಾ ಮಾರುಕಟ್ಟೆಗೆ ಹೋದ ನಂತರ ರಿಯಾಜ್‌ ಮಾಡುತ್ತಿದ್ದ ದಾದಾ ತಪ್ಪಿದ್ದೆಲ್ಲಿ ಎಂದು ಈ ಪುಟ್ಟ ತಂಗಿ ಸರಿಪಡಿಸಿ ಹಾಡಿ ತೋರಿಸುತ್ತಿದ್ದಳು. ಹಿಂದೆ ಬಾಬಾ ಬಂದು ನಿಂತಿದ್ದೂ ಅರಿವಿಲ್ಲ.  ಬೈಯುತ್ತಾರೇನೋ ಎಂದು ಹೆದರಿದ ಅನ್ನಪೂರ್ಣರನ್ನು ಕೋಣೆಗೆ ಕರೆದ ಬಾಬಾ ತಾನ್ಪುರಾ ಕೈಗೆ ನೀಡಿದರು. ಮತ್ತೆ ಶುರುವಾಯಿತು ದಾದಾನೊಂದಿಗೆ ತಾಲೀಮ…. 

ಮೊದಲಿಗೆ ಧ್ರುಪದ್‌ ಗಾಯನ, ಆಮೇಲೆ ಸಿತಾರ್‌ ಕಲಿಕೆ. ಅನ್ನಪೂರ್ಣರಿಗೆ ಸಿತಾರಿನ ಮೇಲಿದ್ದ ಹಿಡಿತ, ಕಲಿಯುವ ಹಸಿವು ಗಮನಿಸಿದ ಬಾಬಾಗೆ ಅನ್ನಿಸಿರಬಹುದು ತಮ್ಮ ನಂತರ ಸುರ್‌ಬಹಾರ್‌ ಎಂಬ ಅಪರೂಪದ ವಾದ್ಯ ಉಳಿಯುವುದಾದರೆ ಅದು ಇವಳಿಂದ ಮಾತ್ರ ಎಂದು. ಒಮ್ಮೆ ಕರೆದು ಕೇಳುತ್ತಾರೆ- “”ನಿಂಗೆ ನನ್ನ ಗುರುವಿನ ವಿದ್ಯೆಯನ್ನು ಕಲಿಸಬೇಕು ಅಂತ ನನ್ನಾಸೆ, ಯಾಕಂದ್ರೆ, ನಿಂಗೆ ದುರಾಸೆ ಇಲ್ಲ. ಇದನ್ನು ಕಲಿಯೋದಕ್ಕೆ ಅಪಾರ ತಾಳ್ಮೆ, ಶ್ರದ್ಧೆ ಬೇಕಾಗುತ್ತೆ. ನೀನು ಸಿತಾರ್‌ ನುಡಿಸೋದನ್ನು ಬಿಡಬೇಕಾಗುತ್ತೆ. ಸಿತಾರನ್ನು ಜನರು ಇಷ್ಟಪಡ್ತಾರೆ. ಆದರೆ, ಸಂಗೀತವನ್ನು ಆಳವಾಗಿ ಅರಿತು, ರಸಗ್ರಹಣ ಮಾಡಬಲ್ಲ ಸಂಗೀತಪ್ರೇಮಿಗಳು ಮಾತ್ರ ಸುರ್‌ಬಹಾರ್‌ ಆನಂದಿಸ್ತಾರೆ. ಸಾಮಾನ್ಯ ಜನರು ನಿನ್ನ ಕಡೆ ಟೊಮೆಟೋ ಎಸೀಬಹುದು. ನಿನ್ನ ನಿರ್ಧಾರ ಏನು?” ಅಂತ ಕೇಳ್ತಾರೆ.  

“”ನಿನ್ನ ಆದೇಶ ಏನಿದೆಯೋ ಅದನ್ನು ಪಾಲಿಸ್ತೀನಿ ಬಾಬಾ” ಪುಟ್ಟ ಅನ್ನಪೂರ್ಣರ ವಿನೀತ ನುಡಿ.  ಆಗ ಶುರುವಾಯಿತು, ಅನ್ನಪೂರ್ಣರಿಗೆ ಸುರ್‌ಬಹಾರ್‌ ವಾದ್ಯದ ಕಠಿಣ ತಾಲೀಮ…. “”ಹುಡುಗಿ ಎಂದು ಯಾವುದೇ ತಾರತಮ್ಯವಿಲ್ಲದೇ, ದಾದಾಗೆ ಮತ್ತು ನನಗೆ ಒಂದೇ ರೀತಿಯ ತಾಲೀಮ… ಕೊಡುತ್ತಿದ್ದರು”  ಎಂದು ಅನ್ನಪೂರ್ಣರು ಒಂದು ಕಡೆ ನೆನಪಿಸಿಕೊಂಡಿ¨ªಾರೆ. ಎಲ್ಲ ಹೀಗೆಯೇ ಸಾಗಿದ್ದರೆ ಈ ಸ್ವರದೇವತೆಯ ಸುರ್ಬಹಾರ್‌ ನಾದಲಯವನ್ನು ಎದೆಗಿಳಿಸಿಕೊಳ್ಳುವ ಸೌಭಾಗ್ಯ ಗಂಭೀರ ಸಂಗೀತರಸಿಕರ ಪಾಲಿಗೆ ದಕ್ಕುತ್ತಿತ್ತು. ಕಟುದುರಂತವೆಂದರೆ ಹಾಗಾಗಲಿಲ್ಲ. 

ಬಾಬಾರಿಂದ ಈ ಅಣ್ಣ-ತಂಗಿ ಕಠಿಣ ತಾಲೀಮು ತೆಗೆದುಕೊಳ್ಳುವಾಗ ಮೂರನೆಯ ಶಿಷ್ಯನ ಆಗಮನವಾಗುತ್ತದೆ. ಖ್ಯಾತ ನೃತ್ಯಪಟು, ಬಾಬಾರ ಗೆಳೆಯ ಉದಯಶಂಕರರ ತಮ್ಮ ರವಿಶಂಕರ್‌ ಸಿತಾರ್‌ ಕಲಿಯಲು ಮೈಹರ್‌ ಮನೆಯನ್ನು ಸೇರಿಕೊಳ್ಳುತ್ತಾರೆ. ಮೂರು ವರ್ಷಗಳ ನಂತರ ಅನ್ನಪೂರ್ಣ ಮತ್ತು ರವಿಶಂಕರರ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟವರು ಉದಯಶಂಕರ್‌. ಸಂಪ್ರದಾಯಸ್ಥ ಕುಟುಂಬದೊಂದಿಗಿನ ಮದುವೆ ಸಂಗೀತ ಮಾತ್ರವಲ್ಲ, ಜಹನಾರಳ ಬದುಕನ್ನೇ ನುಂಗಿದ ಆಘಾತಕ್ಕೆ ಬಾಬಾ ಸಾಕ್ಷಿಯಾಗಿದ್ದರು. ಸಂಗೀತ, ನೃತ್ಯ ಉಸಿರಾಗಿರುವ ಕಲಾರಸಿಕರ ಕುಟುಂಬಕ್ಕೆ ಮದುವೆ ಮಾಡಿಕೊಟ್ಟರೆ ಮಗಳ ಸಾಧನೆಗೆ ಅಡೆತಡೆ ಇರಲಾರದು ಎಂದು ಬಾಬಾ ಮತ್ತು ಮದೀನಾಬೇಗಂ ಆಲೋಚಿಸಿರಬಹುದು. ಕೊನೆಗೂ ಮದುವೆಗೆ ಒಪ್ಪಿದರು. 

ಸಾಧನೆಗೆ ಅಡ್ಡಿಯಾಯಿತೇ ವಿವಾಹ ?
1941ರಲ್ಲಿ ಮದುವೆಯಾದಾಗ ರವಿಶಂಕರರಿಗೆ 21 ಮತ್ತು ಅನ್ನಪೂರ್ಣ ಇನ್ನೂ ಹದಿನಾಲ್ಕರ ಬಾಲಕಿ. ಮರುವರ್ಷವೇ ಮಗು ಶುಭೋ ಆಗಮನ. ಸಂಗೀತಲೋಕದಲ್ಲಿ ಹೆಜ್ಜೆಯೂರಲು ಪ್ರಯತ್ನಿಸುತ್ತಿದ್ದ ಸಾಧಕನ ಹೆಂಡತಿ ಮತ್ತು ಹುಟ್ಟುವಾಗಲೇ ಸಣ್ಣಕರುಳಿನ ಸಮಸ್ಯೆಯಿಂದ ರಾತ್ರಿಯೆಲ್ಲ ಅಳುವ ಶಿಶುವನ್ನು ಸಂಭಾಳಿಸುವ ತಾಯಿ, ಈ ಎರಡೂ ಪಾತ್ರ ನಿಭಾವಣೆಯ ಒತ್ತಡದಲ್ಲಿ ನಲುಗಿದರು ಹದಿನೈದರ ಬಾಲಕಿ ಅನ್ನಪೂರ್ಣ. ಜೊತೆಗೆ ಬಾಬಾ ಧಾರೆಯೆರೆದ ವಿದ್ಯೆಯನ್ನು ಕಾಪಿಡುವ ಜವಾಬ್ದಾರಿಯಿತ್ತು. ತನ್ನೊಳಗಿನ ಸ್ವರಸಾಧಕಿಗೆ ಸಮಯ ಕೊಡಬೇಕಿತ್ತು. ಪ್ರತಿಯೊಂದೂ ನಾದಬಾಲೆಯ ಸಹನೆಯನ್ನು ಒರೆಗಿಡುತ್ತಿತ್ತು. ಇಷ್ಟೇ ಆಗಿದ್ದರೆ ಅನ್ನಪೂರ್ಣ ಹೇಗೋ ನಿಭಾಯಿಸಿಬಿಡುತ್ತಿದ್ದರೇನೋ, ಆದರೆ ಬೇರೊಂದು ಸಮಸ್ಯೆ ವೈವಾಹಿಕ ಬದುಕನ್ನು ನುಂಗುವ ಹವಣಿಕೆಯಲ್ಲಿತ್ತು.  ಮನೆಯ ಹೊರಗೆ ಹೊಸ ಆಕರ್ಷಣೆಗಳು ರವಿಶಂಕರರನ್ನು ತೆಕ್ಕೆಗೆ ತೆಗೆದುಕೊಂಡಿತ್ತು. ಉದಯಶಂಕರ್‌ ಅವರ ಸಾಂಸ್ಕೃತಿಕ ಅಕಾಡೆಮಿಯಲ್ಲಿ ನೃತ್ಯ ಪಟುವಾಗಿದ್ದ ಕಮಲಾ ಮತ್ತು ರವಿಶಂಕರ್‌ ನಡುವೆ ಮೊದಲೇ ಇದ್ದ ಪರಿಚಯ ಪ್ರೇಮಕ್ಕೆ ತಿರುಗುತ್ತದೆ.  

ಈ ನಡುವೆ ಆಗೀಗ ನಡೆದ ಅನ್ನಪೂರ್ಣ-ರವಿಶಂಕರರ ನಾಲ್ಕಾರು ಜುಗಲ್‌ಬಂದಿ ಕಛೇರಿಗಳು ಅಪಾರವಾಗಿ ಕಳೆಗಟ್ಟಿದ್ದವು. ಕೊನೆಯ ಒಂದೆರಡು ಕಛೇರಿಗಳಲ್ಲಿ ರವಿಶಂಕರರಿಗಿಂತ ಅನ್ನಪೂರ್ಣರ ದೀರ್ಘ‌ ತಾನುಗಳಿಗೆ ಹೆಚ್ಚು ಚಪ್ಪಾಳೆಗಳು, ಕಛೇರಿ ಮುಗಿದಿದ್ದೇ ಸಂಗೀತರಸಿಕರು ಆಕೆಯನ್ನು ಸುತ್ತುಗಟ್ಟುತ್ತಿದ್ದರು. ಅಸಮಾಧಾನದ ಹೊಗೆ ಹೊರಚಾಚಿದ್ದು ಹಲವು ರೂಪಗಳಲ್ಲಿ. “”ನೀನು ಇಷ್ಟು ದೀರ್ಘ‌ ಆಲಾಪ್‌ ಮಾಡಬೇಡ. ಸ್ವಲ್ಪ ಆಧುನಿಕವಾಗಬೇಕು. ಜನರಿಗೆ ಏನು ಬೇಕೋ ಅದನ್ನು ನಾವು ಕೊಡಬೇಕು” ಇತ್ಯಾದಿಗಳು. ಇದೆಲ್ಲ ಯಾವ ಸುಡುತುದಿ ತಲುಪುವುದೋ ಎಂದು ಅನ್ನಪೂರ್ಣರು ವಿಹ್ವಲರಾದರು. ಇದಾವುದೂ ಬಾಬಾರ ಕಿವಿಗೆ ಬೀಳುವುದು ಆಕೆಗೆ ಬೇಡವಿತ್ತು. ಹೇಗಾದರೂ ಮಾಡಿ ಮದುವೆಯನ್ನು ಉಳಿಸಿಕೊಳ್ಳಲು ಯೋಚಿಸಿರಬಹುದು. ಅಂತೂ ಸಾರ್ವಜನಿಕವಾಗಿ ಕಛೇರಿ ಕೊಡುವುದು ಬೇಡವೇ ಬೇಡ, ಸಾಕೋಸಾಕಿನ್ನು ಎಂಬಂತಹ ಮನೋ ಆವರಣವನ್ನು ರವಿಶಂಕರ್‌ ಸಿದ್ಧಮಾಡಿಬಿಟ್ಟಿದ್ದರು. ಉಸ್ತಾದ್‌ ಅಲಿಅಕºರ್‌ ಖಾನರು ಕೊಲ್ಕತಾದಲ್ಲಿ 1956ರಲ್ಲಿ ಸಂಗೀತ ಶಾಲೆಯ ಆರಂಭಕ್ಕೆ ಈಡನ್‌ ಗಾರ್ಡನ್ನಿನಲ್ಲಿ ಏರ್ಪಡಿಸಿದ ಉತ್ಸವದಲ್ಲಿ ಅನ್ನಪೂರ್ಣರು ಹಾಡಿದ್ದೇ ಕೊಟ್ಟಕೊನೆಯ ಸಂಗೀತ ಕಛೇರಿಯಾಯಿತು. ಎಂತಹ ಭವ್ಯ ಕಛೇರಿ, ಈಗಲೂ ಕಿವಿಯಲ್ಲಿ ಗುಂಯುಡುತ್ತೆ ಎಂದು ಆ ದಿನವನ್ನು ರಾಜೀವ ತಾರಾನಾಥರು ಇನ್ನೂ ನೆನಪಿಸಿಕೊಳ್ಳುತ್ತಾರೆ. ರವಿಶಂಕರರ ಆಗಿನ ನಡೆ, ನುಡಿ, ಸಂಕುಚಿತ ಭಾವಚಹರೆಗಳು ಅನ್ನಪೂರ್ಣದೇವಿಯವರ ಅಪರೂಪದ ಸುರ್‌ಬಾಹರ್‌ ಆಸ್ವಾದಿಸುವ ಅವಕಾಶದಿಂದ ಸಂಗೀತಲೋಕವನ್ನು ವಂಚಿಸಿಬಿಟ್ಟಿತು. ಒಬ್ಬ ಸಂಗೀತಗಾರನ ಸಣ್ಣತನದಿಂದ ಕ್ಷುಲ್ಲಕವೆನ್ನಿಸುವ ಕಾರಣಕ್ಕೆ ಶ್ರೇಷ್ಠ ಸುರ್‌ಬಹಾರ್‌ ಅನ್ನು ಆಲಿಸುವ ಒಂದು ಅವಕಾಶ ಅನಂತಶೂನ್ಯದಲ್ಲಿ ಶಾಶ್ವತವಾಗಿ ಕಳೆದೇಹೋಯಿತು.  

ಹೊರನಡೆದ “ರವಿ’, ಒಳನಡೆದ “ಸಾಧಕಿ’
1958ರಲ್ಲಿ ರವಿಶಂಕರ್‌ ಜೊತೆ ರಾಜಿಯಾಗುತ್ತದೆ. ಮತ್ತೆ ಜೊತೆಗಿರುತ್ತಾರೆ. ಆದರೆ ಅನ್ನಪೂರ್ಣರ ಈ ಯಾವ ತ್ಯಾಗದಿಂದಲೂ ದಾಂಪತ್ಯದ ಶ್ರುತಿ ಸುಸ್ವರದಲ್ಲಿ ಮಿಡಿಯುವುದಿಲ್ಲ. ಅದಾಗಲೇ ಪಂ. ರವಿಶಂಕರ್‌ ಭಾರತೀಯ ಸಂಗೀತದ ರಾಯಭಾರಿಯೆಂದು ವಿದೇಶದಲ್ಲಿ ಪ್ರಚುರವಾಗತೊಡಗಿದ ಕಾಲಘಟ್ಟ ಶುರುವಾಗಿತ್ತು. ರವಿಶಂಕರ್‌ ದಿನೇ ದಿನೇ ಹೊರಪ್ರಪಂಚಕ್ಕೆ ತೆರೆದುಕೊಳ್ಳುತ್ತ, ಹೊಸ ಸಖೀಯರನ್ನು ಹುಡುಕಿಕೊಳ್ಳುತ್ತ, ಶಾಸ್ತ್ರೀಯ ಸಂಗೀತದೆಡೆ ರಸಿಕರನ್ನು ಸೆಳೆಯುವ ಸಾಧ್ಯತೆಗಳನ್ನು ವಿಸ್ತರಿಸುತ್ತ, ಕಲಾರಸಿಕರಿಗೆ ಹತ್ತಿರವಾಗುತ್ತ ಹೋದರು. ಇತ್ತ ಅನ್ನಪೂರ್ಣರ ಆಂತರಿಕ ಪಯಣ, ಏಕಾಂಗಿ ಸ್ವರಸಾಧನೆ ಶುರು. ಅನ್ನಪೂರ್ಣ ಯಾಕೆ ನುಡಿಸುತ್ತಿಲ್ಲ, ಯಾಕೆ ಸಾರ್ವಜನಿಕವಾಗಿ ಕಛೇರಿ ಕೊಡುತ್ತಿಲ್ಲ, ಯಾಕಿಂಥ ಮೌನ, ಎಲ್ಲದಕ್ಕೆ ಚಿತ್ತಾಕರ್ಷಕ ವಾಗ್ಮಿಯೂ ಆಗಿದ್ದ ರವಿಶಂಕರರ ಸ್ವಸಮರ್ಥನೆಗಳು ಸುತ್ತಲಿನವರು ಅಹುದಹುದೆನ್ನುವಂತೆ ಇರುತ್ತಿದ್ದವು. ಅಂತೂ ಕಡೆಗೆ 1967ರಲ್ಲಿ ರವಿಶಂಕರ್‌, ಕಮಲಾರೊಂದಿಗೆ ವಿದೇಶಕ್ಕೆ ಹಾರುವುದರೊಡನೆ ಸಂಬಂಧ ಪೂರ್ಣವಾಗಿ ಅಂತ್ಯಗೊಂಡಿತು. ಆಗಿನ್ನೂ ಬಾಬಾ ಬದುಕಿದ್ದರು. ತಮ್ಮ ಮುರಿದುಬಿದ್ದ ಸಂಬಂಧದ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳುವುದು ಅನ್ನಪೂರ್ಣರಿಗೆ ಬೇಡವೆನ್ನಿಸಿತೇನೋ. ಅಲ್ಲದೇ ಅದು ಅರವತ್ತು-ಎಪ್ಪತ್ತರ ದಶಕ. 

ಗಂಡನಿಂದ ದೂರವಾದ ಹೆಣ್ಣುಮಗಳು ಚೂಪುಮಾತುಗಳ ತಿವಿತಕ್ಕೂ ಒಡ್ಡಿಕೊಳ್ಳಬೇಕಿದ್ದ ಕಾಲಘಟ್ಟ. ಆಕಾಶಗಂಗಾ ಫ್ಲಾಟಿನ ಬಾಗಿಲು ಮುಚ್ಚಿಕೊಂಡಿತು. ಮಗ ಶುಭೋ ಮತ್ತು ಆಯ್ದ ಶಿಷ್ಯರಿಗೆ ಸಂಗೀತ ಕಲಿಕೆ ಮುಂದುವರೆಸಿದರು. ಬಾಬಾರ ಕಲಿಕಾ ವಿಧಾನವನ್ನೆ ಅನ್ನಪೂರ್ಣ ಮುಂದುವರೆಸಿದರು. ಸರೋದ್‌, ಸಿತಾರ್‌, ಕೊಳಲು ಎಲ್ಲವನ್ನೂ ಗಾಯನದ ಮೂಲಕವೇ ಹೇಳಿಕೊಡುತ್ತಿದ್ದರು. “ಅವರ ಸ್ವರ ತುಂಬ ಮಧುರವಾಗಿದೆ’ ಎಂದು ಎಲ್ಲ ಶಿಷ್ಯಂದಿರೂ ನೆನಪಿಸಿಕೊಳ್ಳುತ್ತಾರೆ. ಜಗದ ಕಣ್ಣಿಗೆ ಕದಮುಚ್ಚಿದ ಆ ಮನೆಯೊಳಗೆ ಈ ಅಪರೂಪದ ನಾದಶಿಲ್ಪಿ ಕಟೆದು ನಿಲ್ಲಿಸಿದ ಶಿಷ್ಯರಾದರೂ ಎಂಥವರು. ಪ್ರತಿಯೊಬ್ಬರೂ ಅನಘ ರತ್ನಗಳು. ಪಂಡಿತ್‌ ಚೌರಾಸಿಯಾ, ಆಶೀಶ್‌ ಖಾನ್‌, ಬಹಾದುರ್‌ ಖಾನ್‌, ನಿಖೀಲ… ಬ್ಯಾನರ್ಜಿ, ನಿತ್ಯಾನಂದ ಹಲ್ದೀಪುರ್‌, ಬಸಂತ್‌ ಕಾಬ್ರಾ, ಸುರೇಶ್‌ ವ್ಯಾಸ್‌, ಪ್ರದೀಪ್‌ ಬರೋಟ್‌, ಸಂಧ್ಯಾ ಫಾಡೆ, ಸುಧೀರ್‌ ಫಾಡೆ ಇನ್ನಿತರರು. ಮೈಹರ್‌ ಘರಾನೆಯ ಮುಂದುವರೆದ ಕೊಂಡಿಗಳು. 

ಶುಭೋಗೆ ಇಪ್ಪತ್ತೈದು ವರ್ಷವಾಗುತ್ತಿದ್ದಂತೆ ತಮ್ಮೊಂದಿಗೆ ಕಛೇರಿ ಕೊಡಲಿ ಅವನು ಎಂದು 1970ರಲ್ಲಿ ಅಮೆರಿಕಕ್ಕೆ ಕರೆದೊಯ್ಯುವ ರವಿಶಂಕರರು ಆ ಸಂಬಂಧಕ್ಕೂ ಪೂರ್ಣ ನ್ಯಾಯ ಒದಗಿಸುವುದಿಲ್ಲ. 1972ರಲ್ಲಿ ಬಾಬಾ ತೀರಿಕೊಂಡ ನಂತರ ಅನ್ನಪೂರ್ಣ ಇನ್ನಷ್ಟು ಏಕಾಕಿಯಾಗುತ್ತಾರೆ. ಕೆಲವರ್ಷಗಳ ನಂತರ ಕೊನೆಗೂ ಸಾಂಗತ್ಯವೊಂದು ಅನ್ನಪೂರ್ಣರ ಬದುಕಿನಲ್ಲಿ ಅರಳುತ್ತದೆ. 1974ರಲ್ಲಿ ಸಿತಾರ್‌ ಕಲಿಯಲೆಂದು ಸಂವಹನ ತಜ್ಞ ಋಷಿಕುಮಾರ್‌ ಪಾಂಡ್ಯ  ಬರುತ್ತಾರೆ. 1982ರಲ್ಲಿ ಇಬ್ಬರೂ ಮದುವೆಯಾಗುತ್ತಾರೆ.  

ಶುಭೋ ಕಡೆಯಬಾರಿ 1990ರಲ್ಲಿ ತಂದೆಯೊಂದಿಗೆ ನೀಡಿದ ಸವಾಯ… ಗಂಧರ್ವ ಕಛೇರಿಯೇ ಕೊನೆಯದು. ಆ ಕಛೇರಿಯ ನಂತರ  “ಶುಭೋ ಬೇಸುರಾ ಆಗಿ ನುಡಿಸಿದ’ ಎಂಬ ಸುದ್ದಿಯನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗಿತ್ತು. ಸಿತಾರ್‌ ಬಾನಂಗಳದಲ್ಲಿ “ರವಿ’ ಮಾತ್ರವೇ ಪ್ರಖರವಾಗಿ ಹೊಳೆಯುತ್ತಿರಬೇಕು ಎಂಬಂತಹುದೇನೋ ಇದರ ಹಿಂದಿತ್ತೆ? ಶುಭೋ ತನ್ನನ್ನು ಮೀರಿಸಿಬಿಡಬಹುದು ಎಂಬ ಅಭದ್ರತೆ ರವಿಶಂಕರರ ಒಳಗೆಲ್ಲೋ ಇದ್ದಿರಬಹುದೇನೋ. ತೀವ್ರವಾಗಿ ಘಾಸಿಗೊಂಡಿದ್ದ ಶುಭೋ ಕೊನೆಗೆ ರವಿಶಂಕರರ ಸಂಬಂಧ ಕಡಿದುಕೊಳ್ಳುತ್ತಾನೆ. 1992ರಲ್ಲಿ ನ್ಯುಮೋನಿಯಾದಿಂದ ಆತ ತೀರಿಕೊಂಡಾಗ ಇನ್ನೂ 50ರ ಹರೆಯ. ಕರುಳಕುಡಿ ದೂರವಿದ್ದರೂ ಇಂದಲ್ಲ ನಾಳೆ ಸಿತಾರ್‌ ವಾದನದಲ್ಲಿ ಬಾಬಾನ ಹೆಸರು ಕಾಯುತ್ತಾನೆ ಎಂಬ ಆಶಯವಿಟ್ಟುಕೊಂಡಿದ್ದ ಅನ್ನಪೂರ್ಣರ ಮೇಲೆ ವಿಧಿ ಮತ್ತೆ ಪ್ರಹಾರ ಎಸಗಿತ್ತು. ತೀವ್ರ ಕುದಿ ತಳಮಳದ ಈ ಎಲ್ಲ ವರ್ಷಗಳಲ್ಲಿ ಅವರಿಗೆ ಜೊತೆಯಾಗಿದ್ದು ಋಷಿಕುಮಾರರೊಂದಿಗಿನ ಬಾಂಧವ್ಯ. “”ಅವರ ಕಾಳಜಿ, ಆರೈಕೆಯಿಂದಾಗಿ ನಾನು ಇಷ್ಟು ವರ್ಷ ಬದುಕಿದ್ದು, ಕಲಿಸಲು ಸಾಧ್ಯವಾಯಿತು. ಅವರ ಕಾಳಜಿಯಿಲ್ಲದೇ ಇಷ್ಟು ವರ್ಷ ಬದುಕಿರುತ್ತಿ¨ªೆ ಎಂದು ನನಗೆ ಅನ್ನಿಸುವುದಿಲ್ಲ” ಎಂದು ಅನ್ನಪೂರ್ಣರು ಒಮ್ಮೆ ಲಿಖೀತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 

ಏನೆಲ್ಲ ಏರಿಳಿತಗಳ ನಡುವೆಯೂ ಏಕಾಂತದಲ್ಲಿ  ಸುರ್‌ಬಹಾರ್‌ ಸಾಧನೆಯನ್ನು ಕೈಬಿಡಲಿಲ್ಲ. ಅವರ ರಿಯಾಜ್‌ ಶುರುವಾಗುತ್ತಿದ್ದುದೇ ಮಧ್ಯರಾತ್ರಿಯ ನಂತರ. ಸುರ್‌ಬಹಾರ್‌ನ ಅಪೂರ್ವ ನುಡಿಸಾಣಿಕೆಯನ್ನು ನಂತರ ಕೇಳಿದವರು ಎಂದರೆ ಶುಭೋ, ಋಷಿಕುಮಾರ್‌ ಪಾಂಡ್ಯ. ಬಹಳ ಕೋರಿಕೆಯ ನಂತರ ಜಾಜಾರಿಸನ್ರಿಗೆ ರಿಯಾಜ್‌ ಮಾಡುವಾಗ ಸ್ವಲ್ಪ ಹೊತ್ತು ಕುಳಿತೆದ್ದು ಹೋಗಲು ಅವಕಾಶ ನೀಡಿದ್ದರು. ಇಂಥದೊಂದು ಶ್ರೇಷ್ಠ ಸಂಗೀತದ, ಅಪರೂಪದ ವಾದನದ ರೆಕಾರ್ಡಿಂಗ್‌ ಕೂಡ ಇಲ್ಲ, ಇದು ಯಾರಿಂದಲೂ ತುಂಬಲು ಸಾಧ್ಯವೇ ಇಲ್ಲದ ನಷ್ಟ.  

ಉಸ್ತಾದ್‌ ಅಮೀರ್‌ ಖಾನ್‌ ಒಂದು ಕಡೆ ಹೇಳುತ್ತಾರೆ, “ಅನ್ನಪೂರ್ಣ ದೇವಿಯವರು ಬಾಬಾರ ಸಂಗೀತವನ್ನು ಶೇ. 80ರಷ್ಟನ್ನು ಮೈಗೂಡಿಸಿಕೊಂಡಿದ್ದರು, ಅಲಿ ಅಕºರ್‌ ಖಾನ್‌ ಶೇ. 70ರಷ್ಟು ಮತ್ತು ರವಿಶಂಕರ್‌ ಶೇ. 40ರಷ್ಟು ಮಾತ್ರ ಮೈಗೂಡಿಸಿಕೊಂಡಿದ್ದರು’. ಅಲಿ ಅಕºರ್‌ ಖಾನರೇ ಒಮ್ಮೆ ಹೇಳಿದ್ದರು, “”ರವಿಶಂಕರ್‌, ಪನ್ನಾಲಾಲ… ಘೋಷ್‌ ಮತ್ತು ನನ್ನನ್ನು ತಕ್ಕಡಿಯ ಒಂದು ಕಡೆ ಇಡಿ, ಇನ್ನೊಂದು ಕಡೆ ಅನ್ನಪೂರ್ಣರನ್ನು ಇಡಿ. ಆಗಲೂ ತಕ್ಕಡಿ ಅನ್ನಪೂರ್ಣ ಅವರ ಕಡೆಗೇ ಭಾರವಾಗಿ ವಾಲುತ್ತೆ’ ಎಂದು. 

2013ರಲ್ಲಿ ಋಷಿಕುಮಾರರು ತೀರಿಕೊಂಡ ನಂತರ ಅವರನ್ನು ದೈನಿಕಕ್ಕೆ ಕರೆತರುವುದೇ ಕಷ್ಟವಾಗಿತ್ತು. ಈ ಐದು ವರ್ಷಗಳು ಮನೆಯಲ್ಲಿಯೇ ಇದ್ದು ಅವರನ್ನು ನೋಡಿಕೊಂಡವರು ಶಿಷ್ಯರಾದ ನಿತ್ಯಾನಂದ ಹಲ್ದೀಪುರ್‌ ಮತ್ತು ಸುರೇಶ್‌ ವ್ಯಾಸ್‌. ಕಳೆದ ನಾಲ್ಕು ವರ್ಷಗಳಿಂದ ಪ್ರಾಣವಾಗಿದ್ದ ಸುರ್‌ಬಹಾರ್‌ ವಾದ್ಯವನ್ನು ಮುಟ್ಟುವುದೂ ಅವರಿಗೆ ಆಗಿರಲಿಲ್ಲ. ಆದರೆ ಮಲಗಿದಲ್ಲಿಂದಲೇ ಶಿಷ್ಯರು ನುಡಿಸುವುದನ್ನು ಕೇಳಿ, ಸಾಸಿವೆಯಷ್ಟು ತಪ್ಪಿದ್ದರೂ ತಟ್ಟನೆ ಸರಿಪಡಿಸುವ ಸೂಕ್ಷ್ಮಗ್ರಹಿಕೆ ಕೊನೆಯ ದಿನಗಳವರೆಗೂ ಇತ್ತು. ಬದುಕಿನ ಏನೆಲ್ಲ, ಎಷ್ಟೆಲ್ಲ ಹಸಿಗಾಯಗಳ ನಡುವೆಯೂ ಮೈಹರ್‌ ಘರಾನೆಯ ಸ್ವರಸಂಪತ್ತನ್ನು ಶಿಷ್ಯರ ಕೊರಳಿಗೆ, ಬೆರಳಿಗೆ ದಾಟಿಸುವ ಕರ್ತವ್ಯವನ್ನು ಏಕನಿಷ್ಠೆಯಿಂದ ಪಾಲಿಸಿದರು. ಸಂಗೀತರಸಿಕರ ಎದುರು ಸ್ವರಸೌಧವನ್ನು ತೆರೆದಿಡುವ ಅವಕಾಶಗಳಿಂದ ತಾನು ವಂಚಿತೆಯಾದರೂ, ಅಂತಹ ಸಾರ್ವಜನಿಕ ಕಛೇರಿಗಳನ್ನು ತಮ್ಮದೇ ವಿಶಿಷ್ಟ ಧ್ವನಿಲಯದಿಂದ ಕಳೆಗಟ್ಟಲು ಶಿಷ್ಯರನ್ನು ಕಠಿಣ ತಾಲೀಮು ನೀಡಿ ಸಜ್ಜುಗೊಳಿಸಿದರು. ತನಗೆ ಗೊತ್ತಿರುವುದೆಲ್ಲವನ್ನು ಶಿಷ್ಯರಿಗೆ ಧಾರೆಯೆರೆಯುವಾಗ, ಚೆನ್ನಾಗಿ ನುಡಿಸಿದರೆಂದು ಶಿಷ್ಯರು ಅಷ್ಟೆಲ್ಲ ಮನ್ನಣೆ ಪಡೆಯುವಾಗ ಅಸೂಯೆ, ಮಾತ್ಸರ್ಯದ ಸಣ್ಣ ಸೆಳಕೂ ಸುಳಿಯದ ಹಿಮಾಲಯದ ಎತ್ತರದ ಅನ್ನಪೂರ್ಣದೇವಿ ಎಲ್ಲಿ ಮತ್ತು ಹೆಂಡತಿ ಹೊರಗೆ ಕಛೇರಿ ನೀಡಲು ಹಿಂಜರಿದು, ಒಳಗೇ ಉಳಿಯುವ ವಾತಾವರಣ ಸೃಷ್ಟಿಸಿದ್ದು ಮಾತ್ರವಲ್ಲದೇ ಮಗ ಶುಭೋ ಕೂಡ ತನಗಿಂತ ಮೇಲೇರಿಬಿಟ್ಟರೆ ಎಂಬ ಅಭದ್ರತೆಯ ಭಾವದಲ್ಲಿ ಅವನೂ ಮೇಲೆ ಬಾರದ ಸನ್ನಿವೇಶ ಹರಡಿದ ಪಂ. ರವಿಶಂಕರರು ಎಲ್ಲಿ … ಹೋಲಿಕೆ ಮಾಡಲು ಕೂಡ ಆಗದು. ಆದ್ದರಿಂದಲೇ ಪಂಡಿತೆ ಅನ್ನಪೂರ್ಣದೇವಿ ಎಂದರೆ ನಾದದೇವತೆ, ಸ್ವರಸಂಪೂರ್ಣೆ.

ಸುಮಂಗಲಾ

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.