ಧರ್ಮ,ರಿಲಿಜನ್‌


Team Udayavani, Nov 11, 2018, 6:00 AM IST

10.jpg

ಯೋಗ, ಭಾರತದಿಂದ ಹೊರಗಿನ ದೇಶಗಳಲ್ಲಿ ಜನಪ್ರಿಯಗೊಳ್ಳತೊಡಗಿದಾಗ, “ಯೋಗವೇ? ಹಾಗೆಂದರೇನು? ಅದೇನು ರಿಲಿಜನ್ನೇ?’ ಎಂದು ಕೇಳುವವರಿದ್ದರು. ಅಂಥ ಪ್ರಶ್ನೆ ಹಿಂದೂಯಿಸಮ್‌ ಎಂಬ ಶಬ್ದದ ಬಗ್ಗೆಯೂ ಇದೆ. ಹಿಂದೂಯಿಸಮ್‌ ಎಂದರೇನು? ಅದು ರಿಲಿಜನ್‌ ಹೌದೋ ಅಲ್ಲವೋ? ಪ್ರಶ್ನೆ ಇಂದಿಗೂ ಹಲವು ಮನಸ್ಸುಗಳಲ್ಲಿ ಬೇರುಬಿಟ್ಟಿದೆ.

1
ಕೆಲವರು ಹೇಳುತ್ತಾರೆ, ಹಿಂದೂ ಎಂಬುದು ಒಂದು ನಿರ್ದಿಷ್ಟ ಭೌಗೋಳಿಕ ಸೀಮೆಗೆ ಸಂಬಂಧಪಟ್ಟ ಶಬ್ದ; ಭಾರತದ ಗಡಿರೇಖೆಯ ಒಳಗೆ ಇರುವುದೆಲ್ಲ ಹಿಂದೂ. ಹೀಗೆ ಹಿಂದೂ ಎಂಬ ಶಬ್ದವನ್ನು ಒಂದು ನಿಶ್ಚಿತ ಪ್ರಾಂತ್ಯಕ್ಕೆ ಸೀಮಿತಗೊಳಿಸಿದಾಗ ಅದು ರಿಲಿಜನ್‌ ಹೌದೋ ಅಲ್ಲವೋ ಎಂಬ ಪ್ರಶ್ನೆಯೇ ಇಲ್ಲವಾಗುತ್ತದೆ. ಆದರೆ, ವಿಷಯ ಅಷ್ಟು ಸರಳವಾಗಿದೆಯೆ? ಇಲ್ಲ! ಹಿಂದೂಯಿಸಮ್‌ ಎಂಬುದು ಜಗತ್ತಿನಾದ್ಯಂತ ಮಾನ್ಯವಾಗಿರುವ ಒಂದು ರಿಲಿಜನ್‌ ಎಂಬುದನ್ನು ತಳ್ಳಿಹಾಕುವುದು ಸಾಧ್ಯವಿಲ್ಲ. ರಿಲಿಜನ್‌ ಎಂದು ವ್ಯಾಖೀಸಿಕೊಂಡಾಗ ಸಿಗುವ ಲಾಭಗಳೆಲ್ಲವೂ ಹಿಂದೂಯಿಸಮ್‌ಗೆ ಕೂಡ ಸಿಗುತ್ತಿವೆ ಎಂಬುದನ್ನು ಮರೆಯುವಂತಿಲ್ಲ. ತಮ್ಮ ಸಂಪ್ರದಾಯದ ಪ್ರಕಾರ ಮದುವೆಯಾಗುವ ಹಕ್ಕನ್ನು, ತಮ್ಮ ಧಾರ್ಮಿಕ ಸಂಘಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ ಹಕ್ಕನ್ನು ಹಿಂದೂಗಳು ಪಡೆದಿದ್ದಾರೆ. ಕಾನೂನಿನ ದೃಷ್ಟಿಯಿಂದ ನೋಡಿದಾಗ, ಈ ಜನರ ನಡುವಿನ ಎಲ್ಲ ಬಗೆಯ ವ್ಯಾಜ್ಯಗಳೂ ಇತ್ಯರ್ಥವಾಗುವುದು ಹಿಂದೂಗಳಿಗೆಂದು ಬರೆದಿಟ್ಟ ಕಾನೂನುಕಟ್ಟಳೆಗಳ ಪ್ರಕಾರವೇ. ಅಮೆರಿಕದಲ್ಲಿ ತಮ್ಮನ್ನು ತಾವು ಹಿಂದೂ ಧರ್ಮೀಯರು ಎಂದು ಕರೆಸಿಕೊಳ್ಳುವವರು ಅಜ್ಞಾನಿಗಳ ಸಮುದಾಯವೇನಲ್ಲ. ಯಹೂದಿಗಳಂತೆಯೇ ಅವರೂ ಬಹಳ ತಿಳಿದುಕೊಂಡವರು; ತಂತಮ್ಮ ವೃತ್ತಿಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿದವರು; ಉನ್ನತ ಹುದ್ದೆಗಳಲ್ಲಿರುವವರು; ವಿದ್ಯಾವಂತರು. ಹಾಗಾಗಿ, ಅವರು ತಮ್ಮನ್ನು ಹಿಂದೂಗಳು ಎಂದು ಗುರುತಿಸಿಕೊಂಡಾಗ ಅದನ್ನು ಪ್ರಜ್ಞಾಪೂರ್ವಕವಾಗಿಯೇ ಮಾಡಿ¨ªಾರೆ ಎಂದು ಭಾವಿಸಬೇಕಾಗುತ್ತದೆ. ತಂದೆತಾಯಿ ಹಿಂದೂಗಳೆಂದು ಕರೆಸಿಕೊಂಡಿದ್ದರು; ಹಾಗಾಗಿ, ನಾವೂ ಅದೇ ಎಂಬಷ್ಟು ಸರಳ ಸಮೀಕರಣಕ್ಕೆ ತಲೆಬಾಗುವವರೇನೂ ಅಲ್ಲ ಅವರು.

ಭಾರತದಲ್ಲಿ ಹುಟ್ಟಿದವರು ಮಾತ್ರ ಹಿಂದೂಗಳು, ಅದರಾಚೆಯವರು ಅಲ್ಲ – ಎಂಬ ವಾದ ಪ್ರೌಢವಾದದ್ದಲ್ಲ. ಭಾರತದಿಂದ ಹೊರಗೆ, ಹಿಂದೂ ಧರ್ಮವನ್ನು ಓದಿ ತಿಳಿದು ಅರ್ಥೈಸಿಕೊಂಡು ತಮ್ಮನ್ನು ತಾವು ಹಿಂದೂ ಎಂದು ಪರಿಭಾವಿಸಿಕೊಂಡ ಅನೇಕರನ್ನು ಕಾಣಬಹುದು. ಅವರನ್ನು ಹಿಂದೂಗಳಲ್ಲ ಎನ್ನುವುದು ಹೇಗೆ? ಹಿಂದೂಯಿಸಮ್‌ ಟುಡೇ ಎಂಬ ಪಾಶ್ಚಾತ್ಯ ಪತ್ರಿಕೆ ಪ್ರಕಟಗೊಳ್ಳುತ್ತಿರುವುದು ಅಮೆರಿಕದ ಹವಾಯಿಯಿಂದ. ಅದರಲ್ಲಿ ಲೇಖನಗಳನ್ನು ಬರೆಯುವವರಲ್ಲಿ ಹೆಚ್ಚಿನವರು ಭಾರತೀಯರಲ್ಲ. ಹಿಂದೂ ಎಂಬ ಶಬ್ದ ಸೃಷ್ಟಿಯಾದಾಗ ಅದಕ್ಕೆ ಒಂದು ನಿರ್ದಿಷ್ಟ ಭೂಪ್ರದೇಶದೊಳಗಿದ್ದವರು ಎಂಬ ಅರ್ಥ ಇದ್ದಿರಬಹುದು. ಅದು ಆ ಶಬ್ದದ ಶೈಶವದ ಮಾತಾಯಿತು. ಕಾಲಕ್ರಮೇಣ ಅದು ತನ್ನ ಅರ್ಥವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತ ಬಂದಿದೆ ಎಂಬ ಸಂಗತಿಗೆ ನಾವು ಕುರುಡಾಗಿರುವುದು ಸಾಧ್ಯವಿಲ್ಲ. ಮಹಾತ್ಮಾ ಗಾಂಧಿಯವರು ಒಂದಲ್ಲ ಅನೇಕ ಕಡೆಗಳಲ್ಲಿ ಹಿಂದೂ ಎಂಬ ಶಬ್ದವನ್ನು ಧಾರ್ಮಿಕ ಎಂಬರ್ಥದಲ್ಲೇ ಬಳಸಿದ್ದಾರೆ. ಮತ್ತು ಆ ಅರ್ಥದಲ್ಲೇ ಅವರು ತನ್ನನ್ನು ಹಿಂದೂ ಎಂದು ಕರೆದುಕೊಂಡಿದ್ದರು. 

2
ಪ್ರಾಚೀನ ಪಠ್ಯಗಳನ್ನು ಅಭ್ಯಾಸ ಮಾಡಿದರೆ ನಮಗೆ, ಹಿಂದೂಯಿಸಮ್‌ ಎಂಬ ಪದಕ್ಕೆ ಅಲ್ಲಿ ಸನಾತನ ಧರ್ಮ ಎಂದು ಕರೆದಿರುವುದು ತಿಳಿದೀತು. ಸನಾತನ ಎಂದರೆ ನಿರಂತರವಾದ, ಶಾಶ್ವತವಾದ, ಎಂದೂ ನಾಶವಾಗದ ಎಂದು ಅರ್ಥ. ಸನಾತನ ಧರ್ಮ ಎಂಬುದು ಮಹಾವೃಕ್ಷ. ಶೈವ, ವೈಷ್ಣವ, ಶಾಕ್ತ ಮುಂತಾದ ಪಂಥ-ಪಂಗಡಗಳೆಲ್ಲವೂ ಆ ವೃಕ್ಷದ ರೆಂಬೆಕೊಂಬೆಗಳಷ್ಟೆ. ಈ ಅರ್ಥದಿಂದ ನೋಡಿದಾಗ ಸನಾತನ ಧರ್ಮಕ್ಕೆ ತಾಯಿಬೇರು ವೇದಗಳು ಎನ್ನಬಹುದು. ಸನಾತನ ಧರ್ಮಕ್ಕೆ ವೈದಿಕಾಚರಣೆಗಳ ಹಿನ್ನೆಲೆ ಇದೆ. ಈ ಚಿಂತನೆಯನ್ನು ಮುಂದುವರೆಸಿಕೊಂಡು ಹೋದ ಕೆಲವರು ಭಗವದ್ಗೀತೆ ಹಿಂದೂಧರ್ಮದ ಧರ್ಮಗ್ರಂಥ/ಪವಿತ್ರಗ್ರಂಥ ಎಂದೆಲ್ಲ ಭಾಷ್ಯ ಬರೆಯಲು ತೊಡಗುತ್ತಾರೆ. ಸನಾತನ ಧರ್ಮಕ್ಕೆ ಹಿಂದೂ ಎಂಬ ಹೆಸರು ಬರುವುದಕ್ಕೂ ಮೊದಲೇ ಭಗವದ್ಗೀತೆ ಇತ್ತು ಎಂಬುದನ್ನು ನಾವು ನೆನಪಿಡಬೇಕು.

ಎರಡೆರಡು ಹೆಸರುಗಳ ಗೊಂದಲವೇಕೆ? ಹಿಂದೂಯಿಸಮ್‌ಗೆ ಸನಾತನ ಧರ್ಮ ಎಂಬ ಒಂದೇ ಹೆಸರಿಟ್ಟು ಹೆಸರಿನ ಗೊಂದಲಕ್ಕೆ ಇತಿಶ್ರೀ ಹಾಡೋಣ – ಎಂದು ಹೇಳುವವರುಂಟು. ಅವರ ವಾದ ತಪ್ಪಲ್ಲ ಎನ್ನಿ. ಆದರೆ, ಹಾಗೆ ಮಾಡುವವರು ಯಾರು? ಹಿಂದೂ ಎಂಬ ಶಬ್ದ ಈಗಾಗಲೇ ವ್ಯಾಪಕವಾಗಿ ಚಾಲ್ತಿಯಲ್ಲಿರುವುದರಿಂದ ಅದನ್ನು ಧಿಕ್ಕರಿಸಿ ಒಂದೇ ಪದವನ್ನು ಜನರ ಮೇಲೆ ಹೇರುವುದು ಗೊಂದಲ ಕಡಿಮೆಯಾಗುವುದಕ್ಕಲ್ಲ, ಹೆಚ್ಚುವುದಕ್ಕೆ ಕಾರಣವಾಗಬಹುದು! ಕಾನೂನಾತ್ಮಕವಾಗಿಯೂ ಶೈಕ್ಷಣಿಕ ವಲಯದಲ್ಲೂ ಹೆಚ್ಚು ಚಾಲ್ತಿಯಲ್ಲಿರುವುದು ಹಿಂದೂ ಎಂಬ ಹೆಸರೇ ಆಗಿರುವುದರಿಂದ ಅದನ್ನು ಉಳಿಸಿಕೊಳ್ಳುವುದರಲ್ಲಿ ಯಾವ ತೊಂದರೆಯೂ ಇಲ್ಲ. ಸನಾತನ ಧರ್ಮ ಎಂಬ ಹೆಸರನ್ನು ಕೇಳಿದವರು, ಹಾಗೆ ನೋಡಿದರೆ, ಕಡಿಮೆಯೇ. 

ಇಲ್ಲಿ ಇನ್ನೂ ಒಂದು ಗೊಂದಲವನ್ನು ಮೂಲದಲ್ಲೇ ಪರಿಹರಿಸಿಕೊಂಡುಬಿಡಬೇಕು. ಅದೇನೆಂದರೆ, ಸನಾತನ ಧರ್ಮ ಎಂಬಲ್ಲಿ ಧರ್ಮ ಎಂಬ ಶಬ್ದ ಇದೆ. ರಿಲಿಜನ್‌ ಅಲ್ಲ, ಧರ್ಮ. ಅದು ಬಹಳ ಮುಖ್ಯ. ಪಾಶ್ಚಾತ್ಯ ಜಗತ್ತನ್ನು ಆಳುತ್ತಿರುವ ರಿಲಿಜನ್‌ಗಳಿಗೂ ಭಾರತದಲ್ಲಿ ಹೆಚ್ಚು ಪ್ರಸ್ತುತವಾದ ಸನಾತನ ಧರ್ಮಕ್ಕೂ ಮೂಲಭೂತ ವ್ಯತ್ಯಾಸಗಳಿವೆ. ಧರ್ಮದಲ್ಲಿ ಒಬ್ಬನೇ ಪ್ರವಾದಿ ಇಲ್ಲ. ಅಂತಿಮ ಪ್ರವಾದಿಯೊಬ್ಬ ಬರುತ್ತಾನೆ; ಅವನು ಹೇಳಿದ್ದೆಲ್ಲವೂ ಸತ್ಯಸ್ಯ ಸತ್ಯ; ಅದರಾಚೆಗೆ ಚರ್ಚೆಗೆ ಅವಕಾಶವಿಲ್ಲ – ಎಂಬ ತರ್ಕ ಸನಾತನ ಧರ್ಮಕ್ಕೆ ಅನ್ವಯವಾಗದು. ಒಬ್ಬನೇ ಗಾಡ್‌, ಒಂದೇ ಪುಸ್ತಕ, ಒಂದೇ ಸಂಸ್ಥೆ, ಒಂದೇ ಕಟ್ಟಳೆ ಅಥವಾ ಒಡಂಬಡಿಕೆ ಎಂಬ ಸರಳ ಸೂತ್ರಕ್ಕೆ ಧರ್ಮವನ್ನು ಕಟ್ಟಿಹಾಕುವುದು ಸಾಧ್ಯವಿಲ್ಲ. ರಿಲಿಜನ್‌ ಎಂದರೆ ಅಲ್ಲೊಬ್ಬ ಪ್ರವಾದಿ, ಗಾಡ್‌, ಪವಿತ್ರ ಗ್ರಂಥ, ಕಟ್ಟಳೆಗಳು- ಇವೆಲ್ಲ ಇರಬೇಕು ಎಂಬ ಮಾತುಗಳನ್ನು ಕೇಳಿಕೊಂಡು ಬಂದವರು ಅಂಥ ಯಾವ ಚೌಕಟ್ಟಿಗೂ ಒಳಗಾಗದ ಹಿಂದೂ ಧರ್ಮವನ್ನು ರಿಲಿಜನ್ನೇ ಅಲ್ಲ ಎಂದು ನಿರ್ಣಯ ಕೊಟ್ಟುಬಿಟ್ಟಾರು. ಹೌದು, ರಿಲಿಜನ್‌ ಅಲ್ಲ ಎಂಬುದೇನೋ ನಿಜವೇ. ಆದರೆ, ಧರ್ಮ ಹೌದು! ಈ ಶಬ್ದಗೊಂದಲವನ್ನು ಪರಿಹರಿಸುವುದು ಹೇಗೆ?

ಹಿಂದೂಯಿಸಮ್‌ ಎನ್ನುವುದು ಜಗತ್ತಿನ ಅತ್ಯಂತ ದೊಡ್ಡ ಮತ್ತು ಪ್ರಾಚೀನ ಧಾರ್ಮಿಕ-ಪಾರಮಾರ್ಥಿಕ ಸಾಹಿತ್ಯದ ನಿಧಿ. ವೇದಗಳು, ಪುರಾಣಗಳು, ಶಾಸ್ತ್ರಗಳು, ತಂತ್ರಗಳು ಇವೆಲ್ಲವನ್ನೂ ಒಳಗೊಂಡ ದೊಡ್ಡ ಸಾಹಿತ್ಯಭಂಡಾರ ಇದು. ಇಲ್ಲಿರುವ ದೇವಸ್ಥಾನಗಳು, ದೇವತೆಗಳು, ಮಠಪರಂಪರೆಗಳು ಸಾವಿರಾರು. ಬಹುಶಃ ಇಷ್ಟೊಂದು ದೇವತೆಗಳನ್ನೂ ದೇವಾರಾಧನಾ ಕೇಂದ್ರಗಳನ್ನೂ ಹೊಂದಿರುವ ಬೇರೆ ರಿಲಿಜನ್‌, ಧರ್ಮಗಳು ಇಲ್ಲ. ದೇವತೆಗಳ ಸಂಖ್ಯೆಯಂತೆಯೇ ಹಿಂದೂಗಳ ಹಬ್ಬಗಳ ಸಂಖ್ಯೆಯೂ ದೊಡ್ಡದೇ. ಕುಂಭಮೇಳ, ಜಗತ್ತಿನ ಅತಿದೊಡ್ಡ ಧಾರ್ಮಿಕ ಸಮಾಗಮ. ಉತ್ಸವ.

ಇಷ್ಟೆಲ್ಲ ವೈವಿಧ್ಯಗಳಿರುವ ಈ ಧಾರ್ಮಿಕ ಜಗತ್ತನ್ನು ವ್ಯಾಖೀಸುವುದು ಹೇಗೆ? ಪ್ರಾಯಶಃ ಇದನ್ನು ನಂಬಿಕೆ, ಸಂಸ್ಕೃತಿ, ಆಚರಣೆಗಳಲ್ಲಿ ಬಹುತ್ವವನ್ನು ಕಾಯ್ದುಕೊಂಡಿರುವ ಒಂದು ವ್ಯವಸ್ಥೆ ಎನ್ನಬಹುದು. ಪಾಶ್ಚಾತ್ಯ ಜಗತ್ತಿನ ರಿಲಿಜಸ್‌ ಪರಿಭಾಷೆಯಲ್ಲಿ ಧರ್ಮವನ್ನು – ಅದರಲ್ಲೂ ಹಿಂದೂ ಧರ್ಮವನ್ನು ವಿವರಿಸುವುದು ಸಾಧ್ಯವಿಲ್ಲ. ಪಾಶ್ಚಾತ್ಯ ರಿಲಿಜನ್‌ಗಳು ಮುಂದಿಡುವ ಪ್ರತಿಯೊಂದು ಕಟ್ಟಳೆ, ನಿಯಮವನ್ನೂ ಧರ್ಮ ಮೀರುತ್ತದೆ. ಹಾಗಿರುವಾಗ ಧರ್ಮವನ್ನು ರಿಲಿಜನ್‌ಗಳ ಚೌಕಟ್ಟಿನೊಳಗೆ ಕೂರಿಸಲು ಯತ್ನಿಸುವುದು ಮತ್ತು ಸೂಕ್ತವಲ್ಲದ ಪಾರಿಭಾಷಿಕ ಪದಗಳ ಮೂಲಕ ಧರ್ಮದ ವ್ಯಾಪ್ತಿಯನ್ನು ಅರ್ಥೈಸಿಕೊಳ್ಳಲು ಯತ್ನಿಸುವುದು ಹಾಸ್ಯಾಸ್ಪದವಾಗುತ್ತದೆ. ಸರಿ, ಹಿಂದೂಯಿಸಮ್‌ ರಿಲಿಜನ್‌ ಅಲ್ಲ ಎಂದು ಒಪ್ಪೋಣ. ಆದರೆ, ಬುದ್ಧಿಸಮ್‌ ರಿಲಿಜನ್‌ ಎಂದು ಕೆಲವರು ವಾದಿಸುತ್ತಾರೆ. ರಿಲಿಜನ್‌ ಎಂದು ಗುರುತಿಸಿಕೊಳ್ಳಲು ಬೇಕಿರುವ ಪ್ರಾಥಮಿಕ ಅಗತ್ಯಗಳಲ್ಲಿ ಒಂದು – ಗಾಡ್‌ನ‌ ಅಸ್ತಿತ್ವ. ಗಾಡ್‌ ಒಬ್ಬನೇ; ನಮ್ಮ (ಅಂದರೆ ನಾವು ಒಪ್ಪಿಕೊಂಡಿರುವ) ಅತಿಮಾನುಷ ಪ್ರತೀಕ ಮಾತ್ರವೇ ಗಾಡ್‌ ಎಂದು ರಿಲಿಜನ್‌ಗಳು ಹೇಳುವಾಗ, ದೇವರ ಅಸ್ತಿತ್ವವನ್ನು ನಿರಾಕರಿಸುವ ಬುದ್ಧಿಸಮ್‌ ರಿಲಿಜನ್‌ ಆಗುವುದು ಹೇಗೆ? ಅದು ರಿಲಿಜನ್‌ ಆಗಲು ಬೇಕಾದ ಪ್ರಥಮ ಆವಶ್ಯಕತೆಯನ್ನೇ ಪೂರಯಿಸಿಲ್ಲವಲ್ಲ?  ಬೌದ್ಧದರ್ಶನವು ಏಕದೇವತಾವಾದವನ್ನು ಪುರಸ್ಕರಿಸುವ ಪಾಶ್ಚಾತ್ಯ ಜಗತ್ತಿನ ರಿಲಿಜನ್‌ ಮಾದರಿಗಳಿಗಿಂತ ಹೆಚ್ಚಾಗಿ ದೇವರನ್ನು ನಿರಾಕರಿಸಿಯೂ ಹಿಂದೂ ಆಗಿ ಉಳಿವ ಭಾರತೀಯ ಪಂಥಗಳಿಗೇ ಹೆಚ್ಚು ಹತ್ತಿರವಿದೆ. 

3
ಹಿಂದೂಯಿಸಮ್‌ ಎಂದರೆ ಒಂದು ಸಂಸ್ಕೃತಿ ಅಥವಾ ಜೀವನಪದ್ಧತಿ ಎಂದು ಕೆಲವರು ಹೇಳುತ್ತಾರೆ. ಈ ಮಾತಿನಲ್ಲಿ ಹುರುಳಿದೆ ಎನ್ನಬಹುದು. ಯಾಕೆಂದರೆ, ಹಿಂದೂಯಿಸಮ್‌ ಕಲೆ, ಸಂಗೀತ, ನೃತ್ಯ, ಸಾಹಿತ್ಯ ಮುಂತಾದ ಸಾಂಸ್ಕೃತಿಕ ಆಯಾಮಗಳನ್ನು ಧಿಕ್ಕರಿಸುವುದಿಲ್ಲ, ಗೌರವಿಸುತ್ತದೆ. ಮಾತ್ರವಲ್ಲ ಬೆಳೆಸುತ್ತದೆ. ಹಿಂದೂ ಜೀವನಪದ್ಧತಿ ಎಂದು ಯಾವುದನ್ನು ನಾವು ಗುರುತಿಸುತ್ತೇವೋ ಅದೇ ರೀತಿಯಲ್ಲಿ ತಮ್ಮ ನಿತ್ಯದ ಬದುಕನ್ನು ನಡೆಸುವ ಕೋಟ್ಯಂತರ ಮಂದಿಯನ್ನು ನಾವು ಕಾಣಬಹುದು ಕೂಡ. ಯೋಗ, ಈ ಜೀವನಪದ್ಧತಿಯ ಒಂದು ಅವಿಭಾಜ್ಯ ಅಂಗ. 

ಹಿಂದೂಯಿಸಮ್‌ನ ಹತ್ತು-ಹಲವಾರು ಶಾಖೆಗಳಲ್ಲಿ ಯೋಗದ ವಿವಿಧ ಆಯಾಮಗಳು ಅವಿನಾಭಾವವಾಗಿ ಹೊಂದಿಕೊಂಡಿರುವುದನ್ನು ಕಾಣಬಹುದು. ಯೋಗ ಎಂಬ ಶಬ್ದ ಕೂಡ ಹಿಂದೂ ಧರ್ಮದ ಇತರ ಹಲವಾರು ಶಬ್ದಗಳಂತೆ ಪಾಶ್ಚಾತ್ಯ ಪರಿಭಾಷೆಯಲ್ಲಿ ವಿವರಿಸಲಾಗದ ವಿಶಿಷ್ಟ ಪರಿಕಲ್ಪನೆ. ಎಲ್ಲಿಯವರೆಗೆ ನಾವು ಪಾಶ್ಚಾತ್ಯ ಜಗತ್ತಿನ ಮತ್ತು ರಿಲಿಜನ್‌ ಎಂಬ ವೃತ್ತದೊಳಗಿನ ನುಡಿಗಟ್ಟುಗಳಲ್ಲಿ ಮಾತಾಡುತ್ತಿರುತ್ತೇವೋ ಅಲ್ಲಿಯವರೆಗೆ ನಮಗೆ ಹಿಂದೂಯಿಸಮ್‌ನ ಪೂರ್ತಿ ಹಿಡಿತ ಸಿಗುವುದು ಕಷ್ಟವೇ. ಹಿಂದೂಯಿಸಮ್‌ ಎನ್ನಬೇಡಿ! ಅಲ್ಲೂ ಇಸಮ್‌ ಎಂಬ ಪದ ಪಾಶ್ಚಾತ್ಯ ಪರಿಭಾಷೆಯ ಪಳಿಯುಳಿಕೆ. ಹಿಂದೂ ಧರ್ಮ ಎನ್ನಿ; ಧರ್ಮಕ್ಕೂ ಇಸಮ್ಮುಗಳಿಗೂ ಅಜಗಜಾಂತರ ಎನ್ನುತ್ತೀರಾ? ನಿಮ್ಮ ಮಾತಿಗೆ ನನ್ನ ಸಂಪೂರ್ಣ ಸಹಮತ ಇದೆ. ಹಿಂದೂ ಧರ್ಮ ಎಂಬ ನುಡಿಗಟ್ಟು ಸ್ಪುರಿಸುವ ವಿಶೇಷಾರ್ಥಗಳನ್ನು ಹಿಂದೂಯಿಸಮ್‌ ಕೊಡಲಾರದು.

ಶಬ್ದಗಳ ಗೋಜಲು ಏನೇ ಇರಲಿ, ನಾವು ಕೊನೆಗೆ ಸ್ವೀಕರಿಸುವ ಶಬ್ದ ಏನೇ ಇರಲಿ, ಹಿಂದೂ ಧರ್ಮದ ಬಗ್ಗೆ ಸಮಗ್ರಾರ್ಥ ಕೊಡಬಲ್ಲಂಥ ವ್ಯಾಖ್ಯೆಯೊಂದನ್ನು ಆ ಶಬ್ದಕ್ಕೆ ಕೊಡಬೇಕಾದ್ದು ಮುಖ್ಯ. ಹಿಂದೂ ಧರ್ಮವೆಂದರೆ ಬಹುತ್ವದ ಸಂಪ್ರದಾಯ. ಧರ್ಮ, ಅಧ್ಯಾತ್ಮ, ತಣ್ತೀಶಾಸ್ತ್ರ ಮತ್ತು ಸಂಸ್ಕೃತಿಗಳನ್ನು ಒಳಗೊಳ್ಳುವ ಸಂಪ್ರದಾಯ ಅದು. ಹಿಂದೂ ಆದವನು ಈ ಸಾವಿರಾರು ಸಂಪ್ರದಾಯಗಳ ಗೊಂಡಾರಣ್ಯದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಹಲವು ಹಾದಿಗಳಲ್ಲಿ ಒಂದನ್ನು ಆಯ್ದುಕೊಳ್ಳಬಹುದು. ಇಲ್ಲವೇ ಇರುವೆಲ್ಲ ಹಾದಿಗಳ ಹೊರತಾಗಿ ಹೊಸದೊಂದನ್ನು ಸೃಷ್ಟಿಸಿಕೊಳ್ಳುವುದಕ್ಕೂ ಆತ ಸ್ವತಂತ್ರನೇ. ಆತನ ಕೈಗೆ ಕೋಳ ತೊಡಿಸುವವರಿಲ್ಲ; ಕಾಲುಗಳಿಗೆ ಸಂಕೋಲೆ ಕಟ್ಟಿ ಹೀಗೇ ನಡೆಯಬೇಕೆಂದು ನಿರ್ದೇಶಿಸುವವರಿಲ್ಲ. ಅರಣ್ಯದ ದಾರಿಯಲ್ಲಿ ಆತ ಒಬ್ಬಂಟಿ ಇದ್ದರೂ ಸ್ವತಂತ್ರ. ಬೆಟ್ಟದಲ್ಲಿ ಹುಟ್ಟಿದ ಸ್ರೋತವೊಂದು ದಟ್ಟ ಕಾನನದಲ್ಲಿ ಪಥ ಕೊರೆಯುತ್ತ ಹರಿದು ಕೊನೆಗೆ ಸಾಗರವನ್ನು ಸೇರುವಂತೆ ಇಲ್ಲಿ ಪಥಿಕನ ನಡೆ. ದೇವರನ್ನು ನಂಬದವನಿಗೂ ಇಲ್ಲಿ ಗೌರವ, ಅವಕಾಶ ಇವೆ; ಧರ್ಮದ ಹಾದಿಯಲ್ಲಿ ನಡೆವ ಸಂಕಲ್ಪವನ್ನವನು ತೊಟ್ಟಿದ್ದರೆ. 

​​​​​​​ಬಾಳಿಗೆ ಬೆಳಕಾಗುವ ಭಗವದ್‌ಗೀತೆ
ಭಗವದ್‌ಗೀತೆ ಹುಟ್ಟಿದ್ದು ಆಶ್ರಮದಲ್ಲಿ, ಮನೆಯಲ್ಲಿ. ಅರಳಿಕಟ್ಟೆಯಲ್ಲಿ ಅಲ್ಲ. 18 ಅಕ್ಷಾಹಿಣಿಯಷ್ಟು ಸೈನ್ಯ ಜಮಾಯಿಸಿದ್ದ ಯುದ್ಧಭೂಮಿಯಲ್ಲಿ ! ಅದೇ ಅದರ ವೈಶಿಷ್ಟ್ಯ. ನಮ್ಮ ಬದುಕೂ ಯುದ್ಧಭೂಮಿಯೇ. ಪ್ರಕೃತಿ ಮತ್ತು ಮನುಷ್ಯಜಗತ್ತಿನ ಹಲವು ದ್ವಂದ್ವಗಳ ನಡುವೆ ನಿತ್ಯನಿರಂತರವಾಗಿ ಯುದ್ಧ ಜಾರಿಯಲ್ಲಿರುತ್ತದೆ. ಧರ್ಮದ ಮೇಲೆ ಅಧರ್ಮದ ಕದನ ಯಾವಾಗಲೂ ಚಾಲೂ ಇರುತ್ತದೆ. ಹಾಗೆಂದು ಬದುಕೆಂದರೆ ಕೇವಲ ಕಪ್ಪು-ಬಿಳುಪುಗಳ ನಡುವಿನ ಅಥವಾ ಒಳಿತು-ಕೆಡುಕುಗಳ ನಡುವಿನ ಸರಳ ಆಯ್ಕೆಯಲ್ಲ. ಕಪ್ಪೂ ಅಲ್ಲದ ಬಿಳುಪೂ ಅಲ್ಲದ ನೂರಾರು ಛಾಯೆಗಳ ಸಂಕೀರ್ಣ ಜಗತ್ತದು.

ಹಲವು ದಿಕ್ಕುಗಳಲ್ಲಿ ನಿಂತು ಎಳೆಯುವ ಸಮಾನ ಶಕ್ತಿಗಳಿಂದ ತಪ್ಪಿಸಿಕೊಂಡು, ದಾರಿಯಿಲ್ಲದ ಚಕ್ರವ್ಯೂಹದಲ್ಲಿ ದಾರಿ ಕೊರೆದುಕೊಂಡು ನಡೆಯಬೇಕಾದ ಅನಿವಾರ್ಯ ನಮ್ಮದು. ಕುರುಕ್ಷೇತ್ರದಲ್ಲಿ ಪ್ರಾರಂಭದಲ್ಲಿ ಬಿಲ್ಲುಬಾಣಗಳನ್ನು ಕೈಚೆಲ್ಲಿ ನಿಂತ ಅರ್ಜುನನಂತೆ ನಾವೂ ಸಮಸ್ಯೆಗಳೆದುರಾದಾಗೆಲ್ಲ ಕದನವಿರಾಮ ಘೋಷಿಸಿ ತಟಸ್ಥರಾಗುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತೇವೆ. ಮುಂದಾಗುವ ಕಷ್ಟನಷ್ಟಗಳನ್ನೂ ಸಂಕೀರ್ಣಸಮಸ್ಯೆಗಳನ್ನೂ ಎದುರಿಸಲು ಹೆದರಿ ಯುದ್ಧದ ಉಸಾಬರಿಯೇ ಬೇಡ ಎನ್ನುವವರು ನಾವು. ಪರಿಪೂರ್ಣ ಆದರ್ಶ ಸ್ಥಿತಿ ಎಂಬುದು ಇಲ್ಲದ ಸಂದರ್ಭದಲ್ಲೂ ಸಮಸ್ಯೆಗಳಿಗೆ ಅತ್ಯುತ್ತಮವೆನ್ನಬಹುದಾದ ಪರಿಹಾರಗಳನ್ನು ಕಂಡುಕೊಳ್ಳುವುದು ಹೇಗೆಂಬುದನ್ನು ತಿಳಿಸಿಕೊಡುವ ಕೈಮರವೇ ಭಗವದ್ಗೀತೆ. 

ಕುರುಕ್ಷೇತ್ರ ಎಂಬುದು ಬದುಕಿನ ಅತ್ಯಂತ ಕೆಟ್ಟ, ಅತ್ಯಂತ ಸಂಕೀರ್ಣ ಸಮಸ್ಯೆಗಳ ಪ್ರತೀಕ. ಇಲ್ಲಿ ಶತ್ರುಗಳ ವಿರುದ್ಧ ಅಲ್ಲ – ಸ್ವಂತ ಸಂಬಂಧಿಗಳು ಮತ್ತು ಗುರುಗಳ ವಿರುದ್ಧವೇ ಕತ್ತಿ ಹಿರಿಯಬೇಕಾದ, ಬಿಲ್ಲು ಹೂಡಬೇಕಾದ ಪರಿಸ್ಥಿತಿ. ಆದರೆ, ಶಸ್ತ್ರಸಂನ್ಯಾಸ ಮಾಡಿಬಿಟ್ಟರೆ ಋಣಶಕ್ತಿಗಳಿಗೆ ವಿಜೃಂಭಿಸಲು ಅವಕಾಶ ಮಾಡಿಕೊಟ್ಟಂತೆ. ಎಲ್ಲಿ ಕರ್ಮಬದ್ಧರಾಗಬೇಕೋ ಅಲ್ಲಿ ಕೈಕಟ್ಟಿ ನಿರ್ವೀರ್ಯರಾದರೆ ದುಷ್ಟಶಕ್ತಿಗಳು ಮೇಲುಗೈ ಸಾಧಿಸುವುದು ಮಾತ್ರವಲ್ಲ; ಅವುಗಳ ಮೆರೆದಾಟದಿಂದ ಲೋಕ ಸರಿಪಡಿಸಲಾಗದ ದುರಂತಗಳಿಗೆ ದೀರ್ಘ‌ಕಾಲ ಈಡಾಗಬೇಕಾಗಬಹುದು. ಆದ್ದರಿಂದ ದುಷ್ಟರ ವಿರುದ್ಧ  ಕ್ಷಾತ್ರಪ್ರಭೆ ಮೆರೆಸಲೇಬೇಕು ಎಂಬ ಛಾತಿಯನ್ನು ಗೀತೆ ಮನುಷ್ಯನೊಳಗೆ ಹುಟ್ಟಿಸುತ್ತದೆ. ಬಾಳಿಗೆ ಬೆಳಕಾಗುವ ಇಂಥ ಇನ್ನೊಂದು ಕೃತಿ ಇಲ್ಲ.

ಡೇವಿಡ್‌ ಫ್ರಾಲಿಯವರ ಬಗ್ಗೆ…
ಡಾ. ಡೇವಿಡ್‌ ಫ್ರಾಲಿ ಅಮೆರಿಕದಲ್ಲಿ ಹುಟ್ಟಿಬೆಳೆದವರು. ಸನಾತನ ಧರ್ಮದತ್ತ ಆಕರ್ಷಿತರಾಗಿ, ಶ್ರೀ ಅರವಿಂದರ ಚಿಂತನೆಗಳಿಂದ ಪ್ರಭಾವಿತರಾಗಿ, ವೇದಾಧ್ಯಯನವನ್ನು ಭಾರತದ ಪ್ರಕಾಂಡ ಗುರುಗಳಿಂದ ಪಡೆದು, ಕೊನೆಗೆ ಸನಾತನ ಧರ್ಮವನ್ನು ಸ್ವೀಕರಿಸಿ ಹಿಂದೂ ಆದವರು. ಯೋಗ ಹಾಗೂ ಆಯುರ್ವೇದಗಳಲ್ಲಿ ಅಪಾರ ಜ್ಞಾನ ಸಂಪಾದಿಸಿರುವ ಡಾ. ಫ್ರಾಲಿ ಪಾಶ್ಚಾತ್ಯ ಜಗತ್ತಿನಲ್ಲಿ ಇವೆರಡೂ ವಿಷಯಗಳಲ್ಲಿ ವ್ಯಾಪಕವಾದ ಪ್ರಚಾರ ನಡೆಸುತ್ತಿರುವವರು ಕೂಡ. ವೇದ, ವೇದಾಂತ, ಯೋಗ, ಆಯುರ್ವೇದ, ಹಿಂದೂ ಧರ್ಮಗಳ ವಿಷಯದಲ್ಲಿ 30ಕ್ಕೂ ಹೆಚ್ಚು ಕೃತಿಗಳನ್ನು ಇವರು ಬರೆದಿದ್ದಾರೆ. ನಾನೇಕೆ ಹಿಂದೂವಾದೆ ಎಂಬುದು ಇವರ ಯೌವನದ ದಿನಗಳ ಆತ್ಮಕಥನದಂತಿದೆ. ಭಾರತ ಸರಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಗೌರವಿಸಿದೆ.

(ಕನ್ನಡದಲ್ಲಿ ಸಂಗ್ರಹ ರೂಪ : ಬ್ರಹ್ಮಪುತ್ರ)

ಆಚಾರ್ಯ ಡೇವಿಡ್‌ ಫ್ರಾಲಿ (ವಾಮದೇವ ಶಾಸ್ತ್ರಿ)

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day: ರಂಗದಿಂದಷ್ಟು ದೂರ…

World Theatre Day: ರಂಗದಿಂದಷ್ಟು ದೂರ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

Girish Kasaravalli: ತೆರೆ ಸರಿಯುವ ಮುನ್ನ…!

Girish Kasaravalli: ತೆರೆ ಸರಿಯುವ ಮುನ್ನ…!

Holi celebration: ಹೋಳಿ ಎಂಬ ಬಣ್ಣದೋಕುಳಿ!

Holi celebration: ಹೋಳಿ ಎಂಬ ಬಣ್ಣದೋಕುಳಿ!

13

World Sparrow Day: ಮತ್ತೆ ಮನೆಗೆ ಮರಳಲಿ ಗುಬ್ಬಚ್ಚಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.