ಜಗದಗಲ ದೀಪಾವಳಿ


Team Udayavani, Nov 4, 2018, 6:00 AM IST

w-90.jpg

ಅಮೆರಿಕದಲ್ಲಿ ಪಟಾಕಿಗಳು
ಸುಮಾರು 2-3 ದಶಕಗಳ ಹಿಂದೆಗೆ ಹೋಲಿಸಿದರೆ ಇಂದು ಅಮೆರಿಕದಲ್ಲಿ ದೀಪಾವಳಿ ಹಬ್ಬದ ಆಚರಣೆಯ ಕುರಿತು ಅಮೆರಿಕ ಸಂಜಾತ ಪಾಶ್ಚಾತ್ಯರಲ್ಲಿ ತಿಳುವಳಿಕೆಯ ಮಟ್ಟ ಅಧಿಕವಾಗಿದೆ. ಹಿಂದೆ ಕೇವಲ ಹಿಂದೂ ದೇವಾಲಯಗಳಲ್ಲಿ ಭಾರತೀಯ ಮೂಲದವರಿಂದ ದೀಪದ ಹಬ್ಬ ಆಚರಿಸಲ್ಪಡುತ್ತಿತ್ತು. ಆದರೆ, ಕಳೆದ ಒಂದು ದಶಕದಲ್ಲಿ ದೀಪಾವಳಿ ಹಬ್ಬದ ಸಾಂಕೇತಿಕ ಆಚರಣೆ ವಿಸ್ತಾರಗೊಂಡು ದೇಶದಾದ್ಯಂತ ಗೋಚರಿಸುತ್ತದೆ. ಅಮೆರಿಕ ಮತ್ತು ಭಾರತದ ದೇಶಗಳ ನಡುವೆ ವರ್ಧಿಸಿರುವ ಸೌಹಾರ್ದಯುತ ರಾಜಕೀಯ, ರಾಜತಾಂತ್ರಿಕ ಸಂಬಂಧ, ವಾಣಿಜ್ಯ ವ್ಯವಹಾರಗಳು ಮತ್ತು ಮುಖ್ಯವಾಗಿ ವಲಸೆಬಂದ ಭಾರತೀಯರ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆ ಈ ಬದಲಾವಣೆಗೆ ಕಾರಣ ಎಂದು ತರ್ಕಿಸಬಹುದು.

ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ದಿನ (ಜುಲೈ 4) ಮಾತ್ರ ಸರಕಾರಿ ಪರವಾನಿಗೆಯಲ್ಲಿ  ಸಾಮೂಹಿಕವಾಗಿ ಬಯಲು ಪ್ರದೇಶದಲ್ಲಿ ಸಿಡಿಮದ್ದು ಸುಟ್ಟು ಸಂಭ್ರಮಿಸುವ ಪದ್ಧತಿ. ಆದರೆ, ದೀಪಾವಳಿಯಲ್ಲಿಯೂ ಭಾರತೀಯರು ಅಲ್ಲಲ್ಲಿ ಸಿಡಿಮದ್ದು, ಪಟಾಕಿ ಸಿಡಿಸಿ ಹಬ್ಬವನ್ನು ಆಚರಿಸುತ್ತಾರೆ. ಅದಕ್ಕೆ ಸ್ಥಳೀಯ ಆಡಳಿತದ ಅನುಮತಿ ಇರುತ್ತದೆ. ಹಬ್ಬದ ಹಣತೆಗಳು, ತೂಗುದೀಪದ ಸರಗಳು ಭಾರತೀಯ ಮೂಲದ ಅಮೆರಿಕ ನಿವಾಸಿಗಳ ಮನೆಗಳ ಸುತ್ತ ಕಾಣುವುದು ಸಾಮಾನ್ಯ. ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಪಾಶ್ಚಾತ್ಯ ಸಹೋದ್ಯೋಗಿಗಳು ಭಾರತೀಯ ಮೂಲದವರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸುವುದು ಕಂಡುಬರುತ್ತದೆ. 2009ರಲ್ಲಿ ಆಗಿನ ಅಧ್ಯಕ್ಷ ಬರಾಕ್‌ ಒಬಾಮಾ ವಾಷಿಂಗ್ಟನ್‌ನಲ್ಲಿರುವ ತಮ್ಮ ನಿವಾಸ ಶ್ವೇತಭವನದಲ್ಲಿ ಅಧಿಕೃತವಾಗಿ ದೀಪಾವಳಿ ಆಚರಣೆಯನ್ನು ಆರಂಭಿಸಿದ್ದು ಒಂದು ಮೈಲುಗಲ್ಲು. ಅಲ್ಲಿಯವರೆಗೆ ಕೇವಲ ಅನೌಪಚಾರಿಕ ಸಡಗರವಿಲ್ಲದ ದೀಪಾವಳಿಯ ಆಚರಣೆ ಶ್ವೇತಭವನದಲ್ಲಿ ನಡೆದಿರುತ್ತಿತ್ತು. ಅನೇಕ ಸ್ಥಳೀಯ ಸಂಘಸಂಸ್ಥೆಗಳು, ವೃತ್ತಿಸಂಬಂಧಿ ಸಂಘಟನೆಗಳೂ ದೀಪಾವಳಿ ಆಚರಣೆಯನ್ನು ಪ್ರಾರಂಭಿಸಿದುದು ಇತ್ತೀಚಿನ ಬೆಳವಣಿಗೆ. ಭಾರತೀಯ ಮೂಲದ ವಿವಿಧ ಸಮುದಾಯಗಳು ಭರತನಾಟ್ಯ, ಭಾಂಗ್ರಾ ನೃತ್ಯ, ಸಂಗೀತ, ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ದೇಶೀಯ ತಿನಿಸುಗಳ ಮಳಿಗೆಗಳನ್ನು ಒಳಗೊಂಡ ಬೃಹತ್‌ ಉತ್ಸವಗಳನ್ನು ಹಮ್ಮಿಕೊಳ್ಳುತ್ತವೆ. ಈ ಕಾರ್ಯಕ್ರಮಗಳು ಹಬ್ಬದ ಆಚರಣೆ ಮತ್ತು ಮುಂದಿನ ತಲೆಮಾರಿನ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಅರಿವು ಎರಡನ್ನೂ ಸಾಧಿಸುತ್ತವೆ. ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಹಬ್ಬದ ವಿಶೇಷ ರಿಯಾಯಿತಿ ದರದ ವಹಿವಾಟನ್ನು ಅಮೆರಿಕದ ಭಾರತೀಯ ದಿನಸಿ ಅಂಗಡಿಗಳು, ಉಪಹಾರ ಗೃಹಗಳು ಒದಗಿಸಿ ಗ್ರಾಹಕರನ್ನು ಆಕರ್ಷಿಸುತ್ತವೆ. 

ಅಮೆರಿಕದಲ್ಲಿ ಭಾರತೀಯ ವಲಸಿಗರು ಅಲ್ಪಸಂಖ್ಯಾತ ಏಷ್ಯನ್‌ ಅಮೆರಿಕನ್‌ರಲ್ಲಿ ಒಂದು ಸಣ್ಣ ಗುಂಪು ಮಾತ್ರ. ಆದರೆ, ಬೆಳಕಿನ ಹಬ್ಬದ ಆಚರಣೆಯಲ್ಲಿ ಅಲ್ಪತೆ ಕಾಣದು. ಉತ್ಸಾಹ, ಸಡಗರಗಳಿಗೆ ಕೊರತೆ ಇಲ್ಲ. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕಾದ ಸಂಗತಿ.

ಕರ್ಕಿ ಆನಂದ ಹಾಸ್ಯಗಾರ, ಕ್ಯಾಲಿಪೋರ್ನಿಯಾ

ನಾನು ವಾಸವಾಗಿರುವುದು ಅಮೆರಿಕದ ನ್ಯೂಜರ್ಸಿ ಎಂಬ ರಾಜ್ಯದಲ್ಲಿ. ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್‌ ರಾಜ್ಯಗಳ ನಂತರ ಭಾರತೀಯರು ಅತಿ ಹೆಚ್ಚು ಸಂಖ್ಯೆಯಲ್ಲಿ ವಾಸವಾಗಿರುವುದು ನ್ಯೂಜರ್ಸಿಯಲ್ಲೇ. ಇಲ್ಲಿನ ಜರ್ಸಿ ಸಿಟಿ ಎಂಬ ಪಟ್ಟಣದಲ್ಲಿರುವ ಇಂಡಿಯಾ ಸ್ಕ್ವೇರ್‌ ಪ್ರದೇಶ ಭಾರತೀಯ ಸಮುದಾಯದವರಲ್ಲಿ ಬಹು ಪ್ರಸಿದ್ಧವಾದುದು. ಭಾರತೀಯರ ಜನಸಂಖ್ಯೆ ಅಧಿಕವಾಗಿರುವ ಈ ಪ್ರದೇಶದಲ್ಲಿ ಎಲ್ಲ ಭಾರತೀಯ ಹಬ್ಬಗಳೂ ತವರುನಾಡಿನಷ್ಟೇ ಸಂಭ್ರಮದಿಂದ ಆಚರಿಸಲ್ಪಡುವವು. 
ಹಬ್ಬದ ಸಮಯದಲ್ಲಿ ಪರದೇಶದಲ್ಲಿ ವಾಸವಾಗಿರುವವರ ಏಕೈಕ ಸಮಸ್ಯೆಯೆಂದರೆ ರಜೆಯದ್ದು. ಇಲ್ಲಿನ ಶಾಲಾ-ಕಾಲೇಜುಗಳು, ಕಚೇರಿಗಳು ಭಾರತೀಯ ಹಬ್ಬಗಳ ದಿನದಂದು ರಜೆ ಘೋಷಿಸದ ಕಾರಣ ಹಬ್ಬವನ್ನು ವಾರಾಂತ್ಯಗಳಂದೇ ಆಚರಿಸಬೇಕಾದುದು ಇಲ್ಲಿ ವಾಸವಾಗಿರುವವರ ಅನಿವಾರ್ಯತೆ. ಈ ಬಾರಿಯೂ ಜರ್ಸಿ ಸಿಟಿಯಲ್ಲಿ ಕಳೆದ ವಾರಾಂತ್ಯವೇ ದೀಪಾವಳಿ ಹಬ್ಬವನ್ನು ಸಾಮೂಹಿಕವಾಗಿ ಆಚರಿಸಲಾಯಿತು. ಮಕ್ಕಳು ವಿವಿಧ ಬಗೆಯ ಸಾಂಸ್ಕೃತಿಕ ನೃತ್ಯಗಳಿಗೆ ಹೆಜ್ಜೆ ಹಾಕಿದರು. ಆ ಮಕ್ಕಳ ತಂದೆಯಂದಿರು ಜುಬ್ಟಾ- ಪಾಯಿಜಾಮವನ್ನೂ, ತಾಯಂದಿರು ಅಪರೂಪಕ್ಕೆ ಮಾತ್ರ ಉಡಬಹುದಾದ ಸೀರೆಗಳನ್ನೂ ತೊಟ್ಟು ಕೈಯಲ್ಲೊಂದೊಂದು ಹಣತೆ ಹಿಡಿದುಕೊಂಡು ತಮ್ಮ ಮಕ್ಕಳಿಗೆ ಪ್ರೋತ್ಸಾಹ ಕೊಡುತ್ತಿದ್ದರು. ವಾತಾವರಣದಲ್ಲಿ ಈಗಾಗಲೇ ಚಳಿ ಶುರುವಾ ಗಿರುವುದರಿಂದ ಬೆಚ್ಚನೆಯ ಜಾಕೆಟ್ಟುಗಳನ್ನು ತರಲು ಯಾರೂ ಮರೆತಿರಲಿಲ್ಲ.

ಕಾರ್ಯಕ್ರಮ ಏರ್ಪಡಿಸಿದ ಸಭಾಂಗಣದ ಹೊರಗೆ ಕಲಾತ್ಮಕ ಕುಸುರಿಯುಳ್ಳ ಹಣತೆಗಳನ್ನು ಮಾರುತ್ತಿದ್ದರು. ಮಕ್ಕಳು ಪುಟ್ಟ ಗಾಗ್ರಾಛೋಲಿಗಳನ್ನು ತೊಟ್ಟು ಅಮೆರಿಕನ್‌ ಇಂಗ್ಲಿಶ್‌ನಲ್ಲಿ ಈ ಹಣತೆಗಳನ್ನು ಖರೀದಿಸಿರೆಂದು ತಮ್ಮ ಪಾಲಕರಿಗೆ ತಾಕೀತು ಮಾಡುತ್ತಿದ್ದರು. ಭಾರತದಿಂದ ಬಂದ ಅಜ್ಜ-ಅಜ್ಜಿಯಂದಿರು ಈ ಮೊಮ್ಮಕ್ಕಳ ಇಂಗ್ಲಿಶ್‌ ಕಲರವವನ್ನು ತುಸು ಹೆಮ್ಮೆಯಿಂದಲೇ ಆಲಿಸುತ್ತಿರುವಂತಿತ್ತು. 
ನ್ಯೂಜರ್ಸಿಯಲ್ಲಿ ಕನ್ನಡಿಗರಿಗೆಂದೇ ಮೀಸಲಿರುವ ಬೃಂದಾವನ, ತ್ರಿವೇಣಿ ಮುಂತಾದ ಕನ್ನಡ ಸಂಘಗಳೂ ನವಂಬರ್‌ ಮತ್ತು ಡಿಸೆಂಬರ್‌ ತಿಂಗಳುಗಳ ಒಂದು ವಾರಾಂತ್ಯದಂದು ದೀಪಾವಳಿ ಹಬ್ಬವನ್ನು ಆಚರಿಸುತ್ತವೆ. ಈ ವಿಶೇಷ ಆಚರಣೆಗಳಿಗಾಗಿಯೇ ಇಲ್ಲಿ ನೆಲೆಸಿರುವ ಕನ್ನಡಿಗರು ವರ್ಷವಿಡೀ ಕಾಯುವುದು ಸುಳ್ಳಲ್ಲ.

ಕಾವ್ಯಾ ಕಡಮೆ , ನ್ಯೂಜರ್ಸಿ

ದುಬೈಯಲ್ಲಿ ಆಕಾಶಬುಟ್ಟಿಗಳು 

ಅಜ್ಞಾನದ ಕತ್ತಲನ್ನು ಹೊಡೆದೋಡಿಸಿ ಜ್ಞಾನದ ಬೆಳಕನ್ನು ಉದ್ದೀಪಿಸುವ ಮನೆ-ಮನಗಳಲ್ಲಿ ಸಡಗರದ  ವಾತಾವರಣವನ್ನೇ  ಸೃಷ್ಟಿಸುವ ದೀಪಗಳ ಹಬ್ಬ ಈ ವರ್ಷವೂ ಮತ್ತೆ ಹೊಸ ಸಂಭ್ರಮದೊಂದಿಗೆ ಆಗಮಿಸಿದೆ. ಸಾಗರದಾಚೆಯ ಮಾಯಾ ನಗರಿ ದುಬೈನಲ್ಲಿ  ನೆಲೆಸಿರುವ ಲಕ್ಷಾಂತರ ಭಾರತೀಯರಿಗೆ ಅದರಲ್ಲೂ ಹಿಂದೂ ಸಂಪ್ರದಾಯಿಗಳಿಗೆ, ಬಂಧುಬಳಗ, ಸ್ನೇಹಿತರೊಂದಿಗೆ ಸಾಂಕೇತಿಕವಾಗಿ ಸಂಬಂಧಗಳನ್ನು ಬೆಸೆಯುವ, ಖುಷಿ ಹರಡುವ ಸಂಭ್ರಮದ ಆಚರಣೆ ಇದಾಗಿದೆ.

ಇಲ್ಲಿ ದೀಪಾವಳಿ ಹಬ್ಬದ ಸಿದ್ಧತೆ ಎಲ್ಲೆಡೆ ಭರ್ಜರಿಯಿಂದ ನಡೆಯುತ್ತದೆ. ಮನೆಯನ್ನು ಸಿಂಗರಿಸಲು ಹೈಪರ್‌ ಮಾರುಕಟ್ಟೆಗಳಲ್ಲಿ  ಸಾಲು ಸಾಲಾಗಿ ಜೋಡಿಸಿದ ಕಲಾತ್ಮಕ ಪ್ರಣತಿಗಳು, ರಂಗುರಂಗಿನ ಆಕಾಶ ಬುಟ್ಟಿಗಳು, ಚೆಂದದ ತೋರಣ, ನಾನಾ ಮಾದರಿಯ ಬಣ್ಣದ ರಂಗೋಲಿಗಳು ಕಣ್ಮನ ಸೆಳೆದರೆ, ಭಾರತೀಯ ಸ್ವೀಟ್‌ ಶಾಪುಗಳಲ್ಲಿ ಈ ಹಬ್ಬಕ್ಕೆಂದೇ ತಯಾರಿಸಿದ ಬಣ್ಣ ಬಣ್ಣದ ಆಕರ್ಷಕ ಸ್ವೀಟ್‌ ಡಬ್ಬಗಳ ಖರೀದಿಗೆ ಜನ ಇರುವೆಗಳಂತೆ ಮುಗಿಬಿದ್ದು ಎಲ್ಲಿ ನೋಡಿದರಲ್ಲಿ  ಸಿಹಿತಿನಸುಗಳ ಸಾಗರವೇ ಕಾಣುತ್ತದೆ.
ದೀಪಾವಳಿ ಸ್ನೇಹ-ಪ್ರೀತಿಯ ನಂಟನ್ನು ಬೆಸೆಯುವ ಹಬ್ಬವೂ ಹೌದು. ಮಹಿಳೆಯರು ವಿಶೇಷ ತಿಂಡಿತಿನಸುಗಳನ್ನು  ಹುರುಪಿನಿಂದ ವಾರದ ಮುಂಚೆಯೇ ತಯಾರಿಸಿ ಬಾಕ್ಸ್‌ಗಳಲ್ಲಿ ತುಂಬಿ ಬಹು ಮಹಡಿ ಕಟ್ಟಡದಲ್ಲಿರುವ ತಮ್ಮೆಲ್ಲ ಸ್ನೇಹಿತರ ಮನೆಗೆ ಸಂಭ್ರಮದಿಂದ ಹಂಚುತ್ತಾರೆ. ಮಹಿಳೆಯರು ತಮ್ಮ ಫ್ಲ್ಯಾಟಿನ ಎದುರು ಹಾಕುವ ರಂಗೋಲಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಮನೆಗಳಲ್ಲಿ ಪೂಜೆ, ಅಲಂಕಾರ ರಂಗುರಂಗಿನ  ರಂಗೋಲಿಗಳು ಸ್ವಾಗತ ಗೀತೆ ಹಾಡಿದರೆ, ಹಚ್ಚಿಟ್ಟ ಸಾಲು ಸಾಲು ಚೆಂದದ ಪ್ರಣತಿಗಳು  ಬೆಳಕಿನ ನೃತ್ಯ ಮಾಡುತ್ತ ಮನಸ್ಸಿಗೆ ಮುದ ನೀಡುತ್ತವೆ. ಬೀದಿ ಬೀದಿಗಳಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಬಹುಮಹಡಿ ಕಟ್ಟಡದ ಬಾಲ್ಕನಿಗಳಲ್ಲಿ ತೂಗುವ ಬಣ್ಣ ಬಣ್ಣದ ವಿದ್ಯುದೀಪಗಳ ಬೆಳಕಿನಲ್ಲಿ ದುಬೈ ನಗರ ಸಾಲಂಕೃತವಾಗಿ ಝಗಮಗಿಸುತ್ತ ನವ ವಧುವಿನಂತೆ ಕಂಗೊಳಿಸುತ್ತದೆ! ಇನ್ನು ಇಲ್ಲಿ  ಕೆಲವು ಅಂಗಡಿಗಳಲ್ಲಿ ಕದ್ದುಮುಚ್ಚಿ ಚಿಕ್ಕಪುಟ್ಟ  ಪಟಾಕಿಗಳ ಮಾರಾಟ ಕೂಡ ನಡೆಯುತ್ತದೆ. ಹಾಗಾಗಿ, ಮಕ್ಕಳು ಸಂತಸದಿಂದ ಸುರುಸುರು ಬತ್ತಿ, ಚಿನಕುರಳಿ ಪಟಾಕಿಗಳನ್ನು ಹಚ್ಚುತ್ತ ಗೆಳೆಯರೊಡನೆ ಸಂಭ್ರಮಿಸುತ್ತಾರೆ. 

 ಆರತಿ ಘಟಿಕಾರ್‌, ದುಬೈ

ಇಂಗ್ಲೆಂಡ್‌ನ‌ಲ್ಲಿ ಹರ್ಷದ ಹಣತೆ

ಇಂಗ್ಲೆಂಡಿನಲ್ಲಿ ಚುಮು ಚುಮು ಚಳಿ ಮತ್ತು ಗಪ್ಪನೆ ಕತ್ತಲೆ ಆವರಿಸಿಕೊಳ್ಳಲು ಶುರುಮಾಡಿದ ಕೂಡಲೇ ಬೆಳಕಿನ ಹಬ್ಬಗಳು ಶುರುವಾಗಿಬಿಡುತ್ತವೆ. ಮೊದಲಿಗೆ ಬರುವುದು ಕಡುಕೇಸರಿ ಬಣ್ಣದ, ಭಯಾನಕ ರೂಪಿನಲ್ಲಿ ಕೆತ್ತಿದ ಕುಂಬಳಗಳ ಒಳಗೆ ದೀಪಗಳನ್ನು ಇಟ್ಟು ಆಚರಿಸುವ ಹ್ಯಾಲೋವೀನ್‌. ಹಿಂದೆಯೇ ಕಡುಗಪ್ಪಿನ ಚಳಿರಾತ್ರಿಗಳ ತುಂಬ ಬೆಳಕಿನ ಬೆಡಗು ತುಂಬುವ ದೀಪಾವಳಿ. ಇದೇ ಸಮಯಕ್ಕೆ ಎತ್ತರಕ್ಕೆ ಚಟ್ಟಕಟ್ಟಿ ಅದರ ಮೇಲೆ ಇಂಗ್ಲೆಂಡಿನ ಪಾರ್ಲಿಮೆಂಟನ್ನು ಸಿಡಿಮದ್ದು ಇಟ್ಟು ಸಿಡಿಸಲು ಯತ್ನಿಸಿದ ಗೈ ಫಾಕÕ… ಎಂಬಾತನನ್ನು ಸಾಂಕೇತಿಕವಾಗಿ ಸುಡುವ ಬಾನ್‌ ಫೈರ್‌ ನೈಟ್‌ ಕೂಡ ಕಾಲಿಡುತ್ತದೆ. ಈ ಬೆಳಕಿನ ಜಗಮಗ ಮುಗಿಯುವುದು ಕ್ರಿಸ್‌ಮಸ್‌ ಮತ್ತು ಹೊಸವರ್ಷದ ಪಟಾಕಿಗಳೊಂದಿಗೇ.

ಭಾರತದ ಹೊರಗಡೆ ನಡೆವ ದೊಡ್ಡ ದೀಪಾವಳಿಗಳಲ್ಲಿ ಇಂಗ್ಲೆಂಡಿನ ಲೆಸ್ಟರ್‌ ನಗರದಲ್ಲಿ ನಡೆವ ದೀಪಾವಳಿಯೂ ಒಂದು. ಪ್ರತಿ ಅಕ್ಟೋಬರ್‌ 28ರಂದು ಸುಮಾರು 35 ಸಾವಿರ ಜನರು ಒಂದೆಡೆ ಸೇರಿ ನಗರದ ಭಾರತೀಯ ಜನರ ಮಳಿಗೆಗಳಿರುವ ಮುಖ್ಯ ರಸ್ತೆಯೊಂದನ್ನು 6000 ಚಿತ್ತಾಕರ್ಷಕ ದೀಪಗಳೊಂದಿಗೆ ಅಲಂಕರಿಸುತ್ತಾರೆ. ಸಂಗೀತ, ನೃತ್ಯ, ಸಾಂಸ್ಕೃತಿಕ ಆಚಾರ-ವಿಚಾರಗಳೊಂದಿಗೆ ನಗು, ಸಂಭ್ರಮದಲ್ಲಿ ಎರಡು ವಾರಗಳ ಅವಿರತ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಾರೆ. ನಾನಾ ವಿಧದ ಸಿಹಿ ಮಿಠಾಯಿಯ ಹಂಚಿಕೆಯ ಹೊಂಚಲ್ಲೇ ಕುಟುಂಬದ ಸದಸ್ಯರೆಲ್ಲ ಸರ್ವ ಸಮುದಾಯದವರೊಡನೆ ಸೇರಿ ನರ್ತಿಸಿ ಆನಂದಿಸುತ್ತಾರೆ.
ಬ್ರಿಟನ್ನಿನ ನಾನಾ ಭಾಗದ ಕನ್ನಡಿಗರು ದೊಡ್ಡ ನಗರಗಳಲ್ಲಿ  ಒಂದೆಡೆ ಸೇರಿ ದೀಪಾವಳಿಯನ್ನು ಆಚರಿಸುತ್ತಾರೆ. ತಾಯ್ನಾಡಿನ ಕಂಪನ್ನು ಬೀರಬಲ್ಲ ಹಾಡುಗಾರರು, ಕಲಾವಿದರು, ಸಾಹಿತಿಗಳನ್ನು, ಸಿನೆಮಾ ತಾರೆಗಳನ್ನು ತವರುಊರಿನಿಂದ ಕರೆಸಿ ಕನ್ನಡ ದೀಪಾವಳಿಯ ಸಡಗರದಲ್ಲಿ ಸಂಭ್ರಮಿಸುತ್ತಾರೆ. ಬಂದ ಕಲಾವಿದರು ಇಲ್ಲಿನ ಚಳಿಯನ್ನು ಶಪಿಸುತ್ತಲೇ ಅನಿವಾಸಿ ಕನ್ನಡಿಗರ ಬೆಚ್ಚಗಿನ ಆತಿಥ್ಯದಲ್ಲಿ ಮೀಯುತ್ತಾರೆ. 

ಪ್ರೇಮಲತಾ, ಲಿಂಕನ್‌ ಶೈರ್‌

ಕೀನ್ಯಾದಲ್ಲಿ ಲಕ್ಷ್ಮೀಪೂಜೆ
ನಾವಿರುವುದು ಕೀನ್ಯಾ ದೇಶದ ನೈರೋಬಿ ಶಹರದಲ್ಲಿ. ಇಲ್ಲಿಗೆ ಬಂದ ಮೊದಲನೆಯ ವರ್ಷ “ಈ ಸಲ ದಿವಾಲಿ ಇಲ್ವಾ , ಸ್ನ್ಯಾಕ್ಸ್ ಏನೂ ಮಾಡ್ತಾ ಇಲ್ಲವಲ್ಲ?’ ಎಂದು ನನ್ನ ಮನೆಗೆಲಸದ ಸಹಾಯಕಿ ಕೇಳಿದ್ದಳು. ಅವಳು ಕೀನ್ಯಾದವಳು. ನನಗೆ ಅದನ್ನು ಕೇಳಿ ಅಚ್ಚರಿಯಾಗಿತ್ತು. “ಓಹೋ! ನಿನಗೆ ನಮ್ಮ ಹಬ್ಬಗಳೆಲ್ಲ ಗೊತ್ತಾ?’ ಎಂದು ಅವಳನ್ನು ಕೇಳಿ¨ªೆ. ಇಲ್ಲಿ  ಹೆಚ್ಚುಕಮ್ಮಿ ಮೂರು ಲಕ್ಷದಷ್ಟು ಭಾರತೀಯರಿದ್ದರೆ ಅದರಲ್ಲಿ ಮುಕ್ಕಾಲು ಭಾಗ ಇಲ್ಲಿಯೇ ಹುಟ್ಟಿ ಬೆಳೆದು ಕೀನ್ಯಾದ ಪ್ರಜೆಗಳಾಗಿರುವವರು ಇ¨ªಾರೆ. ಬ್ರಿಟಿಶರ ಆಳ್ವಿಕೆಯಲ್ಲಿ ಪೂರ್ವ ಆಫ್ರಿಕಾದ ರೈಲು ಮಾರ್ಗವನ್ನು ಕಟ್ಟಲೆಂದು ಕರೆತಂದ ಭಾರತೀಯರನ್ನು “ಮುಹಿಂದೀ’ ಎಂದು ಕೀನ್ಯಾದ ದೇಸಿಗರು ತಮ್ಮ ತಮ್ಮ ಭಾಷೆಗಳಲ್ಲಿ ಕರೆದುಕೊಳ್ಳುತ್ತಾರೆ. ಹಾಗೆ ಸಮುದ್ರ ದಾಟಿ ಈಚೆ ಬಂದ ಭಾರತೀಯರು ತಮ್ಮೊಂದಿಗೆ ತಂದ ತಮ್ಮ ಖಾದ್ಯಗಳು, ಸಿಹಿತಿನಿಸುಗಳು, ಹಬ್ಬಗಳು ಮತ್ತು ಮುಖ್ಯವಾಗಿ ಹಿಂದಿ ಸಿನೆಮಾರಂಗವನ್ನು ಕೀನ್ಯಾದ ದೇಸಿಗರಿಗೂ ಪರಿಚಯಿಸಿದ್ದಾರೆ.  

ಇಲ್ಲಿಯೂ ದೀಪಾವಳಿಯೇ ದೊಡ್ಡ ಹಬ್ಬ. ಹಬ್ಬದ ಅಂಗವಾಗಿ ಲಕ್ಷ್ಮೀಪೂಜೆಯೇ ವಿಶೇಷ ಆಚರಣೆ. ಪಾಡ್ಯದಂದು ಹಿಂದೂಗಳ ಹೊಸವರ್ಷದ ಮೊದಲ ದಿನವೆಂದು ಆಚರಿಸುತ್ತಾರೆ. ಇಲ್ಲಿ ದೀಪಾವಳಿಗೆಂದು  ಸರಕಾರಿ ರಜೆಯೇನೂ ಇಲ್ಲ. ಒಂದೆರಡು ವಾರಗಳ ಮುಂಚೆಯೇ ಕೆಲವೊಂದಿಷ್ಟು ಮಾಲ್ಗಳಲ್ಲಿ ದೀಪಾವಳಿಗೆಂದು ವಿಶೇಷ ಸೇಲ್ ನಡೆಯುತ್ತದೆ. ಹಣತೆಗಳು, ಮೇಣದ ದೀಪಗಳು, ರಂಗೋಲಿ ಪುಡಿ ಮತ್ತು ಪಟಾಕಿಗಳನ್ನು ಅಲ್ಲಿ ಕೊಳ್ಳಬಹುದು. ಸ್ನೇಹಿತರು ಮತ್ತು ಬಂಧುಗಳ ಮನೆಗೆ ಭೇಟಿಯಿತ್ತು ಪರಸ್ಪರ ಶುಭ ಕೋರುವ ದಿವಾಲಿ ಪಾರ್ಟಿಗಳು ತರಾವರಿ ತಿಂಡಿ-ತಿನಿಸುಗಳೊಂದಿಗೆ ರಂಗೇರುತ್ತವೆ. ವಿಶೇಷವೆಂದರೆ, ಮನೆಯಂಗಳದಲ್ಲಿ ಪಟಾಕಿ ಹಚ್ಚದೇ ಎಲ್ಲ ಸೇರಿ ದೇವಸ್ಥಾನದ ಅಂಗಳದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ. ಎಲ್ಲಿದ್ದರೇನಂತೆ, ಹಚ್ಚಿಟ್ಟ ಹಣತೆಗಳ ಬೆಳಕಿಗೆ ದೇಶ-ಪರದೇಶಗಳ ಹಂಗಿಲ್ಲ. 

ಪ್ರಜ್ಞಾ ಶಾಸ್ತ್ರಿ , ನೈರೋಬಿ

ಸಿಂಗಾಪುರದಲ್ಲಿ ಹ್ಯಾಪಿ ದೀಪಾವಳಿ 

ನಮ್ಮೂರಿನಲ್ಲಿ ಮೂರು ದಿನದ ಸಂಭ್ರಮದ ದೀಪಾವಳಿ ಆಚರಣೆಯನ್ನು ನೋಡುತ್ತ ಬೆಳೆದ ನನಗೆ ದೀಪಾವಳಿ ಬರೀ ಹಬ್ಬವಲ್ಲ, ಹಲವಾರು ಮಧುರ ನೆನಪುಗಳ ಮೆರವಣಿಗೆಯಂತೆನಿಸುತ್ತದೆ. ಮಲೆನಾಡಿನ ನನ್ನ ಹುಟ್ಟೂರಿನಲ್ಲಿ ಊರಿನ ಎಲ್ಲರೂ ಒಟ್ಟಾಗಿ ಹಬ್ಬದ ಹಿಂದಿನ ದಿನದಿಂದಲೇ ತಯಾರಿ ಶುರು ಮಾಡತೊಡಗುತ್ತಾರೆ. ತೋಟದಿಂದ ಪಚ್ಚೆತೆನೆ, ಅಡಿಕೆ ಸಿಂಗಾರ, ಬಾಳೆಎಲೆ, ಮಾವಿನ ಎಲೆ, ಅಡಿಕೆಯ ಕೆಂಪು ಗೊನೆ ಎಲ್ಲ ಅಂಗಳದ ಮೂಲೆಯಲ್ಲಿ ಬಂದು ಸೇರುತ್ತಿದ್ದರೆ ಅವೆಲ್ಲದರ ಘಮ ತುಂಬಿದ ಅಂಗಳ, ಕೊಟ್ಟಿಗೆಯಲ್ಲಿ ಶೃಂಗಾರಗೊಂಡು ನಿಂತ ಹಸು-ಕರುಗಳು, ಎಲ್ಲೆಲ್ಲೂ ತೊನೆದಾಡುವ ಮಾವಿನ ತೋರಣ, ಚೆಂಡು ಹೂವಿನ ಹಳದಿ, ಕೇಸರಿ ಬಣ್ಣದ ಹೂಮಾಲೆ ಊರು ಕೇರಿಯನ್ನೆಲ್ಲ ಹೊಸ ಮದುವಣಗಿತ್ತಿಯಂತೆ ಮಾಡುತ್ತಿತ್ತು. ನಾವಂತೂ ಮಕ್ಕಳ ಹಿಂಡು ಕಾರಣವಿಲ್ಲದೆ ಮನೆಯ ಒಳಹೊರಗೆಲ್ಲ ತಿರುಗುತ್ತಿದ್ದೆವು. ಮನೆಮನೆ ಯಲ್ಲೂ ಬೇಳೆಯ ಹೋಳಿಗೆ, ಬಗೆ ಬಗೆಯ ಭಕ್ಷ್ಯ, ದೇವರಿಗೆ ಒಡೆದ ಕಾಯಿಯ ರಾಶಿ, ಗೋಪೂಜೆಯಿಂದ ಗಲಿಬಿಲಿಗೊಂಡು ದಿಕ್ಕಾಪಾಲಾಗಿ ಓಡುವ ದನಗಳ ಹಿಂಡು, ಸಂಜೆ ಊರ ಮುಂದೆ ಮೆರವಣಿಗೆಯಲ್ಲಿ ಬರುವ ಶೃಂಗಾರ ಗೊಂಡ ಜೋಡೆತ್ತು ಗಳ ದಂಡು, ಅವುಗಳ ಮುಂದೆ ಮನೆ ಮನೆಯೆದುರು ನಡೆಯುವ ಡೊಳ್ಳಾಟ, ರಾತ್ರಿ ಒಂದು ಜೊಂಪು ನಿದ್ರೆಯಿಂದ ಎಬ್ಬಿಸುವ ಹಬ್ಬ ಹಾಡುವ ತಂಡದ “ಬಲಿವೀಂದ್ರ ಬಂದೆಲ್ಲೆರು ಸಿರಿವಂತಾರಾ…’ ಎಂಬ ಹಾಡಿನ 

ಸೊಲ್ಲಿನೊಂದಿಗೆ ತೆರೆಮರೆಗೆ ಸರಿಯುವ ಅಭೂತಪೂರ್ವ ಎನಿಸುತ್ತಿದ್ದ ನನ್ನೂರಿನ ದೀಪಾವಳಿಯ ಸೊಬಗು ಎಂದೆಂದೂ ಸರಿಸಾಟಿಯಿಲ್ಲದ್ದು ಎಂಬ ನಿಲುವು ನನ್ನದಾಗಿತ್ತು. ಇಲ್ಲಿಗೆ ಬಂದ ಮೇಲೆ ಸಿಂಗಾಪುರದಂತಹ ವಿದೇಶಿ ನೆಲದಲ್ಲಿ, ಗಗನಚುಂಬಿ ಕಟ್ಟಡಗಳ ನಡುವೆ, ಮೆಟ್ರೋ ರೈಲಿನ, ಕಾರು-ಬಸ್ಸುಗಳ ಹಾವಳಿಯಲ್ಲಿ ಕಾಸ್ಮೋಪಾಲಿಟನ್‌ ಪರಿಸರದಲ್ಲಿ ದೀಪಾವಳಿಗೆಲ್ಲಿದೆ ಜಾಗ ಎಂದುಕೊಂಡಿ¨ªೆ. ಆದರೆ, ವರ್ಷವರ್ಷವೂ ಇಲ್ಲಿ ಬಂದು ನೆಲೆಸುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚುತ್ತಿರುವುದರಿಂದಲೋ ಅಥವಾ ಭಾರತದ ಜಾಗತಿಕ ಮಟ್ಟದಲ್ಲಿ ಏರುತ್ತಿರುವ ಮೌಲ್ಯದ ಕಾರಣದಿಂದಲೋ ಒಟ್ಟಿನಲ್ಲಿ ದೀಪಾವಳಿ ಅತ್ಯಂತ ಸೊಬಗಿನಿಂದ ಆಚರಿಸಿಕೊಳ್ಳುತ್ತ ನಮ್ಮಂಥ ಪರದೇಶಿಗಳಿಗೆ ಊರಿನ ಸಂಭ್ರಮದ ಹೊಸ ಅವತರಣಿಕೆಯನ್ನು ಹೊತ್ತು ತರುತ್ತಿದೆ ಈ ಹಬ್ಬ. ಹಬ್ಬಕ್ಕೆ ಇನ್ನೂ ಹದಿನೈದಿಪ್ಪತ್ತು ದಿನವಿರುವಾಗಲೇ ಇಲ್ಲಿನ ಲಿಟಲ… ಇಂಡಿಯಾದಲ್ಲಿ ಎರಡು ರಸ್ತೆಗಳ ಇಕ್ಕೆಲಗಳಲ್ಲಿ ಟೆಂಟ್‌ ಹಾಕಿ, ಟ್ರಾಫಿಕ್‌ ನಿಲ್ಲಿಸಿ ಹಲವಾರು ಅಂಗಡಿಗಳು ತಲೆ ಎತ್ತುತ್ತವೆ. ಇಡೀ ಸೆರಂಗೂನ್‌ ರಸ್ತೆಯೆಂಬ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಪ್ರತಿವರ್ಷವೂ ಹೊಸ ಹೊಸ ಥೀಮ… ಇಟ್ಟುಕೊಂಡು ದೀಪಾಲಂಕಾರ ಮಾಡಲಾಗುತ್ತದೆ. ಬಸ್ಸುಗಳಲ್ಲಿ ತಿಂಗಳ ಮೊದಲೇ ಹ್ಯಾಪ್ಪಿ$ದೀಪಾವಳಿ ಎಂಬ ಬೋರ್ಡ್‌ ನಮ್ಮ ಕಣ್ಸೆಳೆಯುತ್ತಿರುತ್ತದೆ. ಮೆಟ್ರೋ ರೈಲಿನಲ್ಲೂ ದೀಪಾವಳಿಯ ಥೀಮ… ಇರುವ ರಂಗೋಲಿ, ಹಣತೆಯ ಚಿತ್ರಗಳ ಸ್ಟಿಕರ್‌ ಹಾಕಿ ಹಬ್ಬದ ವಾತಾವರಣ ಸೃಷ್ಟಿಸಲಾಗುತ್ತದೆ.

ಲಿಟ್ಲ ಇಂಡಿಯಾದಲ್ಲಿನ ಸ್ಟಾಲ…ಗಳಲ್ಲಿ ಜಗಮಗಿಸುವ ದೀಪದ ಸರಗಳು, ಆಕಾಶ ಬುಟ್ಟಿ , ಹತ್ತುಹಲವು ಬಗೆಯ ಹಣತೆಗಳು, ಮೆಹಂದಿ ಹಚ್ಚುವ ಹುಡುಗಿಯರು, ನಾನಾ ವಿಧದ ಪೂಜಾ ಸಾಮಗ್ರಿಗಳು, ಮಿಠಾಯಿಗಳು, ಚಕ್ಕುಲಿ ಕುರುಕಲು ತಿಂಡಿಗಳು, ಹೇರ್‌ಪಿನ್‌, ಕುಂಕುಮ, ಬಳೆ, ಸೀರೆ, ಬಟ್ಟೆಯ ಅಂಗಡಿಗಳು… ಹೀಗೆ ಕಿರುಜಾತ್ರೆಯ ತೆರದಲ್ಲಿ ಜನಸಂದಣಿಯನ್ನು ತನ್ನೆಡೆಗೆ ಆಕರ್ಷಿಸತೊಡಗುತ್ತದೆ. ಯುರೋಪ್‌, ಅಮೆರಿಕದಿಂದ ಬಂದು ಇಲ್ಲಿ ನೆಲೆಸಿರುವ, ಅಥವಾ ಟೂರಿÓr… ಆಗಿರುವ ಜನರಿಗಂತೂ ಸಿಂಗಾಪುರದ ದೀಪಾವಳಿ ಆಚರಣೆಯಲ್ಲಿ ಅಲಂಕೃತಗೊಂಡ ಲಿಟಲ… ಇಂಡಿಯಾ ತುಂಬಾ ಆಕರ್ಷಣೆಯ ಪ್ರದೇಶ. ಲಿಟಲ… ಇಂಡಿಯಾದಲ್ಲಿ ಇತ್ತೀಚೆಗೆ ಕೆಲವರ್ಷಗಳಿಂದ ತಲೆಎತ್ತಿರುವ ಇಂಡಿಯನ್‌ ಹೆರಿಟೇಜ್‌ ಸೆಂಟರ್‌ ಎಂಬ ಸರ್ಕಾರಿ  ಸಂಸ್ಥೆಯಲ್ಲೂ ಹಬ್ಬದ ಪ್ರಯುಕ್ತ ಮುಕ್ತ ಪ್ರವೇಶ, ಹೊಸ ಹೊಸ ವರ್ಕ್‌ಶಾಪ್‌ಗ್ಳು ಇರುತ್ತವೆ. ಈ ವರ್ಷ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಟೆರ್ರಾಕೋಟ ಕಲಾವಿದ ಮುನುಸ್ವಾಮಿ ಅವರಿಂದ ಮಣ್ಣಿನ ಹಣತೆ ಮಾಡುವ ಪ್ರಾತ್ಯಕ್ಷಿಕೆ ಇತ್ತು. 

ಭಾರತದಿಂದ ಬಂದು ಇಲ್ಲಿ ನೆಲೆಸಿರುವ ಪ್ರತಿರಾಜ್ಯದ ಜನರೂ ತಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ತಮ್ಮದೇ ಸಂಘ, ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿ¨ªಾರೆ. ಇಲ್ಲಿನ ಗುಜರಾತಿ ಅಸೋಸಿಯೇಶನ್‌ ಅವರ ದಾಂಡಿಯಾ ಹಾಗೂ ಗರ್ಭಾ ನೃತ್ಯಗಳು ನವರಾತ್ರಿಯ ವಿಶೇಷ ಆಕರ್ಷಣೆಯಾದರೆ, ಭೋಜ್‌ಪುರಿ ಸಂಘ ಹೋಳಿ ಹಬ್ಬದ ಆಚರಣೆಯನ್ನು ಭರ್ಜರಿಯಾಗಿ ನಡೆಸುತ್ತದೆ. ನಮ್ಮ ಕನ್ನಡ ಸಂಘವು ಪ್ರತಿವರ್ಷ ದೀಪಾವಳಿಯ ಸಲುವಾಗಿ ದೀಪೋತ್ಸವ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದೆ.  ಹೀಗೆ ಸರಿಸುಮಾರು ಎಲ್ಲ ರಾಜ್ಯದ ಸಂಘ, ಸಂಸ್ಥೆಗಳಲ್ಲೂ ದೀಪಾವಳಿ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಇಲ್ಲಿನ ಪ್ರಧಾನಮಂತ್ರಿ, ಎಂಪಿಗಳೂ ಸಹ ಶೆರ್ವಾನಿ ಹಾಕಿ, ಹೂವಿನ ಮಾಲೆ ಧರಿಸಿ ದೀಪಾವಳಿ ಆಚರಿಸುತ್ತಾರೆ.

ಪೂಜೆಯ ಸಕಲ ಸಾಮಗ್ರಿಗಳೂ, ಹೋಳಿಗೆಯಿಂದ ಹಿಡಿದು ಎಲ್ಲ ಸಿಹಿತಿಂಡಿಗಳೂ ಅಂಗಡಿಗಳಲ್ಲಿ, ಆನ್‌ಲೈನ್‌ ಸ್ಟೋರ್‌ಗಳಲ್ಲಿ ಲಭ್ಯವಿರುವ ಈ ಕಾಲದಲ್ಲಿ ಮಲೆನಾಡಾದರೇನು, ಮಲೇಶಿಯಾ-ಸಿಂಗಾಪುರವಾದರೇನು ಹಂಚಿ ತಿನ್ನಲು ಬಂಧು, ಬಾಂಧವರು, ಕುಟುಂಬಸ್ಥರೂ ಇದ್ದರೆ ದೀಪಾವಳಿ ಕಳೆಗಟ್ಟುತ್ತದೆ. 

ಜಯಶ್ರೀ ಭಟ್‌, ಸಿಂಗಾಪುರ

ಟಾಪ್ ನ್ಯೂಸ್

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.