ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ


Team Udayavani, Dec 23, 2018, 6:00 AM IST

11.jpg

ಪರಿಸರ ರಕ್ಷಣೆಯ ಪಾಠಶಾಲೆಯಲ್ಲಿಯೇ ಆರಂಭವಾಗದಿದ್ದರೆ ಸ್ವಚ್ಛ ಭಾರತದ ಕನಸು ಸಾಕಾರಗೊಳ್ಳುವುದು ಹೇಗೆ?

ಏನಾದರೂ ಆಟ ಆಡಿಸಿ ಅಂಕಲ್‌’ ಎಂದು ನಮ್ಮ ತೋಟಕ್ಕೆ ನಗರದಿಂದ ಬಂದ ಆ ಮಕ್ಕಳು ಒತ್ತಾಯಿಸಿದರು. ಆಟದ ಬದಲು ಒಂದು ಸ್ಪರ್ಧೆ ನಡೆಸಲು ನಾವು ನಿರ್ಧರಿಸಿದೆವು. ಸ್ಪರ್ಧೆ ಏನೆಂದರೆ, ಇಲ್ಲಿಂದ ನೂರು ಮೀಟರ್‌ ಸುತ್ತಮುತ್ತ ಓಡಾಡಿ ಐದು ಐಟಮ್‌ಗಳನ್ನು ಹೆಕ್ಕಿ ತರಬೇಕು. ಹದಿನೈದು ನಿಮಿಷದೊಳಗೆ ತರಬೇಕು. “ಏನೇನು ಐಟಮ್‌?’ ಹತ್ತಾರು ಕಂಠಗಳಿಂದ ತಕ್ಷಣ ಏಕಕಾಲಕ್ಕೆ ಆ ಪ್ರಶ್ನೆ ತೂರಿ ಬಂತು.

“ಜೀವಿಗಳು ಬಿಟ್ಟು ಹೋದ ಕುರುಹುಗಳನ್ನು ತರಬೇಕು’. ಮಕ್ಕಳಿಗೆ ಮೊದಲು ಅರ್ಥ ಆಗಲಿಲ್ಲ. ಪುಟ್ಟ ವಿವರಣೆ ಕೊಡಬೇಕಾಯಿತು. ಕುರಿಹಿಕ್ಕೆ, ಹಕ್ಕಿಪುಕ್ಕ ಇಂಥವೇ ಐದು ಬೇರೆ ಬೇರೆ ಐಟಮ್ಮುಗಳು. ಐದೂ ಬೇರೆ ಬೇರೆ ಜೀವಿಗಳದ್ದೇ ಆಗಿರಬೇಕು. 
ಅಷ್ಟು ಹೇಳಿದ್ದೇ ತಡ, “ಗೊತ್ತಾಯ್ತು ಬಿಡಿ’ ಎಂದು ಎಲ್ಲ ಮಕ್ಕಳೂ ಸ್ಟ್ರೆಕರ್‌ ಪೆಟ್ಟು ತಿಂದ ಕೇರಂ ಬಿಲ್ಲೆಗಳಂತೆ ಸುತ್ತೆಲ್ಲ ದಿಕ್ಕಿಗೆ ಚದುರಿದವು. ಐದು ನಿಮಿಷಗಳವರೆಗೆ ನೀರವ ಶಾಂತಿ. ಆಮೇಲೆ ಮಕ್ಕಳ ಉತ್ಸಾಹದ ಕೂಗಾಟ. “ಸಿಕೂ… ಇನ್ನೊಂದ್‌ ಹುಡುಕೂ… ಓ ಮೂರನೇಯದು… ಮರದ ಮೇಲಿನದು ಆದೀತಾ ಅಂಕಲ್‌? ನಾನು ಹುಡಕಿದ್ದನ್ನು ಇವಳು ಎತ್ತಿಕೊಂಡ್ಲು…. ಮುಟ್‌ಬೇಡ್ವೇ ಹಾವಿನ ಪೊರೆ… ಇನ್ನು ಐದು ನಿಮಿಷ ಟೈಮ್‌ ಜಾಸ್ತಿ ಬೇಕು ಅಂಕಲ್‌… ಐದಕ್ಕಿಂತ ಜಾಸ್ತಿ ಐಟಮ್‌ ತರಬಹುದಾ…?’ ಗಲಾಟೆಯೋ ಗಲಾಟೆ.   

ಅರ್ಧಗಂಟೆಯ ನಂತರ ನಮ್ಮೆದುರು ಎಷ್ಟೊಂದು ಜೈವಿಕ ವಸ್ತುಗಳ ವೈವಿಧ್ಯಮಯ ರಾಶಿಯೇ ಬಂದು ಬಿದ್ದಿತ್ತು. ನಮ್ಮ ತೋಟದಲ್ಲಿ ಕುರಿಹಿಕ್ಕೆ ಇರಲಿಲ್ಲ. ಹಾಗಾಗಿ, ಅದೊಂದು ಐಟಮ್‌ ಬಿಟ್ಟು ಇಪ್ಪತ್ತಕ್ಕೂ ಹೆಚ್ಚು ವಸ್ತುಗಳು ಬಂದಿದ್ದವು. ನಮಗೇ ಗೊತ್ತಿರದಿದ್ದ ವಸ್ತುಗಳೂ ಇದ್ದವು. ಒಬ್ಬ ಹುಡುಗಿ ಹುಷಾರಾಗಿ, ಇರುವೆಗಳು ನೇಯ್ದಿದ್ದ ಜೇಡರ ಬಲೆಯಂಥ ಜಾಳಿಗೆಯನ್ನೂ ತಂದಿದ್ದಳು. ನಗರದ ಮಕ್ಕಳಾಗಿದ್ದರೂ ಆ ಅರ್ಧ ಗಂಟೆಯಲ್ಲಿ ಅವರಲ್ಲಿ ಜಾಗೃತವಾಗಿದ್ದ ನಿಸರ್ಗಪ್ರಜ್ಞೆ, ಶೋಧಬುದ್ಧಿ, ಸುಪ್ತ ಕೌಶಲ ಏನೆಲ್ಲ ಈಗ ಮಾತಿನಲ್ಲಿ ತರ್ಕದಲ್ಲಿ  ಪ್ರಕಟವಾಗಿದ್ದವು. ಒಂದೊಂದು ಮಗುವೂ ಆ ಕ್ಷಣದ ಶೆರ್ಲಾಕ್‌ ಹೋಮ್ಸ್‌ ಆಗಿತ್ತು. ಅವರಿಗೆ ಗೊತ್ತಿಲ್ಲದ ಎರೆಹುಳುವಿನ ಕೊಳವೆ, ಮಿನುಗು ಬಣ್ಣದ ಬೀಟ್ಲ ಕವಚ, ಬಾವಲಿ ಹಿಕ್ಕೆಯಂಥ ಕೆಲವು ವಸ್ತುಗಳ ಬಗ್ಗೆ ನಾವು ವಿವರಣೆ ಕೊಡುತ್ತ ಹೋದಂತೆ ಅವೆಲ್ಲ ಹೊಸ ಹೊಸ ಕಥೆಗಳಾಗಿ ರೂಪುಗೊಂಡವು. ಅವೆೆಲ್ಲವೂ ಶಾಲಾ ಪಠ್ಯಗಳಲ್ಲಿ ಸಿಗದ ಹೊಸ ಪಾಠವೇ ಆಗಿದ್ದವು. ನಮಗೂ!

ಗ್ರೀಕ್‌ ಪುರಾಣದಲ್ಲಿ ಗೇಯಾ ದೇವಿಯ ಬಹು ಸುಂದರ ಚಿತ್ರಣ ಬರುತ್ತದೆ. ಗೇಯಾ ಎಂದರೆ ಭೂಮಾತೆ. ಅವಳ ನರ್ತನವನ್ನು ಭಕ್ತಿಭಾವದಿಂದ ನೋಡುತ್ತ ಹೋದಂತೆ ಅವಳು ತನ್ನ ಹೊದಿಕೆಗಳನ್ನು ಇಷ್ಟಿಷ್ಟೇ ತೆರೆಯುತ್ತ ಸತ್ಯದರ್ಶನ ಮಾಡಿಸುತ್ತ ಹೋಗುತ್ತಾಳೆ. ನಿಸರ್ಗವನ್ನು ಕೌತುಕದ ದೃಷ್ಟಿಯಿಂದ ನೋಡುವವರಿಗೆ ಪುರಾಣದ ಪರಿಕಲ್ಪನೆ ಇಂದಿಗೂ ನಿಜವೆಂದೇ ತೋರುತ್ತದೆ. ಪ್ರಕೃತಿಯೇ ಗುರುವಿನ ಸ್ಥಾನದಲ್ಲಿ ನಿಂತು ನಮ್ಮ ಕೈಹಿಡಿದು ತನ್ನನ್ನು ಪರಿಚಯಿಸುತ್ತ ಹೋಗುವಂತೆನಿಸುತ್ತದೆ. ನಿಸರ್ಗದ ಒಡನಾಟ ಇದ್ದವರಿಗೆ ಪರಿಸರದ ಪ್ರತ್ಯೇಕ ಶಿಕ್ಷಣ ಬೇಕಾಗಿಯೇ ಇಲ್ಲ. ಆದರೆ, ಇಂದು ಪ್ರಕೃತಿಯ ಮಡಿಲಲ್ಲೇ ಶಾಲೆ ಓದುತ್ತಿರುವ ಮಕ್ಕಳಿಗೂ ಅಕ್ಕಪಕ್ಕದ ಗಿಡಮರಗಳ ಹೆಸರು ಗೊತ್ತಿರುವುದಿಲ್ಲ. ಏಕೆಂದರೆ, ಅವರ ಪಠ್ಯಗಳಲ್ಲಿ ಬರುವ ವಿಷಯಗಳಿಗೂ ಅಕ್ಕಪಕ್ಕದ ಪರಿಸರಕ್ಕೂ ತಾಳಮೇಳ ಇರುವುದಿಲ್ಲ. ಮಕ್ಕಳನ್ನು ಪ್ರಕೃತಿ ದರ್ಶನಕ್ಕೆ ಕರೆದೊಯ್ಯಲು ಶಿಕ್ಷಕರಿಗೂ ಬಿಡುವು ಇರುವುದಿಲ್ಲ. ಇಂಗ್ಲಿಷ್‌ ಮಾಧ್ಯಮದಲ್ಲಿ ಓದುವ ಮಕ್ಕಳನ್ನಂತೂ ಕೇಳುವುದೇ ಬೇಡ. ಶಾಲೆಯ ಆವರಣದ ಪಕ್ಕದಲ್ಲೇ ನೆಲ್ಲಿ ಮರ ಇದ್ದರೂ ಪಠ್ಯದಲ್ಲಿ ಗೂಸ್‌ ಬೆರಿ ಎಂಬ ಪದ ಇದ್ದರೂ ಶಿಕ್ಷಕರಿಗೆ ಅದರ ಪರಿಚಯ ಇರುವುದಿಲ್ಲ. 

ಹೀಗೇಕಾಯಿತು? ಇಂದು ನಮ್ಮ ದೇಶ ಎಂದರೆ ಅತ್ಯಂತ ಕೊಳಕು ದೇಶ; ನಮ್ಮ ಬೀದಿ, ನದಿ, ಬೆಟ್ಟ, ಕಣಿವೆ ಎಲ್ಲಿ ನೋಡಿದರೂ ಕೊಳಕು. ಗಂಗಾನದಿಯನ್ನು ಸ್ವತ್ಛಗೊಳಿಸಲು ಒಂದೂವರೆ ಸಾವಿರ ಕೋಟಿ ವೆಚ್ಚ ಮಾಡಿದ ನಂತರವೂ ಕೈಸೋತು ಹೈರಾಣಾಗಿದೆ ಸರಕಾರ. ಜಲಮಾಲಿನ್ಯ, ನೆಲ ಮಾಲಿನ್ಯ, ವಾಯುಮಾಲಿನ್ಯ, ತಾಪಮಾಲಿನ್ಯ- ವಿಜ್ಞಾನಿಗಳ ಪದಕೋಶದಲ್ಲಿ ಸಿಗುವ ಎಲ್ಲ ಬಗೆಯ ಮಾಲಿನ್ಯಗಳೂ ಇಲ್ಲಿ ಹೇರಳವಾಗಿವೆ. ಹೀಗಾಗಬಾರದಿತ್ತು. ಏಕೆಂದರೆ, ನಿಸರ್ಗದೊಂದಿಗೆ ಗಾಢ ಸಂಬಂಧವನ್ನಿಟ್ಟುಕೊಂಡೇ ರೂಪುಗೊಂಡ ಸಂಸ್ಕೃತಿ ನಮ್ಮದು. ನಿಸರ್ಗದಲ್ಲಿ ಮಾಲಿನ್ಯ ಎಂಬ ಪದವೇ ಇಲ್ಲ. ಏಕೆಂದರೆ ಅಲ್ಲಿ ತ್ಯಾಜ್ಯ ಎಂಬ ಪದವೇ ಇಲ್ಲ. 

ದೇಸೀ ಪರಂಪರೆಯಲ್ಲಿ ಪರಿಸರ ಜ್ಞಾನ
ನಮ್ಮ ಪರಂಪರೆಯಲ್ಲಿ ಐದಾರು ಸಾವಿರ ವರ್ಷಗಳ ಮೌಖೀಕ ಮತ್ತು ಲಿಖೀತ ಇತಿಹಾಸವಿದೆ. ಋಗ್ವೇದ ಕಾಲದಿಂದಲೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಅಸಂಖ್ಯ ಶ್ಲೋಕಗಳು, ಮಂತ್ರಗಳು, ಕಥಾನಕಗಳು ಅಷ್ಟೇ ಯಾಕೆ ಶಿಲಾಶಾಸನಗಳೂ ನಮ್ಮ ಸಂಸ್ಕೃತಿ ಪರಂಪರೆಯಲ್ಲಿ ಹಾಸು ಹೊಕ್ಕಾಗಿವೆ. ಕವಿಗಳು, ಕಲಾವಿದರು, ಋಷಿಮುನಿಗಳು, ಅರಣ್ಯ, ನದಿ, ಕೆರೆ, ಪರ್ವತ ಹಾಗೂ ಮೃಗಪಕ್ಷಿಗಳೇ ಮುಂತಾದ ಭೌಗೋಲಿಕ ವಿವರಗಳನ್ನು ವಿವಿಧ ಮಾಧ್ಯಮಗಳ ಮೂಲಕ ಸಾದರಪಡಿಸುತ್ತಲೇ ಬಂದಿದ್ದಾರೆ. ಪರಿಸರದ ಮಹತ್ವದ ಘಟಕಗಳೆನಿಸಿದ ನೆಲ, ನೀರು, ಗಾಳಿ, ಅಗ್ನಿ ಮತ್ತು ಆಕಾಶಗಳನ್ನು ಪಂಚಭೂತಗಳೆಂದು ಗುರುತಿಸಿ ಅವು ನಮ್ಮ ದೇಹಾರೋಗ್ಯವನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಯೋಗ ಮತ್ತು ಆಯುರ್ವೇದದ ಮೂಲಕ ಸುಸಂಸ್ಕೃತರ ಮನೆಮನೆಗೆ ತಲುಪುವಂತೆ ಮಾಡಿದ್ದಾರೆ. ದೇಗುಲಗಳ ಆಸುಪಾಸುಗಳಲ್ಲಿ ಪವಿತ್ರ ವನಗಳನ್ನು ನಿರ್ಮಿಸಿ ಆಲ, ಅಶ್ವತ್ಥ, ಬಿಲ್ವ, ತುಳಸಿ, ಶಮೀವೃಕ್ಷವೇ ಮುಂತಾದ ಗಿಡಮರಗಳನ್ನು ಪೋಷಿಸುವ ಸಂಪ್ರದಾಯ ಬೆಳೆದು ಬಂತು. ಅಥವಾ ಅಂಥ ಪುರಾತನ ವೃಕ್ಷಗಳ ಆಸುಪಾಸಿನಲ್ಲೇ ಪೂಜಾತಾಣಗಳನ್ನು ಸ್ಥಾಪಿಸಲಾಯಿತು. ಮನುಷ್ಯರ ಹಸ್ತಕ್ಷೇಪವಿಲ್ಲದ ನಾಗಬನ, ಪುಷ್ಕರಿಣಿಗಳಂಥ ಸ್ಥಳಗಳು ಅಲ್ಲಲ್ಲಿ ಇಂದಿಗೂ ಅಪರೂಪದ ಜೀವಧಾಮವಾಗಿ ಉಳಿದುಬಂದಿವೆ. ಅವುಗಳ ಸಂರಕ್ಷಣೆಗೆ ಕಾನೂನುಗಳೇನೂ ಇಲ್ಲದಿದ್ದರೂ ಪುರಾಣಗಳಲ್ಲಿ, ಮಹಾಕಾವ್ಯಗಳಲ್ಲಿ, ದಾಸವಾಣಿಯಲ್ಲಿ, ವಚನಗಳಲ್ಲಿ ಹಾಸುಹೊಕ್ಕಾಗಿರುವ ಸೂಕ್ತಿಗಳೇ ಅವಕ್ಕೆ ರಕ್ಷಾ ಕವಚವಾಗಿ ಭಾರತೀಯ ಸುಸಂಸ್ಕೃತ ಪರಂಪರೆಯಲ್ಲಿ ಪರಿಸರಪ್ರಜ್ಞೆ ಮತ್ತೆ ಮತ್ತೆ ವ್ಯಕ್ತವಾಗುತ್ತಲೇ ಬಂದಿದೆ. ಇತ್ತ ಲಕ್ಷಾಂತರ ವರ್ಷಗಳ ಇತಿಹಾಸವಿರುವ ಮೂಲನಿವಾಸಿಗಳೂ ನಿಸರ್ಗದೊಂದಿಗೆ ಏಗಬೇಕಾದ ಅನಿವಾರ್ಯತೆಯಿಂದಾಗಿ ತಮ್ಮ ಸುತ್ತಲಿನ ಪರಿಸರದ ಜ್ಞಾನ ವನ್ನು ಮೌಖೀಕ ಪರಂಪರೆಯ ಮೂಲಕ ಪೀಳಿಗೆಯಿಂದ ಪೀಳಿಗೆಗೆ ದಾಟಿಸುತ್ತಲೇ ಬಂದಿದ್ದಾರೆ. ಆಯುರ್ವೇದಕ್ಕೆ ಪರ್ಯಾಯವಾಗಿ ನಾಟಿವೈದ್ಯ ಕುಟುಂಬಗಳು ತಲೆತಲಾಂತರದಿಂದ ಅನೇಕ ಬಗೆಯ ಗಿಡಮೂಲಿಕೆಗಳನ್ನು ಕಾಪಾಡಿಕೊಂಡು ಬಂದಿವೆ. ನಿಸರ್ಗದ ಮಹಾನ್‌ ಶಕ್ತಿಗಳೊಂದಿಗೆ ಏಗಬೇಕಾದ ಸಂದರ್ಭದಲ್ಲಿ ಆದರಿಸುತ್ತ, ಅವುಗಳನ್ನು ನಿಯಂತ್ರಿಸಲಾಗದ ಸಂದರ್ಭದಲ್ಲಿ ಆರಾಧಿಸುತ್ತ ಬಂದವರ ಸುದೀರ್ಘ‌ ಪರಂಪರೆಯೇ ಇಲ್ಲಿದೆ. ಪರಿಸರ ಶಿಕ್ಷಣಕ್ಕೆ ಬೇಕಾದ ಭದ್ರ ಬುನಾದಿ ನಮ್ಮಲ್ಲಿದೆ.

ದೂರ ಸರಿದವರಿಂದ ಸಮಸ್ಯೆ
ಆದರೆ, ಸಮಸ್ಯೆ ಏನೆಂದರೆ ಇಂದಿನ ಪರಿಸರ ಸಮಸ್ಯೆಗಳೆಲ್ಲ ಪ್ರಕೃತಿಯಿಂದ ದೂರ ದೂರ ಹೋದವರಿಂದಾಗಿಯೇ ಸೃಷ್ಟಿಯಾಗುತ್ತಿವೆ. ಅವರಿಗೆ ನಿಸರ್ಗ ತಂತಾನೆ ಯಾವ ಪಾಠವನ್ನೂ ಹೇಳಲಾರದು. ಮೇಲಾಗಿ ನಾವು ಆಯ್ಕೆ ಮಾಡಿಕೊಂಡ ಅಭಿವೃದ್ಧಿ ಪಥದಲ್ಲಿ ಸುಸ್ಥಿರತೆಯ ಅಂಶ ಮೊದಲಿನ ಐವತ್ತು ವರ್ಷಗಳಲ್ಲಂತೂ ಇರಲಿಲ್ಲ. ಇತರ ಸುಧಾರಿತ ದೇಶಗಳೊಂದಿಗೆ ಹೆಗಲೆಣೆಯಾಗಿ ನಾವೂ ಪ್ರಗತಿ ಸಾಧಿಸಬೇಕೆಂಬ ಪೈಪೋಟಿಯಲ್ಲಿ ನಾನಾ ಬಗೆಯ ಕೃತಕ ವಸ್ತುಗಳ ಬಳಕೆ ಹೆಚ್ಚುತ್ತದೆ. ನಾನಾ ಬಗೆಯ ಮಾಲಿನ್ಯಗಳು ಸೃಷ್ಟಿಯಾಗುತ್ತವೆ. ಗಾಂಧೀಜಿಯವರೇನೋ “ಈ ಭೂಮಿ ಎಲ್ಲರ ಆಸೆಗಳನ್ನೂ ಪೂರೈಸಬಲ್ಲದು, ಎಲ್ಲರ ದುರಾಸೆಗಳನ್ನಲ್ಲ’ ಎಂದು ಹೇಳಿದರು. ಆದರೆ, ಆಸೆಗಳಿಗೆ ಮಿತಿ ಹಾಕಿಕೊಳ್ಳುವಂತೆ, ಇತರ ಜೀವಿಗಳ ಬದುಕಿನ ಹಕ್ಕನ್ನು ಕೀಳದಂತೆ, ನಾಳಿನ ಜನಾಂಗದ ಬದುಕಿನ ನೆಮ್ಮದಿಯನ್ನು ಕಸಿಯದಂತೆ ಇಂದಿನವರಿಗೆ ಮನವರಿಕೆ ಮಾಡಿಕೊಡುವುದು ಸುಲಭವೇನಲ್ಲ. ಪ್ರಕೃತಿ ಪರಿಸರದಿಂದ ದೂರವಾದವರಿಗೆ ಬೇರೆಯದೇ ಶಿಕ್ಷಣ ಬೇಕಾಗುತ್ತದೆ. ಕಲಿಕೆಯ ಹಂತದಲ್ಲಿ ಸಿಗುವ ಪಾಠದಲ್ಲೂ ಅಂಥ ಶಿಕ್ಷಣ ಸಿಗುವುದಿಲ್ಲ. ಅದು ಕಲಿತು ಮುಗಿಯಿತೆಂದೂ ಅಲ್ಲ. ಪ್ರತಿ ವೃತ್ತಿಯವರಿಗೂ ಪ್ರತಿವಯಸ್ಸಿನವರಿಗೂ ಮತ್ತೆ ಮತ್ತೆ ಕೊಡುತ್ತಲೇ ಇರಬೇಕಾದ ಶಿಕ್ಷಣ ಅದು. ಪರಿಸರ ವಿಜ್ಞಾನದಲ್ಲೇ ಪದವಿ, ಸಂಶೋಧನೆ ಮಾಡಿದವರಿಗೂ ಮತ್ತೆ ಮತ್ತೆ ಆ ಶಿಕ್ಷಣ ಬೇಕಾಗುತ್ತದೆ.

ಇದಕ್ಕೆ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡಬಹುದು. ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಾವು ಕಂಡಕಂಡಲ್ಲಿ ಗುಡ್ಡೆ ಹಾಕಿ, ಬೇಕೆಂದಾಗ ಕಡ್ಡಿ ಗೀರಿ ಸುಟ್ಟು ಹೊಗೆ ಹಾಯಿಸುತ್ತೇವೆ. ಅದರಲ್ಲಿ ನಾನಾ ಕಾಯಿಲೆಗಳನ್ನು, ಬೊಜ್ಜುತನ, ಸಕ್ಕರೆ ಕಾಯಿಲೆ, ಬಂಜೆತನ ಮತ್ತು ಕ್ಯಾನ್ಸರ್‌ ತರುವಂಥ ಫ್ಯೂರಾನ್‌, ಡಯಾಕ್ಸಿನ್‌ ಮತ್ತು ಬಿಸ್‌ಫಿನೈಲ್‌-ಬಿ ಎಂಬಂಥ ಘಾತುಕ ವಿಷಗಳು ಹೊಮ್ಮುತ್ತವೆ ಎಂಬುದಕ್ಕೆ ಎಷ್ಟೊಂದು ಸಂಶೋಧನೆ ನಡೆದಿವೆ. ಸುಧಾರಿತ ದೇಶಗಳಲ್ಲಿ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್‌ ಸುಡುವುದನ್ನು ನಿಷೇಧಿಸಲಾಗಿದೆ. ನಮ್ಮಲ್ಲೂ ಅದು ಅಪರಾಧವೆಂದು 1980ರ ಕಾಯಿದೆಯಲ್ಲೇ ಹೇಳಲಾಗಿದೆ. ನಮ್ಮಲ್ಲಿ ಬೆಂಕಿ ಕೊಡುವ ಪೌರ ಕಾರ್ಮಿಕರೇನೊ ಅಶಿಕ್ಷಿತರು ಒಪ್ಪೋಣ. ಆದರೆ, ನಿತ್ಯವೂ ಅದನ್ನು ನೋಡುತ್ತ ಕಚೇರಿಗೆ ಹೋಗಿ ಬರುವ ವಿಜ್ಞಾನಿಗಳು, ದೇಶವಿದೇಶಗಳನ್ನು ಸುತ್ತಿಬಂದ ಮಾಲಿನ್ಯ ನಿಯಂತ್ರಣ ಮಂಡಲಿಯ ಅಧಿಕಾರಿಗಳು, ನಗರಸಭೆಯ ವೈದ್ಯಾಧಿಕಾರಿಗಳು, ಹೈಟೆಕ್‌ ಆಸ್ಪತ್ರೆಗಳ ತಜ್ಞರು, ಪೊಲೀಸ್‌ ಅಧಿಕಾರಿಗಳು, ವಕೀಲರು, ಪತ್ರಕರ್ತರು, ನ್ಯಾಯಾಧೀಶರು ಯಾರೊಬ್ಬರಿಗೂ ಈ ಹೊಗೆಯ ವಿಷದ ವಿಷಯ ಗೊತ್ತಿಲ್ಲವೆ? ಮಾಲಿನ್ಯ ನಿಯಂತ್ರಣ ಪರಿಣತರಿಗೂ ಗೊತ್ತಿಲ್ಲ. ಏಕೆಂದರೆ, ಕಳೆದ ಐದಾರು ವರ್ಷಗಳಲ್ಲಿ ಹೊಸ ಹೊಸ ಬಗೆಯ ಪ್ಲಾಸ್ಟಿಕ್‌, ಸ್ಟೆರೊಫೋಮ್‌ಗಳು ಬರುತ್ತಿವೆ. ಅವುಗಳ ದುರ್ಲಕ್ಷಣಗಳ ಬಗ್ಗೆ ವಿಜ್ಞಾನ, ವೈದ್ಯಕೀಯ ಪತ್ರಿಕೆಗಳಲ್ಲಿ ಮಾತ್ರ ಬರುತ್ತದೆ. ಇತರರಿಗಂತೂ ಪ್ಲಾಸ್ಟಿಕ್‌ ಹೊಗೆಯಿಂದ ವಿಷ ಹೊಮ್ಮುತ್ತದೆ ಎಂಬುದೇ ಗೊತ್ತಿರುವುದಿಲ್ಲ. ಹೊಸ ಹೊಸ ಸಾಮಗ್ರಿಗಳು ಬಂದಂತೆಲ್ಲ ಅದರ ಜೊತೆಗೆ ಬರಬೇಕಾದ ಹೊಸ ಹೊಸ ಎಚ್ಚರಿಕೆಗಳು ಹೇಗೋ ಫಿಲ್ಟರ್‌ ಆಗಿಬಿಡುತ್ತವೆ. ಇಲ್ಲಿಗೆ ಬರುವುದೇ ಇಲ್ಲ. 

ಈ ಸಾರ್ವತ್ರಿಕ ಅಶಿಕ್ಷಣದ ಪರಿಣಾಮವಾಗಿಯೇ ಭಾರತ ದೇಶ ಒಂದು ಸುರಿಹೊಂಡವಾಗುತ್ತಿದೆ. ಬೇರೆ ದೇಶಗಳಲ್ಲಿ ನಿಷೇಧಿಸಲಾದ ದ್ರವ್ಯಗಳೆಲ್ಲ ನಮ್ಮಲ್ಲಿಗೆ ಬಿಡುಬೀಸಾಗಿ ಬರುತ್ತವೆ. ಅಮೆರಿಕದಲ್ಲಿ ತಯಾರಾಗುವ ಎನಾಮೆಲ್‌ ಬಣ್ಣಗಳಲ್ಲಿ ಅಪಾಯಕಾರಿ ಸೀಸದ ಅಂಶ ಇಲ್ಲದಂತೆ ನೋಡಿಕೊಳ್ಳುವ ಕಂಪೆನಿಯೇ ನಮ್ಮ ದೇಶದ ತನ್ನ ಫ್ಯಾಕ್ಟರಿಯಲ್ಲಿ ತಯಾರಾಗುವ ಬಣ್ಣಗಳಿಗೆ ಸಲೀಸಾಗಿ ಸೀಸವನ್ನು ಸೇರಿಸುತ್ತದೆ. ಸಾಬೂನುಗಳಲ್ಲಿ ರಂಜಕದ ಅಂಶ ಸೇರ್ಪಡೆ ಮಾಡುವುದರಿಂದಾಗಿಯೇ ಕೆರೆಗಳಲ್ಲಿ ಜೊಂಡು ಕಳೆ ಬೆಳೆಯುತ್ತದೆ ಎಂದು ಗೊತ್ತಾದ ಮೇಲೆ ವಿದೇಶಗಳಲ್ಲಿ ರಂಜಕರಹಿತ ಸಾಬೂನನ್ನು ತಯಾರಿಸುವ ಕಂಪೆನಿ ನಮ್ಮ ದೇಶದಲ್ಲಿ ಢಾಳಾಗಿ ರಂಜಕವನ್ನು ಸೇರಿಸುತ್ತಿದೆ. ಎಂಡೋಸಲ್ಫಾನ್‌ ಕತೆಯೂ ಅಷ್ಟೆ; ಜೇನ್ನೊಣಗಳ ಮಾರಣಹೋಮ ಮಾಡುವ ನಿಕೊಟಿನೈಡ್‌ ಕೀಟನಾಶಕದ ಕತೆಯೂ ಅಷ್ಟೆ. ವಿದೇಶಗಳಲ್ಲಿ ನಿಷಿದ್ಧವಾಗಿದ್ದರೂ ನಮ್ಮಲ್ಲಿ ಬಳಕೆಯಲ್ಲಿದೆ. ಕೃಷಿ ವಿಜ್ಞಾನಿಗಳಲ್ಲೂ ಎಲ್ಲರಿಗೂ ಈ ವಿಷಯ ಗೊತ್ತಿಲ್ಲ. ಎಂಟಮಾಲಜಿಸ್ಟ್‌ ಗೆ ಮಾತ್ರ ಗೊತ್ತಿರುತ್ತದೆ. ಅದರಲ್ಲೂ ಕೀಟಗಳನ್ನು ಕೊಲ್ಲುವ ವಿಷದ ಬಗ್ಗೆ ಮಾತ್ರ ಅವರಿಗೆ ಗೊತ್ತೇ ವಿನಾ ಮನುಷ್ಯರನ್ನೂ ಅದು ಕೊಲ್ಲುತ್ತದೆ ಎಂದಾಗ ಅದು ಅವರ ವ್ಯಾಪ್ತಿಗೆ ಬರುವುದಿಲ್ಲ. ಮನುಷ್ಯರು ಡಾಕ್ಟರ್‌ ಬಳಿಗೇ ಹೋಗಬೇಕು. ಅದರಲ್ಲೂ ಕ್ಯಾನ್ಸರ್‌ ತಜ್ಞರಿಗೆ ಕಿಡ್ನಿ ಊತದ ಬಗ್ಗೆ ಪರಿಣತಿ ಇಲ್ಲ. ಕಿಡ್ನಿ ತಜ್ಞರು ಎಂಡೊಕ್ರೈನಲ್‌ ಅಪಾಯದ ಬಗ್ಗೆ ಮಾತನಾಡುವುದಿಲ್ಲ. ಗೊತ್ತಿದ್ದರೂ ಕೃಷಿವಿಷಗಳ ಬಗ್ಗೆ ಅವರು ಮಾತನಾಡುವಂತಿಲ್ಲ. ನಿಸರ್ಗದ ವ್ಯವಸ್ಥೆಯನ್ನು ಸಮಗ್ರ ದೃಷ್ಟಿಕೋನ ದಿಂದ ನೋಡುವ ಬದಲು ನಾವು ಕಕ್ಷೆಗಳಾಗಿ, ಕವಾಟಗಳಾಗಿ ವಿಭಜಿಸಿ ನೋಡುತ್ತೇವಲ್ಲ; ತುಂಡು ತುಂಡಾಗಿ ಜ್ಞಾನಾರ್ಜನೆ ಮಾಡುತ್ತೇವಲ್ಲ!

ಕ್ಲಾಸ್‌ರೂಮ್‌ನಲ್ಲಿ ಪರಿಸರ ಶಿಕ್ಷಣ
ದೇಶದ ವಿದ್ಯಾರ್ಥಿಗಳಿಗೆಲ್ಲ ಪರಿಸರ ಜ್ಞಾನವನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದು ನಮ್ಮವರೇ ಆದ ನ್ಯಾಯಮೂರ್ತಿ ಸಂತೋಷ್‌ ಹೆಗಡೆಯವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ರಾಗಿದ್ದಾಗ ಆದೇಶ ನೀಡಿದ್ದರು ನಿಜ. ಅದು ಎಲ್ಲೂ ಉದ್ದೇಶಿತ ಸ್ವರೂಪದಲ್ಲಿ ಜಾರಿಗೆ ಬಂದಿಲ್ಲ ಎನ್ನುವುದೂ ಅಷ್ಟೇ ನಿಜ. ಏಕೆಂದರೆ, ಅಷ್ಟೊಂದು ಮಂದಿ ಶಿಕ್ಷಕರೇ ನಮ್ಮಲ್ಲಿಲ್ಲ. ಪರಿಸರ ಶಿಕ್ಷಕರೆಂಬ ಪ್ರವರ್ಗವೇ ನಮ್ಮಲ್ಲಿಲ್ಲ. ದೈಹಿಕ ಶಿಕ್ಷಕರೊ, ವಾಣಿಜ್ಯ ಶಿಕ್ಷಕರೊ, ಚರಿತ್ರ ಶಿಕ್ಷಕರೊ ಅದನ್ನು ಕಲಿಸಲು ಸಾಧ್ಯವಿಲ್ಲ. ಅಷ್ಟೇಕೆ, ಪರಿಸರ ಶಿಕ್ಷಕರೆಂದೇ ಹೊಸಬರನ್ನು ಸೃಷ್ಟಿ ಮಾಡಿದರೂ ಅಂಥವರಿಗೆ ಪ್ರತಿವರ್ಷ ಹೊಸದಾಗಿ ಶಿಕ್ಷಣ ಕೊಡಬೇಕಾಗುತ್ತದೆ. ಅದನ್ನು ಯಾರು ಕೊಡಬೇಕು?

ಈ ಸಮಸ್ಯೆಯನ್ನು ಕೆಲಮಟ್ಟಿಗೆ ಪರಿಹರಿಸಲು ಒಂದು ಉಪಾಯವಿದೆ: ಪರಿಸರ ಎಂಬುದನ್ನು ಒಂದು ಪ್ರತ್ಯೇಕ ವಿಷಯವಾಗಿ ಬೋಧಿಸಬೇಕೆಂಬ ಅಸಂಗತ ಪರಿಕಲ್ಪನೆಯನ್ನು ಬದಿಗೊತ್ತಬೇಕು. ಅದಕ್ಕೆಂದು ಯುಜಿಸಿ ಸಿದ್ಧಪಡಿಸಿದ ಪಠ್ಯಕ್ರಮವನ್ನೂ ಪಠ್ಯಪುಸ್ತಕಗಳನ್ನೂ ಬದಿಗೊತ್ತಬೇಕು. ಅದರ ಬದಲು ಈಗ ಬೋಧಿಸಲಾಗುತ್ತಿರುವ ವಿಷಯಗಳಲ್ಲೇ (ರಾಜ್ಯಶಾಸ್ತ್ರ, ಅರ್ಥಶಾಸ್ತ್ರ , ರಸಾಯನ ವಿಜ್ಞಾನ, ಗಣಿತ, ಸಂಖ್ಯಾವಿಜ್ಞಾನ, ಭೌತವಿಜ್ಞಾನ, ಇಂಗ್ಲಿಷ್‌, ನ್ಯಾಯಶಾಸ್ತ್ರ, ಹಿಂದಿ, ಕನ್ನಡ, ಭೂವಿಜ್ಞಾನ, ವಾಣಿಜ್ಯ ಇತ್ಯಾದಿಗಳಲ್ಲೇ) ಪರಿಸರಕ್ಕೆ ಸಂಬಂಧಿಸಿದ ಆಯಾಮಗಳನ್ನು, ಉದಾಹರಣೆಗಳನ್ನು ಸೇರ್ಪಡೆ ಮಾಡಬೇಕು. 

ಏಕೆಂದರೆ, ಬದುಕಿನ ಪ್ರತಿಯೊಂದು ಆಯಾಮದಲ್ಲೂ, ಜ್ಞಾನದ ಪ್ರತಿಯೊಂದು ಶಾಖೆಯಲ್ಲೂ ಪರಿಸರದ ವಿಷಯ ಬಂದೇ ಬರುತ್ತದೆ. ಉದಾಹರಣೆಗೆ ಆಗ್ರಾದಲ್ಲಿ ಉದ್ಯಮಗಳು ಕಲ್ಲಿದ್ದಲಿನ ಹೊಗೆಯನ್ನು ಹೊಮ್ಮಿಸುತ್ತಿರುವುದರಿಂದ ಆಮ್ಲ ಮಳೆ ಸುರಿದು ತಾಜಮಹಲ್‌ನ ಅಮೃತಶಿಲೆಯ ಮೇಲೆ ಮೈಲಿಕಲೆಗಳನ್ನು ಉಂಟುಮಾಡಿ ಈ ವಾಸ್ತುಶಿಲ್ಪದ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ ಎಂಬ ಕಾರಣದಿಂದಾಗಿ ಆಗ್ರಾದ ಎಲ್ಲ ಕಾರ್ಖಾನೆಗಳನ್ನು ದೂರ ಸಾಗಿಸಬೇಕು ಅಥವಾ ಸ್ಥಗಿತಗೊಳಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತು. ಆಗ್ರಾದ ವಾಣಿಜ್ಯ ಚಟುವಟಿಕೆಗಳಿಗೆ ಧಕ್ಕೆ ಬರುತ್ತದೆಂದೂ ಸಾವಿರಾರು ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುತ್ತಾರೆಂದೂ ವಾದಿಸಿ, ನ್ಯಾಯಾಲಯದ ಆಜ್ಞೆಯನ್ನು ವಿರೋಧಿಸಿ ರಾಜಕೀಯ ಶಕ್ತಿಗಳು ಬಲವಾದ ಹೋರಾಟ ನಡೆಸಿದವು. ಜ್ಞಾನದ ಎಲ್ಲ ಶಾಖೆಗಳಲ್ಲೂ, -ಕೊನೆಗೆ ಗಣಿತ ಮತ್ತು ಸಂಖ್ಯಾವಿಜ್ಞಾನದಲ್ಲೂ ಈ ಉದಾಹರಣೆಯನ್ನು ಪಾಠವಾಗಿ ಬೋಧಿಸಲು ಸಾಧ್ಯವಿದೆ. ಪಠ್ಯಪುಸ್ತಕಗಳನ್ನು ಬರೆಯುವ ತಜ್ಞರಿಗೆ ಕಾಲಕಾಲಕ್ಕೆ ಇಂಥ ಪರಿಸರ ವಿಷಯಗಳ ತರಬೇತಿ ಕಾರ್ಯಾಗಾರಗಳನ್ನು ನಡೆಸಬೇಕಾಗುತ್ತದೆ.

ಸಮಸ್ಯೆ ಎಲ್ಲಿದೆ ಎಂದರೆ, ಮಕ್ಕಳು ಪಾಠಗಳ ಮೂಲಕ ಕೇಳಿ ಕಲಿಯುವುಕ್ಕಿಂತ ಹೆಚ್ಚಾಗಿ ದೊಡ್ಡವರನ್ನು ನೋಡಿ ಕಲಿಯುತ್ತಾರೆ. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಬಾರದು ಎಂದು ಪಠ್ಯಪುಸ್ತಕದಲ್ಲಿ ಬರೆದಿದ್ದರೂ ಬೀದಿಯುದ್ದಕ್ಕೂ ದೊಡ್ಡವರು ಬಿಸಾಕಿದ ತಿಪ್ಪೆಯನ್ನು ನೋಡುತ್ತಿರುತ್ತಾರೆ. ಅದು ಮನುಷ್ಯರ ಸಹಜ ಕ್ರಿಯೆ ಎಂಬ ಮನೋಭಾವ ಮೂಡುತ್ತದೆ. ಅವರೂ ಹಾಗೇ ಮಾಡತೊಡಗಿದರೆ ಮಕ್ಕಳಲ್ಲಿ ಮೂಡಬೇಕಾದ ಪ್ರಜ್ಞೆ ಅಲ್ಲಲ್ಲೇ ಕಮರಿ ಹೋಗುತ್ತಿರುತ್ತದೆ. ಚರಂಡಿಯ ರಂಧ್ರವೆಲ್ಲ ಕಟ್ಟಿಕೊಂಡು ಕೊಳಕು ನೀರು ಎಲ್ಲೆಂದರಲ್ಲಿ ಹರಿಯುತ್ತಿದ್ದರೆ ಅಥವಾ ಪೌರ ಕಾರ್ಮಿಕರು ಅಲ್ಲಲ್ಲಿ ಕಸವನ್ನು ಒಟ್ಟುಹಾಕಿ ಅದಕ್ಕೆ ಬೆಂಕಿ ಕೊಟ್ಟು ಸುತ್ತೆಲ್ಲ ದುರ್ವಾಸನೆ ಹಬ್ಬಿದ್ದರೆ, ಅಥವಾ ಬೀದಿಯಲ್ಲಿ ಧ್ವನಿವರ್ಧಕ ಜೋರಾಗಿ ಕಿರುಚುತ್ತಿದ್ದರೆ ಅದು ನಾಗರಿಕ ಜೀವನದ ಸಹಜ ಚರ್ಯೆ ಎಂದೇ ಮಗು ಭಾವಿಸುತ್ತದೆ. ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯವೇ ಮುಂತಾದವೆಲ್ಲ ಅದಕ್ಕೆ ಪರೀಕ್ಷೆಗಾಗಿ ಬಾಯಿಪಾಠ ಮಾಡಬೇಕಾದ ವಿಷಯವಾಗಿ ಮಾತ್ರ ಕಾಣುತ್ತದೆ. ಹಾಗಾಗಿ ಮಕ್ಕಳಿಗೆ ಪರಿಸರ ಶಿಕ್ಷಣ ನೀಡುವಷ್ಟೇ ಆದ್ಯತೆಯ ಮೇಲೆ ದೊಡ್ಡವರಿಗೂ ನೀಡಬೇಕಾಗುತ್ತದೆ. ಎಲ್ಲ ವಯಸ್ಸಿನ ಎಲ್ಲ ಬಗೆಯ ಉದ್ಯೋಗ ಮಾಡುವವರಲ್ಲಿ ಪರಿಸರಪ್ರಜ್ಞೆ ಮೂಡಿದಲ್ಲಿ ಮಾತ್ರ ಮಕ್ಕಳಿಗೆ ಶಿಕ್ಷಣ ನೀಡುವುದು ಸಾರ್ಥಕವಾಗುತ್ತದೆ. 

ಶುಚಿತ್ವದ ಮಾದರಿಗಳ ಅಭಾವ
ಅವರಿವರನ್ನು ನೋಡಿ ಕಲಿಯುವ ಪ್ರವೃತ್ತಿ ದೊಡ್ಡವರಲ್ಲಿಯೂ ಇರುತ್ತದೆ; ಆದರೆ ನಮ್ಮಲ್ಲಿ ಶುಚಿತ್ವದ ಸಾರ್ವಜನಿಕ ಮಾದರಿಗಳು ತೀರಾ ಕಡಿಮೆ. ಕಟ್ಟುನಿಟ್ಟಿನ ದ್ವಾರಪಾಲಕರಿರುವ ರಾಜಭವನದಲ್ಲೋ ಮಿಲಿಟರಿ ಮೈದಾನದಲ್ಲೋ ವಿಮಾನ ನಿಲ್ದಾಣದಲ್ಲೋ ಸಪ್ತತಾರಾ ಹೊಟೇಲ್‌ಗ‌ಳಲ್ಲೋ ಸಚಿವರ ಬಂಗಲೆಗಳಲ್ಲೋ ಇನ್‌ಫೋಸಿಸ್‌ ಆವರಣದಲ್ಲೋ ಅಂಥ ಶಿಸ್ತನ್ನು ನೋಡಬಹುದು. ನಮ್ಮ ಕಬ್ಬನ್‌ ಪಾರ್ಕ್‌, ಬೃಂದಾವನ ಉದ್ಯಾನದಂಥ ಬಹಿರಂಗ ತಾಣಗಳಲ್ಲಿ ಕೂಡ ಗಲೀಜಿನ, ಹೊಣೆಗೇಡಿಯಾಗಿ ವರ್ತಿಸುವವರೇ ಬೆಂಗಳೂರಿನ ಮೆಟ್ರೋ ಸ್ಟೇಶನ್ನಿನಲ್ಲಿ ತುಂಬ ಶಿಸ್ತಾಗಿ ವ್ಯವಹರಿಸುತ್ತಾರೆ. ಶುಚಿತ್ವದ ಅಂಥ ಮಾದರಿಯೇ ಇಲ್ಲದಿರುವ ತಾಣಗಳಲ್ಲಿ ಉದಾ: ದೂರದ ಕಾಡಂಚಿನಲ್ಲಿ ಮೋಜು-ಮಸ್ತಿ ಮಾಡುವವರು, ಬೇಟೆಗಾರರು, ತ್ಯಾಜ್ಯಗಳನ್ನು ಅಲ್ಲಲ್ಲೇ ಹಳ್ಳಕ್ಕೆ ಸುರಿಯುವ ಗಣಿಮಾಲಿಕರು, ಕೆರೆಕೊಳ್ಳಗಳನ್ನು ಆಕ್ರಮಿಸಿ ರೆಸಾರ್ಟ್‌ ನಡೆಸುವವರು, ಅರಣ್ಯಭೂಮಿಯನ್ನು ಅತಿಕ್ರಮಣ ಮಾಡುವ ರೈತರು, ಕಾರ್ಖಾನೆಗಳ ಘೋರಮಾಲಿನ್ಯಗಳನ್ನು ಕದ್ದುಮುಚ್ಚಿ ನೆಲದೊಳಕ್ಕೆ ಹೂಳುವ ಉದ್ಯಮಿಗಳು, ಅಂಥ ಕೃತ್ಯಗಳ ಮೇಲೆ ನಿಗಾ ಇಡಬೇಕಾದ ಕಾವಲು ಪಡೆಯವರು- ಇವರೆಲ್ಲರಿಗೆ ಪರಿಸರ ಶಿಕ್ಷಣವನ್ನು ಕೊಡುವುದು ಹೇಗೆ? ಪರಿಸರ ವಿಜ್ಞಾನವನ್ನೇ ಮುಖ್ಯ ವಿಷಯವನ್ನಾಗಿ ಪದವಿ ಮುಗಿಸಿ ದೊಡ್ಡ ಹುದ್ದೆಯನ್ನೇರಿ ಕೂತಿದ್ದರೂ ಪರಿಸರ ರಕ್ಷಣೆಯೊಂದನ್ನು ಬಿಟ್ಟು ಇತರೆಲ್ಲ ಕೃತ್ಯಗಳಲ್ಲಿ ತೊಡಗಿದವರಿದ್ದಾರೆ. ಅಂಥವರನ್ನು ಸರಿಪಡಿಸುವುದು ಹೇಗೆ? 

ಸಮಗ್ರ ಶಿಕ್ಷಣ, ಜೀವನ ಶಿಕ್ಷಣ
ಇಷ್ಟಕ್ಕೂ ಪರಿಸರ ಶಿಕ್ಷಣ ಪಡೆಯದೆ ತಾವೇ ಪರಿಸರ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆದ ಅದೆಷ್ಟೋ ಗಣ್ಯರು ನಮ್ಮೆದುರು ಇ¨ªಾರೆ. ಆಯುರ್ವೇದ ವೈದ್ಯನಾಗಿದ್ದ ರಾಜೇಂದ್ರ ಸಿಂಗ್‌ ರಾಜಸ್ತಾನದ ಬರಪೀಡಿತ ಹಳ್ಳಿಗಳಲ್ಲಿ ಸುತ್ತುತ್ತ ಮಳೆನೀರನ್ನು ಇಂಗಿಸುವ ಕೆಲಸವನ್ನು ದೀಕ್ಷೆಯೆಂಬಂತೆ ಕೈಗೊಂಡು ಅಲ್ಲಿನ ಮೂರು ನದಿಗಳಿಗೆ ಮರುಜನ್ಮವಿತ್ತು ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದುದು ನಮಗೆ ಗೊತ್ತು. ಸಮಾಜವಿಜ್ಞಾನದ  ಡಾಕ್ಟರೇಟ್‌ ಪಡೆದ ಬಿಹಾರದ ಬಿಂದೇಶ್ವರ ಪಾಠಕ್‌ ಜನಸಾಮಾನ್ಯರಿಗೆ ಶೌಚಾಲಯ ಕಟ್ಟಿಸುವುದನ್ನು ಸುಲಭ್‌ ಶೌಚಾಲಯ ಎಂಬ ರಾಷ್ಟ್ರಮಟ್ಟದ ಕಾರ್ಯಾಚರಣೆಯನ್ನಾಗಿಸಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದು ನಮಗೆ ಗೊತ್ತು. ಸಿನೆಮಾ ನಟ ಅಮಿರ್‌ ಖಾನ್‌ “ಸತ್ಯಮೇವ ಜಯತೆ’ ಸರಣಿ ಟಿವಿ ಕಾರ್ಯಕ್ರಮಗಳ ಮೂಲಕ ಅನೇಕ ಅತ್ಯುತ್ತಮ ಪಾಠಗಳನ್ನು ಜನತೆಗೆ ಕೊಟ್ಟಿದ್ದಲ್ಲದೆ ಪಾನಿ ಫೌಂಡೇಶನ್‌ ಮೂಲಕ ಮಹಾರಾಷ್ಟ್ರದ ನೂರಕ್ಕೂ ಹೆಚ್ಚು ಹಳ್ಳಿಗಳ ಜನರು ಸರಕಾರಿ ಧನಸಹಾಯವಿಲ್ಲದೆ ಸ್ವಪ್ರೇರಣೆಯಿಂದ ಮಳೆಕೊಯ್ಲಿನ ವ್ಯವಸ್ಥೆ ಮಾಡಿಕೊಂಡು ಬರಗಾಲವನ್ನು ಮೆಟ್ಟಿ ನಿಂತ ಉದಾಹರಣೆ ನಮ್ಮೆದುರು ಇದೆ. ನ್ಯೂಕ್ಲಿಯರ್‌ ಫಿಸಿಕ್ಸ್‌ನಲ್ಲಿ ಡಾಕ್ಟರೇಟ್‌ ಪಡೆದು, ಡೆಹ್ರಾಡೂನ್‌ನಲ್ಲಿ ಸುಣ್ಣದ ಗಣಿಗಾರಿಕೆಯ ವಿರುದ್ಧ ದಾವೆ ಹೂಡಿ ಗೆದ್ದು, ನಂತರ ನಮ್ಮದಾಗಿದ್ದ ಬೇವು, ಬಾಸ್ಮತಿಗಳ ಪೇಟೆಂಟ್‌ ಹಕ್ಕುಗಳನ್ನು ಲಪಟಾಯಿಸಹೊರಟ ವಿದೇಶೀ ಕಂಪೆನಿಗಳ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಹೋರಾಡಿ ಗೆದ್ದು ಆಮೇಲೆ ಕೃಷಿವಿಷಗಳನ್ನು ಮಾರುವ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ಸೆಣಸುತ್ತ ರೈಟ್‌ ಲೈವಿಹುಡ್‌ ಪ್ರಶಸ್ತಿ, ಸಿಡ್ನಿ ಶಾಂತಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಡಾ. ವಂದನಾ ಶಿವ ನಮಗೆ ಗೊತ್ತು. ಆ ಡೆಹ್ರಾಡೂನ್‌ ಖಟ್ಲೆಯಲ್ಲಿ ಅವರಿಗೆ ಕಾನೂನು ನೆರವು ನೀಡಿದ್ದ ಎಮ್‌. ಸಿ. ಮೆಹ್ತಾ ಆಮೇಲೆ ಸ್ವತಃ ತಾವಾಗಿ ಅನೇಕ ಪರಿಸರ ವಿರೋಧಿ ಕೃತ್ಯಗಳನ್ನು ಕೋರ್ಟಿನ ಕಟ್ಟೆಗೆ ತಂದು ನ್ಯಾಯ ಒದಗಿಸಿ, ಅವರೂ ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿರುವುದು ನಮಗೆ ಗೊತ್ತು. 

ಪರಿಸರ ಶಿಕ್ಷಣ ಎಂದರೆ ಸಮಗ್ರ ಶಿಕ್ಷಣ, ಜೀವನ ಶಿಕ್ಷಣ. ಅದು ಕ್ಲಾಸ್‌ರೂಮ್‌ನಲ್ಲೇ ಸಿಗಬೇಕಿಲ್ಲ. ಶಿಕ್ಷಕರೇ ಅದನ್ನು ಪಾಠ ಮಾಡಬೇಕಂತಲೂ ಇಲ್ಲ. ಬೀದಿ ಗುಡಿಸುತ್ತಿದ್ದ, ಶೌಚಾಲಯವನ್ನು ಕೈಯಾರೆ ಚೊಕ್ಕಟಗೊಳಿಸುತ್ತಿದ್ದ ವ್ಯಕ್ತಿಯೊಬ್ಬ ಬೇರೆ ಯಾವ ದೇಶದಲ್ಲೂ ರಾಷ್ಟ್ರಪಿತನ ಸ್ಥಾನಕ್ಕೆ ಏರಿದ್ದಿಲ್ಲ. ನಮಗೆ ಬೇಕಿದ್ದ ಮಾದರಿಗಳಿಗಾಗಿ ನಾವು ದೂರ ಎಲ್ಲೂ ಹೋಗಬೇಕಾಗಿಲ್ಲ. 

ನಾಗೇಶ ಹೆಗಡೆ

ಟಾಪ್ ನ್ಯೂಸ್

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Road Trip: ಎಲ್ಲಿಗೋ ಪಯಣ… ಯಾವುದೋ ದಾರಿ!

Holidays: ಹ್ಯಾಪಿ ಹಾಲಿಡೇಸ್‌!

Holidays: ಹ್ಯಾಪಿ ಹಾಲಿಡೇಸ್‌!

5

ಅರಳುವ ಹೂವುಗಳೆ ಆಲಿಸಿರಿ: ಪರ್ಸೆಂಟೇಜಿಗಿಂತ ಬದುಕು ದೊಡ್ಡದು!

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

Moryar gudda: ಬಂಡೆಗಳ ಮೇಲೆ ಬೆರಗಿನ ಮನೆಗಳು! 

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.