CONNECT WITH US  

ಬೆಟ್ಟ ದಾಟಿ ಬಂದ ಹುಲಿ ಮರಿ

ತಾಯಿಯೊಂದಿಗೆ ಹೋಗುತ್ತಿರುವ ಬಿ.ಆರ್‌.ಎಸ್‌ ಎ(ಚಿತ್ರದಲ್ಲಿ ಹಿಂಬದಿಯಲ್ಲಿರುವ ಹುಲಿಮರಿಯೇ ಬಿ.ಆರ್‌.ಎಸ್‌ ಎ-)

ಸ್ವಲ್ಪ ಹೊತ್ತು ಕಾದು, ಹಾಗೇ ಹೊಟ್ಟೆಯ ಮೇಲೆ ತೆವಳುತ್ತ ಸದ್ದು ಬರುತ್ತಿದ್ದ ದಿಕ್ಕಿನಲ್ಲಿ ಹೋದೆ. ನಾನಿದ್ದ ಪೊದೆಯ ಹತ್ತಿರವೇ ಸ್ವಲ್ಪ ಅಗಲವಾದ, ಕಪ್ಪನೆಯ ತೆರೆದ ಜಾಗವಿದ್ದು, ಅದರ ಮೇಲೆ ನನಗಿಂತ ವೇಗವಾಗಿ ಹೋಗುವ ಕೆಲ ಪ್ರಾಣಿಗಳಿದ್ದವು. ಎರಡು ಅಥವಾ ನಾಲ್ಕು ತಿರುಗುವ-ಗೋಲಾಕಾರದ ಈ ಪ್ರಾಣಿಗಳ ಮೇಲೆ ಮನುಷ್ಯರು ಸಹ ಇದ್ದರು. ನನಗೆ ಸ್ವಲ್ಪ ಗಾಬರಿಯಾಯಿತು.

ನನ್ನ ಹೆಸರು ರಂಗನಾಥ. ನಾನು ಹುಟ್ಟಿದ್ದು ಬಿಳಿಗಿರಿರಂಗನ ಬೆಟ್ಟದ ದೊಡ್ಡಸಂಪಿಗೆ ಪ್ರದೇಶದಲ್ಲಿ. ನನ್ನ ತಾಯಿಗಿದ್ದ ಮೂರು ಮಕ್ಕಳಲ್ಲಿ ನಾನೂ ಒಬ್ಬ. ನಾವಿದ್ದ ಪ್ರದೇಶದಲ್ಲಿ ಯಥೇತ್ಛವಾಗಿ ಮಳೆಯಾಗುತ್ತಿತ್ತು, ನಿತ್ಯಹರಿದ್ವರ್ಣದ ಕಾಡುಗಳು, ಹಚ್ಚ ಹಸಿರ ಹುಲ್ಲುಗಾವಲುಗಳು, ಸುಂದರ ಪುಟ್ಟ ತೊರೆಗಳಲ್ಲಿ ವರ್ಷ ಪೂರ್ತಿ ನೀರು ಮತ್ತು ಕೆಲ ಭಾಗಗಳಲ್ಲಿ ಕಾಫಿ ತೋಟಗಳು. ನಮ್ಮ ನಿಯಮದಂತೆ ನಾವು ಎರಡರಿಂದ ಮೂರು ವರ್ಷವಾದ ಮೇಲೆ ನಮ್ಮ ತಾಯಿ, ಒಡಹುಟ್ಟಿದವರನ್ನು ಬಿಟ್ಟು ನಮ್ಮದೇ ಆದ ಮನೆಯನ್ನು ಮಾಡಿಕೊಳ್ಳುತ್ತೇವೆ. ಹೊಸ ಮನೆ ಮಾಡುವುದು ಅಷ್ಟು ಸುಲಭವಲ್ಲ. ನಮಗೆ ಬೇಕಾದ ಆಹಾರ ಸಾಕಷ್ಟಿರಬೇಕು ಮತ್ತು ಮುಖ್ಯವಾಗಿ ಹೊಸ ಮನೆಯ ಪ್ರದೇಶ ಬೇರೆಯವರ ಮನೆಯಾಗಿರಬಾರದು. ಆದರೆ ನಾವು ಗಂಡು ಹುಲಿಗಳು ನಮ್ಮ ಹೊಸ ಮನೆಯಲ್ಲಿ ತೀರಾ ವಯಸ್ಕ ಹುಲಿಗಳಿದ್ದರೆ ಅವುಗಳ ಜಾಗವನ್ನು ಆಕ್ರಮಿಸುತ್ತೇವೆ. ಆದರೆ ಅದು ಅಷ್ಟು ಸುಲಭವಲ್ಲ. ಒಂದು ರಾಜ್ಯವನ್ನು ಆಕ್ರಮಿಸಿ ಗೆದ್ದ ಹಾಗೆ. ಯುದ್ಧ ನಡೆಯುತ್ತದೆ. ಸಾವು, ನೋವುಗಳಾಗುತ್ತವೆ. ಆದರೆ ಇದು ಅನಿವಾರ್ಯ. ಇದು ನಮ್ಮ ನಿಯಮ. ಹಾಗಾಗಿ ನಾವು ವಯಸ್ಸಿಗೆ ಬಂದ ತಕ್ಷಣ ನಮ್ಮ ಹುಟ್ಟು ಪ್ರದೇಶವನ್ನು ಬಿಟ್ಟು ಹೊರಡುತ್ತೇವೆ. 

ನಮ್ಮ ಪ್ರದೇಶದಲ್ಲಾಗಲೇ ಸಾಕಷ್ಟು ಹುಲಿಗಳಿವೆ, ನಾನು ನನ್ನ ಮನೆಯನ್ನು ಮಾಡಬೇಕಾದರೆ ಹೊಸ ಜಾಗ ಹುಡುಕಲೇಬೇ ಕಾಗಿತ್ತು. ನನ್ನ ಒಡಹುಟ್ಟಿದವರಲ್ಲಿ ಹೆಣ್ಣು ಹುಲಿಗಳಿದ್ದರೆ ನನ್ನ ತಾಯಿ ಅವರಿಗೆ ತನ್ನ ಬದಿಯಲ್ಲೆ ಸ್ವಲ್ಪ ಜಾಗ ಮಾಡಿಕೊಡುವುದು ಸಾಮಾನ್ಯವಾಗಿತ್ತು. ಆದರೆ ನಾವು ಗಂಡು ಹುಲಿಗಳು ದೂರ ಹೋಗಬೇಕು. ನನಗೆ ಆಗಿದ್ದೂ ಅದೇ. ಕೊನೆಗೊಂದು ದಿನ ಭಾರವಾದ ಹೃದಯದಿಂದ ನನ್ನ ತಾಯಿ ಮತ್ತು ಒಡಹುಟ್ಟಿ ದವರನ್ನು ಬಿಟ್ಟು ಹೊರಟೆ. ಎಲ್ಲಿಗೆ ಹೋಗುವುದೆಂದು ತಿಳಿದಿರ ಲಿಲ್ಲ. ಆದರೆ ನನ್ನ ಉಳಿವಿಗೆ, ನನ್ನ ಭವಿಷ್ಯಕ್ಕೆ ಪ್ರಯತ್ನಿಸಲೇಬೇ ಕಾಗಿತ್ತು. ಸುತ್ತಾಡುತ್ತ ಹೊರಟೆ. 

ಬಿಳಿಗಿರಿರಂಗನ ಬೆಟ್ಟದಲ್ಲಾಗಲೇ ನನಗಿಂತ ಬಲಿಷ್ಠ ಹುಲಿಗಳು ಸಾಕಷ್ಟು ಇದ್ದವು. ಹತ್ತಾರು ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿದು ಪ್ರಯತ್ನಪಟ್ಟೆ. ಕಾಡಿನ ಹಾದಿಯಲ್ಲಿ ಹೋಗುತ್ತಿದ್ದರೆ ಸ್ವಲ್ಪ ದೂರ ದಿಂದ ಇನ್ನೊಂದು ಹುಲಿಯ ವಾಸನೆ. ಸಂತೋಷವಾಯಿತು. ಹೆಣ್ಣು ಹುಲಿಯಿರಬೇಕು, ನಿಮ್ಮ ಫೇಸ್‌ಬುಕ್‌ ಪೇಜ್‌ನ ಹಾಗೆ ಫ್ರೆಂಡ್‌ ರಿಕ್ವೆಸ್ಟ್‌ ಇರಬಹುದು, ಅಕ್ಸೆಪ್ಟ್ ಮಾಡುವಾ ಎಂದು ತರಾತುರಿಯಲ್ಲಿ ನಡೆದೆ. ಹತ್ತಿರ ಹೋದರೆ ನನಗೆ ಗಾಬರಿ ತರುವ ಸಂದೇಶ. ಅದೊಂದು ಗಂಡು ಹುಲಿ ಬಿಟ್ಟ ಸಂದೇಶವಾಗಿತ್ತು ಹಾಗೂ ನನ್ನಂತಹ ಯುವ ಗಂಡು ಹುಲಿಗಳಿಗೆ ಸ್ವಾಗತವಿಲ್ಲವೆಂದು ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ನಾನಂತೂ ಈ ಹುಲಿಗೆ ತೊಡೆತಟ್ಟಲಾಗದೆಂದು ನಿರಾಸೆಯಿಂದ ಮತ್ತು ಸ್ವಲ್ಪ ಭಯದಿಂದ ಅಲ್ಲಿಂದ ಕಾಲೆ¤ಗೆದೆ. 

ಇನ್ನಷ್ಟು ಪ್ರದೇಶಗಳನ್ನು ಅನ್ವೇಷಿಸಿ ನೋಡುವ ಎಂದು ತಿರುಗಾಡಿದೆ. ಎಲ್ಲಿ ನೋಡಿದರೂ ನನಗೆ ಎಚ್ಚರಿಸುವ ಬೇರೆ ಗಂಡು ಹುಲಿಗಳ ಚಿಹ್ನೆಗಳು. ನೆಲದ ಮೇಲೆ ತಮ್ಮ ಪಾದ ಮತ್ತು ಪಂಜಗಳಿಂದ ಕೆರೆದು ಬಿಟ್ಟ ವಾಸನೆ. ಮರಗಳ ಬುಡಗಳ ಮೇಲೆ ಘಾಟು ವಾಸನೆಯ ಉಚ್ಚೆ, ಉಗುರುಗಳಿಂದ ಕೆರೆದ ಗೀರುಗಳು, ಕೆನ್ನೆ ಮತ್ತು ಕತ್ತನ್ನು ಉಜ್ಜಿ ಮರದ ಮೇಲೆ ಬಿಟ್ಟ ವಾಸನೆ. ಅವುಗಳನ್ನು ಮೂಸಿ ನೋಡಿದರೆ ಅದರಲ್ಲಿರುವ ಸಂದೇಶ ನಮಗೆ ಮಾತ್ರ ತಿಳಿಯುವಂತಹದು. ನನ್ನ ದುರಾದೃಷ್ಟವೆಂದು ಕಾಣುತ್ತದೆ, ಯಾವ ಗುರುತನ್ನು ಮೂಸಿದರೂ ಅದು ಇನ್ನೊಂದು ಗಂಡು ಹುಲಿಯದ್ದಾಗಿತ್ತು. ನನ್ನಲ್ಲಿ ದೊಡ್ಡ ಗಂಡು ಹುಲಿಯನ್ನು ಸೋಲಿಸುವ ಬಲವಿರಲಿಲ್ಲ. ಹಾಗಾಗಿ ಮುಂದು ಸಾಗಬೇಕಾಯಿತು. ಅವಕಾಶ ಸಿಕ್ಕಾಗಲೆಲ್ಲ ಜಿಂಕೆಯನ್ನೋ, ಕಡವೆಯನ್ನೋ, ಕೊಂಡು ಕುರಿಯನ್ನೋ ಬೇಟೆಯಾಡಿ ತಿನ್ನುತ್ತಿ¨ªೆ. ಆದರೆ, ಅಲ್ಲಿನ ಗಂಡು ಹುಲಿಗೆ ಅದು ತಿಳಿದರೆ ಬಹು ಅಪಾಯಕಾರಿ. ಹಾಗಾಗಿ ಕದ್ದು ಮುಚ್ಚಿ ಕೊಂದು, ಆತುರದಲ್ಲಿ ತಿಂದುಮುಗಿಸಿ ಹೋರಾಡಬೇಕಾಗಿತ್ತು. ನೆಮ್ಮದಿಯೇ ಇರಲಿಲ್ಲ. 

ಎಷ್ಟು ದಿನ ಹೀಗೆ ತಿರುಗುವುದು? ಬಹುಶಃ ಬೇರೆ ಪ್ರದೇಶ ದಲ್ಲೇನಾದರೂ ಜಾಗ ಸಿಗಬಹುದೆಂದು ನಿರ್ಧರಿಸಿ ನಮ್ಮಲ್ಲಿದ್ದ ಅತಿ ಎತ್ತರವಾದ ಹೊನ್ನ ಬಾರೆ ಬೆಟ್ಟವನ್ನೇರಿದೆ. ಮೇಲೆ ನಿಂತು ನೋಡಿದರೆ ನನಗೆ ಆಶ್ಚರ್ಯವಾಯಿತು. ನನ್ನ ಕಣ್ಣಿಗೆ ಕಾಣುವಷ್ಟು ದೂರ ಕಾಡುಪ್ರದೇಶ. ನನಗೆ ಇದು ತಿಳಿದೇ ಇರಲಿಲ್ಲ, ಯಾಕೋ ನಮ್ಮಮ್ಮನೂ ಕೂಡ ಹೇಳಿರಲಿಲ್ಲ. ಇಷ್ಟು ಅಗಾಧವಾದ ಪ್ರದೇಶವಿದೆಯೆಂದು ನನಗೆ ಗೊತ್ತೇ ಇರಲಿಲ್ಲ. ಕೇವಲ ಒಂದೆರೆಡು ದಿನ ನಡೆದರೆ ಅಲ್ಲಿಗೆ ತಲುಪಬಹುದೆಂದು ಅಂದಾಜಿಸಿ ಯಾಕೆ ಅಲ್ಲಿ ಪ್ರಯತ್ನಿಸಬಾರದೆಂದು ಮನಸಿನಲ್ಲೇ ಯೋಚಿಸಿದೆ. ಅದೇ ಸರಿಯೆನಿಸಿ, ನಾನಿದ್ದ ಜಾಗದಿಂದ ಈಶಾನ್ಯ ದಿಕ್ಕಿನತ್ತ ಹೊರಟುಬಿಟ್ಟೆ. ಕಡಿದಾದ ಬೆಟ್ಟವಿಳಿಯಬೇಕಾಗಿತ್ತು. ಇಳಿಜಾರು ಪ್ರದೇಶದಲ್ಲಿ ಸಾಕಷ್ಟು ಹುಲ್ಲುಗಾವಲು. ಹುಲ್ಲು ಗಾವಲಿನಲ್ಲಿ ಏನಾದರೂ ಬೇಟೆ ಸಿಗಬಹುದೇನೋ ಎಂದು ಅಂದಾಜಿಸಿ ಕತ್ತಲಾಗುವವರೆಗೆ ಕಣಿವೆಯಲ್ಲಿದ್ದ ಕಾಡಿನಲ್ಲಿ ಅಡಗಿ ಕುಳಿತೆ. ಆಶ್ಚರ್ಯವೆಂಬಂತೆ ಸಂಜೆಯಾಗುತ್ತಿದಂತೆ ಹುಲ್ಲುಗಾವಲಿಗೆ ಹತ್ತಾರು ಕಾಟಿಗಳಿರುವ ಗುಂಪೊಂದು ಬಂದಿತು. ಸ್ವಲ್ಪ ದೂರದಲ್ಲಿ ಕಡವೆಗಳು ಸಹ ಮೇಯುತ್ತಿವೆ. ಇಷ್ಟೊಂದು ಪ್ರಾಣಿಗಳು ಇಲ್ಲಿವೆಯೆಂದರೆ ಖಂಡಿತವಾಗಿ ಇಲ್ಲಾಗಲೇ ಬೇರೊಂದು ಗಂಡು ಹುಲಿಯಿರಬೇಕು. ಕಾಟಿ ಹಿಡಿಯಲು ನನಗಷ್ಟು ಶಕ್ತಿಯಿಲ್ಲವೆನಿಸಿತು. ಅವಕಾಶ ಸಿಕ್ಕೊಡನೆ ಕಡವೆ ಯೊಂದನ್ನು ಹಿಡಿದೆ. ಇನ್ನೆಷ್ಟು ದಿನವಾದೀತೋ ಮತ್ತೆ ಬೇಟೆ ಸಿಗುವ ಅವಕಾಶವೆಂದು ಸ್ವಲ್ಪ ಕುತ್ತಾದರೂ ಹಿಡಿದೇಬಿಟ್ಟೆ. ಸತ್ತ ಕಡವೆಯನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿ ರಾತ್ರಿಯೆಲ್ಲ ತಿಂದು ಮುಗಿಸಿದೆ. ಮಧ್ಯರಾತ್ರಿಯ ವೇಳೆ ಸ್ವಲ್ಪ ದೂರದ ಲ್ಲೆಲ್ಲೋ ಇನ್ನೊಂದು ಹುಲಿ ಕೂಗಿದ ಹಾಗಾಯಿತು. ನನ್ನ ಕಿವಿಗಳೆ ರಡನ್ನು ನಿಮಿರಿಸಿ ಕೇಳಿಸಿಕೊಂಡೆ. ನನ್ನ ಊಹೆ ಸರಿಯಾಗಿತ್ತು, ಇಲ್ಲಾಗಲೇ ಇನ್ನೊಂದು ಗಂಡು ಹುಲಿಯಿದೆ. ಆದಷ್ಟು ಬೇಗನೆ ಜಾಗ ಖಾಲಿ ಮಾಡಬೇಕಾಗಿತ್ತು. ಕಣಿವೆಯಲ್ಲಿದ್ದ ತೊರೆಯಲ್ಲಿ ನೀರು ಕುಡಿದು, ತತ್‌ಕ್ಷಣವೇ ಹೊರಟುಬಿಟ್ಟೆ. ಆ ಹುಲಿಯೇ ನಾದರೂ ನನ್ನ ವಾಸನೆ ಹಿಡಿದು ಹತ್ತಿರ ಬಂದರೆ ದೊಡ್ಡ ರಾದ್ಧಾಂತವೇ ಆಗುವ ಸಾಧ್ಯತೆಯಿತ್ತು. ಅಲ್ಲದೆ ಅದರ ಏರಿಯಾದಲ್ಲಿ ನಾನು ಕಡವೆಯೊಂದನ್ನೂ ಹಿಡಿದಿದ್ದೇನೆ, ಇದನ್ನು ಆ ಹುಲಿ ಖಂಡಿತ ಸಹಿಸುವುದಿಲ್ಲ. ಹಾಗಾಗಿ ಅದರ ನೆಲಹರವು ಆದಷ್ಟು ಬೇಗ ದಾಟಲು ಮುಂದಾದೆ. 

ಮಧ್ಯರಾತ್ರಿಯಲ್ಲಿ ಹೊರಟ ನಾನು, ಬೆಳಗಿನ ಸೂರ್ಯ ಹೊರಬರುವ ಹೊತ್ತಿಗೆ ಬೆಟ್ಟ ಇಳಿದಿ¨ªೆ. ಕಾಡು ಯಾಕೋ ಕಿರಿದಾಗುತ್ತಿದೆ ಅನ್ನಿಸುತ್ತಿತ್ತು. ನಾನು ನಡೆಯುತ್ತಿದ್ದ ಹಾದಿಯಲ್ಲಿ ಮನುಷ್ಯರ ಧ್ವನಿ ಕೇಳುತ್ತಿದೆ. ಅವರಿರುವ ಜಾಗ ಹತ್ತಿರವಿರಬಹು ದೆನಿಸಿತು. ಹಾಗಾಗಿ ಕಾಡಿನ ಮಧ್ಯಭಾಗಕ್ಕೆ ನನ್ನ ನಡಿಗೆಯನ್ನು ಸೀಮಿತಗೊಳಿಸಿದೆ. ಒಂದೆರೆಡು ತಾಸು ನಡೆದಿರಬಹುದು, ಹತ್ತಿರದಲ್ಲೆಲ್ಲೋ ಏನೋ ವಿಚಿತ್ರವಾದ ಸದ್ದು. ತಕ್ಷಣ ಪೊದೆಯಲ್ಲಿ ಅಡಗಿ ಕುಳಿತೆ. ಸೂಕ್ಷ್ಮವಾಗಿ ಗಮನಿಸಿದರೆ ಆ ಸದ್ದನ್ನು ನಾನು ಮುಂಚೆ ಕೇಳಿಯೇ ಇರಲಿಲ್ಲ. ಸ್ವಲ್ಪ ಹೊತ್ತು ಕಾದು, ಹಾಗೇ ಹೊಟ್ಟೆಯ ಮೇಲೆ ತೆವಳುತ್ತ ಸದ್ದು ಬರುತ್ತಿದ್ದ ದಿಕ್ಕಿನಲ್ಲಿ ಹೋದೆ. ನಾನಿದ್ದ ಪೊದೆಯ ಹತ್ತಿರವೇ ಸ್ವಲ್ಪ ಅಗಲವಾದ, ಕಪ್ಪನೆಯ ತೆರೆದ ಜಾಗವಿದ್ದು, ಅದರ ಮೇಲೆ ನನಗಿಂತ ವೇಗವಾಗಿ ಹೋಗುವ ಕೆಲ ಪ್ರಾಣಿಗಳಿದ್ದವು. ಎರಡು ಅಥವಾ ನಾಲ್ಕು ತಿರುಗುವ- ಗೋಲಾ ಕಾರದ ಈ ಪ್ರಾಣಿಗಳ ಮೇಲೆ ಮನುಷ್ಯರು ಸಹ ಇದ್ದರು. ನನಗೆ ಸ್ವಲ್ಪ ಗಾಬರಿಯಾಯಿತು. ಈ ಪ್ರಾಣಿಗಳನ್ನು ಎಲ್ಲೋ ನೋಡಿದ ನೆನಪಾಯಿತು. ಹೌದು ನಾನು ತಾಯಿಯೊಡನೆ ಬೆಟ್ಟದ ಮೇಲಿದ್ದಾಗ ಅಲ್ಲಿದ್ದ ಮನುಷ್ಯರು ಸಹ ಇದನ್ನು ಉಪಯೋಗಿ ಸುತ್ತಿದ್ದರು. ಆದರೆ ಇಷ್ಟೊಂದು ನಾನು ನೋಡಿರಲಿಲ್ಲ, ಅಲ್ಲಿ ಬಹು ಅಪರೂಪಕ್ಕೆ ಈ ಪ್ರಾಣಿಯ ಮೇಲೆ ಮನುಷ್ಯರು ಬರುತ್ತಿದ್ದರು. ಇಲ್ಲಿ ಇವು ಸಾಕಷ್ಟಿವೆ. ಅಲ್ಲಿ ಅವು ಇಷ್ಟು ವೇಗವಾಗಿ ಕೂಡ ಹೋಗುತ್ತಿರಲಿಲ್ಲ. 

ಆ ಅಗಲವಾದ ತೆರೆದ ಪ್ರದೇಶವನ್ನು ದಾಟಿ ಆ ಕಡೆಯಿರುವ ಕಾಡಿಗೆ ಹೋಗೋಣವೆಂದು ಸ್ವಲ್ಪ ಮುಂದೆ ಬಂದೆ. ಮತ್ತದೇ ಪ್ರಾಣಿ. ಸ್ವಲ್ಪ ಹೊತ್ತು ಕಾದು ಹೋಗೋಣವೆಂದು ಪೊದೆಯಲ್ಲಿ ಮತ್ತೆ ಅಡಗಿ ಕುಳಿತೆ. ಆದರೆ ಆ ಪ್ರಾಣಿಗಳು ಓಡಾಡುವುದು ನಿಲ್ಲಲೇ ಇಲ್ಲ. ಸತತವಾಗಿ ಐದಾರು ಬಾರಿ ಪ್ರಯತ್ನ ಪಟ್ಟರೂ ನನಗೆ ಆ ತೆರೆದ ಜಾಗವನ್ನು ದಾಟಲು ಆಗಲೇ ಇಲ್ಲ. ನನಗೂ ಆ ಪ್ರಾಣಿಗಳನ್ನು ಕಂಡರೆ ಬಹು ಹೆದರಿಕೆಯಾಗು ತಿತ್ತು, ಅವುಗಳು ಮಾಡುತ್ತಿದ್ದ ಜೋರಾದ ಶಬ್ದ, ಅವುಗಳಿಂದ ಬರುತ್ತಿದ್ದ ವಾಸನೆ ಎಲ್ಲವೂ ನನಗೆ ತಡೆದುಕೊಳ್ಳುವುದಕ್ಕೆ ಆಗಲೇ ಇಲ್ಲ. ಸ್ವಲ್ಪ ದೂರ ಕಾಡಿಗೆ ಹಿಂದಕ್ಕೆ ಬಂದು ಒಂದು ಮರದ ಕೆಳಗೆ ಮಲಗಿದೆ. ಆ ಪ್ರಾಣಿಗಳ ಶಬ್ದ ಕಡಿಮೆಗೊಂಡ ಮೇಲೆ ದಾಟುವುದೆಂದು ನಿರ್ಧರಿಸಿದೆ. 

ನನ್ನ ಮನಸಿನಲ್ಲಿ ಇನ್ನೂ ಗಾಬರಿ. ಈ ಜಾಗವು ನಾನು ರಾತ್ರಿ ಕೇಳಿದ್ದ ಆ ಇನ್ನೊಂದು ಗಂಡು ಹುಲಿಯ ಜಾಗವಾಗಿದ್ದರೆ? ನನಗೆ ಸಂಕಷ್ಟ ತಪ್ಪಿದ್ದಲ್ಲ! ಆದಷ್ಟು ಬೇಗ ಇಲ್ಲಿಂದ ದೂರ ಹೋಗೋಣವೆಂದರೆ, ಈ ತೆರೆದ ಜಾಗದಲ್ಲಿ ಓಡಾಡುತ್ತಿರುವ ಪ್ರಾಣಿಗಳಿಂದ ದೂರ ದಾಟಲಾಗುತ್ತಿಲ್ಲ. ದಿನ ಪೂರ್ತಿ ಅಲ್ಲಿಯೇ ಮಲಗಿದ್ದೆ, ನಿದ್ದೆ ಬಂದರೂ ಸಂಪೂರ್ಣವಾಗಿ ಮಲಗಲು ದೊಡ್ಡ ಗಂಡು ಹುಲಿಯ ಹೆದರಿಕೆ. ಹಾಗೆಯೇ ಕುಳಿತೆ. ಅಲ್ಲೇ ಪೊದೆಯಿಂದ ಪೊದೆಗೆ ನಾಲ್ಕಾರು ಬಾರಿ ಜಾಗ ಬದಲಾಯಿಸಿದೆ. ಸಂಜೆಯಾಯಿತು. ಹತ್ತಿರದಲ್ಲೇ ಜಿಂಕೆ, ಹಂದಿ, ಕಡವೆಗಳು ಓಡಾಡುವ ಶಬ್ದ ಕೇಳಿಬರುತ್ತಿತ್ತು. ಕೊನೆಗೂ ಆ ತೆರೆದ ಜಾಗದಲ್ಲಿ ಓಡಾಡುತ್ತಿದ್ದ ಪ್ರಾಣಿಗಳ ಶಬ್ದವೂ ಕಡಿಮೆಯಾಯಿತು. ದಟ್ಟವಾಗಿ ಕತ್ತಲಾಗುವವರೆಗೂ ತಡೆದೆ. ಚಂದ್ರನೂ ಸಹ ಮೇಲೆ ಬಂದಿದ್ದ. ಎಲ್ಲವೂ ನಿಶಬ್ದವಾಗಿತ್ತು. ಇನ್ನೊಮ್ಮೆ ತೆರೆದ ಜಾಗದ ಹತ್ತಿರ ಬಂದೆ ದೂರದಲ್ಲಿ ಗುಂಡಾಕಾರದ ಗಾಢವಾದ ಬೆಳಕು ತೆರೆದ ಜಾಗದಲ್ಲಿ ನನ್ನ ದಿಕ್ಕಿನಲ್ಲಿಯೇ ಬರುತ್ತಿದೆ. ಹೆದರಿಕೆಯಾಯಿತು, ನಾನು ಮಲಗಿದ್ದ ಮರದ ಕಡೆಗೆ ಹಿಂದಿರುಗಿ ಓಡಿ ಬಂದೆ. 

ಇನ್ನು ನಾನಿಲ್ಲಿ ಇರುವುದು ಬಹು ಅಪಾಯಕಾರಿಯಾಗಿತ್ತು. ಆ ಗಂಡು ಹುಲಿಗೇನಾದರೂ ನಾನು ಕಡವೆ ತಿಂದಿರುವ ಕುರುಹು ಸಿಕ್ಕಿದರೆ ನನ್ನ ವಾಸನೆಯನ್ನು ಹಿಡಿದು ಹಿಂಬಾಲಿಸಿರುವ ಸಾಧ್ಯತೆಯಿದೆ. ಹಾಗಾಗಿ ಮತ್ತೆ ತೆರೆದ ಜಾಗದ ಬಳಿ ಮೆಲ್ಲನೆ ಬಂದೆ. ಯಾವ ಪ್ರಾಣಿಯೂ ಇರಲಿಲ್ಲ, ಆದರೆ ದೂರದಲ್ಲಿ ಜಿಂಕೆಗಳ ಗುಂಪೊಂದು ಆ ತೆರೆದ ಜಾಗವನ್ನು ದಾಟುತ್ತಿರು ವುದನ್ನು ನೋಡಿ ನನಗೂ ಸ್ವಲ್ಪ ಧೈರ್ಯ ಬಂದಿತು. ಇನ್ನು ಕಾಯುವ ಅವಶ್ಯಕತೆಯಿಲ್ಲವೆಂದು ತೆರೆದ ಜಾಗದ ಮೂಲಕ ಓಡಿಯೇ ಬಿಟ್ಟೆ. ಕೆಲವೇ ಕೆಲ ಕ್ಷಣಗಳಲ್ಲಿ ಆ ಜಾಗವನ್ನು ದಾಟಿ ಕಾಡಿನ ಈ ಭಾಗಕ್ಕೆ ಬಂದಿ¨ªೆ. ಇಷ್ಟು ಚಿಕ್ಕ ಜಾಗವನ್ನು ದಾಟಲು ಎಂದೂ ನಾನಿಷ್ಟು ಸಾಹಸ ಪಟ್ಟಿರಲಿಲ್ಲ. 

ರಾತ್ರಿಯೆಲ್ಲ ಈ ಕಾಡಿನ ಭಾಗದಲ್ಲಿ ತಿರುಗಿದೆ. ಸ್ವಲ್ಪ ದೂರ ನಡೆದ ಮೇಲೆ ನೀರಿದ್ದ ತೊರೆಯೊಂದು ಕಂಡಿತು. ನನಗೂ ಬಾಯಾರಿತ್ತು. ಕಡವೆ ತಿಂದು ಹೊರಟ ಮೇಲೆ ನೀರಿನ ಸೆಲೆಯೇ ಸಿಕ್ಕಿರಲಿಲ್ಲ. ಅದನ್ನು ಹುಡುಕಲು ನನಗೆ ತಾಳ್ಮೆಯೂ ಇರಲಿಲ್ಲ, ಈ ಜಾಗವೆಲ್ಲ ನನಗೆ ಸಂಪೂರ್ಣವಾಗಿ ಹೊಸದು. 
ಎಲ್ಲಿ ಏನಿದೆಯೆಂದು ತಿಳಿದೇ ಇಲ್ಲ. ನೀರು ಕುಡಿದು ಸ್ವಲ್ಪ ದಣಿವಾರಿಸಿಕೊಂಡೆ. ಇಲ್ಲಿಯೂ ಜಿಂಕೆ, ಮತ್ತು ಕಾಟಿಗಳು ಕಂಡು ಬರುತ್ತಿದ್ದವು. ಇಲ್ಲಿ ಮರಗಳು ಅಷ್ಟು ಎತ್ತರವಾಗಿರಲಿಲ್ಲ ಮತ್ತು ಸ್ವಲ್ಪ ಹೆಚ್ಚು ಸೆಖೆಯೆನಿಸುತಿತ್ತು. ಆದರೆ ಜಾಗವೇನೋ ಚೆನ್ನಾಗಿದೆ ಎನಿಸುತ್ತಿತ್ತು. 

ನಾನಿಲ್ಲಿಗೆ ಬಂದು ಒಂದೆರೆಡು ದಿನವಾಗಿತ್ತು. ಹೆಚ್ಚಾಗಿ ತೊರೆಯ ಬಳಿಯೇ ಸಮಯ ಕಳೆಯುತ್ತಿದ್ದೆ. ಈ ಮಧ್ಯೆ ನೀರು ಕುಡಿಯಲು ಬಂದಿದ್ದ ಹೆಣ್ಣು ಜಿಂಕೆಯೊಂದನ್ನು ಸಹ ಬೇಟೆಯಾಡಿದೆ. ಇನ್ಯಾವ ಹುಲಿಯ ಸದ್ದು ಇಲ್ಲಿಯವರೆಗೂ ಕೇಳಿರಲಿಲ್ಲ... 
(ಮುಂದುವರಿಯುವುದು)

- ಸಂಜಯ್ ಗುಬ್ಬಿ 

ಚಿತ್ರ ಕೃಪೆ ಕರ್ನಾಟಕ ಅರಣ್ಯ ಇಲಾಖೆ

Trending videos

Back to Top