ಕತೆ: ನಂದಿತ ಮೇದಿನಿ


Team Udayavani, Nov 11, 2018, 6:00 AM IST

9.jpg

ಐದಡಿಗೂ ತುಸು ತಗ್ಗಿನೆತ್ತರಕ್ಕೆ  ಸಪೂರವಾಗಿ ನಿಂತು, ಮೋರೆಭರ್ತಿ ದೊಡ್ಡ ದೊಡ್ಡ ಹಲ್ಲುಗಳ ನಗು ಚೆಲ್ಲುವ- ಮೇದಿನಿಗೆ, ಇಪ್ಪತೂರು-ಇಪ್ಪತ್ನಾಕು ವಯಸ್ಸೆಂದು ನನ್ನ ಊಹೆ. ಕಾಲೇಜು ಮುಗಿಸಿದ್ದೇ ಇಂಟರ್ನ್ಶಿಪ್‌ಗಾಗಿ ನನ್ನ ಆಫೀಸು ಸೇರಿದ್ದಳು. ಟ್ರೇನಿಂಗು ಮುಗಿದ ಬಳಿಕವೂ ಎರಡು ವರ್ಷ ಕೈಕೆಳಗಿದ್ದಳು. ಕೆಲಸದಲ್ಲಿ ಅಷ್ಟಕ್ಕಷ್ಟೇ ಆದರೂ ಇಟ್ಟುಕೊಂಡಿದ್ದೆ. ಕ್ವಾಲಿಟಿಗಿಂತ ಕ್ವಾಂಟಿಟಿಯೇ ಮೇಲಾಗಿರುವ ದಿನಗಳಲ್ಲಿ- ಹೊಸಬರನ್ನು ತಂದು ಪುನಃ ಪುನಃ ತಿದ್ದಿ-ತೀಡಿ ರೆಡಿಗೈಯುವುದಕ್ಕಿಂತ, ಹಳಬರೊಡನೆ ಏಗುವುದೇ ಸೈಯೆಂದು ಉಳಿಸಿಕೊಂಡಿದ್ದೆ. ಏನೋ ಗಾದೆಯಿದೆಯಲ್ಲ, ಒಗ್ಗದ ದೈವಕ್ಕಿಂತ ಒಗ್ಗಿದ ದೆವ್ವವೇ ಲೇಸು… ತಾನೇ? ವರ್ಷದಿಂದ ವರ್ಷಕ್ಕೆ ಸಂಬಳ ದುಪ್ಪಟಾಯಿತೇ ವಿನಾ ಸುಖವೇನಿರಲಿಲ್ಲ. ಮೇಜುಗೆಲಸಕ್ಕಿಂತ ಮಾತಿನಲ್ಲಿ ಚತುರೆಯಾಗಿದ್ದರಿಂದ, ನಾನಿಲ್ಲದಿರುವಾಗ ಫೋನುಗೀನು ನಿಭಾಯಿಸುತ್ತಾಳೆಂದು ಸುಮ್ಮನಿದ್ದೆ. ಯಾವಾಗ ತಿಂಗಳಿಗೆ ಅರ್ಧ ಲಕ್ಷದ ಬೇಡಿಕೆಯಿಟ್ಟಳ್ಳೋ, ಆ ಪಾಟಿ ಸಂಬಳ ಕೊಡುವುದು ಕಷ್ಟವಾಗುತ್ತದೆಂದು ಹೇಳಿ ಸಾಗುಹಾಕಿದ್ದೆ. ಅವಳಿಗಿಂತ ಒಂದು ವರ್ಷಕ್ಕೆ ಮೊದಲು ಸೇರಿದ ಚಾರುಕೀರ್ತಿ ಇನ್ನೂ ನನ್ನೊಡನಿದ್ದಾನೆ, ಆ ಮಾತು ಬೇರೆ.

ಚಾರುಕೀರ್ತಿ ಅಚ್ಚಗನ್ನಡದ ಹುಡುಗ. ನಂದಿತ ಚಾರುಕೀರ್ತಿ ಎಂದು ಪೂರ್ತಿ ಹೆಸರು. ಕಾರ್ಕಳದ ಕಡೆಯವನು. ಇಂಗ್ಲಿಷು ಚೆನ್ನಾಗಿ ಬಾರದ ಕಾರಣ, ಇಂಗ್ಲಿಷ್‌ ದೆಸೆಯಿಂದಲಷ್ಟೇ ನಡೆಯುವ ಈ ನಗರವ್ಯೂಹದೊಳಗೆ ಏಗಲೊಲ್ಲದೆ- ಇನ್ನೂ ಒಡನುಳಿದಿದ್ದಾನೆ. ಇಲ್ಲೊಂದು ಹೇಳುವುದಾದರೆ- ನಾವು ಆರ್ಕಿಟೆಕುrಗಳಿಂದ ಕೆಲಸ ಕೈಕೊಳ್ಳುವ ಮಂದಿ ಸಿಕ್ಕಾಪಟ್ಟೆ ಇಂಗ್ಲಿಷು ನಿರೀಕ್ಷಿಸುತ್ತಾರೆ. ಬಂಡವಾಳವಿಲ್ಲದಿದ್ದರೂ ಠಸ್‌ಪುಸ್‌ ಅಂದರೆ ಸಾಕು, ಎತ್ತರದ ಮಣೆಯೇರಿಸುತ್ತಾರೆ !  

ಇರಲಿ, ಫ‌ಕ್ಕನೆ ನೋಡಲಿಕ್ಕೆ ಥೇಟು ಮೇದಿನಿಯಂತೆಯೇ ಅನಿಸುವ ಅವಳ ಅಮ್ಮನ ಬಗ್ಗೆ ಆಡುವಾಗ, ಅವಳನ್ನಿವಳ ಜೊತೆ ಹೋಲಿಸದೆ ಹೇಳುವುದು ಕಷ್ಟವೇ. ಇವಳದೇ ಎತ್ತರ; ಇವಳಂಥದೇ ಹಾರ್ಟ್‌ಶೇಪಿನ ಮುಸುಡಿ; ಮುಖದ ಭರ್ತಿ ಹಲ್ಲು ಮತ್ತು ನಗು. ಒಂದೆರಡು ಸುತ್ತಿನ ಹೆಚ್ಚು ಗಾತ್ರ. ಸರಿಸುಮಾರು ನನ್ನ ವಯಸ್ಸಾಗಿದ್ದರೂ, ಮೇದಿನಿಯ ಅಮ್ಮ- ಮಗಳಂತೆಯೇ ವೇಷಭೂಷ ತೊಡುತ್ತಾಳೆ. ಅಷ್ಟೇ ವೈಯಾರ ಮಾಡುತ್ತಾಳೆ. ಚಪಾತಿಯನ್ನು ಲಟ್ಟಿಸುವ ಮೊದಲು ಹಿಟ್ಟನ್ನು ಉಂಡೆ ಮಾಡಿಕೊಂಡು ಒತ್ತಿ ಅಪ್ಪಚ್ಚಿ ಮಾಡುವುದಿಲ್ಲವೇ, ಅಂಥ ಅಡ್ಡಡ್ಡಾಕೃತಿಯ ಮೂಗಿನ ಮೇಲೆ- ಆಲ್ಮೋ… ಮೋರೆ ಮುಚ್ಚುವ ಗಾತ್ರಕ್ಕೆ ಕನ್ನಡಕ ತೊಡುತ್ತಾಳೆ. ದೊಡ್ಡ ದೊಡ್ಡನೆ ದುಂಡುಗಾಜುಗಳ ಆ ಕನ್ನಡಕದ ಹಿಂದೆ ನಸುಗಪ್ಪು ಬಣ್ಣದ ಮುಸುಡಿ ಇರುವುದೇ ಇಲ್ಲವೆಂಬಷ್ಟು ಹಿಂಜರಿದುಕೊಂಡಿರುತ್ತದೆ. ಇಷ್ಟಾಗಿ, ಆ ಮುಸುಡಿಯಲ್ಲಿ ಎದ್ದು ಕಾಣಿಸುವುದೆಂದರೆ- ಅಗತ್ಯಕ್ಕೂ ಹೆಚ್ಚು ಕೆಂಪು ಮುಂದಿಟ್ಟು ತೋರುವ ತದಿಗೆ-ಚಂದ್ರದಂತಹ ದಪ್ಪನೆ ತುಟಿಗಳ ಡೊಂಕು ಮಾತ್ರ. ನಗುವಾಗಲಂತೂ, ಸದರಿ ಕೆಂಪನೆ ಚಂದ್ರದ ಬಾಗು- ಅನಾಮತ್ತನೆ ಹಿಗ್ಗಿ ಕಿವಿಯಿಂದ ಕಿವಿಗೆ ಹಬ್ಬಿ, ಹಲೊªàರುವಾಗ ಬೆಳದಿಂಗಳೇ ಹುಟ್ಟಿತೆಂಬಷ್ಟು ಸೊಗವುಂಟಾಗುತ್ತದೆ.  

ಮೇದಿನಿಯ ಅಮ್ಮನನ್ನು ನಾನು ಮೊದಲ ಸಲ ನೋಡಿದ್ದು ಫೋರಂ ಮಾಲಿನ ಮಲ್ಟಿಪ್ಲೆಕ್ಸಿನಲ್ಲಿ. ಯಾವುದೋ ಹಿಂದಿ-ಸಿನೆಮಾದ ಟಿಕೆಟು ಗಿಟ್ಟಿಸಿಕೊಳ್ಳುವ ಗಡಿಬಿಡಿಯಲ್ಲಿದ್ದಾಗ. ಆನ್‌ಲೈನ್‌ ಬುಕ್ಕಿಂಗು ಮಾಡಿದ್ದೇನಾದರೂ, ಆವೊತ್ತು ಅಕಾಲಿಕ ಮಳೆಯಿಂದಾಗಿ ಉಲ್ಬಣಿಸಿದ ಟ್ರಾಫಿಕ್‌ಗೆ ಸಿಕ್ಕಿಕೊಂಡು ಪೀವಿಆರ್‌ ತಲುಪುವ ಹೊತ್ತಿಗೆ ತಡವಾಗಿ ಹೋಗಿತ್ತು. ಮೊದಲಿಂದ ನೋಡಬೇಕು, ಸುರು ತಪ್ಪಿದರೆ ಹೋಗೋದೇ ಬೇಡ!- ಎಂದೆಲ್ಲ ತಾಕೀತು ಮಾಡಿ, ದಾರಿಯುದ್ದಕ್ಕೂ ಲೆಕ್ಚರುಗೈದಿದ್ದ ಹೆಂಡತಿಯ ಎಚ್ಚರಿಕೆಯ ಮೇರೆಗೆ- ಎದ್ದೂ ಬಿದ್ದೂ ಎಸ್ಕಲೇಟರು ಏರಿ, ಅದರಲ್ಲಿಯೂ ಮೆಟ್ಟಿಲೇರಿಕೊಂಡು ಥಿಯೇಟರಿನ ಫ್ಲೋರಿಗೆ ಹಾರಿದ್ದಷ್ಟೆ- ಮೇದಿನಿಯ ಅಮ್ಮ, ಮಿಕ ಸಿಕ್ಕಿದ್ದೇ ಬಾಚಹೊಂಚುವ ಹೆಣ್ಣುಹುಲಿಯ ಹಾಗೆ, ಗಬಕ್ಕನೆ ನನ್ನನ್ನು ಅಡ್ಡಗಟ್ಟಿದಳು.

“”ಮಾರ್ತಾಂಡ್‌ ಸರ್‌….!” ಎಂದು ಅರಚಿದ ಆಕೆಯ ಕೊರಳು ಆನಂದತುಂದಿಲಗೊಂಡು ಕೃತಾರ್ಥಿಸಿತು. ಆಕೆ ಗುರುತು ಹೇಳಿಕೊಳ್ಳುವ ಅಗತ್ಯವೇ ಇಲ್ಲದಂತೆ- ಮೇದಿನಿಯ ಅಮ್ಮನೇ ಎಂದು ಅನ್ನಿಸಿಬಂತು. ನನ್ನ ಹೆಂಡತಿಯಂತೂ ಮೇದಿನಿಯೆಂದೇ ಬಗೆದಳು. ಅರೆ, ಈಗಷ್ಟೇ ಆಫೀಸಿನಲ್ಲಿ ನೋಡಿದೆನಲ್ಲ, ಇಷ್ಟು ಬೇಗ ಹೇಗೆ ಬಂದಳು…ಅಂದುಕೋತಿದ್ದೆ ಎಂದು ತನ್ನ ಶಂಕಾಶ್ಚರ್ಯವನ್ನು ಮಾತಾಗಿಸಿದಳು. 

ಅಂತಿಂತಲ್ಲದ ಹೋಲಿಕೆ. 
ಮಂಡಿ ಮುಟ್ಟುವ ಹಾಗೇನೋ ತೊಟ್ಟಿದ್ದಳು. ಉಡುಗೆಯ ಕೊರಳಿನ ಆಳ ತುಸು ಹೆಚ್ಚೇ ಇತ್ತು.
“”ಸೆಲೆಬ್ರಿಟಿ ನೀವು… ಗುರುತಿಸೋದು ಕಷ್ಟವೇ? ನಿಮ್ಮ ಕತೆಗಳ ಮಹಾ ಮಹಾ ಅಭಿಮಾನಿ ನಾನು” ಅನ್ನುತ್ತ, ಆಕೆ ಮರಳಿ ಹಲೆªರೆಯುವಾಗ ಕಿವಿಯಿಂದ ಕಿವಿಗೆ ಬೆಳದಿಂಗಳು ಹುಟ್ಟಿತು.

ಇಷ್ಟಿದ್ದೂ, ಆಕೆಯೊಡನೆ ನಿಜವಾಗಿ ಮಾತು ಹುಟ್ಟಿದ್ದು- ನಾನು, ಪ್ಯಾನು-ಪಾಸ್‌ಪೋರ್ಟುಗಳಲ್ಲಿನ ನನ್ನ ಹೆಸರನ್ನು ಆಧಾರ್‌ಕಾರ್ಡಿನಲ್ಲಿಯೂ ಇರುವಂತೆ ತಿದ್ದಿಸುತ್ತಿರುವಾಗ. ಮಾರ್ತಾಂಡ ಷಕಟೇಯ ಎಂಬ ನನ್ನ ಹೆಸರು, ಒಂದೊಂದೆಡೆ ಒಂದೊಂದಾಗಿ ಬರೆಯಲ್ಪಟ್ಟು, ಒಂದಕ್ಕೊಂದು ಹೊಂದದೆ ಫ‌ಜೀತಿಯಾಗಿಬಿಟ್ಟಿತ್ತು. ಆಧಾರವನ್ನು ಆಧರಿಸಿ ಅಸ್ತಿತ್ವಾದಿ-ಸಮಸ್ತವನ್ನೂ ತಿದ್ದಿಕೊಳ್ಳುವ ತುರ್ತುಂಟಾದಾಗ- ರಾಜಸೂಯಯಾಗಕ್ಕೆ ಸರಿಸಮವಾದ ಈ ಕೆಲಸದಲ್ಲಿ ತೊಡಗಿಕೊಂಡೆ. ಈ ಸಲುವಾಗಿ ಭರಿಸಿದ ಅರ್ಜಿಗಳನ್ನು ಗೆಜೆಟೆಡ್‌ ಆಫೀಸರೊಬ್ಬರಿಂದ ಅಟೆಸ್ಟು ಮಾಡಿಸಬೇಕಿತ್ತು. ಸರ್ಕಾರದ ಮರ್ಜಿಯಿಲ್ಲದ ಖಾಸಗೀ ಉದ್ದಿಮೆಯಲ್ಲಿ ತೊಡಗಿಕೊಂಡಿರುವ ನನಗೆ, ಈ ಕೆಲಸವು ರಾಜಸೂಯಕ್ಕೂ ಮಿಗಿಲಾದ ಯಜ್ಞವೇ ಆಗಿಬಿಟ್ಟಿತು. ಗುರುತು-ಪರಿಚಯವಿರದ ಅಧಿಕಾರಿಯೆದುರು ಹಲ್ಲು ಗಿಂಜಿಕೊಂಡು ಬೇಡುವುದಾದರೂ ಎಂತು? ಶಿವ ಶಿವಾ !

ಏನು-ಎತ್ತ ತೋಚದೆ ಹೌಹಾರಿಕೊಂಡು ಶತಪಥ ತಿರುಗುತ್ತಿ ದ್ದವನ ಸಹಾಯಕ್ಕೆ ಮೇದಿನಿಯೇ ಒದಗಿಬಂದಳು. “”ಸರ್‌, ಜೀ… ವೈ ಡು ಯು ಪ್ಯಾನಿಕ್‌? ವೇಯr…” ಅನ್ನುತ್ತ ಫೋನು ಹಚ್ಚಿದಳು. ತೆಲುಗಿನಲ್ಲಿ ಏನೇನೋ ಹೇಳಿದಳು. ಅವಳನ್ನೇ ತದೇಕ ನೋಡಿಕೊಂಡು ಸತಲದ ನಿರೀಕ್ಷೆಯಲ್ಲಿ ಕುಳಿತೆ. “”ಸರ್‌… ಇನ್ನೊಂದು ಗಂಟೆಯೊಳಗೆ ನನ್ನ ಮಮ್ಮಿ ಬಂದುಬಿಡುತಾರೆ… ಆಯಿತಾ? ರಿಲ್ಯಾಕ್ಸ್ ನವ್‌Ì!” ಭಾಪ್ಪುರೇ… ಇವಳೇನು, ಬೇಡದೆಯೂ ವರವೀವ ದೇವತಾಪುರುಷೆಯೇ! ಸಂತೋಷದ ಝರಿಯಲ್ಲಿ ತೇಲಿಹೋದೆ!   

ಆ ಬಳಿಕದ ಮುಕ್ಕಾಲನೇ ತಾಸಿಗೆಲ್ಲ ಮೇದಿನಿಯ ಅಮ್ಮ ಆವಿರ್ಭವಿಸಿದಳು. ಅರ್ಜಿಯ ಮೇಲೆ ಇಂತಿಂತೆಂದು ಹೇಳಿದಲ್ಲೆಲ್ಲ- ಹಸಿರಿಂಕಿನಲ್ಲಿ ಕೊಂಕನೆ ಸೈನು ಮಾಡಿ, ಇಂಕೊಣಗುವಂತೆ ಮೆಲ್ಲಗೆ ಉರುಬಿ, ಒಂದೊಂದು ಸಹಿಯಡಿಯಲ್ಲೂ ಬಲು ಜತನವಾಗಿ ದುಂಡನೆ ಠಸ್ಸೆಯೊತ್ತಿದಳು. ಆಹಾ! ಈ ಪರಿ ಔದಾರ್ಯಕ್ಕೇನು ತಾನೇ ಅನ್ನಲಿ? ದೊಡ್ಡ ಹುದ್ದೆಯ ಅಧಿಕಾರವೇ ಖುದ್ದು ಅರಸಿಬಂದು ಹರಸುವುದೆಂದರೆ?!  ದಾಕ್ಷಿಣ್ಯದ ಮುದ್ದೆಯಾಗಿಬಿಟ್ಟೆ. “ಅಯಾಮ… ಸೋ ಸೋ ಗ್ರೇಟ್‌ಫ‌ುಲ…’ ಅಂತಂದೆ. 

“”ಅಯ್ಯೋ ಸರ್‌… ಇದರಲ್ಲೇನು ಮಹಾ! ಯಾರು ಯಾರೋ ಬಂದು ರುಜು ಮಾಡಿಸಿಕೊಂಡು ಹೋಗುತಾರೆ” ಆಕೆ ಹೇಳುವಾಗ, ಮೋರೆಯಲ್ಲಿನ ಗಾಜು ವಿಚಿತ್ರವಾಗಿ ಫ‌ಳಿಸಿದವು. 
“”ಎಲ್ಲಿ ಕೆಲಸ ಮಾಡುತೀರಿ?”
“”ಇಸ್ರೋದಲ್ಲಿ, ಸರ್‌… ಅಯಾಮ… ಅ ಸೀನಿಯರ್‌ ಸೈಂಟಿಸ್ಟ್‌ ದೇರ್‌!”
ನಂಬಲಿಕ್ಕೇ ಆಗಲಿಲ್ಲ. ಅವಾಕ್ಕಿನಲ್ಲಿಯೇ ಮಿಕ್ಕೆ. ಕೈಯೆತ್ತಿ ಮುಗಿದೆ. “”ಇಸ್ರೋ ನಾನು ಗೌರವಿಸುವ ಸರಕಾರೀ ಸಂಸ್ಥೆಗಳಲ್ಲೊಂದು”  ಎಂದು ಮೆಲ್ಲಗೆ ಹೇಳಿದೆ. ಮಂಗಳಯಾನದಲ್ಲಿ ಬರೇ ಹೆಂಗಸರು ತೊಡಗಿದ್ದರು ಅಂತ ಸುದ್ದಿಯಾಯಿತಲ್ಲ, “”ವರ್‌ ಯು ಎ ಪಾರ್ಟ್‌ ಆಫ್ ಇಟ… ಟೂ?” ಎಂದು ಕೇಳಿದೆ.

“ಆಫ್ಕೋರ್ಸ್‌’ ಆಕೆ ಹೆಮ್ಮೆ ಬೀಗಿದಳು. 
“”ನಿಮ್ಮಂಥವರು ನನ್ನ ಆಫೀಸ್‌ವರೆಗೂ ಬಂದಿರಲ್ಲ, ಇದಕ್ಕಿಂತ ದೊಡ್ಡ ಸಂಗತಿಯಿದೆಯೆ?”
ನಾನು ಹೊಗಳಿದ್ದೇ ತಪ್ಪಾಯಿತೋ, ಹೇಗೆ… ಆಕೆ ವಿಪರೀತ ಸದರಕ್ಕಿಳಿದಳು. ಮುಸುಡಿಯಲ್ಲಿನ ಕೆಂಪನೆ ತದಿಗೆಚಂದ್ರವನ್ನು ಕಿವಿಯಿಂದ ಕಿವಿಗೆ ಅಗಲಿಸಿ ನಕ್ಕಳು. “”ಆಕುcವಲೀ ನಿಮ್ಮಿಂದ ನನಗೊಂದು ಸಹಾಯ ಆಗಬೇಕಿತ್ತು. ಆಗುತ್ತಾ?” ಎಂದು ನೇರ ಕೇಳಿಬಿಟ್ಟಳು. 
“”ಏನಿಲ್ಲ… ದಸರಾಕ್ಕೆಂದು ಮನೆಯಲ್ಲಿ ಗೊಂಬೆ ಕೂರಿಸಿದ್ದೀವಿ. ಮೇದಿನಿ ನಿಮಗೂ ಬರಹೇಳಿದ್ದಳು. ನೀವು ಬರಲಿಲ್ಲ”
“”ಹೌದು…” 
ತಿಂಗಳುಗಳ ಹಿಂದಿನ ದಸರಾ ಸಂದರ್ಭದಲ್ಲಿ, ಮೇದಿನಿ ನನ್ನನ್ನು ಮನೆಗೆ ಬರಹೇಳಿದ್ದು ನೆನಪಾಯಿತು. ಅಚ್ಚುಕಟ್ಟಾಗಿ ಜೋಡಿಸಿಟ್ಟ ಬೊಂಬೆಗಳ ಫೋಟೋವನ್ನೂ ವಾಟ್ಸಾಪಿನಲ್ಲಿ ಕಳಿಸಿ, ಆಹ್ವಾನಿಸಿ ಎರಡೆರಡು ಸರ್ತಿ ನೆನಪಿನ ಸಂದೇಶವನ್ನು ಸಹ ಕಳಿಸಿದ್ದಳು. ನಾನೇ ಉಡಾಫೆ ಮಾಡಿದೆನೇನೋ.  ತಕ್ಕುದಾಗಿ ಸಿಕ್ಕಾಪಟ್ಟೆ ಕೆಲಸ ಬೇರೆ. ಹೋಗಿರಲಿಲ್ಲ. ಹೋಗಲಾಗಲಿಲ್ಲ.  
“”ಸ್‌… ಸ್ಸಾರೀ… ಪ್ರಯತ್ನ ಪಟ್ಟೆ. ಆದರೆ ಆಗಲೇ ಇಲ್ಲ” ಅಂತಂದೆ. 
“”ಇಟೊಕೆ, ಈಗ ನಾನು ಕೇಳುತ್ತ ಇರೋದು ಬೇರೇನೇ ಇದೆ. ನಿಮಗೆ ಗೊತ್ತಲ್ಲ, ಜಯಧ್ವನಿ ಅಂತೊಂದು ಪತ್ರಿಕೆಯಿದೆಯಲ್ಲ- ಅವರುಗಳು ಚಂದವಾಗಿ ಬೊಂಬೆ ಕೂರಿಸುವ ಮನೆಗಳಲ್ಲೊಂದು ಸರ್ವೇ ಮಾಡಿದ್ದರು. ಪ್ರಶಸ್ತಿ ಸಹ ಇಟ್ಟಿದ್ದರು. ಮೊದಲ ಪುರಸ್ಕಾರ ಅಂತ ಇಪ್ಪತ್ತೈದು ಸಾವಿರ ರೂಪಾಯಿ ಕೊಡಬೇಕಿತ್ತು. ನ‌ಮಗೇ ಫ‌ಸ್ಟ್ ಪ್ರೈಜ… ಬಂತು” 
“”ಐಸೀ… ಕಂಗ್ರಾಚುಲೇಶನ್ಸ್”
“”ಥ್ಯಾಂಕ್ಸ್ ಆದರೆ ಇದುವರೆಗೂ ಆ ಪ್ರಶಸ್ತಿಯನ್ನ ನಮಗೆ ಕೊಟ್ಟಿಲ್ಲ. ದುಡ್ಡಿನ ವಿಷಯ ಅಲ್ಲ. ನನಗೆ ಆ ಪ್ರಶಸ್ತಿ ಬೇಕು. ಬೇಕೇ ಬೇಕು. ದಟ… ಮೀ… ಎ ಲಾಟ್‌ ಟು ಮಿ. ನಿಮಗೆ ಹೇಗಿದ್ದರೂ ಎಲ್ಲ ಪತ್ರಿಕೆಗಳ ಸಂಪರ್ಕ ಇದೆಯಲ್ಲ, ಏನಾದರೂ ಮಾಡಿ ಅವರ ಜೊತೆ ಮಾತಾಡಿ ಪ್ರಶಸ್ತಿ ಕೊಡಿಸುತ್ತೀರಾ ಪ್ಲೀಸ್‌” 
ಮಂಗಳಯಾನದಂತಹ ಮಂಗಳಯಾನದಲ್ಲಿ ತೊಡಗಿದ್ದ ಇಸ್ರೋದ ಸೀನಿಯರ್‌ ವಿಜ್ಞಾನಿ ಹೇಳಬಲ್ಲ ಮಾತೇ ಇದು? ಘನತೆಗೆ ತಕ್ಕ ಮಾತೇ? ಆಶ್ಚರ್ಯವಾಯಿತು. ಎಲ್ಲಕ್ಕೂ ಮೇಲಿನ ಅಂತರಿಕ್ಷವನ್ನು ಕ್ರಮಿಸುವ ಗರುಡಕ್ಕೆ ನೆಲದ ಮೇಲಿನ ಕೋಳಿಚಿಳ್ಳೆಯ ಪುಕ್ಕ ತೊಡುವ ಖಾಯಿಷೇ! ವಿಚಿತ್ರ ತಾನೇ !
ದಾಕ್ಷಿಣ್ಯಕ್ಕೆ “ಸರಿ’ ಅಂತಂದು ಬೀಳ್ಕೊಟ್ಟೆ. ಆದರೆ, ಆಕೆ ಹೇಳಿದ್ದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ.

ಅಸಲಿನಲ್ಲಿ, ನಾನು ಈ ತನಕ, ಎಂದೂ ಯಾರದೂ ಮರ್ಜಿಗೆ ಬಿದ್ದ ಆಸಾಮಿಯಲ್ಲ. ಯಾರೆದುರೂ “ದೇಹಿ’ ಅಂತ ಯಾಚಿಸಿದವನಲ್ಲ. ಪತ್ರಿಕೆಗಳಿಗೆ ನಿಗದಿತವಾಗಿ ಬರೆಯುತ್ತೇನಾದರೂ, ಯಾವೊತ್ತೂ ಯಾರೊಡನೆಯೂ ಕಳಿಸಿದ್ದು ಪ್ರಕಟಿಸಿಲ್ಲವೇಕೆ? ತಿರಸ್ಕರಣೆಗೆ ಕಾರಣವೇನು? ತಿದ್ದಿ ಕಳಿಸಲೆ? ಎಂದೆಲ್ಲ ಉಸಾಬರಿ ಕೈಕೊಂಡವನಲ್ಲ. ಉಳಿದಂತೆ ನಾನು ನನ್ನ ಕೆಲಸ ಅಷ್ಟೆ ! ಕಾಳು ಗಟ್ಟಿಯಿದ್ದಲ್ಲಿ ಮಾತ್ರ ವ್ಯಾಪಾರವಷ್ಟೆ. ಅಂದುಕೊಂಡೇ ಇರುವವನು. ಇನ್ನು ಪತ್ರಿಕೆಗಳವರೂ ದೀಪಾವಳಿ-ಯುಗಾದಿಯ ಸಂದರ್ಭದಲ್ಲಿ ತಾವೇ ಸ್ವಯಂ ಸಂಪರ್ಕಿಸಿ ಕತೆಗಿತೆ ಬರೆಸುವ ವಾಡಿಕೆಯಿದೆ. ಆಗಿಂದಾಗ ಫೋನಿಸಿ ಸಣ್ಣಪುಟ್ಟನೆ ಇಂಟರ್‌ವ್ಯೂ ಸಹ ಮಾಡುವುದಿದೆ. ವೈಯಕ್ತಿಕವಾಗಿ, ನಾನು ಇವಾವುದಕ್ಕೂ ಹೆಚ್ಚು ಇಂಪಾರ್ಟೆನ್ಸ್‌ ಇತ್ತವನಲ್ಲ. 

ಎಂತಲೇ, ಮೇದಿನಿಯ ಅಮ್ಮನ ಕೋರಿಕೆಯನ್ನು ಕೇಳಿಸಿಕೊಂಡಷ್ಟೇ ಸಹಜವಾಗಿ ಮರೆತೂ ಬಿಟ್ಟೆ. 
ಛೇ ಛೇ… ಮರೆತೆನೆಲ್ಲಿ? ಮರೆಯಲು ಸಾಧ್ಯವಾದರೂ ಇತ್ತೆಲ್ಲಿ? ಅರಿಕೆ ಮಾಡಿದಾಕೆಯ ಮಗಳೇ ಅನುದಿನವೂ ಒಡನಿರುವಾಗ ಮರೆತೆನೆಂಬುದೂ ಸುಳ್ಳು ತಾನೆ ಅಥವಾ, ಮರೆವಿಗೆಲ್ಲಿಯ ಮರೆವು!
ಅಮ್ಮ ಬಂದುಹೋದ ವಾರದ ಕೊನೆಗೆಲ್ಲ, “”ಸರ್‌… ಡಿಡ್‌ ಯು ಗೆಟ್‌ ಟು ಚೆಕ್‌ ಆನ್‌ ವಾಟ… ಮೈ ಮಮ್‌ ವಾಂಟೆಡ್‌?” ಎಂದು ಮೇದಿನಿ ನೆನಪಿಸಿದಳು. “”ಓಹ್‌ ಶಿಟ್ಟ್… ಐ ವಿಲ್‌” ಅಂತಂದೆ. ಮರೆತಿದ್ದೆನೆಂದು ನಾಟಕ ಮಾಡಿದೆ. “”ಈ ಭಾನುವಾರ ನನಗೊಂದು ಟೆಕ್ಸ್ಟ್ ಕಳಿಸು. ಬಿಡುವಿನಲ್ಲಿ ಫೋನು ಮಾಡುತೀನಿ” ಎಂದು ಮಾತು ತೇಲಿಸಿದೆ. ಮಾತಿಗೆ ತಕ್ಕಂತೆ ಭಾನುವಾರ, ಮೇದಿನಿಯಿಂದ ಸಂದೇಶ ಬಂದಾಗ- ಒಂದು ತಾಸು ತಡೆದು, ಏನು ಹೇಳಿಯೇನೆಂದು ಮೀನಮೇಷ ನಡೆಸಿ, ಕಡೆಗೆ- “”ಮನುಷ್ಯ ಫೋನಿಗೆ ಸಿಕ್ಕಿಲ್ಲ… ವಿಲ… ಟ್ರೈ ಅಗೇನ್‌” ಎಂದು ಸುಳ್ಳು ಬರೆದೆ. ಮರುದಿಸದ ಮುಂಜಾನೆ, “”ಮಾತಾಡಿದೆ. ಚೆಕ್‌ ಮಾಡಿ ಹೇಳುತೀನಿ”ಅಂತಂದರು. ಎಂದು ಮತ್ತೂಂದು ಸಬೂಬು ಹೇಳಿದೆ. ಹಾಗೂ ಹೀಗೂ ತಿಂಗಳು ಸವೆಯಿಸಿದೆ. 

ಅವೊತ್ತೂಂದು ಶನಿವಾರ, ಮೇದಿನಿಯ ಅಮ್ಮ ಇದ್ದಕ್ಕಿದ್ದಂತೆ ಆಫೀಸು ಹೊಕ್ಕು, ನೇರ ನನ್ನ ಮೇಜಿನಾಚೆ ಮೈದಳೆದು ನಿಲ್ಲುವುದೆ! ಛೇ… ಒಳಮರ್ಮದಲ್ಲಿ ಆಘಾತವೇ ಘಟಿಸಿತನ್ನಿತು. “”ಸ್‌… ಸ್ಸಾರೀ, ಸರ್‌, ಇಲ್ಲೇ ಶಾಪಿಂಗಿಗೆ ಬಂದಿದ್ದೆ. ಸುಮ್ಮನೆ ನೋಡಿಕೊಂಡು ಹೋಗೋಣ ಅಂತ ಬಂದೆ” ಅನ್ನುತ್ತ, ಈ ಸರ್ತಿ ಮೋರೆಯಲ್ಲಿನ ಚಂದ್ರವನ್ನು ಮೊದಲಿಗಿಂತ ಹೆಚ್ಚು ಅಗಲಿಸಿದಳು. 

ನಖಶಿಖಾಂತ ಉರಿದುಹೋದೆ. ಆದರೆ, ಈ ಪರಿಯ ಉರಿಯನ್ನು ಹೊರಗೆ ತೋರುವುದುಂಟೆ? ಒತ್ತಾಯಿಸಿ ಹುಟ್ಟಡಗಿಸಿದೆ. “ಬನ್ನಿ… ಬನ್ನಿ…’ ಅಂತಂದು ನಾನೂ ಮೋರೆಯಗಲಿಸಿ ಬರಮಾಡಿಕೊಂಡೆ. “”ನೋಡಿ, ಆ ಎಡಿಟರ್‌ ಸಿಗುತಾನೇ ಇಲ್ಲ” ಆಕೆ ಮಾತಿಗಿಳಿಯುವ ಮೊದಲೇ ಸುಳ್ಳಿನ ಸಮಜಾಯಿಷಿ ಹೇಳಿದೆ. 

“”ನನ್ನ ಹತ್ತಿರ ಒಂದು ನಂಬರ್‌ ಇದೆ. ಇದಕ್ಕೆ ಟ್ರೈ ಮಾಡುತ್ತೀರಾ?” ಎಂದು, ಮೇದಿನಿಯ ಅಮ್ಮ ತನ್ನ ಮೊಬೈಲು ತೆರೆದು ನಂಬರೊಂದನ್ನು ತೋರಿದಳು. 
ಆಘಾತ ಹೆಚ್ಚಿತು. ಒಳಗಿಂದಲೇ ಕಚ್ಚಿತು. ನನ್ನ ಕೆಚ್ಚೆಲ್ಲ ಉಡುಗಡಗಿತು. 
ನಂಬರನ್ನು ಮೆಲ್ಲಗೆ ನನ್ನ ಮೊಬೈಲಿಗೆ ನಕಲು ಮಾಡಿಕೊಂಡೆ. “”ಈಗಲೇ ಮಾಡುತ್ತೀರಾ, ಪ್ಲೀಸ್‌, ನನಗೆ ಈ ಅವಾರ್ಡ್‌ ಮುಖ್ಯ, ಸರ್‌” ಅನ್ನುತ್ತ ಆಕೆ, ಥೇಟು ಬೆಳಂದಿಗಳಿಗೆ ಕಾಯುವ ಚಾತಕದ ಹಾಗೆ, ಮೇಜಿನಾಚೆ ಉಳಿದಳು. 
ಸುಮ್ಮನೆ ಡಯಲು ಮಾಡಿದಂತೆ ನಟಿಸಿದೆ. “”ಸಿಗುತಾ ಇಲ್ಲ…” ಎಂದು ಅಳುಕಿ ಹೇಳಿದೆ. “”ನಾನೇ ಟ್ರೈ ಮಾಡಲಾ?” ಆಕೆಯೇ ನಂಬರು ಡಯಲಿಸಿದಳು. ಏನು ಮಾಡುವುದಂಥ ತೋಚಲಿಲ್ಲ. ನಂಬರು ತಗುಲಿದ ಮೇಲೆ, ತನ್ನ ಫೋನನ್ನು ನನ್ನ ಕೈಗಿತ್ತರೆ- ಏನು ಹೇಳುವುದೆಂದು, ಹೇಗೆ ಯಾಚಿಸುವುದೆಂದೆಲ್ಲ ಯೋಚಿಸಿದೆ. “”ಹಾಳಾದ್ದು ಬ್ಯುಸಿ ಇದೆ” ಅನ್ನುತ್ತ ಫೋನು ಮೊಟುಕಿದಳು. “”ವೆಲ್‌, ನಾನೇ ಮತ್ತೆ ಮಾಡುತೀನಿ. ನೀವಿನ್ನು ಹೊರಡಿ” ಅನ್ನುತ್ತ ಎದ್ದು ನಿಂತೆ. “”ಬ್ಯುಸಿ ಇದ್ದಿರೇನೋ” ಅಂತಂದು ಅನುಮಾನಿಸುತ್ತಲೇ ಹೊರಟಳು. ಹೊರಟಳೆಲ್ಲಿ, ಮಗಳೊಡನೆ ಸುಮಾರು ಹೊತ್ತು ಮಾತನಾಡಿಕೊಂಡು ಆಫೀಸಿನಲ್ಲೇ ಉಳಿದಳು. ಕೆಲಸದಲ್ಲಿ  ಸಿಕ್ಕಾಪಟ್ಟೆ ತನ್ಮಯವಿರುವಂತೆ ನಟಿಸುವುದಾಯಿತು. ಐದನೆಯ ನಿಮಿಷಕ್ಕೆಲ್ಲ, “”ಸರ್‌, ರಿಂಗಾಗುತಾ ಇದೆ” ಅಂತಂದು, ಫೋನು ಹಿಡಿದು ನಡೆದುಬಂದಳು. ಇನ್ನೇನು, ಹತ್ತಿರ ಬಂದು ಹಸ್ತಾಂತರಿಸಬೇಕೆನ್ನುವಷ್ಟರಲ್ಲಿ ಸದ್ಯ, “”ಅಯ್ಯೋ, ಕಟ… ಆಯಿತು, ಸ್‌ ಸಾರಿ, ಸರ್‌, ನಿಮಗೆ ಸುಮ್ಮನೆ ತೊಂದರೆ ಕೊಡುತಾ ಇದ್ದೀನಿ” ಅಂತಂದು, ಮತ್ತೆ ಮತ್ತೆ ಸ್ಸಾರೀ-ಗರೆದು ಹೊರಟಳು. 

ದೇವರೇ ಹೀಗೂ ಉಂಟೆ ಅಂತಂದುಕೊಂಡೆ. 
ಆದರೆ, ಜಗತ್ತಿನ ಸೌಭಾಗ್ಯವೆಲ್ಲ ನನ್ನ ಪಾಲಿಗೆ ಉಂಟಾಗಿದ್ದವೇನೋ. ಅದೇ ಕೊನೆ, ಆಕೆಯಾಗಲಿ ಆಕೆಯ ಮಗಳಾಗಲಿ- ಮತ್ತೆ ಈ ಕುರಿತೆಂದೂ ಚಕಾರವೆತ್ತಲಿಲ್ಲ. 
ಇದಾದ ಒಂದು ತಿಂಗಳಿಗೆಲ್ಲ, ಮೇದಿನಿ ಸಂಬಳ ಹೆಚ್ಚಿಸಿರೆಂಬ ಅರಿಕೆಯಿಟ್ಟು ನನ್ನನ್ನು ಕಾಡಿದಳು. “”ನೋಡಮ್ಮ ಆ ಚಾರು ನಿನಗಿಂತ ಸೀನಿಯರು, ಈಗ ತಾನೇ ಇನ್ನಿಬ್ಬರು ಬೇರೆ ಸೇರಿದ್ದಾರೆ ನಿನಗೆ ಜಾಸ್ತಿ ಮಾಡುತ್ತಲೇ, ಎಲ್ಲರೂ ರಿವಿಷನ ಮಾಡಿ ಅಂತಾರೆ. ಆಲ… ದಟ… ಐ ಕೆನ್‌ ಸೇ ಈಸ್‌- ಯೂ ಮೇ ಮೂವ್‌ ಆನ್‌” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟೆ. ಕೊಂಚ ಕಸಿವಿಸಿಯ ನಡುವೆಯೇ “ಸರಿ’ ಅಂತಂದಳು. ತಿಂಗಳ ಕೊನೆಯಲ್ಲಿ ಇನ್ನೆಲ್ಲೋ ಕೆಲಸವಾಯಿತೆಂದು ಬೀಳ್ಕೊಂಡಳು. 

ಇಷ್ಟಾದ ಬಳಿಕ, ಮೇದಿನಿಯನ್ನೂ ಅವಳ ಅಮ್ಮನನ್ನೂ ಮರೆತೇಬಿಟ್ಟಿದ್ದೆ. ಚಾರುಕೀರ್ತಿ ಮತ್ತು ಇನ್ನಿಬ್ಬರ ಒಡಗೂಡಿ ಆಫೀಸು ನಡೆಸಿಕೊಂಡಿದ್ದೆ. ತಿಂಗಳುಗಳು ಬ್ರೇಕಿಲ್ಲದ ಚಕ್ರದ ಹಾಗೆ ಉರುಳಿಕೊಂಡವು. ಆಷಾಢ, ಶ್ರಾವಣ, ಭಾದ್ರಪದ ಎಂದು ಉರುಟುರುಟಿ ತೀರಿದವು. ಮೊನ್ನೆ, ಮಹಾಲಯದ ಬಳಿಕ ಆಶ್ವಿ‌àಜ ಹುಟ್ಟಿದ ಪಾಡ್ಯದ ದಿವಸವೇ, “”ಸರ್‌ ಆರ್‌ ಯು ಅರೌಂಡ್‌? ವಿ ವಾಂಟ್ಟು ಕಮ… ಅಂಡ್‌ ಸೀ ಯೂ” ಎಂದು ಮೇದಿನಿ ಮೆಸೇಜು ಮಾಡಿದಳು. ಆಶ್ಚರ್ಯವಾಯಿತು. ಸುಮಾರು ಹೊತ್ತು ಸುಮ್ಮನಿದ್ದು, ಆಫೀಸು-ಹೊತ್ತಿನಲ್ಲಿ ವಕ್ಕರಿಸಿದರೆ ಕೆಲಸ ಹಾಳೆನ್ನುವ ಎಣಿಕೆಯಿಂದ, ಸಂಜೆಯ ಸುಮಾರಿಗೆ “”ಮೆಸೇಜು ತಡವಾಗಿ ನೋಡಿದೆ, ಸ್ಸಾರೀ, ಏಳು ಗಂಟೆಯ ನಂತರ ಬರಬಹುದು’ ಎಂದು ಕಳಿಸಿದೆ. 

ಏಳೂ ಕಾಲರ ಸುಮಾರಿಗೆ ಚಾರುಕೀರ್ತಿಯೂ ಕೆಲಸ ಮುಗಿಸಿ ಹೊರಡಲು ಅನುವಾದ. ಅದೇ ಸಮಯಕ್ಕೆ, ನನ್ನಲ್ಲೊಂದು ಹೊಸ ಕತೆಯ ಹೊಳಹುಂಟಾಗಿತ್ತು. ಅದರಲ್ಲೊಂದು ಗಂಡಸಿನ ಪಾತ್ರಕ್ಕೆ ಹೆಸರು ಬೇಕಿತ್ತು. “”ಹೇ ಚಾರು, ನಂದಿತ ಅಂದರೆ ಅರ್ಥ ಏನೋ?” ಎಂದು ಕೇಳಿದೆ. ಇದ್ದಕ್ಕಿದ್ದಂತೆ ಎದುರಾದ ಈ ಪ್ರಶ್ನೆಯಿಂದ ಅವನಿಗೆ ಆಶ್ಚರ್ಯವಾಗಿರಲು ಸಾಕು!

“”ನಂದಿತ ಅಂದರೆ ಸಂತೋಷ ಅಂತ ಅರ್ಥ, ಸರ್‌ ಐ ಮೀನ್‌ ಹ್ಯಾಪಿನೆಸ್‌ ಅಂತಂದು, ಯಾಕೆ, ಸರ್‌?” ಎಂತಲೂ ಕೇಳಿದ. ಸುಮ್ಮನೆ ಕೇಳಿದೆ ಎಂದು ಹೇಳಿ ಬೀಳ್ಕೊಟ್ಟು, ಕಂಪ್ಯೂಟರಿನಲ್ಲಿ ಕನ್ನಡದ ಕಡತವನ್ನು ತೆರೆದೆನಷ್ಟೆ- ಮೇದಿನಿ, ತನ್ನ ಅಮ್ಮನೊಡನೆ ನಡೆದು ಬಂದಳು. 
ಇಬ್ಬರೂ ಅಕ್ಕ-ತಂಗಿಯರಂತೆ ಅನ್ನಿಸಿದರು. ಭಾರೀ ಸಂಭ್ರಮದಲ್ಲಿದ್ದಂತಿತ್ತು. ಅಮ್ಮ ಜರತಾರೀ ಸೀರೆಯುಟ್ಟಿದ್ದರೆ, ಮಗಳು ಅದರ ಮರಿಯೆನ್ನಬಹುದಾದ ಲಂಗ-ದಾವಣಿ ತೊಟ್ಟಿದ್ದಳು! 

“”ಒಂದು ಸಂತೋಷದ ವಿಷಯ ಸರ್‌” ಮೇದಿನಿಯ ಅಮ್ಮ ಮಾತಿಗಿಳಿದಳು. “”ನಮ್ಮ ಹುಡುಗಿಗೆ ಮದುವೆ. ಇನ್‌ವಾಯಿಟ್‌ ಮಾಡೋಣ ಅಂತ ಬಂದಿವಿ” 
“”ಓಹ್‌ ದಟ್ಸ… ಗ್ರೇಟ…! ಕಂಗ್ರಾಚುಲೇಶ®Õ…” ಧ್ವನಿಯಲ್ಲಿ ಖುಷಿ ತಂದುಕೊಂಡು ಹೇಳಿದೆ. “”ಯಾರಮ್ಮ ಆ ಗಂಡಸು ನಿನ್ನನ್ನು ಮದುವೆ ಮಾಡಿಕೊಳ್ಳುವವನು?” ತಮಾಷೆ ಮಾಡಿದೆ. 

“ನೋಡಿ, ಸರ್‌’ ಅನ್ನುತ್ತ ಮೇದಿನಿ, ಮದುವೆಯ ಕರೆಯೋಲೆಯನ್ನು ಮೇಜಿನಲ್ಲಿಟ್ಟು, “”ಖಂಡಿತ ಬರಬೇಕು, ಸರ್‌” ಅಂತಂದಳು. ಆಮಂತ್ರಣವನ್ನು ಕೈಗೆತ್ತಿಕೊಂಡೆ. ಮೇದಿನೀಪರಿಣಯಂ ಎಂದು ಇಂಗ್ಲಿಷಿನಲ್ಲೂ, ತೆಲುಗಿನಲ್ಲೂ ಬರೆಯಲಾಗಿತ್ತು. “”ಮಹಾಭಾರತದಲ್ಲಿ ಸುಭದ್ರಾಪರಿಣಯ ಅನ್ನೋ ಪ್ರಸಂಗ ಇದೆ, ಅರ್ಜುನ ಸುಭದ್ರೆಯನ್ನ ಕದ್ದು ಓಡಿಸಿಕೊಂಡು ಹೋಗಿ ಮದುವೆ ಆಗುತಾನೆ” ಅಂತಂದೆ. 
ಹೊಂಬಣ್ಣದ ಕವರೊಳಗಿದ್ದ ಹಸಿರು ರೇಶಿಮೆಯಂತಹ ಕಾರ್ಡನ್ನು ತೆರೆದೆ. ಆಶ್ಚರ್ಯವೇ ಮೊದಲಾಯಿತು. ನಂಬಲಾಗಲಿಲ್ಲ. 

ನಂದಿತ-ಮೇದಿನಿ ಎಂದು ಬರೆಯಲಾಗಿತ್ತು. 
ನಂದಿತನೆಂದರೆ ಈಗ ಕೆಲಸಮಯದ ಹಿಂದಷ್ಟೇ ಹೊರಹೋದ- ನಮ್ಮ ನಂದಿತ ಚಾರುಕೀರ್ತಿಯೇ? ಹುಡುಗ ಹೇಳಲೇ ಇಲ್ಲವಲ್ಲ!
ಆಶ್ಚರ್ಯಕ್ಕೆ ಮಾತು ಸಾಲದಾದವು!
“”ನಾನೇ ಹೇಳಬೇಡ ಅಂದಿದ್ದೆ, ಸರ್‌, ನಿಮಗೆ ನಾಳೆ ನಾಳಿದ್ದರಲ್ಲಿ ಅವನೇ ಇನ್ವಿಟೇಷನ್‌ ಕೊಡುತಾನೆ” ಮೇದಿನಿ ಹೇಳಿದಳು. 

ಈ ಮಾತಿನ್ನೂ ಅರಗಿಯೇ ಇರಲಿಲ್ಲ, ಅಮ್ಮ ಸುರು ಹಚ್ಚಿಕೊಂಡಳು, “”ಏನು ಗೊತ್ತಾ, ಸರ್‌? ಕಡೆಗೂ ನಮಗೆ ಆ ಜಯಧ್ವನಿಯ ಪ್ರಶಸ್ತಿ ಬರಲೇ ಇಲ್ಲ. ಆದರೆ, ಪ್ರಶಸ್ತಿಗೂ ಹೆಚ್ಚಾದ ಅಳಿಯ ಒದಗಿಬಂದ. ಕಳೆದ ಸಲ ದಸರಾದಲ್ಲಿ ಬೊಂಬೆ ಜೋಡಿಸಿದಾಗ, ಚಾರು ಮೊದಲ ಸಲ ನಮ್ಮ ಮನೆಗೆ ಬಂದ. ಆಗಲೇ ನಾನು ಅವನನ್ನು ನೋಡಿದ್ದು. ನನಗಿಂತ ಹೆಚ್ಚಾಗಿ ನನ್ನ ಹಸ್‌ಬೆಂಡ್‌ಗೆ ಭಾಳ ಭಾಳ ಇಷ್ಟ ಆದ ಅವರೇ ಮುತುವರ್ಜಿ ವಹಿಸಿ ಈ ಪರಿಣಯ ಮಾಡಿಸಿದ್ದು. ಜೈನರ ಹುಡುಗ. ನಾವು ನಾಯೂxಸ್‌” ಎಂದು, ಇಡೀ ಪುರಾಣವನ್ನೇ ಬಿಚ್ಚಿಟ್ಟಳು. 
ಅಯಿಗಿರಿನಂದಿನಿ ನಂದಿತ ಮೇದಿನಿ ಎಂದು ನನಗೇ ಗೊತ್ತಿರದೆ ನುಗು ತಾಳಿದೆ.

ನಾಗರಾಜ ವಸ್ತಾರೆ

ಟಾಪ್ ನ್ಯೂಸ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.