ಕತ್ತಲಿನ ಬ್ರಿಟನ್ನಿನಲ್ಲಿ ಕ್ರಿಸ್‌ಮಸ್‌ ಬೆಳಕಿನ ಮಾಲೆ


Team Udayavani, Dec 23, 2018, 6:00 AM IST

3.jpg

ಹಗಲಿನಷ್ಟು ರಾತ್ರಿ, ಮತ್ತೆ ರಾತ್ರಿಯಷ್ಟು ಹಗಲು ಎಂದು ಕತ್ತಲೆ-ಬೆಳಕುಗಳ ಸಾಮರಸ್ಯದ ಅನುಭೂತಿ ನೀಡುವ ಊರುಗಳು, ಪ್ರದೇಶಗಳು ನಮಗೆ ನಿತ್ಯಪರಿಚಿತ. ಉಷ್ಣವಲಯದ ಯಾವ ಊರಿಗೇ ಹೋದರು ಹೀಗೇ. ಭೂಮಧ್ಯ ರೇಖೆಯಿಂದ ದೂರ ಹಾಗು ಧ್ರುವದ ಸಾಮೀಪ್ಯ ಹೊಂದಿದ ದೇಶಗಳಲ್ಲಿ  ಹಗಲು ಮತ್ತು ರಾತ್ರಿಗಳ ಅವಧಿಗಳ ಅನುಭವ ಹೀಗಲ್ಲ. ಇಂಗ್ಲೆಂಡ್‌ ಅಂತಹ ಒಂದು ದೇಶ. ಕತ್ತಲು-ಬೆಳಕುಗಳ ಅಸಮತೋಲನವೇ ಸತ್ಯ ಇಲ್ಲಿ. ನಿಸರ್ಗದ ಸತ್ಯದ ಸುತ್ತವೇ ಮನುಷ್ಯರ ನಿಯಮಗಳು ಕಟ್ಟಳೆಗಳು ನಂಬಿಕೆಗಳು. ಇಂಗ್ಲಂಡ್‌ ಅಲ್ಲಿ ಈಗ 24 ಗಂಟೆಗಳ ದಿನದ ಬಹುಭಾಗ ಕಗ್ಗತ್ತಲು, ತಣ್ಣಗೆ ಕೊರೆಯುವ ಗಾಳಿ  ಜೊತೆಗೆ ಕಡು ಚಳಿಯ ಒಣಸಂಭ್ರಮ ; ಎಲೆ ಉದುರಿದ ಮರಗಿಡಗಳ ವಿರಾಗ, ಇಬ್ಬನಿ ಬಿದ್ದು ಬಿಳಿಯಾದ ಹಸಿರು ಹುಲ್ಲು ಹಾಸು, ಕೈಯಿಂದ ಎಷ್ಟು ಸರಿಸಿದರೂ ಸರಿಯದ ತೆರೆಯದ ಮಂಜಿನ ಮುಸುಕು; ಭಾವಜೀವಿಗಳಿಗೆ ಕವಿಮನಸ್ಸುಗಳಿಗೆ ಕರಾವಳಿಯ ಮುಂಗಾರಿನ ಮಳೆದಿನಗಳಷ್ಟೇ ಹುಚ್ಚು ಹಿಡಿಸಬಲ್ಲ ಪ್ರಾಕೃತಿಕ ಗುಂಗು. ಮತ್ತೆ ಆಕಾಶದಲ್ಲಿ,ಇದ್ದಲ್ಲಿಂದ ಕದಲದ ಮಳೆಯಾಗಿಯೂ  ಸುರಿಯದ ಜಡ ನಿಬಿಡ  ಮೋಡಗಳು. ಬೆಳಿಗ್ಗೆ ಎಂಟಾದರೂ ಏಳದ  ಮತ್ತೆ ಸಂಜೆ ನಾಲ್ಕಕ್ಕೆ ಹೊದ್ದು ಮಲಗುವ ಆಲಸಿ ಸೂರ್ಯ. ಡಿ. 21ರವರೆಗೂ ದಿನವೂ ಕತ್ತಲೆಯ ಅವಧಿ ಹೆಚ್ಚಿ ದಿನದ ಅವಧಿ ಕುಗ್ಗುವ ನಿತ್ಯನೀರಸ ಚಿತ್ರ. ಡಿ. 21ಕ್ಕೆ ವರ್ಷದÇÉೇ ಅತ್ಯಂತ ಚಿಕ್ಕ ಹಗಲಿರುವ ದಿನ ಮತ್ತು ಅತ್ಯಂತ ಉದ್ದದ ರಾತ್ರಿ ಎನ್ನುವ ಹೆಗ್ಗುರುತಿದೆ. ಅದರ ಮರುದಿವಸದಿಂದ ಪ್ರತಿದಿನವೂ ನಿಮಿಷ ನಿಮಿಷಗಳಷ್ಟು ಬೆಳಕಿನ ಅವಧಿ ಹೆಚ್ಚುವುದರ ಆರಂಭ. ಇಂಗ್ಲಂಡ್‌ನ‌ ನಿಧಾನ- ಮೌನ- ಕತ್ತಲ ಅಂತರ್ಮುಖೀ ಗಳಿಗೆಯಲ್ಲಿ ವಿದ್ಯುತ್‌ ಸಂಚಾರ ನೀಡಲು ಹಬ್ಬವೊಂದು ಆಗಮಿಸಿದೆ. ಕತ್ತಲೆಯೊಡನೆ ಬೆಳಕು ಸೆಣಸುತ್ತ ಸಾಂಕೇತಿಕವಾಗಿ ಮೊದಲ ವಿಜಯವನ್ನು ಪಡೆಯುವ ದಿನಗಳÇÉೇ ಕ್ರಿಸ್‌ಮಸ್‌ ಎದುರಾಗಿದೆ. ನೀಳವಾದ ರಾತ್ರಿ, ಕರಗದ  ಚಳಿಯಲ್ಲಿ ಬೇಸತ್ತ ಆಂಗ್ಲರು ಕ್ರಿಸ್‌ಮಸ್‌ ಅನ್ನು ಬೆಳಕಿನ ಗೆಲುವು ಎಂದು ಕರೆದು ಖುಷಿಯಲ್ಲಿ ಸ್ವಾಗತಿಸುತ್ತಾರೆ. ಇಂಗ್ಲೆಂಡ್‌ನ‌ಲ್ಲಿ  ಕ್ರಿಸ್‌ಮಸ್‌ ಹಬ್ಬ ವರ್ಷದ ಇನ್ಯಾವುದೇ ಮಾಸದಲ್ಲಿ ಬಂದಿದ್ದರೆ ಇಷ್ಟೇ ಪ್ರೀತಿ-ಅಕ್ಕರೆ ಪಡೆಯುತ್ತಿತ್ತೋ ಇಲ್ಲವೋ ಎನ್ನುವುದು ನನ್ನ ಸಂಶಯ. ಸಕಲ ಜೀವಜಂತುಗಳ ಲವಲವಿಕೆಯನ್ನು ಕುಗ್ಗಿಸುವ, ಉತ್ಸಾಹವನ್ನು ಕಟ್ಟಿಹಾಕುವ ಹುನ್ನಾರವನ್ನು ಪ್ರಕೃತಿ ಹೆಣೆಯುತ್ತಿರುವಾಗಲೇ ಹಬ್ಬವೊಂದರ ಅಗತ್ಯ ಇರುವುದು. 

ಮನೆ-ಮನೆಗಳ ಗೋಡೆಗಳ ಮೇಲೆ ಚಕಪಕ ಹೊಳೆಯುವ, ಒಂದರ ಹಿಂದೆ ಇನ್ನೊಂದು ಓಡುವ ಸಾಲು ಸಾಲು ಬೆಳಕುಗಳ ಮಾಲೆ. ಹೆಗಲ ಮೇಲೆ ಚೀಲ ಹೊತ್ತು ಮೆತ್ತಗೆ ಗೋಡೆಯನ್ನು ಏರುತ್ತಿರುವ ಕೆಂಪು ಉಡುಪಿನ ಕ್ರಿಸ್‌ಮಸ್‌ ಅಜ್ಜ “ಸಾಂತಾ ಕ್ಲಾಸ್‌ ‘ ನ ಬೊಂಬೆ. ಸಂಜೆಯ ಹೊತ್ತಿಗೆ  ಕೆಲಮನೆಗಳ ಗೋಡೆಗಳ ಮೇಲೆ, ಹತ್ತುವ ಪ್ರಯತ್ನದಲ್ಲಿರುವ ಸಾಂತಾನ ಅನಿಮೇಷನ್‌ ಅನ್ನು ತೋರಿಸಲಾಗುತ್ತಿದೆ. ಈತ ನವೀನ ಯುಗದ ಡಿಜಿಟಲ್‌ ಸಾಂತಾ.   ರಸ್ತೆಯ ಬದಿಯ ದಾರಿದೀಪದ ಕಂಬಗಳ ತುದಿಗೆ ಕಟ್ಟಲಾಗಿರುವ ಬಣ್ಣ ಬಣ್ಣದ ಬೆಳಕುಗಳು. ಸಂಜೆಯ ಕಗ್ಗತ್ತಲೆಯ ಆಕಾಶದಿಂದ ಈಗ ತಾನೇ ಉದುರಿ ಬಿದ್ದ ನಕ್ಷತ್ರ-ಚಂದ್ರರು ತಾವೇ ಎನ್ನುವ ಮಾಡು-ಮುಚ್ಚಿಗೆಗಳಿಗೆ ಹಬ್ಬಿಸಿದ ದೀಪಾಲಂಕಾರಗಳು. ತಿಂಗಳ ಮೊದಲೇ ಮೈಮುಖ ಓರಣ ಮಾಡಿಕೊಂಡು ಸಜ್ಜಾಗಿರುವ ಅಂಗಡಿಗಳು. ಬಂಧುಗಳಿಗೆ ಗೆಳೆಯ-ಗೆಳತಿಯರಿಗೆ ಉಡುಗೊರೆ ಕೊಳ್ಳಲು ಅಂಗಡಿಗಳಲ್ಲಿ ಮೈಗೆ ಮೈ ಉಜ್ಜುವಷ್ಟು, ಒಬ್ಬರ ಮಾತು ಇನ್ನೊಬ್ಬರಿಗೆ ಕೇಳದಷ್ಟು ನೂಕು ನುಗ್ಗಲು. ಬ್ರಿಟನ್ನಿನ ಹಳೆಯ ಸಂಪ್ರದಾಯದ ಕೆಂಪುಬಣ್ಣದ  ಆಳೆತ್ತರದ ಟಪಾಲು ಡಬ್ಬಿಯ ಬಾಯಿಯ ತನಕವೂ ತುಂಬುವ ಶುಭ ಹಾರೈಕೆಯ ಪತ್ರಗಳು. ಸುತ್ತ ವಿದ್ಯುತ್‌ ದೀಪಗಳ ಸರ ಸುತ್ತಿಕೊಂಡು ಮನೆಮನೆಗಳಲ್ಲಿ ಧ್ಯಾನಕ್ಕೆ ನಿಂತ ಪ್ಲಾಸ್ಟಿಕ್‌ ಇಂದ ತಯಾರಾದ ಹಸಿರು ಬಣ್ಣದ ಕ್ರಿಸ್‌ಮಸ್‌ ಗಿಡ. ಗಾಳಿಯಲ್ಲಿಯೂ ಹಬ್ಬವನ್ನು ತುಂಬಿಸಲು ಕಚೇರಿಯ ಕ್ಯಾಂಟೀನ್‌ ಅಲ್ಲಿ ಕೇಳಿ ತೇಲಿ ಬರುತ್ತಿರುವ  ಮೆರಿ ಕ್ರಿಸ್‌ಮಸ್‌ ಕಿರುದನಿಯ ಹಾಡು. ಕಚೇರಿಯಲ್ಲಿ ಕಸಹೊಡೆಯುವವರಿಗೆ, ಕೆಲಸ ಮಾಡುವವರಿಗೆ ಉಡುಗೊರೆ ನೀಡಲು ವಂತಿಗೆ ಹಾಕುವ ಲಕೋಟೆಯೊಂದು ಮೇಜಿನಿಂದ ಮೇಜಿಗೆ ಓಡಾಡುತ್ತಿದೆ.   

ಫಾದರ್‌ ಕ್ರಿಸ್‌ಮಸ್‌
ಕೆಂಪು ಅಂಗಿ ತೊಟ್ಟು, ತಲೆ ಮೇಲೆ ನೇತಾಡುವ ಜುಟ್ಟಿನ  ಟೊಪ್ಪಿ ಇಟ್ಟು ಚೀಲ ಹಿಡಿದು ನಡೆದಾಡುವ ಮಕ್ಕಳು. ಮತ್ತೆ ಆ ಮಕ್ಕಳ ಕಿವಿ ತುಂಬುವ, ಕನಸಾಗಿ ಕಾಡುವ ಕ್ರಿಸ್‌ಮಸ್‌ ಅಜ್ಜನ ತರತರದ ಕತೆಗಳು. ಟರ್ಕಿಯ ಸೈಂಟ್‌ ನಿಕೊಲಸ್‌ ಎನ್ನುವ ಉದಾರಿ ಶ್ರೀಮಂತ ಅಥವಾ ಅವನಂಥವನೇ ಇನ್ನೊಬ್ಬ ಒಂದೊಂದು ಊರಲ್ಲಿ, ದೇಶದಲ್ಲಿ ಒಂದೊಂದು  ಹೆಸರಿನಿಂದ ಜನಜನಿತನಾಗಿ, ಮತ್ತೆ ಅಲ್ಲಲ್ಲೇ ಕತೆಯಾಗಿ ಹುಟ್ಟಿ ಬಾಯಿಯಿಂದ ಬಾಯಿಗೆ ಹಬ್ಬಿದ್ದು ; ಸೈಂಟ್‌ ನಿಕೊಲಸ್‌ ಕ್ರಿಸ್‌ಮಸ್‌ ಹಿಂದಿನ ರಾತ್ರಿ ಯಾರಿಗೂ ತಿಳಿಯದಂತೆ ಬಡವರ ಮನೆಯ ಮಾಡಿನ ಮೇಲಿರುವ ಹೊಗೆ ಕೊಳವೆಯಿಂದ ಹಣವನ್ನು ಹಾಕಿ ಸಹಾಯ ಮಾಡುತ್ತಿದ್ದದ್ದು, ಇಂಗ್ಲಂಡ್‌ ಅಲ್ಲಿ ಕ್ರಿಸ್‌ಮಸ್‌ ಅಜ್ಜ (ಆಂಗ್ಲರು ಕರೆಯುವ ಫಾದರ್‌ ಕ್ರಿಸ್‌ಮಸ್‌ ಅನ್ನು ನಾನು ಹೀಗೆ ಅನುವಾದಿಸುತ್ತೇನೆ), ಹಾಲೆಂಡಿನಲ್ಲಿ ಸಿಂಟರ್‌ ಕ್ಲಾಸ್‌, ಅಮೆರಿಕದಲ್ಲಿ ಸಾಂತಾ ಕ್ಲಾಸ್‌ ಎಂದು ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಸಿಕೊಳ್ಳುವ ಈ ದಯಾಮಯಿ ಮಾಯಾ ಅಜ್ಜಂದಿರು ಕೂಡ ಕ್ರಿಸ್‌ಮಸ್‌ ಹಿಂದಿನ ರಾತ್ರಿ ಯಾರಿಗೂ ತಿಳಿಯದಂತೆ ಉಡುಗೊರೆ-ಹಣವನ್ನು ಕೊಟ್ಟು ಹೋಗುವುದು; ಕ್ರಿಸ್‌ಮಸ್‌ ಅಜ್ಜನ ಹೆಸರಲ್ಲಿ ತಮ್ಮ ಹೆತ್ತವರು ಅಜ್ಜ-ಅಜ್ಜಿಯಂದಿರು ಮನೆಯಲ್ಲಿ ಹಿಂದಿನ ದಿನ ರಾತ್ರಿ ತಂದಿಟ್ಟ ಉಡುಗೊರೆಯ ಪೊಟ್ಟಣಗಳನ್ನು ಮಕ್ಕಳು ಕ್ರಿಸ್‌ಮಸ್‌ ದಿನ ಬೆಳಿಗ್ಗೆ ಬೇಗ ಎದ್ದು ಬಿಚ್ಚುವುದು- ಇವೆಲ್ಲ ಈ ವರ್ಷದ ಕ್ರಿಸ್‌ಮಸ್‌ ಅಲ್ಲೂ ಕಾಣಿಸುವ ಚಿತ್ರಗಳು ಕೇಳಿಸುವ ಕತೆಗಳು. 

ಅಮೆರಿಕದಿಂದ ಪ್ರಭಾವಿತವೆ?
ಜಗತ್ತಿನ ಎಲ್ಲೆಡೆ ಕ್ರಿಸ್‌ಮಸ್‌ ಆಚರಿಸಲ್ಪಡುವ ರೀತಿ ಅಮೆರಿಕದಿಂದ ತೀರ ಪ್ರಭಾವಿತ ಆಗಿದೆ ಎಂದು ಪ್ರತಿವರ್ಷದಂತೆ ಈ ವರ್ಷವೂ ಆಂಗ್ಲರು ಆಡಿಕೊಳ್ಳುತ್ತಿದ್ದಾರೆ. ಅದು ತಮ್ಮ ದೇಶದ ಸಾಂಪ್ರದಾಯಿಕ ಕ್ರಿಸ್‌ಮಸ್‌ ಆಜ್ಜನನ್ನು ಅಮೆರಿಕನ್ನರು ಸಾಂತಾ ಕ್ಲಾಸ್‌ ಎಂದು ಮರುನಾಮಕರಣ ಮಾಡಿದ್ದರ ಬಗ್ಗೆಯೂ ಹೌದು ಅಥವಾ ಇಂದು ಕೆಂಪು ಪೋಷಾಕಿನಲ್ಲಿ ಚಿತ್ರಿತಗೊಳ್ಳುವ ಸಾಂತಾ ಕ್ಲಾಸ್‌  ಮೊದಲು ಹಸಿರು ಪೋಷಾಕು ಧರಿಸುತ್ತಿದ್ದುದರ ಬಗ್ಗೆಯೂ ಇರಬಹುದು. 1930ರ ಸುಮಾರಿಗೆ ಅಮೆರಿಕದ ಕೋಕಾಕೋಲಾ ಕಂಪೆನಿ ಯೂರೋಪಿನ ಮಾರುಕಟ್ಟೆಯನ್ನು ಹೊಕ್ಕಲು ಮೊದಲ ಬಾರಿ ಕೆಂಪು ಉಡುಪಿನ ಸಾಂತಾ ಕ್ಲಾಸ್‌ ನನ್ನು ಜಾಹೀರಾತಿನಲ್ಲಿ ಬಳಸಿತು ಎಂದು ಇವರು ತಿಳಿಯುತ್ತಾರೆ. ಕೆಂಪು ಬಣ್ಣದ ಅಕ್ಷರಗಳು ಚಿತ್ರಗಳು  ಕೊಕಾಕೋಲಾ ಕಂಪೆನಿಯ ವ್ಯಾಪಾರೀ ಗುರುತು. ಯುರೋಪಿನಲ್ಲಿ ಕ್ರಿಸ್‌ಮಸ್‌ ಅಜ್ಜ ಅಥವಾ ‘ಸೈಂಟ್‌ ನಿಕೊಲಸ…’ ಅಥವಾ ಸಿಂಟರ್‌ ಕ್ಲಾಸ್‌  ಜನಪ್ರಿಯ ವ್ಯಕ್ತಿ ಅಥವಾ ಕತೆ. ಕೆಂಪು ಮತ್ತು ಕ್ರಿಸ್‌ಮಸ್‌ ಅಜ್ಜನನ್ನು ಜೊತೆ ಮಾಡಿ ಮಾರುಕಟ್ಟೆಯನ್ನು ಗೆದ್ದ ಕೊಕಾಕೋಲಾದ ತಂತ್ರವೇ ಇಂದಿನ ಕೆಂಪು ಪೋಷಾಕಿನ ಸಾಂತಾ ಕ್ಲಾಸ್‌ಗೆ ಕಾರಣ ಎಂದು ಆಡಿಕೊಳ್ಳುತ್ತಾರೆ. ಆಂಗ್ಲರಿಗೆ ಇದೊಂದು ಗಂಭೀರ ಚರ್ಚೆ ಅಲ್ಲ ; ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ಬಂದು ಹೋಗುವ ಒಂದು ಮಸುಕು ನೆನಪು ಅಥವಾ ತಮ್ಮ ಅಜ್ಜ-ಅಜ್ಜಿಯರಿಂದ  ಕೇಳಿ ತಿಳಿದ ಕತೆ. ಮಧ್ಯಾಹ್ನ ರೇಡಿಯೋ ಅಥವಾ ಟೀವಿಯನ್ನು ತಿರುಗಿಸಿದರೆ ಈ ವರುಷದ ಸಿಹಿ ಕಹಿಗಳನ್ನು, ಪ್ರಸ್ತುತ ರಾಜಕೀಯ ಆರ್ಥಿಕ ಸ್ಥಿತಿಗತಿಗಳನ್ನು ಮೆಲಕುಹಾಕುತ್ತ ಶುಭ ಹಾರೈಸುವ ರಾಣಿಯ ಎಲಿಜಬೆತ್‌ ಸಂದೇಶ ಕೇಳಿ ಬರುತ್ತದೆ. 

 ಹೊರ ಜಗತ್ತಿನ ಬದಲಾವಣೆಗಳಿಗೆ ಸ್ಪಂದಿಸಿ ದೇಹ-ಮನಸ್ಸುಗಳಿಗೆ ಅಕಾಲಕ್ಕೆ ಮುಪ್ಪು ಆವರಿಸಿ ಚಿಂತೆಗೆ ಹಚ್ಚುವ ದಿನಗಳಲ್ಲಿ ಹೊಸ ಭರವಸೆಯಂತೆ ಹಬ್ಬವೊಂದು ಬಂದಿದೆ. ಎಂದೋ ಬೇರೆಯಾದ ಮನಸ್ಸುಗಳ ಕಹಿ ಇಳಿಯುವುದಕ್ಕೂ, ದೂರ ಆದ ಪ್ರೇಮಿಗಳು ಹತ್ತಿರ ಬರುವುದಕ್ಕೂ ಡಿಸೆಂಬರ್‌ ಇಪ್ಪತ್ತೈದೇ ಮುಹೂರ್ತ ಆಗುವುದೂ ಇದೆ. ಅರವತ್ತು ವರ್ಷದ ನನ್ನ ಮ್ಯಾನೇಜರ್‌, ಕೆಲ ವರ್ಷದಿಂದ ಜೊತೆಯಲ್ಲಿ ವಾಸಿಸುತ್ತಿದ್ದ ಪ್ರೇಯಸಿಗೆ ಉಂಗುರ ಉಡುಗೊರೆ ನೀಡಿ ಮದುವೆಯಾಗುವೆಯಾ ಎಂದು ಬೇಡಿ ಕಾಡಿ ಒಪ್ಪಿಗೆ ಪಡೆದದ್ದೂ ಕ್ರಿಸ್‌ಮಸ್‌ ದಿನವೇ. ಹಬ್ಬಗಳು ಬ್ರಿಟನ್‌ ಅಲ್ಲಿ ಧಾರ್ಮಿಕ ಆಚರಣೆಗಳಾಗಿ ಉಳಿದಿಲ್ಲ, ಬೆರೆಯುವುದಕ್ಕೆ ಮರೆಯುವುದಕ್ಕೆ  ಸಂತೋಷ ಪಡುವುದಕ್ಕೆ ನೆಪ ಆಗಿದೆ. 

ಹದಿನಾರನೆಯ ಶತಮಾನದಲ್ಲಿ ರೋಮಿನ ಕ್ಯಾಥೊಲಿಕ್‌ ಚರ್ಚಿನಿಂದ ಬಂಡೆದ್ದು ಹೊರಬಂದು ಚರ್ಚ್‌ ಆಫ್ ಇಂಗ್ಲಂಡ್‌ ಅಥವಾ ಆಂಗ್ಲಿಕನ್‌ ಚರ್ಚ್‌ ಸ್ಥಾಪಿಸಿಕೊಂಡ ಆಂಗ್ಲರು  ಕಾಲಕ್ರಮೇಣ ಸಾಂಪ್ರದಾಯಿಕ ಚರ್ಚುಗಳ ಪ್ರಭಾವದಿಂದ ದೂರ ಆಗಿ¨ªಾರೆ. ಚರ್ಚಿಗೆ ನಿಯಮಿತವಾಗಿ ಹೋಗುವವರು ಅಥವಾ ಚರ್ಚಿನಲ್ಲಿ ಹಬ್ಬದ ಆಚರಣೆ ಮಾಡುವವರು ಇಲ್ಲಿ  15 ಪ್ರತಿಶತಕ್ಕಿಂತ ಕಡಿಮೆ ಜನರು ಎಂದು ಸಮೀಕ್ಷೆಗಳು ಹೇಳುತ್ತವೆ. ಕ್ರಿಸ್‌ಮಸ್‌ ಹಬ್ಬದ ಆಚರಣೆ ಮನೆಯಲ್ಲೇ ನಡೆಸುವುದು ಇವರು ಇಷ್ಟ ಪಡುತ್ತಾರೆ. 

ಕ್ರಿಸ್‌ಮಸ್‌ ನ ಆಚರಣೆ ಡಿಸೆಂಬರ 25ಕ್ಕೆ ಆದರೂ ಅದರ ಬಗಲಲ್ಲಿಯೇ ಇನ್ನೊಂದು ಮಹತ್ವದ ದಿನವೂ ಇದೆ. ಕ್ರಿಸ್‌ಮಸ್‌ನ ಮರುದಿನ  ಡಿಸೆಂಬರ್‌ 26ನ್ನು ಬಾಕ್ಸಿಂಗ್‌ ಡೇ ಎಂದು ಕರೆಯುತ್ತಾರೆ. ಇಲ್ಲಿ ಬಾಕ್ಸಿಂಗ್‌ ಎನ್ನುವುದರ ಅರ್ಥ ಗುದ್ದುವ ಕ್ರೀಡೆ ಎಂದಲ್ಲ ,ಬಾಕ್ಸ್‌ಗಳಲ್ಲಿ ಅಥವಾ ಪೆಟ್ಟಿಗೆಗಳಲ್ಲಿ ತುಂಬುವುದು ಎಂದರ್ಥ. ಕ್ರಿಸ್‌ಮಸ್‌ನ ಹಾಗೆಯೇ ಬಾಕ್ಸಿಂಗ್‌ ದಿನಕ್ಕೂ ದೇಶದಾದ್ಯಂತ ರಜೆ. ಹಬ್ಬದ ಲೆಕ್ಕದಲ್ಲಿ ಕ್ರಿಸ್‌ಮಸ್‌ ಹಾಗೂ ಬಾಕ್ಸಿಂಗ್‌ ದಿನಗಳು ಸಮಾನ ಪ್ರಾಮುಖ್ಯವನ್ನು ಪಡೆಯದಿದ್ದರೂ ರಜೆಯ ಲೆಕ್ಕದಲ್ಲಿ ಎರಡಕ್ಕೂ ಒಂದೇ ಮಹತ್ವ. ಅಥವಾ ಬಾಕ್ಸಿಂಗ್‌ ದಿನಕ್ಕಾಗಿಯೇ ಕಾಯುವ ಬಡವರಿಗೆ, ಕೆಲಸದಾಳುಗಳಿಗೆ ಬಹುಶಃ ಬಾಕ್ಸಿಂಗ್‌ ಡೇ, ಕ್ರಿಸ್‌ಮಸ್‌ಗಿಂತಲೂ ಹೆಚ್ಚು ಆಪ್ತ ಹಾಗೂ ಇಷ್ಟ ಇರಬಹುದು. ಬಾಕ್ಸಿಂಗ್‌ ಡೇಯ ದಿನ ಆಳುಗಳಿಗೆ, ಮನೆಕೆಲಸದವರಿಗೆ, ಬಡವರಿಗೆ ಬಾಕ್ಸ್‌ ಗಳಲ್ಲಿ ಉಡುಗೊರೆ ತುಂಬಿಸಿ ಕೊಡುವ ಕ್ರಮ ಇದೆ. ನನ್ನ ಕೆಲ ಆಂಗ್ಲ ಸ್ನೇಹಿತರು ಪ್ರತಿವರ್ಷವೂ ಬಾಕ್ಸಿಂಗ್‌ ಡೇ ಪ್ರಯುಕ್ತ ದೊಡ್ಡ ಪೆಟ್ಟಿಗೆಗಳನ್ನೂ ಒಟ್ಟುಮಾಡಿಕೊಂಡು ಪ್ರತಿ ಒಂದರಲ್ಲೂ ಒಂದಿಷ್ಟು ಹೊಸ ಬಟ್ಟೆ-ಚಪ್ಪಲಿ-ಹೊದಿಕೆಗಳಂತಹ ಉಪಯೋಗಿ ವಸ್ತುಗಳನ್ನು ತುಂಬಿಸಿ ಅಗತ್ಯ ಇರುವವರಿಗೆ ದಾನ ಮಾಡುತ್ತಾರೆ, ಇನ್ನು ಕೆಲವರು, ಬಡ ರಾಷ್ಟ್ರ ಎಂದು ಕರೆಸಿಕೊಳ್ಳುವ ಆಫ್ರಿಕಾದ ದೇಶಗಳಿಗೆ ಪೆಟ್ಟಿಗೆ ಪೂರ್ತಿ ಉಡುಗೊರೆಗಳನ್ನು ತುಂಬಿಸಿ ಹಡಗು ಹತ್ತಿಸುತ್ತಾರೆ.  

ವರುಷ ತುಂಬುತ್ತಿದ್ದಂತೆ ಹಕ್ಕಿಗಳು ವಲಸೆ ಹೋಗುವಂತೆ ಹಾರಿ ಹೋದ ಮಕ್ಕಳಿಗೂ, ಒಂಟಿಯಾಗಿ ಬದುಕುತ್ತಿರುವ ಅಪ್ಪ-ಅಮ್ಮಂದಿರಿಗೂ, ನೆನಪಿನ ಜೊತೆ ಬದುಕುತ್ತಿರುವ ಅಜ್ಜ-ಅಜ್ಜಿ ಯಂದಿರಿಗೂ, ವಿರಹಿ-ವಿಯೋಗಿಗಳಿಗೂ ಕ್ರಿಸ್‌ಮಸ್‌ ಎಂದರೆ ಶುಭ ಪ್ರತೀಕ್ಷೆಯ ದಿನ. 

ಯೋಗೀಂದ್ರ ಮರವಂತೆ

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.