ರಾಜಕಾರಣ ವಿನಾಕಾರಣ


Team Udayavani, Mar 17, 2019, 12:30 AM IST

dda.jpg

ಆ ಮಾತನ್ನು ಅದ್ಯಾರು ಹೇಳಿದರೋ ಗೊತ್ತಿಲ್ಲ. ಆದರೆ ಆ ಮಾತಂತೂ ಅಕ್ಷರಶಃ ಸತ್ಯ. ಕ್ರಿಕೆಟ್‌, ಸಿನಿಮಾ, ರಾಜಕೀಯವಿಲ್ಲದ ಭಾರತವನ್ನು ಊಹಿಸಲೂ ಸಾಧ್ಯವಿಲ್ಲ. ಅದೆಷ್ಟೋ ಪರದೇಶಗಳಲ್ಲಿ ಈ ಮೂರಕ್ಕೂ ಅಷ್ಟೊಂದು ಪ್ರಾಮುಖ್ಯವಿಲ್ಲ. ಆದರೆ, ಈ ಮೂರೂ ಇಲ್ಲದ ಭಾರತದ ಜನಜೀವನ ಮಾತ್ರ ವರ್ಣನೆಗೂ ಎಟುಕದ್ದು! ಸಾಧನೆ, ವಿವಾದ, ಯೋಗ್ಯ, ಅಯೋಗ್ಯ, ಆರೋಪ, ಅಪರಾಧ, ಅಭಿಮಾನಿ ಬಳಗ, ಕೋರ್ಟು, ಜೈಲು, ನಿಗೂಢ, ಸಂಪತ್ತು, ಪ್ರಸಿದ್ಧಿತನ, ಆಶ್ವಾಸನೆ… ಹೀಗೆ ಹೆಚ್ಚಿನ ಪದಗಳೊಂದಿಗೆ ಈ ಮೂರೂ ಕ್ಷೇತ್ರಗಳಿಗೆ ಅದೇನೋ ಬಿಡಿಸಲಾರದ ನಂಟು. ಹಾಗೆಯೇ ಈ ಮೂರೂ ಕ್ಷೇತ್ರಗಳೂ ನಮ್ಮ ಸುದ್ದಿಪತ್ರಿಕೆ, ದೃಶ್ಯಮಾಧ್ಯಮಗಳೂ ಅಲ್ಲದೇ ಸಾಮಾಜಿಕ ಜಾಲತಾಣಗಳನ್ನೂ ಹಿಡಿದಿಟ್ಟುಕೊಂಡಿರುವುದು ಕೂಡ ಅಷ್ಟೇ ಸತ್ಯ. ಅದರಲ್ಲೂ ರಾಜಕೀಯದ್ದು ಬಹುಮುಖ್ಯ ಪಾರುಪತ್ಯ. ಕ್ರಿಕೆಟ್‌ ನಡೆಯುವ ಕಾಲಕ್ಕಾದರೆ, ಸಿನಿಮಾ ಯಶಸ್ಸಿನ ಕೆಲಕಾಲಕ್ಕೆ ಮಾತ್ರ ಸುದ್ದಿಗೆ ಸೀಮಿತ. ಆದರೆ, ರಾಜಕೀಯ ಹಾಗಲ್ಲ, ಅದು ನಿತ್ಯನಿರಂತರ. ಅಷ್ಟೇ ಅಲ್ಲ, ರಾಜಕೀಯವು ಸಿನಿಮಾ ಮತ್ತು ಕ್ರಿಕೆಟ್ಟಿನ ಜನಪ್ರಿಯರನ್ನು ತನ್ನತ್ತ ಸೆಳೆದುಕೊಂಡಿದೆಯೇ ಹೊರತು ತನ್ನಿಂದ ಯಾರನ್ನೂ ಯಾವತ್ತೂ ಹೊರಗೆ ಬಿಟ್ಟುಕೊಟ್ಟಿಲ್ಲ!

ರಾಜಕೀಯ ಎಂದಾಕ್ಷಣ ನಮಗೆ ನೆನಪಾಗುವ ಒಂದು ಕ್ಲಾಸಿಕ್‌ ಜೋಕು ಹೀಗಿದೆ: ಭಾರತದ ಮಂತ್ರಿಯೊಬ್ಬರು ವಿದೇಶಕ್ಕೆ ಪ್ರವಾಸಕ್ಕೆ ತೆರಳಿದಾಗ ವಿದೇಶಿ ಮಂತ್ರಿಯ ಮನೆಯಲ್ಲಿ ವಾಸ್ತವ್ಯ ಹೂಡುತ್ತಾರೆ. ಅಲ್ಲಿನ ಸತ್ಕಾರ, ವಿಜೃಂಭಣೆ, ವೈಢೂರ್ಯ, ಶ್ರೀಮಂತಿಕೆ ಕಂಡು ಅಚ್ಚರಿಯೂ ಆಯಿತು. ಹಾಗೋ ಹೀಗೋ ಮನಸು ಮಾಡಿ ಈ ವಿಲಾಸೀ ಜೀವನದ ರಹಸ್ಯವೇನೆಂದು ಕೇಳಿಯೂಬಿಟ್ಟರು. ಅದಕ್ಕೇ ಆ ವಿದೇಶೀ ಮಂತ್ರಿ ತಮ್ಮ ಕೋಣೆಯ ಮೂಲೆಗೆ ಕರೆದೊಯ್ದು ಅಲ್ಲಿನ ಕಿಟಕಿಯ ಪರದೆಯನ್ನು ಸರಿಸಿ ದೂರದಲ್ಲಿ ಕಾಣುತ್ತಿದ್ದ ಸೇತುವೆಯೊಂದನ್ನು ತೋರಿಸಿ, “”ಆ ಕೆಲಸದಲ್ಲಿ ನನಗೆ ಐದು ಶೇಕಡ ಕಮಿಷನ್‌ ದೊರಕಿತು. ಹಾಗೇ ಅಲ್ಲಲ್ಲಿ ಇಂತಹ ಅಭಿವೃದ್ಧಿ ಕಾಮಗಾರಿಯಲ್ಲಿ ನನಗೊಂದು ಪುಟ್ಟ ಪಾಲಿರು ತ್ತದೆ. ಹಾಗೇ ಈ ಬಂಗಲೆ” ಎಂದೆಲ್ಲ ವಿವರಿಸಿದರು. ಸರಿ ಅಲ್ಲಿಂದ ನಮ್ಮ ಮಂತ್ರಿ ಹಿಂತಿರುಗುವಾಗ ಮುಂದೊಮ್ಮೆ ಭಾರತಕ್ಕೆ ಬಂದಾಗ ತಮ್ಮದೇ ಮನೆಯಲ್ಲಿ ತಂಗುವಂತೆ ವಿನಂತಿಸಿಕೊಂಡರು. ಕೆಲವೇ ತಿಂಗಳಲ್ಲಿ ಆ ವಿದೇಶಿ ಮಂತ್ರಿ ಭಾರತಕ್ಕೆ ಆಗಮಿಸಿ ಇದೇ ಮಂತ್ರಿಯ ಮನೆಗೆ ಭೇಟಿ ಕೊಟ್ಟು ಮೂಕವಿಸ್ಮಿತರಾದರು. ಇದೇನು ಮನೆಯೋ, ಮಹಲೋ! ಒಮ್ಮೆ ನೋಡಿದವರು ತೆರೆದ ಬಾಯಿ ಮುಚ್ಚಿ ಕೊಳ್ಳಲೂ ಸಾಧ್ಯವಾಗದ ಮಟ್ಟಿಗೆ ಅಲ್ಲಿ  ಶ್ರೀಮಂತಿಕೆ ಎದ್ದು ಕಾಣುತ್ತಿತ್ತು. ವಿದೇಶಿ ಮಂತ್ರಿ ಇದರ ರಹಸ್ಯವೇನೆಂದು ಕೇಳಿದರು. ನಮ್ಮ ಮಂತ್ರಿ ಕೋಣೆಯ ಮೂಲೆಯೊಂದರ ಕಿಟಕಿಯ ಪರದೆ ಸರಿಸಿ ಹೊರತೋರಿಸುತ್ತ, “”ಅಲ್ಲೊಂದು ಸೇತುವೆ ಕಾಣುತ್ತಿದೆಯಾ?” ಎಂದು ಕೇಳಿದ. ವಿದೇಶಿ ಮಂತ್ರಿ ಒಮ್ಮೆ ಅಲ್ಲಿ ನೋಡಿ ತಿರುಗಿ ಆತನತ್ತ ನೋಡಿದ. ನಮ್ಮ ಮಂತ್ರಿ ಎಂದ, “”100 ಶೇಕಡ ಕಮಿಷನ್‌!”. ಅಲ್ಲಿ ಸೇತುವೆಯೇ ಇರಲಿಲ್ಲ!

ಯಾಕೋ ಏನೋ, ಹಣಕ್ಕೂ ರಾಜಕಾರಣಕ್ಕೂ ನಂಟು. ಕೋಟಿ ಕೋಟಿ ರೂಪಾಯಿ ಎಂದು ಕೇಳಿದಾಗ, ಹಗರಣ ಎಂದಾಕ್ಷಣ, ಬೇನಾಮಿ ಆಸ್ತಿ ಎಂದಾಗೆಲ್ಲ ನಮ್ಮ ಮನಸ್ಸಲ್ಲಿ ಮೂಡುವುದು ರಾಜಕಾರಣಿಯೊಬ್ಬನ ಅಮೂರ್ತ ಚಿತ್ರ. ರಾಜಕೀಯವಿಲ್ಲದ ಮಾಧ್ಯಮವನ್ನು, ಪತ್ರಿಕೆಯನ್ನು, ಸಮಾವೇಶವನ್ನು, ಫ್ಲೆಕ್ಸ್‌ ಗಳನ್ನು, ಜಾಹೀರಾತನ್ನು ನೆನೆಸಿಕೊಳ್ಳುವುದೂ ಕೂಡ ಕಷ್ಟಸಾಧ್ಯ. ಅಷ್ಟೇ ಅಲ್ಲ, ರಾಜಕೀಯ ನಿಂತುಹೋದರೆ ಅದೆಷ್ಟೋ ವೃತ್ತಿಗಳೂ ಅಪಾಯ ಎದುರಿಸುವವು.

ಮಾಧ್ಯಮಗಳ 24×7 ಸಮಯ ಸುಲಲಿತವಾಗಿ ಜರುಗುತ್ತಿದೆಯೆಂದರೆ ಅದಕ್ಕೆ ರಾಜಕೀಯದ ಯೋಗದಾನ ಮಹತ್ವದ್ದು. ರಾಜಕೀಯವಿಲ್ಲದೇ ಹೋದರೆ ಅರಚುವ, ಕಿರುಚಾಡುವ, ಚರ್ಚೆಗೆ ತಗುಲಿ ಹಾಕಿ ಮಜಾ ಅನುಭವಿಸುವ ಮತ್ತು ಅನುಭವಿಸಗೊಡುವ ಪತ್ರಕರ್ತರೂ ನೀರಸವಾಗಿ ಮಾತನಾಡುತ್ತಾರೆ. ರಾಜಕೀಯ ಲೇಪನವಿಲ್ಲದ ಸುದ್ದಿಗಳು ಉಪ್ಪು ಹಾಕದ ಸಾಂಬಾರಿನಂತಾಗುತ್ತದೆ. ಒಬ್ಬ ರಾಜಕಾರಣಿ ಕೊಟ್ಟ ಹೇಳಿಕೆಗೆ ಪ್ರತಿಯಾಗಿ ಇನ್ನೋರ್ವರು ಪ್ರತಿಕ್ರಿಯೆ ನೀಡಿದರಷ್ಟೇ ವಿ”ವಾದ’ ಏಳುತ್ತದೆ, ಮಾಧ್ಯಮಗಳು 24*7 ಎಗ್ಗಿಲ್ಲದೇ ಸಾಗುತ್ತದೆ. ಇಲ್ಲವೇ ತಾಜಾ ಸುದ್ದಿಗಳಿಗೆ ಅವುಗಳೂ ಒದ್ದಾಡುತ್ತದೆ.

ತಮ್ಮ ವೃತ್ತಿಯುದ್ದಕ್ಕೂ ರಾಜಕಾರಣಿಗಳನ್ನು ನಂಬಿಕೊಂಡಿರುವ ಇನ್ನೊಂದು ವರ್ಗವೆಂದರೆ, ವ್ಯಂಗ್ಯಚಿತ್ರಕಾರರದ್ದು. ವ್ಯಂಗ್ಯಚಿತ್ರಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಬಹುಮುಖ್ಯ ಮಾಧ್ಯಮವಾಗಿ ಬೆಳೆದಿದೆ ನಿಜ. ಆದರೆ, ಅದು ಬಹುತೇಕ ರಾಜಕಾರಣದಲ್ಲಿನ ವ್ಯಕ್ತಿಗಳಿಗೆ ಪೆನ್ನಿನ ಮೊನೆಯಿಂದ ಚುಚ್ಚುವ ಪ್ರವೃತ್ತಿಯೂ ಹೌದು. ಡೊಳ್ಳುಹೊಟ್ಟೆ, ಬಿಳಿಪೈಜಾಮ, ಬಿಳಿಟೋಪಿ, ಮತ್ತು ರಾಜಕಾರಣಿಗಳ ಉವಾಚವೇ ವ್ಯಂಗ್ಯಚಿತ್ರ ರಚನೆಗೆ ಪ್ರೇರಣೆ!

ರಾಜಕಾರಣ ಒಂದು ರೀತಿ ಎಲ್ಲ ಉದ್ಯೋಗಗಳ ಮಿಶ್ರಣ. ನಟನೆ, ವಕೀಲಿ ವೃತ್ತಿ, ದರೋಡೆ, ಸಮಾಜಸೇವೆ, ವ್ಯವಹಾರ, ಅವ್ಯವಹಾರ, ರಿಯಲ್‌ ಎಸ್ಟೇಟ್‌, ಗುತ್ತಿಗೆದಾರಿಕೆ, ಜ್ಯೋತಿಷಿ… ಎಲ್ಲಾ ಹುದ್ದೆಗಳೂ ರಾಜಕಾರಣದಡಿಯಲ್ಲೇ ಬರುತ್ತವೆ. ಆದ್ದರಿಂದ ಒಬ್ಬ ರಾಜಕಾರಣಿ ಸಕಲಕಲಾವಲ್ಲಭನೂ, ಸಕಲವಿದ್ಯಾಪಾರಂಗತನೂ ಆಗಿರಬಲ್ಲ. ಅಂತೆಯೇ ಜೀವನದುದ್ದಕ್ಕೂ ಜನಸಾಮಾನ್ಯರಿಂದ ಅತೀ ಹೆಚ್ಚು ಉಗಿಸಿಕೊಳ್ಳುವ ವೃತ್ತಿಯಿದ್ದರೂ ಅದು ರಾಜಕಾರಣವೇ ಎಂಬುದು ಕೂಡ ಅಷ್ಟೇ ಸತ್ಯ.

ಒಂದಂತೂ ಬಹಳ ಸ್ಪಷ್ಟ. ರಾಜಕಾರಣಿಗಳಿಗೂ ಹಾಸ್ಯಕ್ಕೂ ಅದೇನೋ ಅವಿನಾಭಾವ ಸಂಬಂಧ. ರಾಜಕಾರಣಿಗಳ ಒಂದು ಕಲ್ಪನೆ ಬಂದರೂ ಅಸಡ್ಡೆ, ಕುಚೋದ್ಯ, ವ್ಯಂಗ್ಯನಗೆ, ವಿಚಿತ್ರಭಾವ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತದೆ. “ರಾಜಕಾರಣಿ’ ಎಂಬುದಕ್ಕೆ ನಮ್ಮಲ್ಲಿ ಪೂರ್ವಾಗ್ರಹ ವ್ಯಾಖ್ಯಾನ ಇರುವುದಕ್ಕೋ ಏನೋ ಹೃದಯಪೂರ್ವಕವಾದ ಗೌರವಭಾವ ಮೂಡುವುದು ತೀರಾ ಕಮ್ಮಿ. ಯಾವ ಮಟ್ಟಿಗೆಂದರೆ ರಾಜಕಾರಣಿಯೊಬ್ಬ “ಪದವೀಧರ’ ಎಂದರೂ “ನಕಲಿ ಅಂಕಪಟ್ಟಿ’ ಎನ್ನುವ ಪದ ಕಣ್ಮುಂದೆ ಸುಳಿದು ಮಾಯವಾಗುತ್ತದೆ. ಹಾಗಂತ ಎಲ್ಲ ರಾಜಕಾರಣಿಗಳನ್ನು ರಾಜಕಾರಣಿಗಳೆಂಬ ವರ್ಗಕ್ಕೆ ಸೇರಿಸಲು ಮನಸೊÕಪ್ಪುವುದಿಲ್ಲ. “ವಾಜಪೇಯಿ, ಜಾರ್ಜ್‌ ಫೆರ್ನಾಂಡಿಸ್‌ರು ಇಷ್ಟು ಕಾಲ ರಾಜಕಾರಣದಲ್ಲಿದ್ದರು’ ಎಂದರೆ ವಾಕ್ಯದೋಷ ಎದ್ದು ಅದೇನೋ ಇರಿಸುಮುರಿಸುಂಟಾಗುತ್ತದೆ. ಅದೇ ದೇವೇಗೌಡರು, ಯಡಿಯೂರಪ್ಪನವರು ಎನ್ನುವಾಗ ರಾಜಕಾರಣವೆಂಬ ಪದವಿದ್ದರಷ್ಟೇ ವಾಕ್ಯ ಪರಿಪೂರ್ಣಗೊಳ್ಳುತ್ತದೆ. ಆದ್ದರಿಂದ ಆಯಾ ವ್ಯಕ್ತಿತ್ವಕ್ಕೂ ರಾಜಕಾರಣ ಎಂಬ ಪದದೊಂದಿಗೆ ಅಲಿಖೀತವಾದ ನಂಟು ಇದೆ. 

ಭಾರತೀಯರಾದ ನಾವು ರಾಜಕಾರಣವನ್ನು ಅದೆಷ್ಟು ಅಸಹ್ಯ ಭಾವದಿಂದ ತಾತ್ಸಾರವಾಗಿ ನೋಡುತ್ತೇವೆಯೋ ಅದಕ್ಕೂ ಮಿಗಿಲಾಗಿ ಅದನ್ನು ಅಭಿಮಾನದಿಂದ ಕಾಣುತ್ತೇವೆ. ರಾಜಕಾರಣಿಗಳ ಆರೋಪ-ಪ್ರತ್ಯಾರೋಪಗಳನ್ನು ಓದಿ ಓದಿ ಒಂದು ದಿನ ಅದು ಇಲ್ಲವೆಂದರೂ ಪತ್ರಿಕೆಯಲ್ಲೇನೋ “ಮಿಸ್‌’ ಆದ ಅನುಭವ ನಮ್ಮದಾಗುತ್ತದೆ.

ಕೊನೆಯದಾಗಿ, ಒಮ್ಮೆ ನಗರದ ಒಂದೆಡೆ ಭಾರಿ ಟ್ರಾಫಿಕ್‌ ಜಾಮ್‌ ಆಯಿತು. ಐದು, ಹತ್ತು, ಇಪ್ಪತ್ತು ನಿಮಿಷಗಳಾದರೂ ಒಂದು ಗಾಡಿಯೂ ಕದಲಲಿಲ್ಲ. ತೀರಾ ಅರ್ಜೆಂಟಿನಲ್ಲಿದ್ದ ಕಾರಿನ ಚಾಲಕನೊಬ್ಬ ರಸ್ತೆ ವಿಭಾಜಕದ ಪಕ್ಕದಲ್ಲೇ ನಿಂತಿದ್ದ ಪೊಲೀಸ್‌ನ ಬಳಿ “ಏನಾಗಿದೆ?’ ಎಂದು ಕೇಳಿದ. 

ಅದಕ್ಕೆ ಆತ ಹೇಳಿದ್ದು ಹೀಗೆ, “”ನಗರದ ಪ್ರಮುಖ ರಾಜಕಾರಣಿಗಳನ್ನು ಉಗ್ರರು ಅಪಹರಿಸಿ ಒತ್ತೆಯಾಗಿಸಿಕೊಂಡಿದ್ದಾರೆ. ಬಿಡಿಸಬೇಕಾದರೆ ಐದು ಕೋಟಿ ರೂಪಾಯಿಯನ್ನು ಸಾಯಂಕಾಲದೊಳಗೆ ತಲುಪಿಸಬೇಕೆಂದು ಕೇಳುತ್ತಿದ್ದಾರೆ. ಒಂದೊಮ್ಮೆ ಸಂಜೆಯೊಳಗೆ ಹಣ ತಲುಪಿಸಲು ಸಾಧ್ಯವಾಗದೇ ಇದ್ದಲ್ಲಿ ಸುಮಾರು ಐನೂರು ಲೀಟರ್‌ ಪೆಟ್ರೋಲಿನಿಂದ ಎಲ್ಲ ರಾಜಕಾರಣಿಗಳನ್ನು ಸುಡುತ್ತಾರೆಂದೂ ಬೆದರಿಕೆ ಹಾಕಿದ್ದಾರೆ” ಎನ್ನುತ್ತ ಮುಂದುವರಿಸಿ ಹೇಳಿದ, “”ಅದಕ್ಕಾಗಿ ನಾವೆಲ್ಲ ಜನರ ಬಳಿ ಸಂಗ್ರಹ ಮಾಡುತ್ತಿದ್ದೇವೆ” ಕುತೂಹಲಭರಿತನಾಗಿ ಕಾರು ಚಾಲಕ ಕೇಳಿದ: “”ಪ್ರತಿಯೊಬ್ಬರೂ ಎಷ್ಟೆಷ್ಟು ನೀಡುತ್ತಿದ್ದಾರೆ?”
ಅದಕ್ಕೆ ಪೊಲೀಸ್‌ ಹೇಳಿದ, “”ಐದು ಲೀಟರ್‌ ಪೆಟ್ರೋಲು!”A  politician needs the ability to foretell what is going to happen tomorrow, next week, next month and next year. And to have the ability afterwards to explain why it didn’t happen  ಎಂದು ರಾಜಕಾರಣಿಗಳ ಬಗ್ಗೆ ವಿನ್‌ಸ್ಟನ್‌ ಚರ್ಚಿಲ್‌ ಹೇಳಿದ್ದು ಅಪಹಾಸ್ಯವೇನೂ ಅನ್ನಿಸುವುದಿಲ್ಲ. ಮೇಲೆ-ಕೆಳಗಾದರೂ ನಾವು ಭಾರತೀಯರು ರಾಜಕಾರಣಿಗಳನ್ನು ನೋಡುವ ದೃಷ್ಟಿಕೋನ ಬದಲಾಗದು.

– ಅರ್ಜುನ್‌ ಶೆಣೈ

ಟಾಪ್ ನ್ಯೂಸ್

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.